ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಂಗುರ

Last Updated 30 ಏಪ್ರಿಲ್ 2016, 19:36 IST
ಅಕ್ಷರ ಗಾತ್ರ

ತಿಂಗಳೊಪ್ಪತ್ತಿನಿಂದ ಒಂದೇ ಸಮ ಒದ್ದೊದ್ದುಕೊಂಡು ಕಾಡುವ ದುಃಖಕ್ಕೇನು ಮಾಡುವುದಂತ, ಎಲ್ಲಿ ಮೊರೆ ಹೋಗುವುದಂತ ತಿಳಿಯದೆ– ಸುಮಾರು ಯೋಚಿಸಿ, ಹೇಳುವುದೋ ಬೇಡವೋ ಅಂತೆಲ್ಲ ಮೀನಮೇಷವೆಣಿಸಿಕೊಂಡೇ, ಕಡೆಗೂ ಉತ್ಕರ್ಷನಿಗೊಂದು ಮೆಸೇಜು ಕಳಿಸಿದೆ. ‘ನೀಡ್ಟು ಟಾಕ್ ಟು ಯು, ಬಡೀ… ವೆನ್ ಕೆನೈ ಕಾಲ್?’. ಸರಕ್ಕನೆ ಉತ್ತರ ಬರಲಿಲ್ಲ.

ಬಲು ಕಾಲದಿಂದ ಗೊತ್ತಿರುವವನಾದರೂ, ಯಾಕೋ ಏನೋ, ಅವನೊಡನೆ ಎರಡು–ಮೂರು ವರ್ಷಗಳಿಂದ ಬಳಕೆ ತಪ್ಪಿಹೋಗಿತ್ತು. ಕಳೆದ ಜನವರಿಯಲ್ಲಿ ‘ನ್ಯೂಯಿಯರ್ ವಿಷ್’ ಕಳಿಸಿದ್ದನಾದರೂ– ನಾನೇನೂ ಹೆಚ್ಚು ಮಟ್ಟದ ‘ವಾಟ್ಸ್ಯಾಪ್’ ಆಸಾಮಿಯಲ್ಲದ ಕಾರಣ, ಮೆಸೇಜು ನೋಡುವ ಹೊತ್ತಿಗೆ ಫೆಬ್ರುವರಿ ಆವಿರ್ಭವಿಸಿತ್ತು! ‘ಸ್ಸಾರಿ ಮಾರಾಯ... ನಿನ್ನ ಮೆಸೇಜು ನೋಡೇ ಇರಲಿಲ್ಲ. ಫೋನು ಮಾಡು. ಮಾತಾಡೋಣ...’ ಎಂದು ವಾಪಸು ಬರೆದೆನಾದರೂ, ಅವನಿಂದ ಕರೆಯಿರಲಿ, ಉತ್ತರವೂ ಬರಲಿಲ್ಲ. ನಾನೂ ಆ ಕುರಿತು ಪರಿತಪಿಸಲಿಲ್ಲ.

ಈ ಸರ್ತಿ, ಮೂರ್ನಾಕು ತಾಸು ತೀರಿದರೂ ಜವಾಬು ಬರಲಿಲ್ಲವಾಗಿ ಪರಿತಾಪವೇ ಮೊದಲಾಯಿತು. ಇನ್ನಿರದೆ ಚಡಪಡಿಕೆಯುಂಟಾಯಿತು. ಐದಾರು ಮಿನಿಟಿಗೊಂದಾವರ್ತಿ ಮೊಬೈಲು ನೋಡಿಕೊಂಡು, ಮೆಸೇಜಿದೆಯೆ ಎಂದು ಪರೀಕ್ಷಿಸುವುದಾಯಿತು. ಬಂದಿದ್ದರೆ ಬೀಪು ಕೇಳಿಸಿರಬೇಕಲ್ಲ... ಫೋನು ಸೈಲೆಂಟಾಗಿದೆಯೆ ಎಂದು ತಪಾಸಣೆಗೈದಿದ್ದಾಯಿತು.

ನನ್ನ ಮೆಸೇಜಾದರೂ ಹೋಗಿದೆಯೆ ಎಂದು ಪುನರವಲೋಕಿಸುವುದಾಯಿತು. ಥತ... ಈ ಥರದ ಪಾಡು ಶತ್ರುವಿಗೂ ಬೇಡ... ಎಂದು ನನ್ನನಗೇ ಹೇಳಿಕೊಂಡಿದ್ದೂ ಆಯಿತು. ಮತ್ತೆ ಮತ್ತೆ ಕೆಲಸದಲ್ಲಿ ತೊಡಗುವ ಸೋಗೂ ಕೈಕೊಂಡು ಸೋತಿದ್ದಾಯಿತು!

ಏನು ಮಾಡುವುದು? ಇನ್ನಾರಲ್ಲಿ ಹೇಳಿಕೊಳ್ಳುವುದು? ಯಾವ ದೇವರಲ್ಲಿ ಬೇಡಿಕೊಳ್ಳುವುದು? ಎಷ್ಟಂತ ಹೀಗೆ ನನ್ನನ್ನೇ ನಾನು ಸೆಣಸುವುದು?
ಹಾಳುಜಾಳು ಮನಸ್ಸು.

ಈ ಪರಿಯ ಪ್ರೀತಿ ಪ್ರಣಯಗಳು ನಿರರ್ಥಕವೆಂದು ಗೊತ್ತಾಗಬೇಡವೆ? ನಡುವಯಸ್ಸಿನಲ್ಲಿ ಇಂತಹ ಅಡಾವುಡಿ ಬೇಡಿತ್ತೆಂದು ಅನಿಸಬೇಡವೆ? ಮದುವೆಯೊಳಗಿದ್ದೂ ಅದರಾಚೆಗಿನ ಇನ್ನೊಂದು ಕೂಡದೆಂದು ಯೋಚಿಸಬೇಡವೆ? ಛೇ... ಇವೆಲ್ಲ ನನಗೇ ಅರ್ಥವಾಗುತ್ತದೆ! ಈ ಮನಸ್ಸಿಗೇತಕ್ಕಾಗದು? ಬುದ್ಧಿಗೆಟಕುವ ಮಾತು ಹೃದಯಕ್ಕೇಕೆ ನಿಲುಕಲೊಲ್ಲದು? ಇದರ ತರ್ಕವನ್ನದು ನಿರಾಕರಿಸುವುದೇಕೆ?! ತಪ್ಪೆಂದು ಗೊತ್ತಿದ್ದೂ ವೃಥಾ ಅಲ್ಲಗಳೆಯುವುದೇಕೆ?

ಇಲ... ಇನ್ನು ‘ಅವಳ’ ಬಗ್ಗೆ ಯೋಚಿಸುವುದಿಲ್ಲ; ದಿನಚರಿಯನ್ನಿರಲಿ, ಆಫೀಸುಗೆಲಸವನ್ನೇ ಪಡ್ಚ ಮಾಡುತ್ತಿರುವ ಈ ಕುರಿತೆಂದೂ ತಲೆಕೆಡಿಸಿಕೊಳ್ಳುವುದಿಲ್ಲ...– ಎಂದೆಲ್ಲ ನನ್ನನಗೇ ಗಟ್ಟಿಯಾಗಿ ಹೇಳಿಕೊಂಡು, ಒತ್ತಾಯದಿಂದ ಕಂಪ್ಯೂಟರಿನಲ್ಲಿ ತೊಡಗಿದರೆ, ಮೂರೂ ಮತ್ತೊಂದು ಮಿನಿಟಿಗೆಲ್ಲ– ಮತ್ತದೇ ವರಸೆ ಸುರುಗೊಳ್ಳುವುದು! ಹಾಳಾದ್ದು, ಮತ್ತೆ ಮತ್ತೆ ಬಿಚ್ಚಿದ್ದು ಸುರುಟಿ, ಸುರುಟಿದ್ದು ಬಿಚ್ಚಿಕೊಳ್ಳುವ ಸುರುಳಿಯೋಪಾದಿಯ ಸರಣಿ! ಕೂಡಲೇ ಕುರ್ಚಿ ಹಿಂಜರಿಸಿಯೆದ್ದು, ಕಿಟಕಿಯಲ್ಲಿ ಹೂಡುವೆನು... ಆಕಾಶದಲ್ಲಿ ಕಣ್ಣಿಡುವೆನು...

ಮೋಡಗಳು ಕಡೆದು ಕದಡಿದ ಬೇಸಗೆಯ ಚೆಲ್ಲಾಪಿಲ್ಲಿ ಬಿಳಿ ಸರಕನ್ನೂ, ಕಣ್ಣಿಗೆ ರಾಚುವ ರಸ್ತೆಯಾಚೆಯ ಬಿಳಿಗೋಡೆಯ ಬೆಳ್ಳಂಬಿಳಿ ಧಗೆಯ ಪ್ರತಿಫಲನವನ್ನೂ- ತಾಳಲಾಗದೆಯೂ ನೋಡಿಯೇ ನೋಡುವೆನು... ಹಾಗೆ ನೋಡಿದ್ದೇ ತಡ, ಒಳಗಿನುಮ್ಮಳವಷ್ಟೂ ಉರಿಯಂತೇರ್ಪಟ್ಟು ಕೇಬಿನೊಳಗಿನ ತಣ್ಣನೆ ಹವಾನುಕೂಲವೂ ಧಗಭಗನೆ ದಹಿಸಿ ಮೈಯೇ ಕರಕಲಾದಂತನಿಸುವುದು...

ತಕ್ಷಣ ಹೊರನಡೆದು ಟೆರೇಸಿಗೆ ಬಂದು, ಸಿಗರೇಟು ಹಚ್ಚಿಕೊಂಡರೆ– ಎದೆಗೆ ಎದೆಯೇ ಉರಿದುರಿದು, ಸೀಯ್ದ ಉಗಿಯುಗಿವ ಭಗ್ನಪ್ರೇಮದ ಕಾರ್ಖಾನೆಯಂತನಿಸುವುದು... ಪ್ರೀತಿ ಸೋತ ಮನಸ್ಸಿನ ಕೈಗಾರಿಕೆಯೇ ಇದು ತಾನೆ?: ಅಳಲು ಬತ್ತಿಸಿ ಸೀಕಲು ಕನಸುತ್ಪಾದಿಸುವುದು! ಜಗಿಜಗಿದಷ್ಟೂ ಜಗಿವ ಮನಸನ್ನೇ ಕಟಕಲಾಗಿಸುವುದು! ಹುಹ್ಹ್... ಬೇಕಿತ್ತೆ ಇದೆಲ್ಲ? ಇಷ್ಟಕ್ಕು, ನಾನಾಗಿಯೇ ಬೇಕೆಂದಿದ್ದೆನೆ ಇದನ್ನು?

***
ಜಾಹ್ನವಿ ಇದ್ದಕ್ಕಿದ್ದಂತೆ ‘ಇಲ್ಲ’ವಾದಳೆನ್ನುವುದೇ ಸದರಿ ಸಮಸ್ಯೆಯ ಆರಂಭ.
ಇಲ್ಲವಾದಳೆಲ್ಲಿ? ನನ್ನನ್ನೇ ನನ್ನಿಂದ ಇಲ್ಲವಾಗಿಸಿದಳು ಅಷ್ಟೆ. ಅದಕ್ಕೆ ಮೊದಲು, ನನಗೇ ಗೊತ್ತಿರದೆ– ನನ್ನನ್ನು ಇವಳಿಂದ ಇಲ್ಲವಾಗಿಸಿದಳು. ಮಕ್ಕಳಿಂದ ಇಲ್ಲವಾಗಿಸಿದಳು. ವಯಸ್ಸಾದ ಅಮ್ಮನಿಂದ ಇಲ್ಲವಾಗಿಸಿದಳು. ಬಹುಶಃ ಸುತ್ತಲಿನ ಜಗತ್ತನ್ನೂ ಇಲ್ಲವಾಗಿಸಿದಳು.

ಬರೇ ಎರಡೂ ಮತ್ತೊಂದು ತಿಂಗಳ ಸಾಂಗತ್ಯ. ಎರಡೂ ಮತ್ತೊಮ್ಮಿನ ಭೇಟಿ ಮತ್ತು ವೈಭೋಗ. ಅಷ್ಟೆ!
ಆಶ್ಚರ್ಯವೇನೆಂದರೆ, ಇದನ್ನು ನಾನೂ ನಂಬುವುದಿಲ್ಲ. ನನಗೇ ನಂಬಲಾಗುತ್ತಿಲ್ಲ! ವಿಷಯವೇನೆಂದರೆ, ನಡೆದಿದ್ದೆಷ್ಟು ಅನೂಹ್ಯವಿತ್ತೋ– ಮಿಗಿಲಾದ ಆಶ್ಚರ್ಯವಿತ್ತು ಅದರಲ್ಲಿ; ಆಶ್ಚರ್ಯಕ್ಕು ಹೆಚ್ಚಾದ ಆಘಾತವಿತ್ತು ಬಳಿಕದ್ದರಲ್ಲಿ.

ಹೌದು... ಅನೂಹ್ಯ, ಆಶ್ಚರ್ಯ ಮತ್ತು ಆಘಾತ! ಮೂರು ಅಕಾರಾದಿ ಮೋಡಿ! ಅ, ಆ ಮತ್ತು ಆ...! ಇನ್ನು, ಈ ಆಘಾತವೆಷ್ಟಿದೆಯೆಂದರೆ, ಅದು ಆಶ್ಚರ್ಯಕ್ಕೂ ದೀರ್ಘ! ಆಶ್ಚರ್ಯದ ‘ಆ’ಕಾರವನ್ನು ಬಗ್ಗುಬಡಿಯುವಷ್ಟು ದೀರ್ಘ– ಈ ಆಘಾತದ ‘ಆ’ಕಾರ! ಹೀಗೊಂದು ‘ದೀರ್ಘಾಕಾರ’ವನ್ನು ಬರೆಯತಕ್ಕ ಲಿಪಿಯೇ ಇಲ್ಲವೆ?!

ದೇವರೇ... ಏನನ್ನಾದರೂ ಸಹಿಸಬಹುದು. ಮಂಕು ಕವಿದ ಮನಸ್ಸನ್ನೆಂತು ತಾಳುವುದು? ಅಂತಹ ಮನಸಿಟ್ಟುಕೊಂಡು ಬದುಕುವುದಾದರೂ ಎಂತು?! ಹೇಗೆ?!

ಇನ್ನು ತಾರಿಣಿಯೋ, ಮುಗ್ಧೆ. ಸಂಸಾರದಾಚೆಗಿನ ಏನನ್ನೂ ಗ್ರಹಿಸದಷ್ಟು ಭೋಳೆ. ಮಂಕು ಬಡಿದ ನನ್ನ ಮನಸಿನುದ್ದಕ್ಕೂ, ಮನೆಯಂತಹ ಮನೆಯುದ್ದಕ್ಕೂ– ಅದೇ ಮಂಕನ್ನೆಳೆದು ಹೊಯ್ದು, ತನ್ನೊಳಗೂ ಎರಕ ತಾಳಿ ಒಡನಿದ್ದುಬಿಟ್ಟಿದ್ದಾಳೆ. ಅವಳ ಕಕುಲಾತಿಯರ್ಥಯಿಸದಷ್ಟು ಮೂರ್ಖನೇನಲ್ಲ ನಾನು. ಆದರೆ ಮನಸ್ಸು ಕೇಳಬೇಕಲ್ಲ! ಬೇಡ ಬೇಡವೆಂದರೂ ಜಾಹ್ನವಿಯನ್ನೇ ಸುತ್ತಿ ಜಡಿದುಕೊಳ್ಳುವುದು.

‘ಯಾಕೋ ನನ್ನ ರಾಜಾ? ಏನಾಗಿದೇಮ್ಮ ನಿನಗೆ? ನನ್ನ ಹತ್ತಿರ ಹೇಳಿಕೊಳ್ಳೋಕಾಗಲ್ಲವಾ?’– ನನ್ನ ನಿದ್ದೆಗೇಡು ನಟ್ಟಿರುಳನ್ನು ತನ್ನ ಎದೆಗಾನಿಸಿಕೊಂಡು ತಾರಿಣಿ ಸಂತೈಸುತ್ತಾಳೆ. ನಾನೇ ತಾನಾಗಿ ಕಂಗೆಡುತ್ತಾಳೆ. ‘ಸುಮ್ಮನೆ ಕಣ್ಣು ಮುಚ್ಚಿಕೊಂಡು ಇರಿ, ಜ್ಯೋತಿಷ್... ಹಾಗೇ ಉಸಿರು ಗಮನಿಸಿಕೊಂಡು ನಿದ್ರೆಗೆ ಪ್ರಯತ್ನ ಪಡಿ...

ಕಣ್ಣು ತೂಗಿಬರುತ್ತೆ... ಪ್ಲೀಸ್ ಕಣಮ್ಮಾ... ಈ ಕಡೆ ಬನ್ನಿ, ತಟ್ಟುತೀನಿ... ತಲೆಯೊತ್ತುತೀನಿ...’ ಎಂದು ಹತ್ತಿರಾಗಿ, ಮೃದುವಾಗಿ ತಲೆದಡವುತ್ತಾಳೆ. ಸುಖವೆನಿಸುವುದಿಲ್ಲ. ಈಗ ಸಮೀಕರಣ ಬದಲಿಹೋಗಿದೆ. ಸ್ಪರ್ಶವೂ ಸಾಂತ್ವನವೆನಿಸುತ್ತಿದ್ದುದು, ಈಗ ಅವಳು ಕೈ ಸೋಕಿಸಿದರೂ ಬಲಾತ್ಕಾರವೆನಿಸುತ್ತದೆ. ಕೂಡಲೆ ಹಿಮ್ಮೆಟ್ಟುತ್ತೇನೆ. ಕೊಸರಿ ದೂರವಾಗುತ್ತೇನೆ.

ಮತ್ತೂ ಹತ್ತಿರವಾಗಿ ಎದೆಬಳಸುತ್ತಾಳೆ. ಹಿಂಸೆಯೆನಿಸುತ್ತದೆ. ಇನ್ನೂ ನುಣುಚಿಕೊಳ್ಳೋಣವೆಂದರೆ, ಮೈ ಈಗಾಗಲೇ ಮಂಚದಂಚಲ್ಲಿದೆಯಷ್ಟೆ, ಬಿದ್ದರೆ ಪ್ರಪಾತ ತಾನೆ? ಯೋಚನೆಯಾಗುತ್ತದೆ. ಈಗಾಗಲೇ ಮರಳಿ ಏರಲಾಗದಷ್ಟು ತಗ್ಗಿಗಿಳಿದಿರುವ ಒಳ–ಪರಿಸ್ಥಿತಿಯನ್ನು ಮತ್ತೆಂತು ಮೇಲೆತ್ತುವುದು? ಚಿಂತಿತಗೊಳ್ಳುತ್ತೇನೆ.

ಅವಳ ಒತ್ತಾಯವನ್ನು ಅಷ್ಟಿಷ್ಟು ತಾಳಿಕೊಳ್ಳುತ್ತೇನೆ. ದೇವರೇ... ಇವಳನ್ನು ಮತ್ತೆ ನನಗೆ ದಕ್ಕಿಸೆಂದು ಮೊರೆಯಿಡುತ್ತೇನೆ. ‘ಏನಾಗಿ ಹೋಯಿತೂರೀ ನಿಮಗೆ? ನಿಮ್ಮನ್ನು ಹೀಗೆ ನೋಡಲಿಕ್ಕಾಗೋದಿಲ್ಲ... ನಿಮ್ಮ ಕಷ್ಟ ನನಗೆ ಬರಬಾರದಾ? ನಿಮ್ಮ ಮಕ್ಕಳ ಮೇಲಾಣೆ... ನೀವೇ ಮನಸ್ಸು ಮಾಡಿ, ಇದರಿಂದ ಆಚೆಗೆ ಬನ್ರೀ... ಏನೂ ಆಗಿಲ್ಲಾಂತ ಕೊಡವಿಕೊಂಡು ಏಳಿ, ಅಷ್ಟೆ...’ ಗದ್ಗದಿಸುತ್ತಾಳೆ.

ಬೆನ್ನುಲ್ಟಾಗೈದು, ಮೋರೆಯೊತ್ತಾಯಿಸಿ ಅವಳ ಕೆನ್ನೆಗಳಲ್ಲಿ ತುಟಿಯಿಡುತ್ತೇನೆ. ‘ನನಗೇನಾಗಿದೇಂತ ಹೀಗೆಲ್ಲ ಹೇಳುತೀ, ತಾರೀ? ಸ್ವಲ್ಪ ದಿವಸ ಅಷ್ಟೆ... ಸರಿ ಹೋಗುತೀನಿ...’ ಎಂದು ಮಾತು ಹೊಸೆಯುತ್ತೇನೆ. ‘ದುಃಖಕ್ಕೆ ಕಾರಣ ಏನೂಂತ ನನಗೆ ಗೊತ್ತಿದ್ದರೆ ಇಷ್ಟೇಕೆ ಕಷ್ಟ ಪಡುತಿದ್ದೆ, ಹೇಳೂ... ವಿನಾಕಾರಣ ಖಿನ್ನತೆ...’ ಎಂದು ಸಮಜಾಯಿಷಿ ಕೊಟ್ಟುಕೊಳ್ಳುತ್ತೇನೆ.

ಒಳಗಿರುವ ಸತ್ಯವನ್ನು ಇನ್ನೊಂದಾಗಿಸಿ ಹೊರಗೆಡಹುವುದಾಗುತ್ತದೆ. ನನ್ನ ನಾನೇ ಕೆಡಹಿದೆನಲ್ಲವೆ ಅನಿಸುತ್ತದೆ. ಹಿಂದೆಯೇ ಜಾಹ್ನವಿ ಸೊಟ್ಟಮೂತಿ ತಾಳಿ ಅಣಕಿಸಿದಂತನಿಸುತ್ತದೆ. ಕಣ್ಣು ಮುಚ್ಚಿ, ಗಟ್ಟಿಯಾಗಿ ಎವೆ ಕಿವಿಚುತ್ತೇನೆ. ಎಲ್ಲಿದ್ದವೋ ಕಾಣೆ, ಬತ್ತಿದ ಕಣ್ಣೀರು ಒಂದೆರಡು ಹನಿಯೊಸರಿ ಕೆನ್ನೆಗಿಳಿಯುತ್ತದೆ. ತಾರಿಣಿಯ ಕದಪು ತೊಯಿಸುತ್ತವೆ.

***
ಮೂರು ತಾಸು ಕಳೆದರೂ ಉತ್ಕರ್ಷನಿಂದ ಮೆಸೇಜು ಬರಲಿಲ್ಲ. ಪರಿತಾಪ ಮಿಗಿಸಿಕೊಂಡೇ, ‘ವಿಲ್ಯು ಕಾಲ್ ಮಿ ಆರ್ ಶಲೈ ಡು?’ ಅಂತೊಂದು ಮೆಸೇಜು ಕೀಲಿಸಿ, ಅದನ್ನೇ ನೋಡಿಕೊಂಡು ಕಳಿಸದುಳಿದೆ.

ಉತ್ಕರ್ಷ ಮತ್ತು ನಾನು ಒಂದೇ ಕಂಪೆನಿಯಲ್ಲಿದ್ದೇವೆ; ಬೇರೆ ಬೇರೆ ಶಾಖೆಗಳಲ್ಲಿ ಅಷ್ಟೆ. ನಾನು ಎಂ.ಜಿ. ರೋಡಿನಲ್ಲಿ; ಅವನು ವೈಟ್‌ಫೀಲ್ಡಿನಲ್ಲಿ. ಇಬ್ಬರೂ ಒಂದೇ ಸುಮಾರಿಗೆ ಅಂದರೆ, ಇಪ್ಪತ್ತು ವರ್ಷಗಳ ಹಿಂದೊಂದು ಪ್ರಶಸ್ತ ಇಸವಿಯಲ್ಲಿ– ಐದಾರು ತಿಂಗಳಷ್ಟೇ ಹಿಂದೆಮುಂದೆ, ಆಸ್ಟ್ರೇಲಿಯನ್ ಮೂಲವಿಟ್ಟುಕೊಂಡು ಖಂಡಾಂತರದಲ್ಲಿ ವಹಿವಾಟು ನಡೆಸುವ ಈ ಫಿನಾನ್ಸ್ ಕಂಪೆನಿಯಲ್ಲಿ ಕೆಲಸಕ್ಕೆ ತೊಡಗಿದ್ದು.

ಇಬ್ಬರೂ ಆಚೀಚೆ ಹೊರಳದೆ, ಹಾರದೆ ಸೋರದೆ ಇಲ್ಲಿಯೇ ಉಳಿದೆವಾಗಿ, ಬೆಂಗಳೂರಿನಲ್ಲಿ ದೊಡ್ಡ ವ್ಯವಹಾರವುಳ್ಳ ಎರಡು ಮುಖ್ಯ ಬ್ರ್ಯಾಂಚುಗಳಲ್ಲಿ ಸಮಾನಸ್ತರದ ಉನ್ನತ ಹುದ್ದೆಯಲ್ಲಿದ್ದೇವೆ. ಮುಂದಿನ ವರ್ಷಕ್ಕೆ ಇಬ್ಬರಿಗೂ ಮುಂದಿನ ಪ್ರೊಮೋಶನೂ, ತನ್ಮೂಲಕದ ಭಾರೀ ಪೊಸಿಶನೂ ಸಿಗುತ್ತದೆನ್ನುವ ಉಮೇದಿದೆ.

ಇದು ಕೆಲಸದ ವಿಚಾರವಾದರೆ, ನಮ್ಮಿಬ್ಬರ ಬದುಕಿನಲ್ಲೂ ಸಾಕಷ್ಟು ಸಾಮ್ಯವಿದೆ. ಇಬ್ಬರೂ ಒಂದೇ ತಿಂಗಳು ಮತ್ತು ವರ್ಷ– ಬರೇ ಮೂರು ದಿವಸಗಳ ಅಂತರದಲ್ಲಿ ಹುಟ್ಟಿದ್ದು. ಇಬ್ಬರ ವಿದ್ಯಾಭ್ಯಾಸವೂ ಹೆಚ್ಚು ಕಮ್ಮಿ ಒಂದೇ. ಎಂತಲೇ ಅರ್ಹತೆ–ಎಲಿಜಿಲಿಬಿಟಿ ಅಂತನ್ನುವ ಮಣ್ಣುಮಸಿಯಲ್ಲೂ ಸಾಕಷ್ಟು ಸಮ ಸಮವಿದ್ದೇವೆ. ಸಮಾನವಾಗಿ ಯೋಚಿಸುತ್ತೇವೆ.

ಸಮವಯಸ್ಕರೆನ್ನುವಷ್ಟೇ ಸಮಮನಸ್ಕರೂ ಇದ್ದೇವೆ. ಉತ್ಕರ್ಷ ಗುಜರಾತೀ ಮೂಲದ ‘ಭಾಈ’; ನಾನು ತಮಿಳುಧಾತುವುಳ್ಳ ‘ಅಣ್ಣ’, ವ್ಯತ್ಯಾಸವಿಷ್ಟೆ. ಹೀಗಾಗಿಯೇ, ಆಗೊಮ್ಮೆ ಈಗೊಮ್ಮೆ ಪರಸ್ಪರ ಪ್ರೀತಿಯುಕ್ಕುವಾಗ– ಭಾಈ, ಅಣ್ಣ ಅಂತಲೇ ಒಬ್ಬರನ್ನೊಬ್ಬರು ಸಂಬೋಧಿಸಿವುದಿದೆ... ಒಂದು ಕಾಲಕ್ಕೆ, ಅಂದರೆ ಕೆಲಸವಾದ ಬಳಿಕದ ಯೌವನಸ್ಥ ದಿನಗಳಲ್ಲಿ– ನಮ್ಮ ನಡುವೆ ಒಬ್ಬರಿಂದೊಬ್ಬರು ಬಚ್ಚಿಡತಕ್ಕ ವಿಷಯವೇ ಇರಲಿಲ್ಲವನ್ನಬೇಕು.

ಮದುವೆಗೆ ಮೊದಲು ಕೆಲಕಾಲ ಕೋರಮಂಗಲದಲ್ಲಿ, ಇಬ್ಬರೂ ಎರಡು ರೂಮುಗಳ ಒಂದೇ ಮನೆಯನ್ನು ಹಂಚಿಕೊಂಡಿದ್ದೂ ಇದೆ. ‘ಒಂದೇ ಮನೆ ಮತ್ತು ಒಂದೇ ಆಫೀಸು... ಇನ್ನೇನೇನು ಹಂಚಿಕೊಂಡಿದ್ದೀರೋ?’ ಎಂದು ಆಫೀಸಿನಲ್ಲಿ ಓರಗೆಯವರು ಕಣ್ಮಿಟುಕಿ ಕುಟುಕಿದ್ದೂ ಇದೆ! ನಮ್ಮ ನಮ್ಮ ಹೆಂಡಿರೂ ಕೂಡ ಈ ಪರಿಯ ಸ್ನೇಹದ ಬಗ್ಗೆ ಆಗಾಗ ಆಡಿಕೊಂಡಿದ್ದಿದೆ! ಇಂತಹ ಎಷ್ಟೆಲ್ಲ ಕಟಕಿ–ಚಟಾಕಿಗಳಿಗೆ ಸೊಪ್ಪು ಹಾಕದೆ, ಇಬ್ಬರೂ ಈವರೆಗೆ ಉಳಿದಿದ್ದೇವೆ!

ಉತ್ಕರ್ಷನ ಹೆಂಡತಿ– ಸುಶಾಲೆ ಒರಿಸ್ಸಾದವಳು. ನಮ್ಮ ಕಂಪೆನಿಯಲ್ಲಿಯೇ ಇಂಟರ್ನಾಗಿ ಸೇರಿಕೊಂಡ ಮೂರನೆಯ ತಿಂಗಳಿಗೆಲ್ಲ, ಇವನ ಮೇಲೇನು ಮೋಡಿಯೆಸಗಿದಳೋ– ವರ್ಷದೊಪ್ಪತ್ತಿಗೆಲ್ಲ, ತನ್ನ ಒಳಬದುಕಿನವರೆಗೂ ಇವನನ್ನು ಇಳಿಯಗೊಟ್ಟು ವರಿಸಿಟ್ಟುಕೊಂಡಳು.

ಅದೇ ಹೊತ್ತಿಗೆ, ನನಗೆ– ಕೋರಮಂಗಲದಲ್ಲಿ ನಾವಿದ್ದ ಎದುರುಮನೆಯಲ್ಲಿದ್ದ ಅಚ್ಚಗನ್ನಡತಿ ತಾರಿಣಿಯ ಮೇಲೆ ಪ್ರೀತ್ಯಂಕುರಿಸಿತಾಗಿ, ನಾವೂ ಮದುವೆಯಾಗಿಬಿಟ್ಟೆವು.

ಇಬ್ಬರದೂ ಹದಿನಾರು ವರ್ಷಗಳ ದಾಂಪತ್ಯ. ತಲಾ ಎರಡು ಮಕ್ಕಳು; ನನ್ನವೆರಡೂ ಗಂಡು, ಅವನವು ಹೆಣ್ಣು. ಹೀಗೆ ಒಬ್ಬರಿಗೊಬ್ಬರು ತಾಳೆಯಾಗಿಕೊಂಡೇ, ಪರಸ್ಪರ ದೂರು–ತಗಾದೆಯಿಲ್ಲದೆ ಈ ತನಕದ ಬದುಕು ಸಾಧಿಸಿದ್ದೇವೆ.

ಎಂತಹ ಸಾಮರಸ್ಯವಿದ್ದೂ, ಇಬ್ಬರಿಗೂ ತಂತಮ್ಮದೇ ವಿಧಿವಿಧಾನವಂತಿರುತ್ತದೆಯಷ್ಟೆ; ಅದೇ ಮೇರೆಗೆ, ನಾಲ್ಕು ವರ್ಷಗಳ ಹಿಂದೆ ಉತ್ಕರ್ಷನಿಗೆ ಬ್ಯಾಂಕಾಕಿಗೆ ವರ್ಗವಾಗಿತ್ತು. ಇದೇ ನೆಪವಾಗಿ ನಮ್ಮ ನಡುವಿನ ಕೊಡುಕೊಳುಗಳು ತುಸು ತಪ್ಪಿಹೋಗಿವೆ. ಕಣ್ತಪ್ಪಿದ ಮೇಲೆ ಮನಸು ತಪ್ಪುವುದು ದುಸ್ತರವೇ? ಇಲ್ಲಿ ಮನಸು ತಪ್ಪಿವೆಯೆಂಬುದನ್ನು ಕೆಟ್ಟದಾಗಿ ಅಭಿಮತಿಸಬೇಕಿಲ್ಲ.

ನಮ್ಮ ನಡುವಿನ ಬಳಕೆ ಕಡಿಮೆಯಾಗಿದೆ ಅಂತಲಷ್ಟೇ ಸರಳಾರ್ಥ. ಕಳೆದ ವರ್ಷದ ಶುರುವಿನಲ್ಲಿ ಅವನು ಬೆಂಗಳೂರಿಗೆ ವಾಪಸಾಗಿದ್ದಾನೆ. ನಿನ್ನ ಸಲುವಾಗಿಯೇ ಬಂದಿದ್ದೆಂದು, ಹಿಂತಿರುಗಿದ್ದರ ಬಗ್ಗೆ ಅವನು ಆಗಾಗ ಹೇಳಿಕೊಂಡರೂ– ಯಾಕೋ ಏನೋ, ಈಚೆಗೆ ಈ ಮೊದಲಿದ್ದಷ್ಟು ಸಂವಹನೆಯಿಲ್ಲ. ಇಲ್ಲವಂತಲೂ ಅಲ್ಲ.

ಈ ಊರಿನಲ್ಲಿ, ಅದಿಬದಿಯಿರುವ ಏರಿಯಾಗಳನ್ನು ಹೊಕ್ಕುಬರುವುದೇ ಕಷ್ಟವಿರುವಾಗ, ನಾನಿರುವ ಕಾನುಗಂಗೆಯಿಂದ ವೈಟ್‌ಫೀಲ್ಡಿನವರೆಗೆ ಕ್ರಮಿಸುವುದು ಸಾಧ್ಯವೆ? ಅಂದುಕೊಂಡಿದ್ದೇ ತಡ ಹೋಗಿಬರುವುದು ಸುಲಭವೆ? ಎಷ್ಟೇ ಮನಸು ಮಾಡಿದರೂ ಬವಣೆಯ ಟ್ರಾಫಿಕೀಸುವ ಯೋಚನೆಯೇ, ಮನಸನ್ನು ಹಿಂದೆಗೆಸುತ್ತದೆ.

ಅಲ್ಲದೆ, ವಯಸ್ಸಿಗೆ ಬಂದಿರುವ ನಮ್ಮ ನಮ್ಮ ಸಂತಾನಗಳು ನಮ್ಮಿಬ್ಬರ ಹಾಗೆ, ಭಿಡೆಯಿರದೆ ಬೆರೆಯುವುದೇನು ಈಸಿಯೆ? ಸಲೀಸೆ?
ಇಷ್ಟಿದ್ದೂ, ಉತ್ಕರ್ಷ ಫೋನಿಗೆ ಸಿಕ್ಕಾಗ ಮಾತ್ರ– ನಿನ್ನೆಯಷ್ಟೇ ಭೇಟಿಯಾಗಿದ್ದೆವೆನ್ನುವ ಮಟ್ಟಿಗೆ, ಸರಾಗವಾಗಿ ಮಾತಿಗೆ ತೊಡಗುತ್ತಾನೆ.

ತಿಂಗಳುಗಳ ಹಿಂದೆ, ಎಲ್ಲಿ ನಿಲ್ಲಿಸಿದ್ದೆವೋ ಅಲ್ಲಿಂದಲೇ ಹೆಕ್ಕಿ– ಸಲೀಸಾಗಿ ಮಾತು ಬೆಳೆಸುತ್ತಾನೆ. ಒಟ್ಟಿನಲ್ಲಿ ನಮ್ಮ ನಡುವಿನ ಸ್ನೇಹಕ್ಕೆಂದೂ ಅರೆಯಾಗಿಲ್ಲವೆಂತಲೇ ಅನ್ನಬೇಕು. ಇಷ್ಟಾಗಿ, ಗೆಳೆತನದ ಪರ್ಪೊಸ್ಸೇ ಪರಸ್ಪರ ಅರೆಕೊರೆಗಳನ್ನು ತೀರಿಸುವುದರಲ್ಲಿದೆಯಷ್ಟೆ?

***
ಎರಡು ಭೇಟಿ, ಒಂದಿಷ್ಟು ಮೆಸೇಜು ವಾಟ್ಸ್ಯಾಪುಗಳ ಮೇರೆಗೇ– ಅವಳೇ ಬದುಕೆನ್ನುವಷ್ಟು ಮಟ್ಟಿಗಿನ ಔತ್ಕಟ್ಯವುಂಟಾಗುವುದೆ? ಇಂತಹ ಇಂಟೆನ್ಸಿಟಿಗೊಂದು ಅರ್ಥವಿದೆಯೆ? ಯೋಚಿಸಿದರೆ ನನಗೂ ವಿಚಿತ್ರವೆನಿಸುತ್ತದೆ, ಇದೇ ಕಥೆಯನ್ನು ನನಗೆ ಬೇರಿನ್ನಾದರೂ ಒಪ್ಪಿಸಿದ್ದಲ್ಲಿ, ಬರೀ ಬೊಗಳೆಯೆಂದು ನಾನೂ ನಿವಾಳಿಸಿ ಬಿಸಾಡುತ್ತಿದ್ದೆನೋ ಹೇಗೆ– ಅಂತನಿಸುತ್ತದೆ.

ಇಲ್ಲಿ ಹೇಳಿರುವಷ್ಟನ್ನೂ ಖುದ್ದು ಅನುಭವಿಸಿರುವೆನಾಗಿ, ನಂಬಿಕೆಯೆಂಬ ನಂಬಿಕೆಯೂ ಕಾಡುವಷ್ಟು ನನ್ನೊಳಗೂರಿಕೊಂಡಿದೆ. ಆದರೂ ಅವಳ ಬಗ್ಗೆ ಈ ಪರಿ ಫಿಕ್ಸೇಶನೇತಕ್ಕೆಂಬ ಪ್ರಶ್ನೆಗೆ ಉತ್ತರವಿರದೆ ಚಡಪಡಿಕೆ ಹುಟ್ಟಿಕೊಳ್ಳುತ್ತದೆ.

ಜಾಹ್ನವಿಯನ್ನು ನಾನು ಭೇಟಿ ಮಾಡಿದ್ದು ದೆಹಲಿಯಲ್ಲಿ. ಆಫೀಸುಗೆಲಸದ ಮೇರೆಗೆ ಈ ದೇಶದಲ್ಲಿನ ಹೆಡ್ಡಾಫೀಸು ಹೊಕ್ಕ ಸಂದರ್ಭದಲ್ಲಿ. ಅವೊತ್ತು ಸಂಜೆ, ಕೆಲಸ ಮುಗಿಸಿ ಹೊಟೆಲಿಗೆ ವಾಪಸಾಗಿ, ಫ್ರಂಟ್ಡೆಸ್ಕಿನಲ್ಲಿ ರೂಮ್ ಕೀ ಇಸಕೊಳ್ಳುವಾಗ– ಬದಿಯಲ್ಲಿಯೇ ಕೆಲವಡಿಗಳ ಅಂತರದಲ್ಲಿದ್ದ ಅವಳು ನನ್ನತ್ತಲೊಂದು ವಾರೆ–ಗಮನವೆಸೆದು ನಸುನಕ್ಕಳು. ಆಗ ಅವಳ ಕೆಂದುಟಿಗಳು ತುಸುವೇ ಅರಳಿ ಹೊರಳಿದ್ದು– ಕಾಣಿಸಿದ ನಗುವಿನ ಮೇರೆಗಲ್ಲ, ನನ್ನ ಮೇಲೆಸಗಿದ ಮೋಡಿಯ ಪ್ರಯುಕ್ತವೆಂದು ಈಗ ಅನಿಸುತ್ತಿದೆ.

ಅಂತಹ ಮತ್ತಿನ ನಗೆಮುಗುಳು ಅದು. ಅವಳೂ ತನ್ನ ರೂಮಿನ ಕೀಯಿಸಕೊಂಡು, ಹಿಂದೆಯೇ ಬಂದು ನನ್ನೊಡನೆಯೇ ಲಿಫ್ಟು ಹೊಕ್ಕಳು. ಇಬ್ಬರೂ ಬರೋಬ್ಬರಿ ಏಳಂತಸ್ತುಗಳಲ್ಲಿ, ಆ ಎಲಿವೇಟರಿನ ಏರಿನೊಡನೆ ಕ್ರಮಿಸುವಷ್ಟೇ ಸಣ್ಣ ಗಡುವಿನಲ್ಲಿ– ನಮ್ಮ ಆತ್ಮಗಳೇ ಸಂವಹಿಸಿದವೋ ಹೇಗೋ, ಕೆಲಮಾತುಗಳಾದವು.

ಹಲವು ಸಂವಹನಗಳೇರ್ಪಟ್ಟವು. ಆ ಬಳಿಕದ ಸಂಜೆ ಹೊಟೆಲಿನ ಟೆರೇಸ್ಲಾಂಜಿನಲ್ಲಿ ಒಟ್ಟೇ ಕುಳಿತು, ಗಂಟೆಗಟ್ಟಲೆ ವೈನೂಡಿಕೊಂಡೆವು. ಮಾತಿಗಿಂತಲೂ ನಮ್ಮ ನಮ್ಮ ಜೀವಗಳು ಹೆಚ್ಚು ಸಂಪರ್ಕಗೊಂಡವು.

ಮರುಮುಂಜಾನೆ, ಆರೂವರೆಗೆಲ್ಲ ನನ್ನ ರೂಮಿನ ಕರೆಗಂಟೆ ಸದ್ದಿಸಿತು. ಬಾಗಿಲು ತೆರೆದರೆ ಅವಳೇ! ‘ಒಟ್ಟಿಗೆ ಕಾಫೀ ಕುಡಿಯಬಹುದಲ್ಲವಾ?’ ಅಂದಳು. ಯೆಸ್ಯೆಸ್ಸಂತಂದು ರೂಮೊಳಕ್ಕೆ ಕರಕೊಂಡೆ. ಎಲೆಕ್ಟ್ರಿಕ್ ಕೆಟಲಿನಲ್ಲಿ ನೀರು ಕುದಿಯುತ್ತಿರುವ ಒಂದು ಪುಟಾಣಿ ಹೊತ್ತಿನಲ್ಲಿ, ನನ್ನನ್ನು ಅನಾಮತ್ತು ಸೋಕಿ ಮುದ್ದಿಸಿಬಿಟ್ಟಳು. ‘ಕಾಫಿಗೆ ಮೊದಲು ನಿನ್ನನ್ನು ಕುಡಿಯಬೇಕು...’ ಅಂತಂದು ನನ್ನ ತುಟಿಗಳಲ್ಲಿ ಮಾತಿಟ್ಟು, ನನ್ನನ್ನು ಹೀರಾಡಿಬಿಟ್ಟಳು. ಗೂರಾಡಿಬಿಟ್ಟಳು.

ಏಕ್ದಮ್ ರಾಡಿಗಿಳಿಯಗೊಟ್ಟಳು. ದೇವರೇ... ಏನಾಗಿತ್ತು ನನಗೆ? ಒಂದಿಷ್ಟೂ ನಾಚಲಿಲ್ಲ. ನೊಂದಲಿಲ್ಲ. ನೋಯಲಿಲ್ಲ. ಪವಾಡವೆನ್ನುವ ಹಾಗೆ, ನನ್ನ ಮಾನಾಭಿಮಾನವನ್ನೇ ಅವಳಿಗೊಪ್ಪಿಸಿದ್ದೆ. ಅವಳನ್ನೂ ಅಷ್ಟೇ ಒಪ್ಪಿಸಿಕೊಂಡಿದ್ದೆ. ‘ದಿಸ್ ಇಂಡೀಡ್ ಈಸ್ ದಿ ಬೆಸ್ಟ್ ಸೆಕ್ಸ್ ದಟ್ ಐ ಹ್ಯಾವ್ ಹ್ಯಾಡ್ ಇನ್ ಮೈ ಲೈಫ್...’ ಅಂತಂದೆ. ‘ವೆಲ್ಲ್... ದಟ್ಸ್ ಎ ಹ್ಯೂಜ್ ಕಾಂಪ್ಲಿಮೆಂಟ್...’ ಅಂದಳು.

ಬಳಿಕ ಬ್ರೇಕ್‌ಫಾಸ್ಟ್‌ನಲ್ಲಿ ಸಂಧಿಸಿದೆವು. ‘ಎಷ್ಟು ವಯಸ್ಸು ನಿನಗೆ?’ ಎಂದು ಕೇಳಿದೆ. ಇಪ್ಪತ್ತೊಂಬತ್ತು ಅಂದಳು. ‘ನನಗೆ ಮದುವೆ ಆಗಿದೆ...’ ಎಂದು ಹೇಳಿದೆ. ‘ನಿನ್ನನ್ನು ನಾನು ಮದುವೆ ಆಗುತೀನಿ ಅಂತೆಲ್ಲಿ ಹೇಳಿದೆ?’ ಎಂದು ನಕ್ಕಳು. ‘ಮಕ್ಕಳೂ ಇವೆ...’ ಎನ್ನುವಾಗ, ಬಲು ಉದಾಸದಿಂದ– ಐಸೀ ಅಂತಲಷ್ಟೇ ಹೇಳಿ ಸುಮ್ಮನಾದಳು.

‘ಮತ್ತೆ ಸಿಗುತೀಯಾ?’ ಎಂದು ಕೇಳಿದ್ದಕ್ಕೆ, ‘ನೀನು ಮನಸ್ಸು ಮಾಡಿದರೆ...’ ಅಂತಂದಳು. ‘ಯಾತಕ್ಕು ನನ್ನ ನಂಬರು ನಿನ್ನಲ್ಲಿರಲಿ... ವಾಟ್ಸ್ಯಾಪು ಮಾಡು...’ ಅಂತಂದು, ನನ್ನ ಕೈಫೋನಿಸಕೊಂಡು– ಜಾಹ್ನವಿ ಎಂಬ ಹೆಸರಿನಡಿ ತನ್ನ ಮೊಬೈಲಂಕಿ ಕೀಲಿಸಿ, ‘ಇದು ನನ್ನ ಹೆಸರಲ್ಲ... ಆದರೆ ನೀನು ಹಾಗೆ ನನ್ನನ್ನು ಕರೆಯಬಹುದು...’ ಅನ್ನುತ್ತ ವಾಪಸಿತ್ತಳು.

‘ನಿನ್ನ ನಂಬರು ಕೊಡಲ್ಲವಾ?’ ಎಂದೂ ಕೇಳಿದಳಾಗಿ, ನಾನು ಸುಮ್ಮಗೆ ನಕ್ಕೆ. ‘ಒತ್ತಾಯಿಸುವುದಿಲ್ಲ... ವಿವಾಹಿತ ಗಂಡಸು ಗುಟ್ಟು ಮಾಡುವುದೇ ಸೈ. ಹಾಗೇ ನನಗಿಷ್ಟ...’ ಅಂದಳು. ‘ಲೆಟ್ಸ್ ಸ್ಟೇ ಕನೆಕ್ಟೆಡ್...’ ಎಂಬ ಉಪಚಾರದೊಡನೆ ಬೀಳ್ಕೊಂಡೆವು.

ಅನಿರೀಕ್ಷಿತವೂ ಅನೂಹ್ಯವೂ ಆಗಿ, ಮಿಂಚಿನ ಬಳ್ಳಿಯ ಹಾಗೆ ಒಡಮೂಡಿ ಸಂಚರಿಸಿದ ಮಹಿಮೆ ಕ್ಷಣಿಕದ್ದೆಂದು ಬಗೆದು– ನಾನು ಸುಮ್ಮಗುಳಿದೆನಾದರೂ, ನನಗೇ ಗೊತ್ತಿರದೆ ಒಳಹೊಕ್ಕಿಕೊಂಡಿದ್ದ ಜಾಹ್ನವಿಯೇ ನನ್ನನ್ನು ಸುಮ್ಮಗುಳಿಯಗೊಡಲಿಲ್ಲ. ಕುಳಿತಲ್ಲಿ ನಿಂತಲ್ಲಿ ಕಣ್ಣಿಗೆ ಕಟ್ಟಿ ಬರುವಳು.

ಕೆಲಸದ ನಡುವೆ ಪುಳಕಿಸಿ ಕಾಣೆಯಾಗುವಳು. ಕಾಣೆಯಾಗುವಳೆಲ್ಲಿ, ಒಳಗೇ ಇದ್ದು ಸುಮ್ಮನಿರದೆ ಕಾಡುವಳು. ಬೆಂಗಳೂರಿಗೆ ವಾಪಸು ಬಂದ ಮೇಲೂ, ಸುಮಾರು ದಿವಸ ಅವಳಿಗೆ ಮೆಸೇಜು ಮಾಡದೆಯೆ ಇದ್ದೆ. ಮಾಡಬೇಕೆನಿಸಿದರೂ, ಅವಳ ಹುಚ್ಚು ಹರೆಯದ ಹರಿದಾಟ–ವಹಿವಾಟನ್ನು ಸೀರಿಯಸಾಗಿ ಭಾವಿಸಬಾರದೆಂದು ತಡೆದುಳಿದೆ. ಇನ್ನು ನನಗೋ– ಈ ಫೇಸ್ಬುಕ್, ವಾಟ್ಸ್ಯಾಪಿಗೂ ಅಷ್ಟಕ್ಕಷ್ಟೆಯಾದ್ದರಿಂದ, ಆ ಕುರಿತು ತಲೆಕೆಡಿಸಿಕೊಳ್ಳಲೇ ಇಲ್ಲ.

ಆ ಒಂದು ಭಾನುವಾರದ ಸಂಜೆಯ ಬಿಡುವಿನಲ್ಲಿ, ಸುಮ್ಮನೆ ಕೈಫೋನೊಳಕ್ಕಿಳಿದು ಸಲ್ಲದ್ದು ತಡಕುತ್ತ ಈಡಾಡುತ್ತಿರುವಾಗ– ವಾಟ್ಸ್ಯಾಪಿನಲ್ಲೊಂದು ಮೆಸೇಜು ಕಂಡಿತು. ‘ಹೇ ಸೆಕ್ಸೀ... ಡು ಯು ರಿಮೆಂಬರ್ ಮೀ?’– ನೋಡಿದ್ದೇ ಕಂಪಿಸಿಹೋದೆ. ಮೈಯೊಳಗಿನ ನರತಂತುಗಳೆಲ್ಲ ತಮ್ಮಿಂತಾವೇ ಮೀಟಿಕೊಂಡಂತನ್ನಿಸಿತು.

ಮೆಸೇಜಿನೊಡನಿದ್ದ ಜಾಹ್ನವಿಯ ಪ್ರೊಫೈಲ್–ಪಿಕ್ಕನ್ನು ಮುಟ್ಟಿ, ಮೀಂಟಿ, ವಿಸ್ತರಿಸಿ, ಮತ್ತೆ ಮತ್ತೆ ಹಿಗ್ಗಿಸಿ, ಕುಗ್ಗಿಸಿ, ಎಟುಕುವಷ್ಟೂ ಪಟವಳೆದು, ತದೇಕ ಕಣ್ಣಿಕ್ಕಿ ಮನಸ್ಸಿಗೆ ತಂದುಕೊಂಡೆ. ಇಬ್ಬರ ಮೈಮೈ–ವೈಭೋಗವನ್ನು ನೆನೆನೆನೆದು ಪುಲಕಿಸಿದೆ.
ಆಗಲೇ ಸುರುಗೊಂಡಿದ್ದು, ಈ ಜ್ಯೋತಿಷ್ಮಯ್ ಸೆಂದಿಲನ ನಡುವಯಸ್ಕ ಕರ್ಮಕಾಂಡ!

ಈ ತನಕವಿದ್ದಿರದ ವಾಟ್ಸ್ಯಾಪ್ ವ್ಯಾಮೋಹ ಹೇಗೆ ಮೊದಲುಗೊಂಡಿತೋ ಕಾಣೆ, ನಿಜಕ್ಕು, ಅಂಬುತೀರ್ಥದ ಪುಟ್ಟ ಹೊಂಡದಲ್ಲೊಂದು ಸಣ್ಣ ಸೆಲೆಯಂತೆ ಹುಟ್ಟಿ– ಜೋಗದಲ್ಲಿ ಭೋರ್ಗರೆದು ಮೊರೆದು ಧುಮ್ಮಿಕ್ಕುವ ಶರಾವತಿಯೇ ಆಗಿಬಿಟ್ಟೆ! ನಿಂತಲ್ಲಿ ಕುಂತಲ್ಲಿ ಮೆಸೇಜು. ಮಲಗುವಾಗ ಏಳುವಾಗ ನಿವೇದನೆ.

ಆಫೀಸಿನಲ್ಲಿ ಎರಡು ಮೀಟಿಂಗುಗಳ ನಡುವೆ– ನೀನು ಅಂತಿಂತೆಂದು, ರಾತ್ರ್ಯಾಕಾಶದ ಚಂದ್ರವೆಂದು, ನನ್ನ ಭುವನದ ಭಾಗ್ಯವೆಂದು, ಹೃದಯಭವನದ ಕೀಲಿಯೆಂದು... ಅಂತಿಂತಲ್ಲದ ತಾರೀಫು.

‘ಸ್ವೀಟಿ… ನನ್ನ ನಂಬರೆಲ್ಲಿ ಸಿಕ್ಕಿತು ನಿನಗೆ?’ ಕೇಳಿದೆ.
‘ಗುಟ್ಟು ಮಾಡುವ ವಿವಾಹಿತರ ನಂಬರು ಹುಡುಕೋದು ಕಷ್ಟವಲ್ಲ, ಬಿಡು’ ಎಂದು ನಗು ಕೀಲಿಸಿ ಕಳಿಸಿದಳು.

ಹೀಗೆ ಸುರುಗೊಂಡ ಸಂವಹನೆ, ಕೆಲವೇ ದಿವಸಗಳಲ್ಲಿ ಇನ್ನೊಂದು ಭೇಟಿಯವರೆಗೂ ಬೆಳೆದುಬಿಟ್ಟಿತು. ‘ಯಾವಾಗ ಸಿಗುತ್ತೀ?’ ಎಂದು ಕೇಳಿದ್ದಕ್ಕೆ, ‘ಎನಿಟೈಂ... ನೀನೇ ಪ್ಲ್ಯಾನು ಮಾಡು...’ ಅಂತಂದು, ಅದೇ ವಾರದ ಕೊನೆಯಲ್ಲಿ ನಿಗದಿಗೊಂಡಿದ್ದ ನನ್ನ ಮುಂಬೈ ಭೇಟಿಯನ್ನು ವಿಸ್ತರಿಸಿ, ಜಾಹ್ನವಿಗೆ ಅಲ್ಲಿಯೇ ಬರಹೇಳಿ, 

ಇನ್ನೊಂದು ದಿವಸ ಹೊಟೆಲು ರೂಮಿನಲ್ಲೇ– ಮಂಚದಿಂದಲೂ ಕದಲದೆ– ಒಂದೇ ಸಮ ಪೈಪೋಟಿಯಲ್ಲಿ ಮುದ್ದುಗೈದುಕೊಂಡು, ಮೈಬೆಸೆದುಕೊಂಡು, ನಡುನಡುವೆ– ನೀನಿರದೆ ನಾನೆಲ್ಲಿ ಅಂತೆಲ್ಲ ಚುಟುಕು–-ಮೊಟುಕಿನ ಪ್ರೀತಿರೀತಿ ಪಲುಕಿಕೊಂಡು ಇದ್ದುದಾಯಿತು. ಮರುದಿವಸ ಸೂರ್ಯ ಹುಟ್ಟದಿರಲೆಂದು ಆಶಿಸಿದ್ದಾಯಿತು. ಕಡೆಗೆ, ಬೀಳ್ಕೊಳ್ಳುವ ಮುನ್ನವೂ ಮರಮರಳಿ ತಬ್ಬಿ ತೊನೆದು ತೊಯ್ದುದಾಯಿತು.

ಅಷ್ಟೆ!
ಜೀವಮಾನದ ಆಯಾಮವೇ ಬದಲಿಹೋಯಿತು. ಬದುಕಿನ ಪಾಡೇ ಮಾರ್ಪಟ್ಟುಬಿಟ್ಟಿತು!
ಹೊಟೆಲಿನಿಂದ ಹೊರಟು ಏರ್ಪೋರ್ಟಿಗೆಂದು ಕ್ಯಾಬು ಹೊಕ್ಕು ಕುಳಿತು, ಮೆಸೇಜು ಮಾಡಿದರೆ ಉತ್ತರವೇ ಇಲ್ಲವೆ?! ಇವೊತ್ತಿಗೂ ನಂಬಲಾಗುತ್ತಿಲ್ಲ! ವಿಮಾನದೊಳಗೆ ಕುಳಿತು, ಮೊಬೈಲನ್ನು ‘ಏರ್ಪ್ಲೇನ್ ಮೋಡ್’ನಲ್ಲಿ ಇಳಿಸುವವರೆಗೂ ಅವಳ ಟೆಕ್ಸ್ಟಿಗೆ  ಕಾದಿದ್ದಾಯಿತು.

ಬೆಂಗಳೂರಿನಲ್ಲಿ ಇಳಿದಿದ್ದೇ– ಮರಳಿ ಕೈಫೋನು ಆನುಗೈದು, ಅದು ಸಿಗ್ನಲು ಹೊಂಚುವಗುಂಟ ಚಡಪಡಿಸಿದ್ದಾಯಿತು. ಒಂದೇ ಸಮ ಬೀಪಿಬಂದ ಮೆಸೇಜುಗಳಲ್ಲಿ ಅವಳದಿರಬಹುದೆ ಎಂದು ಪರಿತಪಿಸಿದ್ದಾಯಿತು. ಮತ್ತೆ ಮೆಸೇಜಿಸಿದ್ದಾಯಿತು. ಮತ್ತೆ ಜವಾಬಿರದೆ ಪೇಚಾಡಿದ್ದಾಯಿತು. ‘ಏನಾಯಿತು ನಿನಗೆ, ಸ್ವೀಟ್ಸ್?’ ಎಂದು ಕೀಲಿಸಿದ್ದಾಯಿತು. ಹಿಂದೆಯೇ ಒಂದೆರಡು ಮೂರು ಕಳಿಸಿದ್ದಾಯಿತು.

ಊಹ್ಞೂಂ... ಒಂದಕ್ಕಾದರೂ ರೆಸ್ಪಾನ್ಸೇ ಬೇಡವೆ? ತಲೆ ಕೆಟ್ಟು ಹೋಳಾದವು. ತಹತಹವೇ ಮೊದಲಾದವು. ಸರಿ... ರಾತ್ರಿ ನಿದ್ರೆಗಿಳಿಯುವ ಮೊದಲು, ಯಾತಕ್ಕೂ ಒಮ್ಮೆ ಫೋನುಗೈದೇ ಬಿಡುವಾ... ಎಂದು ಡಯಲಿಸಿದೆನಾದರೆ... ದೇವರೇ... ಪ್ರಮಾದವಾಗಿಹೋಗಿತ್ತು! ನಂಬರೇ ಚಾಲ್ತಿಯಲ್ಲಿಲ್ಲ ಅಂತೆಂಬ ಮುದ್ರಿತ ಧ್ವನಿ ಮತ್ತೆ ಮತ್ತೆ ಬಿತ್ತರಿಸಿ ಕೇಳಿಬಂದು, ಮನಸ್ಸಿಗೆ ಮನಸ್ಸೇ ಮಲಿತುಹೋಯಿತು!

ಅರೆರೆ... ಇದೇನಿದು ಪ್ರೀತಿಯೆ? ವೃಥಾ ಪ್ರಣಯೋತ್ಕರ್ಷವೆ? ಅವೆರಡರ ಅನಾಮತ್ತು ಭಂಗವೆ? ಭಂಜನೆಯೆ? ಸಾಕುಸಾಕೆನಿಸಿಬಿಟ್ಟಿದೆ. ಬೇಡವೆಂದರೂ ಮನಸ್ಸು ಮತ್ತೆ ಮತ್ತೆ ಅಲ್ಲಲ್ಲಿಯೇ ವಾಲಿ ಜೋಲುತ್ತದೆ. ಒಮ್ಮೆ ದೆಹಲಿಗೆ, ಇನ್ನೊಮ್ಮೆ ಮುಂಬಯಿಗೆ. ಇದೀಗ ದೆಹಲಿಯ ರಾಡಿನ್ಸನ್ನಿಗೆ, ಅದಾಗಿ ಮುಂಬಯಿಯ ರಿಗಾಲಿಸ್ಸಿಗೆ... ಆಡುವಂತಿಲ್ಲ. ಆಡದುಳಿಯುವಂತಿಲ್ಲ. ತಾಳುವಂತಿಲ್ಲ. ತಾಳದೆಯೆ ಅನುಭವಿಸುವಂತಿಲ್ಲ.

ಏನನ್ನುವುದು ಇದನ್ನು? ಎಷ್ಟು ಸಲವಂತ ಹುಚ್ಚುಹುಚ್ಚೇ ಮೊಬೈಲು ತಡಕುತ್ತಲುಳಿಯುವುದು? ಎಷ್ಟಾರು ಸರ್ತಿ ಗಳಿಗಳಿಗೆಗೊಂದಾವರ್ತಿ ಮೆಸೇಜಾದೀತಂತ ಕಾಯುವುದು? ಇದೇನು ಹಪಹಪ? ಏನು ತಹತಹ?
ಇನ್ನು, ಈ ತಹತಹವೇ ವಿರಹವೆನ್ನುವ ಸ್ಪಷ್ಟ ಎಡೆ ತಾನೇ ಎಲ್ಲಿ?

***
ಜಾಹ್ನವಿಯ ಎಪಿಸೋಡು ಅನೂಹ್ಯಾಶ್ಚರ್ಯವನ್ನು ಮೀರಿ ಆಘಾತವಾಗಿ ಏರ್ಪಟ್ಟು, ತಿಂಗಳುಗಟ್ಟಲೆ ಸತಾಯಿಸತೊಡಗಿದ ಎಷ್ಟೋ ದಿವಸದ ಮೇಲೆ, ಒಳಗಿದ್ದೇ ಒದ್ದೊದ್ದು ಕಾಡುವ ವಿಚಾರವನ್ನು ಯಾರಲ್ಲಾದರೂ ಹೇಳಿಕೊಂಡರೆ ಖಾಲಿಯಾದೀತೇನೋ ಎಂದು, ನಿನ್ನೆಮೊನ್ನೆಯಿಂದ ಒಂದೇ ಸಮ ಅನ್ನಿಸತೊಡಗಿತು. ಆದರೆ ಯಾರಲ್ಲಿ ಹೇಳಿಕೊಳ್ಳುವುದು? ಅಥವಾ, ಅದೇನು ಹೇಳಿಕೊಳ್ಳುವ ವಿಚಾರವೆ? ಕೇಳಿಸಿಕೊಂಡವರು ಏನಂದಾರು? ಯೋಚನೆಯಾಯಿತು.

ಮನಸ್ಸು ಅಸಂಬದ್ಧವಾಗಿ ನೂಕಿ ಜೀಕಿ ಒಲ್ಲದ ನೂಕು–ಜೀಕು ತಾಳಿತು. ಆದರೆ ಕುಳಿತಲ್ಲಿ ನಿಂತಲ್ಲಿ ಒದ್ದೆದ್ದು ಬರುವ ಒಳಗಿನ ಜಾಹ್ನವಿಯನ್ನೇನು ಮಾಡುವುದು? ತೋಡಿಕೊಂಡರಾದರೂ ತುಸು ನಿರಾಳವಾದೀತನ್ನಿಸಿತು. ಹೀಗಿರುವಾಗಲೇ ಈ ಉತ್ಕರ್ಷ ಮನಸ್ಸಿಗೆ ಬಂದಿದ್ದು. ಎಷ್ಟಾದರೂ ಬಲು ಕಾಲದ ಗೆಳೆಯ. ಏನನ್ನೂ ಹೇಳಿಕೊಳ್ಳಬಹುದಾದ ಸಲಿಗೆಯಿದೆ... ಏನಾದರೂ ದಾರಿ ತೋರಿಯಾನು... ಅಂತನ್ನಿಸಿತು.

‘ವಿಲ್ಯು ಕಾಲ್ ಮಿ ಆರ್ ಶಲೈ ಡು?’ ಎಂದು ಕೀಲಿಸಿದ್ದನ್ನು ಬಲು ತ್ರಾಸುಪಡುತ್ತಲೇ ಕಡೆಗೂ ಕಳಿಸಿದೆ. ಖಾಸಾದ ಗೆಳೆಯನೊಡನೆಯೂ ಇಷ್ಟೆಲ್ಲ ಪ್ರೊಟೋಕಾಲೇ ಅಂತನ್ನಿಸಿ, ಹೇಸಿಗೆಯೂ ಆಯಿತು. ಈಗಲೂ ಉತ್ತರವಾಗಲಿಲ್ಲ. ಯಾತಕ್ಕೂ ಒಮ್ಮೆ ನೇರ ಕರೆಯುವುದೇ ವಾಸಿ ಅಂದುಕೊಂಡು ಡಯಲಿಸಿದೆ. ಫೋನು ಸುಮ್ಮಗೆ ಬೀಪ್ಬೀಪ್ಬೀಪಂತಂದು ಸುಮ್ಮಗಾಯಿತೇ ಹೊರತು, ಅವನವರೆಗೂ ತಗುಲಿಕೊಳ್ಳಲಿಲ್ಲ.

ಥತ್ತ್... ಟೆರೇಸಿಗೆ ಹೋಗಿ ಇನ್ನೊಮ್ಮೆ ಸಿಗರೇಟು ಹಚ್ಚೋಣವೆಂದುಕೊಂಡು, ಆಫೀಸಿನಿಂದ ಹೊರಬಿದ್ದು ಲಿಫ್ಟಿನತ್ತ ಸರಿದೆ. ಲಿಫ್ಟು ಏಳನೆಯ ಮಹಡಿಯಲ್ಲಿತ್ತು. ಸುಮಾರು ಹೊತ್ತು ಕಾದೆ. ಕೆಳಗೆ ಬರುವ ಸೂಚನೆಯೇ ಆಗಲಿಲ್ಲ. ಫಕ್ಕಿಟ್ಟ್... ಅಂದುಕೊಂಡು ಮೋರೆ ಕಿವಿಚಿ ಮಹಡಿಯೇರತೊಡಗಿದೆ.

ಎರಡಂತಸ್ತು ಕ್ರಮಿಸುವಲ್ಲಿ ಸಿಕ್ಕಾಪಟ್ಟೆ ಶ್ರಮವೆನಿಸಿ, ಇನ್ನಿಲ್ಲದೆ ಬೆವರಿ ತೊಪ್ಪೆಯಾಗಿದ್ದೆ. ಏನಾದರೂ ಸರಿ, ಜಾಹ್ನವಿಯನ್ನು ಮನಸ್ಸಿನಿಂದ ಫ್ಲಶ್ಷುಗೈಯಲೇಬೇಕೆಂಬುದನ್ನು– ತುಸು ಜೋರಾಗಿಯೇ ಹೇಳಿಕೊಂಡು ಮುಂದುವರೆದೆ. ಆರನೆಯ ಮಹಡಿಯಲ್ಲಿ ಲಾಬಿಯಲ್ಲಿರುವಾಗ ಏಳನೆಯದರಿಂದ ಲಿಫ್ಟು ಕದಲಿದಂತನಿಸಿತು. ಹಾಗೆ ಸದ್ದಾಯಿತು.

ಒಂದೆರಡು ಕ್ಷಣ ಸ್ತಬ್ಧಗೊಂಡು ಅಲ್ಲಿಯೇ ಉಳಿದೆ. ಢವ ಹೆಚ್ಚಿಸಿದ್ದ ಎದೆ ಧೊಸಭೊಸ ಉಬ್ಬಸದಲ್ಲಿ ತೊಡಗಿತ್ತು. ಮತ್ತೆ ಏರುವುದಕ್ಕೆಂದು ಸರಿದರೆ, ಬೆನ್ನಿನಲ್ಲಿ ಇದ್ದಕ್ಕಿದ್ದಂತೆ ಲಿಫ್ಟು ನಿಂತ ಸದ್ದಾಯಿತು. ತಕ್ಷಣ ಹಿಂತಿರುಗಿ ನೋಡಿದೆ. ಆಘಾತವೇ ಆಯಿತು.

ಹೌದು... ಉತ್ಕರ್ಷ ಲಿಫ್ಟಿನಿಂದ ಹೊರಬರುತ್ತಿದ್ದ!
ನನ್ನನ್ನು ಗಮನಿಸಿದನನಿಸಲಿಲ್ಲ. ಕೂಡಲೆ, ಕೊಂಚವೇ ಬದಿಸರಿದು ಮೋರೆ ಮಾಚಿಕೊಂಡು ನಿಂತೆ.

ನೋಡುತ್ತಲೇ, ಹಿಂದಿನಿಂದ ಇನ್ನೊಂದು ವ್ಯಕ್ತಿ ನಡೆದುಬಂದಿತು.
ಹೆಣ್ಣು! ಯಾರೆಂದು ನೋಡಿದೆ. ಹೌದು... ಅವಳೇ!

ಲಗುಬಗುವಾಗಿ ಹೆಜ್ಜೆಯಿಕ್ಕಿ, ಮುಂದಕ್ಕಿದ್ದ ಉತ್ಕರ್ಷನ ಸೊಂಟದಲ್ಲಿ ಕೈಯಿಕ್ಕಿ ಬಳಸಿ ಮುಂದುವರೆದಳು!
ದೇವರೇ… ಈ ತಹತಹವೇ ವಿರಹವೆನ್ನುವ ಸ್ಪಷ್ಟ ಎಡೆಯೆಲ್ಲಿ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT