ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದ ಭರವಸೆ ಬಾಂಗ್ಲಾ...

Last Updated 27 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಚಿನ್ನಸ್ವಾಮಿ ಅಂಗಳದಲ್ಲಿ ಹೋದ ಬುಧವಾರ ಭಾರತದ ಎದುರು ಬಾಂಗ್ಲಾ ಕೇವಲ 1 ರನ್ ಅಂತರದಿಂದ ಸೋತಿತ್ತು. ಅನುಭವ, ಸಾಮರ್ಥ್ಯ, ಪ್ರತಿಭೆಗಳಲ್ಲಿ ತನಗಿಂತ ಹತ್ತು ಪಟ್ಟು ಬಲಶಾಲಿಯಾಗಿದ್ದ ಭಾರತ ತಂಡದ ಆಟಗಾರರು ಪರದಾಡುವಂತೆ ಮಾಡಿದ ಬಾಂಗ್ಲಾದ ಆಟವನ್ನು ಮರೆಯಲು ಸಾಧ್ಯವೇ ಇಲ್ಲ. ಈ ಕುರಿತು ಗಿರೀಶ ದೊಡ್ಡಮನಿ ವಿಶ್ಲೇಷಿಸಿದ್ದಾರೆ.

‘ಕೊನೆಯವರೆಗೂ ಸೋಲೊಪ್ಪಿ ಕೈಚೆಲ್ಲಬಾರದು. ಗೆಲುವಿಗೆ ಮುನ್ನವೇ ಸಂಭ್ರಮ ಆಚರಿಸಬಾರದು’ ಮಾರ್ಚ್ 19ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೋಚಕ ಜಯ ಸಾಧಿಸಿದ ಬಳಿಕ ಭಾರತ ತಂಡದ ಆಟಗಾರ ಸುರೇಶ್ ರೈನಾ ಮಾಡಿರುವ ಟ್ವೀಟ್ ಇದು. ಬಾಂಗ್ಲಾ ತಂಡಕ್ಕೆ ಗೆಲುವಿಗಾಗಿ ನಾಲ್ಕು  ಎಸೆತಗಳಲ್ಲಿ ಆರು ರನ್‌ಗಳ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆತವನ್ನು ಮುಷ್ಫಿಕುರ್‌ ರಹೀಮ್ ಫೈನ್‌ಲೆಗ್‌ನತ್ತ ಹೊಡೆದರು. ಚೆಂಡು ಬೌಂಡರಿಗೆರೆ ದಾಟುವುದು ಖಚಿತವಾಗಿದ್ದೇ ತಡ ರಹೀಮ್ ಮತ್ತು ಇನ್ನೊಂದು ಬದಿಯಲ್ಲಿದ್ದ ಮಹಮೂದುಲ್ಲಾ ವಿಜಯೋತ್ಸವ ಆಚರಿಸಿ ಬಿಟ್ಟಿದ್ದರು. 

ಡಗ್‌ಔಟ್‌ನಲ್ಲಿಯೂ ಆಟಗಾರರು ಪರಸ್ಪರ ಅಭಿನಂದಿಸಿಕೊಂಡಿದ್ದರು. ಆದರೆ, ಮುಂದಿನ ಮೂರು ಎಸೆತಗಳಲ್ಲಿ ಬೇಕಿದ್ದ ಎರಡು ರನ್‌ಗಳು ಬಾಂಗ್ಲಾ ಖಾತೆಗೆ ಸೇರಲೇ ಇಲ್ಲ. ಮೂರು ವಿಕೆಟ್‌ಗಳು ಮಾತ್ರ ಭಾರತದ ಬುಟ್ಟಿಗೆ ಸೇರಿದ್ದವು. ಜಯದ ಸಡಗರ ಭಾರತದ ಪಾಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಏಷ್ಯಾ ಕ್ರಿಕೆಟ್‌ನ ಪ್ರಮುಖ ಶಕ್ತಿಯಾಗುವ ಎಲ್ಲ ಲಕ್ಷಣಗಳನ್ನೂ ತೋರಿಸುತ್ತಿರುವ ಬಾಂಗ್ಲಾ ಗೆಲುವಿಗಾಗಿ ಹಾತೊರೆಯುವುದು ಸಹಜ.

ಅದೂ ಭಾರತದಂತಹ ಬಲಿಷ್ಠ ತಂಡವನ್ನು ಸೋಲಿಸುವ ಖುಷಿ ‘ವಿಶ್ವಕಪ್’ ಗೆಲುವಿಗೆ ಸಮಾನ. ಆದರೆ ಕೊನೆಯ ಹಂತದಲ್ಲಿ ಒಂದಿಷ್ಟು ಸಂಯಮ ತೋರಿದ್ದರೆ ಫಲಿತಾಂಶ ಅದರ ಪರವೇ ಆಗುತ್ತಿತ್ತೇನೊ. ಅಲ್ಲದೇ ಅಂದಿನ ಇಡೀ ಪಂದ್ಯದಲ್ಲಿ ಬಾಂಗ್ಲಾ ತೋರಿದ್ದ ಉತ್ತಮ ಆಟಕ್ಕೂ ನ್ಯಾಯ ಸಲ್ಲುತ್ತಿತ್ತು. ಭಾರತದ ಸೆಮಿಫೈನಲ್ ಕನಸು ಅಂದೇ ಭಗ್ನವಾಗುತ್ತಿತ್ತು!

ಅಂದು ಟಾಸ್ ಗೆದ್ದು ಫೀಲ್ಡಿಂಗ್ ಮಾಡಿದ್ದ ಮಷ್ರಫೆ ಮೊರ್ತಜಾ ತಂಡದ ಲೆಕ್ಕಾಚಾರ ಎಲ್ಲೂ ಉಲ್ಟಾ ಹೊಡೆದಿರಲಿಲ್ಲ. ವಿಶ್ವಶ್ರೇಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಮಹೇಂದ್ರಸಿಂಗ್ ದೋನಿ ಬಳಗವು ರನ್ ಗಳಿಸಲು ಪ್ರಯಾಸಪಟ್ಟಿತ್ತು. ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ ಬೀಡುಬೀಸಾಗಿ ಬ್ಯಾಟ್ ಬೀಸಲು ಸಾಧ್ಯವಾಗಿರಲಿಲ್ಲ. ಪಾಕಿಸ್ತಾನ ಎದುರು ಅರ್ಧಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಬಾಂಗ್ಲಾ ಬೌಲರ್‌ಗಳೆದುರು ಒಂದೂ ಬೌಂಡರಿ (4) ಗಳಿಸಲಿಲ್ಲ.

ಒಂದು ಸಿಕ್ಸರ್ ಮಾತ್ರ ಹೊಡೆಯಲು ಅವರಿಂದ ಸಾಧ್ಯವಾಗಿತ್ತು. ಸುರೇಶ್ ರೈನಾ ಮಾತ್ರ ಸ್ವಲ್ಪ ದಿಟ್ಟತನದಿಂದ ಆಡಿದ್ದರು. ಫೀಲ್ಡಿಂಗ್ ಕೂಡ ಚುರುಕುತನದಿಂದ ಕೂಡಿತ್ತು. ರನ್ ಉಳಿಸುವ ಅಥವಾ ಕ್ಯಾಚ್ ಪಡೆಯುವ ಯಾವುದೇ ಅವಕಾಶವನ್ನೂ ಫೀಲ್ಡರ್‌ಗಳು ಬಿಟ್ಟಿರಲಿಲ್ಲ. ಆದರೆ ಭಾರತದ ಫೀಲ್ಡಿಂಗ್‌ನಲ್ಲಿ ಹಲವು ಲೋಪಗಳು ಎದ್ದುಕಂಡಿದ್ದವು.  ಮೂರು ಕ್ಯಾಚ್‌ಗಳನ್ನೂ ಕೈಚೆಲ್ಲಿದ್ದರು.

ಅವರ ಪ್ರಮುಖ ಬೌಲರ್‌ಗಳಾದ ತಸ್ಕಿನ್ ಅಹಮದ್ ಮತ್ತು ಅರಾಫತ್ ಸನ್ನಿ ಇಲ್ಲದಿದ್ದರೂ ಉತ್ತಮ ಆಟ ಮೂಡಿಬಂದಿದ್ದು ವಿಶೇಷ. ನಂತರ ಬ್ಯಾಟಿಂಗ್‌ನಲ್ಲಿಯೂ ಬಾಂಗ್ಲಾ ಉತ್ತಮ ಆರಂಭವನ್ನೇ ಪಡೆದಿತ್ತು. ತಮೀಮ್ ಇಕ್ಬಾಲ್ ಎಂದಿನಂತೆ ಉತ್ತಮ ಕಾಣಿಕೆಯನ್ನೇ ನೀಡಿದ್ದರು.  ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದ ಆಟ ನೋಡುಗರ ಮನಗೆದ್ದಿದ್ದಂತೂ ಸುಳ್ಳಲ್ಲ. 

ಸೌಲಭ್ಯಗಳ ಕೊರತೆ
ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನಗಳಿಗೆ ಹೋಲಿಕೆ ಮಾಡಿದರೆ ಬಾಂಗ್ಲಾ ಕ್ರಿಕೆಟ್ ಸಂಸ್ಥೆ (ಬಿಸಿಬಿ) ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಹೆಚ್ಚು ಬಲಶಾಲಿಯಲ್ಲ. ತನ್ನ ಬಳಿಯಿರುವ ಅಲ್ಪಸ್ವಲ್ಪ ಸಂಪನ್ಮೂಲದಿಂದಲೇ ಮೇಲೆರುತ್ತಿರುವ ಸಂಸ್ಥೆ. ಅಲ್ಲದೇ ತನ್ನ ಆಟಗಾರರು ಹೆಚ್ಚು ಸಬಲರಾಗಲು ಮಾಡುತ್ತಿರುವ ಪ್ರಯತ್ನಗಳೂ ಆಶಾದಾಯಕ. 2000, 2001ರಲ್ಲಿ ಭಾರತದೊಂದಿಗೆ ಟೆಸ್ಟ್ ಸರಣಿಗಳನ್ನು ಆಡುವ ಮೂಲಕ ಮಾನ್ಯತೆ ಪಡೆದ ಬಾಂಗ್ಲಾ ತಂಡವು ಮೊದಲಿಗೆ ಯುವಪ್ರತಿಭೆಗಳನ್ನು ಗುರುತಿಸುವ ಕೆಲಸಕ್ಕೆ ಕೈಹಾಕಿತು. ಸ್ಥಳೀಯ ಲೀಗ್‌ಗಳು, ದೇಶಿ ಕ್ರಿಕೆಟ್ ಟೂರ್ನಿಗಳನ್ನು ಆರಂಭಿಸಿತು.

‘ಈಗ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಮುಸ್ತಫಿಜುರ್ ರೆಹಮಾನ್ ಸೇರಿದಂತೆ ಹಲವು  ಆಟಗಾರರು ದೇಶಿ ಕ್ರಿಕೆಟ್‌ನಿಂದಲೇ ಬೆಳಕಿಗೆ ಬಂದವರಾಗಿದ್ದಾರೆ. ಮಧ್ಯಮವರ್ಗದ ಕುಟುಂಬಗಳ ಹುಡುಗರು ಈಗ ಕ್ರಿಕೆಟ್‌ನತ್ತ ಒಲವು ತೋರುತ್ತಿದ್ದಾರೆ. ಇವತ್ತಿಗೂ ಎಷ್ಟೋ ಕ್ರಿಕೆಟಿಗರು ಸೈಕಲ್ ರಿಕ್ಷಾಗಳಲ್ಲಿಯೇ ಮೈದಾನಕ್ಕೆ ಬರುತ್ತಾರೆ. ಆದರೂ ಸಿಕ್ಕಿರುವ ಕಡಿಮೆ ಅವಕಾಶ, ಸಂಪನ್ಮೂಲದಲ್ಲಿಯೇ ಬಾಂಗ್ಲಾ ಕ್ರಿಕೆಟ್ ಪ್ರಗತಿಯು ಏರುಮುಖದಲ್ಲಿದೆ’ ಎಂದು ಬಾಂಗ್ಲಾ ಕ್ರಿಕೆಟ್ ಪತ್ರಕರ್ತ ಮೊಹಮ್ಮದ್ ಇಸಾಮ್ ಹೇಳುತ್ತಾರೆ.

ಆದರೂ 2011ರಲ್ಲಿ ಏಕದಿನ ವಿಶ್ವಕಪ್ ಆತಿಥ್ಯದಲ್ಲಿ ಭಾರತದೊಂದಿಗೆ ಸಹಭಾಗಿತ್ವ ವಹಿಸಿತ್ತು. 2014ರಲ್ಲಿ ವಿಶ್ವ ಟ್ವೆಂಟಿ–20 ಟೂರ್ನಿ, ಹೋದ ತಿಂಗಳು ಏಷ್ಯಾಕಪ್ ಟ್ವೆಂಟಿ–20 ಟೂರ್ನಿಗಳ ಆತಿಥ್ಯ ವಹಿಸಿತ್ತು. ಢಾಕಾ, ಮೀರ್‌ಪುರ್, ಚಿತ್ತಗಾಂಗ್‌ನಲ್ಲಿರುವ ಮೂರು ಕ್ರೀಡಾಂಗಣಗಳಲ್ಲಿಯೇ ಆತಿಥ್ಯವನ್ನು ನೀಡಿತ್ತು. ‘ಹೆಚ್ಚು ಕ್ರಿಕೆಟ್ ಸರಣಿಗಳಲ್ಲಿ ಆಡಿದಂತೆ ಅನುಭವ ಹೆಚ್ಚುತ್ತದೆ. ಅದರಲ್ಲೂ ಹೊರದೇಶಗಳಲ್ಲಿ ಹೆಚ್ಚು ಪಂದ್ಯಗಳನ್ನು ಆಡಬೇಕು.

ನಮ್ಮ ತಂಡವು ಹೊರದೇಶಕ್ಕೆ ಹೋಗಿ ಸರಣಿ ಆಡಿರುವುದು ಕಡಿಮೆ. ಏಷ್ಯಾಕಪ್, ವಿಶ್ವಕಪ್‌ಗಳು ನಡೆದಾಗ ಮಾತ್ರ ಬೇರೆ ದೇಶದಲ್ಲಿ ಹೋಗಿ ಬೇರೆ ಬೇರೆ ತಂಡಗಳನ್ನು ಎದುರಿಸುವ ಅವಕಾಶ ಸಿಗುತ್ತದೆ. ದ್ವಿಪಕ್ಷೀಯ ಸರಣಿಗಳಿಗೆ (ಟೆಸ್ಟ್, ಏಕದಿನ, ಟ್ವೆಂಟಿ–20) ಹೆಚ್ಚು ಅವಕಾಶ ಸಿಗಬೇಕು. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌ನಂತಹ ದೇಶಗಳಿಗೆ ಹೋಗಿ ಆಡುವ ಅನುಕೂಲತೆಗಳು ಹೆಚ್ಚಬೇಕು. ಆಗ ನಾವು ಬೆಳೆಯಲು ಸಾಧ್ಯ. ಅದಕ್ಕಾಗಿ ಇನ್ನೂ ಸಮಯ ಬೇಕು’ ಎಂದು ಬಾಂಗ್ಲಾ ತಂಡದ ನಾಯಕ ಮಷ್ರಫೆ ಮೊರ್ತಜಾ ಈಚೆಗೆ ‘ವಿಸ್ಡನ್‌’ ಸಂದರ್ಶನದಲ್ಲಿ ಹೇಳಿದ್ದರು.

ತಂಡಕ್ಕೆ ಉತ್ತಮ ಕೋಚ್ ಕೂಡ ದೊರಕಿರುವುದು ಈಗ ಫಲ ನೀಡುತ್ತಿದೆ. ಶ್ರೀಲಂಕಾದ ಮಾಜಿ ಆಟಗಾರ 2014ರ ಮೇ ತಿಂಗಳಲ್ಲಿ ಚಂಡಿಕಾ ಹತುರುಸಿಂಘಾ ಅವರು ಮುಖ್ಯ ಕೋಚ್ ಆದ ನಂತರ ಆಟಗಾರರ ಕೌಶಲಗಳು ಉನ್ನತಮಟ್ಟಕ್ಕೆ ಏರಿವೆ. ಸೌಮ್ಯ ಸರ್ಕಾರ್‌, ಮಹಮೂದುಲ್ಲಾ, ಶಕೀಬ್ ಅಲ್ ಹಸನ್ ಅವರಂತಹ ಆಲ್‌ರೌಂಡರ್‌ಗಳು ತಂಡಕ್ಕೆ ಬಲ ನೀಡುತ್ತಿದ್ದಾರೆ. ವೇಗದ ಬೌಲರ್‌ಗಳು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಫಿಟ್‌ನೆಸ್ ಮಟ್ಟವೂ ಸುಧಾರಣೆಯಾಗಿದೆ.

ವಿದಾಯದಂಚಿನಲ್ಲಿರುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಹೀಮ್ ಅವರ ಸ್ಥಾನವನ್ನು ತುಂಬಲು ನೂರುಲ್ ಹಸನ್ ಅವರನ್ನು ಸಿದ್ಧಗೊಳಿಸುವ ಕಾರ್ಯವೂ ನಡೆದಿದೆ. ಬಾಂಗ್ಲಾ ತಂಡವು 2015ರ ವಿಶ್ವಕಪ್ ಕ್ವಾರ್ಟರ್‌ಫೈನಲ್ ತಲುಪಲು, ಏಷ್ಯಾ ಕಪ್ ಫೈನಲ್‌ಗೆ ಲಗ್ಗೆ ಹಾಕಿದ್ದರ ಹಿಂದಿನ ಶಕ್ತಿ ಚಂಡಿಕಾ ಆಗಿದ್ದರು ಎನ್ನುವುದರಲ್ಲಿ ಎರಡು  ಮಾತಿಲ್ಲ. ಬಲಿಷ್ಠ ತಂಡಗಳಿಗೆ ಸೆಡ್ಡು ಹೊಡೆಯುವ ಶಕ್ತಿ ಬೆಳೆದಂತೆ ತಂಡದ ಆಟಗಾರರಿಗೆ ಅವಕಾಶಗಳೂ ಹೆಚ್ಚುತ್ತವೆ. ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಇತ್ತೀಚೆಗೆ ಬಿಗ್ ಬ್ಯಾಶ್ ಲೀಗ್‌ನಲ್ಲಿ ಆಡಿದ್ದರು.

ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶಗಳ ನಿರೀಕ್ಷೆಯಲ್ಲಿ ಆಟಗಾರರಿದ್ದಾರೆ. ಆದರೆ, ಎಷ್ಟೇ ಒಳ್ಳೆಯ ಪ್ರದರ್ಶನ ನೀಡಿದರೂ, ಅದಕ್ಕೆ ಗೆಲುವಿನ ಮುದ್ರೆ ಬೀಳದೆ ಹೋದರೆ ನಗಣ್ಯವಾಗುತ್ತದೆ. ಆದ್ದರಿಂದ ಕೊನೆಯ ಕ್ಷಣದವರೆಗೂ ಸಂಯಮದಿಂದ ಪರಿಸ್ಥಿತಿ ಎದುರಿಸುವ ಗಟ್ಟಿ ಮನಸ್ಥಿತಿ ಬೆಳೆದರೆ ಬಾಂಗ್ಲಾ ತಂಡವೂ ಮುಂದೊಂದು ದಿನ ವಿಶ್ವಕಪ್‌ ಮುಡಿಗೇರಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT