ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡದ ಕೋಚ್ ಹುದ್ದೆ ಈ ಸಲ ಸ್ವದೇಶಿಯೋ, ವಿದೇಶಿಯೋ

Last Updated 22 ಮೇ 2016, 19:30 IST
ಅಕ್ಷರ ಗಾತ್ರ

‘ಭಾರತ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅವರಿಗಿಂತ ಅತ್ಯುತ್ತಮ ಆಯ್ಕೆ ಮತ್ತೊಬ್ಬರಿಲ್ಲ’...
****

‘ಭಾರತ ತಂಡಕ್ಕೆ ವಿದೇಶಿ ಕೋಚ್ ಸೂಕ್ತ. ಸದ್ಯ ಟೆಸ್ಟ್‌ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಕೋಚ್ ಡೇನಿಯಲ್ ವೆಟೋರಿ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಭವಿಷ್ಯದಲ್ಲಿ ಭಾರತ ತಂಡಕ್ಕೆ ಮೂರು ಮಾದರಿಗಳಲ್ಲಿಯೂ ವಿರಾಟ್ ನಾಯಕರಾಗುವ ಸಾಧ್ಯತೆ ಇದೆ. ಆದ್ದರಿಂದ ಅವರ ಮಾತಿಗೆ ಮನ್ನಣೆ ನೀಡುವುದು ತಂಡದ ಭವಿಷ್ಯಕ್ಕೆ ಒಳ್ಳೆಯದು’
.......
ಭಾರತ ಕ್ರಿಕೆಟ್ ತಂಡದ ಇಬ್ಬರು ಮಾಜಿ ನಾಯಕರ ಅಭಿಪ್ರಾಯಗಳು ಇವು. ಸುನಿಲ್ ಗಾವಸ್ಕರ್, ರಾಹುಲ್ ಪರ ಬ್ಯಾಟಿಂಗ್ ಮಾಡಿದ್ದಾರೆ.  ವಿದೇಶಿ ಕೋಚ್‌ ನೇಮಕದತ್ತ ಒಲವು ತೋರುವ ಅಜರ್, ಕೋಚ್ ಮತ್ತು ನಾಯಕನ ನಡುವೆ ಸೌಹಾರ್ದಯುತ ಬಾಂಧವ್ಯದ ಅವಶ್ಯಕತೆ ಕುರಿತು ಸೂಚ್ಯವಾಗಿ ಹೇಳುತ್ತಾರೆ.

ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆ ಅತ್ಯಂತ ಪ್ರತಿಷ್ಠಿತವಾದದ್ದು. ಪ್ರತಿ ಬಾರಿ ಈ ಸ್ಥಾನಕ್ಕೆ ನೇಮಕ ನಡೆಯುವಾಗಲೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತದೆ. ಕ್ರಿಕೆಟ್‌ ಕ್ರೀಡೆಯ ಅತ್ಯಂತ ಶ್ರೀಮಂತ ಸಂಸ್ಥೆಯಾಗಿರುವ ಬಿಸಿಸಿಐಗೂ ಇದು ಕಠಿಣ ಸವಾಲು. ಈ ಬಾರಿಯ ಚರ್ಚೆಯೂ ಅಷ್ಟೇ ಬಿರುಸಾಗಿದೆ. ಆದರೆ,  ಮೊದಲ ಬಾರಿಗೆ ಸ್ವದೇಶಿ ಕೋಚ್‌ ಕುರಿತು ಬಹಳಷ್ಟು ಹಿರಿಯ ಕ್ರಿಕೆಟಿಗರು ಒಲವು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ರಾಹುಲ್ ದ್ರಾವಿಡ್ ಅವರನ್ನೇ ಕೋಚ್ ಮಾಡುವ ಸಲಹೆಗಳು ಹರಿದು ಬರುತ್ತಿವೆ.

ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್, ಗಿಲ್‌ಕ್ರಿಸ್ಟ್, ಭಾರತದ ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ರಾಹುಲ್ ಪರವಾಗಿದ್ದಾರೆ. ಮಾಜಿ ವೇಗದ ಬೌಲರ್ ಜಹೀರ್ ಖಾನ್ ಕೂಡ ಉತ್ತಮ ಕೋಚ್ ಆಗಬಲ್ಲರು ಎಂದು ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ.  ವಿರಾಟ್ ಕೊಹ್ಲಿ ಮಾತ್ರ ಆರ್‌ಸಿಬಿ ತಂಡದ ಕೋಚ್ ಡೇನಿಯಲ್ ವೆಟೋರಿ ಅವರನ್ನು ನೇಮಕ ಮಾಡುವ ಸಲಹೆಯನ್ನು ಬಿಸಿಸಿಐಗೆ ನೀಡಿದ್ದಾರೆ.

ಒಂದೊಮ್ಮೆ ಈ ಎಲ್ಲ ಸಿಕ್ಕುಗಳು ಬಗೆಹರಿದು ದ್ರಾವಿಡ್ ಕೋಚ್ ಆದರೆ 16 ವರ್ಷಗಳ ನಂತರ ಭಾರತ ತಂಡಕ್ಕೆ ಸ್ವದೇಶಿ ಕೋಚ್ (ಪೂರ್ಣಾವಧಿ) ಲಭಿಸಿದಂತಾಗುತ್ತದೆ.

2015ರ ಏಕದಿನ ವಿಶ್ವಕಪ್ ಟೂರ್ನಿಯ ನಂತರ ಡಂಕನ್ ಫ್ಲೆಚರ್ ಕೋಚ್ ಹುದ್ದೆಗೆ ವಿದಾಯ ಹೇಳಿದ್ದರು.  ಆನಂತರ 2016ರ ವಿಶ್ವ ಟ್ವೆಂಟಿ–20 ಟೂರ್ನಿ ಮುಗಿಯುವವರೆಗೂ ತಂಡದ ನಿರ್ದೇಶಕರಾಗಿದ್ದ ರವಿಶಾಸ್ತ್ರಿ  ಮಾರ್ಗದರ್ಶಕರೂ ಆಗಿದ್ದರು. ಭರತ್ ಅರುಣ್ ಬೌಲಿಂಗ್ ಮತ್ತು ಸಂಜಯ್ ಬಂಗಾರ್ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ತಂಡದ ಸಾಧನೆಯೂ ಚೆನ್ನಾಗಿಯೇ ಇದೆ. ಪೂರ್ಣಾವಧಿ ಕೋಚ್ ಇಲ್ಲದಿದ್ದರೂ ವಿಶ್ವ ಟ್ವೆಂಟಿ–20 ಟೂರ್ನಿ ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ದ್ವಿಪಕ್ಷೀಯ ಸರಣಿಗಳಲ್ಲಿಯೂ ಸಾಧನೆ ಉತ್ತಮವಾಗಿತ್ತು. ಆದರೆ ಹೆಚ್ಚು ಯುವ ಆಟ ಗಾರರು ತಂಡ ದಲ್ಲಿ ಸ್ಥಾನ ಪಡೆಯುತ್ತಿರುವುದರಿಂದ ಪೂರ್ಣಾವಧಿ ಕೋಚ್ ಅಗತ್ಯವಾಗಿದೆ. ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಅವರ ಸಲಹಾ ಸಮಿತಿಯು ಈಗಾಗಲೆ ಬಿಸಿಸಿಐಗೆ ಸಂಭಾವ್ಯರ ಪಟ್ಟಿಯನ್ನೂ ನೀಡಿದೆ. ಅದರಲ್ಲಿ ರಾಹುಲ್ ದ್ರಾವಿಡ್ ಅವರಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಅಲ್ಪಕಾಲದ ಅನುಭವ
ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ರಾಹುಲ್ ದ್ರಾವಿಡ್ ಕೂಡ ಒಬ್ಬರು. ಕರ್ನಾಟಕದ ದ್ರಾವಿಡ್ ಭಾರತ ಕ್ರಿಕೆಟ್ ತಂಡದ ‘ಗೋಡೆ’ ಎಂದೆ ಹೆಸರಾದವರು. ಅವರ ಕಲಾತ್ಮಕ ಬ್ಯಾಟಿಂಗ್ ಶೈಲಿ, ತಾಳ್ಮೆಯುತ ಆಟ ಮತ್ತು ನಡವಳಿಕೆಗಳು ಲಕ್ಷಾಂತರ ಕ್ರಿಕೆಟ್‌ಪ್ರೇಮಿಗಳ ಮನಗೆದ್ದಿದ್ದರು. ಹಲವು ಪಂದ್ಯಗಳಲ್ಲಿ ವಿಕೆಟ್‌ಕೀಪಿಂಗ್ ಕೂಡ ಮಾಡಿದ್ದರು.ಆದರೆ, ತಂಡದ ನಾಯಕನಾಗಿ ದೊಡ್ಡ ಸಾಧನೆ ಮಾಡಲು ಅವರಿಂದ ಆಗಿರಲಿಲ್ಲ.

ಆಟದಲ್ಲಿ ಅಪಾರ ಅನುಭವ ಇರುವ ದ್ರಾವಿಡ್ ಅವರಿಗೆ ಕೋಚಿಂಗ್ ಕ್ಷೇತ್ರದಲ್ಲಿ ಅಲ್ಪ ಕಾಲದ ಅನುಭವ ಇದೆ. ಅವರು ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್ ತಂಡಕ್ಕೆ ಸಲಹೆಗಾರರಾಗಿದ್ದರು. 2014ರಲ್ಲಿ ಭಾರತ ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿಯೂ ಸ್ವಲ್ಪ ಕಾಲ ಕಾರ್ಯನಿರ್ವಹಿಸಿದ್ದರು. ಒಂದು ವರ್ಷದ ಹಿಂದೆ ಅವರನ್ನು ಭಾರತ ಜೂನಿಯರ್ ತಂಡ ಮತ್ತು 19 ವರ್ಷದೊಳಗಿನವರ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕ ಮಾಡಲಾಯಿತು.

ಕರುಣ್ ನಾಯರ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸರ್ಫರಾಜ್ ಖಾನ್, ರಿಷಭ್ ಪಂತ್  ಅವರಂತಹ ಯುವ ಆಟಗಾರರ ಪ್ರತಿಭೆಗೆ ಸಾಣೆ ಹಿಡಿದರು. ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ ಸಲಹೆಗಾರರಾಗಿದ್ದಾರೆ.  ಇಷ್ಟೆಲ್ಲ ಚರ್ಚೆಗಳ ನಡುವೆಯೂ ದ್ರಾವಿಡ್ ತಮ್ಮ ಒಲವು–ನಿಲುವುಗಳ ಕುರಿತು ಸ್ಪಷ್ಟವಾಗಿ ಹೇಳಿಲ್ಲ.

ತರಬೇತುದಾರರಾಗಿ ಅಲ್ಪ ಕಾಲದ ಅನುಭವ ಹೊಂದಿರುವ ಅವರಿಗೆ ದೊಡ್ಡ ಹುದ್ದೆಯನ್ನು ಅಲಂಕರಿಸುವ ಮುನ್ನ ಚಿಂತನೆಯ ಅವಶ್ಯಕತೆ ಇರುವುದನ್ನು ಅವರು ಮನಗಂಡಿದ್ದಾರೆ.

ಮುಳ್ಳಿನ ಕುರ್ಚಿ
ಈ ದೇಶದ ಕ್ರಿಕೆಟ್ ತಂಡದ ಕೋಚ್ ಹುದ್ದೆ ಅತ್ಯಂತ ಪ್ರತಿಷ್ಠಿತ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅಷ್ಟೆ ಕಠಿಣ ಸವಾಲಿನದ್ದೂ ಹೌದು. ತಂಡ ಜಯದ ಹಾದಿಯಲ್ಲಿದ್ದರೆ ಕೋಚ್‌ಗೆ ಅತ್ಯುನ್ನತ ಗೌರವ. ಆದರೆ ಒಂದೊಮ್ಮೆ ಸೋಲು ಎದುರಾದರೆ ಕೋಟ್ಯಂತರ ಅಭಿಮಾನಿಗಳು, ಟೀಕಾಕಾರರ ಕೆಂಗಣ್ಣು ಬೀಳುವುದು ಕೋಚ್ ಮೇಲೆ. ನಂತರ ನಾಯಕ ಅಥವಾ ಪ್ರಮುಖ ಆಟಗಾರನ ಮೇಲೆ. ಒಟ್ಟಿನಲ್ಲಿ ಹೇಳುವುದಾದರೆ ಒಂದು ಸುಂದರ ಗುಲಾಬಿ ಹೂ ಸುತ್ತ  ಹತ್ತಾರು ಮಳ್ಳುಗಳು ಇರುವ ರೀತಿಯ ಕುರ್ಚಿ ಅದು.

1992ರವರೆಗೂ ಭಾರತ ತಂಡಕ್ಕೆ ಕೋಚ್ ಹುದ್ದೆ ಇರಲಿಲ್ಲ.  ಅಜರ್ ನಾಯಕತ್ವದ ತಂಡಕ್ಕೆ ಮೊದಲ ಬಾರಿಗೆ ಮಾಜಿ ನಾಯಕ ಅಜಿತ್ ವಾಡೇಕರ್ ಕೋಚ್ ಆಗಿ ನೇಮಕವಾಗಿದ್ದರು.1996ರ ವಿಶ್ವಕಪ್ ಟೂರ್ನಿ ಮುಗಿಯುವವರೆಗೂ ಅವರು ಕಾರ್ಯನಿರ್ವಹಿಸಿದ್ದರು. ಆ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ಹೀನಾಯ ಸೋಲನುಭವಿಸಿದ ನಂತರ ಹುದ್ದೆಯನ್ನು ತ್ಯಜಿಸಿದ್ದರು.

ತದನಂತರ 2000ನೇ ಇಸವಿಯವರೆಗೂ ಸಂದೀಪ್ ಪಾಟೀಲ, ಅನ್ಷುಮನ್ ಗಾಯಕವಾಡ್, ಮದನ್‌ಲಾಲ್ ಮತ್ತು ಕಪಿಲ್ ದೇವ್ ಅಲ್ಪ ಕಾಲದ ಕೋಚ್‌ಗಳಾಗಿದ್ದವರು.

ಕಪಿಲ್ ನಂತರವೇ ವಿದೇಶಿ ಕೋಚ್ ನೇಮಕದ ಬಗ್ಗೆ ಒಲವು ವ್ಯಕ್ತವಾಯಿತು. ನ್ಯೂಜಿಲೆಂಡ್‌ನ ಜಾನ್ ರೈಟ್ ಐದು ವರ್ಷ ಕೆಲಸ ಮಾಡಿದರು. ಅವರ ನಂತರ ಬಂದ ಆಸ್ಟ್ರೇಲಿಯಾದ ಗ್ರೇಗ್ ಚಾಪೆಲ್ ಇದ್ದಿದ್ದು ಎರಡು ವರ್ಷ ಮಾತ್ರ. ಅವರ ಮತ್ತು ನಾಯಕ ಸೌರವ್ ಗಂಗೂಲಿ ನಡುವಣ ಭಿನ್ನಾಭಿಪ್ರಾಯಗಳು ಇವತ್ತಿಗೂ ಹಲವು ವೇದಿಕೆಗಳಲ್ಲಿ ಚರ್ಚಾವಸ್ತುಗಳಾಗಿವೆ.

ಆದರೆ, 2008ರಲ್ಲಿ ಬಂದ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಅತ್ಯಂತ ಯಶಸ್ವಿ ಕೋಚ್ ಎನ್ನಲು ಅಡ್ಡಿಯಿಲ್ಲ. ಅವರ ಮತ್ತು ನಾಯಕ ದೋನಿ ನಡುವಣ ಬಾಂಧವ್ಯ ಚೆನ್ನಾಗಿತ್ತು. ತಂಡವೂ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಟೆಸ್ಟ್‌ ಕ್ರಿಕೆಟ್‌ ರ್‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೂ ಏರಿತ್ತು. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಹರಭಜನ್ ಸಿಂಗ್, ಜಹೀರ್ ಖಾನ್, ವಿವಿಎಸ್ ಲಕ್ಷ್ಮಣ್, ದ್ರಾವಿಡ್, ರಾಬಿನ್ ಉತ್ತಪ್ಪ, ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ ಅವರಂತಹ ತಾರಾ ವರ್ಚಸ್ಸಿನ ಆಟಗಾರರಿದ್ದ ತಂಡವನ್ನು ಜಾಣ್ಮೆಯಿಂದ ನಿಭಾಯಿಸಿದ್ದ ಚತುರ ಗ್ಯಾರಿ.

ಇದೀಗ ಮತ್ತೊಮ್ಮೆ ಅವರನ್ನೇ ಕೋಚ್ ಆಗಿ ನೇಮಕ ಮಾಡುವ ಬಗ್ಗೆಯೂ ಬಿಸಿಸಿಐ ಅಂಗಳದಲ್ಲಿ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಸದ್ಯದ ಸ್ಥಿತಿಯಲ್ಲಿ ಕೋಚ್ ಆಗಿ ನೇಮಕವಾಗುವವರ ಮುಂದೆ  ಉತ್ಸಾಹಿ ಮತ್ತು ಅಕ್ರಮಣಶೀಲ ವ್ಯಕ್ತಿತ್ವದ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಯುವ ಪ್ರತಿಭೆಗಳಿಗೂ ಉತ್ತಮ ವೇದಿಕೆ ಕಲ್ಪಿಸುವ ಸವಾಲು ಇದೆ. 2019ರ ವಿಶ್ವಕಪ್ ಟೂರ್ನಿಗೆ ಮೂರು ವರ್ಷ ಮುನ್ನವೇ ಕೋಚ್ ನೇಮಕಕ್ಕೆ ಬಿಸಿಸಿಐ ಮುಂದಾಗಿರುವುದೂ ಇದೇ ಕಾರಣಕ್ಕೆ. ಈ ತಿಂಗಳಾಂತ್ಯದಲ್ಲಿ ಕುತೂಹಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT