ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೋಗತಪ್ತ ಲೋಕದಲ್ಲಿ ಹಸಿದ ಕಲ್ಲುಗಳು

ರಂಗಭೂಮಿ
Last Updated 11 ಮೇ 2015, 19:30 IST
ಅಕ್ಷರ ಗಾತ್ರ

‘ಥಿಯೇಟರ್‌ ಸಮುರಾಯ್‌’ ಸಾಗರ ಮೂಲದ ರಂಗತಂಡ. ಅದಮ್ಯ ರಂಗಪ್ರೀತಿಯಿರುವ, ರಂಗಭೂಮಿಯನ್ನೇ ತಮ್ಮ ಬದುಕನ್ನು ಗ್ರಹಿಸುವ ಕ್ರಮ ಎಂದು ಭಾವಿಸಿಕೊಂಡಿರುವವರ ಹೆಗ್ಗೋಡಿನ ನಿನಾಸಮ್‌ ರಂಗಶಿಕ್ಷಣ ಕೇಂದ್ರದಲ್ಲಿ ರಂಗತರಬೇತಿ ಪಡೆದ ವಿದ್ಯಾರ್ಥಿಗಳೇ ಸೇರಿಕೊಂಡು ರಚಿಸಿರುವ ರಂಗತಂಡವಿದು.

ಇವರು ಪ್ರತಿವರ್ಷ ಒಂದು ನಾಟಕವನ್ನು ಆಯ್ದುಕೊಂಡು ನಿನಾಸಮ್‌ನಲ್ಲಿಯೇ ಒಂದೂವರೆ ತಿಂಗಳು ರಿಹರ್ಸಲ್‌ ಮಾಡಿ ನಂತರ ಮತ್ತೆ ಒಂದೂವರೆ ತಿಂಗಳು ರಾಜ್ಯದಾದ್ಯಂತ ತಿರುಗಾಟ ಮಾಡಿ ನಾಟಕ ಪ್ರದರ್ಶಿಸುತ್ತಾರೆ.  ಸಮುರಾಯ್‌ ಈ ವರ್ಷ ತಿರುಗಾಟಕ್ಕೆ ಆರಿಸಿಕೊಂಡ ನಾಟಕ ‘ಹಸಿದ ಕಲ್ಲುಗಳು’.

ಇದು ಈಗಾಗಲೇ ಉಡುಪಿ, ಮಂಗಳೂರು, ಬಂಟ್ವಾಳ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ 14 ಪ್ರದರ್ಶನ ನೀಡಿದ್ದು ಇತ್ತೀಚೆಗೆ ನಗರದ ರಂಗಶಂಕರದಲ್ಲಿ ತನ್ನ 15ನೇ ಪ್ರದರ್ಶನ ಪೂರೈಸಿತು.

‘ಹಸಿದ ಕಲ್ಲುಗಳು’ ರವೀಂದ್ರನಾಥ ಟ್ಯಾಗೋರ್‌ ಅವರ ‘ಹಂಗ್ರಿ ಸ್ಟೋನ್ಸ್‌’ ಕಥೆ ಆಧಾರಿತ ನಾಟಕ. ಇದರ ಇಂಗ್ಲಿಷ್‌ ರಂಗರೂಪವನ್ನು ರಂಗಾಯಣದ ಎಸ್‌. ರಾಮನಾಥ ಕನ್ನಡಕ್ಕೆ ತಂದಿದ್ದಾರೆ. ಹೈಸ್ನಾಂ ತೋಂಬಾ ನಿರ್ದೇಶಿಸುವುದರ ಜತೆಗೆ ಸಂಗೀತವನ್ನೂ ನೀಡಿದ್ದಾರೆ. ಆದ್ದರಿಂದ ಸಂಗೀತವೂ ನಿರ್ದೇಶನದ ಒಂದು ಭಾಗವಾಗಿಯೇ ನಾಟಕದಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗಿದೆ.

ಆ ಕ್ಷಣದ ರಂಜನೆಯಲ್ಲಿ ಬದುಕಿನ ಚಿಂತೆಗಳನ್ನು ಮರೆಸಿ ಒಂದು ರೀತಿಯ ಭ್ರಾಮಕ ಸಮಾಧಾನವನ್ನು ಸೃಷ್ಟಿಸಿ ಖುಷಿಕೊಡುವ ನಾಟಕಗಳು ಒಂದು ರೀತಿಯವು. ಆದರೆ ಮತ್ತೊಂದು ರೀತಿಯ ನಾಟಕಗಳಿವೆ. ಅವು ನೋಡುಗನೊಡನೆ ಸಂವಾದ ನಡೆಸಿ ಅವನನ್ನು ಚಿಂತನೆಗೆ ಹಚ್ಚುತ್ತವೆ. 

ಹುಸಿತನಗಳಿಂದ ಆಚೆ ಬಂದು ವಾಸ್ತವದ ಕಣ್ಣಿನಲ್ಲಿ ಬದುಕನ್ನು ಗ್ರಹಿಸುವಂತೇ ಪ್ರೇರೇಪಿಸುತ್ತವೆ. ‘ಹಸಿದ ಕಲ್ಲುಗಳು’ ಎರಡನೇ ರೀತಿಯ ನಾಟಕ.
ನಾಟಕ ಆರಂಭಗೊಳ್ಳುವುದೇ ಪಾಳು ಅರಮನೆಯ ಮೂರು ಶಿಲ್ಪಗಳ ರೋದನೆದೊಂದಿಗೆ. ದೀರ್ಘ ಅವಧಿಯ ಆ ರೋದನ ಪ್ರೇಕ್ಷಕನನ್ನು ನಾಟಕದ ಆವರಣದೊಳಕ್ಕೆ ಕರೆದೊಯ್ಯುತ್ತದೆ. ಮಂದ್ರ ಮತ್ತು ತಾರಕಸ್ವರದಲ್ಲಿಯ ಈ ರೋದನ ಏಕಕಾಲಕ್ಕೆ ಸಂಕಟದ ಯಾತನೆ ಮತ್ತು ಬಿಡುಗಡೆಯ ಯಾಚನೆಯಾಗಿಯೂ ಕೇಳಿಸುತ್ತದೆ.

ನಿಜಾಮರ ಪ್ರತಿನಿಧಿ, ಸುಂಕಾಧಿಕಾರಿ ಸುಂಕ ವಸೂಲಿಗೆಂದು ಬಂದವನು ಕಾವಲುಗಾರನ ಎಚ್ಚರವನ್ನೂ ಧಿಕ್ಕರಿಸಿ ಹಳೆಯ ಕಾಲದ ಅರಮನೆ ‘ಭೋಗಭವನ’ದಲ್ಲಿ ರಾತ್ರಿ ವಿಶ್ರಮಿಸುತ್ತಾನೆ. ಹಗಲಲ್ಲಿ ಕಲ್ಲಾಗಿ ಉಳಿಯುವ ಶಿಲ್ಪಗಳು ರಾತ್ರಿಯಾಗುತ್ತಿದ್ದಂತೆಯೇ ಜೀವ ತಳೆದು ಅವನೆದುರು ಕಲ್ಪನಾ ಲೋಕವನ್ನೇ ತೆರೆದಿಡುತ್ತವೆ. ಸುಂಕಾಧಿಕಾರಿಯ ಕಲ್ಪನಾ ಜಗತ್ತಿನಲ್ಲಿ ಜೀವತಳೆಯುವ ಶಿಲ್ಪಗಳು ರಂಜನೆಯ ಉತ್ಮತ್ತತ್ತೆಯಲ್ಲಿ ತೇಲಿಸುತ್ತಲೇ ತಮ್ಮ ಯಾತನೆಯ ಪ್ರಪಂಚವನ್ನು ತೆರೆದಿಡುತ್ತಾ ಹೋಗುತ್ತವೆ. ಕನಸೋ ನನಸೋ ತಿಳಿಯದ ಅರೆಭ್ರಾಮಕ ಜಗತ್ತಿನಲ್ಲಿಯೇ ಇಡೀ ನಾಟಕ ನಡೆಯುತ್ತದೆ. ಆ ಕನಸು ಅವನನ್ನು ಯಾವ ಪರಿ ಆವರಿಸಿಕೊಳ್ಳುತ್ತಾ ಹೋಗುತ್ತದೆಂದರೆ ಅದೇ ಕೊನೆಕೊನೆಗೆ ಅವನ ವಾಸ್ತವವೂ ಆಗಿಬಿಡುತ್ತದೆ.

‘ಹಸಿದ ಕಲ್ಲುಗಳು’ ಮುಖ್ಯವಾಗಿ ಗಮನ ಸೆಳೆಯುವುದು ಹೆಣ್ಣು ಮತ್ತು ಗಂಡಿನ ಜಗತ್ತುಗಳನ್ನು ಮುಖಾಮುಖಿಯಾಗಿಸುವ ರೀತಿಯಲ್ಲಿ. ಈ ನಾಟಕ ಸುಖ– ದುಃಖ ನೋವು ನಲಿವು, ನೆಮ್ಮದಿ, ಅಭಿಲಾಷೆಗಳನ್ನು ಗಂಡು ಮತ್ತು ಹೆಣ್ಣು ಪರಿಭಾವಿಸುವ ಕ್ರಮವನ್ನು ಅದೆಷ್ಟು ಆಳವಾಗಿ ಶೋಧಿಸುತ್ತದೆಂದರೆ ಅದು ಮೇಲುಮಟ್ಟದ ಸ್ತ್ರೀವಾದ, ತೋರಿಕೆಯ ಪ್ರತಿಭಟನೆಗಳನ್ನು ದಾಟಿಕೊಂಡುಬಿಡುತ್ತದೆ. ವಾಚ್ಯದ ನೆಲೆಗಟ್ಟಿನಿಂದ ಮೇಲಕ್ಕೇರಿ ಮನುಷ್ಯನ ಮೂಲಭೂತ ಸ್ವಭಾವಗಳ ಸೂಕ್ಷ್ಮ ಅನ್ವೇಷಣೆಯೂ ಆಗಿಬಿಡುತ್ತದೆ.

ಗಂಡಸಿನ ಕಲ್ಪನಾ ಜಗತ್ತಿನಲ್ಲಿ ನಿರ್ಮಾಣಗೊಂಡ ಭೋಗ–ವೈಭೋಗಕ್ಕೆ ಪೂರ್ತಿ ವಿರುದ್ಧವಾದ, ಶತಮಾನಗಳಿಂದ ಹತ್ತಿಕ್ಕಿಕೊಂಡು ಬಂದ ಹೆಣ್ಣಿನ ಸಂಕಟದ ಲೋಕವೂ ಅವನೆದುರು ಅನಾವರಣಗೊಳ್ಳುತ್ತಾ ಹೋಗುತ್ತದೆ. ಈ ಮೂಲಕ ಅರಮನೆ, ಐಸಿರಿ, ಮೈಮೆರೆಸುವ ಭೋಗಜಗತ್ತಿನಲ್ಲಿನ ಮಾರುವ–ಕೊಳ್ಳುವ, ಇಷ್ಟಬಂದಾಗ ಬಳಸುವ ನಿರ್ಜೀವ ವಸ್ತುವಾಗಿಯೇ ಹೆಣ್ಣನ್ನು ನೋಡುವ ಗಂಡಿನ ನೋಟದ ಕ್ರಮವನ್ನೇ ಪ್ರಬಲವಾಗಿ ಪ್ರಶ್ನಿಸುತ್ತದೆ.‌ಜಗತ್ತಿನ ಎಲ್ಲದರ ಮೇಲೂ ಪಾರಮ್ಯ ಸಾಧಿಸುವ, ತನ್ನ ಸಹಜೀವಿ ಹೆಣ್ಣನ್ನೂ ಅಡಿಯಾಳಾಗಿಸಿಕೊಳ್ಳುವ ಗಂಡುಜಗತ್ತಿನ ಕ್ರೌರ್ಯಗಳಲ್ಲಿ ಕೊನೆಗೆ ಅವನೇ ಸಿಲುಕಿಕೊಳ್ಳುವ ವೈರುದ್ಧ್ಯವನ್ನು ನಾಟಕ ಸಶಕ್ತವಾಗಿ ಬಿಂಬಿಸುತ್ತದೆ.

ಮಾತು ಮತ್ತು ಅಭಿನಯದ ಅಪರೂಪದ ಹೊಂದಾಣಿಕೆ ಈ ನಾಟಕದ ಇನ್ನೊಂದು ಹೆಚ್ಚುಗಾರಿಕೆ. ಮಾತಿನಲ್ಲಿ ಹೇಳಲಾಗದ, ಅಥವಾ ಮಾತಿನಲ್ಲಿ ಹೇಳಹೊರಟರೆ ಬರೀ ಮಾತಷ್ಟೇ ಆಗಿಬಿಡುವ ಸಂಗತಿಗಳನ್ನು ಅಭಿನಯದಲ್ಲಿಯೇ ಕಟ್ಟಿಕೊಟ್ಟಿರುವ ನಿರ್ದೇಶಕರ ಶ್ರಮ ಈ ನಾಟಕಕ್ಕೆ ವಿಶೇಷ ಧ್ವನಿಶಕ್ತಿ ನೀಡಿದೆ.

ಇಡೀ ನಾಟಕ ಕಾವ್ಯಾತ್ಮಕ ಲಯದಲ್ಲಿಯೇ ಸಾಗುವುದರಿಂದ ಆಂಗಿಕಕ್ಕೆ ವಿಶೇಷವಾದ ಮಹತ್ವವಿದೆ. ಆಡುವ ಮಾತಿನ ಮುಂದುವರಿಕೆಯಾಗಿಯೇ ಆಂಗಿಕವನ್ನು ಬಳಸಿಕೊಂಡಿರುವ ರೀತಿ ಕುತೂಹಲಕಾರಿಯಾಗಿದೆ. ಮಂಜು ಕೊಡಗು ಅವರ ಬೆಳಕಿನ ವಿನ್ಯಾಸ ನಾಟಕಕ್ಕೆ ಮತ್ತೊಂದು ಆಯಾಮವನ್ನು ನೀಡುವಂತಿದೆ.

ಸುಂಕಾಧಿಕಾರಿಯಾಗಿ ಸಿದ್ಧಾರ್ಥ ಮಾಧ್ಯಮಿಕ ಅವರ ಅತಿಶಯದ ಅಭಿನಯ ನಾಟಕದ ಭ್ರಾಮಕ ಆವರಣಕ್ಕೆ ಹೊಂದುವಂತಿದೆ. ಶಿಲ್ಪಕನ್ಯೆಯರು (ಅಕ್ಷತಾ ಆರ್‌, ಬಿಂದು ರಕ್ಷಿದಿ, ರಾಧಾ ರಾಣಿ) ಹೆಣ್ಣಿನ ಮನಸ್ಸಿನೊಳಗೆ ‘ಇರುವ’ ಲೋಕ ಮತ್ತು ಹೊರಗಿನ ಗಂಡುಪಾರಮ್ಯದ ಜಗತ್ತಿನೆದುರು ‘ತೋರುವ’ ಕೃತಕ ಖುಷಿಯ ಲೋಕದ ನಡುವಿನ ಕಂದರವನ್ನು ಹೆಜ್ಜೆಹೆಜ್ಜೆಗೂ ಅರಿವುಗೊಳಿಸುತ್ತಾ ಹೋಗುತ್ತಾರೆ. ‘ವಿಜ್ಞಾನದಿಂದ ವೇದದವರೆಗೆ ಎಲ್ಲವನ್ನೂ ತಿಳಿದುಕೊಂಡಿರುವ ನೀವು, ಎಲ್ಲವನ್ನೂ ನೋಡಿಯೂ ಏನೂ ನೋಡದವರಂತೇ ಇರುವುದರಿಂದಲೇ ಶತಶತಮಾನಗಳಿಂದ ನಾವು ಹೀಗೆಯೇ ಇದ್ದೇವೆ. ಕಲ್ಲಿನಂತೆ!’ ಎಂಬ ಶಿಲ್ಪಕನ್ಯೆಯೊಬ್ಬಳ ಮಾತು ಇಡೀ ಪುರುಷ ಸಮಾಜಕ್ಕೆ ಹೆಣ್ಣು ಹಾಕುವ ಮಾನವೀಯತೆಯ ಸವಾಲಿನಂತೆಯೇ ಭಾಸವಾಗುತ್ತದೆ.

‘ದೂರ ಸರಿ.. ದೂರ ಸರಿ... ಈ ಎಲ್ಲವೂ ಮಿಥ್ಯ..’ ಹುಚ್ಚ ಮೆಹರ್‌ ಅಲಿ (ಪಣಪಿಲ ಉಮೇಶ್‌) ಆಗಾಗ ಕೂಗಿ ಕೂಗಿ ಹೇಳುವ ಮಾತು ಅವನ ಮಾತು, ಸ್ವರ, ಅಭಿನಯದೊಟ್ಟಿಗೇ ಮಂತ್ರದಂತೆಯೇ ನಾಟಕದ ನಂತರವೂ ಮನಸ್ಸಿನಲ್ಲಿ ಅನುರಣಿಸುತ್ತಿರುತ್ತದೆ. ಕಾಮಾತುರ ಬಾದ್‌ಷಹಾನ ಪಾತ್ರ, (ಮೋಹನ್‌ ಶೇಣಿ) ಅವನ ಕ್ರೂರ ಬದುಕಿನಲ್ಲಿಯೇ ಅಡಗಿರುವ ಅಸಂಗತತೆಯನ್ನೂ ತೋರುತ್ತದೆ.

ತೆರೆದ ಅಂತ್ಯ (open end) ಈ ನಾಟಕದ ಶಕ್ತಿಯನ್ನು ಹೆಚ್ಚಿಸಿದೆ. ಇದರಿಂದ ನಾಟಕ ವೇದಿಕೆಯ ಮೇಲೆ ಕೊನೆಗೊಂಡರೂ ಪ್ರೇಕ್ಷಕನ ಮನಸ್ಸಿನಲ್ಲಿ ಮುಂದುವರಿಯುತ್ತಲೇ ಇರುತ್ತದೆ. ಅನಾದಿಕಾಲದ ಶಿಲ್ಪಗಳು ಹೇಳುವ ಕತೆ ಕೇಳುತ್ತಾ ಅದರೊಳಗೆ ಸಿಲುಕಿಕೊಂಡ ಸುಂಕಾಧಿಕಾರಿ ಕಲ್ಲಾದರೂ ಆ ಕಥೆಗಳು ನಮ್ಮ ಬದುಕಿನ ಹಲವು ಸಂಗತಿಗಳೊಟ್ಟಿಗೆ ಸೇರಿಕೊಂಡು ವಿಭಿನ್ನವಾಗಿ ಬೆಳೆಯುತ್ತವೆ.

ನಾಟಕದ ಆಶಯವನ್ನು ಅರಿತುಕೊಳ್ಳುವ, ಬೆಳೆಸುವ ಸಾಮರ್ಥ್ಯ ಮತ್ತು ಪ್ರಬುದ್ಧತೆ ನಾಟಕಕಾರನಷ್ಟೇ ಪ್ರೇಕ್ಷಕನಿಗೂ ಇದೆ ಎಂಬ ಗಟ್ಟಿ ನಂಬಿಕೆಯಿಂದ ಕಟ್ಟಿದ ನಾಟಕವಿದು. ಈ ನಿಟ್ಟಿನಲ್ಲಿ ‘ಹಸಿದ ಕಲ್ಲುಗಳು’ ಸಾಧಿಸಿದ ಯಶಸ್ಸು ಕೂಡ ಅಷ್ಟೇ ಮಹತ್ವದ್ದಾಗಿದೆ. 

**
‘ಹಸಿದ ಕಲ್ಲುಗಳು’ ನಾಟಕ ಇಂದು
(ಮೇ 12) ಸಂಜೆ 7.30ಕ್ಕೆ ಹನುಮಂತನಗರದ ಕೆ.ಎಚ್‌. ಕಲಾಸೌಧದಲ್ಲಿ ಮತ್ತು ನಾಳೆ (ಮೇ. 13) ಜಾಲಹಳ್ಳಿಯ ಬಿಇಎಲ್‌ ಕುವೆಂಪು ಕಲಾಕ್ಷೇತ್ರದಲ್ಲಿ ಸಂಜೆ 6.30ಗೆ ಪ್ರದರ್ಶಿತವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT