ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡೇಲಾ ಪರಂಪರೆಯ ಲಾಭಕ್ಕಾಗಿ ...

ಅಕ್ಷರ ಗಾತ್ರ

ಮುಗುಳ್ನಗುವಂತೆ ಭೇಟಿಯಾಗಲು ಬಂದಾತ ಕೋರಿದ. ಆತನ ಧ್ವನಿಯಲ್ಲಿ ಬಲವಂತದ ಸೌಹಾರ್ದವಿತ್ತು. ಮೊಬೈಲ್‌ನಿಂದ ಛಾಯಾಚಿತ್ರ ತೆಗೆಯಲು ತೊಡಗಿದ. ಆದರೆ  94 ವರ್ಷ ವಯಸ್ಸಿನ ದಕ್ಷಿಣ ಆಫ್ರಿಕಾದ ಮೊದಲ ಕಪ್ಪು ವರ್ಣೀಯ ಅಧ್ಯಕ್ಷ ನೆಲ್ಸನ್‌ಮಂಡೇಲಾ ಅವರ ಮುಖ ಕಲ್ಲಿನಂತೆ ಭಾವ ರಹಿತವಾಗಿತ್ತು. ಅವರು ಗೊಂದಲಕ್ಕೆ ಸಿಲುಕಿದಂತೆ ಕಂಡು ಬಂತು.

ಕಳೆದ ತಿಂಗಳು ತಮ್ಮನ್ನು ಭೇಟಿಯಾಗಲು ಬಂದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್(ಎಎನ್‌ಸಿ)ನ ನಾಯಕರ ಮುಖಗಳನ್ನು ಗುರುತಿಸಲೂ ಅವರು ಅಸಮರ್ಥರಾಗಿದ್ದರು. ದಶಕಗಳಿಂದ ಅವರು ಬಲ್ಲವರ ಮುಖಗಳು ಅವು. ಆಗ ಕ್ಯಾಮೆರಾ ತಂಡ ತೆಗೆದ ದೃಶ್ಯಾವಳಿಗಳನ್ನು ರಾಷ್ಟ್ರದ ಎಲ್ಲ ಚಾನೆಲ್‌ಗಳು ಪ್ರಸಾರ ಮಾಡಿದವು. ಒಂಬತ್ತು ತಿಂಗಳ ಬಳಿಕ ಅದೇ ಮೊದಲ ಬಾರಿಗೆ ಅಸ್ವಸ್ಥ ನೆಲ್ಸನ್ ಮಂಡೇಲಾ ಅವರನ್ನು ಟಿವಿಯಲ್ಲಿ ಅಂದು ಜನರು ನೋಡಿದರು. ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಮಂಡೇಲಾ ಅವರು ನಾಲ್ಕು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಅವರ ಅಂದಿನ ಸ್ಥಿತಿ ಟಿ.ವಿಗಳಲ್ಲಿ ಪ್ರಸಾರವಾದದ್ದೇ ತಡ ಅವರ ಬಂಧುಗಳು ರೋಷದಿಂದ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ನಾಯಕರು ಅವರ ಖಾಸಗಿತನದ ಮೇಲೆ ಆಕ್ರಮಣ ಮಾಡಿದರು ಎಂದು ದೂರಿದರು. ರಾಜಕೀಯ ಲಾಭಕ್ಕಾಗಿ ಅವರ ಅಸಹಾಯಕ ಸ್ಥಿತಿಯನ್ನು ಬಳಸಿಕೊಂಡರು ಎಂದು ಕೋಪೋದ್ರಿಕ್ತರಾಗಿ  ಸಂಬಂಧಿಗಳು ಹೇಳಿದರು.

`ನಾನು ನಿಜವಾಗಿಯೂ ಸಿಟ್ಟಿಗೆದ್ದಿದ್ದೇನೆ' ಎಂದು ಮಂಡೇಲಾ ಅವರ ಪುತ್ರಿ ಮಕಝಿವೆ ಮಂಡೇಲಾ ಅಸಮಾಧಾನ ತೋಡಿಕೊಂಡರು. `ನಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಚಿತ್ರೀಕರಿಸಲಾಗಿದೆ. ಅದನ್ನು ಪ್ರಸಾರ ಮಾಡದೇ ಇರುವ ಬುದ್ಧಿ ಅವರಿಗೆ ಇರಬೇಕಿತ್ತು' ಎಂದಿದ್ದಾರೆ.

ಮಂಡೇಲಾ ಅವರಿಗೆ ವೃದ್ಧಾಪ್ಯದ ತೊಡಕುಗಳು ಆವರಿಸಿಕೊಳ್ಳುತ್ತಿರುವಂತೆ ಅವರ ವರ್ಚಸ್ಸನ್ನು ಬಳಸಿಕೊಂಡು ಹಣ ಮಾಡಲು ಇರುವ ಅವಕಾಶಗಳ ಬಳಕೆ ಆರಂಭವಾಗಿದೆ. ದಶಕಗಳ ಕಾಲ ಅವರು ಮುನ್ನಡೆಸಿದ ಅವರ ಪಕ್ಷ ಅವರ ವರ್ಚಸ್ಸಿನ ಲಾಭ ಪಡೆಯಲು ಆರಂಭಿಸಿದ ಸಮಯ ಸೂಕ್ತವಾದುದಲ್ಲ. ಏಕೆಂದರೆ ಅವರ ಪಕ್ಷ ಭ್ರಷ್ಟರ, ಸ್ವಹಿತಾಸಕ್ತಿಯ ಜನರ ಗುಂಪು ಎಂಬ ಆರೋಪ ಕೇಳಿ ಬರುವಾಗ ಇದು ನಡೆದಿದೆ.

ಅವರ ಪಕ್ಷದ ಪ್ರಮುಖ ಎದುರಾಳಿ ಡೆಮಾಕ್ರಟಿಕ್ ಅಲಯನ್ಸ್ ಕೂಡ ಈಗ ಟೀಕೆಗೆ ಗುರಿಯಾಗಿದೆ. ಅವರ ಪಕ್ಷಕ್ಕೆ ಸೇರಿದವರೊಬ್ಬರನ್ನು ಮಂಡೇಲಾ ಅಪ್ಪಿಹಿಡಿದ ಚಿತ್ರವನ್ನು ಅದು ಈಚೆಗೆ ಬಳಸಿದೆ. ಇದು ಅವರದೇ ಪಕ್ಷವನ್ನು ಪದಚ್ಯುತಗೊಳಿಸುವ ಕ್ರಮ ಎಂದು ಅರ್ಥೈಸಲಾಗಿದೆ.

  ಮಂಡೇಲಾ ಕುಟುಂಬದ ಕ್ಷೇಮಾಭಿವೃದ್ಧಿಗೆ ರಚಿಸಲಾದ ಟ್ರಸ್ಟ್ ಕೂಡ ಈಗ ಸಂಘರ್ಷಕ್ಕೆ ಕಾರಣವಾಗಿದೆ. ಅದರ ನಿರ್ದೇಶಕ ಸ್ಥಾನದಿಂದ ಜಾರ್ಜ್ ಬಿಜೋಸ್ ಅವರನ್ನು ಪದಚ್ಯುತಿಗೊಳಿಸಲು  ಮಂಡೇಲಾ ಕುಟುಂಬ ಕೋರ್ಟ್‌ಗೆ ಹೋಗಿದೆ. ಬಿಜೋಸ್ ಅವರು ಮಂಡೇಲಾ ಅವರ ಮಿತ್ರ . `ಪ್ರತಿಯೊಬ್ಬರೂ ಮಂಡೇಲಾ ಮಾಂತ್ರಿಕತೆಯ ತುಣುಕು ಬಯಸುತ್ತಾರೆ' ಎಂದು ವಿಲಿಯಂ ಗುಮೆದ್ ಹೇಳಿದ್ದಾರೆ. ಅವರು ಮಂಡೇಲಾ ಅವರ ಬಗ್ಗೆ ವ್ಯಾಪಕವಾಗಿ ಬರೆದ ಲೇಖಕ. ಬಿಜೋಸ್ ಹಾಗೂ ಇನ್ನಿಬ್ಬರು ಟ್ರಸ್ಟ್‌ನಲ್ಲಿರುವುದು ಮಂಡೇಲಾ ಅವರ ಇಬ್ಬರು ಹೆಣ್ಣುಮಕ್ಕಳಿಗೆ ಸ್ವಲ್ಪವೂ ಇಷ್ಟವಿಲ್ಲ.  ಹೀಗಾಗಿಯೇ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಬಿಜೋಸ್ ಅವರು ಮಾನವಹಕ್ಕುಗಳಿಗಾಗಿ ಹೋರಾಟ ನಡೆಸಿದ ಹಿನ್ನೆಲೆ ಇರುವ ಖ್ಯಾತ ವಕೀಲ. 50 ವರ್ಷಗಳ ಹಿಂದೆ ಅಂದಿನ ಪ್ರಭುತ್ವವನ್ನು ಪದಚ್ಯುತಿಗೊಳಿಸಲು ಮಂಡೇಲಾ ಯತ್ನಿಸಿದರು ಎಂಬ ಆರೋಪವನ್ನು ಎದುರಿಸಿದಾಗ ಅವರ ಪರ ವಾದಿಸಿದವರು. ಇಂದಿಗೂ ಅವರ ಆಪ್ತಮಿತ್ರ.  ಮಂಡೇಲಾ ಅವರ ಮಕ್ಕಳು ಅವರ ಹಣದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಬಿಜೋಸ್ ಹೇಳಿದ್ದು ಅವರ ಮೊಮ್ಮಕ್ಕಳನ್ನು ಕೆರಳಿಸಿದೆ. `ನಮ್ಮ ಕುಟುಂಬ ಎಂದರೆ ಸೂಕ್ಷ್ಮತೆ ಇಲ್ಲದ ಹಣದ ಪೀಪಾಸುಗಳು ಎಂಬ ಚಿತ್ರಣ ನೀಡುವುದನ್ನು ನಾವು ಒಪ್ಪಲಾರೆವು. ನಮ್ಮಲ್ಲಿ  ಹೆಚ್ಚಿನವರು ಲಾಭದಾಯಕ ಹುದ್ದೆಗಳಲ್ಲಿದ್ದೇವೆ. ನಮ್ಮ ಕಂಪೆನಿಗಳಿಗಾಗಿ ದುಡಿಯುತ್ತಿದ್ದೇವೆ' ಎಂದಿದ್ದಾರೆ.

ಮಂಡೇಲಾ ಮಗಳು ಮಕಝಿವೆ ಮಂಡೇಲಾ  ಸಂದರ್ಶನವೊಂದರಲ್ಲಿ `ನಮ್ಮ ಅಪ್ಪ ಸಾಯುವ ಮುನ್ನವೇ ನಮಗೆ ಹಣ ಬೇಕು. ಹಣದ ಮೋಹ ನಮ್ಮಲ್ಲಿದೆ ಎಂದು ಹೇಳುವುದು ಮೂರ್ಖತನ' ಎಂದಿದ್ದಾರೆ.

`ನಮ್ಮ ಅಪ್ಪನ ಜನಪ್ರಿಯತೆಯ ಹೊರತಾಗಿ ನಮ್ಮ ಕುಟುಂಬ ಶ್ರೀಮಂತವಲ್ಲ. ನಾವು ಅವರ ಮಕ್ಕಳಾದ ಕಾರಣ ಹುಟ್ಟುವಾಗಲೇ ವಜ್ರದ ಚಮಚ ಬಾಯಿಯಲ್ಲಿಟ್ಟು ಹುಟ್ಟಿದ್ದೇವೆ ಎಂದು ಭಾವಿಸುವುದು ತಪ್ಪು' ಎನ್ನುತ್ತಾರೆ. 

ಮಕಝಿವೆ ಮಂಡೇಲಾ ಮಾನವಶಾಸ್ತ್ರದಲ್ಲಿ ಪಿಎಚ್.ಡಿ. ಮಾಡಿದವರು. ಹಲವಾರು ಉದ್ಯಮಗಳ ಆಡಳಿತಮಂಡಳಿಗಳಲ್ಲಿ ಇದ್ದಾರೆ. `ಹೌಸ್ ಆಫ್ ಮಂಡೇಲಾ' ಎಂಬ ವೈನ್ ಉದ್ಯಮವನ್ನು ತಮ್ಮ ಮಗಳ ಜತೆ ನಡೆಸುತ್ತಿದ್ದಾರೆ.

ಹಣದ ವಿಚಾರ ಮಾತ್ರವಲ್ಲ , ಅವರ ಹೆಸರೂ ದುರ್ಬಳಕೆಯಾಗುತ್ತಿದೆ. ಪ್ರಮುಖ  ವಿರೋಧ ಪಕ್ಷವಾಗಿರುವ ಡೆಮಾಕ್ರಟಿಕ್ ಅಲಯನ್ಸ್, ಮಂಡೇಲಾ ಅವರು  ತಮ್ಮ ಪಕ್ಷದ ಜತೆ ಮೈತ್ರಿ ಹೊಂದಿದ, ವರ್ಣದ್ವೇಷದ ವಿರುದ್ಧ ಹೋರಾಡಿದ ಶ್ವೇತವರ್ಣೀಯ ಹೆಲನ್ ಸುಝಮನ್ ಅವರನ್ನು ಅಪ್ಪಿಕೊಳ್ಳುವ ಚಿತ್ರವಿರುವ ಮುದ್ರಿತ ಸಾಮಗ್ರಿ ಪ್ರಕಟಿಸಿತ್ತು. ತಮ್ಮ ಪಕ್ಷ ಶ್ವೇತವರ್ಣೀಯರನ್ನು ಮಾತ್ರ ಒಳಗೊಂಡಿಲ್ಲ ಅಥವಾ ಮತ್ತೆ ಹಿಂದಿನ ವರ್ಣದ್ವೇಷದ ದಿನಗಳು ಮರಳುವುದನ್ನು ಬಯಸುವವರನ್ನು ಬೆಂಬಲಿಸುತ್ತದೆ ಎಂಬ ಭಾವನೆಯನ್ನು ದೂರ ಮಾಡಲು ಈ ಕೆಲಸ ಮಾಡಿದೆ ಎಂದು ಹೇಳಲಾಗಿದೆ. ಈ ರೀತಿ ಮಂಡೇಲಾ ಚಿತ್ರ ಬಳಕೆಗೆ ಎಎನ್‌ಸಿ  ತೀವ್ರ ವಿರೋಧ ವ್ಯಕ್ತಪಡಿಸಿದೆ. `ಪ್ರಚಾರದ ವಿಚಾರದಲ್ಲಿ ಇದು ಸಂದರ್ಭ ಸಾಧಕತನ' ಎಂದು  ಆ ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ.

`ನಮ್ಮ ಪಕ್ಷ ವರ್ಣದ್ವೇಷವನ್ನು ಪ್ರತಿಪಾದಿಸುತ್ತದೆ ಎಂದು ಎಎನ್‌ಸಿ ಸುಳ್ಳು ಪ್ರಚಾರ ಮಾಡುವುದನ್ನು ನೋಡಿಯೂ ಸುಮ್ಮನಿರಲಾರೆವು. ನಾವು ಗೆದ್ದರೆ ಮತ್ತೆ ವರ್ಣದ್ವೇಷದ ದಿನಗಳು ಮರಳುತ್ತವೆ ಎಂಬ ಸುಳ್ಳನ್ನು ನಾವು ತಿರಸ್ಕರಿಸುತ್ತೇವೆ' ಎಂದು ವಿರೋಧ ಪಕ್ಷದ ನಾಯಕರಾದ ಹೆಲನ್ ಝಿಲೆ ಪ್ರತಿಯೇಟು ನೀಡಿದ್ದಾರೆ.

ಮಂಡೇಲಾ ಅವರ ವರ್ಚಸ್ಸನ್ನು ಯಾರೂ ದುರುಪಯೋಗ ಮಾಡಿಕೊಳ್ಳದಂತೆ ಕಾಯ್ದುಕೊಳ್ಳುವುದು ಕ್ಲಿಷ್ಟ ಕೆಲಸ. ಅವರ ಹೆಸರು, ಚಿತ್ರ ದ.ಆಫ್ರಿಕಾದ ಎಲ್ಲೆಡೆ ಕಾಣಬಹುದು. ಆ ದೇಶದ ನೋಟಿನಲ್ಲಿ, ಟೀ ಶರ್ಟ್ ಮತ್ತು ಗಡಿಯಾರಗಳಲ್ಲಿ ಅವರ ಚಿತ್ರಗಳಿವೆ. ಅವರ ಪ್ರತಿಮೆಗಳು ಅಲ್ಲಿವೆ. ತಮ್ಮ ವರ್ಚಸ್ಸು ಮತ್ತು ಹೆಸರಿನ ಬಳಕೆಯನ್ನು ಅವರು ಎಂದೂ ವಿರೋಧಿಸಿದವರಲ್ಲ. ಮಕ್ಕಳ ಹಕ್ಕು, ಎಚ್‌ಐವಿ ಮತ್ತು ಏಡ್ಸ್ ಸಂಶೋಧನೆ, ಶಾಂತಿ ಸ್ಥಾಪನೆಯ ಪ್ರಯತ್ನ- ಈ ಎಲ್ಲದಕ್ಕೆ  ತಮ್ಮ ಹೆಸರು, ಚಿತ್ರ ಬಳಕೆಗೆ ಅವರು ವಿರೋಧಿಸಲಿಲ್ಲ.

ಅನೇಕ ರೀತಿಗಳಲ್ಲಿ ಮಂಡೇಲ ಅವರ ಚಿತ್ರ ನಿಜಕ್ಕೂ ಅವರದಾಗಿ ಉಳಿದಿರಲೇ ಇಲ್ಲ. 1964ರಲ್ಲಿ ಮಂಡೇಲಾ ಅವರನ್ನು ಶಿಕ್ಷೆಗೆ ಗುರಿಪಡಿಸಿದಾಗ ಅವರ ಚಿತ್ರದ ಮೇಲೆ ಜೈಲಿನ ಕಬ್ಬಿಣದ ಸರಳುಗಳ ಚಿತ್ರವನ್ನು ಮುದ್ರಿಸಿ ವರ್ಣದ್ವೇಷದ ವಿರುದ್ಧ ಹೋರಾಟದ ಸಂದರ್ಭದಲ್ಲಿ ಎಎನ್‌ಸಿ ಬಳಸಿತು. ವಿಶ್ವದ ಎಲ್ಲೆಡೆಯ ವಿದ್ಯಾರ್ಥಿಗಳು ಅವರ ಬಿಡುಗಡೆಯ ಹೋರಾಟದ ಅಂಗವಾಗಿ ಅವರ ಭಾವಚಿತ್ರವನ್ನು ವಿದ್ಯಾರ್ಥಿನಿಲಯದ  ಗೋಡೆಗಳ ಮೇಲೆ ಅಂಟಿಸುತ್ತಿದ್ದರು.

ಈ ದಿನಗಳಲ್ಲಿ ಕುಟುಂಬದವರ ಜೊತೆ ಕಾಲ ಕಳೆಯಲಷ್ಟೇ ಮಂಡೇಲಾ ಬಯಸುತ್ತಾರೆ  ಎಂದೂ ಮಂಡೇಲಾ ಪುತ್ರಿ ಹೇಳುತ್ತಾರೆ. `ಜೈಲಿನಿಂದ ಬಿಡುಗಡೆಯಾದ ಮೇಲೆ ಟಾಟಾ (ಕ್ಸೊಸಾ ಭಾಷೆಯಲ್ಲಿ ಅಪ್ಪನನ್ನು ಕರೆಯುವ ರೀತಿ) ಕುಟುಂಬದ ಜೊತೆ ಸಮಯ ಕಳೆದದ್ದೇ ಕಡಿಮೆ.  ಈಗಷ್ಟೇ ಆ ಅವಕಾಶ ನಮಗೆ ಲಭಿಸಿದೆ.   ಇದೀಗ ನಮ್ಮ ಸಮಯ. ಟಾಟಾನ ಉಳಿದ ಬದುಕಿನ ಸಮಯವನ್ನು ನಾವು ಹಂಚಿಕೊಳ್ಳಲು ನಮಗೆ ಅವಕಾಶ ನೀಡಬೇಕು'.
                                                                                                                                                                                                                                                                        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT