ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನಕ್ಕೆ ಇನ್ನೆರಡೇ ದಿನ: ರಂಗೇರಿದೆ ಪ್ರಚಾರ

Last Updated 10 ಫೆಬ್ರುವರಿ 2016, 19:44 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನಕ್ಕೆ ಇನ್ನು ಎರಡೇ ದಿನ ಉಳಿದಿದ್ದು,  ಪ್ರಚಾರ ರಂಗೇರಿದೆ. ಆದಷ್ಟು ಹೆಚ್ಚು ಸಂಖ್ಯೆಯಲ್ಲಿ ಮತದಾರರನ್ನು ತಲುಪಲು ಪ್ರಮುಖ ಪಕ್ಷಗಳ ಮುಖಂಡರು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಅವರು ರಾಧಾಕೃಷ್ಣ ದೇವಾಲಯ ವಾರ್ಡ್ ಹಾಗೂ ಸಂಜಯನಗರ ವಾರ್ಡ್‌ಗಳಲ್ಲಿ ತೆರೆದ ವಾಹನದಲ್ಲಿ ಸಂಚರಿಸಿ ಸಿ.ಕೆ.ಅಬ್ದುಲ್‌ ರೆಹಮಾನ್‌ ಷರೀಫ್‌ ಪರ ಮತಯಾಚಿಸಿದರು. ಬಡಾವಣೆಗಳಲ್ಲಿ ಮತದಾರರ ಸಭೆಗಳನ್ನು ನಡೆಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಇದ್ದಾಗಲೆಲ್ಲ ಬೆಂಗಳೂರಿನ ಅಭಿವೃದ್ಧಿಗೆ ಆದ್ಯತೆ ಸಿಕ್ಕಿದೆ. ಈಗಲೂ ನಮ್ಮದೇ ಸರ್ಕಾರ ಇದೆ. ನಮ್ಮ ಅಭ್ಯರ್ಥಿಗೆ ಆಶೀರ್ವಾದ ಮಾಡಿ’ ಎಂದು ಮತದಾರರಲ್ಲಿ ಕೋರಿದರು. 

ಸಚಿವರಾದ ರಾಮಲಿಂಗಾ ರೆಡ್ಡಿ,  ರೋಷನ್‌ ಬೇಗ್‌, ದಿನೇಶ್‌ ಗುಂಡೂರಾವ್‌, ಶಾಸಕರಾದ ಮುನಿರತ್ನ, ವಿಧಾನ ಪರಿಷತ್ ಸದಸ್ಯರಾದ ಎಂ.ಆರ್‌.ಸೀತಾರಾಂ, ಆರ್‌.ವಿ. ವೆಂಕಟೇಶ್‌  ಪ್ರಚಾರದಲ್ಲಿ ಭಾಗವಹಿಸಿದರು.

ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ  ಅಭ್ಯರ್ಥಿ ಎನ್‌.ನಾಗರತ್ನಾ ಪರ ಆರ್‌.ಟಿ.ನಗರದ ಮೈದಾನದಲ್ಲಿ ಪ್ರಚಾರ ಸಭೆ ನಡೆಯಿತು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್‌.ವೆಂಕಟಸ್ವಾಮಿ ಮಾತನಾಡಿ, ‘ಆಡಳಿತ ಪಕ್ಷವಾದ ಕಾಂಗ್ರೆಸ್‌ ಹಣ ಕೊಟ್ಟು ಮತದಾರರನ್ನು ಖರೀದಿಸುತ್ತಿದೆ. ಜನ ಆಮಿಷಗಳಿಗೆ ಬಲಿಯಾಗಬಾರದು. ಬಡ ಜನರ ಪರವಾಗಿ ಕೆಲಸ ಮಾಡುವವರನ್ನು  ಬೆಂಬಲಿಸಬೇಕು’ ಎಂದರು.

‘ನಮ್ಮ ಅಭ್ಯರ್ಥಿ ವಯಸ್ಕರ ಶಿಕ್ಷಣ  ಹಾಗೂ ಕೊಳಚೆ ನಿವಾಸಿಗಳಲ್ಲಿ ಆರೋಗ್ಯ ಕಾಳಜಿ ಮೂಡಿಸಲು ಕೆಲಸ ಮಾಡಿದ್ದಾರೆ. ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವರನ್ನು ಬೆಂಬಲಿಸಿ’ ಎಂದು ಕೋರಿದರು.

ಲೋಕಜನಶಕ್ತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಪ್ರಭಾವತಿ, ಕನ್ನಡ ಪಕ್ಷದ ಪುರುಷೋತ್ತಮ್‌, ಸಾಮಾಜಿಕ ಕಾರ್ಯಕರ್ತ ತಲಕಾಡು ಚಿಕ್ಕರಂಗೇಗೌಡ ಇದ್ದರು.

ಪ್ರಚಾರಕ್ಕೆ ಮಹಿಳೆಯರ ದಂಡು: ಈ ಬಾರಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಮನೆ ಮನೆ ಪ್ರಚಾರಕ್ಕೆ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳುತ್ತಿವೆ.

ಮಹಿಳೆಯರ ದಂಡು ಪಕ್ಷದ ಅಭ್ಯರ್ಥಿಗಳ ಪರ ಘೋಷಣೆ ಕೂಗುತ್ತಾ ಅಭ್ಯರ್ಥಿಗಳ ಕರಡು ಮತಪತ್ರಗಳನ್ನು, ಪ್ರಣಾಳಿಕೆಗಳನ್ನು ಮನೆ ಮನೆಗೆ ತಲುಪಿಸುವ ದೃಶ್ಯಗಳು ಸಾಮಾನ್ಯವಾಗಿವೆ. ಸ್ತ್ರೀಶಕ್ತಿ ಸಂಘ ಮತ್ತು ಇತರ ಮಹಿಳಾ ಸಂಘಟನೆಗಳ ಕಾರ್ಯಕರ್ತರು ರಾಜಕೀಯ ಪಕ್ಷಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಎಲ್ಲ ವಾರ್ಡ್‌ಗಳ ರಸ್ತೆಗಳೂ ಅಭಿವೃದ್ಧಿ ಆಗಲಿ:  ಕೃಷ್ಣ
‘ಇನ್ವೆಸ್ಟ್‌ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದ ಅಂಗವಾಗಿ ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.  ಸಮಾವೇಶ ನಡೆದ ಪರಿಸರದ ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ ಸಾಲದು. ನಗರದ ಎಲ್ಲ 198 ವಾರ್ಡ್‌ಗಳ ರಸ್ತೆಗಳನ್ನೂ ಇದೇ ರೀತಿ ಅಭಿವೃದ್ಧಿಪಡಿಸಬೇಕು’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಹೇಳಿದರು. ಗಂಗೇನಹಳ್ಳಿಯಲ್ಲಿ ಯಾದವ ಸಮುದಾಯ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಮೂಲಸೌಕರ್ಯ ಅಭಿವೃದ್ಧಿ ಸಚಿವ ರೋಷನ್‌ ಬೇಗ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್‌ ಭಾಗವಹಿಸಿದರು.

ಅಧಿಕಾರ ದುರ್ಬಳಕೆ: ಬಿಜೆಪಿ
‘ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಉಪ ಚುನಾವಣೆಯಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಪಡಿತರ ಅಂಗಡಿಗಳಲ್ಲೂ ಕಾಂಗ್ರೆಸ್ ಪರ ಪ್ರಚಾರ ನಡೆಯುತ್ತಿದೆ’ ಎಂದು  ಬಿಜೆಪಿ ಶಾಸಕ ಆರ್.ಅಶೋಕ್ ಆರೋಪಿಸಿದರು. 

ಪಕ್ಷದ ಅಭ್ಯರ್ಥಿ  ಪರ  ಗಂಗಾನಗರದಲ್ಲಿ ಮತಯಾಚಿಸಿದ ಅವರು, ‘ಕಾಂಗ್ರೆಸ್ ಒಡೆದ ಮನೆಯಾಗಿದೆ. ಬೈರತಿ ಸುರೇಶ್ ಹಾಗೂ ಎಚ್.ಎಂ.ರೇವಣ್ಣ ಕಚ್ಚಾಟದಲ್ಲಿ ತೊಡಗಿದ್ದಾರೆ.  ಜೆಡಿಎಸ್ ಆಂತರಿಕ ಕಲಹ ಭುಗಿಲೆದ್ದಿದೆ.  ಬಿಜೆಪಿ ಮಾತ್ರ ಒಗ್ಗಟ್ಟಾಗಿ ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸುತ್ತಿದೆ’ ಎಂದರು.

‘ಬಿಜೆಪಿ ಅಭ್ಯರ್ಥಿ 15 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೀತಿಸಂಹಿತೆ ಉಲ್ಲಂಘನೆ:   ಅಭ್ಯರ್ಥಿ ವೈ.ಎ. ನಾರಾಯಣ ಸ್ವಾಮಿ ಮಾತನಾಡಿ, ‘ಶಿಕ್ಷಕರ ಕ್ಷೇತ್ರವನ್ನು  ಪ್ರತಿನಿಧಿಸುತ್ತಿದ್ದರೂ ನಾನು ಯಾವುದೇ  ಶಾಲೆಗೆ ಭೇಟಿ ನೀಡಿ ಮತ ಯಾಚಿಸಿಲ್ಲ.  ಸಚಿವರೊಬ್ಬರು ಸಂಜಯನಗರದ ಶಾಲೆಯಲ್ಲಿ ಪ್ರಚಾರ ನಡೆಸಿದ್ದಾರೆ. ಗಂಗಾನಗರ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಧ್ವಜಗಳು ಹಾರಾಡುತ್ತಿವೆ. ಇಷ್ಟೆಲ್ಲಾ ನಡೆದರೂ ಚುನಾವಣಾ ವೀಕ್ಷಕರು  ಕೈಕಟ್ಟಿ ಕುಳಿತಿದ್ದಾರೆ’ ಎಂದು ಕಿಡಿಕಾರಿದರು.

ಭುವನೇಶ್ವರಿ ಬಡಾವಣೆಯಲ್ಲಿ ಕೇಂದ್ರ  ಕಾನೂನು ಸಚಿವ ಡಿ.ವಿ. ಸದಾನಂದಗೌಡ,  ಮುಖಂಡರಾದ ಕಟ್ಟಾ ಸುಬ್ರಮಣ್ಯನಾಯ್ಡು,  ಅಬ್ದುಲ್ ಅಜೀಂ,  ಚಿ.ನಾ.ರಾಮು, ಚಿತ್ರನಟ ಬುಲೆಟ್ ಪ್ರಕಾಶ್,  ಪಾಲಿಕೆ ಸದಸ್ಯೆ ಪ್ರಮೀಳಾ ಆನಂದ್ ಪಾದಯಾತ್ರೆ ಮೂಲಕ ಮತ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT