ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಓಲೈಕೆಗೆ ಅಭ್ಯರ್ಥಿಗಳ ಕಸರತ್ತು

Last Updated 8 ಫೆಬ್ರುವರಿ 2016, 10:23 IST
ಅಕ್ಷರ ಗಾತ್ರ

ಚಳ್ಳಕೆರೆ:  ಗಡಿಭಾಗದ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ, ಸಮುದಾಯ ಭವನ, ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಶಾಸಕ ಟಿ.ರಘುಮೂರ್ತಿ ಅವರು ಕೈಗೊಂಡಿರುವ ಹಿನ್ನೆಲೆಯಲ್ಲಿ ಮತದಾರರು ಕಾಂಗ್ರೆಸ್‌ ಬೆಂಬಲಿಸ ಲಿದ್ದಾರೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ ಸಣ್ಣೀರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಪಗಡಲಬಂಡೆ ಗ್ರಾಮದಲ್ಲಿ ಭಾನುವಾರ ಜಾಜೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಚಂದ್ರಿಕಾ ಶ್ರೀನಿವಾಸ್‌ ಮತ್ತು ಪಗಡಲಬಂಡೆ ತಾಲ್ಲೂಕು ಪಂಚಾಯ್ತಿ ಅಭ್ಯರ್ಥಿ ಉಮಾ ಜನಾರ್ದನ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.

ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ರಾಜ್ಯ ಸರ್ಕಾರ ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚಿನ ಅಧಿಕಾರ ನೀಡಿದೆ. ಇದರಿಂದ ಮೂಲ ಸೌಕರ್ಯಗಳ ಕ್ರಿಯಾ ಯೋಜನೆ ಯನ್ನು ಸ್ಥಳೀಯ ಜನಪ್ರತಿನಿಧಿ ಗಳು ರೂಪಿಸುವ ವ್ಯವಸ್ಥೆ ದಕ್ಕಿದಂತಾಗಿದೆ ಎಂದರು.

ಜಿಲ್ಲಾ ಪಂಚಾಯ್ತಿ ಅಭ್ಯರ್ಥಿ ಚಂದ್ರಿಕಾ ಶ್ರೀನಿವಾಸ್‌ ಮಾತನಾಡಿ, ‘ಹಳ್ಳಿಗಳಲ್ಲಿ ಜನ ಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತದೆ. ಕಾಂಗ್ರೆಸ್‌ ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದ್ದು, ಯಾರೋಬ್ಬರೂ ಹಸಿವಿನ ಸಮಸ್ಯೆ ಎದುರಿಸಬಾರದು ಎಂಬ ಉದ್ದೇಶ ದಿಂದ ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮತದಾರರು ಕಾಂಗ್ರೆಸ್‌ ಬೆಂಬಲಿಸಿ, ಮುಖ್ಯಮಂತ್ರಿಯ ಕೈ ಬಲಪಡಿಸಬೇಕು’ ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಬೊಮ್ಮಲಿಂಗಪ್ಪ, ಮುಖಂಡರಾದ ಕಲ್ಲೇಶಪ್ಪ, ಸಿದ್ದಣ್ಣ, ಬಾಲನಾಗಮ್ಮ, ಚೌಳೂರು ಪ್ರಕಾಶ, ಪಿ.ಕೆಂಗಪ್ಪ, ವೀರಭದ್ರಪ್ಪ, ಚನ್ನಕೇಶವ, ಮಲ್ಲೇಶ್‌ ಇದ್ದರು.

ದ್ವೇಷದ ರಾಜಕೀಯ ಮಾಡಿಲ್ಲ: ಸುಧಾಕರ್
ಹಿರಿಯೂರು: ಕಾಂಗ್ರೆಸ್ ಪಕ್ಷಕ್ಕೆ ನೂರ ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಕಾರಣ ಸಹಜವಾಗಿಯೇ ಚುನಾವಣೆ ಗಳಲ್ಲಿ ಟಿಕೆಟ್ ಗಾಗಿ ಹೆಚ್ಚಿನ ಪೈಪೋಟಿ ಇರುತ್ತದೆ.ಫೆ. 13 ರಂದು ನಡೆಯಲಿರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಟಿಕೆಟ್ ನೀಡುವಾಗ ಇದ್ದ ಅಸಮಾಧಾನವನ್ನು ಬಹುತೇಕ ಬಗೆ ಹರಿಸಲಾಗಿದೆ ಎಂದು ಶಾಸಕ ಡಿ. ಸುಧಾಕರ್ ಸ್ಪಷ್ಟಪಡಿಸಿದರು.

ತಾಲ್ಲೂಕಿನ ಮಸ್ಕಲ್ ಹಾಗೂ ಐಮಂಗಲ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಭಾನುವಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸುವಂತೆ ಪ್ರಚಾರ ನಡೆಸುತ್ತಿದ್ದ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ಚಳ್ಳಕೆರೆಯಲ್ಲಿ ಒಮ್ಮೆ, ಹಿರಿಯೂರಿನಲ್ಲಿ ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಎಂದಿಗೂ ದ್ವೇಷದ ರಾಜಕೀಯ ಮಾಡಿಲ್ಲ ಎಂದು ಅವರು ಹೇಳಿದರು.

ಕಲ್ಲಹಟ್ಟಿ ತಿಪ್ಪೇಸ್ವಾಮಿ, ಖಾದಿ ರಮೇಶ್, ಬಿ.ವಿ. ಮಾಧವ, ಎ.ಎಂ. ಅಮೃತೇಶ್ವರಸ್ವಾಮಿ, ಎಂ.ಡಿ. ರವಿ, ಅಫೀಜ್, ಅಭ್ಯರ್ಥಿಗಳಾದ ಶಶಿಕಲಾ ಸುರೇಶ್ ಬಾಬು, ಎಚ್. ಚಂದ್ರಪ್ಪ, ಕಲಟ್ಟಿ ಹರೀಶ್, ವಿಜಯಲಕ್ಷ್ಮಿ, ಬಿ.ಎನ್. ಪ್ರಕಾಶ್ ಇತರರು ಶಾಸಕರ ಜತೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಕಾಂಗ್ರೆಸ್‌ನಿಂದ ಸುಳ್ಳು ಭರವಸೆ:ಆರೋಪ
ಮೊಳಕಾಲ್ಮುರು: ಅಧಿಕಾರಕ್ಕೆ ಬಂದ ದಿನದಿಂದಲೂ ಬರೀ ಪೊಳ್ಳು ಭರವಸೆಗಳನ್ನು ನೀಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಗಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಎಸ್. ತಿಪ್ಪೇಸ್ವಾಮಿ ದೂರಿದರು.

ತಾಲ್ಲೂಕಿನ ಬಿ.ಜಿ.ಕೆರೆ ಜಿಲ್ಲಾ ಪಂಚಾಯ್ತಿ ಕ್ಷೇತ್ರ ವ್ಯಾಪ್ತಿ ವಿವಿದೆಡೆ ಭಾನುವಾರ ಜಿ.ಪಂ., ತಾ.ಪಂ. ಚುನಾವಣೆಯ ಬಿಜೆಪಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದರು.

ಅನ್ನಭಾಗ್ಯ, ಬಿಸಿಯೂಟ, ಉದ್ಯೋಗಖಾತ್ರಿ, ಸಾಮಾಜಿಕ ಪಿಂಚಣಿ ಸೇರಿದಂತೆ ಹಲವು ಯೋಜನೆಗಳಿಗೆ ಕೇಂದ್ರಸರ್ಕಾರ ಅನುದಾನ ನೀಡುತ್ತಿದೆ. ಆದರೆ ಇಲ್ಲಿ ರಾಜ್ಯಸರ್ಕಾರ ನಮ್ಮ ಯೋಜನೆಗಳು ಎಂದು ತಪ್ಪಾಗಿ ಬಿಂಬಿಸುತ್ತಿವೆ. ಭದ್ರಾಮೇಲ್ದಂಡೆ ಯೋಜನೆಯನ್ನು ತನ್ನ ಅಧಿಕಾರ ಅವಧಿಯಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿರುವ ಕಾಂಗ್ರೆಸ್‌ 3 ವರ್ಷ ಕಳೆದರೂ ಕಿಂಚತ್ತೂ ಅನುಷ್ಠಾನ ಮಾಡದೇ ದ್ರೋಹವೆಸಗಿದೆ ಎಂದು ಆರೋಪಿಸಿದರು.

ಬಿ.ಜಿ.ಕೆರೆ, ಮೊಗಲಹಳ್ಳಿ, ಕೊಂಡ್ಲಹಳ್ಳಿ, ಕೋನಸಾಗರ, ನೇರ್ಲಹಳ್ಳಿ ಮುಂತಾದ ಕಡೆ ಅವರು ಸಭೆ ನಡೆಸಿ ಮುಖ್ಯಬೀದಿಗಳಲ್ಲಿ ರೋಡ್‌ ಶೋ ನಡೆಸಿದರು.
ಬಿ.ಜಿ.ಕೆರೆ ಜಿಲ್ಲಾ ಪಂಚಾಯ್ತಿ  ಅಭ್ಯರ್ಥಿ ಕೆ.ಬಿ. ಮಹೇಶ್‌, ಬಿ.ಜಿ.ಕೆರೆ ತಾಲ್ಲೂಕು ಪಂಚಾಯ್ತಿ ಅಭ್ಯರ್ಥಿ ಬೊಮ್ಮಕ್ಕ, ಕೊಂಡ್ಲಹಳ್ಳಿ ತಾ.ಪಂ. ಅಭ್ಯರ್ಥಿ ರೇವಣ್ಣ ತಾಳಿಕೇರಪ್ಪ, ಕೋನಸಾಗರ ಅಭ್ಯರ್ಥಿ ತಿಪ್ಪೇಸ್ವಾಮಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

‘ಬಿಜೆಪಿಗೆ ಗೆಲುವು ಖಚಿತ’
ಹೊಸದುರ್ಗ: ತಾಲ್ಲೂಕಿನ ಬೆಲಗೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಖಚಿತ ಎಂದು ಚುನಾವಣಾ ಅಭ್ಯರ್ಥಿ ಸರೋಜಾರಂಗಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬೆಲಗೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ತಂಡಗ, ಹೊಸಕೆರೆ, ಗರಗ, ತೊಣಚೇನಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಭಾನುವಾರ ಅವರು ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದರು.

ಬಿಜೆಪಿ ಮುಖಂಡ ನಿವೃತ್ತ ಡಿಡಿಪಿಐ ರಂಗಪ್ಪ ಮಾತನಾಡಿ, ‘ಕಾಂಗ್ರೆಸ್‌ನ ದಬ್ಬಾಳಿಕೆಯ ಆಡಳಿತದ ವಿರುದ್ಧ ಜನರು ರೋಸಿಹೋಗಿದ್ದಾರೆ. ಅಭಿವೃದ್ಧಿ ಕೆಲಸಗಳು ಮರೀಚಿಕೆಯಾಗಿವೆ. ಮತದಾರರು ಕಾಂಗ್ರೆಸ್‌ ಮುಖಂಡರಿಗೆ ಪಾಠ ಕಲಿಸಲು ಸನ್ನದರಾಗಿದ್ದು, ಬೆಲಗೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್ಚಿನ ಬಹುಮತದಿಂದ ಗೆಲ್ಲಲಿದ್ದಾರೆ’ ಎಂದು ಭವಿಷ್ಯ ನುಡಿದರು.

‘ನಾನು ಚಿತ್ರದುರ್ಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕನಾಗಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಬೆಲಗೂರು ಕ್ಷೇತ್ರದ ಎಲ್ಲಾ ಸಮುದಾಯದವರ ಜತೆಗೆ ನಿಕಟ ಸಂಪರ್ಕವಿದೆ. ನನ್ನ ಸೇವಾ ಅವಧಿಯಲ್ಲಿ ಸಾಕಷ್ಟು ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂಧಿಸಿರುವುದರಿಂದ ಸರೋಜಾ ಅವರ ಗೆಲುವಿಗೆ ಸಹಕರಿಸುವುದಾಗಿ ಮತದಾರರು ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ಬಿಜೆಪಿ ಅಧ್ಯಕ್ಷ ಹನುಮಂತಪ್ಪ, ಮುಖಂಡರಾದ ಲಿಂಗಮೂರ್ತಿ, ಗುರುಸ್ವಾಮಿ,ಲಕ್ಷ್ಮಣ್‌, ಹನುಮಂತಪ್ಪ, ಚಂದ್ರಪ್ಪ, ಸುರೇಂದ್ರ ಭಾಗವಹಿಸಿದ್ದರು.

‘ಸ್ಥಳೀಯರಿಗೆ ಮತನೀಡಿ’
ನಾಯಕನಹಟ್ಟಿ:  ಹಿರೇಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಬಾರಿ ಕೈಗೊಂಡ ಪ್ರಗತಿಪರ ಕಾರ್ಯಗಳನ್ನು ಗಮನಿಸಿ ಹಾಗೂ ಸ್ಥಳೀಯ ಅಭ್ಯರ್ಥಿಯಾದ ನನಗೆ ಮತನೀಡಿದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲು ಶ್ರಮಿಸುತ್ತೇನೆ ಎಂದು ಹಿರೇಹಳ್ಳಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಒ.ಮಂಜುನಾಥ ಹೇಳಿದರು.

ಸಮೀಪದ ಗೌರಸಮುದ್ರ, ಪಾಲ ನಾಯಕನಕೋಟೆ, ಬಂಡೆತಿಮ್ಮಲಾಪುರ ಗ್ರಾಮಗಳಲ್ಲಿ ಗುರುವಾರ ಜಿಲ್ಲಾ ಪಂಚಾಯ್ತಿ ಚುನಾವಣೆ ಪ್ರಯುಕ್ತ ಮತ ಪ್ರಚಾರಕ್ಕಾಗಿ ರೋಡ್‌ಶೋ ನಡೆಸಿ ಅವರು ಮಾತನಾಡಿದರು.

ಕಳೆದ ಬಾರಿ ಇದೇ ಕ್ಷೇತ್ರದಿಂದ ಸದಸ್ಯನಾಗಿ ಆಯ್ಕೆಗೊಂಡು ಸಾಕಷ್ಟು ಕೆಲಸ ಮಾಡಿದ್ದೇನೆ. ಹಿರೇಹಳ್ಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಹಿರೇಹಳ್ಳಿ ಸೇರಿದಂತೆ ಗೌರಸಮುದ್ರ, ತಿಮ್ಮಪ್ಪಯ್ಯನಹಳ್ಳಿ, ಮಲ್ಲೂರಹಳ್ಳಿ, ಗ್ರಾಮಪಂಚಾಯ್ತಿಗಳಲ್ಲಿ ಅಗತ್ಯಕ್ಕೂ ಹೆಚ್ಚು ಅನುದಾನವನ್ನು ಮಂಜೂರು ಮಾಡಿಸಿದ್ದೇನೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿತ್ತು, ಇದನ್ನು ಪರಿಹರಿಸಲು ಹಲವು ಯೋಜನೆ ಕೈಗೊಂಡಿದ್ದೇನೆ. ಅದರಲ್ಲಿ ಕೆಲವು ಬಾಕಿ ಇವೆ. ಅವನ್ನು ಪೂರೈಸಲು ಮತ ನೀಡಿ ಮತ್ತೆ ಆಯ್ಕೆ ಮಾಡಿ ಎಂದರು.

ಪಕ್ಷೇತರ ಅಭ್ಯರ್ಥಿ ಸಣ್ಣಬೋಮ್ಮಣ್ಣ, ಸುನಂದಮ್ಮ, ಮುಖಂಡರಾದ ಕೆಟಿ.ಪ್ರವೀಣ್‌ ಕುಮಾರ್, ಜ್ಞಾನೇಶ್, ಮಹೇಶ್, ಕಟ್ಟೆಗಳ ಪಾಲಯ್ಯ, ತಿಮ್ಮಾರೆಡ್ಡಿ, ಜಯಣ್ಣ, ತುಂಬುಲಯ್ಯ, ಮಾರಣ್ಣ, ನಾಗರಾಜ   ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT