ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೂ ಬಾಳಪ್ಪ!

Last Updated 26 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ನಿರಂತರ ನಾಟಕ ಪ್ರಯೋಗಗಳಿಂದಲೇ ಕನ್ನಡ  ರಂಗಭೂಮಿಯನ್ನು ಶ್ರಿಮಂತಗೊಳಿಸಿ ವೈಭವದಿಂದ ಒಂದು ಕಾಲದಲ್ಲಿ ಮೆರೆದ ವೃತ್ತಿರಂಗಭೂಮಿಗೆ ಈಗ 135ರ ಪ್ರಾಯ. ನೂರರ ಪ್ರಾಯದ ಏಣಗಿ ಬಾಳಪ್ಪ ಈ 135 ವರ್ಷಗಳಲ್ಲಿ 85ಕ್ಕೂ ಅಧಿಕ ವರ್ಷ- ಅಂದರೆ ಹೆಚ್ಚುಕಡಿಮೆ ಮುಕ್ಕಾಲು ಪಾಲು ವೃತ್ತಿರಂಗಭೂಮಿಯ ಅವಿಭಾಜ್ಯ ಅಂಗವಾಗಿ ಬಾಳಿ, ತಮ್ಮ ಹೆಸರಿಗೆ ಅನ್ವರ್ಥಕವಾಗಿ ‘ಬಾಳಪ್ಪ’ನೇ ಆಗಿದ್ದಾರೆ.

ಬಾಲನಟರಾಗಿ ರಂಗ ಪ್ರವೇಶಿಸಿ, ಗಾಯಕ ನಟರಾಗಿ ಬೆಳೆದು, ಮೊದಲು ಪಾಲುದಾರಿಕೆಯಲ್ಲಿ, ನಂತರ ಸ್ವತಂತ್ರವಾಗಿ ನಾಟಕ ಕಂಪನಿ ಕಟ್ಟಿ ಎಪ್ಪತ್ತು ವರ್ಷಗಳ ಕಾಲ ಅದರ ಅವಿಚ್ಛಿನ್ನ ಭಾಗವಾಗಿದ್ದ ಬಾಳಪ್ಪ, ತಮ್ಮ ಕಲಾವೈಭವ ನಾಟ್ಯಸಂಘವನ್ನು 1983ರಲ್ಲಿ ಸ್ಥಗಿತಗೊಳಿಸಿದರಾದರೂ; ನಂತರವೂ ಉಪನ್ಯಾಸ, ಪ್ರಾತ್ಯಕ್ಷಿಕೆ, ರಂಗಗಾಯನ, ನಿರ್ದೇಶನದ ಮೂಲಕ ಹತ್ತಿರತ್ತಿರ ಒಂದು ಶತಮಾನ ವೃತ್ತಿರಂಗಭೂಮಿಗಾಗಿಯೇ ‘ಬಾಳಿ’ದರು. ಬಾಳಪ್ಪನವರ ಹಾಡು, ಅಭಿನಯ, ನಿರ್ದೇಶನ, ಸಂಘಟನಾ ಸಾಮರ್ಥ್ಯ ಒಂದು ತೂಕವಾದರೆ, ಅವರ ಸ್ಮರಣಾಶಕ್ತಿಯದೇ ಮತ್ತೊಂದು ತೂಕ.

ಉತ್ತರ ಕರ್ನಾಟಕದ ಒಂದು ಶತಮಾನದ ರಂಗಚಟುವಟಿಕೆಗಳನ್ನು ತಮ್ಮ ಅಗಾಧ ನೆನಪಿನ ಶಕ್ತಿಯಿಂದ ಸ್ವಾರಸ್ಯಕರವಾಗಿ ಬಣ್ಣಿಸುತ್ತಾರೆ. ಹಾಗಾಗಿ ಅವರನ್ನು ‘ನಡೆದಾಡುವ ವೃತ್ತಿರಂಗಭೂಮಿ’ ಎಂದೇ ಬಣ್ಣಿಸಲಾಗುತ್ತದೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕು ಏಣಗಿ ಗ್ರಾಮದ ಕೃಷಿಕ ಕುಟುಂಬದ ಕರಿಬಸಪ್ಪ ಲೋಕೂರ ಹಾಗೂ ಬಾಳಮ್ಮ ದಂಪತಿಗೆ 1914ರಲ್ಲಿ ಜನಿಸಿದ ಬಾಳಪ್ಪ ಬಾಲ್ಯದಿಂದಲೇ ಭಜನೆ, ಕೋಲಾಟ ಮುಂತಾದ ಜಾನಪದ ಕಲೆಗಳಲ್ಲಿ ಆಸಕ್ತಿ ತಾಳುತ್ತಾರೆ.

3ನೇ ತರಗತಿ ಓದುತ್ತಿದ್ದಾಗಲೇ ತಮ್ಮೂರಿನಲ್ಲಿ ಜರುಗಿದ ಅನಿವಾರ್ಯವಾದ ಒಂದು ಪ್ರಸಂಗದಲ್ಲಿ ‘ಭಕ್ತ ಮಾರ್ಕಂಡೇಯ’ ನಾಟಕದ ಗಣಪತಿ ಪಾತ್ರಕ್ಕೆ ಬಣ್ಣವನ್ನೂ ಹಚ್ಚಬೇಕಾಗಿ ಬಂದುಬಿಡುತ್ತದೆ. ಬಾಲಕನ ಪ್ರತಿಭೆ, ಚುರುಕುತನ ಗಮನಿಸಿದ ಊರ ಹಿರಿಯರು ನಾಟಕ ಕಂಪನಿಗೆ ಸೇರಿಕೊಳ್ಳುವಂತೆ ಸೂಚಿಸುತ್ತಾರೆ. ಹುಕ್ಕೇರಿ ಬಸವಪ್ರಭು ನಾಯಕರ ಮೌಲಾಲಿ ಪ್ರಾಸಾದಿತ ನಾಟಕ ಮಂಡಳಿ ಸಮೀಪದ ಬೈಲಹೊಂಗಲದಲ್ಲಿ ಕ್ಯಾಂಪ್ ಮಾಡಿರುತ್ತದೆ. ಬಾಳಪ್ಪ ನಟನಾಗಿ ಆ ಕಂಪನಿ ಸೇರಿಕೊಳ್ಳುತ್ತಾರೆ. ‘ಪಾದುಕಾ ಪಟ್ಟಾಭಿಷೇಕ’ ನಾಟಕದಲ್ಲಿ ಭರತನ ಪಾತ್ರ ದೊರೆಯುತ್ತದೆ. ಕಲಿಯುವುದರಲ್ಲಿ ಅತೀವ ಶ್ರದ್ಧೆಯಿದ್ದ ಹದಿಹರೆಯದ ಯುವಕ ಬಾಳಪ್ಪ ನಾಟಕ ಕಂಪನಿಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆ.

ಬಾಳಪ್ಪಗೆ ಒಬ್ಬ ಅಣ್ಣ, ಒಬ್ಬ ಅಕ್ಕ. ಮೂರು ವರ್ಷ ಇದ್ದಾಗಲೇ ತಂದೆ ಕರಿಬಸಪ್ಪ ತೀರಿ ಹೋಗಿರುತ್ತಾರೆ. ಇದ್ದ ಅಲ್ಪಸ್ವಲ್ಪ ಆಸ್ತಿಯೆಂದರೆ ಊರ ಮುಂದಿನ ಹೊಲ. ಅದಕ್ಕೆ ಪ್ರತಿಕೂಲ ಪರಿಸ್ಥಿತಿಗಳೇ ಹೆಚ್ಚು. ಹಾಗಾಗಿ ತಾಯಿ ಬಾಳವ್ವ ಅವರಿವರ ಮನೆ ಕೆಲಸ ಮಾಡಿ ಮೂರು ಮಕ್ಕಳನ್ನೂ ಸಾಕುತ್ತಿರುತ್ತಾಳೆ. ಇತ್ತ ನಾಟಕ ಕಂಪನಿ ಸೇರಿದ್ದ ಹದಿಹರೆಯದ ಬಾಳಪ್ಪನಿಗೆ ತಾಯಿ ಊರಲ್ಲಿ ಎಷ್ಟು ಕಷ್ಟ ಪಡುತ್ತಿದ್ದಾಳೋ ಎಂಬ ಆತಂಕ. ವಾಪಸ್ ತಾಯಿ ಬಳಿಗೆ ಊರಿಗೆ ಹೋಗುವ ಸೆಳೆತ ಹೆಚ್ಚಾಗುತ್ತದೆ.

ಆದರೆ ನಾಟಕ ಮಂಡಳಿಯಲ್ಲಿದ್ದ ಹೆಸರಾಂತ ನಟಿ ಮರ್ದಾನ್ ಜಾನ್, ಬಾಳಪ್ಪ ಊರಿಗೆ ವಾಪಸ್ಸು ಹೋಗದಂತೆ ತಡೆಯುತ್ತಾಳೆ. ಎಳೆಯ ಬಾಳಪ್ಪ ಕಂಪನಿಯಲ್ಲೇ ಉಳಿಯುತ್ತಾರೆ. ಅವರೊಳಗಿದ್ದ ಅಪ್ರತಿಮ ಕಲಾವಿದ ಪ್ರಕಾಶಗೊಳ್ಳಲು ಅಲ್ಲಿಂದ ಮುಂದೆ ಮುಕ್ತ ಅವಕಾಶ ದೊರೆಯುತ್ತದೆ. ಹೀಗೆ ಆರಂಭವಾದ ಕಲಾಯಾತ್ರೆ ಹಿಂತಿರುಗಿ ನೋಡಿದ್ದೇ ಇಲ್ಲ.

ನಾಟಕಕಾರ ಶಿವಲಿಂಗ ಸ್ವಾಮಿಗಳು ‘ಕಿತ್ತೂರು ಚೆನ್ನಮ್ಮ’ ನಾಟಕ ಬರೆದು ಅಬ್ಬಿಗೇರಿಯಲ್ಲಿ ಅದರ ಯಶಸ್ವಿ ಪ್ರದರ್ಶನ ಮಾಡುತ್ತಾರೆ. ಚೆನ್ನಮ್ಮ ನಾಟಕ ರಾಷ್ಟ್ರೀಯ ಸ್ವಾತಂತ್ಯ್ರ ಹೋರಾಟದ ಮಹತ್ವವನ್ನು ಕಲಾತ್ಮಕವಾಗಿ ಕಟ್ಟಿಕೊಡುತ್ತದೆ. ಸ್ವಾಮಿಗಳ ಸಂಪರ್ಕಕ್ಕೆ ಬಾಳಪ್ಪ ಬರುತ್ತಾರೆ. ಬಾಳಪ್ಪನವರಿಗೆ ನಾಟಕ ಎಂದರೆ ಬರೀ ಮನರಂಜನೆಯಲ್ಲ, ಅದಕ್ಕೆ ಸಾಮಾಜಿಕ ಬದ್ಧತೆ ಇದೆ ಎಂಬುದು ಆ ಹದಿಹರೆಯದಲ್ಲೇ ಸ್ವಾಮಿಗಳ ಸಾಂಗತ್ಯದಲ್ಲಿ ಮನದಟ್ಟಾಗುತ್ತದೆ. 

1930ರ ದಶಕದಲ್ಲಿ ಅಸ್ತಿತ್ವದಲ್ಲಿದ್ದ ನಾಟಕ ಕಂಪೆನಿಗಳ ಪೈಕಿ ಗದಗದ ಯರಾಶಿ ಭರಮಪ್ಪ ಅವರ ವಾಣಿವಿಲಾಸ ಸಂಗೀತ ನಾಟಕ ಮಂಡಳಿ ತನ್ನ ಅದ್ದೂರಿತನಕ್ಕೆ ಹಾಗೂ ಪ್ರಯೋಗಶೀಲತೆಗೆ ಹೆಸರಾಗಿತ್ತು. ಭರಮಪ್ಪ ದೇಶದ ಮಹಾನ್ ಸಂಗೀತಗಾರರು, ಪೇಂಟಿಂಗ್ ಕಲಾವಿದರು, ನಟ ನಟಿಯರನ್ನ ತಮ್ಮ ಕಂಪೆನಿಯಲ್ಲಿ ಕಲೆ ಹಾಕಿರುತ್ತಾರೆ. ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ಮನ್ಸೂರ, ಹಂದಿಗನೂರು ಸಿದ್ಧರಾಮಪ್ಪ, ಅಮೀರ್‌ಜಾನ್ ಕರ್ನಾಟಕಿ, ಗೋಹರ್‌ಜಾನ್ ಕರ್ನಾಟಕಿ ಇಂತಹ ದಿಗ್ಗಜಗಳು ಆ ಕಾಲಕ್ಕೆ ವಾಣಿವಿಲಾಸ ಸಂಗೀತ ನಾಟಕ ಮಂಡಳಿ ಸದಸ್ಯರು.

ಸಂಗೀತ ನಾಟಕದ ಅವಿಭಾಜ್ಯ ಅಂಗವಾಗಿದ್ದ ಕಾಲ ಅದು. ಹಾಗಾಗಿ ಸಂಗೀತಗಾರರಿಗಂತೂ ಅಗ್ರಮನ್ನಣೆಯೇ ಇತ್ತು. ಹಾಡು ಬಲ್ಲವರ ಮೊದಲ ಆಡುಂಬೊಲ ನಾಟಕ ಕಂಪನಿಯೇ ಆಗಿರುತ್ತಿತ್ತು.  ನಟನನ್ನು ಆಯ್ಕೆ ಮಾಡುವಾಗ ಅವನ ಹಾಡುಗಾರಿಕೆಯ ಪರೀಕ್ಷೆಯೂ ನಡೆಯುತ್ತಿತ್ತು. ಈ ನಾಟಕ ಮಂಡಳಿ ಸೇರಿದ ಯುವಕ ಬಾಳಪ್ಪ ರಂಗಸಂಗೀತದ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಎಳಮೆಯಿಂದಲೇ ಅವರದು ಮಧುರ ಕಂಠ ಬೇರೆ. ‘ಸಂಗೀತದಲ್ಲಿ ನನ್ನದು ಏಕಲವ್ಯ ಸಾಧನೆ. ಶ್ರೇಷ್ಠ ಸಂಗೀತಗಾರರ ಹಾಡುಗಳನ್ನು ಕೇಳುತ್ತಲೇ ನಾನು ಕಲಿಯುತ್ತ ಹೋದೆ’ ಎಂದು ಹಲವಾರು ಬಾರಿ ಅವರು ಹೇಳಿದ್ದಾರೆ.

ಬಾಳಪ್ಪ ಮತ್ತೆ ಶಿವಲಿಂಗ ಸ್ವಾಮಿಗಳ ನಾಟಕ ಕಂಪನಿ ಸೇರಿ ಬಿ.ಎ., ಸ್ತ್ರೀ, ಚಲ್ತಿ ದುನಿಯಾ ದಂತಹ ಸಮಕಾಲೀನ ಸಂವೇದನೆಯ ನಾಟಕಗಳಲ್ಲಿ ಅಭಿನಯಿಸುತ್ತಾರೆ. ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಸಂದೇಶ ಹೊತ್ತ ‘ಅಸ್ಪಶ್ಯತಾ ನಿವಾರಣೆ’ ನಾಟಕದಲ್ಲಿ ನಟಿಸುತ್ತಾರೆ. ಆ ಹೊತ್ತಿಗೆ ವೈವಿಧ್ಯಮಯವಾದ ಪಾತ್ರಗಳ ನಟನೆಯ ಪರಿಚಯ ಬಾಳಪ್ಪನವರಿಗಾಗುತ್ತದೆ. ಸಂಗೀತದಲ್ಲೂ ತಕ್ಕಮಟ್ಟಿನ ಸಾಧನೆ ಮಾಡಿದ್ದ ಬಾಳಪ್ಪ ಪರಿಪೂರ್ಣ ನಟನ ಹಂತ ತಲುಪುತ್ತಾರೆ.

ಸ್ಪರ್ಧೆಯಿಂದ ನಾಟಕ ಕಂಪನಿಗಳು ಹುಟ್ಟಿಕೊಳ್ಳುತ್ತಿದ್ದ ಕಾಲ ಅದು. ನಟನೆಯ ಹಿಡಿತ ಸಿಕ್ಕಿತೆಂದರೆ ಸ್ವಂತ ನಾಟಕ ಕಂಪನಿ ಮಾಡುವ ಹುಚ್ಚು ಹಿಡಿದುಬಿಡುತ್ತದೆ. ತಕ್ಕಮಟ್ಟಿನ ಅನುಭವದೊಂದಿಗೆ ಬಾಳಪ್ಪ, ಸೂಡಿ ಹುಚ್ಚಪ್ಪನವರ ಪಾಲುದಾರಿಕೆಯೊಂದಿಗೆ ಸ್ವಂತ ನಾಟಕ ಕಂಪನಿ ಆರಂಭಿಸಿ ‘ಹೇಮರೆಡ್ಡಿ ಮಲ್ಲಮ್ಮ’ ನಾಟಕ ಪ್ರದರ್ಶನಕ್ಕೆ ನಾಂದಿ ಹಾಡುತ್ತಾರೆ. ಅದರಲ್ಲಿ ಬಾಳಪ್ಪನವರದು ಮಲ್ಲಮ್ಮನದೇ ಪಾತ್ರ.

ಬಾಳಪ್ಪನವರು ಆರಂಭದ ದಿನಗಳಲ್ಲಿ ಮಹಿಳೆ ಪಾತ್ರಗಳಲ್ಲಿ ಅಭಿನಯಿಸಿದ್ದೇ ಹೆಚ್ಚು. ಬಹಳ ದೊಡ್ಡ ನಟರು ಮಹಿಳಾ ಪಾತ್ರಗಳ ತಮ್ಮ ಅಸಾಧಾರಣ ಅಭಿನಯಕ್ಕೆ ದಂತಕಥೆಯೇ ಆಗಿದ್ದಾರೆ. ಆ ಪಟ್ಟಿಯಲ್ಲಿ ಕಾಣುವ ಮತ್ತೊಂದು ದೊಡ್ಡ ಹೆಸರು ಬಾಳಪ್ಪನವರದು. ತೆಳ್ಳಗೆ ಬೆಳ್ಳಗೆ ಅತಿ ಎತ್ತರವೂ- ಅತಿ ಕುಳ್ಳನೂ ಅಲ್ಲದ ಅವರ ದೇಹದ ಭಾಷೆ ಯಾವುದೇ ಪಾತ್ರಕ್ಕೆ ಒಪ್ಪುವಂತಿತ್ತು. ಶಾರೀರವೂ ಆ ಹೊತ್ತಿಗೆ ಪಳಗಿತ್ತು. ಶರೀರ ಹಾಗೂ ಶಾರೀರದ ಸಮತೋಲನ ಹೊಂದಿದ್ದ 30ರ ಹರೆಯದ ಯುವಕ ಬಾಳಪ್ಪ ಒಮ್ಮೆ ಮಹಾರಾಷ್ಟ್ರದ ಸಾಂಗಲಿಯಲ್ಲಿ ನಾಟಕ ಕಂಪನಿ ಕ್ಯಾಂಪ್ ಮಾಡಿದಾಗ ‘ವೀರರಾಣಿ ರುದ್ರಮ್ಮ’ ನಾಟಕದ ಪ್ರದರ್ಶನ ನಡೆಯುತ್ತಿತ್ತು.

ರುದ್ರಮ್ಮನ ಪಾತ್ರದಲ್ಲಿ ಬಾಳಪ್ಪನವರೇ ಅಭಿನಯಿಸಿದ್ದರು. ಮಹಿಳೆಯ ಹಾವಭಾವಕ್ಕೆ ಒಪ್ಪುವಂತಹ ಹಾಡುಗಾರಿಕೆ ಬೇರೆ. ಹಾಗಾಗಿ ಬಾಳಪ್ಪನವರು ದೇಶದ ಹೆಸರಾಂತ ಸಂಗೀತಗಾರ ದೀನಾನಾಥರ ಪದ್ಧತಿಯಲ್ಲಿ ರಂಗಗೀತೆ ಹಾಡಲಿದ್ದಾರೆ ಎಂದು ಮರಾಠಿ ಭಾಷೆಯಲ್ಲಿ ಪ್ರಚಾರ ಪಡಿಸಲಾಗುತ್ತದೆ. ಈ ವಿಷಯ ತಿಳಿದ ದಿೀನಾನಾಥರು ತಮ್ಮ ಮಕ್ಕಳಾದ ಆಶಾ ಭೋಸಲೆ, ಲತಾ ಮಂಗೇಶ್ಕರ್ ಅವರೊಂದಿಗೆ ನಾಟಕ ನೋಡಲು ಬಂದು ಬಾಳಪ್ಪನವರ ಹಾಡುಗಾರಿಕೆಯನ್ನು ಮುಕ್ತ ಕಂಠದಿಂದ ಮೆಚ್ಚಿ ಕೊಂಡಾಡುತ್ತಾರೆ. ಸುದೀರ್ಘವಾದ  ಬಾಳ(ಪ್ಪ) ದಾರಿಯಲ್ಲಿ ಇಂತಹ ಹತ್ತಾರು ಮೈಲಿಗಲ್ಲುಗಳು ಇವೆ. ಇದೂ ಅದರಲ್ಲಿ ಪ್ರಮುಖವಾದುದೇ.

ಅಭಿನಯವೇ ಪ್ರಧಾನವಾದ, ಭಾವುಕತೆಯೇ ಪ್ರಧಾನವಾದ ನಟ ಅಥವಾ ನಟಿ ಕಂ- ಮಾಲೀಕರಲ್ಲಿ ಅವ್ಯವಹಾರಿಕತೆಯಿಂದ ನಾಟಕ ಕಂಪನಿ ಮಧ್ಯೆ ನಿಂತುಹೋಗುವುದು ಮತ್ತೆ ಪುನರಾರಂಭವಾಗುವುದು ತೀರಾ ಸಹಜ. ಸೂಡಿ ಹುಚ್ಚಪ್ಪ ಅವರೊಂದಿಗೆ ವ್ಯವಹಾರ ಕುದುರಿಬಿದ್ದಾಗ 1940ರಲ್ಲಿ ನಾಲ್ವರು ಭಾಗಸ್ತರು ಸೇರಿ ವೈಭವಶಾಲಿ ನಾಟ್ಯ ಸಂಘ ಸ್ಥಾಪಿಸುತ್ತಾರೆ. ಕೆಲವು ತಿಂಗಳುಗಳ ನಂತರ ಅವರಲ್ಲೂ ಒಡಕು ಬಂದು ಇನಾಮದಾರರು ಮಾತ್ರ ಬಾಳಪ್ಪನವರ ಜತೆ ಉಳಿಯುತ್ತಾರೆ. ಈ ಮಧ್ಯೆ ಜಂಟಿ ಪಾಲುದಾರಿಕೆಯ ನಾಟಕ ಕಂಪನಿ ಹಲವು ಯಶಸ್ವಿ ನಾಟಕಗಳನ್ನು ನಿರಂತರ ಪ್ರದರ್ಶಿಸುತ್ತಲೇ ಇರುತ್ತದೆ.

ವೈಭವಶಾಲಿ ನಾಟ್ಯಸಂಘದ ತನ್ನ ಹೆಸರನ್ನು ಸಾರ್ಥಕಗೊಳಿಸುವಂತೆ ನಿರಂತರ ಪ್ರಯೋಗಗಳನ್ನು ನೀಡುತ್ತಲೇ ಇದ್ದಾಗ ಸ್ವಾತಂತ್ರ್ಯ ಚಳವಳಿ ತೀವ್ರವಾಗುತ್ತದೆ. ‘ಕಿತ್ತೂರು ಚೆನ್ನಮ್ಮ’, ‘ಸಂಗೊಳ್ಳಿ ರಾಯಣ್ಣ’, ‘ಸಿಂಧೂರ ಲಕ್ಷ್ಮಣ’, ‘ನರಗುಂದ ಬಂಡಾಯ’, ‘ಅಸ್ಪಶ್ಯತಾ ನಿವಾರಣೆ’ಯಂತಹ ಸ್ವಾತಂತ್ರ್ಯ ಸಂದೇಶವನ್ನು ನೇರವಾಗಿ ಬಿತ್ತುವ ನಾಟಕಗಳ ಪ್ರದರ್ಶನ. ಮತ್ತೊಂದೆಡೆ ಸ್ವಾತಂತ್ರ್ಯ ಹೋರಾಟಗಾರರ ರಕ್ಷಣೆ. ಅದರ ಮುಂದುವರಿದ ಭಾಗವಾಗಿ ಕರ್ನಾಟಕ ಏಕೀಕರಣಕ್ಕೆ ಸ್ಪಂದಿಸಿದ್ದು- ಅದೆಲ್ಲ ಪ್ರತ್ಯೇಕ ಅಧ್ಯಯನದ ವಸ್ತು.

ಪ್ರಖ್ಯಾತ ಗಮಕಿ ಹಾಗೂ ಹಿರಿಯ ಸಾಹಿತಿ ಜೋಳದರಾಶಿ ದೊಡ್ಡನಗೌಡರಿಂದ ಬಸವೇಶ್ವರನ ಕುರಿತು ಬಾಳಪ್ಪ ನಾಟಕ ಬರೆಸುತ್ತಾರೆ. ಪ್ರದರ್ಶನದಲ್ಲಿ ಚಿಕ್ಕದೊಂದು ಕೊರತೆ ಇದೆ ಎನಿಸಿದಾಗ ಪ.ಗು. ಹಳಕಟ್ಟಿ, ಡಂಬಳ ಶಾಂತಪ್ಪ ಹಾಗೂ ಬಾಳಪ್ಪ ಒಟ್ಟಿಗೆ ಚರ್ಚಿಸಿ ಅನುಭವ ಮಂಟಪದ ದೃಶ್ಯಗಳನ್ನು ಸೇರಿಸಿಕೊಳ್ಳುತ್ತಾರೆ. ವಚನಕಾರರ ಸಂದೇಶವನ್ನು ಸಮರ್ಥವಾಗಿ ಸಾರುವಂತಹ ‘ಗಜ್ಯೋತಿ ಬಸವೇಶ್ವರ’ ಸಿದ್ದಗೊಳ್ಳುತ್ತದೆ. ಇಲ್ಲಿಂದ ಮುಂದಿನದು ಬಾಳಪ್ಪನವರ ರಂಗಜೀವನದಲ್ಲಿ ಮತ್ತೊಂದು ಪ್ರಮುಖ ಅಧ್ಯಾಯ.

ಹುಬ್ಬಳ್ಳಿಯಲ್ಲಿ ದಾಖಲೆಯ 200ಕ್ಕೂ ಮಿಕ್ಕಿದ ಪ್ರಯೋಗ ಕಂಡ ನಾಟಕ ನಾಡಿನ ಬಹುತೇಕ ಕಡೆ ಪ್ರವಾಸ ಮಾಡಿ ಹೊಸ ದಾಖಲೆ ಬರೆಯುತ್ತದೆ. ಬಾಳಪ್ಪನವರದು ಅದರಲ್ಲಿ ಬಸವಣ್ಣನ ಪಾತ್ರ. ಈ ಪಾತ್ರದ ಮನೋಜ್ಞ ಅಭಿನಯದಿಂದ ಅವರು ಮುಂದಿನ ದಿನಗಳಲ್ಲಿ ಅಭಿನವ ಬಸವಣ್ಣ, ಆಧುನಿಕ ಬಸವಣ್ಣ ಎಂದೆಲ್ಲ ಪ್ರತೀತಿಯಾಗುತ್ತಾರೆ. ಹಿರಿಯ ಸಾಹಿತಿ ರಾ.ಯ. ಧಾರವಾಡಕರ ಅವರು, ‘ಬಾಳಪ್ಪ ರಂಗಭೂಮಿಯಲ್ಲಿಯೂ, ಹೊರಗೂ ಬಸವಣ್ಣರಾಗಿದ್ದಾರೆ’ ಎಂದು ಮುಕ್ತಕಂಠದಿಂದ ಪ್ರಶಂಸಿಸುತ್ತಾರೆ. ಚಿತ್ರನಟ ಡಾ. ರಾಜಕುಮಾರ್ ಬಾಳಪ್ಪನವರ ಬಸವೇಶ್ವರ ನಾಟಕ ಪ್ರದರ್ಶನ ನೋಡಿ ಮಂತ್ರಮುಗ್ಧರಾಗುತ್ತಾರೆ. ಬಾಳಪ್ಪ ಎಲ್ಲೇ ಕಾಣಲಿ ಸಮಯ ಸಂದರ್ಭ ಏನೂ ಲೆಕ್ಕಿಸದೆ ಅವರ ಕಾಲಿಗೆ ಡಾ.ರಾಜ್ ಬೀಳುತ್ತಿದ್ದುದಕ್ಕೆ ಬಾಳಪ್ಪನವರ ಬಸವೇಶ್ವರ ನಾಟಕ ಪ್ರದರ್ಶನವೇ ಕಾರಣ.

ಬಸವಣ್ಣ ಬಾಳಪ್ಪನವರ ಅಂತರಂಗದಲ್ಲೂ ಪರಿವರ್ತನೆ ತರುತ್ತಾನೆ. ನಾಟಕದ ನಂತರ ಜೋಳಿಗೆ ಹಿಡಿದು ಹಣ ಸಂಗ್ರಹಿಸುತ್ತಾರೆ. ಅದನ್ನು ಸತ್ಕಾರ್ಯಗಳಿಗೆ ವಿನಿಯೋಗಿಸುತ್ತಾರೆ. ಕನ್ನಡ ಸಾರಸ್ವತ ಲೋಕಕ್ಕೆ ಪ್ರಥಮವಾಗಿ ವಚನಗಳನ್ನು ಸಂಗ್ರಹಿಸಿ ವಚನ ಪಿತಾಮಹ ಎಂದೇ ಹೆಸರಾದ ಪ.ಗು.ಹಳಕಟ್ಟಿ ಹಾಗೂ ಸರ್ವಜ್ಞನ ವಚನಗಳನ್ನು ಸಂಗ್ರಹಿಸಿಕೊಟ್ಟ ರೆವರೆಂಡ್ ಉತ್ತಂಗಿ ಚನ್ನಪ್ಪ ಅವರಿಗೆ ಆ ಕಾಲದಲ್ಲಿ ತಲಾ ಒಂದು ಸಾವಿರ ರೂ. (ಈ ಕಾಲಕ್ಕೆ ಅದು ಲಕ್ಷಗಟ್ಟಲೆ ಹಣ) ದೇಣಿಗೆ ಸಂಗ್ರಹಿಸಿದ ಹಣದಿಂದ ಕೊಡುತ್ತಾರೆ.

ನಾಡು ನುಡಿಗೆ ತೋರುವ ಬದ್ದತೆ ಮಾತ್ರವಲ್ಲ, 1947ರಿಂದ ತಮ್ಮದೇ ಕಲಾವೈಭವ ನಾಟ್ಯಸಂಘ ಸ್ಥಾಪಿಸಿದ ಮೇಲೆ ರಂಗದ ಮೇಲೂ ಬಾಳಪ್ಪ ಅಪಾರ ಸುಧಾರಣೆಗಳನ್ನು ಜಾರಿಗೆ ತರುತ್ತಾರೆ. ಅದೃಶ್ಯಪ್ಪ ಮಾನ್ವಿ, ಹಂದಿಗನೂರು ಸಿದ್ಧರಾಮಪ್ಪನವರಂತಹ ಅಪ್ರತಿಮ ಕಲಾವಿದರು ದೊರೆತಾಗ ಅವರ ಅಭಿನಯ ಬೆಳಗುವಂತೆ ಮಾಡಲು ನಾಟಕದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಾರೆ. ‘ಗಾಯನ ಪ್ರಧಾನ’ದ ಜತೆ ‘ಅಭಿನಯವನ್ನೂ ಪ್ರಧಾನ’ವಾಗಿಸುತ್ತಾರೆ.

ಹಂಸಭಾವಿಯಲ್ಲಿ ತಿರುಗುವ ರಂಗ ಆರಂಭಿಸಿ ಮುಂದಿನ ಹಲವು ಕ್ಯಾಂಪ್‌ಗಳಿಗೆ ಅದನ್ನು ಯಶಸ್ವಿಯಾಗಿ ಬಳಸುತ್ತಾರೆ.
ಅಭಿನೇತ್ರಿ ಲಕ್ಷ್ಮೀಭಾಯಿಯವರು ಬಾಳಪ್ಪನವರ ಕಲಾವೈಭವವನ್ನು ನಟಿಯಾಗಿ ಸೇರಿದ ನಂತರ ಹೊಸ ತೇಜಸ್ಸು ಮೂಡಿಬರುತ್ತದೆ. ಅಲ್ಲಿಂದ ಮುಂದೆ- ಈ ಹಿಂದೆ ಬಾಳಪ್ಪ ಮಾಡುತ್ತಿದ್ದ ಎಲ್ಲ ಸ್ತ್ರೀ ಪಾತ್ರಗಳು ಲಕ್ಷ್ಮೀಬಾಯಿಯವರ ಪಾಲಾಗುತ್ತವೆ!

ಪ್ರತಿಭಾವಂತ ನಟ ನಟಿಯರು, ಸ್ವತಃ ಬಾಳಪ್ಪ ಸೇರಿದಂತೆ ಹಲವು ಹೆಸರಾಂತ ರಂಗ ಗಾಯಕರಿಂದ ಕಲಾವೈಭವ ತನ್ನ ಶೀರ್ಷಿಕೆಯನ್ನು ಸಾರ್ಥಕ ಪಡಿಸಿಕೊಳ್ಳುವಂತೆ ನಾಡಿನ ಜನರ ಮನೆಮಾತಾಗುತ್ತದೆ. ವ್ಯಾಪಕವಾಗಿ ಉತ್ತರ ಕರ್ನಾಟಕ ಸೇರಿದಂತೆ- ಕರ್ನಾಟಕದ ಎಲ್ಲ ಭಾಗಗಳಲ್ಲೂ ಸಂಚರಿಸಿ ಕ್ಯಾಂಪ್ ಮಾಡಿದ ಅವರ ನಾಟಕ ಕಂಪನಿ ಮಹಾರಾಷ್ಟ್ರದ ಇಚಲಕರಂಜಿ, ಸಾಂಗಲಿ, ಕೊಲ್ಲಾಪುರ, ಸೊಲ್ಲಾಪುರ, ಪುಣೆ, ಮುಂಬಯಿ, ಮೀರಜ ಮುಂತಾದ ಕಡೆ ಹಲವು ಬಾರಿ ಕ್ಯಾಂಪ್ ಮಾಡುತ್ತದೆ.

ಬಾಳಪ್ಪನವರು ಎಲ್ಲವನ್ನೂ ಸಮಚಿತ್ತದಿಂದ ಸರಿದೂಗಿಸಿದವರು. ನೂರು ಸಮೀಪಿಸುತ್ತಿರುವ ಬಾಳಪ್ಪ 54ನೇ ವಯಸ್ಸಿನ ಪುತ್ರ ಹೆಸರಾಂತ ನಟ ಏಣಗಿ ನಟರಾಜನನ್ನು ಕಳೆದುಕೊಂಡಾಗಲೂ ಅದನ್ನು ಅಷ್ಟೇ ಸಮಚಿತ್ತದಿಂದ ಸ್ವೀಕರಿಸಿದರು. ಬಾಳಪ್ಪನವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಸಾವಿತ್ರಮ್ಮ ಅವರಿಗೆ ರುದ್ರಮ್ಮ, ಬಸವರಾಜ, ಸುಭಾಷ, ಶಕುಂತಲಾ, ಮೋಹನ, ಅರವಿಂದ, ಬಾಳಮ್ಮ -ಒಟ್ಟು 7 ಜನ ಮಕ್ಕಳು. ಹೆಸರಾಂತ ನಟಿ ಲಕ್ಷ್ಮಿಬಾಯಿ ಅವರ ಎರಡನೇ ಪತ್ನಿ. ಅವರಿಗೆ ನಟರಾಜ ಹಾಗೂ ಭಾಗ್ಯ ಇಬ್ಬರು ಮಕ್ಕಳು. ತಮ್ಮ ವೃತ್ತಿ ಕಂಪೆನಿಯ ಅಲೆದಾಟದ ಜೀವನದಲ್ಲಿಯೂ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅತೀವ ಕಾಳಜಿ ವಹಿಸಿದ್ದರಿಂದ ಅವರೆಲ್ಲ ಈಗ ನೆಮ್ಮದಿಯ ಜೀವನ ನಡೆಸಿದ್ದಾರೆ.

ರಂಗಭೂಮಿಗೆ ಬಾಳಪ್ಪ ಅವರ ಅನನ್ಯ ಸೇವೆಯನ್ನು ಪರಿಗಣಿಸಿ ಕನ್ನಡ ರಂಗಭೂಮಿಯ ಅತ್ಯುನ್ನತ ಪುರಸ್ಕಾರವಾದ ಗುಬ್ಬಿ ವೀರಣ್ಣ ಪ್ರಶಸ್ತಿ ನೀಡಲಾಗಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ ಗೌರವ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ, ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ. ಡಾ.ಎಂ.ಎಂ.ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಏಣಗಿ ಬಾಳಪ್ಪನವರಿಗೆ ‘ನಾಟ್ಯಭೂಷಣ’ ಅಭಿನಂದನಾ ಗ್ರಂಥವನ್ನು ಹೊರತರಲಾಗಿದೆ.

‘ಓದಿದರೆ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ ಓದಬೇಕು; ನೋಡಿದರೆ ಬಾಳಪ್ಪನವರ ನಾಟಕ ನೋಡಬೇಕು...’ ಎಂದೂ ಜನ ಬಾಳಪ್ಪನವರ ಬಗ್ಗೆ ಆಡಿಕೊಳ್ಳುತ್ತಿದ್ದರಂತೆ. -ಜನಪ್ರಿಯತೆಯ ತುಟ್ಟತುದಿ ತಲುಪಿದಾಗ ಸಾಮಾನ್ಯವಾಗಿ ಇಂತಹ ಗಾದೆಗಳು ಹುಟ್ಟಿಕೊಳ್ಳುತ್ತವೆ. ಹೀಗೆ ವ್ಯಕ್ತಿಯೊಬ್ಬ ದಂತಕಥೆಯಾಗುವುದು, ಗಾದೆಯಾಗುವುದು ಇತಿಹಾಸದಲ್ಲಿ ವಿರಳ. ಅಂತಹ ವಿರಳಾತಿ ವಿರಳರಲ್ಲಿ ಬಾಳಪ್ಪ ಒಬ್ಬರು. ಬಾಳಪ್ಪ ಎಂಬ ಹೆಸರಿಗೆ ಅನ್ವರ್ಥವಾಗಿ ಒಂದು ಶತಮಾನ ಕಾಲ ನಮ್ಮ ಮಧ್ಯೆ ಕ್ರಿಯಾಶೀಲರಾಗಿ ಬದುಕಿದ್ದು ಒಂದು ದಂತಕಥೆಯೇ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT