ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಳೆ ಹೊಯ್ಯುತಿದೆ... ಚೆಂಡೆಮದ್ದಳೆ ಗುಂಯ್‌ಗುಡುತಿದೆ...

Last Updated 4 ಜುಲೈ 2015, 19:30 IST
ಅಕ್ಷರ ಗಾತ್ರ

ಕಲಾವಿದರು, ವಿದ್ವಾಂಸರು ತಮ್ಮ ಪ್ರತಿಭೆಗೆ ಅವಕಾಶಗಳನ್ನು ಹುಡುಕಿಕೊಂಡು ದೇಶಸಂಚಾರ ನಡೆಸುವುದು ಸಹಜವಷ್ಟೇ. ಹೀಗೆ, ತಿರುಗಾಟ ಆರಂಭಿಸಿದ ಕರಾವಳಿಯ ಯಕ್ಷಗಾನ ಕಲೆ ಬೆಂಗಳೂರಿನಲ್ಲಿ ದೊಡ್ಡಮಟ್ಟದ ಜನಪ್ರಿಯತೆ ಗಳಿಸಿದೆ. ಈ ಪ್ರಸಿದ್ಧಿಯ ಹಿಂದೆ ಕಲೆಯ ಪರ್ಯಟನೆಯಷ್ಟೇ ಅಲ್ಲ; ಒಂದು ಸಮುದಾಯದ ಬಹುದೊಡ್ಡ ಭಾಗವೇ ನೆಲೆ ಬದಲಿಸಿದ ಸೂಕ್ಷ್ಮವಿದೆ. ಈ ಬದಲಾವಣೆಯ ಪಥದಲ್ಲಿ ಯಕ್ಷಗಾನ ವರ್ಷ ಪೂರ್ತಿ ಪ್ರದರ್ಶನಗೊಳ್ಳುವ ಕಲೆಯಾಗಿ ಬದಲಾಗಿದೆ.

‘ಬಲ್ಲಿರೇನಯ್ಯ, ಬೆಂಗಳೂರಿನ ಕಲಾಪ್ರಕಾರ ಯಾವುದು ಎಂದುಕೊಂಡಿದ್ದೀರಿ?’.
‘ಕರ್ನಾಟಕ ಸಂಗೀತ ಎಂದುಕೊಂಡಿದ್ದೇವೆ’.
‘ಅಲ್ಲ, ಅಲ್ಲವೇ ಅಲ್ಲ’.
‘ಹಾಗಾದರೆ ಭರತನಾಟ್ಯ?’
‘ಅದೂ ಅಲ್ಲ’.

‘ಬೆಂಗಳೂರು ಮಿಶ್ರ ಸಂಸ್ಕೃತಿಯ ನಾಡು. ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನಾಟಕ, ನೃತ್ಯ ಯಾವುದಾದರೂ ಬೆಂಗಳೂರಿನ ಕಲೆ ಆಗಬಹುದು’.
‘ಹೌದು, ಹೌದು ಆಗಬಹುದು. ಆದರೆ ನಾವು ಈಗ ರಂಗಕ್ಕೆ ಬಂದವರು ಯಾರೆಂಬುದು ಗೊತ್ತೋ?’
‘ನಿಮ್ಮನ್ನು ನೋಡಿದರೆ ಯಕ್ಷಗಾನದವರ ಹಾಗೆ ಕಾಣುತ್ತೀರಿ?’
‘ಹೌದು ನಾವು ಯಕ್ಷಗಾನದವರೆ. ಯಕ್ಷಗಾನವೇ ಈಗ ಬೆಂಗಳೂರಿನ ಕಲೆಯಾಗಿದೆ ಮಾರಾರ್ರೆ!’.
*****

ಮತ್ತೆ ಮಳೆ ಹೊಯ್ಯುತ್ತಿದೆ. ಬೆಂಗಳೂರಿನಲ್ಲಿ ಚೆಂಡೆಮದ್ದಳೆಯ ಶಬ್ದ ಗುಂಯ್‌ಗುಡುತ್ತಿದೆ. ಯಕ್ಷಗಾನದ ಒಡ್ಡೋಲಗಕ್ಕೆ ಸಿದ್ಧತೆ ನಡೆದಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಗಾಲ ಆರಂಭವಾದ ತಕ್ಷಣ ಬೆಂಗಳೂರಿನಲ್ಲಿ ‘ಆಟ’ದ ಮಳೆ ಆರಂಭವಾಗುತ್ತದೆ. ಕೆಲವು ಕಡೆ ಗುಡುಗು, ಸಿಡಿಲೂ ಇರುತ್ತದೆ. ಜೂನ್‌ ತಿಂಗಳಿನಿಂದ ಅಕ್ಟೋಬರ್‌ವರೆಗೆ ಇಲ್ಲಿ ಯಕ್ಷಗಾನದ ಅಬ್ಬರ.

ಸಾಲಿಗ್ರಾಮ, ಪೆರ್ಡೂರು ಮೇಳಗಳ ಆಟದ ಜೊತೆಗೆ ಅತಿಥಿ ಕಲಾವಿದರ ಆಟವೂ ಇರುತ್ತದೆ. ಜೊತೆಗೆ ತೆಂಕು ತಿಟ್ಟಿನ ಯಕ್ಷಗಾನಗಳ ಸೊಗಸೂ ಇವೆ. ರವಿಂದ್ರ ಕಲಾಕ್ಷೇತ್ರದಲ್ಲಿಯೇ ಈ ಅವಧಿಯಲ್ಲಿ ಸುಮಾರು 80 ಯಕ್ಷಗಾನ ಆಟ ನಡೆಯುತ್ತವೆ. ಇದಲ್ಲದೆ ಆರ್‌.ಟಿ. ನಗರದ ತರಳಬಾಳು ಕೇಂದ್ರ, ವಿಜಯ ನಗರದ ಬಂಟರ ಸಂಘ, ವಿಜಯ ಬ್ಯಾಂಕ್‌ ಕಾಲೋನಿ, ಹವ್ಯಕ ಭವನ, ಗಿರಿನಗರ ಮುಂತಾದ ಕಡೆಯೂ ಯಕ್ಷಗಾನದ ಕೊಯ್ಲು ಜೋರಾಗಿಯೇ ಇರುತ್ತದೆ.

ಕಲಾಕ್ಷೇತ್ರದಲ್ಲಿ ನಡೆಯುವ ಯಕ್ಷಗಾನದ ಗತ್ತೇ ಬೇರೆ. ಯಾವ ಆಟವೂ ಪುಕ್ಕಟೆ ಪ್ರದರ್ಶನದ್ದಲ್ಲ. ಎಲ್ಲ ಆಟಗಳಿಗೂ ಟಿಕೆಟ್‌ ಉಂಟು. ಕಳೆದ ಬಾರಿ ನೂರು, ಇನ್ನೂರು, ಮುನ್ನೂರು ರೂಪಾಯಿ ಟಿಕೆಟ್‌ ದರ ಇತ್ತು. ಕೆಲವು ಪ್ರದರ್ಶನಗಳಿಗೆ 500 ರೂಪಾಯಿ ಟಿಕೆಟ್‌ ಇತ್ತು. ಆದರೂ ಬಹುತೇಕ ಎಲ್ಲ ಯಕ್ಷಗಾನಗಳೂ ತುಂಬಿದ ಗೃಹಗಳಲ್ಲಿಯೇ ಪ್ರದರ್ಶನವಾದವು. ಈ ಬಾರಿಯೂ ಅದೇ ರೀತಿಯ ಸಿದ್ಧತೆ ನಡೆದಿದೆ. ಈಗಾಗಲೇ ಒಂದೆರಡು ಯಕ್ಷಗಾನಗಳು ಜಯಭೇರಿ ಭಾರಿಸಿವೆ.

ಬೆಂಗಳೂರಿನಲ್ಲಿ ಹಗಲು ಯಕ್ಷಗಾನಗಳೂ ಇವೆ. ಮೇಳಗಳು ನಡೆಸುವ ಬಹುತೇಕ ಯಕ್ಷಗಾನಗಳು ರಾತ್ರಿಯೇ ನಡೆಯುತ್ತವೆ. ಬೆಳಗಿನ ತನಕ ನಡೆಯುವ ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಉಂಟಾಗಿದ್ದು ಕಡಿಮೆ. ರಾತ್ರಿ 10 ಗಂಟೆಯ ನಂತರ ಅವಸರ ಅವಸರವಾಗಿ ಬರುವ ಪ್ರೇಕ್ಷಕರು ಟಿಕೆಟ್‌ ಪಡೆದು ಕಲಾಕ್ಷೇತ್ರದೊಳಕ್ಕೆ ನುಗ್ಗುವುದನ್ನು ನೋಡುವುದೇ ಆನಂದ. ಕಲಾಕ್ಷೇತ್ರದ ಒಳಕ್ಕೆ ತಮ್ಮ ನೆಚ್ಚಿನ ನಟರು, ಭಾಗವತರು ಬಂದಾಗ ಚಪ್ಪಾಳೆ, ಶಿಳ್ಳೆ ಜೋರು.

ಜೂನ್‌ನಿಂದ ನಡೆಯುವ 80 ಯಕ್ಷಗಾನಗಳಲ್ಲಿ 4–5 ಆಟಗಳಿಗೆ ಮಾತ್ರ ಉಚಿತ ಪ್ರವೇಶವಿರುತ್ತದೆ. ಉಳಿದವಕ್ಕೆಲ್ಲಾ ಟಿಕೆಟ್ ಇರುತ್ತದೆ. ದುಬಾರಿ ಟಿಕೆಟ್‌ ಇದ್ದರೂ ಯಕ್ಷಗಾನವನ್ನು ನೋಡುವ ವರ್ಗ ಬೆಂಗಳೂರಿನಲ್ಲಿ ಈಗ ಸೃಷ್ಟಿಯಾಗಿದೆ.

ಕಲಾಕ್ಷೇತ್ರದಲ್ಲಿ ನಡೆಯುವ ಯಕ್ಷಗಾನದ ಒಂದು ದಿನದ ಕಲೆಕ್ಷನ್‌ ಸರಾಸರಿ ಒಂದು ಲಕ್ಷ ರೂಪಾಯಿ. ಮೂರ್ನಾಲ್ಕು ಲಕ್ಷ ರೂಪಾಯಿ ಸಂಗ್ರಹವಾದ ಉದಾಹರಣೆಗಳೂ ಇವೆ. ಇನ್ನು ಕೆಲವರು ಪ್ರಸಿದ್ಧ ಕಲಾವಿದರನ್ನು ಕರೆದು ತಂದು ನಾಲ್ಕೈದು ಲಕ್ಷ ರೂಪಾಯಿ ಸಂಗ್ರಹ ಮಾಡುವುದೂ ಇದೆ. ಆದರೂ ಸರಾಸರಿ ಒಂದು ಲಕ್ಷ ರೂಪಾಯಿ ಎಂದಿಟ್ಟುಕೊಂಡರೂ ಒಂದು ವರ್ಷಕ್ಕೆ ಯಕ್ಷಗಾನವೇ ಒಂದು ಕೋಟಿಯ ಹತ್ತಿರ ವಹಿವಾಟು ನಡೆಸುತ್ತದೆ.

ಇದು ಕೇವಲ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಯಕ್ಷಗಾನಗಳ ಮಾತು. ಬೆಂಗಳೂರಿ­ನಲ್ಲಿಯೇ 20ಕ್ಕೂ ಹೆಚ್ಚು ಯಕ್ಷಗಾನ ತಂಡಗಳಿವೆ. ಅವು ವರ್ಷದಲ್ಲಿ ಕನಿಷ್ಠ 150 ಕಾರ್ಯಕ್ರಮಗಳನ್ನು ನೀಡುತ್ತವೆ. ಈ ಯಕ್ಷಗಾನಗಳಿಗೂ ಇಷ್ಟೇ ಹಣ ಆಗುತ್ತದೆ ಎಂದು ಹೇಳಲು ಸಾಧ್ಯ ಇಲ್ಲವಾದರೂ ಬೆಂಗಳೂ­ರಿ­ನಲ್ಲಿ ವರ್ಷಪೂರ್ತಿ ಯಕ್ಷಗಾನ ನಡೆಯು­ತ್ತದೆ ಎನ್ನುವುದು ಮಾತ್ರ ಸತ್ಯ.

ಅತ್ತಿಂದಿತ್ತ ಕಲೆಯ ಗಾಳಿ
ಕರಾವಳಿ ಮತ್ತು ಮಲೆನಾಡಿನ ಕಲೆಯಾದ ಯಕ್ಷಗಾನ ಬೆಂಗಳೂ­ರಿನಲ್ಲಿ ಬೀಡುಬಿಟ್ಟಿದ್ದು ಹೇಗೆ? ಇದು ನಿಜಕ್ಕೂ ಕುತೂಹಲಕಾರಿ ಕತೆ. ಮೊದಲೆಲ್ಲಾ ಮಳೆಗಾಲ ಆರಂಭವಾದ ತಕ್ಷಣ ಯಕ್ಷಗಾನ ಮೇಳಗಳು ಮುಂಬೈ ಕಡೆ ಮುಖ ಮಾಡುತ್ತಿದ್ದವು. ದಕ್ಷಿಣ ಕನ್ನಡದ ಹೊಟೇಲ್‌ ಉದ್ಯಮಿಗಳು ಹಾಗೂ ಹೊಟೇಲ್‌ ಕೆಲಸಗಾರರೇ ಅಲ್ಲಿ ಆಶ್ರಯದಾತರಾಗಿದ್ದರು.

ಬೆಂಗಳೂರಿನಲ್ಲಿಯೂ ಕೂಡ ಇವರೇ ಆಶ್ರಯದಾತರು. ಆದರೆ ಬೆಂಗಳೂರು ಮಾಹಿತಿ ತಂತ್ರಜ್ಞಾನದ ರಾಜಧಾನಿ, ಸಿಲಿಕಾನ್‌ ಸಿಟಿ ಎಂಬ ಖ್ಯಾತಿಗೆ ಒಳಗಾಗಿದ್ದೇ ತಡ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಬಹುದೊಡ್ಡ ಯುವ ಸಮುದಾಯ ಬೆಂಗಳೂರಿಗೆ ಹರಿದು ಬಂತು. ಸಾಫ್ಟ್ವೇರ್‌ ಎಂಜಿನಿಯರ್‌ ಹೆಸರಿನಲ್ಲಿ ಬಂದ ಈ ಯುವಕರನ್ನು  ಅವರ ತಂದೆ ತಾಯಿಗಳೂ ಅನುಸರಿಸಿದರು. ಅತ್ತ ಊರು ಖಾಲಿಯಾಯ್ತು. ಇತ್ತ ನಗರ ತುಂಬಿಕೊಂಡಿತು. ಹೊಟೇಲ್‌ ಉದ್ಯಮದವರ ಬೆಂಬಲ ಮೊದಲೇ ಇತ್ತು. ಈಗ ಅದಕ್ಕೆ ಕಾರ್ಪೋರೇಟ್‌ ಉದ್ಯಮದವರ ಬೆಂಬಲವೂ ಸಿಕ್ಕಿತು.

ಕೆರೆಮನೆ ಶಿವಾನಂದ ಹೆಗಡೆ ಈ ವಿದ್ಯಮಾನವನ್ನು ಚೆನ್ನಾಗಿಯೇ ಗುರುತಿಸುತ್ತಾರೆ. ‘ದಕ್ಷಿಣ ಕನ್ನಡದಲ್ಲಿ ಭೂತಕೋಲ, ನಾಗಮಂಡಲ ಧಾರ್ಮಿಕ ಆಚರಣೆ ಆದ ಹಾಗೆಯೇ ಯಕ್ಷಗಾನವೂ ಒಂದು ಧಾರ್ಮಿಕ ಸಂಪ್ರದಾಯದಂತೇ ಆಗಿದೆ. ಮಲೆನಾಡು ಮತ್ತು ಕರಾವಳಿ ಪ್ರದೇಶದಿಂದ ಜನರು ಬೆಂಗಳೂರಿಗೆ ವಲಸೆ ಬರುವಾಗ ಕೇವಲ ಉದ್ಯೋಗವನ್ನು ಮಾತ್ರ ದೃಷ್ಟಿಯಲ್ಲಿ ಇಟ್ಟುಕೊಂಡು ಬರಲಿಲ್ಲ.

ಜೊತೆಗೆ ಯಕ್ಷಗಾನದ ಪ್ರೀತಿಯನ್ನೂ ಹೊತ್ತು ತಂದರು. ತಮ್ಮ ನೆಚ್ಚಿನ ನಟ, ಭಾಗವತರನ್ನೂ ಇಲ್ಲಿಗೆ ಕರೆಸಿಕೊಂಡು ಆಟ ಮಾಡಿಸುವ ಹುಚ್ಚಿಗೆ ಬಿದ್ದರು. ವರ್ಷಕ್ಕೆ 3–4 ಆಟ ನೋಡಲೇಬೇಕು ಎಂಬ ಸಂಪ್ರದಾಯ ಬೆಳೆಸಿಕೊಂಡವರು ಇಲ್ಲಿದ್ದಾರೆ’ ಎನ್ನುತ್ತಾರೆ ಅವರು.

1955ರಲ್ಲಿ ಬೆಂಗಳೂರಿಗೆ ರಷ್ಯಾ ಅಧ್ಯಕ್ಷರು ಭೇಟಿ ನೀಡಿದ ಸಂದರ್ಭದಲ್ಲಿ ಲಾಲ್‌ಬಾಗಿನ ಗಾಜಿನ ಮನೆಯಲ್ಲಿ ಕುರಿಯ ವಿಠಲ ಶಾಸ್ತ್ರಿ ಅವರು ಯಕ್ಷಗಾನ ಪ್ರದರ್ಶನ ನಡೆಸಿದರು. ಬೆಂಗಳೂರಿನ ಯಕ್ಷಗಾನಕ್ಕೆ ಇದೊಂದು ಅಡಿಪಾಯವಾಯಿತು. ಅರವತ್ತರ ದಶಕದಲ್ಲಿ ಕುಂದಾಪುರದ ಅಕ್ಕಾಯಣಿ ಅಮ್ಮ ಅವರು ಬೆಂಗಳೂರಿನಲ್ಲಿಯೇ ಮಹಿಳಾ ಯಕ್ಷಗಾನ ತಂಡವನ್ನು ಕಟ್ಟಿದರು.

1970ರಲ್ಲಿ ನೃಪಾಂಗಿ ಕೇಶವ ಅವರು ಯಕ್ಷಗಾನದಲ್ಲಿ ಕರ್ನಾಟಕ ವೈಭವವನ್ನು ತೋರಿಸುವ ಪ್ರಯತ್ನ ಮಾಡಿದರು. 1966ರಲ್ಲಿ ಎಚ್‌.ಎಲ್‌. ಭಟ್ಟ ಮತ್ತಿಕೆರೆ ಅವರು ತಿಂಕುತಿಟ್ಟಿನ ಯಕ್ಷಗಾನಗಳನ್ನು ಪ್ರದರ್ಶಿಸಿದರು. ತುಳು ಕೂಟ ಇದಕ್ಕೆ ಸಾಕಷ್ಟು ನೆರವು ನೀಡಿತು.

ಗುಂಡ್ಮಿ ರಘುರಾಮ ಅವರು 1975ರಲ್ಲಿ ಯಕ್ಷರಂಜಿನಿ ಹೆಸರಿನಲ್ಲಿ ಯಕ್ಷಗಾನ ತರಬೇತಿಯನ್ನು ಆರಂಭಿಸಿದರು. 1980ರಲ್ಲಿ ಮೋಹನ್‌ ಆಳ್ವ ‘ಯಕ್ಷ ದೇಗುಲ’ ಆರಂಭಿಸಿದರು. 1984ರಲ್ಲಿ ಪಾವಂಜೆ ಶಿವರಾಮ ಭಟ್ಟ ‘ಕರಾವಳಿ ಯಕ್ಷಗಾನ ಕಲಾವಿದರು’ ಎಂಬ ಸಂಸ್ಥೆ ಪ್ರಾರಂಭಿಸಿದರು. 1997ರಲ್ಲಿ ಮಿತ್ತೂರು ಈಶ್ವರ ಭಟ್ಟ ಅವರು ಮೊದಲ ಬಾರಿಗೆ ‘ಚಂದನ’ ವಾಹಿನಿಗೆ ಕುರುಕ್ಷೇತ್ರ ಯಕ್ಷಗಾನ ಧಾರಾವಾಹಿ ಮಾಡಿದರು.   ಇದರಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿದ್ದರು. 1996ರಲ್ಲಿ ಶ್ರೀನಿವಾಸ ಸಾಸ್ತಾನ ಅವರು ‘ಕರ್ನಾಟಕ ಕಲಾದರ್ಶಿನಿ’ ಮೂಲಕ ಯಕ್ಷಗಾನ ತರಬೇತಿ ಹಾಗೂ ಪ್ರದರ್ಶನಕ್ಕೆ ಮುಂದಾದರು. ಈ ನಡುವೆ ವಿ.ಆರ್‌. ಹೆಗಡೆ ಅವರು ‘ಯಕ್ಷಗಾನ ಯೋಗಕ್ಷೇಮ’ ಅಭಿಯಾನ ಆರಂಭಿಸಿದರು. ಬಡಾವಣೆಗಳಲ್ಲಿ ಯಕ್ಷಗಾನ ಪ್ರದರ್ಶನದ ವ್ಯವಸ್ಥೆ ಮಾಡಲಾಯಿತು.

ಬೆಂಗಳೂರಿನ ಯಕ್ಷಗಾನಕ್ಕೆ 1995ರಿಂದ 2005ರ ನಡುವಿನ ಕಾಲ ನಿಜಕ್ಕೂ ಪರ್ವಕಾಲ. ಆಗಲೇ ಇಲ್ಲಿ ಯಕ್ಷಗಾನ ಬೇರೂರಿತು. ಜೊತೆಗೆ ಬೆಂಗಳೂರಿನಲ್ಲಿಯೇ ಇದ್ದ ಯಕ್ಷಗಾನ ತರಬೇತಿ ಕೇಂದ್ರಗಳು ಕೇವಲ ಸಾಂಪ್ರದಾಯಿಕ ಯಕ್ಷಗಾನ ಪ್ರೇಮಿಗಳನ್ನಷ್ಟೇ ಅಲ್ಲದೆ ಹೊಸಬರಿಗೂ ತರಬೇತಿ ನೀಡಲು ಆರಂಭಿಸಿದ್ದರಿಂದ ಯಕ್ಷಗಾನದ ವ್ಯಾಪ್ತಿ ಕೂಡ ಹೆಚ್ಚಾಯಿತು. ಈಗಲೂ ಬೆಂಗಳೂರಿನಲ್ಲಿ ಯಕ್ಷಗಾನ ನಡೆದರೆ ಅದಕ್ಕೆ ಬರುವ ಪ್ರೇಕ್ಷಕರು ಕರಾವಳಿ ಮತ್ತು ಮಲೆನಾಡಿನವರೇ ಆದರೂ ಒಂದಿಷ್ಟು ಹೊಸ ಪ್ರೇಕ್ಷಕರೂ ಇರುತ್ತಾರೆ ಎನ್ನುವುದು ಸುಳ್ಳಲ್ಲ. ರಾತ್ರಿ ಪ್ರಸಂಗಗಳಿಗೆ ಹೊಟೇಲ್‌ ಉದ್ಯಮದವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.

ಆಟಕ್ಕೆ ಬದಲಾವಣೆಯ ಸ್ಪರ್ಶ!
ಆಧುನಿಕ ಸಮಾಜದ ಪಲ್ಲಟದ ನಡುವೆ ಯಕ್ಷಗಾನದ ಸ್ಥಾನ ಪಲ್ಲಟವೂ ಆಗಿದೆ. ಸಾಂಪ್ರದಾಯಿಕವಾಗಿ ಯಕ್ಷಗಾನ ನಡೆಯುತ್ತಿದ್ದ ಕಡೆ ಹೊಸ ಪ್ರಸಂಗಗಳು ವಿಜೃಂಭಿಸಿದರೆ ಬೆಂಗಳೂರಿನಲ್ಲಿ ಬಹುತೇಕ ಪೌರಾಣಿಕ ಯಕ್ಷಗಾನಗಳೇ ಹೆಚ್ಚಾಗಿ ನಡೆಯುತ್ತವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಮೇಳಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಸಾಲಿಗ್ರಾಮ ಮತ್ತು ಪೆರ್ಡೂರ್‌ ಮೇಳಗಳು ಬಡಗುತಿಟ್ಟಿನ ಮೇಳಗಳೇ ಆದರೂ ಭೌಗೋಳಿಕವಾಗಿ ಅವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವೇ ಆಗಿವೆ.

ಮಳೆಗಾಲದಲ್ಲಿಯಂತೂ ಬಯಲಾಟ ನಡೆಸುವ ಹಾಗೆಯೇ ಇಲ್ಲ. ಮೊದಲೆಲ್ಲಾ ಯಕ್ಷಗಾನ ಕಲಾವಿದರು ಮಳೆಗಾಲದಲ್ಲಿ ಮನೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ನಿರತರಾಗುತ್ತಿದ್ದರು. ಎಲ್ಲೋ ಅಲ್ಲೊಂದು ಇಲ್ಲೊಂದು ತಾಳಮದ್ದಲೆಗಳಲ್ಲಿ ಭಾಗಿಯಾಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಯಕ್ಷಗಾನ ಕಲಾವಿದರು ವರ್ಷ ಪೂರ್ತಿ ಕಲೆಯಲ್ಲಿಯೇ ಸಕ್ರಿಯರಾಗಿರುತ್ತಾರೆ. ಯಕ್ಷಗಾನ ಕಲಾವಿದರಿಗೆ ಮಳೆಗಾಲದಲ್ಲಿ ಬೆಂಗಳೂರು ನಿಜವಾದ ಅರ್ಥದಲ್ಲಿ ಭರಪೂರ ಬೆಳೆಯ ಭೂಮಿಯಾಗಿದೆ. ಕಲಾವಿದರ ಆರ್ಥಿಕ ಸ್ಥಿತಿ ಕೂಡ ಸುಧಾರಣೆಯಾಗಿದೆ.

ಬೆಂಗಳೂರಿನಲ್ಲಿ ಯಕ್ಷಗಾನದ ಬೆಳೆ ಭರಪೂರವಾಗಿರುವುದು ನಿಜ. ಆದರೆ ಕೆಲವು ವಿಕೃತಿಗಳೂ ಸೇರಿಕೊಂಡಿವೆ. ಇಲ್ಲಿ ನಡೆಯುವ ಬಹುತೇಕ ಯಕ್ಷಗಾನ ಪ್ರಸಂಗಗಳು ಈಗ 20–20 ಕ್ರಿಕೆಟ್‌ ಮ್ಯಾಚಿನಂತಾಗಿವೆ. ಒಟ್ಟಾರೆ ಒಂದು ಕತೆ ಯಾರಿಗೂ ಬೇಡ.

ರಾತ್ರಿ ಬೆಳಗಿನವರೆಗೆ 5 ಪ್ರಸಂಗ ಮಾಡುವ ಹುಚ್ಚೂ ಬೆಳೆಯುತ್ತಿದೆ. ವ್ಯಕ್ತಿ ಪ್ರಧಾನವಾದ ಯಕ್ಷಗಾನಕ್ಕೇ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಯಕ್ಷಗಾನ ನಟ ಪ್ರಧಾನವಾದ ಕಲೆ ಹೌದು. ಆದರೆ ಅದು ವಸ್ತು ಪ್ರಧಾನ, ಮೇಳ ಪ್ರಧಾನವಾಗಿಯೂ ಇರಬೇಕು. ಯಾಕೆಂದರೆ ಅದೊಂದು ಸಮಷ್ಟಿ ಕಲೆ. ಈ ಗುಣ ತಪ್ಪಿ ಹೋದರೆ ಯಕ್ಷಗಾನದ ಬೇರುಗಳು ಸಡಿಲವಾಗುತ್ತವೆ. ಒಟ್ಟಂದದಲ್ಲಿ ಯಕ್ಷಗಾನ ಚೆನ್ನಾಗಿ ಆಗಬೇಕು. ಯಾರದ್ದೋ ಕೌರವ, ಯಾರದ್ದೋ ಭೀಮ ಎಷ್ಟೇ ಚೆನ್ನಾಗಿ ಆಗಿಬಿಟ್ಟರೆ ಯಕ್ಷಗಾನ ಎಂಬುದು ಉಳಿಯುವುದಿಲ್ಲ. ಅದಕ್ಕೇ ಕೆರೆಮನೆ ಶಂಭು ಹೆಗಡೆ ಅವರು ಯಾವಾಗಲೂ ‘ಯಕ್ಷಗಾನಕ್ಕೆ ಅತಿಥಿ ಕಲಾವಿದರು ಸಲ್ಲದು’ ಎನ್ನುತ್ತಿದ್ದರು.

ಹಿರಿಯ ವಿದ್ವಾಂಸ ಪ್ರಭಾಕರ ಜೋಷಿ ಕೂಡ ಈ ಮಾತನ್ನು ಒಪ್ಪುತ್ತಾರೆ. ‘ಬೆಂಗಳೂರು ನಿಜವಾದ ಅರ್ಥದಲ್ಲಿ ಇನ್ನೂ ನಗರವೇ ಆಗಿಲ್ಲ. ಅದೊಂದು ದೊಡ್ಡ ಹಳ್ಳಿ ಅಷ್ಟೆ. ಗ್ರಾಮೀಣ ಜನಪದ ಕಲೆ ಪಟ್ಟಣಕ್ಕೆ ವಲಸೆ ಹೋದಾಗ ಅದರ ಸದ್ಗುಣ ಮತ್ತು ಕೆಟ್ಟ ಗುಣಗಳನ್ನೂ ಒಯ್ಯುತ್ತದೆ. ಜೊತೆಗೆ ನಗರ ಪ್ರದೇಶದ ಸದ್ಗುಣಗಳು, ಕೆಟ್ಟ ಗುಣಗಳೂ ಈ ಕಲೆಯಲ್ಲಿ ಸೇರಿಕೊಳ್ಳುತ್ತವೆ. ಆದರೂ ಯಕ್ಷಗಾನ ಕಲೆ ಶ್ರೀಮಂತವಾಗಿದ್ದರಿಂದ ಬೆಂಗಳೂರಿಗೆ ಬಂದರೂ ಅದು ತನ್ನ ರುಚಿಯನ್ನು ಉಳಿಸಿಕೊಂಡಿದೆ’ ಎಂಬುದು ಅವರ ಅಭಿಪ್ರಾಯ.

ಬೆಂಗಳೂರಿನಲ್ಲಿ ತೆಂಕು ಮತ್ತು ಬಡಗು ತಿಟ್ಟಿನ ಇಪ್ಪತ್ತಕ್ಕೂ ಹೆಚ್ಚು ತಂಡಗಳಿವೆ. ‘ಯಕ್ಷ ದೇಗುಲ’, ‘ಕರ್ನಾಟಕ ಕಲಾ ದರ್ಶಿನಿ’, ‘ಯಕ್ಷ ಸಂಪದ’, ‘ಕಲಾ ಕದಂಬ’, ‘ಯಕ್ಷ ಸಿಂಚನ’, ‘ಯಕ್ಷಾಂಗಣ ಟ್ರಸ್ಟ್’, ‘ಸಿರಿಕಲಾ ಮೇಳ’, ‘ರಂಗಸ್ಥಳ’ ಮುಂತಾದ ಹಲವಾರು ತಂಡಗಳು ಹವ್ಯಾಸಿ ಯಕ್ಷಗಾನವನ್ನು ಪ್ರದರ್ಶಿಸುವುದೇ ಅಲ್ಲದೆ ತರಬೇತಿಯನ್ನೂ ನೀಡುತ್ತಿವೆ. ಕರ್ನಾಟಕದ ರಾಜಧಾನಿಯಲ್ಲಿ ಯಕ್ಷಗಾನವನ್ನು ಸ್ಥಿರಗೊಳಿಸುವಲ್ಲಿ ಇವುಗಳ ಪಾತ್ರ ಕೂಡ ಅಪಾರವಾಗಿದೆ.

ಬೆಳೆ ಮತ್ತು ಕಳೆ
‘ರಾಜಧಾನಿಯ ಯಕ್ಷಗಾನಗಳಲ್ಲಿ ರೋಚಕತೆಗೇ ಹೆಚ್ಚಿನ ಸ್ಥಾನ. ಇಲ್ಲಿ ಈಗ ಟೀಮ್‌ ಮತ್ತು ಥೀಮ್‌ ಎರಡೂ ಇಲ್ಲ. ನಿರ್ದೇಶನವೂ ಇಲ್ಲ. ಆದರೆ ಭರಪೂರ ಬೆಳೆಯಂತೂ ಇದೆ’ ಎಂದು ಶ್ರೀನಿವಾಸ ಸಾಸ್ತಾನ ಹೇಳುತ್ತಾರೆ. ‘ಬೆಂಗಳೂರಿನ ಯಕ್ಷ ತಂಡಗಳೇ ವರ್ಷಕ್ಕೆ 150ಕ್ಕೂ ಹೆಚ್ಚು ಆಟಗಳನ್ನು ಆಡುತ್ತಾರೆ. ಬಹುತೇಕ ಉಚಿತ ಪ್ರದರ್ಶನ. ಈ ಆಟಗಳು ಬೆಂಗಳೂರಿನಲ್ಲಿ ಯಕ್ಷಗಾನವನ್ನು ಜನಪ್ರಿಯಗೊಳಿಸಿವೆ’ ಎಂಬುದು ಅವರ ಅಭಿಪ್ರಾಯ.

ಬೆಂಗಳೂರಿನಲ್ಲಿ 40 ವರ್ಷಗಳಿಂದ ಯಕ್ಷಗಾನವನ್ನು ಸಂಘಟಿಸುತ್ತಿರುವ ಮೋಹನ್‌ ಅವರಿಗೆ ಯಕ್ಷಗಾನ ಇಲ್ಲಿ ಇನ್ನೂ ಸರಿಯಾಗಿ ಬೇರು ಬಿಟ್ಟಿಲ್ಲ ಎಂಬ ಚಿಂತೆ ಇದೆ. ‘ದೇವಸ್ಥಾನ ಕಟ್ಟಲು ಹಣ, ಜಾಗ ಕೊಡುವ ಜನರು ಯಕ್ಷಗಾನಕ್ಕಾಗಿಯೇ ಒಂದು ರಂಗಮಂದಿರ ಕಟ್ಟುತ್ತೇವೆ ಎಂದರೆ ಯಾರೂ ಸಹಾಯ ಮಾಡುವುದಿಲ್ಲ’ ಎನ್ನುವ ಬೇಸರ ಅವರಿಗೆ.  ಇದೆಲ್ಲದರ ನಡುವೆಯೂ ಬೆಂಗಳೂರಿನಲ್ಲಿ ಯಕ್ಷಗಾನದ ಒಡ್ಡೋಲಗ ಜೋರಾಗಿಯೇ ನಡೆದಿದೆ. ಪ್ರತಿ ವರ್ಷ ರವಿಂದ್ರ ಕಲಾಕ್ಷೇತ್ರವನ್ನು ಕೊಡುವುದಕ್ಕೆ ತಕರಾರು ತೆಗೆಯುವುದನ್ನು ಬಿಟ್ಟರೆ ಸರ್ಕಾರದಿಂದ ವೃತ್ತಿ ಮೇಳಗಳಿಗೆ ಅಂತಹ ಪ್ರೋತ್ಸಾಹ ಏನೂ ಇಲ್ಲ.

ಜನರಿಂದ, ಜನರಿಗಾಗಿ ಜನರೇ ಬೆಳೆಸುತ್ತಿರುವ ಕಲೆ ಯಕ್ಷಗಾನ. ಭರಪೂರ ಬೆಳೆ ಬಂದಾಗ ಒಂದಿಷ್ಟು ಕಳೆಯೂ ಇರುತ್ತವೆ. ಹಾಗೆಯೇ ಯಕ್ಷಗಾನ ಪ್ರಸಂಗಗಳಲ್ಲಿ ಒಂದಿಷ್ಟು ಅಧಿಕ ಪ್ರಸಂಗಗಳೂ ಸೇರಿಕೊಂಡಿವೆ. ಬೆಳೆ ಹೆಚ್ಚಾದರೂ ಸಾಂಸ್ಕೃತಿಕ ಮೌಲ್ಯ ಕಡಿಮೆಯಾಗಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT