ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯ ಈ ಸ್ವಭಾವ ಕಂಡಿರಾ!

Last Updated 2 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮನೆಗಳಿಗೆ ಅಥವಾ ಕಟ್ಟಡಗಳಿಗೆ ಅಂದ, ಆಕಾರ ಮಾತ್ರವಲ್ಲದೇ ಅದರದ್ದೇ ಆದ ಸ್ವಭಾವ ಕೂಡಾ ಇದೆ. ಅಂದ, ಆಕಾರಗಳನ್ನು ನೇರವಾಗಿ ಗ್ರಹಿಸಿದ ಹಾಗೆ, ಅದರ ಸ್ವಭಾವವನ್ನು ನಾವು ಗ್ರಹಿಸುವುದಿಲ್ಲ ಅಷ್ಟೆ.

ಆದರೆ ಮನೆಯ ಅಥವಾ ಕಟ್ಟಡಗಳ ಸ್ವಭಾವ ನಮ್ಮ ಮನಸ್ಸಿನ ಮೇಲೆ ದೊಡ್ಡ ಪ್ರಭಾವವನ್ನೇ ಬೀರುತ್ತಿದೆ ಎನ್ನುವುದು ಗಮನಿಸಬೇಕಾದ ಅಂಶ. ಪುರಾತನ ದೇವಸ್ಥಾನಗಳು ಅಥವಾ ಚರ್ಚ್‌ಗಳ ನಿರ್ಮಾಣಕ್ಕೆ ನಿಶ್ಚಿತ ಸ್ವಭಾವವನ್ನು ಆರೋಪಿಸಿಯೇ ಕಟ್ಟುತ್ತಿದ್ದರು. ಹಾಗಾಗಿ ಅಂತಹ ಕಟ್ಟಡಗಳನ್ನು ನಾವು ಸಂದರ್ಶಿಸಿದಾಗ ಆನಂದ ಅನುಭವಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಮನೆ ಕಟ್ಟುವವರು ಅಥವಾ ಬಹುಪಾಲು ಆರ್ಕಿಟೆಕ್ಟ್‌ಗಳು (ವಾಸ್ತುಶಿಲ್ಪಿಗಳು) ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಯೋಚಿಸುವುದಕ್ಕೂ ಹೋಗುವುದಿಲ್ಲಾ. ಇದು ಮನಶಾಸ್ತ್ರೀಯ ಹಾಗೂ ಕಲಾತ್ಮಕ ವಿಷಯವಾದ್ದರಿಂದ ಚರ್ಚಿಸುವುದು ಅಷ್ಟು ಸುಲಭವಲ್ಲ.

ನಾಟಕದ ಪಾತ್ರಧಾರಿಗಳನ್ನು ಆರಿಸುವಾಗ ನಾವು ಹೇಗೆ ಗಂಭೀರ ಮುಖಭಾವದವನನ್ನು ರಾಜನ ಪಾತ್ರಕ್ಕೂ, ಚೂಪಾದ ಮೂತಿಯವರನ್ನು ವಿದೂಷಕನ ಪಾತ್ರಕ್ಕೂ ಬಳಸಿಕೊಳ್ಳುತ್ತೇವೆಯೋ ಹಾಗೆಯೇ ಕಟ್ಟಡಗಳ ವಿಷಯದಲ್ಲೂ ಅನುಸರಿಸಬೇಕು. ಯಾವ ಮುಖಕ್ಕೆ ಯಾವ ರೀತಿಯ ಮುಖವರ್ಣಿಕೆ, ಯಾರಿಗೆ ಯಾವ ಥರದ ಮುಂಡಾಸು ಮುಂತಾದ ವಿವರಣೆಗಳನ್ನು ಹೇಗೆ ನಾಜೂಕಾಗಿ ಮಾಡಬಲ್ಲೆವೋ ಅದು ನಮ್ಮ ಕಟ್ಟಡಗಳಿಗೂ ಅವಶ್ಯವೇ. ದೊಡ್ಡ ಚರ್ಚ್ ಕಟ್ಟಡವನ್ನು ಖಾಸಗೀ ಅಸ್ಪತ್ರೆಯಂತೆ ರಚಿಸಿದರೆ ಪರಿಣಾಮ ಹೇಗಿರಬಹುದು?

ಅಪರೂಪಕ್ಕೆಂಬಂತೆ ಕೆಲವು ಸಭಾ ಮಂಟಪಗಳು, ರಂಗಮಂದಿರಗಳು, ಮ್ಯೂಸಿಯಂಗಳು, ಕಲಾಶಾಲೆಗಳು ಇಂದಿಗೂ ಸೂಕ್ತವಾದ ಸ್ವಭಾವವನ್ನು ತಮ್ಮ ಕಟ್ಟಡಗಳಲ್ಲಿ ಅಳವಡಿಸಿಕೊಂಡಿರುತ್ತವೆ. ಶಾಲೆ ಅಥವಾ ಆಸ್ಪತ್ರೆಗಳನ್ನಂತೂ ಸ್ವಭಾವ ಸಹಜವಾಗಿ ನಿರ್ಮಿಸದಿದ್ದಲ್ಲಿ ಅದು ನರಕಕ್ಕೆ ಸಮ!

ಮುದ್ದು ಮುದ್ದಾಗಿ ನಳನಳಿಸುವ ಬಾಲವಾಡಿ ಕಟ್ಟಡಕ್ಕೆ ಪುಟಾಣಿ ಮಕ್ಕಳು ಖುಷಿ ಖುಷಿಯಾಗಿ ಹೋಗುವ ಹಾಗೆ ಆಸ್ಪತ್ರೆಯ ಹಾಗಿರುವ ಗಂಭೀರ ಕಟ್ಟಡದೊಳಗೆ ಹೋಗಲಾರರು. ಅದೇ ರೀತಿ ಒಂದು ಸಂಶೋಧನಾ ಸಂಸ್ಥೆಯ ಕಟ್ಟಡ ಮಾಂಟೆಸ್ಸರಿ ಶಾಲೆಯ ರೀತಿಯಲ್ಲಿ ಇದ್ದರೂ ಸಹ್ಯವಲ್ಲಾ.
ಹೀಗೆ ನಮ್ಮ ದೇವಸ್ಥಾನಗಳು ಕೂಡಾ ನಿರ್ದಿಷ್ಟ ಪರಿಣಾಮವನ್ನು ಉಂಟುಮಾಡಲು ಅನುಕೂಲವಾಗುವಂತೆ ರಚನೆಗೊಂಡಿರುತ್ತವೆ. ನಮ್ಮ ಮನೆಗಳಿಗೂ ಅದರದ್ದೇ ಆದ ಒಂದು ನಿಶ್ಚಿತ ಸ್ವಭಾವ ಇರಬೇಕು.

ಮನೆಗೂ ಇರಬೇಕಾದ ಒಂದು ಸ್ವಭಾವವನ್ನು ಗೋಚರಿಸುವಂತೆ ಮಾಡುವುದು ಬಾಹ್ಯ ಸಂಯೋಜನೆಗಳು ಮಾತ್ರವಲ್ಲದೇ ಮನೆಯ ಒಳಭಾಗದ ವಿನ್ಯಾಸವೂ ಅದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಹೇಗೆ ರಂಗಮಂದಿರದ ಮುಂಭಾಗದಲ್ಲಿ ವಿಶಾಲವಾದ ಲಾಬಿ ನಮ್ಮನ್ನು ಸ್ವಾಗತಿಸಿ ಒಳಕ್ಕೆ ಕರೆದೊಯ್ಯುತ್ತದೆಯೋ ಅದೇ ರೀತಿ ನಮ್ಮ ಮನೆಗೂ ಒಂದು ಡ್ರಾಯಿಂಗ್ ರೂಮ್ ಇದ್ದರೆ ಅದು ಇದೇ ರೀತಿಯ ‘ಸ್ವಾಗತ’ದ ಕೆಲಸವನ್ನು ಮಾಡುತ್ತದೆ. ಆದರೆ ಇಡೀ ಮನೆಯ ಜೊತೆಗೆ ಅದು ಪ್ರಮಾಣಬದ್ಧವಾಗಿ ಇರಬೇಕು ಅಷ್ಟ.

ಒಂದು  ವ್ಯಕ್ತಿಯ ಮುಖ ಅಂದವಾಗಿ ಕಾಣಲು ಅವನ ಮುಖದ ಪ್ರಮಾಣಕ್ಕೆ ಸಮನಾದ ಮೂಗು, ಕಿವಿಗಳು ಅಥವಾ ಒಬ್ಬಳು ಸುಂದರಿಯ ಮುಖದ ಪ್ರಮಾಣಕ್ಕೆ ಸಮನಾದ ಹಣೆ ಬೊಟ್ಟು ಎಷ್ಟು ಸಹಜವೋ ಅಷ್ಟೇ ಸಹಜ ನಮ್ಮ ಮನೆಯ ವಿವಿಧ ಭಾಗಗಳು ಕೂಡಾ. ಆ ಮನೆಯ ಗಾತ್ರ ಆಕಾರಗಳಿಗೆ ಉಚಿತ ಪ್ರಮಾಣದ ಮಲಗುವ ಕೋಣೆಗಳು ಆಡುಗೆ ಕೋಣೆಗಳು ಅಥವಾ ಸ್ನಾನದ ಮನೆಗಳು ಇದ್ದರೆ ಉತ್ತಮ.

ಹಾಗೆಯೆ ಮನೆಗೆ ಉಪಯೋಗಿಸುವ ಬಣ್ಣ ಹಾಗೂ ವಸ್ತುಗಳು ಕೂಡಾ ಮನೆಯ ಸ್ವಭಾವವನ್ನು ನಿರ್ಧರಿಸುತ್ತವೆ. ಮನಃಶಾಸ್ತ್ರ ಕೂಡಾ ಬಣ್ಣಗಳು ಮನುಷ್ಯನ ಮನಸ್ಸಿನ ಮೇಲಾಗುವ ಪರಿಣಾಮಗಳ ಬಗ್ಗೆ ವಾದಿಸುತ್ತವೆ. ಈಗೀಗ ಪೆಂಗ್ಸ್ ಶುಯಿ ಅಥವಾ ವಾಸ್ತುಶಾಸ್ತ್ರ ಬಣ್ಣಕ್ಕೆ ಮಹತ್ವ ಕೊಡುತ್ತಿವೆ.
ನಾವು ಇಲ್ಲಿ ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು ಮನೆ, ಮನೆಯಂತೆಯೇ ಇರಬೇಕು ಎಂಬುದು!

ಆದರೆ ಕೆಲವು ಮನೆಗಳು ಅತಿ ಹೆಚ್ಚಿನ ಪ್ರಮಾಣದ ವಿನ್ಯಾಸಕ್ಕೆ ಒಳಗಾಗಿ ಹೋಟೆಲ್ ರೂಮಿನ ಹಾಗೋ, ಇಲ್ಲವೇ ದೇವಸ್ಥಾನದ ಪ್ರಾಕಾರದ ಹಾಗೆಯೋ ಗೋಚರಿಸುವಂತಿರುತ್ತವೆ. ಅಂತಹ ಮನೆಗಳಲ್ಲಿ ವಾಸಿಸುವ ಜನರೂ ಎಂದಾದರೂ ಅಪರೂಪಕ್ಕೆ ನೆಲಕ್ಕೆ ರೆಡ್ ಆಕ್ಸೈಡ್ ಹಾಕಿಸಿರುವ ನೆಂಟರ ಮನೆಗೋ, ಇಲ್ಲವೇ ಯಾವುದಾದರೂ ರೆಸಾರ್ಟ್‌ನ ಕಾಟೇಜಿಗೊ ಹೋದಾಗ ಎಂದೂ ಇಲ್ಲದಂತಹ ಭಿನ್ನ ಅನುಭವವನ್ನೂ, ತುಸು ನೆಮ್ಮದಿಯ ಭಾವವನ್ನೂ ಅನುಭವಿಸುತ್ತಾರೆ. ಆದರೆ ಅದನ್ನು ತಮ್ಮ ಮನೆಗೆ ಆಳವಡಿಸಿಕೊಳ್ಳಲು ಅರ್ಥವಾಗದೇ ವಿಫಲರಾಗಿರುತ್ತಾರೆ. 

ನಗರದ ಮನೆಗಳಿಗೆ ಅಥವಾ ಅಪಾರ್ಟ್ ಮೆಂಟ್‌ಗಳಿಗೆ ಕೆಲವು ಮಿತಿಗಳಿದ್ದರೂ ಅಂಥಲ್ಲಿಯೂ ಕೂಡಾ ಒಂದು ಮಟ್ಟದವರೆಗೂ ಮನೆಯ ಸಹಜ ವಾತಾವರಣ ಉಂಟಾಗುವ ಹಾಗೆ ನಿರ್ಮಿಸಲು ಸಾಧ್ಯವಿದೆ.

ನಾವು ಎಷ್ಟೇ ಆಧುನಿಕರಾದರೂ ಇಂದಿಗೂ ನಮ್ಮ ಪೂರ್ವಿಕರ ರೂಢಿಯಲ್ಲಿದ್ದ ಅಡುಗೆಯನ್ನೇ ನಮ್ಮ ದೇಹ ಅಥವಾ ಆರೋಗ್ಯ ಬಯಸುತ್ತದೆ.  ಅದೇ ರೀತಿ ಮನೆಯ ಬಣ್ಣ, ನೆಲಹಾಸು, ಗೋಡೆಗೆ ಬಳಸುವ ವಸ್ತುಗಳು, ಪೀಠೋಪಕರಣಗಳು ಮುಂತಾದ ಕೆಲವು ಅಂಶಗಳನ್ನು ನಮ್ಮ ಪೂರ್ವಿಕರ ಅಭಿರುಚಿಗೆ ಹತ್ತಿರವಾಗುವ ಹಾಗೆ ನಾವು ಇಂದಿಗೂ ಹೊಂದಿಸಿ ಕೊಳ್ಳಬಹುದು. ಕಾಲಕ್ಕೆ ತಕ್ಕ ಬದಲಾವಣೆಗಳನ್ನು ಮಾಡುತ್ತಾ ಮಾಡುತ್ತಾ ಹಳೆಯ ಯಾವುದೊ ಒಂದು ರಿದಂ ಮುಂದುವರೆದಿರಬೇಕಷ್ಟೆ.

ಮನೆಯ ಗೋಡೆಯ ಮೇಲೆ ಬರೆಯುವ ಬಣ್ಣದ ಚಿತ್ತಾರ ಹಾಗೂ ಮ್ಯೂರಲ್‌ಗಳು ಮನೆಯ ಸ್ವಭಾವವನ್ನೂ ವೃದ್ಧಿಗೊಳಿಸಲು ತುಂಬಾ ಸಹಕಾರಿಯಾಗಿರುತ್ತವೆ.

ಮನಸ್ಸು ಎಲ್ಲಿಂದಲೋ ತಂದ ದುಗುಡವನ್ನು ಒಂದು ಒಳ್ಳೆಯ ವಾರ್ಲಿ ಕಲೆಯೊ ಅಥವಾ ಕಲಾವಿದರ ಒಂದು ಉತ್ತಮ ಚಿತ್ರವೋ ಪರಿಹರಿಸಬಲ್ಲದು.
ಮನೆಯ ಭಾಗಗಳನ್ನು ಕೇವಲ ಯುಟಿಲಿಟಿಯ (ದೈನಂದಿನ ಉಪಯುಕ್ತತೆ) ಆಧಾರ ಮೇಲೆ ನೋಡುವ ಅಥವಾ ಆಲೋಚಿಸುವ ಬದಲು, ದಿನನಿತ್ಯ ನಾವು ಅದೇ ಮನೆಯಲ್ಲಿ ಕಿಲೋಮೀಟರುಗಟ್ಟಲೆ ನಡೆದಾಡುತ್ತೇವೆ ಎನ್ನುವ ಸಹಜ ದೃಷ್ಟಿಯಲ್ಲಿಯೂ ನೋಡಬೇಕು.

ಹೀಗೆ ಅತ್ತಿಂದಿತ್ತ ನಡೆದಾಡುವಾಗಲೆಲ್ಲಾ ನಮ್ಮ ಕಣ್ಣಿಗೆ ಬೀಳುವ ಗೋಡೆ, ಕಂಬ, ಕಿಟಕಿ, ಬಾಗಿಲುಗಳೂ ಪ್ರಮಾಣಬದ್ಧವಾಗಿ ಮನೆಯ ಸ್ವಭಾವಕ್ಕೆ ತಕ್ಕದಾಗಿ ಇದ್ದರೆ ನಮ್ಮ ನಿತ್ಯದ ಮನೆಯೊಳಗಿನ ಓಡಾಟ ಕೂಡಾ ಉಲ್ಲಾಸಭರಿತವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT