ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲಿ ತ್ವಚೆಯ ಕಾಂತಿಗೆ ಕುಪ್ಪಮ್ಮ ಸೊಪ್ಪು

Last Updated 10 ಜುಲೈ 2014, 19:30 IST
ಅಕ್ಷರ ಗಾತ್ರ

ಮಳೆಗಾಲ ಶುರುವಾಗಿದೆ. ಮಳೆಗಾಲದಲ್ಲಿ ಶೀತ, ಉಸಿರಾಟದ ತೊಂದರೆ ಮತ್ತು ಚರ್ಮದ ಸೋಂಕು ಹೆಚ್ಚು. ಋತುವಿನ ಬದಲಾವಣೆಗೆ ತಕ್ಕಂತೆ ಆಹಾರ, ಉಡುಗೆ ತೊಡುಗೆ ಸೇರಿದಂತೆ ಒಟ್ಟಾರೆ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಹಾಗೆಯೇ ಆಯಾ ಕಾಲಕ್ಕೆ ತಕ್ಕಂತೆ ತ್ವಚೆಯ ಆರೈಕೆ ಮಾಡಬೇಕು. ಆದರೆ ಇದನ್ನು ಬಹುತೇಕರು ಮರೆತುಬಿಡುತ್ತಾರೆ. ಇನ್ನು ಕೆಲವರಿಗೆ ಕಾಲಕ್ಕೆ ತಕ್ಕಂತೆ ಚರ್ಮದ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬ ಸಮಸ್ಯೆ ಕಾಡುವುದು ಸಹಜ. ಇಂತಹವರಿಗಾಗಿ ಇಲ್ಲಿದೆ ಒಂದಿಷ್ಟು ಮಾಹಿತಿ.

ಮಳೆಗಾಲ ಎಂದರೆ ಮೊದಲು ನೆನಪಾಗುವುದು ಶೀತ, ನೆಗಡಿ, ಸೈನಸ್‌, ಉಸಿರಾಟದ ತೊಂದರೆ, ತಲೆಯಲ್ಲಿ ಕೀವು ಗುಳ್ಳೆ, ಚರ್ಮದ ಸೋಂಕು ಇತ್ಯಾದಿ. ಇವುಗಳಿಂದಾಗಿ ಮಳೆಗಾಲದಲ್ಲಿ ಚರ್ಮದ ರಕ್ಷಣೆಗೆ ಮಾರುಕಟ್ಟೆಯಲ್ಲಿ ದೊರೆಯುವ ಸೌಂದರ್ಯ ವರ್ಧಕಗಳನ್ನು ಬಳಸುವುದು ಆರೋಗ್ಯಕ್ಕೆ ಮಾರಕವಾಗಬಹುದು. ಅದಕ್ಕಾಗಿ ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳನ್ನು ಬಳಸಿ ಕೇಶ ಮತ್ತು ಚರ್ಮದ ಆರೈಕೆ ಮಾಡಿಕೊಳ್ಳಬಹುದು.

ಸೈನಸ್‌, ಬ್ರಾಂಕೈಟಿಸ್‌ ಅಲರ್ಜಿಯಿಂದ ಬಳಲುವವರು ಮಳೆಗಾಲದಲ್ಲಿ ಚರ್ಮ ಮತ್ತು ಕೇಶದ ರಕ್ಷಣೆಗಾಗಿ ಫೇಶಿಯಲ್‌, ಫೇಸ್‌ ಫ್ಯಾಕ್‌, ಹೆಡ್‌ ಮಸಾಜ್‌ ಹಾಗೂ ಹೇರ್‌ ಪ್ಯಾಕ್‌ನ ಮೊರೆಹೋಗುವುದು ಒಳಿತು ಎನ್ನುವುದು ‘ರಾಶಿ ಬ್ಯೂಟಿ ಕ್ಲಿನಿಕ್‌’ನ ಸೌಂದರ್ಯ ತಜ್ಞೆ ನೇತ್ರಾ ರಮೇಶ್‌ ಅವರ ಅಭಿಪ್ರಾಯ.

ಮಳೆಗಾಲದಲ್ಲಿ ಶೀತದಿಂದಾಗುವ ಸಮಸ್ಯೆಗಳ ಜತೆಗೆ ತ್ವಚೆ ಮತ್ತು ಕೇಶದ ರಕ್ಷಣೆಗಾಗಿ ‘ರಾಶಿ ಬ್ಯೂಟಿ ಕ್ಲಿನಿಕ್‌’ನಲ್ಲಿ ಹೊಸ ಬಗೆಯ ಫೇಶಿಯಲ್‌, ಹೆಡ್‌ ಮಸಾಜ್‌, ಮುಖ ಮತ್ತು ಕಪ್ಪಾದ ಕೇಶಕ್ಕೆ ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳ ಪ್ಯಾಕನ್ನು ಪರಿಚಯಿಸಲಾಗಿದೆ.

ಶೀತದ ನಿವಾರಣೆಗಾಗಿ ಕುಪ್ಪಿ ಅಥವಾ ಕುಪ್ಪಮ್ಮ ಸೊಪ್ಪನ್ನು ಬಳಸಿ ಫೇಶಿಯಲ್‌ ಮಾಡಲಾಗುತ್ತದೆ. ಕ್ಲೆನ್‌ಝರ್‌ ಆಗಿ ಮೊಸರನ್ನು ಬಳಸಿ, ನಂತರ ತುಳಸಿ, ಬೇವು ಅಥವಾ ಪುದೀನದ ಪುಡಿಯಲ್ಲಿ ಒಂದನ್ನು ಕಡಲೆಹಿಟ್ಟಿಗೆ ಬೆರಸಿ ಸ್ಕ್ರಬ್‌ನಂತೆ ಬಳಸಲಾಗುವುದು. ನಂತರ ರುಬ್ಬಿದ ಕುಪ್ಪಮ್ಮ ಸೊಪ್ಪನ್ನು ಎಳ್ಳಿನ ಎಣ್ಣೆಯೊಂದಿಗೆ ಬೆರೆಸಿ ಮಸಾಜ್‌ ಮಾಡಲಾಗುವುದು. ಇದರಿಂದ ಶೀತ ಕಡಿಮೆಯಾಗುವಂತೆ ಫೇಶಿಯಲ್‌ ತಯಾರಿಸಲಾಗಿದೆ.

ಅತಿ ಹೆಚ್ಚು ಶೀತದಿಂದಾಗಿ ಕಫ, ಉಬ್ಬಸ(ವೀಸಿಂಗ್‌)ನಿಂದ ಬಳಸಲುತ್ತಿರುವವರಿಗೆ ಕುಪ್ಪಮ್ಮ ಸೊಪ್ಪಿನೊಂದಿಗೆ, ಆಡು ಸೋಗೆ ಸೊಪ್ಪನ್ನು ಬೆರೆಸಿ ಫೇಶಿಯಲ್‌ ಮಾಡಲಾಗುವುದು. ನಂತರ ಹಣೆ ಹಾಗೂ ಎದೆಯ ಮೇಲೆ ಕುಪ್ಪಮ್ಮ ಮತ್ತು ಆಡು ಸೋಗೆ ಸೊಪ್ಪಿನ ಪ್ಯಾಕ್ ಹಾಕಲಾಗುವುದು. ಇದರಿಂದ ಕಫ ಕಡಿಮೆಯಾಗಿ, ತ್ವಚೆಯ ಕಾಂತಿಯೂ ಹೆಚ್ಚುತ್ತದೆ ಎಂಬ ಭರವಸೆ ಅವರದ್ದು.

ಫೇಶಿಯಲ್ ಮಾಡಿದ ನಂತರ ತ್ವಚೆಗೆ ಒಗ್ಗುವ ಫೇಸ್‌ ಪ್ಯಾಕ್‌ನ್ನು ಹಾಕಲಾಗುವುದು. ಮುಲ್ತಾನಿ ಮಿಟ್ಟಿ ಹಾಗೂ ಗಂಧದ ಪ್ಯಾಕ್‌ನಿಂದ ಚರ್ಮದ ಹೊಳಪು ಹೆಚ್ಚುತ್ತದೆ.

ಕೇಶದ ರಕ್ಷಣೆ
ಮಳೆಗಾಲದಲ್ಲಿ ವಾರಕ್ಕೊಮ್ಮೆ ತಲೆ ಸ್ನಾನ ಮಾಡುವುದು ಉತ್ತಮ. ತೇವ ಇರುವಾಗಲೇ ಕೂದಲನ್ನು ಬಾಚಬಾರದು. ಆದಷ್ಟೂ ಬಿಸಿಲಿನಲ್ಲಿ ಕೂದಲನ್ನು ಒಣಗಿಸಬೇಕು. ಅತಿಯಾಗಿ ಎಣ್ಣೆ ಬಳಸಬಾರದು. ಮದರಂಗಿಯನ್ನು ಕೂದಲಿಗೆ ಹಚ್ಚಿ, ತೊಳೆದ ಮರುದಿನ ತಲೆಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿ ಸ್ನಾನ ಮಾಡಬೇಕು.  

ತ್ವಚೆಯ ರಕ್ಷಣೆ ಹಲವು ಸೂತ್ರಗಳು
ಮಳೆಗಾಲದಲ್ಲಿ ಕೇವಲ ಶೀತವಲ್ಲದೆ ಚರ್ಮಕ್ಕೆ ಸೋಂಕು ತಗುಲುವುದು ಹೆಚ್ಚು. ಅದಕ್ಕಾಗಿ ಮುಖದ ಜತೆಗೆ ಕೈ, ಕಾಲು ಹಾಗೂ ಚರ್ಮದ ಆರೈಕೆಯೂ ಅತ್ಯಗತ್ಯ. ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಸ್ವಲ್ಪ ಆಲೀವ್‌ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿ ಮಲಗಬೇಕು. ಇದು ದೇಹದಲ್ಲಿನ ಶಾಖವನ್ನು ಕಾಪಾಡುತ್ತದೆ.

ಕಡಲೆಹಿಟ್ಟು ಸೋಪಿನಂತೆ ಕಾರ್ಯ ನಿರ್ವಹಿಸುತ್ತದೆ. ಇದನ್ನು ಬೆಚ್ಚಗಿನ ಅಥವಾ ತಣ್ಣನೆಯ ನೀರಿನಲ್ಲಿ ತೊಳೆಯಬಹುದು. ರೋಗ ನಿರೋಧಕ ಶಕ್ತಿಗಾಗಿ ಕಡಲೆ ಹಿಟ್ಟಿನೊಂದಿಗೆ ತುಳಸಿ ದಳದ ಪುಡಿಯನ್ನು ಬಳಸಬಹುದು.

ಮಳೆಗಾಲದಲ್ಲಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದನ್ನು ಆದಷ್ಟೂ ಕಡಿಮೆ ಮಾಡಬೇಕು. ಮಳೆಯಲ್ಲಿ ನೆನೆದಾಗ ಸ್ನಾನ ಮಾಡುವ ಮುನ್ನ ಒಂದು ಮಗ್‌ ನೀರಿಗೆ ಕೊಂಚ ಆಲಿವ್ ಆಯಿಲ್‌ ಬೆರೆಸಿ ಬಳಸಬೇಕು. ಇದರಿಂದ ಶೀತ ಮತ್ತು ಜ್ವರ ಕಡಿಮೆಯಾಗುತ್ತದೆ.
ಹೆಬ್ಬೆರಳು ಮತ್ತು ಪಾದಕ್ಕೆ ಕೊಬ್ಬರಿ ಎಣ್ಣೆಯಲ್ಲಿ ಅರಿಶಿಣ ಬೆರೆಸಿ ಹಚ್ಚಿದರೆ ಶೀತ ಆಗುವುದಿಲ್ಲ. ಜತೆಗೆ ಪಾದವು ಒಡೆಯುವುದಿಲ್ಲ. ಜಾಜಿ ಮಲ್ಲಿಗೆ ಎಲೆ, ಚಿಟಿಕೆ ಅರಿಶಿಣ ಮತ್ತು ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಬೆರಳುಗಳ ಮಧ್ಯೆ ಆಗುವ ಕೆಸರು ಹುಣ್ಣು ಕಡಿಮೆಯಾಗುತ್ತದೆ. ಯಾವುದೇ ಕಾರಣಕ್ಕೂ ಸೋಪನ್ನು ಬಳಸಬಾರದು.

ಪುದಿನ, ತುಳಸಿ ಎಳೆಯ ಪುಡಿಯನ್ನು ಕಡಲೆಹಿಟ್ಟಿನ ಜತೆ ಬೆರೆಸಿ ಬಳಸುವುದರಿಂದ ಸೊಳ್ಳೆ ಕಡಿತದಿಂದ ಆಗುವ ಗುಳ್ಳೆ ಮತ್ತು ಕಲೆ ಮಾಯವಾಗುತ್ತದೆ. ಚರ್ಮದ ಮೇಲಿನ ರೋಮಗಳಲ್ಲಿ ತೇವಾಂಶ ಇರದಂತೆ ನೋಡಿಕೊಂಡರೆ ತ್ವಚೆಯ ಕಾಂತಿಯನ್ನು ಕಾಪಾಡಿಕೊಳ್ಳಬಹುದು.
ಸೌಂದರ್ಯ ತಜ್ಞೆ ನೇತ್ರಾ ರಮೇಶ್‌ ಸಂಪರ್ಕ: 99808 97029.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT