ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾದಾಯಿ: ತೀವ್ರಗೊಂಡ ರೈತ ಹೋರಾಟ

Last Updated 2 ಸೆಪ್ಟೆಂಬರ್ 2015, 19:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೇಶವ್ಯಾಪಿ ಮುಷ್ಕರದ ಬಿಸಿಯ ನಡುವೆಯೇ ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮುಂಬೈ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳಾದ ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಬುಧವಾರ ಹೋರಾಟ ತೀವ್ರಗೊಂಡಿದೆ.

ಮುಷ್ಕರದ ಜೊತೆಗೆ ಮಹಾದಾಯಿ ಹೋರಾಟವನ್ನು ಮುಖ್ಯವಾಗಿಟ್ಟುಕೊಂಡು ಬಾಗಲಕೋಟೆ ನಗರ ಹಾಗೂ ಗದಗ ಜಿಲ್ಲೆಯ ಗಜೇಂದ್ರಗಡ ಹಾಗೂ ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ಬಂದ್ ಆಚರಿಸಲಾಯಿತು.

ಹೋರಾಟಕ್ಕೆ ಬೆಂಬಲ ಸೂಚಿಸಿ ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಅವರು ತಹಶೀಲ್ದಾರ್‌ಗೆ ಮನವಿ ಅರ್ಪಿಸಿದರು. ಗುರುವಾರದಿಂದ ಆರಂಭವಾಗಲಿರುವ ಕರ್ನಾಟಕ ಪ್ರೀಮಿಯರ್ ಲೀಗ್‌ನ (ಕೆಪಿಎಲ್) ಅಂಗವಾಗಿ ಅವರು ಇಲ್ಲಿಗೆ ಬಂದಿದ್ದರು. ಇಲ್ಲಿನ ರಾಣಿಚನ್ನಮ್ಮ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಡೆಸುತ್ತಿರುವ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ವಿವಿಧ ಮಠಾಧೀಶರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

ಬಾಗಲಕೋಟೆ ಬಂದ್‌ಗೆ ಚೇಂಬರ್ ಆಫ್ ಕಾಮರ್ಸ್‌, ವರ್ತಕರ ಸಂಘ, ಕಿರಾಣಿ ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ ಬೆಂಬಲ ಸೂಚಿಸಿದ್ದವು. ನಗರದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಎಂ.ಜಿ. ರಸ್ತೆ, ಪೊಲೀಸ್ ಚೌಕಿ, ವಲ್ಲಭಭಾಯಿ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಬಸವೇಶ್ವರ ವೃತ್ತದಲ್ಲಿ ಸಭೆಯಾಗಿ ಮಾರ್ಪಟ್ಟಿತು.

ಗದಗ ಜಿಲ್ಲೆ ನರಗುಂದದಲ್ಲಿ ನಡೆದ ಸತತ 48ನೇ ದಿನದ ಹೋರಾಟದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ ಪಾಲ್ಗೊಂಡು, ಶಾಂತಿಯುತ ಹೋರಾಟ ನಡೆಸುವಂತೆ ಹಾಗೂ ರೈತ ಮಹಿಳೆಯರು ಪಾಲ್ಗೊಂಡು ಹೋರಾಟಕ್ಕೆ ಶಕ್ತಿ ತುಂಬುವಂತೆ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟದ ಸಿಬ್ಬಂದಿ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಮಂಗಳವಾರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ರೈತ ಸೇನೆ ಮುಖಂಡರು ಇಂದು ಬಂದಿರಲಿಲ್ಲ. ಗಜೇಂದ್ರಗಡ ಪಟ್ಟಣ ಬಂದ್’ ಸಂಪೂರ್ಣ ಯಶಸ್ವಿಯಾಯಿತು.

ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಬಳಿಯ ಎಂ.ಕೆ. ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 4 ಅನ್ನು ಬಂದ್ ಮಾಡಿ ಗ್ರಾಮಸ್ಥರು ಪ್ರತಿಭಟಿಸಿದರು. ಗ್ರಾಮದ ಕಲ್ಮೇಶ್ವರ ದೇವಸ್ಥಾನದದಿಂದ ಮೆರವಣಿಗೆ ನಡೆಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಹೆದ್ದಾರಿಗೆ ಧಾವಿಸಿದರು. ಅಲ್ಲಿ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಅಂಗಡಿ–ಮುಂಗಟ್ಟು, ಶಾಲೆ, ಕಾಲೇಜು, ಖಾಸಗಿ ಹಣಕಾಸು ಸಂಸ್ಥೆಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಈ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು. ಬೈಲಹೊಂಗಲ ಮತ್ತು ಖಾನಾಪುರ ಸಂಪರ್ಕಿಸುವ ರಸ್ತೆ ಕೂಡ ಬಂದ್ ಆಗಿದ್ದರಿಂದ ವಾಹನ ಸವಾರರು ಸಂಕಷ್ಟ ಅನುಭವಿಸಿದರು.

ಬೈಲಹೊಂಗಲ ಬಂದ್ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಬಸ್, ಲಾರಿ ಮತ್ತು ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ರೈತ ಮುಖಂಡ ಬಾಬಾಗೌಡ ಪಾಟೀಲ, ಶಾಸಕ ಡಾ.ವಿಶ್ವನಾಥ ಪಾಟೀಲ ನೇತೃತ್ವದಲ್ಲಿ ಬಂದ್‌ ಆಚರಿಸಲಾಯಿತು. ಅಂಗಡಿ–ಮುಂಗಟ್ಟುಗಳು ಮುಚ್ಚಿದ್ದವು. ಶಾಲೆ, ಕಾಲೇಜು, ಪೆಟ್ರೋಲ್ ಬಂಕ್, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿಲ್ಲ.  ಬಂದ್ ಇದ್ದರೂ ಕಾರ್ಯನಿರ್ವಹಿಸುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಎಕ್ಸಿಸ್ ಬ್ಯಾಂಕ್‌ಗೆ ಪ್ರತಿಭಟನಾಕಾರರು ಕಲ್ಲು ತೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT