ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಾರಿ ಮಧುಮೇಹ

Last Updated 13 ನವೆಂಬರ್ 2015, 19:38 IST
ಅಕ್ಷರ ಗಾತ್ರ

ವೈದ್ಯಕೀಯ ವಿಜ್ಞಾನದಲ್ಲಿ ಹಲವು ಆವಿಷ್ಕಾರಗಳಾಗಿ ಹಲವು ಸಾಂಕ್ರಾಮಿಕ ರೋಗಗಳನ್ನು ಜಯಿಸುತ್ತಿದ್ದೇವೆಂದು ಹೇಳಿಕೊಳ್ಳುತ್ತಿದ್ದೇವೆ. ಆದರೂ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಮುಂತಾದವುಗಳು  ಇನ್ನೂ ಮಾನವ ಸ್ವಾಸ್ಥ್ಯಕ್ಕೆ ಬಹು ದೊಡ್ಡ ಸವಾಲಾಗಿ ನಿಂತಿವೆ.

ವಿಶ್ವ ಆರೋಗ್ಯ ಸಂಸ್ಥೆಯು ಮಧುಮೇಹ ಒಂದು ಮಹಾಮಾರಿ ಎಂದು ಘೋಷಿಸಿದೆ. ವಿಶ್ವದಲ್ಲಿ ಪ್ರತಿ 10ನೇ ಒಬ್ಬ ಡಯಾಬಿಟಿಸ್‌ನಿಂದ ಮರಣ ಹೊಂದುತ್ತಿದ್ದಾನೆ. ವಿಶ್ವದಲ್ಲಿ ಪ್ರತಿ 5ನೇ ಡಯಾಬಿಟಿಸ್ ರೋಗಿ ಭಾರತೀಯನೇ ಆಗಿರುತ್ತಾನೆ. ಮಧುಮೇಹ ವಿಶ್ವವನ್ನೇ ಸಾಂಕ್ರಾಮಿಕ ಜಾಡ್ಯಕ್ಕಿಂತಲೂ ಹೆಚ್ಚು ಭಯಂಕರವಾಗಿ ಕಾಡುತ್ತಿದೆ. ಅದರಲ್ಲೂ ಇತ್ತೀಚೆಗಂತೂ ಚಿಕ್ಕ ಮಕ್ಕಳನ್ನು ಹಾಗೂ ಯುವ ಜನರನ್ನೂ  ಕಾಡುತ್ತಿದೆ. ಸದ್ಯದಲ್ಲೇ ಭಾರತ ಮಧುಮೇಹಕ್ಕೆ ಮತ್ತು ಹೃದ್ರೋಗಗಳ ರಾಜಧಾನಿಯಾಗುತ್ತಿದೆ. 

1991ರಿಂದಲೂ ವಿಶ್ವ ಆರೋಗ್ಯ ಸಂಸ್ಥೆ, ಆಂತರರಾಷ್ಟ್ರೀಯ ಡಯಾಬಿಟಿಸ್ ಫೆಡರೆಷನ್‌ನ ಸಹಾಯದೊಂದಿಗೆ ಇಡೀ ವಿಶ್ವದಾದ್ಯಂತ ವಿಶ್ವ ಮಧುಮೇಹ ದಿನಾಚರಣೆಯನ್ನು ನವಂಬರ್ 14ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ದಿನ ಮಧುಮೇಹ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಉಂಟು ಮಾಡಿದ, ಇನ್ಸುಲಿನ್ ಸಂಶೋಧನೆಯನ್ನು ಬೆಸ್ಟ್ ಜೊತೆ ಸೇರಿ ಮಾಡಿದ, ಸರ್ ಫೆಡ್ರಿಕ್ ಬ್ಯಾಂಟಿಂಗ್‌ನ ಜನ್ಮ ದಿನವೂ ಆಗಿರುವುದು ಅವರಿಗೆ ಸಂದ ಗೌರವ.

2009ರಿಂದ 2013ರವರೆಗೆ ಮಧುಮೇಹ ದಿನಾಚರಣೆಯ ಧ್ಯೇಯ ಮಧುಮೇಹದ ಬಗ್ಗೆ ಶಿಕ್ಷಣ ಹಾಗೂ ಅದನ್ನು ತಡೆಗಟ್ಟುವ ಬಗೆಗಿತ್ತು. ಆದರೆ 2014ನೇ ಇಸವಿಯಿಂದ ಈ ದಿನಾಚರಣೆಯಲ್ಲಿ ಜೀವನ ಶೈಲಿ ಬದಲಾವಣೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಮಧುಮೇಹ ಸಂಸ್ಥೆಯ ಅಧ್ಯಕ್ಷರಾದ ಸಿ.ಬಿ. ವಾಧ್ವಾ ಅವರು ಮಧುಮೇಹ ಚಿಕಿತ್ಸೆ (ಹಾಗೆಯೇ ಹೃದ್ರೋಗ ಮತ್ತು ಕ್ಯಾನ್ಸರ್ ಕೂಡ) ಪ್ರಾರಂಭವಾಗುವುದು ಆಸ್ಪತ್ರೆಗಳಲ್ಲಿ ಅಲ್ಲ ಬದಲು ನಮ್ಮ ಅಡುಗೆ ಮನೆಗಳಲ್ಲಿ ಎಂದು ಹೇಳುತ್ತಾರೆ. ಆದ್ದರಿಂದ ಹೆಚ್ಚು ಒತ್ತು ಕೊಡಬೇಕಾದದ್ದು ಆಹಾರದ ಬಗ್ಗೆ.

ಯಾಕೆಂದರೆ ಅದೇ ಮಧುಮೇಹದ ಪ್ರಾಥಮಿಕ ನಿಯಂತ್ರಣದ ಅಳತೆಗೋಲಾಗಿದೆ. ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವ ಹಾಗೆ ಮಾನವನ ಬಹುಪಾಲು ಅಸ್ವಸ್ಥತೆಗೆ ಅವರ ತಪ್ಪು ಆಹಾರ ಕ್ರಮವೇ ಕಾರಣ. 2015ರ ಮಧುಮೇಹ ದಿನಾಚರಣೆಯ ಘೋಷವಾಕ್ಯವು ಆಹಾರದ ಬಗ್ಗೆಯೇ ಆಗಿದೆ ಅಂದರೆ, ಮುಂದಿನ ಬದಲಾವಣೆಗೆ ಇಂದೇ ಕಾರ್ಯತತ್ಪರರಾಗೋಣ, ಪ್ರತಿ ದಿನವನ್ನು ಆರೋಗ್ಯಕರ ಬೆಳಗಿನ ಉಪಾಹಾರ, (ಬ್ರೇಕ್‌ಫಾಸ್ಟ್)ನೊಂದಿಗೆ ಪ್ರಾರಂಭಿಸಿ ಎನ್ನುವುದು.

ಬೆಳಗಿನ ಉಪಾಹಾರವೆಂದರೆ ಸಾಮಾನ್ಯವಾಗಿ ರಾತ್ರಿ ಊಟಕ್ಕೂ ಬೆಳಗಿನ ತಿಂಡಿಗೂ ಕನಿಷ್ಠ 12ಗಂಟೆ ಅಂತರವಿರುವುದರಿಂದ ಇದನ್ನು ಬ್ರೇಕ್‌ದ ಫಾಸ್ಟ್ ಅಥವಾ ಉಪವಾಸ ಅಂತ್ಯಗೊಳಿಸುವುದು ಎನ್ನುತ್ತಾರೆ. ರಾತ್ರಿ ಇಡೀ ವಿಶ್ರಾಂತಿ ಸ್ಥಿತಿಯಲ್ಲಿರುವಾಗ, ಶರೀರದ ಜೀವಕೋಶಗಳು ದುರಸ್ತಿಯಾಗುತ್ತಿರುವಾಗ ಎಲ್ಲಾ ಜೀವಕ್ರಿಯೆಗಳು ನಿಧಾನವಾಗಿ ಸಾಗುತ್ತಿರುತ್ತವೆ.

ಬೆಳಗಾದಾಗ ಜೀವಕ್ರಿಯೆಗಳೆಲ್ಲ ಉತ್ತೇಜನಗೊಳ್ಳಲು ಉತ್ತಮ ಪೌಷ್ಟಿಕ ಆಹಾರ ಅಂದರೆ ಬ್ರೇಕ್‌ಫಾಸ್ಟ್ ಬೇಕೇ ಬೇಕಲ್ಲವೇ? ಹೆಚ್ಚಿನವರೆಗೆ ಬೆಳಗಿನ ಉಪಹಾರ ಮುಖ್ಯವಲ್ಲ ಅನಿಸಬಹುದು.ಇನ್ನೂ ಹೆಚ್ಚಿನ ಸಂದರ್ಭಗಳಲ್ಲಿ ಸಮಯವೇ ಇಲ್ಲವೆಂದಲೋ, ಕೆಲಸ ಕಾರ್ಯ ಒತ್ತಡದಿಂದಲೋ,ಇಲ್ಲವೇ ಉಪವಾಸ ಮಾಡಿ ತೂಕ ಕಳೆದುಕೊಂಡು ತೆಳ್ಳಗೆ ಬಳುಕುತ್ತೇವೆಂಬ ಭ್ರಮೆಯಿಂದಲೋ ಬೆಳಗಿನ ತಿಂಡಿಯನ್ನೇ ತಿನ್ನುವುದಿಲ್ಲ.

ಮಧ್ಯಾಹ್ನ ಒಟ್ಟಿಗೆ ಒಂದೇ ಊಟ ಮಾಡುತ್ತೇವೆನ್ನುವವರೂ ಇದ್ದಾರೆ. ಇದರ ದೀರ್ಘಕಾಲದ ಪರಿಣಾಮವಾಗಿ ಬೊಜ್ಜು ಹಾಗೂ ಮಧುಮೇಹದ ಸಂಭವ ಹೆಚ್ಚಾಗುತ್ತದೆ. ಅದರ ಬದಲು ಆರೋಗ್ಯಪೂರ್ಣ ಬೆಳಗಿನ ಉಪಾಹಾರದಿಂದ ಹಸಿವನ್ನು ಇಂಗಿಸಿದಾಗ ಉತ್ತಮ, ಪೋಷಕಾಂಶಗಳ ಪೂರೈಕೆಗಾಗಿ ಜೀವಕ್ರಿಯೆಗಳೆಲ್ಲಾ ತ್ವರಿತವಾಗಿ ಸುಲಲಿತವಾಗಿ ನಡೆದು ದಿನವಿಡೀ ಉತ್ಸಾಹವಿರುವಂತೆ ಮಾಡುತ್ತದೆ. ಪದೇ ಪದೇ ಬಾಯಾಡಿಸಬೇಕೆಂಬ ಚಪಲವೂ ಕಡಿಮೆಯಾಗುತ್ತದೆ. ಆದ್ದರಿಂದ ಬೆಳಗಿನ ತಿಂಡಿ ನಿಯಮಿತವಾಗಿದ್ದರೆ, ಪೌಷ್ಠಿಕವಾಗಿದ್ದರೆ ದೀರ್ಘ ಕಾಲದ ಪರಿಣಾಮವಾಗಿ ತೂಕ ಇಳಿಸುವುದು ಸುಲಭವಾಗುತ್ತದೆ ಎನ್ನುವುದು ಆಶ್ಚರ್ಯವೆನಿಸಿದರೂ ಸತ್ಯ.

ನಮ್ಮ ಬೆಳಗಿನ ಉಪಾಹಾರ ಹೇಗಿರಬೇಕು?
ಬೆಳಗಿನ ತಿಂಡಿಯಲ್ಲಿ ಕಡಿಮೆ ಪ್ರಮಾಣದ ಜಿಡ್ಡು ಹಾಗೂ ಕೊಬ್ಬಿನ ಪದಾರ್ಥಗಳಿದ್ದು, ಹೆಚ್ಚು ಹಣ್ಣುಗಳು ಮೊಳಕೆ ಕಾಳುಗಳು, ರಾಗಿ, ಓಟ್ಸ್, ಹುರುಳಿ ಕಾಳು, ಅವರೆ ಜಾತಿಯ ಕಾಳುಗಳು, ಅಗಸೆಬೀಜ ಇತರೆ ಬೇಳೆ ಕಾಳುಗಳನ್ನೊಳಗೊಂಡ ಚಟ್ನಿ, ಪಲ್ಯ, ಸಾಂಬಾರ್ ಮಾಮೂಲಿ ತಿಂಡಿಗಳಾದ ಇಡ್ಲಿ, ದೋಸೆ, ಚಪಾತಿ ಇತ್ಯಾದಿಗಳ ಜೊತೆ ಇರಲಿ, ಜೊತೆಗೆ ಸ್ವಲ್ಪ ಮೊಸರು ಸೇವಿಸಬಹುದು. ಮೊಟ್ಟೆ ಸೇವಿಸುವುದಾದರೆ ಬೇಯಿಸಿದ ಒಂದು ಮೊಟ್ಟೆ ಸೇವಿಸಬಹುದು.

ಬಾಳೆಹಣ್ಣು ಸೇವಿಸುವುದಾದರೆ ಪೂರ್ತಿ ಹಣ್ಣಾಗದೆ ಇರುವ ಬಾಳೆ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಿರುವುದರಿಂದ ಒಂದು ಹಣ್ಣು ತಿನ್ನಬಹುದು. ದ್ರಾಕ್ಷಿಹಣ್ಣು  ಸ್ವಲ್ಪ(10-15) ತಿನ್ನಬಹುದು. ಕಲ್ಲಂಗಡಿ ಹಣ್ಣು, ಪಪ್ಪಾಯ ಚೆನ್ನಾಗಿ ಸೇವಿಸಬಹುದು. ದಾಳಿಂಬೆ ಹಣ್ಣು ಅರ್ಧದಷ್ಟು ಸೇವಿಸಬಹುದು. ಮಾವಿನಹಣ್ಣು, ಸಪೋಟ, ಆಲೂಗಡ್ಡೆ, ಬಿಳಿಅಕ್ಕಿ ಸೇವನೆ ನಿಯಂತ್ರಣದಲ್ಲಿರಲಿ ಆದರೆ ಹಸಿರು ಸೊಪ್ಪು ತರಕಾರಿಗಳ ಸೇವನೆಗೆ ಯಾವುದೇ ಅಡೆತಡೆ ಇಲ್ಲ.

ಬೆಳಗಿನ ಉಪಹಾರಕ್ಕೆ ಉತ್ತಮ ಪೌಷ್ಟಿಕಾಂಶವುಳ್ಳ ಕಡಿಮೆ ಗ್ಲೈಸೀಮಿಕ್ ಇಂಡೆಕ್ಸ್ ಇರುವ ಆಹಾರದಿಂದ ಪ್ರಾರಂಭಿಸಿ (ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಧಾನಕ್ಕೆ ಏರಿಸುವ ಆಹಾರಗಳು) ನಂತರವೂ ಕ್ರಮಬಧ್ಧ ಆಹಾರ ಸೇವನೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಅದರಿಂದ ಮೂತ್ರಪಿಂಡ ಕಣ್ಣು, ನರ, ಮೆದುಳು, ಕಾಲುಗಳಲ್ಲಿ ಆಗುವ ಹುಣ್ಣುಗಳು, ಏರುರಕ್ತದೊತ್ತಡ ಮುಂತಾದ ತೊಂದರೆಗಳನ್ನು ತಪ್ಪಿಸಬಹುದು.

ಇಲ್ಲಿ ಮುಖ್ಯವಾಗಿ ಚರ್ಚಿಸಬೇಕಾದ ಅಂಶವೆಂದರೆ ಈ ಆಹಾರ ಪದ್ಧತಿ, ಪಥ್ಯೋಪಚಾರದ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿಗಳು ಲಭ್ಯವಾದರೂ, ಜೀವನ ಶೈಲಿ ಬದಲಾಯಿಸಿಕೊಳ್ಳಬೇಕೆಂಬ ಅರಿವು ಇದ್ದರೂ ಹೆಚ್ಚಿನವರಿಗೆ ಯಾಕೆ ಅದು ಸಾಧ್ಯವಾಗುತ್ತಿಲ್ಲ ಎನ್ನುವುದು?
ಭತೃಹರಿಯ ನೀತಿ ಶತಕ ಹೇಳುವಂತೆ

ಆಹಾರನಿದ್ರಾ ಭಯ ಮೈಥುನಾಂಚ
ಸಾಮಾನ್ಯವೇತ್ ಪಶುಭಿಃರ್ನರಾಣಂ,
ಧರ್ಮೋಹಿತೇಶಾಂ ಅಧಿಕೋವಿಶೇಷಃ
ಧರ್ಮೇಣಹೀನಃ ಪಶುಭಿಃಸಮಾನಃ


ಅಂದರೆ ಆಹಾರ, ನಿದ್ರೆ, ಭಯ, ಸಂಭೋಗ ಮನುಷ್ಯ ಹಾಗೂ ಪ್ರಾಣಿಗೆ ಒಂದೇ ಆಗಿದೆ. ಬೇಕು ಬೇಡಗಳ ವಿವೇಚನಾ ಶಕ್ತಿಯೇ ಮನುಷ್ಯ ಮತ್ತು ಪ್ರಾಣಿಗಳಿಗಿರುವ ವ್ಯತ್ಯಾಸ. ನಮ್ಮ ಶರೀರವು ಹೊರಗೆ ಕಾಣುವ ಸ್ಥೂಲ ಶರೀರವಷ್ಟೇ ಅಲ್ಲ, ಅದನ್ನು ಸೂಕ್ಷ್ಮವಾಗಿ ಪಂಚಕೋಶಗಳ ಮೂಲಕ ಅರ್ಥೈಸಬೇಕು. ನಾವು ಸದಾ ವಿಚಾರಮಗ್ನರಾಗಿಯೇ ಇರುತ್ತೇವೆ ಎನ್ನುವುದು ನಮ್ಮ ಬುದ್ಧಿ ಶಕ್ತಿ ಅಥವಾ ವಿಜ್ಞಾನಮಯ ಕೋಶ. ನಮಗೆಲ್ಲರಿಗೂ ಎರಡು ರೀತಿಯ ಮನಸ್ಸಿರುತ್ತದೆ.

ಒಂದು ಕೆಳಸ್ತರದ ಸದಾ ಏನನ್ನಾದಾರೂ ಬಯಸುತ್ತಿರುವ ಮನಸ್ಸು, ಸದಾ ಒಂದಿಲ್ಲೊಂದು ಆಕಾಂಕ್ಷೆ, ಅದು ಬೇಕು ಇದು ಬೇಕು ಎಲ್ಲವೂ ಬೇಕೆಂದು ನಮ್ಮ ಮನೋಮಯ ಕೋಶವನ್ನು ಬದಲಾಯಿಸುತ್ತಲೇ ಇರುವಂಥದ್ದು. ಇನ್ನೊಂದು ಸ್ತರದ ಮನಸ್ಸು ಆಳವಾಗಿ ಯಾವುದು ಸರಿ ಯಾವುದು ತಪ್ಪು ಎಂದು ವಿವೇಚಿಸುವ ಮನಸ್ಸು. ಅದು ವಿಜ್ಞಾನಮಯ ಕೋಶದ ಸಾಂಗತ್ಯದಲ್ಲಿರುವಂಥದ್ದು. ಈ ಸ್ತರದಲ್ಲಿ ಪ್ರತಿಯೊಬ್ಬರೂ ಪ್ರಕೃತಿಗನುಸಾರವಾಗಿ ನಡೆದುಕೊಂಡರೆ ಕಾಯಿಲೆ ಮುಕ್ತರಾಗಿರುತ್ತಾರೆ. ಸಿಹಿಯನ್ನು ತಿನ್ನು, ಯಾವುದೇ ಆಹಾರವನ್ನು ಬೇಕಾದ ಹಾಗೆ ಸೇವಿಸು, ಎಂದು ನಮ್ಮ ಆಸೆಗಳು ಮನಸ್ಸಿನಲ್ಲಿ ಉದ್ಭವಿಸಿ ಭಾವೋದ್ವೇಗಗಳೇ ಅವುಗಳನ್ನು ನಿಯಂತ್ರಿಸುತ್ತವೆ.

ನಮ್ಮ ಬುದ್ಧಿಗೆ ಅಂದರೆ ವಿಜ್ಞಾನಮಯ ಕೋಶಕ್ಕೆ ಅತಿ ಸಿಹಿಯಿಂದಾಗುವ, ಜಂಕ್‌ಫುಡ್‌ಗಳಿಂದಾಗುವ ದುಷ್ಪರಿಣಾಮಗಳು ಗೊತ್ತಿದ್ದರೂ ಭಾವೋದ್ವೇಗಗಳ ತೀವ್ರತೆಯಿಂದ ಆಸೆಯನ್ನು ಹತ್ತಿಕ್ಕಲು ಸಾಧ್ಯವಾಗದೇ ಇವು ನಮ್ಮ ಪ್ರಾಣಮಯ ಕೋಶ ಹಾಗೂ ನಂತರ ಅನ್ನಮಯ ಕೋಶಗಳ ಮೇಲೆ ಪರಿಣಾಮ ಬೀರಿ, ಜೀವ ಕಣಗಳ ಸ್ತರದಲ್ಲಿ ಊತದ ರೀತಿಯಲ್ಲಿ ಕಾಣಿಸಿಕೊಂಡು, ಇದರ ಪರಿಣಾಮವಾಗಿ ಜೀವ ಕೋಶಗಳ ತಡೆಗೋಡೆಯಲ್ಲಿ ಸಮಸ್ಯೆಯನ್ನುಂಟುಮಾಡುತ್ತದೆ. ಇನ್ಸುಲಿನ್ ಪ್ರತಿರೋಧವನ್ನುಂಟುಮಾಡಿ, ಡಯಾಬಿಟಿಸ್ ವ್ಯಾಧಿಗೆ ಕಾರಣವಾಗುತ್ತದೆ.

ಆದ್ದರಿಂದ ನಾವು ನಮ್ಮ ಭಾವೋದ್ವೇಗಗಳ ತೀವ್ರತೆಯನ್ನು ಹಿಡಿತದಲ್ಲಿಟ್ಟುಕೊಂಡರೆ ಮೇಲ್ಮಟ್ಟದ ಉತ್ತಮ ಸಕಾರಾತ್ಮಕ ಯೋಚನೆಗಳಿಂದ ಅರಿವನ್ನು ಹೆಚ್ಚಿಸಿ, ಪ್ರಭುತ್ವವನ್ನು ವೃದ್ಧಿಸಿಕೊಂಡು ಆಹಾರ ಸೇವನೆಯನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ರಕ್ತದಲ್ಲಿ ಗ್ಲೂಕೋಸ್‌ ಮಟ್ಟವನ್ನು ಹದವಾಗಿ ಕಾಯ್ದುಕೊಳ್ಳಲು ಸಾಧ್ಯವಿದೆ ಮತ್ತು ಮಧುಮೇಹ ನಿಯಂತ್ರಣವಿಲ್ಲದೆ ಬೇರೆ ಬೇರೆ ಅಂಗಗಳ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಯಬಹುದು. ತಜ್ಞರಿಂದ ಕಲಿತು ನಿಯಮಿತವಾದ ಯೋಗ, ಧ್ಯಾನ, ಪ್ರಾಣಾಯಾಮಗಳಿಂದ ಕೂಡಿದ, ಕ್ರಮಬದ್ಧ ಆಹಾರ ಸೇವನೆ, ಉತ್ತಮ ದೈಹಿಕ ಚಟುವಟಿಕೆಗಳಿಂದ ಭಾವೋದ್ವೇಗಗಳನ್ನು ಕಡಿಮೆ ಮಾಡಿಕೊಂಡರೆ ಖಂಡಿತವಾಗಿಯೂ ಮಧುಮೇಹ ನಿಯಂತ್ರಣ ಸಾಧ್ಯವಿದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT