ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖದ ಪಾರ್ಶ್ವವಾಯು; ಆತಂಕ ಬೇಡ

Last Updated 28 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ರಾತ್ರಿ ಆರಾಮಾಗಿ ಮಲಗಿದ್ದವನಿಗೆ ಬೆಳಿಗ್ಗೆ ಎದ್ದು ನೋಡಿದರೆ ಮುಖದಲ್ಲಿ ಏನೋ ವಿಚಿತ್ರ ಅನುಭವ ಹಾಗೂ ಮನಸ್ಸಿನಲ್ಲಿ ಆತಂಕ. ಕಾರಣ ಮುಖದ ಒಂದು ಪಾರ್ಶ್ವ ಜೋಲು ಬಿದ್ದಿದೆ, ರೆಪ್ಪೆ ಮುಚ್ಚಲು ಆಗುತ್ತಿಲ್ಲ. ನಾಲಿಗೆ ಹೊರಳುತ್ತಿಲ್ಲ, ಮಾತು ಕಷ್ಟವಾಗುತ್ತಿದೆ. ಒಂದು ಕ್ಷಣ ಕುಸಿದು ಹೋದ. ಏನಪ್ಪಾ ಮಾಡಲಿ ಹೊರಗೆ ಹೇಗೆ ಮುಖ ತೋರಿಸುವುದು ಜನರಿಗೆ ಸ್ನೇಹಿತರಿಗೆ ಬಂಧುಗಳಿಗೆ ಎಂದು, ಬಂಧುಗಳಿಗೆ ಪೋನ್ ಮಾಡಿದರೆ ತರಾವರಿ ಸಲಹೆಗಳು. ಒಬ್ಬಬರಿಂದ ಒಂದೊಂದು ರೀತಿಯ ಮಾತುಗಳು. ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು ಕೆಲವರಂತು ನಿನಗೆ ಲಕ್ವ ಹೊಡೆದಿದೆ, ನಿನ್ನ ಮುಖ ಇನ್ನು ಇಷ್ಟೆ. ಮುಂದೆ ಸರಿಹೋಗದು ಎಂದು. ಇಂತಹ ಘಟನೆಗಳು ನಮ್ಮ ಸಮಾಜದಲ್ಲಿ ಸರ್ವೇಸಾಮಾನ್ಯ.

ಹಾಗಾದರೆ ಮುಖದ ಪಾರ್ಶ್ವವಾಯು ಎಂದರೇನು ಲಕ್ವಕ್ಕೂ (ಮೆದುಳಿನ ಆಘಾತಕ್ಕೂ) ಹಾಗೂ ಮುಖದ ಪಾರ್ಶ್ವವಾಯುವಿಗೂ ಸಂಬಂಧ ಏನು? ಇಲ್ಲಿದೆ ಸಮಗ್ರ ಮಾಹಿತಿ.

Bell’s palsy  (ಮುಖದಪಾರ್ಶ್ವವಾಯು) ಎಂದರೇನು?
ಬೆಲ್ಸ್‌ಪಾಲ್ಸಿ (ಮುಖದ ಪಾರ್ಶ್ವವಾಯು) ಅಥವಾ ಮುಖದ ಒಂದು ಭಾಗ (ಎಡ ಅಥವಾ ಬಲ ಭಾಗದ) ಮಾಂಸ ಖಂಡಗಳು ಬಲ ಕಳೆದುಕೊಳುವಿಕೆ ಎಂದರ್ಥ.

ಇಲ್ಲಿ ಮುಖವನ್ನು ನಿಯಂತ್ರಣ ಮಾಡುವ ನರಗಳು ತಾತ್ಕಾಲಿಕವಾಗಿ ಕೆಲಸ ಮಾಡುವ ಶಕ್ತಿ ಕಳೆದು ಕೊಳ್ಳುವುದರಿಂದ ಮಾಂಸಖಂಡಗಳು ಬಲಹೀನವಾಗಿ ಮುಖವು ಒಂದುಕಡೆ ಜೊಲು ಬೀಳುವುದು. ಇದಲ್ಲದೆ ಬಲಹೀನವಾದ ಭಾಗದ ಮುಖಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸ ಕಾರ್ಯಗಳು ಏರುಪೇರಾಗುವುವು. ಇದು ತತಕ್ಷಣದಲ್ಲಿ (ರಾತ್ರಿ ಬೆಳಗಾಗುವುದರಲ್ಲಿ) ನೆಡೆಯುವಂತಹ ಪ್ರಕ್ರಿಯೆ. ಆದರೆ ಮತ್ತೆ ಕೆಲವರು ವಾರ ಅಥವಾ ಒಂದೆರಡು ತಿಂಗಳುಗಳಲ್ಲಿ ಗುಣಹೊಂದುವರು.

ಬೆಲ್ಸ್‌ಪಾಲ್ಸಿ ಇದು ಲಕ್ವ ಅಥವಾ ಮೆದುಳಿನ ಆಘಾತದ ಪರಿಣಾಮವಲ್ಲ. ಆದರೆ ಮೆದುಳಿನ ಆಘಾತ(ಲಕ್ವದಿಂದ)ವಾದಾಗ ದೇಹದ ಒಂದು ಪಾರ್ಶ್ವಭಾಗ (ಮುಖದಿಂದ ಕಾಲಿನವರೆಗೆ) ಬಲ ಕಳೆದುಕೊಳ್ಳುವುದರಿಂದ ನಮ್ಮಲ್ಲಿ ಜನ ಇದನ್ನು ಸಹಾ ಲಕ್ವ ಎಂದೆ ಪರಿಗಣಿಸುತ್ತಾರೆ. ಇದು ಸುಳ್ಳು ಲಕ್ವಕ್ಕೂ ಹಾಗು ಬೆಲ್ಸ್‌ಪಾಲ್ಸಿಗೂ ಯಾವುದೇ ಸಂಬಂಧವಿರುವುದಿಲ್ಲ. ಅಗತ್ಯ ಬಿದ್ದರೆ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಿ ಅನುಮಾನ ಪರಿಹರಿಸಿಕೋಳ್ಳುವುದು ಸೂಕ್ತ.

ಬೆಲ್ಸ್‌ಪಾಲ್ಸಿಗೆ ಕಾರಣಗಳು
ಇದಕ್ಕೆ ಇಂತಹುದೇ ನಿರ್ದಿಷ್ಟ ಕಾರಣ ಎಂದು ಬೊಟ್ಟು ಮಾಡಲಾಗದು, ಆದರೆ ಹೆಚ್ಚಾಗೆ ಮುಖದ ಮಾಂಸಖಂಡಗಳಿಗೆ ಸಂಬಂಧಪಟ್ಟ ನರಗಳು ವೈರಲ್ ಇನ್ಫೆಕ್ಷನ್‌ನಿಂದ ಕೆಲಸಮಾಡುವ ಶಕ್ತಿಯನ್ನು ಕಳೆದುಕೊಳ್ಳುವುವು. ಇದರ ಅಡ್ಡಪರಿಣಾಮದಿಂದ ಮುಖದ ಮಾಂಸಖಂಡಗಳು ಬಲ ಕಳೆದುಕೊಳ್ಳುತ್ತವೆ.

* ಕಿವಿ ಸೋರುವಿಕೆ ಅಥವಾ ಸೊಂಕು
* ದವಡೆ ಹಲ್ಲಿನಲ್ಲಿ (ಹುಳುಕು ಹಲ್ಲನ್ನು ಕಿತ್ತಾಗ) ಉಂಟಾಗುವ ಸೊಂಕು
* ಕೆಲವೊಮ್ಮೆ ಮುಖದ ನರಗಳಿಗೆ ಅಪಘಾತದಿಂದ ಪೆಟ್ಟಾದಾಗ ಮತ್ತು ಇತ್ಯಾದಿ ಕಾರಣಗಳು

ಬೆಲ್ಸ್‌ಪಾಲ್ಸಿಯ ಸೂಚನೆಗಳು
* ಮುಖದ ಒಂದು ಪಾರ್ಶ್ವ ಬಲ ಕಳೆದು ಕೊಂಡಂತಹ ಅನುಭವವಾಗುವುದು
* ಕಣ್ಣಿನ ರೆಪ್ಪೆ ಮುಚ್ಚಲು ಹಾಗೂ ತೆರೆಯದಿರಲು ಕಷ್ಟವಾಗುವುದು
* ಬಾಯಿರುಚಿ ಕಳೆದ ಅನುಭವವಾಗುವುದು
* ಕಿವಿ ಒಳಗಡೆ ಅಥವಾ ಹಿಂಬದಿಯಲ್ಲಿ ನೋವಾಗುವುದು.
* ಸ್ವಲ್ಪ ಶಬ್ದವಾದರು ದೇಹದಲ್ಲಿ ತಳಮಳವುಂಟಾಗುವುದು
* ಮುಖವನ್ನು ಮುಟ್ಟಿದರೆ ಜಡವಸ್ತು ಮುಟ್ಟಿದ ಅನುಭವವಾಗುವುದು
* ಊಟಮಾಡುವಾಗ ಆಹಾರವನ್ನು ಜಗಿಯಲು ಕಷ್ಟವಾಗುವುದು

ಗುರುತಿಸುವುದು ಹೇಗೆ
ಈ ಸಮಸ್ಯೆಗೆ ವೈದ್ಯರನ್ನು ತತಕ್ಷಣದಲ್ಲಿ ಸಂಪರ್ಕಿಸುವುದು ಸೂಕ್ತ. ಅವರು ರೋಗಿಯನ್ನು ಮೆಲ್ಕಂಡ ಸೂಚನೆಗಳಿಂದ ಪರೀಕ್ಷೆ ಮಾಡಿ ನಿರ್ಧರಿಸುವರು. ಒಂದು ವೇಳೆ ಇತರೆ ಅನುಮಾನಗಳಿದ್ದಲ್ಲಿ ಸಿಟಿ ಸ್ಕ್ಯಾನ್, ಎಂಆರ್‌ಐ ಹಾಗೂ ರಕ್ತಪರೀಕ್ಷೆಗಳ ಮುಖಾಂತರ ಸಮಸ್ಯೆಗೆ ಸರಿಯಾದ ಕಾರಣಗಳನ್ನು ತಿಳಿಯುವರು. ಅದಕ್ಕೆ ತಕ್ಕಂತಹ ಔಷಧೋಪಚಾರಗಳನ್ನು ರೋಗಿಗಳಿಗೆ ತಿಳಿಸುವರು.

ಚಿಕಿತ್ಸೆ ಹೇಗೆ
ಹೆಚ್ಚಿನ ಪಕ್ಷದ ರೋಗಿಗಳು ಯಾವುದೇ ಔಷಧೋಪಚಾರಗಳಿಲ್ಲದೆ ಒಂದೆರಡು ವಾರಗಳಲ್ಲಿ ಗುಣ ಹೊಂದುವರು, ಆದರೆ ಮಾತ್ರೆ, ಇತರೆ ಔಷಧೋಪಚಾರಗಳಿಂದ ಸಂಭಾವ್ಯ ತೊಂದರೆಗಳು ಕಡಿಮೆಯಾಗುವುವು. ಈ ಸಮಯದಲ್ಲಿ ಪಿಸಿಯೋಥೆರಪಿ ಚಿಕಿತ್ಸೆ ಹೆಚ್ಚು ಸೂಕ್ತ. ಫಿಸಿಯೋಥೆರಪಿಸ್ಟಗಳು ಮುಖದ ಮಾಂಸ ಖಂಡಗಳಿಗೆ ವ್ಯಾಯಾಮ ಹಾಗು ಎಲೆಕ್ಟ್ರಿಕಲ್ ಸ್ಟಿಮ್ಯುಲೆಶನ್ ಚಿಕಿತ್ಸೆಯಿಂದ ರೋಗಿಯ ಮುಖವನ್ನು ಮತ್ತೆ ಮೊದಲಿನ ರೀತಿಯಲ್ಲಿ ತರುವಲ್ಲಿ ಪ್ರಮುಖ ಪಾತ್ರವಹಿಸುವರು.

ಬೆಲ್ಸ್‌ಪಾಲ್ಸಿ ಹಾಗೂ ಲಕ್ವಕ್ಕಿರುವ ವ್ಯತ್ಯಾಸಗಳು
ಸಾಮಾನ್ಯವಾಗಿ ಜನರು ಬೆಲ್ಸ್‌ಪಾಲ್ಸಿ ಹಾಗೂ ಲಕ್ವ (ಮೆದುಳಿನಆಘಾತ) ಒಂದೇ ಎಂದು ಪರಿಗಣಿಸುತ್ತಾರೆ. ಇದು ಶುದ್ಧ ಸುಳ್ಳು ಹಾಗೂ ಮೂಢನಂಬಿಕೆ ಬೆಲ್ಸ್‌ಪಾಲ್ಸಿ (ಮುಖದ ಪಾರ್ಶ್ವವಾಯು)ಯಲ್ಲಿ ವೈರಸ್ ಸೊಂಕಿನಿಂದ ಮುಖದ ಮಾಂಸಖಂಡಗಳು ಹಾಗೂ ನರಗಳಿಗೆ ನಂಜುಂಟಾಗಿ ತೊಂದರೆ ಗಿಡಾಗುವುವು. ಆದರೆ ಲಕ್ವದಿಂದ ಮೆದುಳಿನ ನರಗಳಿಗೆ ಆಘಾತವಾಗಿ ದೇಹದ ಒಂದುಪಾರ್ಶ್ವ ಬಲಹೀನಗೊಂಡು ಮೆದುಳಿನಿಂದ ನಿಯಂತ್ರಣ ಕಳೆದುಕೊಳ್ಳುವುದು. ಹಾಗಾಗಿ ಬೆಲ್ಸ್ ಪಾಲ್ಸಿಯಿಂದ ಬಳಲುತ್ತಿರುವವರು ಆತಂಕಕ್ಕೊಳಗಾಗದೆ ನರರೋಗ ತಜ್ಞರಲ್ಲಿ ಅನುಮಾನ ಪರಿಹರಿಸಿಕೊಳ್ಳುವುದು ಸೂಕ್ತ. ಬೆಲ್ಸ್‌ಪಾಲ್ಸಿ ಹಾಗೂ ಲಕ್ವದ ಲಕ್ಷಣಗಳು ಬೇರೆ ಬೇರೆ. ಬೆಲ್ಸ್‌ಪಾಲ್ಸಿಯಲ್ಲಿ ರೋಗಿಗೆ ಕೇವಲ ಮುಖದ ಅಂಗಗಳು ಮಾತ್ರ ತೊಂದರೆಗೀಡಾಗುವುತ್ತವೆ. ಉದಾಹರಣೆಗೆ- ಕಣ್ಣಿನ ರೆಪ್ಪೆ ಮುಚ್ಚಲು ಹಾಗೂ ತೆರೆಯಲು ಕಷ್ಟವಾಗುವುದು, ಮುಖ ಜೊಲು ಬಿದ್ದಂತಹ ಅನುಭವ,

ಆಹಾರ ಜಗಿಯಲು ಕಷ್ಟವಾಗುವುದು, ಊಟದ ರುಚಿ ಅರಿಯದಿರುವುದು, ಕಿವಿಯಲ್ಲಿ ಗುಂಯ್ ಗುಡುವ ನಿರಂತರ ಶಬ್ಧದ ಅನುಭವ, ದವಡೆ ಹಲ್ಲಿನ ನೋವು, ಆದರೆ ಲಕ್ವದಲ್ಲಿ ರೋಗಿಗೆ ಮೆದುಳಿನ ರಕ್ತಸಂಚಾರದಲ್ಲಿ ಹಠಾತ್ ವ್ಯತ್ಯಾಸದಿಂದ ಮೆದುಳಿನ ಯಾವುದೋ ಒಂದುಭಾಗ ಹಾನಿಗೂಳಗಾಗಿ ದೇಹದ ಒಂದು ಪಾರ್ಶ್ವ (ಮುಖದಿಂದ ಕಾಲಿನವರೆಗೆ) ಚಲಿಸಲು ಆಗದಿರುವುದು, ಮೂಢನಂಬಿಕೆಗಳಿಂದಲೆ ಸಾಕಷ್ಟು ರೋಗಿಗಳು ಸರಿಯಾದ ಚಿಕಿತ್ಸಾ ಮಾರ್ಗ ಅನುಸರಿಸದೇ ಆರ್ಥಿಕ ಹಾಗು ಮಾನಸಿಕ ಸಂಕಷ್ಟಕ್ಕೀಡಾಗುವರು. ಇದರಿಂದ ಸಮಯವೂ ವ್ಯರ್ಥ ಹಾಗು ಹಣವೂ ಹಾಳು.

(ಲೇಖಕ ಪಾರ್ಶ್ವವಾಯು ಪುನಃಶ್ಚೇತನ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT