ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಗಾದಿಗೆ 'ಸಿದ್ದ'ರಾಮಯ್ಯ

Last Updated 10 ಮೇ 2013, 12:50 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಆಯ್ಕೆಯಾಗಿರುವುದಾಗಿ ನಗರಕ್ಕೆ ವೀಕ್ಷಕರಾಗಿ ಆಗಮಿಸಿದ್ದ ವರಿಷ್ಠರ ತಂಡದ ಮುಖ್ಯಸ್ಥ ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಸಂಜೆ ಪ್ರಕಟಿಸಿದರು.

'ಮುಖ್ಯಮಂತ್ರಿ' ಆಯ್ಕೆಗಾಗಿ ಎಐಸಿಸಿ ವೀಕ್ಷಕರ ತಂಡವು ಸಮಾಲೋಚನೆ ಮುಂದುವರಿಸಿದ್ದರೂ, ಸಿದ್ದರಾಮಯ್ಯ ಅವರ ಆಯ್ಕೆ ಬಹುತೇಕ ಖಚಿತ ಎಂಬುದಾಗಿ ನಂಬಲರ್ಹ ಮೂಲಗಳು ತಿಳಿಸಿದ್ದನ್ನು 'ಪ್ರಜಾವಾಣಿ' ಅಂತರ್ಜಾಲ  ಆವೃತ್ತಿ ವರದಿ ಮಾಡಿತ್ತು. ಈ ಮಧ್ಯೆ 'ಮುಖ್ಯಮಂತ್ರಿ' ಆಯ್ಕೆಗಾಗಿ ರಹಸ್ಯ ಮತದಾನ ನಡೆಯುತ್ತಿರುವುದಾಗಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ತಿಳಿಸಿದ್ದರು.

2004ರ ಚುನಾವಣೆ ಬಳಿಕ ಜನತಾದಳ (ಎಸ್)- ಕಾಂಗ್ರೆಸ್ ಮೈತ್ರಿಕೂಟದ ರಚನೆ ವೇಳೆಯಲ್ಲಿ ಜನತಾದಳದಲ್ಲಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಎಲ್ಲ ಸಾಧ್ಯತೆಗಳು ಕಂಡುಬಂದಿದ್ದವು. ಆದರೆ ಕೊನೆ ಕ್ಷಣದಲ್ಲಿ ಅದಕ್ಕೆ ದೇವೇಗೌಡರೇ ಅಡ್ಡಗಾಲು ಹಾಕಿದ ಪರಿಣಾಮವಾಗಿ ಕಾಂಗ್ರೆಸ್ಸಿನ ಧರಂ ಸಿಂಗ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಬಳಿಕ ದೇವೇಗೌಡರ ಜೊತೆ ಮುನಿಸಿಕೊಂಡ ಸಿದ್ಧರಾಮಯ್ಯ ಜನತಾದಳ ತ್ಯಜಿಸಿದ್ದರು.

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮಧ್ಯೆ ತೀವ್ರ ಪೈಪೋಟಿ ನಡೆದಿರುವಂತೆಯೇ ಕಾಂಗ್ರೆಸ್ ವರಿಷ್ಠ ನಾಯಕರು ಶುಕ್ರವಾರ ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ಶಾಸಕರ ಜೊತೆಗೆ ಬೆಳಿಗ್ಗೆಯಿಂದಲೇ ಸಮಾಲೋಚನೆ ಪ್ರಕ್ರಿಯೆ ಆರಂಭಿಸಿದ್ದರು.

ಶಾಸಕರ ಅಭಿಪ್ರಾಯ ಸಂಗ್ರಹಕ್ಕಾಗಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯ ಆಯ್ಕೆ ವಿಚಾರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬಿಟ್ಟುಬಿಡುವಂತೆ ಮನವಿ ಮಾಡುವ ಒಂದು ವಾಕ್ಯದ ನಿರ್ಣಯ ಮಂಡಿಸಿದರು.

ಆದರೆ ವರಿಷ್ಠರು ರಹಸ್ಯ ಮತದಾನದ ಮೂಲಕ ತಮ್ಮ ಅಭಿಪ್ರಾಯವನ್ನು ಲಿಖಿತವಾಗಿ ಸೂಚಿಸುವಂತೆ ಶಾಸಕರಿಗೆ ತಿಳಿಸಿದರು.

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ 64ರ ಹರೆಯದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವುದಾಗಿ ರಹಸ್ಯ ಮತದಾನದ ಬಳಿಕ ಆಂಟನಿ ಅವರು ಪ್ರಕಟಿಸಿದರು.

ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮಧ್ಯೆ 'ಅತಿ ಪ್ರಮುಖ' ಹುದ್ದೆಗಾಗಿ ನೇರಸ್ಪರ್ಧೆ ಏರ್ಪಟ್ಟಿತ್ತು.

ಸಮಾಲೋಚನೆ ವೇಳೆಯಲ್ಲೇ ಬಹುತೇಕ ಶಾಸಕರ ಒಲವು ಸಿದ್ದರಾಮಯ್ಯ ಕಡೆಗೆ ಇರುವುದು ಸ್ಪಷ್ಟಗೊಂಡಿದೆ ಎಂದು ಮೂಲಗಳು ಹೇಳಿದ್ದವು.

ಹಿರಿಯ ಸಚಿವ ಎ.ಕೆ. ಆಂಟನಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಧುಸೂದನ್ ಮಿಸ್ತ್ರಿ, ಕರ್ನಾಟಕದ ಪರಿಶೀಲನಾ ಸಮಿತಿ ಮುಖ್ಯಸ್ಥರಾಗಿದ್ದ ಎಲ್. ಫಲೀರೋ ಮತ್ತು ಕೇಂದ್ರ ಸಚಿವ ಜಿತೇಂದರ್ ಸಿಂಗ್ ಅವರನ್ನು ಒಳಗೊಂಡ ನಾಲ್ಕು ಸದಸ್ಯರ ಎಐಸಿಸಿ ವೀಕ್ಷಕರ ತಂಡವು ಪಕ್ಷ ಕಚೇರಿಯಲ್ಲಿ ಬೀಡು ಬಿಟ್ಟಿದ್ದು ಶಾಸಕರ ಸಮಾಲೋಚನೆ ನಡೆಸಿತ್ತು.

ಕಾಂಗ್ರೆಸ್ ಕಚೇರಿಯ ಹೊರಭಾಗದಲ್ಲಿ ಸಿದ್ದರಾಮಯ್ಯ ಮತ್ತು ಖರ್ಗೆ ಬೆಂಬಲಿಗರು ಶಾಸಕರ ಬೆಂಬಲ ಕ್ರೋಡೀಕರಣಕ್ಕಾಗಿ ತೀವ್ರ ಪ್ರಚಾರ ನಿರತರಾಗಿದ್ದು, ಉಭಯ ನಾಯಕರ ಭಾವಚಿತ್ರ ಪ್ರದರ್ಶನ ಮಾಡುತ್ತಾ ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್ ಪಕ್ಷಕ್ಕೆ ಆರು ವರ್ಷ ಹಿಂದೆ ಸೇರ್ಪಡೆಯಾದ ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಕೇಂದ್ರದ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ  ಅವರನ್ನು ಭೇಟಿ ಮಾಡಿ ಸುಮಾರು 20 ನಿಮಿಷ ಕಾಲ ಅವರ ಜೊತೆಗೆ ಚರ್ಚಿಸಿದ್ದರು. ಸಿದ್ದರಾಮಯ್ಯ ಅವರು ಈ ಸಂದರ್ಭದಲ್ಲಿ ಕೃಷ್ಣ ಅವರ ಬೆಂಬಲ ಕೋರಿದರು ಎನ್ನಲಾಗಿತ್ತು.

ವೀಕ್ಷಕರ ಸಭೆಗೂ ಮುನ್ನ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರು ತಾವು ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಮುಖ್ಯಮಂತ್ರಿ ಸ್ಥಾನದ ಪೈಪೋಟಿಯಿಂದ ಹೊರಬಿದ್ದಿಲ್ಲ ಎಂದು ಹೇಳಿದ್ದರು.

ಸಾಮೂಹಿಕ ನಾಯಕತ್ವದ ಮೂಲಕ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ತಾವು ಅತ್ಯಂತ ಮಹತ್ವದ ಪಾತ್ರ ವಹಿಸಿರುವುದಾಗಿ ಪರಮೇಶ್ವರ ಹೇಳಿದ್ದರು.

'ಫಲದಲ್ಲಿ ಪಾಲು ಪಡೆಯುವ ಇಚ್ಛೆ ನನಗಿದೆ' ಎಂದು ಅವರು ನುಡಿದರು. ಏನಿದ್ದರೂ ಅಂತಿಮವಾಗಿ ಮುಖ್ಯಮಂತ್ರಿಯನ್ನು ನಿರ್ಧರಿಸುವುದು ವರಿಷ್ಠ ಮಂಡಳಿ ಎಂದು ಅವರು ತಿಳಿಸಿದ್ದರು.

ಮುಖ್ಯಮಂತ್ರಿ ಸ್ಥಾನದ ಸ್ಪರ್ಧಾಕಣದಲ್ಲಿ ತಾನೂ ಇರುವುದಾಗಿ ಹೇಳಿದ್ದ ಡಿ.ಕೆ. ಶಿವಕುಮಾರ್ 'ಪಕ್ಷ ನಾಯಕರಲ್ಲಿ ಬಿಕ್ಕಟ್ಟಿಲ್ಲ. ವರಿಷ್ಠ ಮಂಡಳಿ ಮಾಡುವ ನಿರ್ಧಾರಕ್ಕೆ ನಾವೆಲ್ಲರೂ ತಲೆಬಾಗುತ್ತೇವೆ' ಎಂದು ಹೇಳಿದ್ದರು.

ಕಾಂಗ್ರೆಸ್ ವರಿಷ್ಠರು ನಾಯಕತ್ವ ಪ್ರಶ್ನೆ ಬಗೆಹರಿಸಲು ತಲ್ಲೀನರಾಗಿರುವಂತೆಯೇ ಇನ್ನೊಂದೆಡೆಯಲ್ಲಿ ಸಚಿವ ಸ್ಥಾನಗಳಿಗಾಗಿ ಹಲವು ಶಾಸಕರ 'ಲಾಬಿ' ಶುರುವಾಗಿದೆ.

ಏಳು ವರ್ಷಗಳ ಬಳಿಕ 121 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿರುವ ಕಾಂಗ್ರೆಸ್ ಬಿಜೆಪಿಯನ್ನು ಪದಚ್ಯುತಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT