ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿದ ಗಡುವು: ಸಕ್ಕರೆ ಗೋದಾಮು ಜಪ್ತಿ ಇಂದು

ಕಾರ್ಖಾನೆಗಳ ವಿರುದ್ಧ ಬಾಗಲಕೋಟೆ ಜಿಲ್ಲಾಡಳಿತ ಕ್ರಮ
Last Updated 23 ಜೂನ್ 2015, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಕಬ್ಬಿನ ಬಾಕಿ ಪಾವತಿಸದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬಾಗಲಕೋಟೆ ಜಿಲ್ಲಾಡಳಿತ ಮುಂದಾಗಿದೆ.

ರೈತರ ಕಬ್ಬಿನ ಬಾಕಿ ಪಾವತಿಸಲು ಜಿಲ್ಲಾಡಳಿತ ನೀಡಿದ್ದ ಏಳು ದಿನಗಳ ಗಡುವು ಮಂಗಳವಾರ ಕೊನೆಯಾಗಿದ್ದು, ಇದೀಗ ಕಾರ್ಖಾನೆಗಳ ಗೋದಾಮು ಜಪ್ತಿಗೆ ಕ್ರಮ ಕೈಗೊಂಡಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ, ಜಿಲ್ಲೆಯ ಒಟ್ಟು 9 ಸಕ್ಕರೆ ಕಾರ್ಖಾನೆಗಳ ಗೋದಾಮು ಜಪ್ತಿ ಮಾಡಲು ಜಮಖಂಡಿ, ಮುಧೋಳ, ಬೀಳಗಿ ಮತ್ತು ಬಾಗಲಕೋಟೆ ತಹಶೀಲ್ದಾರ್‌ಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಗೋದಾಮಿನಲ್ಲಿರುವ ಸಕ್ಕರೆಯನ್ನು ಹರಾಜು ಹಾಕಿ, ಬಂದ ಹಣವನ್ನು ರೈತರಿಗೆ ಪಾವತಿಸಲಾಗುವುದು ಎಂದ ಅವರು, ವಶಪಡಿಸಿಕೊಳ್ಳಲಾಗುವ ಸಕ್ಕರೆಯಲ್ಲಿ ಅಗತ್ಯವಿರುವಷ್ಟನ್ನು ಜಿಲ್ಲಾಡಳಿತವೇ  ಖರೀದಿಸುವ ಮೂಲಕ ಜಿಲ್ಲೆಯ ಪಡಿತರದಾರರಿಗೆ ವಿತರಿಸಲಿದೆ ಎಂದು ಹೇಳಿದರು.

ಸಚಿವರು, ಶಾಸಕರ ಕಾರ್ಖಾನೆ!: ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆಗಳಲ್ಲಿ ಸಚಿವರು, ಶಾಸಕರು ಮತ್ತು ಮಾಜಿ ಸಚಿವರ ಕಾರ್ಖಾನೆಗಳು ಇದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌.ಪಾಟೀಲ ಅವರಿಗೆ ಸಂಬಂಧಿಸಿದ ಬೀಳಗಿ ಶುಗರ್ಸ್‌, ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ ಐಸಿಪಿಎಲ್‌, ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಮಾಲೀಕತ್ವದ ನಿರಾಣಿ ಶುಗರ್ಸ್‌, ಶಾಸಕ ಸಿದ್ದು ನ್ಯಾಮಗೌಡ ಅವರಿಗೆ ಸೇರಿದ ಜಮಖಂಡಿ ಶುಗರ್ಸ್‌ ಕಾರ್ಖಾನೆಗಳ ಗೋದಾಮು ಜಪ್ತಿಗೂ ಜಿಲ್ಲಾಡಳಿತ ಮುಂದಾಗಿದೆ.

ಆಯುಕ್ತರಿಂದ ಆದೇಶ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು 2014–15ನೇ ಸಾಲಿಗೆ ಸಂಬಂಧಿಸಿದಂತೆ ರೈತರಿಗೆ ಮುಂಗಡವಾಗಿ ಪಾವತಿಸದೇ ಇರುವ ಕಬ್ಬಿನ ಬಾಕಿ (ಪ್ರಥಮ ಕಂತು)ಯನ್ನು ‘ಭೂಕಂದಾಯ’ ಎಂದು ವಸೂಲಿ ಮಾಡಲು ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ಸಕ್ಕರೆ ನಿರ್ದೇಶಕರು ಜಿಲ್ಲಾಡಳಿತಕ್ಕೆ ಆದೇಶಿಸಿದ್ದರು.

ಆಯುಕ್ತರ ಆದೇಶದನ್ವಯ ಜಿಲ್ಲಾಧಿಕಾರಿ ಅವರು, ಏಳು ದಿನಗಳೊಳಗೆ ರೈತರಿಗೆ ಪ್ರಥಮ ಕಂತು (ಕಬ್ಬಿನ ಬಾಕಿ) ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್‌ ನೀಡಿದ್ದರು.

ರೂ 790.71 ಕೋಟಿ ಬಾಕಿ
ಜಿಲ್ಲೆಯ ಒಂಬತ್ತು ಸಕ್ಕರೆ ಕಾರ್ಖಾನೆಗಳು 2014–15ನೇ ಸಾಲಿನಲ್ಲಿ ರೂ 790.71 ಕೋಟಿ ಕಬ್ಬಿನ ಪ್ರಥಮ ಕಂತನ್ನು ರೈತರಿಗೆ ಪಾವತಿಸುವುದು ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT