ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊನಚು ಬರವಣಿಗೆಯ ಮೆಹ್ತಾ ಇನ್ನಿಲ್ಲ

Last Updated 8 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮೊನಚು ಬರವಣಿಗೆ, ನೇರ ಹಾಗೂ ನಿರ್ಭೀತ ನುಡಿ ಮತ್ತು ಕಸುಬುದಾರಿಕೆ­ಯಿಂದ ಭಾರತೀಯ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ ‘ಔಟ್‌ಲುಕ್‌’ ಪತ್ರಿಕೆಯ ಸಂಸ್ಥಾಪಕ ಸಂಪಾದಕ ವಿನೋದ್‌ ಮೆಹ್ತಾ ಅವರು ದೀರ್ಘ ಕಾಲದ ಅನಾರೋಗ್ಯ­ದಿಂದಾಗಿ ಭಾನು­ವಾರ ಕೊನೆಯುಸಿರೆಳೆದರು.

೭೩ ವರ್ಷದ ಮೆಹ್ತಾ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ಕೃತಕ ಉಸಿರಾಟ ಸಾಧನ ಅಳವಡಿಸಲಾಗಿತ್ತು. ಮೆಹ್ತಾ ಅಂಗಾಂಗ ವೈಫಲ್ಯ­ದಿಂದ ಮೃತಪಟ್ಟಿದ್ದಾಗಿ ಏಮ್ಸ್‌ ವಕ್ತಾರ ಅಮಿತ್‌ ಗುಪ್ತಾ ಹೇಳಿದ್ದಾರೆ.
೨೦೧೧ರಲ್ಲಿ ಬರೆದ ಆತ್ಮಕಥೆ ‘ಲಖನೌ ಬಾಯ್‌’ ಮೆಹ್ತಾ ಅವರ ಜನಪ್ರಿಯ ಕೃತಿ. ಇತ್ತೀಚಿನ ಕೃತಿ ‘ಎಡಿಟರ್‌ ಅನ್‌­ಪ್ಲಗ್ಡ್‌’ ಕಳೆದ ಡಿಸೆಂಬರ್‌ನಲ್ಲಿ ಬಿಡು­ಗಡೆಯಾಗಿದೆ. ಅನಾ­ರೋಗ್ಯದ ಕಾರಣ ಅವರು ಬಿಡುಗಡೆ ಸಮಾ­ರಂಭದಲ್ಲಿ ಪಾಲ್ಗೊಂಡಿರಲಿಲ್ಲ.

ಅಂಕಣಬರಹ ಹಾಗೂ ಟಿ.ವಿ ಚರ್ಚೆಗಳಿಂದ ಜನಪ್ರಿಯರಾಗಿದ್ದ ಅವರು ತಮ್ಮ  ಪ್ರಾಮಾಣಿಕತೆ ಹಾಗೂ ದಿಟ್ಟತನದಿಂದಾಗಿ  ಪತ್ರಿ­ಕೋದ್ಯಮದಲ್ಲಿ ಹೆಸರು ಮಾತಾಗಿದ್ದರು.

ವಲಸೆ: ಮೆಹ್ತಾ ಜನಿಸಿದ್ದು ೧೯೪೨ರ ಮೇ ೩೧ರಂದು ರಾವಲ್ಪಿಂಡಿಯಲ್ಲಿ. (ಈಗ ಪಾಕಿಸ್ತಾನ­ದಲ್ಲಿದೆ) ಅವರ ತಂದೆ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ದೇಶ ವಿಭಜನೆ ಬಳಿಕ ಮೆಹ್ತಾ ಕುಟುಂಬ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದು ಲಖನೌದಲ್ಲಿ ನೆಲೆ ಕಂಡು­ಕೊಂಡಿತು. ಮೆಹ್ತಾ ಶಾಲೆಗೆ ಹೋಗಿದ್ದು, ಬಿ.ಎ ಪದವಿ ಪಡೆದುಕೊಂಡಿದ್ದು ಎಲ್ಲವೂ ಇಲ್ಲಿಯೇ.

ಮೆಹ್ತಾ ಅವರ ಪತ್ನಿ ಸುಮಿತಾ  ಪಾಲ್‌ ಕೂಡ ಪತ್ರಕರ್ತೆ. ಅವರು ‘ದಿ ಪಯನಿಯರ್’ ಹಾಗೂ ‘ಸಂಡೇ ಟೈಮ್ಸ್‌ ಆಫ್‌ ಇಂಡಿಯಾ’ದಲ್ಲಿ ಕೆಲಸ ಮಾಡಿದ್ದರು. ಈ ದಂಪತಿಗೆ ಮಕ್ಕಳಿಲ್ಲ.

ಬಡವಾಯಿತು ಪತ್ರಿಕೋದ್ಯಮ

ಉತ್ಪ್ರೇಕ್ಷೆ ಹಾಗೂ ಶಬ್ದಗಳ ಆಡಂಬರ ಮೆಹ್ತಾ ಅವರಿಗೆ ಹಿಡಿಸುತ್ತಿರಲಿಲ್ಲ. ಮಹತ್ವದ ವಿದ್ಯಮಾನವನ್ನು ಆಸಕ್ತಿದಾ­ಯಕವಾಗಿ ಹೇಳ­ಬೇಕು ಎನ್ನುವುದೇ ಅವರ ಧ್ಯೇಯ­ವಾಗಿತ್ತು. ವೃತ್ತಿಪರ ಪ್ರಾಮಾ­ಣಿಕತೆಗೆ ಮತ್ತೊಂದು ಹೆಸ­ರಾಗಿದ್ದ ಮೆಹ್ತಾ ಅವರ ಅಗಲುವಿ­ಕೆಯಿಂದ ಭಾರತೀಯ ಪತ್ರಿಕೋದ್ಯಮ ಬಡ­ವಾಗಿದೆ. ಅವರಿಗೆ ‘ಕೊನೆಯ ಶ್ರೇಷ್ಠ ಸಂಪಾದಕ’ ಎಂಬ ಬಿರುದನ್ನು ನಿಸ್ಸಂದೇಹವಾಗಿ ಕೊಡಬಹುದು
– ಔಟ್‌ಲುಕ್‌

ಮೆಹ್ತಾ ಲಂಡನ್‌ನಲ್ಲಿದ್ದಾಗ ಸ್ವಿಟ್ಜರ್ಲೆಂಡ್‌ನ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಈ ಸಂಬಂಧದಿಂದ ಹುಟ್ಟಿದ ಮಗಳೊಬ್ಬಳು ಅವರಿಗೆ ಇದ್ದಾಳೆ. ಈ ವಿಷಯವನ್ನು ಅವರು ತಮ್ಮ ಆತ್ಮಕಥೆಯಲ್ಲಿ ಬರೆದು­ಕೊಂಡಿ­ದ್ದಾರೆ. ಆತ್ಮಕಥೆ ಪ್ರಕಟವಾಗುವ ವರೆಗೆ ಈ ವಿಚಾರ ಅವರ ಪತ್ನಿಯನ್ನು ಬಿಟ್ಟು ಬೇರೆ ಯಾರಿಗೂ ಗೊತ್ತಿರಲಿಲ್ಲ.  ಪತ್ನಿಯ ಬಳಿ ಚರ್ಚಿಸಿ ಅವರಿಂದ ಬೆಂಬಲ ಸಿಕ್ಕ ನಂತರವೇ ಮೆಹ್ತಾ ಈ ವಿಷಯವನ್ನು ಆತ್ಮಕಥೆಯಲ್ಲಿ ಬರೆದುಕೊಂಡರು.

ಬಾಲಿವುಡ್‌ ಅಭಿನೇತ್ರಿ ಮೀನಾ ಕುಮಾರಿ, ಸಂಜಯ್‌ ಗಾಂಧಿ ಅವರ  ಜೀವ­ನಚರಿತ್ರೆಗಳನ್ನೂ ಅವರು ಬರೆದಿ­ದ್ದಾರೆ. ‘ಮಿಸ್ಟರ್‌ ಎಡಿಟರ್, ಹೌ ಕ್ಲೋಸ್‌  ಆರ್‌ ಯು ಟು ದ ಪಿಎಂ?’ ಎನ್ನುವ ಶೀರ್ಷಿಕೆಯಡಿ  ಅವರ ಲೇಖನ ಸಂಗ್ರಹ ೨೦೦೧­ರಲ್ಲಿ ಪ್ರಕಟವಾಯಿತು.

ಟೀಕೆ: ಉದಾರವಾದಿ ನಿಲುವಿನಿಂದಾಗಿ ಮೆಹ್ತಾ ಅವರು ಬಲಪಂಥೀಯರ ಟೀಕೆಗಳಿಗೆ ಒಳಗಾಗಿದ್ದೂ ಉಂಟು. ‘ನೀವು  ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್‌ನ ಪರವಾಗಿದ್ದೀರಿ. ಬಿಜೆಪಿ ಹಾಗೂ ಹಿಂದುತ್ವವನ್ನು ವಿರೋಧಿ­ಸುತ್ತೀರಿ’... ಇತ್ಯಾದಿ ನಿಂದನಾತ್ಮಕ ಪತ್ರಗಳು ಮೆಹ್ತಾ ಅವರಿಗೆ ಬರುತ್ತಿದ್ದವು. ತಮ್ಮ ಅಂಕಣ ಬರಹಗಳಲ್ಲಿ ಇವುಗಳನ್ನೆಲ್ಲ ಅವರು ಪ್ರಸ್ತಾಪಿಸುತ್ತಿದ್ದರು.

ಕಾರ್ಖಾನೆಯಿಂದ ‘ಔಟ್‌ಲುಕ್‌’ ವರೆಗೆ....
ತೃತೀಯ ದರ್ಜೆಯಲ್ಲಿ ಬಿ.ಎ ಪಾಸಾದ ಮೆಹ್ತಾ ಆರಂಭದಲ್ಲಿ ಬ್ರಿಟನ್‌ನ ಥೇಮ್ಸ್‌್ ಡಿಟ್ಟನ್‌ನಲ್ಲಿನ ಥರ್ಮೊ­ಸ್ಟ್ಯಾಟ್‌್ ಸಾಧನ ತಯಾರಿಕಾ ಕಾರ್ಖಾನೆ­ಯಲ್ಲಿ ಕೆಲಸ ಮಾಡಿ­ದ್ದರು. ೧೯೭೪ರಲ್ಲಿ ‘ಡೆಬೊನೇರ್‌’ ಸಂಪಾದಕರಾಗುವ ಮೂಲಕ ಪತ್ರಿಕಾ ರಂಗ ಪ್ರವೇಶಿಸಿದರು.

ದೇಶದ ಮೊದಲ ವಾರಪತ್ರಿಕೆ ‘ ದಿ ಸಂಡೇ ಅಬ್ಸರ್ವರ್‌’ ಶುರುಮಾಡಿದ್ದು ಕೂಡ ಇವರೇ.   ‘ದಿ ಇಂಡಿಯಾ ಪೋಸ್ಟ್‌’,  ‘ದಿ ಇಂಡಿಪೆಂಡೆಂಟ್‌’, ‘ದಿ ಪಯ­ನಿಯರ್‌’ (ದೆಹಲಿ ಆವೃತ್ತಿ) ಪತ್ರಿಕೆಗಳ ಸಂಪಾದಕರಾಗಿ ಅವರು ಸವೆಸಿದ ಹಾದಿ ದೀರ್ಘವಾದುದು.
೯೦ರ ದಶಕದ ಆರಂಭದಲ್ಲಿ ದೆಹಲಿಗೆ ಬಂದ ಅವರು ‘ದಿ ಪಯನಿಯರ್‌’ ದೆಹಲಿ ಆವೃತ್ತಿಯ ಮೊದಲ ಸಂಪಾ­ದಕರಾಗಿ ಕೆಲಸ ಮಾಡಿದರು. ಆದರೆ  ಅವರು ದೀರ್ಘಕಾಲ  (೧೭ ವರ್ಷ) ಕೆಲಸ ಮಾಡಿದ್ದು ‘ಔಟ್‌ಲುಕ್‌ನಲ್ಲಿ.

ನೇರ ನುಡಿಯ ಮೆಹ್ತಾ
ನೇರ ನುಡಿಯ ಮೆಹ್ತಾ ಅವರು ಒಬ್ಬ ಶ್ರೇಷ್ಠ ಪತ್ರಕರ್ತ ಹಾಗೂ ಬರಹ­ಗಾರರಾಗಿ ನೆನಪಿನಲ್ಲಿ ಉಳಿ­ಯುತ್ತಾರೆ.
– ಪ್ರಧಾನಿ ನರೇಂದ್ರ ಮೋದಿ

ನಾಯಿ ಅಂದರೆ ಪಂಚಪ್ರಾಣ...
ಮೆಹ್ತಾ ಅವರಿಗೆ ನಾಯಿ ಅಚ್ಚುಮೆಚ್ಚಿನ ಪ್ರಾಣಿ. ಅವರು ಸಾಕಿರುವ ಬೀದಿ ನಾಯಿಯ ಹೆಸರು  ‘ಎಡಿಟರ್‌’. ‘ಔಟ್‌ಲುಕ್’ ಪತ್ರಿಕೆಯ ಅವರ ಅಂಕಣದಲ್ಲಿ ಅನೇಕ ಬಾರಿ ಈ ನಾಯಿಯ ಪ್ರಸ್ತಾಪ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT