ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯ ಉಳಿಸಿಕೊಳ್ಳುವತ್ತ...

ಚರ್ಚೆ
Last Updated 6 ಜುಲೈ 2015, 19:30 IST
ಅಕ್ಷರ ಗಾತ್ರ

ಚಾಮರಾಜನಗರದಲ್ಲಿ ಜೂನ್ 27ರಂದು ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ ದಲಿತ ಯುವ ಸಾಹಿತ್ಯ ಸಮಾವೇಶ ಮುಂದೂಡಲು ಕಾರಣವಾದ ಅಲ್ಲಿನ ಕೆಲವು ದಲಿತ ಕಾರ್ಯಕರ್ತರ ನಿಲುವು ಹಲವು ಮುಖ್ಯವಾದ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಅಂಬೇಡ್ಕರ್ ಭಾವಚಿತ್ರ ಬ್ಯಾನರ್‌ಗಳಲ್ಲಿ ಅಥವಾ ಆಹ್ವಾನ ಪತ್ರಿಕೆಯಲ್ಲಿ ಇರಲಿಲ್ಲ; ಸರಿ. ಆದರೆ, 67 ವರ್ಷಗಳ ಸ್ವತಂತ್ರ ಭಾರತದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಅಂಬೇಡ್ಕರ್ ಭಾವಚಿತ್ರವನ್ನು ಮುಂದಿಟ್ಟುಕೊಂಡು, ದಲಿತರಿಗೆ ಎಷ್ಟು ಮಂಕುಬೂದಿ ಎರಚಿಲ್ಲ? ಕೇವಲ ವೋಟ್‌ ಬ್ಯಾಂಕ್ ರಾಜಕೀಯಕ್ಕೆ  ಅಗತ್ಯವಾದ ಕಾರ್ಯಕ್ರಮ ಮತ್ತು ನೀತಿಯನ್ನು ಮುಂದಿಡುತ್ತಾ ನಾಯಿಪಾಡು ಉಂಟುಮಾಡಿಲ್ಲ? ಇತ್ತೀಚಿನ ವರ್ಷಗಳಲ್ಲಂತೂ ಅಂಬೇಡ್ಕರ್ ಭಾವಚಿತ್ರವನ್ನು ಪ್ರದರ್ಶಿಸುತ್ತಲೇ ಅವರ ಪ್ರಜಾತಾಂತ್ರಿಕ ಮೌಲ್ಯಗಳನ್ನು ನಿರ್ನಾಮ ಮಾಡುತ್ತಾ ಅವರನ್ನೇ ಕೇಸರೀಕರಣಗೊಳಿಸುತ್ತಿಲ್ಲವೇ?

ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಮಾಡುತ್ತಾ, ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವ ಎಲ್ಲಾ ಸರ್ಕಾರಗಳು ದಲಿತರಿಗಾಗಿ ಇರುವ ಯಾವ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಿವೆ? ಅಂಬೇಡ್ಕರ್ ಭಾವಚಿತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳದ ಅಥವಾ ಪ್ರದರ್ಶಿಸದ ಎಷ್ಟು ಜನ ದಲಿತೇತರರು ಅವರ ಉದಾರವಾದಿ ಮನೋಭಾವದಿಂದ ದಲಿತರಿಗೆ ಮುಖ್ಯವಾದ ಒಂದು ‘ಸ್ಪೇಸ್’ ಅನ್ನು ಸೃಷ್ಟಿಸಿಲ್ಲ? ನಾಲ್ವಡಿ ಕೃಷ್ಣರಾಜ ಒಡೆಯರ್, ಗೋಪಾಲಸ್ವಾಮಿ ಅಯ್ಯರ್ ಅವರು ಮೊದಲ ತಲೆಮಾರಿನ ದಲಿತರಿಗೆ ನೀಡಿದ್ದ ಸೌಲಭ್ಯ, ಅವಕಾಶಗಳನ್ನು ಮರೆಯಲು ಸಾಧ್ಯವೇ? ಕೋಲಾರದ ಒಕ್ಕಲಿಗರಾದ ಪಿ.ವೆಂಕಟಗಿರಿಯಪ್ಪನವರು ಹುಣಸೀಕೋಟೆ ಶೇಷಗಿರಿಯಪ್ಪನ ಪ್ರಕರಣದಲ್ಲಿ ದಲಿತರ ಪರವಾದ ನಿಲುವಿಗೆ ಬದ್ಧರಾಗಿ ತಮ್ಮ ಅಧಿಕಾರ ಕಳೆದುಕೊಂಡಿದ್ದು ನಿಜವಲ್ಲವೇ?

ಅಂಬೇಡ್ಕರ್ ಭಾವಚಿತ್ರವನ್ನು ಮೆರೆಸುವ ಕೆಲವು ದಲಿತ ನೇತಾರರು, ಕಾರ್ಯಕರ್ತರು ಭ್ರಷ್ಟರಾಗಿಲ್ಲವೆ? ಕೇವಲ ತಮ್ಮ ಸ್ವಾರ್ಥ ಮತ್ತು ಜೀವನೋಪಾಯಕ್ಕಾಗಿ ಅಂಬೇಡ್ಕರ್‌ ಅವರನ್ನು ಅವಲಂಬಿಸಿಲ್ಲವೇ? ಅಂಬೇಡ್ಕರ್ ಭಾವಚಿತ್ರದಿಂದಲೇ ಎಷ್ಟು ಎನ್.ಜಿ.ಒ.ಗಳು ದಲಿತ ರಾಜಕಾರಣವನ್ನು ದ್ರವೀಕರಣಗೊಳಿಸಿಲ್ಲ? ಅಂಬೇಡ್ಕರ್ ಭಾವಚಿತ್ರ ಇದ್ದ ಮಾತ್ರಕ್ಕೆ ಅವರು ಪ್ರತಿಪಾದಿಸಿದ ಮೌಲ್ಯಗಳು ಉಳಿಯುತ್ತವೆ, ಇಲ್ಲದಿದ್ದರೆ ಕಳೆದುಹೋಗುತ್ತವೆ ಎಂದು ಭಾವಿಸುವುದು ತಪ್ಪು. ಹೀಗಾಗಿ,  ದಲಿತರ ನಡೆ ಏನಾಗಬೇಕು ಎನ್ನುವ ಪ್ರಶ್ನೆ ಮುಖ್ಯವಾಗುತ್ತದೆ: ಈ ಹೊತ್ತಿನ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂದರ್ಭ ಹಿಂದೆಂದಿಗಿಂತಲೂ ಸಂಕೀರ್ಣವಾದ, ಅಪಾಯಕಾರಿಯಾದ ಮೂರ್ತ ಮತ್ತು ಅಮೂರ್ತ ತಂತ್ರಗಳನ್ನು ದಲಿತ ಸಮುದಾಯದ ಮೇಲೆ ಪ್ರಯೋಗಿಸುತ್ತಿದೆ.

ದಲಿತರ ವಿಮೋಚನೆಗೆ ಅಂಬೇಡ್ಕರ್ ಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟದ ಅವಕಾಶಗಳು ಕಳೆದುಹೋಗುತ್ತಿವೆ. ಆದ್ದರಿಂದ ದಲಿತರು, ತಳಸಮುದಾಯಗಳು, ಅಲ್ಪಸಂಖ್ಯಾತರು, ಮಹಿಳೆಯರು ಅವರವರ ಐಡೆಂಟಿಟಿ ಪಾಲಿಟಿಕ್ಸ್‌ನ ಜೊತೆಯಲ್ಲೇ ಕೆಲವು ಸಾಮಾನ್ಯವಾದ ಕಾರಣಗಳಿಗಾಗಿಯಾದರೂ ಹೊಸ ತಾತ್ವಿಕ ತಳಹದಿಯ ಮೇಲೆ ಕೈ ಜೋಡಿಸಬೇಕಾದ ಅಗತ್ಯವಿದೆ. ಜನಪರವಾದ, ಒಳಗೊಳ್ಳುವಿಕೆಯ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಇಂದಿನ ತುರ್ತಾಗಿದೆ. ಅದು ಅಂಬೇಡ್ಕರ್ ಆಶಯವೂ ಹೌದು.

ಡಾ. ಎಚ್.ಡಿ. ಉಮಾಶಂಕರ್
ಚಾಮರಾಜನಗರದ ಘಟನೆ ಬಗ್ಗೆ ವಡ್ಡಗೆರೆ ನಾಗರಾಜಯ್ಯ  ಪ್ರತಿಕ್ರಿಯಿಸಿದ್ದಾರೆ. ದಲಿತ ಸಂಘಟನೆಗಳೊಳಗಿನ ಬಿರುಕನ್ನು ಮತ್ತು ಸಂಘಟನೆಗಳ ಹಾದಿಯನ್ನು  ಅದರೊಳಗೇ ನಿಂತು ವಿಮರ್ಶಿಸಿದ್ದಾರೆ. ಒಂದು ರೀತಿ ಯಲ್ಲಿ ನಮ್ಮೊಳಗನ್ನು ನಾವೇ ವಿಮರ್ಶಿಸಿಕೊಂಡಂತೆ ಬರೆದಿರುವುದು ಮಹತ್ವದ ಅಂಶ. ಮುಂದುವರಿದು ‘ಭಾವಚಿತ್ರ ಹಾಕಲು ಇದೇನು ಅಂಬೇಡ್ಕರ್ ಜಯಂತಿಯೇ’ ಎಂದು ಪ್ರಶ್ನಿಸಿದ್ದಾರೆ. ಅಂಬೇಡ್ಕರ್ ಭಾವಚಿತ್ರ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತ್ರ ಇರಬೇಕೆನ್ನುವ ಧೋರಣೆ ಇಲ್ಲಿ ಇದ್ದಂತೆ ಕಾಣುತ್ತದೆ.

‘ಎಲ್ಲ ಶೋಷಿತ ಸಮುದಾಯದ ಒಳಗೆ ಅಂಬೇಡ್ಕರ್ ಇಲ್ಲವೇ!’ ಎಂದು ಕೇಳಿರುವುದನ್ನು ಮೊದಲು ಒರೆಗೆ ಹಚ್ಚಬೇಕು. ಎಷ್ಟು ಸಮುದಾಯಗಳು ಅಂಬೇಡ್ಕರ್ ಅವರನ್ನು ಮನ, ಮನೆಯಲ್ಲಿ ಬಿಟ್ಟುಕೊಳ್ಳಲು ಪ್ರಯತ್ನಿಸಿವೆ? ಮೀಸಲಾತಿ ಬಗ್ಗೆ ಸದಾ ಗುರುಗುಟ್ಟುವ ಜನ, ಮೀಸಲಾತಿ ಒಂದರ ಕಾರಣವಿಡಿದು ಸಂವಿಧಾನದ ಮೂಲಭೂತ ಆಶಯವನ್ನೇ ವಿರೋಧಿಸುತ್ತಾರೆ.  ಇಂತಹ ಸಂದರ್ಭದಲ್ಲಿ ದಲಿತರು ಅದರ ಪರ ಸದಾ ಜಾಗೃತರಾಗೇ ವರ್ತಿಸುತ್ತಾರೆ. ಇಲ್ಲದಿದ್ದರೆ ಇಷ್ಟೊತ್ತಿಗೆ ಅಂಬೇಡ್ಕರ್‌ಗೂ ಸಂವಿಧಾನಕ್ಕೂ ಏನೇನೂ ಸಂಬಂಧವಿಲ್ಲ ಎಂಬಂತೆ ಇಲ್ಲಿನ ಕೊಳಕು ಮನಸ್ಸುಗಳು ಬಿಂಬಿಸಿಬಿಡುತ್ತಿದ್ದವು. ಹಾಗೆಯೇ ದಲಿತರು ಪ್ರತಿಮೆಗೆ ಪೂರಕವಾಗಿ ನಿಲ್ಲದಿದ್ದರೆ ಇಷ್ಟೊತ್ತಿಗೆ ಏನಾಗುತ್ತಿತ್ತೋ? ಅಂಬೇಡ್ಕರ್ ಪ್ರತಿಮೆಗೆ ದಲಿತರು ಸೀಮಿತವಾಗಬಾರದು.

ಇದು ಅಕ್ಷರಶಃ ಸತ್ಯ. ಆದರೆ ದಲಿತರು ಗಟ್ಟಿ ದನಿಯಲ್ಲಿ ಅಂಬೇಡ್ಕರ್ ಮತ್ತು ಬುದ್ಧನನ್ನು ಕೂಗಿ ಅಪ್ಪಿಕೊಂಡರು. ಇಲ್ಲದಿದ್ದರೆ ಇಷ್ಟೊತ್ತಿಗೆ ಇವರಿಬ್ಬರನ್ನು ಹೈಜಾಕ್ ಮಾಡಿ ತಮ್ಮ ಒಗ್ಗರಣೆಗೆ ಬಳಸಿಕೊಳ್ಳುತ್ತಿದ್ದರು. ದಲಿತರೊಳಗೇ ಇವರು ಮರೆತುಹೋಗುವ ಹಾಗೆ ಹುನ್ನಾರ ಮಾಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ದಲಿತರ ಈ ನಡೆ ನುಡಿ ಸಹಜವಲ್ಲವೇ!? ಇವುಗಳನ್ನು ಎದೆ ಮುಟ್ಟಿ ಕೇಳಿಕೊಳ್ಳಬೇಕಾದ ಅನಿವಾರ್ಯ ಇಲ್ಲಿದೆ.

ಇನ್ನು ಈ ಕಾರ್ಯಕ್ರಮದ ವಿಷಯಕ್ಕೇ ಬರೋಣ. ಅಂಬೇಡ್ಕರ್ ಭಾವಚಿತ್ರ ಇರಬೇಕಿತ್ತು ಎನ್ನುವುದು ದಲಿತರ ಆಶಯ. ಇದನ್ನು ಕೇಳುವ, ಪ್ರತಿಭಟಿಸುವ ಹಕ್ಕು ಅವರಿಗಿದೆ. ಆದರೆ ಕಾರ್ಯಕ್ರಮವನ್ನೇ ರದ್ದುಗೊಳಿಸುವ ಮಟ್ಟಕ್ಕೆ ಅವರು ಇಳಿದದ್ದು ಮಾತ್ರ ಹೆಚ್ಚು ಅಪಾಯಕಾರಿ. ಏಕೆಂದರೆ ಅಂಬೇಡ್ಕರ್ ಹೇಳಿಕೊಟ್ಟ ಪ್ರಜಾಪ್ರಭುತ್ವದ ಮಾದರಿಗೇ ಇದು ಪೆಟ್ಟು. ಅದರಲ್ಲೂ ಈ ಕಾರ್ಯಕ್ರಮ  ದಲಿತರ ಆಶೋತ್ತರಗಳನ್ನೇ ಚರ್ಚಿಸುವ ವೇದಿಕೆಯಾಗಿತ್ತು. ಇದಕ್ಕೆ ಪ್ರತಿರೋಧ ಒಡ್ಡಿದ್ದು ಅಸಹನೆಯೇ ಸರಿ. ಅಂಬೇಡ್ಕರ್ ಪ್ರತಿಮೆಗೆ ಅವಮಾನವಾದಾಗ ಹೃದಯಕ್ಕೆ ತೆಗೆದುಕೊಳ್ಳುವ ಗುಣ ದಲಿತರದ್ದು.

ಇದು ಸ್ವಾಭಿಮಾನಿ ನೆಲೆಯೂ ಹೌದು. ಆದರೆ ಪ್ರತಿಮೆಗೆ ಅವಮಾನವಾದಾಗ ಸಿಡಿದೇಳುವ ದಲಿತರ ತೀವ್ರತೆ, ದಲಿತರು ಹತ್ಯೆಗೊಳಗಾದಾಗ ಕಡಿಮೆಯಾಗುತ್ತದೆ. ಇದು ಅಂಬೇಡ್ಕರ್ ಆಶಯಕ್ಕೇ ವಿರುದ್ಧವಲ್ಲವೇ? ಕೆಲವರು ಅಂಬೇಡ್ಕರ್ ಹೆಸರೇಳುತ್ತಾರೆ. ಅವರ ಯಾವ ಸಿದ್ಧಾಂತಗಳೂ, ವಿಚಾರಗಳೂ ಅವರಿಗೆ ಬೇಕಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಹಿನ್ನೆಲೆಯನ್ನೂ ಮೊನ್ನೆ ಕಾರ್ಯಕ್ರಮ ತಡೆದ ಎಲ್ಲಾ ಸಮಾನ ಮನಸ್ಕರು ಅರ್ಥಮಾಡಿಕೊಳ್ಳಬೇಕು. ಮೀಸಲಾತಿ ಪಡೆದವರ ಎದೆಗಳಲ್ಲಿ ಅಂಬೇಡ್ಕರ್ ಹಾಸುಹೊಕ್ಕಾಗಿ ನಿಲ್ಲಬೇಕು. ಆದರೆ ಮೀಸಲಾತಿ ಪಡೆದವರೆಲ್ಲ ಇಂದು ಏನಾಗಿದ್ದಾರೆ? ಇದೂ ಬಹಳ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT