ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರಗಳ ಗರ್ಜನೆ ಮೀರಿಸಿದ ಆಕ್ರಂದನ

ಬೆಂಕಿ ಪೊಟ್ಟಣದಂತೆ ಅಪ್ಪಚ್ಚಿಯಾದ ಮನೆಗಳು * ಶಾಲಾ ಕಟ್ಟಡವೂ ವಶ * ಬಿಡಿಎಯಿಂದ 14.27 ಎಕರೆ ಅತಿಕ್ರಮ
Last Updated 2 ಮೇ 2015, 20:03 IST
ಅಕ್ಷರ ಗಾತ್ರ

ಬೆಂಗಳೂರು: ರಾಕ್ಷಸಿ ಸ್ವರೂಪದ ಅರ್ಥ್‌ ಮೂವರ್‌ ಯಂತ್ರಗಳು ಜೋರಾಗಿ ಗರ್ಜಿಸುತ್ತಾ ಅಲ್ಲಿನ ಕಟ್ಟಡಗಳನ್ನು ಪುಡಿ ಪುಡಿ ಮಾಡುತ್ತಿದ್ದವು. ಅವುಗಳ ಮುಂದೆ ಜಮಾಯಿಸಿದ್ದ ಸಂತ್ರಸ್ತರ ಆಕ್ರಂದನ ಆ ಗರ್ಜನೆಯನ್ನೂ ಮೀರಿ ಅಲ್ಲಿ ನೆರೆದವರ ಹೃದಯಕ್ಕೆ ಇರಿಯುತ್ತಿತ್ತು.

ಸುಬ್ಬಯ್ಯನಪಾಳ್ಯದ ಬಾಣಸವಾಡಿ ಕೆರೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ಜಿಲ್ಲಾಡಳಿತ ಶನಿವಾರ ತೆರವುಗೊಳಿಸಿತು. ಬೆಂಕಿ ಪೊಟ್ಟಣವನ್ನು ಅಪ್ಪಚ್ಚಿ ಮಾಡಿದಂತೆ ಯಂತ್ರಗಳು ದೊಡ್ಡ ದೊಡ್ಡ ಕಟ್ಟಡಗಳನ್ನು ನೆಲಸಮ ಮಾಡುತ್ತಿದ್ದವು.

ಮೊದಲ ಕಟ್ಟಡವನ್ನು ಕೆಡವಲು ಅರ್ಥ್‌ ಮೂವರ್‌ ಮೂತಿ ಮೇಲೆ ಮಾಡಿಕೊಂಡು ನಿಂತಕೂಡಲೇ ಅಲ್ಲೊಂದು ನಾಟಕೀಯ ಬೆಳವಣಿಗೆ ನಡೆಯಿತು. ಕಟ್ಟಡದಲ್ಲಿ ವಾಸವಾಗಿದ್ದ ಕುಟುಂಬ ಬಾಗಿಲಲ್ಲೇ ಕುಳಿತು ‘ನಮ್ಮನ್ನೂ ಇದರೊಳಗೆ ಸಮಾಧಿ ಮಾಡಿ’ ಎಂದು ಜಿಲ್ಲಾಡಳಿತಕ್ಕೆ ಸವಾಲು ಎಸೆಯಿತು. ಆ ಕುಟುಂಬದ ಸದಸ್ಯರನ್ನು ಸಮಾಧಾನಪಡಿಸಿ ಕಳಿಸುವ ಹೊತ್ತಿಗೆ ಅಧಿಕಾರಿಗಳು ಸುಸ್ತು ಹೊಡೆದಿದ್ದರು.

ಮಾಜಿ ಸೈನಿಕ ಸ್ಯಾಮ್ಸನ್‌ ಅವರ ಮನೆಯ ಮುಂದೆ ಗುಂಪುಗೂಡಿದ್ದ ಬಡಾವಣೆ ನಿವಾಸಿಗಳು ಸಾಲ ಮಾಡಿ ಕಟ್ಟಿಕೊಂಡಿದ್ದ ಮನೆಗಳು ಕಣ್ಣೆದುರಿನಲ್ಲೇ ಉರುಳುವುದನ್ನು ಕಂಡು ಕಣ್ಣೀರು ಹಾಕುತ್ತಿದ್ದರು.

‘ನನ್ನ ಗಂಡನಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಆಸ್ಪತ್ರೆಯಲ್ಲಿ ಇವತ್ತು ಡೇಟ್‌ ಕೊಟ್ಟಿದ್ದಾರೆ. ಇಲ್ಲಿ ಜಿಲ್ಲಾಡಳಿತ ನಮ್ಮ ಕುಟುಂಬದ ಸೂರನ್ನೇ ಕಿತ್ತುಕೊಳ್ಳುತ್ತಿದೆ. ಇನ್ನುಮುಂದೆ ನಮಗೆ ಎಲ್ಲಿದೆ ನೆಲೆ’ ಎಂದು ಸ್ಯಾಮ್ಸನ್‌ ಅವರ ಪತ್ನಿ ವಿಮಲಾ ರೋದಿಸುತ್ತಿದ್ದರು. ಬಿದ್ದ ಮನೆಗಳಿಂದ ಕಬ್ಬಿಣವನ್ನು ಆಯ್ದುಕೊಳ್ಳುವ ಕೆಲಸವೂ ಜೋರಾಗಿ ನಡೆದಿತ್ತು.

ಬಾಣಸವಾಡಿಗೆ ಬಂದವರು ‘ಸರ್‌, ಇಲ್ಲಿ ಕೆರೆ ಎಲ್ಲಿದೆ’ ಎಂದು ಪ್ರಶ್ನಿಸಿದರೆ, ‘ಇಲ್ಲ ಸ್ವಾಮಿ, ಇಲ್ಲಿ ಯಾವ ಕೆರೆಯೂ ಇಲ್ಲ’ ಎನ್ನುವ ಉತ್ತರ ಸಿಕ್ಕುತ್ತದೆ. ಅದೇ ಎಚ್‌ಆರ್‌ಬಿಆರ್‌ ಲೇಔಟ್‌ ಎಲ್ಲಿದೆ ಎಂದು ಕೇಳಿದರೆ ತಟ್ಟನೆ ಮಾರ್ಗದ ನಿರ್ದೇಶನ ಸಿಕ್ಕುತ್ತದೆ. ಕೆರೆ ಹೇಳ ಹೆಸರಿಲ್ಲದಂತಾಗಿದ್ದು, ಎಲ್ಲಲ್ಲೂ ಕಟ್ಟಡಗಳು ಎದ್ದಿವೆ.

42.38 ಎಕರೆ ವಿಸ್ತೀರ್ಣದ ಕೆರೆಯಲ್ಲಿ 14.27 ಎಕರೆ ಪ್ರದೇಶವನ್ನು ಬಿಡಿಎ ಅತಿಕ್ರಮಿಸಿದರೆ, 2.39 ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಸುಬ್ಬಯ್ಯನ ಪಾಳ್ಯದ 80 ಅಡಿ ರಸ್ತೆ ಪಕ್ಕದಲ್ಲಿದೆ ಈ ಕೆರೆ. ಆರಂಭದಲ್ಲಿ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡ ಕಟ್ಟಡಗಳಿದ್ದರೆ, ಮಧ್ಯದಲ್ಲಿ ರಸ್ತೆ ನಿರ್ಮಿಸಲಾಗಿದೆ. ರಸ್ತೆಯ ಆ ಬದಿಯಲ್ಲಿ ಬಿಡಿಎ ಅಕ್ರಮವಾಗಿ ನಿರ್ಮಿಸಿದ ಎಚ್‌ಆರ್‌ಬಿಆರ್‌ ಬಡಾವಣೆ ಇದೆ. ಅಲ್ಲಿ 222 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅದರಲ್ಲಿ 150ಕ್ಕೂ ಅಧಿಕ ಮನೆಗಳು ಎದ್ದಿವೆ. ‌

ಖಾಸಗಿ ವ್ಯಕ್ತಿಗಳು ಕಟ್ಟಿದ್ದ ಕಟ್ಟಡಗಳನ್ನು ಉರುಳಿಸಿರುವ ಜಿಲ್ಲಾಡಳಿತ ಬಿಡಿಎ ಬಡಾವಣೆಯನ್ನು ಮಾತ್ರ ಮುಟ್ಟುವ ಗೋಜಿಗೆ ಹೋಗಿಲ್ಲ. ಈ ಕುರಿತು ಜಿಲ್ಲಾಧಿಕಾರಿ ವಿ.ಶಂಕರ್‌ ಅವರನ್ನು ಪ್ರಶ್ನಿಸಿದರೆ, ‘ಬಿಡಿಎ ಸಹ ಒಂದು ಸರ್ಕಾರಿ ಸಂಸ್ಥೆ. ಆ ಸಂಸ್ಥೆ ನಿರ್ಮಿಸಿದ ಅಕ್ರಮ ಬಡಾವಣೆ ಸಂಬಂಧ ಮುಖ್ಯಮಂತ್ರಿಗಳ ಮಟ್ಟದಲ್ಲಿ ನಿರ್ಧಾರ ಆಗಬೇಕು. ಆದರೆ, ಅಲ್ಲಿನ ನಿವಾಸಿಗಳಿಗೆ ನಾವು ಈಗಾಗಲೇ ನೋಟಿಸ್‌ ನೀಡಿದ್ದೇವೆ’ ಎಂದು ಉತ್ತರಿಸಿದರು.

ಮುನೆಕೊಳಲು ಗ್ರಾಮದ ಸರ್ವೆ ನಂ. 36ರಲ್ಲಿ ನವಜೀವನ ನಿಲಯ ಟ್ರಸ್ಟ್‌ ಎಂಬ ಸಂಸ್ಥೆಗೆ ಕುಷ್ಠರೋಗಿಗಳಿಗೆ ಪುನರ್‌ವಸತಿ ಕಲ್ಪಿಸಲು ಜಮೀನು ಗುತ್ತಿಗೆ ನೀಡಲಾಗಿತ್ತು. ಆದರೆ, ಸರ್ಕಾರದ ಅನುಮತಿ ಪಡೆಯದೆ ಆ ಭೂಮಿಯನ್ನು ನವಪ್ರಜ್ಞಾ ಎಂಬ ಖಾಸಗಿ ಶಾಲೆ ನಡೆಸಲು ಕೊಡಲಾಗಿತ್ತು. ಬಾಲಕಿಯರ ವಸತಿಗೃಹವನ್ನೂ ಅಲ್ಲಿ ನಿರ್ಮಿಸಲಾಗಿತ್ತು. ಗುತ್ತಿಗೆ ರದ್ದುಗೊಳಿಸಿ 7.18 ಎಕರೆ ಭೂಮಿಯನ್ನು ಅಲ್ಲಿನ ಕಟ್ಟಡಗಳ ಸಹಿತ ವಶಕ್ಕೆ ಪಡೆಯಲಾಯಿತು.

ಮೂರು ದೇವಸ್ಥಾನ ಮುಜರಾಯಿ ಇಲಾಖೆಗೆ: ಕೆರೆ ಅಂಗಳದಲ್ಲಿ ಓಂಶಕ್ತಿ, ನಾಗಶಕ್ತಿ, ಮುನೇಶ್ವರ ಎಂಬ 3 ದೇವಾಲಯಗಳು ಸಹ ನಿರ್ಮಾಣಗೊಂಡಿವೆ.
ಆ ದೇವಾಲಯಗಳನ್ನು ವಶಕ್ಕೆ ಪಡೆದ ಜಿಲ್ಲಾಡಳಿತ, ನೆಲಸಮ ಮಾಡದೆ ಮುಜರಾಯಿ ಇಲಾಖೆಗೆ ಒಪ್ಪಿಸಲಾಯಿತು. ನಾರಾಯಣ ಚಾರಿಟಬಲ್‌ ಟ್ರಸ್ಟ್‌ಗೆ ಸೇರಿದ ದೊಡ್ಡ ಕಟ್ಟಡವನ್ನು ಉರುಳಿಸದೆ, ಜಿಲ್ಲಾಡಳಿತ ಅದನ್ನು ಸ್ವಾಧೀನಕ್ಕೆ ಪಡೆಯಿತು.

ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ!: ಏಕಕಾಲಕ್ಕೆ ಏಳು ಕಡೆ ತೆರವು ಕಾರ್ಯಾಚರಣೆ ನಡೆದಿದ್ದರಿಂದ ಜಿಲ್ಲಾಧಿಕಾರಿ ವಿ.ಶಂಕರ್‌ ಶನಿವಾರ ಬಿಡುವಿಲ್ಲದಂತೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡಿದರು. ಪ್ರತಿಯೊಂದು ಪ್ರದೇಶದಲ್ಲೂ ಒಬ್ಬೊಬ್ಬ ಹಿರಿಯ ಅಧಿಕಾರಿಯನ್ನು ನಿಯೋಜನೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ಮೊಬೈಲ್‌ ನಿರಂತರವಾಗಿ ಸದ್ದು ಮಾಡುತ್ತಿತ್ತು. ಇದ್ದ ಸ್ಥಳದಿಂದಲೇ ಅವರು ಸೂಚನೆಗಳನ್ನು ನೀಡುತ್ತಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಪೊಲೀಸ್‌ ಕಮಿಷನರ್‌ ಪಿ. ಹರಿಶೇಖರನ್‌, ಉಪವಿಭಾಗಾಧಿಕಾರಿ ಮಹೇಶ್‌ಬಾಬು, ಜಾರಿದಳದ ಸಹಾಯಕ ಆಯುಕ್ತ ನಾಗರಾಜ ರೆಡ್ಡಿ, ತಹಶೀಲ್ದಾರ್‌ ಡಾ.ಬಿ.ಆರ್‌. ಹರೀಶ್‌ ನಾಯಕ್‌ ಜತೆಗಿದ್ದರು.
*
ಎರಡು ಪೆಟ್ರೋಲ್‌ ಬಂಕ್‌ ನೆಲಸಮ
ಕೆರೆ ಅಂಗಳದಲ್ಲಿ ಎರಡು ಪೆಟ್ರೋಲ್‌ ಬಂಕ್‌ಗಳನ್ನೂ ನಿರ್ಮಾಣ ಮಾಡಲಾಗಿತ್ತು. ಅಲ್ಲಿ ನಿರ್ಮಿಸಿದ್ದ ಆವರಣ ಗೋಡೆಗಳನ್ನು ಕೆಡವಿಹಾಕಿದ ಜಿಲ್ಲಾಡಳಿತ ಅವುಗಳನ್ನೂ ವಶಕ್ಕೆ ಪಡೆಯಿತು. ಬಂಕ್‌ನಲ್ಲಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ಸಂಗ್ರಹವನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುವುದು ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
*
ಆಸ್ತಿ ಮುಟ್ಟುಗೋಲು: ಡಿ.ಸಿ
ಬೆಂಗಳೂರು:
ಕೆರೆ, ಕುಂಟೆ, ಗೋಮಾಳ ಪ್ರದೇಶಕ್ಕೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು, ಹರಾಜಿನಿಂದ ಬಂದ ಹಣದಲ್ಲಿ ಸಂತ್ರಸ್ತರಿಗೆ ಪರಿಹಾರ ಕೊಡಿಸಲು ನಿರ್ಧರಿಸಲಾಗಿದೆ ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಜಿಲ್ಲಾಧಿಕಾರಿ ವಿ. ಶಂಕರ್‌ ತಿಳಿಸಿದರು.

‘ಸತ್ಯಂ ಕಂಪ್ಯೂಟರ್ಸ್‌ ಹಾಗೂ ವಿನಿವಿಂಕ್‌ ಪ್ರಕರಣಗಳಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತರಿಗೆ ಪರಿಹಾರ ನೀಡಲು ಕೋರ್ಟ್‌ ಕೂಡ ನಿರ್ದೇಶನ ನೀಡಿತ್ತು. ಆ ಆದೇಶದ ಆಶಯದಂತೆ ನಾವೂ ಪ್ರಸ್ತಾವ ಸಿದ್ಧಪಡಿಸಿದ್ದು, ಕಂದಾಯ ಸಚಿವರ ಒಪ್ಪಿಗೆಗಾಗಿ ಕಳುಹಿಸಿದ್ದೇವೆ’ ಎಂದು ಹೇಳಿದರು.

ನೆಡುತೋಪನ್ನೇ ನುಂಗಿದ್ದ ಭೂಗಳ್ಳರು
ಬೆಂಗಳೂರು:
ಹೊರಗಿನಿಂದ ನೋಡಿದರೆ ಕಾಡುಗೋಡಿ ಪ್ರದೇಶದ ಹೂಡಿ ರಸ್ತೆಯಲ್ಲಿ ಅಂತಹದ್ದೊಂದು ದಟ್ಟವಾದ ಕಾಡಿದೆ (ನೆಡುತೋಪು) ಇದೆ ಎನ್ನುವುದೇ ಗೊತ್ತಾಗುವುದಿಲ್ಲ. 711 ಎಕರೆಯಲ್ಲಿ ಹಬ್ಬಿ ನಿಂತಿದ್ದ ಈ ನೆಡುತೋಪಿನಲ್ಲಿ 632 ಎಕರೆ ಅತಿಕ್ರಮಿಸಿದ್ದರು ಭೂಗಳ್ಳರು!

ಸುಮಾರು ಒಂದೂಕಾಲು ಶತಮಾನದಷ್ಟು ಹಿಂದೆ, ಅಂದರೆ 1898ರಲ್ಲೇ, ಈ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲಾಗಿತ್ತು. ಈ ಸಂಬಂಧ ಗೆಜೆಟ್‌ ಹೊರಡಿಸಲಾಗಿದ್ದು, ಸರ್ಕಾರಿ ದಾಖಲೆಗಳೂ ಇವೆ. ಅಲ್ಲಿ ಅರಣ್ಯ ಇಲಾಖೆ ನೆಡುತೋಪು ಬೆಳೆಸಿದ್ದರಿಂದ ಅದು ಕಾಡುಗೋಡಿ ಪ್ಲಾಂಟೇಷನ್‌ ಪ್ರದೇಶ ಎಂದೇ ಹೆಸರಾಗಿತ್ತು. ಈ ಜಮೀನಿಗೆ ಕಂದಾಯ ಇಲಾಖೆಯಲ್ಲಿ ಪಹಣಿ ಮ್ಯುಟೇಷನ್‌ ಖಾತೆ ಆಗಿರಲಿಲ್ಲ. ಅದರ ದುರ್ಲಾಭ ಪಡೆದ ಭೂಗಳ್ಳರು, ನಕಲಿ ದಾಖಲೆ ಸೃಷ್ಟಿಸಿ ನೆಡುತೋಪನ್ನು ಅತಿಕ್ರಮಿಸಿದ್ದರು.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಹ ಅಂತಹ ನಕಲಿ ದಾಖಲೆಗಳನ್ನೇ ನಂಬಿ ಆ ನೆಡುತೋಪಿನಲ್ಲಿ 9 ಎಕರೆಯಷ್ಟು ಪ್ರದೇಶವನ್ನು ಸ್ವಾಧೀನ ಮಾಡಿಕೊಂಡಿತ್ತು. ನಕಲಿ ಫಲಾನುಭವಿಗಳಿಗೆ ಪರಿಹಾರ ಧನವನ್ನೂ ಅದು ವಿತರಿಸಿದೆ. ಆಟದ ಮೈದಾನ, ಸ್ಮಶಾನ, ದೇವಸ್ಥಾನ, ಪಾರ್ಕಿಂಗ್‌ ಪ್ರದೇಶಗಳನ್ನೂ ಅಕ್ರಮವಾಗಿ ಅಲ್ಲಿ ನಿರ್ಮಾಣ ಮಾಡಲಾಗಿತ್ತು. ದಿಣ್ಣೂರಿನಲ್ಲಿ ಸುಮಾರು 400 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಶತಮಾನಗಳಿಂದ ಆ ಮನೆಗಳು ಇರುವ ದಾಖಲೆಗಳಿದ್ದು, ಅವುಗಳನ್ನು ತೆರವು ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವ್ಯವಸಾಯ ಸೇವಾ ಸಂಘದ ಹೆಸರಿನಲ್ಲೂ ಭೂಮಿಯನ್ನು ನುಂಗಲಾಗಿದ್ದು, ಕೆಲವರು ವ್ಯವಸಾಯ ಮಾಡುತ್ತಿದ್ದರು. ಗುಲ್ಜಾರ್‌ ಖಾನ್‌ ಎಂಬ ನಟನ ಬಂಗಲೆ ಇಲ್ಲಿದ್ದು, ಅದನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು. ಈಗ ಇಡೀ ನೆಡುತೋಪು ಪ್ರದೇಶವನ್ನು ವಶಕ್ಕೆ ಪಡೆಯಲಾಗಿದ್ದು, ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ದಾಖಲೆ ಸೃಷ್ಟಿಸಿ, ಪಹಣಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದರು.
ಆನೇಕಲ್‌ ತಾಲ್ಲೂಕಿನಲ್ಲಿ ಒತ್ತುವರಿಯಾಗಿದ್ದ ಗೋಮಾಳ ಪ್ರದೇಶವನ್ನೂ ವಶಕ್ಕೆ ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT