ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಪ್ರೀತಿಯ ಅಲೆಯಲ್ಲಿ

Last Updated 14 ಸೆಪ್ಟೆಂಬರ್ 2015, 19:44 IST
ಅಕ್ಷರ ಗಾತ್ರ

ಕರ್ನಾಟಕದ ವಿಶಿಷ್ಟ ಕಲೆ ಯಕ್ಷಗಾನ ತನ್ನದೇ ಆದ ವಿಶೇಷ ಶೈಲಿಯಿಂದ ಮನಸೂರೆಗೊಂಡ ಕಲಾಪ್ರಕಾರ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಹುಟ್ಟಿಕೊಂಡ ಈ ಕಲೆ ಇದೀಗ ರಾಜ್ಯದಾದ್ಯಂತ ಅಷ್ಟೇ ಅಲ್ಲದೆ ದೇಶ ವಿದೇಶಗಳಲ್ಲೂ ಜನಪ್ರಿಯಗೊಳ್ಳುತ್ತಿದೆ.

ಪಾತ್ರಕ್ಕೆ ತಕ್ಕಂತೆ ಮುಖವರ್ಣಿಕೆ, ವಸ್ತ್ರವಿನ್ಯಾಸ, ಸಂಭಾಷಣೆ, ನೃತ್ಯ, ನೃತ್ತ, ಅಭಿನಯ, ನವರಸಗಳನ್ನು ಅಳವಡಿಸಿಕೊಂಡಿರುವ ಕಲೆಯಾಗಿದೆ. ಹೆಚ್ಚಾಗಿ ರಾತ್ರಿಯಿಂದ ಬೆಳಗಿನವರೆಗೆ ನಡೆಯುವ ಯಕ್ಷಗಾನ, ತಾಳಮದ್ದಳೆ ಕಾರ್ಯಕ್ರಮಗಳಲ್ಲಿನ ಕಲಾವಿದರ ವಾಗ್ವೈಖರಿ ಎಲ್ಲರಲ್ಲೂ  ಅಚ್ಚರಿಯನ್ನುಂಟು ಮಾಡುವುದು ಸುಳ್ಳಲ್ಲ.

ಯಕ್ಷಗಾನದ ಹುಟ್ಟು ಪ್ರಾದೇಶಿಕವಾಗಿ ಬೇರೆಯದೇ ಹಿನ್ನೆಲೆಯನ್ನು ಹೊಂದಿದ್ದರೂ ಬೆಂಗಳೂರು ಯಕ್ಷಗಾನ ಕಲೆಯನ್ನು ಪ್ರೀತಿಯಿಂದ ಆದರಿಸಿದೆ. ಸುಮಾರು ಆರು ದಶಕಗಳಿಂದಲೂ ನಗರದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಯಕ್ಷಗಾನದ ಚಟುವಟಿಕೆಗಳು ನಡೆಯುತ್ತಲೇ ಇವೆ. 1940ರಲ್ಲೇ ಕನ್ನಡ ಸಾಹಿತ್ಯ ಪರಿಷತ್ತಿನ ರಜತೋತ್ಸವಕ್ಕೆ ದಿ.ಕುಬಣೂರು ಬಾಲಕೃಷ್ಣರಾಯರು ಎರಡು ತಾಳಮದ್ದಳೆಗಳನ್ನು ನಡೆಸಿಕೊಟ್ಟಿದ್ದರು. 1956ರಲ್ಲಿ ಬೆಂಗಳೂರು ಆಕಾಶವಾಣಿಯಲ್ಲಿ ‘ಕರ್ಣಾರ್ಜುನ’ ಎಂಬ ತಾಳಮದ್ದಳೆ ಕೂಡ ಪ್ರಸಾರವಾಗಿತ್ತು.

ಐವತ್ತರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದು ಬೆಂಗಳೂರಿನಲ್ಲಿ ಹೋಟೆಲ್‌ ನಡೆಸುತ್ತಿದ್ದ ಪಾರಂಪಳ್ಳಿ ಶ್ರೀಧರ್‌ ಹಂದೆ ಅವರು ಆ ಕಾಲದ ಹೆಸರಾಂತ ಕಲಾವಿದರಾದ ಹಾರಾಡಿ, ಮಟ್ಪಾಡಿ ಮುಂತಾದ ಹೆಸರಾಂತ ಕಲಾವಿದರನ್ನು ಕರೆಸಿ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿದ್ದರಂತೆ. ಇಲ್ಲಿಯ ನಿವಾಸಿಗಳಾದ ಕೊಡೇರಿ ಮಾಧವ ಕಾರಂತ ಸಹೋದರರು, ಪಿ.ಕೆ.ಮಧ್ಯಸ್ಥ, ಕೆ.ಎಲ್‌.ಐತಾಳ್‌ ಮುಂತಾದವರು ವೇಷ ಕಟ್ಟಿ ಪಾತ್ರಗಳಾಗುತ್ತಿದ್ದರು. ಮುಂದೆ ಇದೇ ಬೆಳವಣಿಗೆ ‘ಗಜಾನನ ಯಕ್ಷಗಾನ ಮಂಡಳಿ’ಯ ಹುಟ್ಟಿಗೂ ಕಾರಣವಾಗಿತ್ತು.

1950ರ ದಶಕದಲ್ಲಿ ಬೆಂಗಳೂರಿನ ಅನೇಕ ಕಲಾವಿದರು ರಷ್ಯಾ ಅಧ್ಯಕ್ಷ ಬುಲ್ಗ್ಯಾನಿನ್‌ ಅವರ ಎದುರು ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದು ವಿಶೇಷ. 1972ರಲ್ಲಿ ‘ಚೈತನ್ಯ ಯಕ್ಷಗಾನ ಮಂಡಳಿ’ ಎಂಬ ತಂಡವೊಂದು ಬೆಂಗಳೂರು, ಮದ್ರಾಸ್‌, ದೆಹಲಿಗೆ ತೆರಳಿ ಪ್ರದರ್ಶನ ನೀಡಿತ್ತು. ಅಕ್ಕಾಣಿಯಮ್ಮ ಎಂಬುವರು ಹೆಂಗಳೆಯರಿಗೂ ಯಕ್ಷಗಾನ ಕಲಿಸಿ ರಂಗಕ್ಕೆ ತಂದದ್ದು ಆ ಕಾಲದ ಮುಖ್ಯ ಬೆಳವಣಿಗೆಗಳಲ್ಲಿ ಒಂದು.

ಎಚ್‌.ಎಲ್‌. ಭಟ್‌, ದಿ. ವಿಶುಕುಮಾರ್‌, 1975ರಲ್ಲಿ ಯಕ್ಷರಂಜಿನಿ ತಂಡ ಕಟ್ಟಿದ ಗುಂಡ್ಮಿ ರಘುರಾಮ್‌, 1980ರಲ್ಲಿ ಯಕ್ಷದೇಗುಲ ತಂಡದ ಹುಟ್ಟಿಗೆ ಕಾರಣರಾದ ಗಂಗಾಧರ ಉಪಾಧ್ಯ ಹಾಗೂ ಕೆ.ಮೋಹನ ಹೊಳ್ಳ, 1984ರ ಕರಾವಳಿ ಯಕ್ಷಗಾನ ಕಲಾವಿದರು ತಂಡ ಕಟ್ಟಿದ ಪಾವಂಜೆ ಶಿವರಾಮ ಭಟ್ಟ, ಪದ್ಮಾನಂದ ಗುರೂಜಿ ಮುಂತಾದವರು ಯಕ್ಷಗಾನ ಬೆಳವಣಿಗೆಗೆ ಶ್ರಮಿಸಿದ್ದಾರೆ.

ಅಲ್ಲದೆ ತೆಂಕು ಹಾಗೂ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ಕರ್ನಾಟಕ ಕಲಾದರ್ಶಿನಿ, ಹವ್ಯಾಸಿ ಕಲಾವಿದರ ಯಕ್ಷಸಂಪದ (1994), ಯಕ್ಷಕಲಾರಂಜಿನಿ (1997), ಯಕ್ಷಾಂಗಣ, ಯಕ್ಷ ಕರ್ದಮ (1998), ಗಾನಸೌರಭ ಯಕ್ಷಮೇಳ (2003), ಸಿರಿಕಲಾ ಯಕ್ಷಮೇಳ ಮುಂತಾದವು ಹುಟ್ಟಿಕೊಂಡು ಯಕ್ಷಗಾನ ಅಭಿವೃದ್ಧಿಗೆ ಸಾಕ್ಷಿಯಾದವು.

ಮಂಟಪ ಪ್ರಭಾಕರ ಉಪಾಧ್ಯರಂಥ ಮೇರು ಕಲಾವಿದರು ಯಕ್ಷಗಾನದಲ್ಲಿ ಏಕವ್ಯಕ್ತಿ ಪ್ರದರ್ಶನದಂಥ ಹೊಸ ಚಿಂತನೆ ಹುಟ್ಟುಹಾಕಿ ಬೆಂಗಳೂರಿನಲ್ಲಿ ಕಲಾಪ್ರದರ್ಶನ ಮಾಡಿದರು. ಯಕ್ಷಗಾನ ಜೋಡಾಟ ಯಕ್ಷಗಾನ ಕಲಾಪ್ರಕಾರದಲ್ಲೊಂದು ವಿಶಿಷ್ಟ ಪ್ರದರ್ಶನ. ಯಕ್ಷಗಾನಕ್ಕೆ ಸಂಬಂಧಿಸಿದ ಸಮ್ಮೇಳನಗಳೂ ಬೆಂಗಳೂರಿನಲ್ಲಿ ನಡೆದಿದ್ದು ಇತ್ತೀಚೆಗೆ ನಿರಂತರವಾಗಿ ಕಾರ್ಯಾಗಾರಗಳು, ಯಕ್ಷಗಾನ, ತಾಳಮದ್ದಳೆ ಪ್ರದರ್ಶನಗಳು ಇಲ್ಲಿ ನಡೆಯುತ್ತವೆ.

ಅಲ್ಲದೆ ಯುವ ಜನತೆಗೆ ಯಕ್ಷಗಾನ ಕಲಾ ಪ್ರಸಾರ ಮಾಡುವ ನಿಟ್ಟಿನಲ್ಲಿ ಯಕ್ಷಗಾನ ತರಬೇತಿಗಳೂ ಇಲ್ಲಿ ನಡೆಯುತ್ತಿವೆ. ಅಲ್ಲದೆ ಮೊನ್ನೆಯಷ್ಟೇ ಸಂಸ ಬಯಲು ರಂಗಮಂದಿರದಲ್ಲಿ ನಡೆದ ‘ದೇವಿ ಮಹಾತ್ಮೆ’ ಯಕ್ಷಗಾನ ವೀಕ್ಷಿಸಲು ಎರಡು ಸಾವಿರಕ್ಕೂ ಹೆಚ್ಚು ಜನ ಸೇರಿದ್ದುದು ಇನ್ನೂ ಹಸಿರಾಗಿರುವ ಯಕ್ಷಗಾನ ಪ್ರೀತಿಗೆ ನಿದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT