ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಲೋಕ ಸೃಷ್ಟಿಸಿದ ಮಹಿಳಾ ಯಕ್ಷಗಾನ

Last Updated 13 ಜನವರಿ 2014, 7:05 IST
ಅಕ್ಷರ ಗಾತ್ರ

ಕುಮಟಾ: ಕನ್ನಡ–ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿಯ ಯಕ್ಷಗಾನ ಸಂಶೋಧನಾ ಕೇಂದ್ರ ಹಮ್ಮಿಕೊಂಡ ರಾಜ್ಯ ಮಟ್ಟದ ಎರಡು ದಿವಸಗಳ ‘ಮಹಿಳಾ ಯಕ್ಷಗಾನ ಸಂಭ್ರಮ’ ಅಭೂತಪೂರ್ವ ಯಶಸ್ಸು ಕಂಡಿತು.

ಯಕ್ಷಗಾನದ ಹೊಸ ಪ್ರಯೋಗಗಳಲ್ಲಿ ಅಪರೂಪವೆನಿಸಿದ ಈ ಕಾರ್ಯಕ್ರಮ ಎರಡು ದಿನ ಕಾಲ ಯಕ್ಷ ರಸದೌತಣ ಉಣಬಡಿಸಿತು.
ಪುರುಷ ಪಾತ್ರಗಳನ್ನು ಮೀರಿಸುವಂತೆ ಇಲ್ಲಿ ವಿವಿಧ ಪ್ರಸಂಗಗಳನ್ನು ಪ್ರದರ್ಶಿಸಿದ ರಾಜ್ಯದ ವಿವಿಧೆಡೆಯಿಂದ ಬಂದ ಮಹಿಳೆಯರ ಹತ್ತು ಯಕ್ಷಗಾನ ತಂಡಗಳು ಯಕ್ಷಗಾನದ ಬಗ್ಗೆ ಹಲವು ಹೊಸ ಚಿಂತನೆ  ಬಿತ್ತಲು ಕಾರಣವಾದವು.

ಸಾಗರದ ಮಹಾಮ್ಮಾಯಿ ಮಹಿಳಾ ಯಕ್ಷಗಾನ  ತಂಡ ಪ್ರದರ್ಶಿಸಿದ ‘ಭೀಷ್ಮೋತ್ತಿ’ ಪ್ರಸಂಗದಲ್ಲಿ ದೇವವೃತನ ಪಾತ್ರ ನಿರ್ವಹಿಸಿದ ಉಷಾ ಜೈರಾಮ ಅವರ ಅಭಿನಯ, ಮಾತುಗಾರಿಗೆ ಎಲ್ಲ ಇಡೀ ಪ್ರಸಂಗವನ್ನು ಪ್ರೇಕ್ಷಕರು ಕುತೂಹಲದಿಂದ ನೋಡವಂತೆ ಮಾಡಿತು.  ಬೆಂಗಳೂರಿನ ಯಕ್ಷಕಲಾ ಅಕಾಡೆಮಿ ಪ್ರದರ್ಶಿಸಿದ ‘ ಚಕ್ರವ್ಯೂಹ’ದ ಅಭಿಮನ್ಯುವಿನ ಪಾತ್ರ ನಿರ್ವಹಿಸಿದ ಪುಟ್ಟ ಬಾಲಕಿ  ಚಿತ್ಕಲಾ ಕೆ. ತುಂಗಾ ತೋರಿದ ಅಭಿನಯ, ದಣಿವರಿಯದ ಕುಣಿತ ಎಂಥವರನ್ನೂ ಬೆರಗುಗೊಳ್ಳುವಂತೆ ಮಾಡಿತು.

ಚಿಕ್ಕಮಂಗಳೂರಿನ ಹಳವಳ್ಳಿಯ  ಶ್ರೀಕುಮಾರ ಸಾಂಸ್ಕೃತಿಕ ಪ್ರತಿಷ್ಠಾನದ ಮಹಿಳೆಯರು ಪ್ರದರ್ಶಿಸಿದ ತೆಂಕು ತಿಟ್ಟಿನ ‘ ಸುದರ್ಶನ ಗರ್ವಭಂಗ’ ದಲ್ಲಿ ಸುದರ್ಶನನ ಪಾತ್ರಧಾರಿ ಅಶ್ವಿನಿ ಆಚಾರ್ಯರ ಮಾತು, ಕುಣಿತದ ಜಾಣ್ಮೆ ಮನಮುಟ್ಟುವಂತಿತ್ತು. ಹತ್ತನೇ ಪ್ರದರ್ಶನ ಬೆಂಗಳೂರಿನ ಸಿರಿಕಲಾ ಮೇಳ ಪ್ರದರ್ಶಿಸಿದ ‘ ಸುಧನಾ್ವರ್ಜುನ’ ಪ್ರಸಂಗದಲ್ಲಿ ಸುಧನ್ವನ ಪಾತ್ರಧಾರಿ ಅತ್ಯಂತ ಪ್ರತಿಭಾವಂತ ಕಲಾವಿದೆ ಅರ್ಪಿತಾ ಹೆಗಡೆ ಅವರ ಕಲಾವಂತಿಕೆ ಯಕ್ಷಗಾನ ಪ್ರೇಮಿಗಳ ಮನದಲ್ಲಿ ಬಹುಕಾಲ ಉಳಿವಂತೆ ಮಾಡಿದೆ. ಅರ್ಪಿತಾ ಹೆಗಡೆ ಅವರ ಕುಣಿತ, ಭಾವಾಭಿನಯ, ಮಾತುಗಾರಿಕೆ ಎಲ್ಲ ಒಂದು ಕ್ಷಣ ಚಿಟ್ಟಾಣಿ, ಕೋಂಡದಕುಳಿಯಂಥ ಅಪ್ರತಿಮ ಕಲಾವಿದರನ್ನು ನೆನಪಿಸುವಂತೆ ಮಾಡಿತು.

ಕುಮಟಾ ಯಕ್ಷಗಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಜಿ.ಎಲ್‌.ಹೆಗಡೆ ಹಾಗೂ ಕಾರ್ಯದರ್ಶಿ ವಸಂತ ಭಟ್ಟ ಅವರ ಪ್ರತ್ನದ ಫಲವಾದ ತಲಾ ಒಂದೂವರೆ ಗಂಟೆಯ ಎರಡು ದಿನಗಳ ಶಿಸ್ತಿನ ಹತ್ತು ಯಕ್ಷಗಾನ ಪ್ರದರ್ಶನಗಳು ಕುಮಟಾದಲ್ಲಿ ಯಕ್ಷಲೋಕ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT