ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರನ್ನು ದೂರುವುದು?

Last Updated 26 ಜನವರಿ 2015, 19:30 IST
ಅಕ್ಷರ ಗಾತ್ರ

ಶಿಕ್ಷಣ  ವ್ಯವಸ್ಥೆ ಇಂದು  ತಳವೆಲ್ಲಾ  ತೂತು  ಹಿಡಿದ  ಕಡಾಯಿ­ಯಂತಾಗಿದೆ. ಅದರಲ್ಲೂ ಇತ್ತೀಚಿನ ವರ್ಷ­ಗಳಲ್ಲಿ ಬರುತ್ತಿರುವ ಹೊಸ ವಿಧಾನ­ಗಳು, ಕಾಯ್ದೆಗಳು ಶಿಕ್ಷಣದ ಗುಣಮಟ್ಟ ಕುಸಿಯಲು, ಶಿಕ್ಷಕರ ಮನೋ­ಧೋರಣೆ ಬದ­ಲಾಗಲು ಕಾರಣವಾಗಿವೆ. 18 ವರ್ಷ­ಗಳಿಂದ ಗಣಿತ ಮತ್ತು ವಿಜ್ಞಾನ ಕಲಿಸುತ್ತಿರುವ ಶಿಕ್ಷಕಿ­ಯಾಗಿ  ಯೋಚಿಸಿದಾಗ  ಬೋಧನೆಯ ಜೊತೆಗೇ ಒಳ್ಳೆಯ ನಡವಳಿಕೆ ಕಲಿಸಿಕೊಡುವಲ್ಲಿ ಶಿಕ್ಷಕರೂ, ಕಲಿಯುವಲ್ಲಿ  ವಿದ್ಯಾರ್ಥಿಗಳೂ, ಇದಕ್ಕೆ ಅನು­ಕೂಲಿಸು­ವಲ್ಲಿ ಇಲಾಖೆಯೂ ವಿಫಲವಾಗುತ್ತಿದೆ ಎನಿಸುತ್ತದೆ.

ದೇಶದ ಭವಿಷ್ಯ ತರಗತಿ ಕೋಣೆಗಳಲ್ಲಿ ರೂಪಿತವಾ­ಗು­ತ್ತ­ದೆಂದು ತಿಳಿದಿದ್ದರೂ ಕೇವಲ ಪಠ್ಯ ಪುಸ್ತಕದಲ್ಲಿರು­ವುದನ್ನು ವಿದ್ಯಾರ್ಥಿಗಳ ತಲೆಗೆ ತುರುಕುವುದು, ಇಲಾಖೆ ಕೇಳುವ ದಾಖಲೆಗಳನ್ನಿಡುವುದಷ್ಟೇ ನಮ್ಮ ಕೆಲಸ. ಇದರ ಹೊರತಾಗಿ ಯಾವ ವಿದ್ಯಾರ್ಥಿಯ ಹಣೆಬರಹ ವನ್ನೂ ಬದಲಿಸಲು ಆಗದು ಎನ್ನುವ ಧೋರಣೆ ನಮ್ಮಲ್ಲಿ ಎಷ್ಟು ಜನಕ್ಕಿಲ್ಲ ಎಂಬ ಬಗ್ಗೆ ಆತ್ಮವಿಮರ್ಶೆ  ಖಂಡಿತಾ ಬೇಕು.

ಇಂದಂತೂ  ಶಾಲೆಗಳಲ್ಲಿ  ನಿರಂತರ ವ್ಯಾಪಕ ಮೌಲ್ಯ­ಮಾಪನ ಪದ್ಧತಿ ಜಾರಿಗೆ ಬಂದಿದ್ದು, ಚಟು­ವಟಿ­ಕೆಗಳು, ಅವುಗಳ  ಮೌಲ್ಯಮಾಪನ, ಅದಕ್ಕೆ ಮಾನ­ದಂಡ­ಗಳು, ಯಾವ ಮಾನದಂಡಕ್ಕೆ ಎಷ್ಟು ಅಂಕ ಎನ್ನುವುದರ ಬಗ್ಗೆ ಶಿಕ್ಷಕರು ತಲೆಬಿಸಿ  ಮಾಡಿಕೊಳ್ಳುತ್ತಿ­ದ್ದಾರೆ. ಏಕೆಂದರೆ  ಶಿಕ್ಷಕರನ್ನು ಮೌಲ್ಯಮಾಪನ  ಮಾಡಲು ಬರುವ ಇಲಾಖೆಯವರು ಕೇಳುವುದು  ಕೇವಲ ದಾಖಲೆಗಳನ್ನಷ್ಟೆ! ತರಗತಿ  ಕೊಠಡಿಯಲ್ಲಿ ಶಿಕ್ಷಕರ ಬೋಧನೆಯನ್ನಾಗಲೀ, ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನಾಗಲೀ ಗಮನಿಸುವುದು ಇಂದು ಅರ್ಥ­ವಿಲ್ಲದ ಮಾತಾಗಿದೆ.

ಇನ್ನು ವಿದ್ಯಾರ್ಥಿಗಳ ನಡವಳಿಕೆಯ ಬಗ್ಗೆ   ಶಿಕ್ಷಕರ ಮಾತು, ವರ್ತನೆ ಯಾವುದೂ ವಿದ್ಯಾರ್ಥಿಗೆ ನೋವನ್ನುಂಟು­ಮಾಡ­ಬಾರದು  ಎನ್ನುವ  ಕಾನೂನು, ‘ಎಲ್ಲಾದರೂ ಹೋಗಲಿ ನಮ­ಗೇನು? ಇಲ್ಲದ ತಲೆನೋವು ಯಾಕೆ?’ ಎಂಬ ಮನೋ­ಧೋರಣೆ­ಯನ್ನು ಶಿಕ್ಷಕರಲ್ಲಿ ಮೂಡಿಸಿದ್ದರೆ  ತಪ್ಪಲ್ಲ. ವಿದ್ಯಾರ್ಥಿ­ಗಳೊಂದಿಗೆ ಅಮಾನವೀಯ­ವಾಗಿ  ವರ್ತಿಸುವುದು  ನಿಜಕ್ಕೂ  ಅಪರಾಧ. ಆದರೆ ಒಳ್ಳೆಯ ಮಾತುಗಳಿಗೆ, ತಿಳಿವಳಿಕೆಗೆ ದಾರಿಗೆ ಬಾರದ ಮಕ್ಕಳನ್ನು ಹೇಗೆ ತಿದ್ದುವುದು?

ಪೋಷಕರು ‘ಶಾಲೆಗೆ ಹೋಗು’ ಎಂದು ಒತ್ತಾಯಿಸಿ­ದ್ದಕ್ಕೆ, ಶಿಕ್ಷಕರು ಬುದ್ಧಿ ಮಾತು ಹೇಳಿದ್ದಕ್ಕೆ  ಓಡಿ ಹೋಗುವ, ಆತ್ಮಹತ್ಯೆಯ ಬಗೆ ಆಲೋಚಿಸುವ ಕೆಟ್ಟ ಬೆಳವಣಿಗೆ­ಗಳಾಗುತ್ತಿರುವಾಗ  ಶಿಕ್ಷಕರು ಬಯಸಿ­ದರೂ, ಶ್ರಮಿಸಿದರೂ ಎಲ್ಲರಲ್ಲಿ ನೈತಿಕ ಮೌಲ್ಯ­ಗಳನ್ನಾಗಲೀ, ಜವಾಬ್ದಾರಿಯ­ನ್ನಾ­ಗಲೀ, ಸದ್ವರ್ತನೆ­ಯನ್ನಾಗಲೀ  ಕಲಿಸಲು ವಿಫಲರಾದರೆ ಯಾರನ್ನು ದೂರುವುದು?      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT