ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಮನ್‌: ಬಂಡುಕೋರರ ಪ್ರಾಬಲ್ಯ ಅನಿರೀಕ್ಷಿತವಲ್ಲ!

ಅಕ್ಷರ ಗಾತ್ರ

ಸನಾ: 2010ರಲ್ಲಿ ನಾನು ಇಲ್ಲಿಗೆ ಸ್ಥಳಾಂತರಗೊಂಡಾಗ ಒಬ್ಬನೇ ಒಬ್ಬ ಬಂದೂಕುಧಾರಿಯೂ ಬೀದಿಯಲ್ಲಿ ಕಾಣುತ್ತಿರಲಿಲ್ಲ. ಬಂದೂಕು ನಿಗ್ರಹ ಕಾನೂನುಗಳನ್ನು ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರು. ಹೀಗಾಗಿ ಹಿಂಸಾಚಾರ ಬಹುತೇಕ ಇರಲೇ ಇಲ್ಲ.

ಆದರೆ ಈಗ ನನ್ನ ಹೆಂಡತಿ ಸೂಪರ್‌ಮಾರ್ಕೆಟ್‌ಗೆ ಹೋಗಬೇಕೆಂದರೆ ಬೆಂಗಾವಲಾಗಿ ನಾನೂ ಜೊತೆಗಿರುತ್ತೇನೆ. ಅದೂ ಸ್ವಯಂಚಾಲಿತ ಬಂದೂಕು ಮತ್ತು 9 ಮಿಲಿಮೀಟರ್‌ನ ಪಿಸ್ತೂಲು ಸಮೇತನಾಗಿ.

ಕಳೆದ ವಾರ ಇಲ್ಲಿನ ಸರ್ಕಾರ ಉರುಳಿತು. ಅಧ್ಯಕ್ಷ ಅಬ್ದು ರಬ್ಬು ಮನ್ಸೌರ್‌ ಹದಿ ರಾಜೀನಾಮೆ ಕೊಟ್ಟರು. ಪ್ರಧಾನಿಯೊಟ್ಟಿಗೆ ಮಂತ್ರಿಮಂಡಲವೂ ಅವರನ್ನು ಅನುಸರಿಸಿತು. ದಶಕಕ್ಕಿಂತ ಹಿಂದಿನಿಂದಲೂ ಸರ್ಕಾರದ ವಿರುದ್ಧ ರಕ್ತಸಿಕ್ತ ಹೋರಾಟಗಳನ್ನು ನಡೆಸಿಕೊಂಡೇ ಬಂದಿದ್ದ, ದೇಶದ ಉತ್ತರ ಭಾಗದ ಶಿಯಾ ಉಗ್ರರ ಗುಂಪಿಗೆ ಸೇರಿದ ಹೌಥಿಗಳು ಈಗ ರಾಜಧಾನಿಯ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಬೀದಿಯ ಮೂಲೆ ಮೂಲೆಗಳಲ್ಲಿ ಅವರ ಬಾವುಟಗಳು ಹಾರಾಡುತ್ತಿವೆ. ನಗರ ಪ್ರವೇಶ ಮಾರ್ಗದ ತಪಾಸಣಾ ಕೇಂದ್ರಗಳನ್ನು ಶಸ್ತ್ರಸಜ್ಜಿತ ಬಂಡುಕೋರರು ನಿರ್ವಹಿಸುತ್ತಿದ್ದಾರೆ.

ಈ ಬೆಳವಣಿಗೆಯು ವಿದೇಶಿ ಅಧಿಕಾರಿಗಳಿಗೆ ಆಘಾತ ಉಂಟುಮಾಡಿದೆ. ಆದರೆ ಇಲ್ಲೇ ಇರುವ ನಮ್ಮಂಥವರಿಗೆ ಇದರಿಂದ ಅಷ್ಟೇನೂ ಅಚ್ಚರಿಯಾಗಿಲ್ಲ. 2011ರಲ್ಲಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದಾಗ, ಆಗಿನ ಅಧ್ಯಕ್ಷ ಅಲಿ ಅಬ್ದುಲ್ಲ ಸಲೇಹ್‌ ಅವರು ವಿಶ್ವಸಂಸ್ಥೆಯ ಒತ್ತಡಕ್ಕೆ ಮಣಿದು ಪದತ್ಯಾಗ ಮಾಡಿದ್ದರು. ನಂತರ ಚುನಾವಣೆ ನಡೆದು, ಏಕೈಕ ಅಭ್ಯರ್ಥಿಯಾಗಿದ್ದ ಮತ್ತು ಸಲೇಹ್‌ ಅವರ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಹದಿ ಅಧ್ಯಕ್ಷರಾಗಿ ಆಯ್ಕೆಯಾದರು.

‘ಅಹಿಂಸಾತ್ಮಕ ರಾಜಕೀಯ ಪರಿವರ್ತನೆಯಾದ ಈ ಯೆಮನ್‌ ಮಾದರಿಯು ಅರಬ್‌ನ ಇತರ ಸಮಸ್ಯಾತ್ಮಕ ರಾಷ್ಟ್ರಗಳಿಗೂ ಆದರ್ಶಪ್ರಾಯವಾದ ಪ್ರಕ್ರಿಯೆ’ ಎಂದು ಆಗ ರಾಜತಾಂತ್ರಿಕರು ಈ ಬೆಳವಣಿಗೆಯನ್ನು ಶ್ಲಾಘಿಸಿದ್ದರು. ಆದರೆ ‘ಹೆತ್ತಮ್ಮನ ಕಣ್ಣಿಗೆ ಮಂಗನೂ ಕಸ್ತೂರಿ ಮೃಗದಂತೆಯೇ ಕಾಣುತ್ತದೆ’ ಎಂಬುದು ಯೆಮನ್‌ನ ಒಂದು ನಾಣ್ಣುಡಿ.

ಇಂತಹ ರಾಜಕೀಯ ಸ್ಥಿತ್ಯಂತರದೊಟ್ಟಿಗೆ ಹಿಂಸೆಯೂ ದಿನನಿತ್ಯದ ಸಂಗತಿಯಾಯಿತು. ರಾಷ್ಟ್ರವು ನಿಧಾನವಾಗಿ ವಿಭಜನೆಯಾಗುತ್ತಾ ಬಂದಿತು. ವಿಶ್ವಸಂಸ್ಥೆಯ ಪ್ರತಿನಿಧಿ ಜಮಾಲ್‌ ಬೆನೊಮರ್‌ ನೇತೃತ್ವದ ಈ ಪರಿವರ್ತನಾ ಪ್ರಕ್ರಿಯೆಯು ತಪ್ಪು ಗ್ರಹಿಕೆಗಳು ಮತ್ತು ಅಸಮರ್ಪಕ ನಿರ್ವಹಣೆಗಳಿಂದ ಸಂಪೂರ್ಣವಾಗಿ ವಿಫಲವಾಯಿತು.

ಯೆಮನ್‌ನ ತೈಲೋದ್ಯಮ ಬಹುತೇಕ ಮುಚ್ಚಿಹೋಯಿತು. ಹಲವು ವರ್ಷಗಳಿಂದ ನನ್ನ ಸಲಹೆ ಪಡೆಯುತ್ತಿದ್ದವರೂ ಸೇರಿದಂತೆ ವಿದೇಶಿ ಬಂಡವಾಳ ಹೂಡಿಕೆದಾರರು ವಾಪಸಾದರು. ತೈಲ ಸಂಪದ್ಭರಿತವಾದ ಮಾರಿಬ್‌ ಪ್ರಾಂತ್ಯದ ಆದಿವಾಸಿಗಳು ‘ರೆಡ್‌ ಸೀ’ ಕಚ್ಛಾ ತೈಲ ರಫ್ತು ಪೈಪ್‌ಲೈನ್‌ ಅನ್ನು ಪದೇ ಪದೇ ಸ್ಫೋಟಿಸಿದರು. ತಮ್ಮ ಸ್ಥಳೀಯ ಅಭಿವೃದ್ಧಿ ಬೇಡಿಕೆಗಳನ್ನು ನಿರ್ಲಕ್ಷಿಸಿದ ಅಧ್ಯಕ್ಷರ ವಿರುದ್ಧ ಅವರು ತಿರುಗಿಬಿದ್ದಿದ್ದರು. ಹಧ್ರಮೌಟ್‌ ಪ್ರದೇಶದ ಆದಿವಾಸಿಗಳೂ ತಮ್ಮ ಬೇಡಿಕೆಯ ನಿರ್ಲಕ್ಷ್ಯ ಖಂಡಿಸಿ ತೈಲ ನಿಕ್ಷೇಪಗಳ ಮೇಲೆ ನಿಯಂತ್ರಣ ಸಾಧಿಸಿದರು.

ಹಣಕ್ಕಾಗಿ ವಿದೇಶಿಯರು ಮತ್ತು ಸ್ಥಳೀಯರ ಅಪಹರಣ ಪ್ರಕರಣಗಳ ಸಂಖ್ಯೆ ಏರಿತು. ಉತ್ತರ ಯೆಮನ್‌ ಪೂರ್ತಿಯಾಗಿ ಹೌಥಿಗಳು ಮತ್ತು ಯೆಮನ್‌ ಸೇನಾ ಪಡೆ ನಡುವಿನ ವ್ಯಾಪಕ ಆಂತರಿಕ ಯುದ್ಧದಲ್ಲಿ ನಲುಗಿಹೋಯಿತು. ಅರಾಜಕತೆಗೆ ಪುರಾವೆ ಎಂಬಂತೆ, ಶಸ್ತ್ರಸಜ್ಜಿತ ಬಣಗಳ ನಡುವಿನ ಕಾಳಗದಲ್ಲಿ ನೂರಕ್ಕೂ ಹೆಚ್ಚು ಅಧಿಕಾರಿಗಳು ಹತ್ಯೆಗೊಳಗಾದರು.

ಕಳೆದ ವರ್ಷ ಆರು ತಿಂಗಳ ಕಾಲ ಹೌಥಿಗಳು ಆಕ್ರಮಣ ನಡೆಸಿದ್ದರು. ಈ ಸಂದರ್ಭದಲ್ಲಿ ಅವರ ವಿರುದ್ಧ ಸೆಣಸಲು ಉತ್ತರ ಭಾಗಕ್ಕೆ ಸೇನಾಪಡೆಯನ್ನು ನಿಯೋಜಿಸಲು ಹದಿ ನಿರಾಕರಿಸಿದರು. ಬದಲಿಗೆ ಕದನ ವಿರಾಮಗಳನ್ನು ಘೋಷಿಸುತ್ತಾ, ಹೌಥಿಗಳು ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ನಿರಂತರವಾಗಿ ಮಧ್ಯಸ್ಥಿಕೆ ನಿಯೋಗಗಳನ್ನು ನೇಮಿಸುವುದರಲ್ಲೇ ನಿರತರಾದರು.

ಆಂತರಿಕ ಯುದ್ಧವನ್ನು ಸಂಪೂರ್ಣವಾಗಿ ತಡೆದು ರಾಜತಾಂತ್ರಿಕ ಮಾರ್ಗ ಅನುಸರಿಸಿದರೆ ಯಶಸ್ಸು ಕಾಣಬಹುದು ಎಂಬುದೇ ಹದಿ ಮತ್ತು ವಿಶ್ವಸಂಸ್ಥೆಯ ಬಲವಾದ ನಂಬಿಕೆಯಾಗಿತ್ತು. ಆದರೆ ದೇಶದಲ್ಲಿ ಆದದ್ದೇ ಬೇರೆ. ಹೌಥಿಗಳ ಆಕ್ರಮಣಕ್ಕೆ ಕಡಿವಾಣ ಹಾಕಲು ವಿಫಲರಾದದ್ದು ಮತ್ತು ಶಾಂತಿ ಪರವಾದ ನಿರುತ್ಸಾಹದ ಕರೆ ಹದಿ ಅವರ ದೌರ್ಬಲ್ಯದಂತೆ ಕಾಣಿಸತೊಡಗಿತು.

ಇದರಿಂದಾಗಿ ಕದನವಿರಾಮದ ಪ್ರತಿ ಒಪ್ಪಂದವನ್ನೂ ಹೌಥಿ ಉಗ್ರರು ನಿರ್ಭಯವಾಗಿ ಉಲ್ಲಂಘಿಸುತ್ತಾ ಬಂದರು. ಕೇವಲ ಆರೇ ತಿಂಗಳುಗಳಲ್ಲಿ ದೇಶ ತನ್ನ ಬೃಹತ್‌ ಸೇನಾ ಶಸ್ತ್ರಾಸ್ತ್ರ ಮತ್ತು ಉತ್ತರದ ನಾಲ್ಕು ಪ್ರಾಂತ್ಯಗಳ ಮೇಲಿನ ಹಿಡಿತವನ್ನು ಕಳೆದುಕೊಂಡಿತು.
ನೂರಾರು ಸೈನಿಕರ ಸಾವಿಗೆ ಕಾರಣರಾದ ಹೌಥಿಗಳನ್ನು ಶಿಕ್ಷಿಸಲು ನಿರಾಕರಿಸಿದ ಹದಿ ಅವರ ನಿಲುವಿನ ವಿರುದ್ಧ ಸೇನಾಪಡೆಯಲ್ಲಿ ಅಸಮಾಧಾನ ಭುಗಿಲೆದ್ದಿತು. ಹೀಗಾಗಿ ಸೆಪ್ಟೆಂಬರ್‌ನಲ್ಲಿ ಹೌಥಿ ಉಗ್ರರು ರಾಜಧಾನಿ ಸನಾವನ್ನು ಪ್ರವೇಶಿಸಿ ತಮ್ಮ ನಿಯಂತ್ರಣ ಸಾಧಿಸಿದ್ದು ಅಚ್ಚರಿಯ ಸಂಗತಿಯೇನೂ ಆಗಿರಲಿಲ್ಲ. ಹೌಥಿಗಳ ಹೋರಾಟದ ಬಗ್ಗೆ ಅನುಕಂಪ ಹೊಂದಿದ್ದವರು ಅವರ ಕಾರ್ಯಾಚರಣೆಯನ್ನು ಸದ್ದಿಲ್ಲದೇ ಬೆಂಬಲಿಸಿದರು. ಸೇನಾಪಡೆಯು ಹೌಥಿಗಳ ವಿರುದ್ಧ ಹೋರಾಡಲು ನಿರಾಕರಿಸಿತು. ಈ ಮೂಲಕ, ಎಲ್ಲವನ್ನೂ ಸಹಿಸಿಕೊಂಡು ಹೋಗುವ ತಮ್ಮದೇ ನೀತಿಯ ರುಚಿಯನ್ನು ಹದಿಯವರಿಗೆ ಅದು ತೋರಿಸಿಕೊಟ್ಟಿತ್ತು. ಸರ್ಕಾರ ಮತ್ತಷ್ಟು ರಾಜತಾಂತ್ರಿಕ ತಂತ್ರಗಳನ್ನು ಪ್ರಯೋಗಿಸಿ ನೋಡಿತು. ಬೆನೋಮರ್‌ ಅವರು ಹೌಥಿಗಳೊಂದಿಗೆ ಒಪ್ಪಂದಕ್ಕೆ ಮುಂದಾದರು. ಆದರೆ ಇದು ಪೂರ್ತಿ ಅವಾಸ್ತವಿಕವಾಗಿತ್ತು. 35 ಜನರನ್ನು ಬಲಿ ತೆಗೆದುಕೊಂಡ ಆತ್ಮಾಹುತಿ ದಾಳಿ ಸೇರಿದಂತೆ ನಗರದಲ್ಲಿ ಹಲವು ಹಿಂಸಾಕೃತ್ಯಗಳು ನಡೆದವು. ಇವಕ್ಕೆಲ್ಲ ಹೌಥಿಗಳನ್ನು ವಿರೋಧಿಸುವ ಸ್ಥಳೀಯ ಅಲ್‌ ಖೈದಾ ಘಟಕವೇ ಕಾರಣ ಎಂಬ ಆರೋಪಗಳು ಕೇಳಿಬಂದವು.

ಕಳೆದ ವಾರ ಸರ್ಕಾರ ರಾಜೀನಾಮೆ ನೀಡಿದಾಗಿನಿಂದಲೂ ತಮ್ಮ ನಿಯಂತ್ರಣವನ್ನು ಬಿಗಿಗೊಳಿಸಿರುವ ಹೌಥಿಗಳು, ಹದಿ ಹಾಗೂ ಇತರ ಸಚಿವರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ. ಅಧ್ಯಕ್ಷರ ರಾಜೀನಾಮೆಯಿಂದ ಸ್ವತಃ ಹೌಥಿಗಳೇ ಅಚ್ಚರಿಗೊಳಗಾದಂತೆ ಕಾಣುತ್ತದೆ. ಅಧಿಕಾರವನ್ನು ಇಷ್ಟೊಂದು ಸುಲಭವಾಗಿ ವಶಪಡಿಸಿಕೊಳ್ಳಬಹು ದೆಂದು ಅವರು ಸಹ ನಿರೀಕ್ಷಿಸಿರಲಿಲ್ಲ. ವಿಶ್ವಸಂಸ್ಥೆ ನಿಯೋಗವು ಮತ್ತೆ ಹೊಸ ರಾಜಕೀಯ ಒಪ್ಪಂದ ಏರ್ಪಡಿಸುವವರೆಗೂ ನಾವು ಕಾಯುತ್ತೇವೆ.

ಏತನ್ಮಧ್ಯೆ, ರಾಜಧಾನಿಯ ಆಡಳಿತದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಸೂಪರ್‌ಮಾರ್ಕೆಟ್‌ನ ಪಾರ್ಕಿಂಗ್‌ ಸ್ಥಳಗಳು ಬೃಹತ್‌ ಶಸ್ತ್ರಸಜ್ಜಿತ ಪಹರೆಯವರಿಂದ ತುಂಬಿಹೋಗಿವೆ. ಗ್ರಾಹಕರು ಭುಜಕ್ಕೆ ಬಂದೂಕು ನೇತುಹಾಕಿಕೊಂಡು ನಡುದಾರಿಗಳಲ್ಲಿ ನಡೆದಾಡುತ್ತಾರೆ. ಸನಾದಲ್ಲಿನ ಬಹುತೇಕ ಟ್ಯಾಕ್ಸಿ ಚಾಲಕರ ಆಸನಗಳ ಕೆಳಗೆ ಪಿಸ್ತೂಲು ಇರುತ್ತದೆ. ಪ್ರಬಲ ಬಂಡುಕೋರರ ವಿರುದ್ಧ ತೋರಿದ ನಿಷ್ಕ್ರಿಯತೆ, ದೇಶದಾದ್ಯಂತ ಕಾನೂನು ಮತ್ತು ಭದ್ರತೆ ಜಾರಿಗೊಳಿಸುವಲ್ಲಿ ಇಚ್ಛಾಶಕ್ತಿಯ ಕೊರತೆ, ಜನಸಾಮಾನ್ಯರ ಜೀವನಮಟ್ಟ ಸುಧಾರಿಸುವಲ್ಲಿನ ವೈಫಲ್ಯದಂತಹ ಸತತ ಲೋಪಗಳಿಂದ ಅಂತಿಮವಾಗಿ ಹದಿ ಅವರ ಸರ್ಕಾರ ಉರುಳಿತು. ದೇಶದ ನಾಗರಿಕರು 2011ರಲ್ಲಿ ಬೀದಿಗಿಳಿದು ಹೋರಾಡಿ ತಂದಿದ್ದಷ್ಟು ಬದಲಾವಣೆಯನ್ನು ಸಹ ತರಲು ಹದಿಯವರಿಗೆ ಮತ್ತು ವಿಶ್ವಸಂಸ್ಥೆಗೆ ಸಾಧ್ಯವಾಗಲಿಲ್ಲ.

ಹೀಗೆ ‘ಯೆಮನ್‌ ಮಾದರಿ’ಯ ಜಾಗದಲ್ಲಿ ‘ಹಿಂಸಾಚಾರ ಲಾಭದಾಯಕ’ ಎಂಬ ತನ್ನ ಸರಳವಾದ ನಾಣ್ಣುಡಿಯೊಂದಿಗೆ ‘ಹೌಥಿ ಮಾದರಿ’ ಬಂದು ಕುಳಿತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT