ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನಾ ಆಯೋಗ: ಪರ್ಯಾಯವೇನು?

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಯೋಜನಾ ಆಯೋಗವನ್ನು ರದ್ದುಪಡಿಸಿ ಅದರ ಸ್ಥಾನದಲ್ಲಿ ಹೊಸತೊಂದು ಸಂಸ್ಥೆ ಅಥವಾ ಸಮಿತಿಯನ್ನು ಆರಂಭಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿರುವ ಕೇಂದ್ರ ಸರ್ಕಾರ, ಹೊಸ ಸಂಸ್ಥೆಯ ರಚನೆ ಹೇಗಿರಬೇಕೆಂಬ ಬಗ್ಗೆ ಜನರ ಅಭಿಪ್ರಾಯ ಮತ್ತು ಸಲಹೆಗಳನ್ನೂ ಕೇಳಿದೆ.

ಕೇಂದ್ರ ಸರ್ಕಾರದ ಈ ನಡೆಯನ್ನು ಮುಖ್ಯವಾಗಿ ಕೈಗಾರಿಕೋದ್ಯಮಿಗಳು ಮತ್ತು ಕೆಲವು ಆರ್ಥಿಕ ತಜ್ಞರು ಸ್ವಾಗತಿಸಿದ್ದರೆ, ಹಲವು ಅರ್ಥ ಶಾಸ್ತ್ರಜ್ಞರು ಮತ್ತು ಮುಖ್ಯವಾಗಿ ರಾಜಕೀಯ ನಾಯಕರು ವಿರೋಧಿಸಿದ್ದಾರೆ. ಕೇಂದ್ರ ಯೋಜನಾ ಆಯೋಗದ ಕಾರ್ಯವೈಖರಿಯಲ್ಲಿ ಸಮಸ್ಯೆಗಳಿವೆ ಎಂಬುದನ್ನು ಎಲ್ಲರೂ ಒಪ್ಪುತ್ತಾರಾದರೂ, ಅದನ್ನು ಬರ್ಕಾಸ್ತುಗೊಳಿಸುವ ಬಗ್ಗೆ ಮತ್ತು ಅದರ ಸ್ಥಾನದಲ್ಲಿ ಆರಂಭಿಸಲು ಉದ್ದೇಶಿಸಿರುವ ಹೊಸ ಸಂಸ್ಥೆಯ ಮಾದರಿ ಬಗ್ಗೆ ಹಲವು ಭಿನ್ನಾಭಿಪ್ರಾಯಗಳೂ ವ್ಯಕ್ತವಾಗಿವೆ.

ಭಾರತೀಯ ಯೋಜನಾ ಆಯೋಗ (ಪ್ಲಾನಿಂಗ್ ಕಮಿಷನ್ ಆಫ್ ಇಂಡಿಯ), ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸುವ ಜವಹರಲಾಲ್ ನೆಹರೂ ಅವರ ಒತ್ತಾಸೆಯಿಂದ  ಐವತ್ತರ ದಶಕದಲ್ಲಿ ಆರಂಭವಾದ ಸಂಸ್ಥೆ. ಈಗ ಮೂವತ್ತಕ್ಕೂ ಹೆಚ್ಚು ವಿಭಾಗಗಳನ್ನೂ, ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನೂ ಹೊಂದಿದ್ದು ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿರುವ (ಯೋಜನಾ ಆಯೋಗದ ನಿರ್ವಹಣೆಗೇ ಸರಿಯಾದ ಯೋಜನೆ ಇಲ್ಲ ಎಂಬ ಟೀಕೆಗಳೂ ಇವೆ)  ಯೋಜನಾ ಆಯೋಗ ಪಂಚ ವಾರ್ಷಿಕ ಯೋಜನೆಗಳ ತಯಾರಿ, ಆರ್ಥಿಕ ಅಭಿವೃದ್ಧಿಯ ಪ್ರಮುಖ ಆಯಾಮಗಳನ್ನು ಗುರುತಿಸುವುದು, ಅವುಗಳ ಬಗ್ಗೆ ಕಾಲ ಕಾಲಕ್ಕೆ ಅಧ್ಯಯನ ನಡೆಸುವುದು ಮತ್ತು ಮುಖ್ಯವಾಗಿ ವಿವಿಧ ಯೋಜನೆಗಳು ಮತ್ತು ವಿವಿಧ ರಾಜ್ಯಗಳಿಗೆ ಯೋಜನಾ ಅನುದಾನವನ್ನು ನಿರ್ಧರಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.

ಕೇಂದ್ರ ಸರಕಾರದ ಅಧೀನದ, ಆದರೆ ತಾಂತ್ರಿಕವಾಗಿ ಕಾರ್ಯ ಸ್ವಾತಂತ್ರ್ಯ ಹೊಂದಿರುವ ಈ ಸಂಸ್ಥೆಗೆ ಒಬ್ಬ ಉಪಾಧ್ಯಕ್ಷರಿರುತ್ತಾರೆ. ಆಯೋಗದ ಅಧ್ಯಕ್ಷರಾದ ಪ್ರಧಾನ ಮಂತ್ರಿಗಳ ಪರವಾಗಿ ಎಲ್ಲ ಜವಾಬ್ದಾರಿಯನ್ನೂ ಅವರು ನಿರ್ವಹಿಸುತ್ತಾರೆ.  ಆಯೋಗವು ಆರ್ಥಿಕ ಮತ್ತು ಇತರೆ ಕ್ಷೇತ್ರಗಳ ಪರಿಣಿತರನ್ನು ಸದಸ್ಯರನ್ನಾಗಿ ಹೊಂದಿದೆ. ಇವರು ಯೋಜನಾ ಆಯೋಗದ ಕೆಲಸಗಳಿಗೆ ಸಂಬಂಧಿಸಿದ ನೀತಿಗಳ ರಚನೆಗೆ ಸಹಕರಿಸುತ್ತಾರೆ.

ಯೋಜನಾ ಆಯೋಗಕ್ಕೆ ಸಲಹೆಗಳನ್ನು ನೀಡಲು ಶಾಸನಬದ್ಧ ಸ್ಥಾನ ಹೊಂದಿಲ್ಲದ ಆದರೆ ಆಯೋಗದ ಕೆಲಸಗಳನ್ನು ವಿಮರ್ಶಿಸುತ್ತಾ, ಅಭಿವೃಧ್ಧಿ ಅಗತ್ಯಗಳ ಬಗ್ಗೆ ಅದಕ್ಕೆ ಸಲಹೆ ನೀಡುವ ಉದ್ದೇಶದಿಂದ ರಾಷ್ತ್ರೀಯ ಅಭಿವೃಧ್ಧಿ ಪರಿಷತ್ತನ್ನು (ನ್ಯಾಷನಲ್ ಡೆವಲಪ್‌ಮೆಂಟ್ ಕೌನ್ಸಿಲ್;  ಎನ್‌ಡಿಸಿ) ಸ್ಥಾಪಿಸಲಾಗಿದೆ. ಪ್ರಧಾನ ಮಂತ್ರಿಗಳು ಅಧ್ಯಕ್ಷರಾಗಿರುವ ಎನ್‌ಡಿಸಿಗೆ ಯೋಜನಾ ಆಯೋಗದ ಎಲ್ಲ ಸದಸ್ಯರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪ್ರಮುಖ ಖಾತೆಗಳನ್ನು ಹೊಂದಿರುವ ಕೇಂದ್ರ ಸಚಿವರುಗಳು ಸದಸ್ಯರಾಗಿರುತ್ತಾರೆ.  ಕಾಲದಿಂದ ಕಾಲಕ್ಕೆ ಎನ್‌ಡಿಸಿ ಸಭೆಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಆಧಾರದಲ್ಲಿ ಯೋಜನಾ ಆಯೋಗವು ಅಭಿವೃಧ್ಧಿ ಯೋಜನೆಗಳನ್ನೂ, ಅವುಗಳಿಗೆ ಬೇಕಾದ ಸಂಪನ್ಮೂಲಗಳ ಅಂದಾಜುಗಳನ್ನೂ ಮತ್ತು ಯಾವ ಯೋಜನೆ ದೇಶದ ಯಾವ ಪ್ರದೇಶದಲ್ಲಿ ಅನುಷ್ಠಾನಗೊಳ್ಳಬೇಕೆಂಬುದನ್ನೂ ಸೂಚಿಸುತ್ತದೆ.

ಆಯೋಗದ ಪ್ರಮುಖ ಸಮಸ್ಯೆ
1950ರ ದಶಕದಲ್ಲಿ ಭಾರತ ಸಮಾಜವಾದಿ ನೆಲೆಯಲ್ಲಿ, ಸರ್ಕಾರದ ಹೂಡಿಕೆಗಳೊಂದಿಗೆ, ಪಂಚವಾರ್ಷಿಕ ಯೋಜನೆಗಳ ಮೂಲಕ ಅಭಿವೃದ್ಧಿ ಸಾಧಿಸಲು ಹೊರಟಾಗ ಆರಂಭವಾದ ಯೋಜನಾ ಆಯೋಗದ ಕಾರ್ಯಾನುಷ್ಠಾನದ ರೀತಿ ಇಂದಿನ ಅಗತ್ಯಗಳಿಗೆ ಹೊಂದಿಕೊಳ್ಳುವುದಿಲ್ಲ ಎಂಬುದು ನೂತನ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಸೇರಿದಂತೆ ಹಲವರ ಅಭಿಪ್ರಾಯ. 

ಆರ್ಥಿಕ ಬೆಳವಣಿಗೆ ಇಂದು ಸರಕಾರವನ್ನೇ ಅವಲಂಬಿಸಿಲ್ಲ. ಮಾರುಕಟ್ಟೆ ಆಶಯಗಳು, ಬೆಳವಣಿಗೆಯ ಅಗತ್ಯಗಳು ಹಾಗೂ ಬದಲಾವಣೆಯ ವೇಗಕ್ಕೆ ಸ್ಪಂದಿಸುವುದು ಯೋಜನಾ ಆಯೋಗಕ್ಕೆ ಸಾಧ್ಯಗಾಗುತ್ತಿಲ್ಲ. ಯೋಜನೆಗಳ ತಯಾರಿಕೆಯಲ್ಲಿ ಏಕತಾನತೆ, ಯೋಜನೆಗಳನ್ನು ಸಮಯ ಮತ್ತು ಬಂಡವಾಳ ಹೂಡಿಕೆ ಮಿತಿಯೊಳಗೆ ಅನುಷ್ಠಾನಗೊಳಿಸಲು ಆಗದೇ ಇರುವುದು ಮತ್ತು ಯೋಜನಾ ಆಯೋಗವನ್ನು ನಡೆಸಿಕೊಂಡು ಹೋಗುವುದೇ ಆರ್ಥಿಕ ಹೊರೆಯಾಗುವಂತೆ ಅದು ಬೆಳೆದಿರುವುದು... ಇವೆಲ್ಲವೂ ಸದ್ಯ ಕಾಣುಬರುತ್ತಿರುವ ಪ್ರಮುಖ ಸಮಸ್ಯೆಗಳೆಂದು ಹೇಳಲಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾದವರು ಸದಸ್ಯರಾಗಿರಬೇಕಾದ ಯೋಜನಾ ಆಯೋಗದಲ್ಲಿ ರಾಜಕೀಯ ಅಗತ್ಯಗಳು ಮತ್ತು ಒತ್ತಡಗಳ ಕಾರಣಗಳಿಂದಾಗಿ ಅರ್ಹರಾದವರಿಗೆ ಅವಕಾಶ ನೀಡದಿರುವುದಲ್ಲದೇ ಅನರ್ಹರಿಗೆ ಸ್ಥಾನ ನೀಡಿ ಸಂಸ್ಥೆಯನ್ನು ರಾಜಕೀಯ ತಂಗುದಾಣ ಮಾಡಲಾಗಿದೆ. ರಾಜಕೀಯ ಕಾರಣಗಳಿಂದಾಗಿಯೇ ಯೋಜನಾ ಆಯೋಗವು ಸಂಪನ್ಮೂಲ ನೀಡಿಕೆಯಲ್ಲಿ ರಾಜ್ಯಗಳ ನಡುವೆ ತಾರತಮ್ಯ ಮಾಡುತ್ತಿದೆ ಮತ್ತು ಯೋಜನಾ ತಯಾರಿಕೆ ಮತ್ತು ಅನುಷ್ಠಾನದಲ್ಲಿ ರಾಜ್ಯಗಳಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂಬ ಟೀಕೆಗಳೂ ಕೇಳಿಬಂದಿವೆ.

ಬಡತನ ರೇಖೆ ಹೇಳಿಕೆ ವಿವಾದ
ಯೋಜನಾ ಆಯೋಗದ ದಕ್ಷತೆ ಬಗ್ಗೆಯೂ ಹಲವು ಅಪಸ್ವರ ಕೇಳಿಬಂದಿವೆ. ಕೆಲ ವರ್ಷಗಳ ಹಿಂದೆ ದಿನವೊಂದಕ್ಕೆ ₨೨೭ಕ್ಕಿಂತ ಹೆಚ್ಚು ಖರ್ಚು ಮಾಡಬಲ್ಲವರನ್ನು ಬಡತನದ ರೇಖೆಯಿಂದ ಮೇಲಿರುವವರೆಂದು ಭಾವಿಸಬಹುದು ಎಂಬ ಸೂತ್ರವನ್ನು ಮುಂದಿಟ್ಟಿದ್ದು, ಅದೇ ಸಮಯದಲ್ಲಿ ಯೋಜನಾ ಭವನದ ಶೌಚಾಲಯಗಳನ್ನು ನವೀಕರಿಸಲು ಸುಮಾರು ₨30 ಲಕ್ಷ ವೆಚ್ಚ ಮಾಡಿದ್ದು, ಕೆಂಪು ಪಟ್ಟಿಯ ಕಾರಣದಿಂದಾಗಿ ಎಲ್ಲ ನಿರ್ಧಾರಗಳಲ್ಲಿ ಅನಗತ್ಯ ವಿಳಂಬವಾಗುವುದು, ಯೋಜನೆಗಳ ರೂಪುರೇಷೆಗಳಲ್ಲಿ ಯಾವುದೇ ಹೊಸತನ, ವೈವಿಧ್ಯ ಅಥವಾ ಪರಿಪಕ್ವತೆ ಕಾಣದಿರುವುದು ಮತ್ತು ಇದರಿಂದಾಗಿ ಯೋಜನೆಗಳ ಉದೇಶಿತ ಗುರಿ ಮುಟ್ಟಲು ಸಾಧ್ಯವಾಗದಿರುವುದು ಇವೆಲ್ಲ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯ ಗುಣಲಕ್ಷಣಗಳಲ್ಲವೆಂದು ಹಲವರು ಬೊಟ್ಟು ಮಾಡುತ್ತಿದ್ದಾರೆ.

ಬದಲಾವಣೆ ಆಶಯ
ಯೋಜನಾ ಆಯೋಗದ ಕಾರ್ಯವೈಖರಿ ಬದಲಾಗಬೇಕೆಂದು ಹೆಚ್ಚಿನ ತಜ್ಞರು ಬಯಸಿದ್ದಾರೆ ಮತ್ತು ಆಗಾಗ್ಗೆ ಸಲಹೆಗಳನ್ನೂ ನೀಡುತ್ತಿದ್ದಾರೆ.  ಪ್ರಧಾನ ಮಂತ್ರಿಗಳು ಆ. 15ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಯೋಜನಾ ಆಯೋಗವನ್ನು ರದ್ದು ಮಾಡುವ ಇಂಗಿತವನ್ನು ಹೊರಗೆಡಹಿದರು. ಮರುದಿನ ಟ್ವಿಟರ್‌ನಲ್ಲಿ ತಮ್ಮ ಆಶಯವನ್ನು ಹೆಚ್ಚು ಸ್ಪಷ್ಟವಾಗಿ ಹೇಳಿದ್ದು ವರದಿಯಾಗಿದೆ.

ಯೋಜನಾ ಆಯೋಗದ ಬಗ್ಗೆ ಮತ್ತು ಈ ಹಿಂದೆ ಅದು ಮಾಡಿರುವ ಕೆಲಸಗಳ ಬಗ್ಗೆ ತನಗೆ ಗೌರವವಿದೆ ಎಂದೂ, ನೆಹರೂ ಅವರ ಕೊಡುಗೆಯನ್ನು ಕೊನೆಗಾಣಿಸಬೇಕೆನ್ನುವ ರಾಜಕೀಯ ಇರಾದೆಯೇನೂ ತಮಗಿಲ್ಲ ಎಂದೂ ಹೇಳುವುದರ ಜೊತೆಗೇ, ಯೋಜನಾ ಆಯೋಗ ತನ್ನ ಕಾಲ ವ್ಯಾಪ್ತಿಯನ್ನು ಮೀರಿ ಉಳಿದುಕೊಂಡಿದೆ. ಅದು ಆರಂಭವಾದಾಗಿನಿಂದ ಬೆಳೆದು ನಿಲ್ಲುವವರೆಗೂ ಇದ್ದ ಆರ್ಥಿಕ ವಾತಾವರಣ ಈಗಿಲ್ಲ. ನಮಗೆ ಇಂದು ಹೊಸ ಕಾಲದ, ಹೊಸ ಅಗತ್ಯಗಳನ್ನು ಅರಿತು ಹೊಸ ಉತ್ಸಾಹ ಮತ್ತು ಹೊಸ ವೇಗದಿಂದ ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲ ಪರ್ಯಾಯ ವ್ಯವಸ್ಥೆಯೊಂದರ ಅಗತ್ಯವಿದೆ ಎಂದೂ ಹೇಳಿದ್ದಾರೆ.

ಯೋಜನಾ ಆಯೋಗದಲ್ಲಿ ಬದಲಾವಣೆಗಳಾಗಬೇಕೆಂದು ಹಿಂದಿನ ಪ್ರಧಾನಿಯೂ ಬಯಸಿದ್ದರು. ಅರ್ಥಶಾಸ್ತ್ರಜ್ಞರಾದ, ಹಣಕಾಸು ಸಚಿವರಾಗಿ ಆರ್ಥಿಕ ಉದಾರೀಕರಣದ ವಕ್ತಾರರಾಗಿದ್ದ ಅವರಿಗೆ ಬದಲಾದ ಜಾಗತಿಕ ಆರ್ಥಿಕ ಪರಿಸ್ಥಿತಿಯ ಅರಿವಿರದೇ ಇರಲಿಲ್ಲ.  ಯೋಜನಾ ಆಯೋಗದ ಸಾಂಸ್ಥಿಕ ಚೌಕಟ್ಟನ್ನು  ಪುನರ್ರಚಿಸುವುದು, ಹಲವು ವಿಶೇಷ ಪರಿಣತರನ್ನು ಸದಸ್ಯರನ್ನಾಗಿ ಸೇರಿಸಿ ಆಯೋಗವನ್ನು ವಿಸ್ತರಿಸುವುದು ಮೊದಲಾದ ಬದಲಾವಣೆಗಳು ಅವರ ಕಾಲದಲ್ಲಿ ಪರಿಶೀಲನೆಗೆ ಬಂದಿದ್ದವು.  ಆದರೆ ಇತರ ಹಲವು ಕಾರ್ಯಕ್ರಮಗಳಂತೆ ಈ ಬದಲಾವಣೆಗಳಿಗೂ, ಸದಾ ಯಥಾಸ್ಥಿತಿಯನ್ನೇ ಬಯಸುವ ತಮ್ಮ ಪಕ್ಷದವರಿಂದಲೇ ವಿರೋಧಗಳು ಬಂದುದರಿಂದ ಬದಲಾವಣೆಯ ಆಶಯ ಈಡೇರಲಿಲ್ಲ.

ಅಂತೂ ಯೋಜನಾ ಆಯೋಗವನ್ನು ರದ್ದು ಮಾಡಬಾರದು ಎಂದು ವಾದಿಸುವವರೂ ಕೂಡ ಆಯೋಗದ ಕಾರ್ಯವಿಧಾನದಲ್ಲಿ ಬದಲಾವಣೆಗಳಾಗಬೇಕು ಎನ್ನುವುದನ್ನು ಒಪ್ಪುತ್ತಾರೆ.  ಕಾಂಗ್ರೆಸ್, ಕಮುನಿಸ್ಟ್ ಪಕ್ಷಗಳು ಮತ್ತು ಆಮ್ ಆದ್ಮಿ ಪಕ್ಷದ ನಾಯಕರು ಯೋಜನಾ ಆಯೋಗ ರದ್ದುಗೊಳಿಸುವ ಪ್ರಸ್ತಾವವನ್ನು ವಿರೋಧಿಸುತ್ತಲೇ, ಅದು ವಿಳಂಬ ನೀತಿ ಅನುಸರಿಸುವ ಮತ್ತು ದಕ್ಷತೆಯ ಕೊರತೆ ಅನುಭವಿಸುತ್ತಿರುವುದನ್ನೂ ಒಪ್ಪಿಕೊಂಡಿದ್ದಾರೆ ಮತ್ತು ಬದಲಾವಣೆಗಳನ್ನು ಬಯಸಿದ್ದಾರೆ.

ಪರ್ಯಾಯವೇನು?
ಈ ಕಾಲದ ಅಗತ್ಯಗಳನ್ನು ಆಧರಿಸಿ ಯೋಜನೆಗಳನ್ನು ರೂಪಿಸುವುದು, ಅನುಷ್ಠಾನಗೊಳಿಸುವುದು ಸಾಧ್ಯವಾಗಲು ಎಂತಹ ಸಾಂಸ್ಥಿಕ ವ್ಯವಸ್ಥೆ ಇರಬೇಕು?  ಹೊಸ ಸಮಿತಿ ಅಥವಾ ಸಂಸ್ಥೆಯನ್ನು ಆರಂಭಿಸುವುದಾದಲ್ಲಿ ಅದರ ರೂಪುರೇಷೆಗಳು ಹೇಗಿರಬೇಕು?  ಇವು ಈಗ ಎಲ್ಲರೂ ಚಿಂತಿಸುತ್ತಿರುವ ಸಂಗತಿ.

ಚೀನಾ ಮಾದರಿ!
ಕೇಂದ್ರ ಸರ್ಕಾರವೇನೋ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸುವತ್ತ ಉತ್ಸಾಹ ತೋರುತ್ತಿರುವಂತಿದೆ. ಜತೆಗೆ ಚೀನಾ ದೇಶದ ರಾಷ್ತ್ರೀಯ ಅಭಿವೃದ್ಧಿ ಮತ್ತು ಸುಧಾರಣಾ  ಆಯೋಗದ (ನ್ಯಾಷನಲ್ ಡೆವಲಪ್‌ಮೆಂಟ್ ಆ್ಯಂಡ್ ರಿಫಾರ್ಮೇಷನ್ ಕಮಿಷನ್;  ಎನ್‌ಡಿಆರ್‌್‌ಸಿ) ಮಾದರಿಯಲ್ಲಿ ಹೊಸ ಸಂಸ್ಥೆ ಇರಬೇಕು ಎಂಬ ಮಾತುಗಳೂ ಕೇಳಿಬರುತ್ತಿವೆ.

ಈ ಎರಡೂ ಮಾದರಿಗಳು ಕ್ಷಿಪ್ರ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಸಹಕಾರಿ ಆಗಬಹುದಾದರೂ ಎರಡರಲ್ಲೂ ಅಧಿಕಾರ ಕೇಂದ್ರೀಕರಣದ ಸಾಧ್ಯತೆಗಳು ದಟ್ಟವಾಗಿ ಕಾಣುತ್ತವೆ. ಒಟ್ಟಾರೆ ಸಂರಚನೆ ಮತ್ತು ಘೋಷಿತ ಕಾರ್ಯಗಳ ದೃಷ್ಟಿಯಿಂದ ನೋಡಿದರೆ ಯೋಜನಾ ಆಯೋಗಕ್ಕೂ, ಎನ್‌ಡಿಆರ್‌ಸಿಗೂ ಅಂತಹ ವ್ಯತ್ಯಾಸವೇನೂ ಇಲ್ಲ.  ಎನ್‌ಡಿಆರ್‌ಸಿ ಕೂಡ ೧೫ಕ್ಕೂ ಹೆಚ್ಚು ವಿಭಾಗಗಳನ್ನು ಹೊಂದಿದ್ದು ಯೋಜನೆ, ವಿಶ್ಲೇಷಣೆ ಮತ್ತು ಆರ್ಥಿಕ ಸಂಪನ್ಮೂಲ ವಿತರಣೆಯ ಕೆಲಸ ನಿರ್ವಹಿಸುತ್ತಿದೆ. ಆದರೆ ಇದು ಒಬ್ಬ ಪೂರ್ಣಾವಧಿ ಅಧ್ಯಕ್ಷರ ನೇತೃತ್ವದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಹೆಚ್ಚಿನ ಅಧಿಕಾರ ವ್ಯಾಪ್ತಿಯನ್ನೂ ಹೊಂದಿದೆ.

ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಚೀನಾ ದೇಶ ನಮಗಿಂತ ಬಹಳ ಮುಂದಿದೆ ಮತ್ತು ವೇಗವಾಗಿ ಬೆಳೆಯುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.  ಆದರೆ ಬೆಳವಣಿಗೆಗೆ ಸಾಧನವಾಗಿ ಆ ದೇಶ ಉಪಯೋಗಿಸುತ್ತಿರುವ ಮಾರ್ಗಗಳೆಲ್ಲ ಅನುಕರಣೀಯ ಅಲ್ಲ.  ತನ್ನ ಕೇಂದ್ರೀಕೃತ ವ್ಯವಸ್ಥೆಗೆ ಪೂರಕವಾಗಿ ಚೀನಾ ಹಲವು ಮಾರ್ಗಗಳನ್ನು ಅನುಸರಿಸಿದೆ.

ಉದಾಹರಣೆಗೆ, ಆರ್ಥಿಕ ಉದಾರೀಕರಣದ ಮಾರ್ಗದಲ್ಲಿ ನಾವು ಒಂದೊಂದೇ ಕ್ಷೇತ್ರವನ್ನು ಖಾಸಗಿ ಕಂಪೆನಿಗಳ ಭಾಗವಹಿಸುವಿಕೆಗೆ ತೆರೆಯುತ್ತಾ ಬಂದರೆ (ಸೆಕ್ಟರಲ್ ಲಿಬೆರಲೈಸೇಷನ್/ರಿಫರ್ಮೇಷನ್) ಚೀನಾ ಒಂದೊಂದೇ ಪ್ರಾಂತ್ಯದಲ್ಲಿ ಉದಾರೀಕರಣ ಮತ್ತು ವಿದೇಶಿ ಹೂಡಿಕೆಗಳನ್ನು ಚಾಲ್ತಿಗೆ ತಂದಿತು (ರೀಜನಲ್ ಲಿಬರಲೈಸೇಷನ್).

ಫಲಿತಾಂಶ ಭಿನ್ನ
ಚೀನಾ ಮಾದರಿಯಲ್ಲಿ ವಿಶೇಷ ಆರ್ಥಿಕ ವಲಯಗಳನ್ನು (ಸ್ಪೆಷಲ್ ಎಕನಾಮಿಕ್ ಜೋನ್; ಎಸ್‌ಇಜೆಡ್‌) ನಾವೂ ಹುಟ್ಟುಹಾಕಿದೆವು. ಆದರೆ ಚೀನಾ ಪಡೆದ ಫಲಿತಾಂಶವನ್ನು ನಾವು ಪಡೆಯಲಾಗಲಿಲ್ಲ.  ಇದಕ್ಕೆ ಮುಖ್ಯ ಕಾರಣವೆಂದರೆ ಅವರಂತೆ ನಾವು ಮಾನವ ಹಕ್ಕುಗಳು, ಶ್ರಮಿಕರ ಹಕ್ಕುಗಳು ಮತ್ತು ಪರಿಸರ ಕಾಳಜಿಗಳನ್ನು ಬದಿಗಿಟ್ಟು ಬೆಳವಣಿಗೆ ಸಾಧಿಸುವುದು ಸಾಧ್ಯವಿಲ್ಲ. ಅದು ಸಾಧುವಲ್ಲ ಕೂಡ.  ಎನ್‌ಡಿಆರ್‌ಸಿ ಕಾರ್ಯವೈಖರಿ ರಾಜ್ಯಶಾಹಿ ವ್ಯವಸ್ಥೆಯ ಚೀನಾಕ್ಕೆ ಹೊಂದಿಕೆಯಾದರೆ, ಪ್ರಜಾಪ್ರಭುತ್ವದ ನಮ್ಮ ವ್ಯವಸ್ಥೆಗೆ ಹೊಂದಿಕೆ ಆದೀತೆಂದು ಹೇಳಲಾಗದು.

ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಎಂಬ ಕಾರಣಕ್ಕಾಗಿಯೇ ಚೀನಾದ ಮಾದರಿಗಳನ್ನು ಪರಿಗಣಿಸುವುದಾದರೆ, ಪ್ರಜಾಪ್ರಭುತ್ವ ವ್ಯವಸ್ಥೆಯೋಳಗೇ ಅಭಿವೃದ್ಧಿ ಹೊಂದಿರುವ ಜಪಾನ್ ಮತ್ತು ಅಮೆರಿಕದ ಮಾದರಿಗಳನ್ನೇಕೆ ಪರಿಗಣಿಸಬಾರದು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು ಅಲ್ಲವೇ?
ಜಪಾನಿನಲ್ಲಿ ರಾಷ್ಟ್ರೀಯ ಮತ್ತು ಪ್ರಾಂತೀಯ ಯೋಜನಾ ಸಂಸ್ಥೆಯಿದ್ದು (ನ್ಯಾಷನಲ್ ಆ್ಯಂಡ್ ರೀಜನಲ್ ಪ್ಲಾನಿಂಗ್ ಬ್ಯೂರೊ) ಇದು ನೇರವಾಗಿ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿಯೇ ಕೆಲಸ ನಿರ್ವಹಿಸುತ್ತಿದೆ. ಪ್ರತಿ ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಉಪ ಸಮಿತಿಗಳಿದ್ದು, ಇವು ಆಯಾ ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಕರಡನ್ನು ತಯಾರಿಸುತ್ತವೆ. ಈ ಕರಡುಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನೂ ಪಡೆಯಲಾಗುತ್ತದೆ. ಜತೆಗೆ ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಯೋಜನೆಗಳ ತಯಾರಿ ಮತ್ತು ಅನುಷ್ಠಾನ ನಡೆಯುತ್ತದೆ. 

ಜಪಾನಿನ ಯೋಜನಾ ಮಾದರಿಯಲ್ಲಿ ಪ್ರತ್ಯೇಕವಾಗಿ ರಾಷ್ಟ್ರೀಯ, ಪ್ರಾಂತೀಯ ಮತ್ತು ಸ್ಥಳೀಯ ಯೋಜನೆಗಳು ತಯಾರಾಗುವು ದರಿಂದ ಇದು ಸ್ವಲ್ಪ ಸಂಕೀರ್ಣ ವ್ಯವಸ್ಥೆ ಮತ್ತು ಯೋಜನಾ ರೂಪಣೆಗೆ ಹೆಚ್ಚು ಸಮಯ ತೆಗೆದುಕೊಳ್ಳುವ ವ್ಯವಸ್ಥೆ ಎಂದು ಹೇಳಲಾಗುತ್ತದೆ. ಆದರೆ, ಜಪಾನೀಯರು ನಿರ್ಧಾರ ಕೈಗೊಳ್ಳಲು ಎರಡು ವರ್ಷ ತೆಗೆದುಕೊಳ್ಳುತ್ತಾರೆ. ಆದರೆ ಹೀಗೆ ಕೈಗೊಂಡ ನಿರ್ಧಾರವನ್ನು ಎರಡೇ ನಿಮಿಷದಲ್ಲಿ ಅನುಷ್ಠಾನಗೊಳಿಸುತ್ತಾರೆ ಎಂಬ ಮಾತು ಅವರ ಯೋಜನೆಗಳ ನಿಖರತೆಗೆ ಸಾಕ್ಷಿ.

ಅಮೆರಿಕ ತನ್ನಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ಸಾಧಾರಣವಾಗಿ ಅಧ್ಯಕ್ಷರಿಂದ ನೇಮಿಸಲಾದ ಪರಿಣತರ ಸಮಿತಿಗಳನ್ನು ಅವಲಂಬಿಸುತ್ತದೆ.  ಮುಖ್ಯವಾಗಿ ರಾಷ್ಟ್ರೀಯ ಸರಕಾರದ (ಫೆಡರಲ್ ಗವರ್ನ್‌ಮೆಂಟ್) ಯೋಜನೆಗಳ ರಚನೆಗೆ ಸಂಬಂಧಿಸಿದ ಕಾರ್ಯಗಳ ನಿರ್ವಹಣೆಗಾಗಿ ರಾಷ್ಟ್ರೀಯ ಮಟ್ಟದ ಸಮಿತಿ ಇದೆಯಾದರೂ, ಅಮೆರಿಕೆಯಲ್ಲಿ ರಾಜ್ಯಗಳು ಹೆಚ್ಚಿನ ಅಧಿಕಾರ ಹೊಂದಿರುವುದರಿಂದ, ಯೋಜನೆಗಳ ರಚನೆ ಮತ್ತು ಅನುಷ್ಠಾನಗಳೆರಡೂ ಹೆಚ್ಚು ವಿಕೇಂದ್ರೀಕೃತವಾಗಿವೆ.  ಈ ವಿಕೇಂದ್ರೀಕರಣದ ಆಶಯ ಪ್ರಜಾಪ್ರಭುತ್ವದ ತತ್ವಗಳ ಮತ್ತು ರಾಜ್ಯಗಳ ಕಾರ್ಯ ಸ್ವಾತಂತ್ರ್ಯದ (ಅಟಾನಮಿ) ಪಾಲನೆಯಾಗಿರುವುದರಿಂದ ನಮ್ಮ ಪರಿಸ್ಥಿತಿಗೆ ಹಲವು ಒಳನೋಟಗಳು ಇಲ್ಲಿ ಖಂಡಿತ ಸಿಗುತ್ತವೆ.
ಮುಖ್ಯವಾಗಿ ಯಾವುದೇ ಬದಲಾವಣೆ, ಶೀತ ಆಯಿತು ಎಂದು ಮೂಗು ಕೊಯ್ದುಕೊಂಡಂತೆ ಆಗಬಾರದು ಅಲ್ಲವೇ?

ಬೆಳವಣಿಗೆಗೆ ಒತ್ತುಕೊಡುವ ಹುಮ್ಮಸ್ಸಿನಲ್ಲಿ,
ಯೋಜನೆಗಳ ತಯಾರಿ ಮತ್ತು ಅನುಷ್ಠಾನದ ವೇಗ ವೃದ್ಧಿಸುವ ಯೋಚನೆಯಲ್ಲಿ ಕೆಲವೇ ವ್ಯಕ್ತಿಗಳ ಕೈಲಿ ಅಧಿಕಾರ ಕೇಂದ್ರೀಕೃತವಾಗದಂತೆ, ವಿವಿಧ ವರ್ಗದ ಹಕ್ಕುಗಳು ಮೊಟಕಾಗದಂತೆ ನೋಡಬೇಕಾದುದು ಅತಿ ಮುಖ್ಯ.  ಬೆಳವಣಿಗೆ, ಅಭಿವೃದ್ಧಿ ಬಹುಮುಖ್ಯ.  ಆದರೆ ಮಾನವ ಹಕ್ಕುಗಳು ಮೊಟಕಾಗದೇ ಇರುವಂತೆ, ಕಾರ್ಮಿಕರ ಶೋಷಣೆಯಾಗ ದಂತೆ, ನೆಲ, ಜಲ, ಪರಿಸರ ಹದಗೆಡದಂತೆ, ಬೆಳವಣಿಗೆಯ ಫಲ ಒಂದು ಸೀಮಿತ ವರ್ಗಕ್ಕೆ ಮಾತ್ರ ಲಾಭ ತರುವಂತೆ ಆಗದಂತೆ ನೋಡಿಕೊಳ್ಳುವುದು ಎಲ್ಲದಕ್ಕಿಂತಲೂ ಬಹಳ ಮುಖ್ಯ.

ವಿಭಿನ್ನ ರೀತಿ ರಾಷ್ಟ್ರೀಯ ಸಂಸ್ಥೆ ಅಗತ್ಯ
ಮಿಶ್ರ ಅರ್ಥ ವ್ಯವಸ್ಥೆಯ ನೀತಿಯನ್ನು ಅನುಸರಿಸುವ ನಮ್ಮ ರಾಷ್ಟ್ರಕ್ಕೆ ಯೋಜನಾ ಆಯೋಗದಂತಹ ಸಂಸ್ಥೆ ಅತ್ಯುಪಯುಕ್ತವಾದುದು ಎಂದು ಭಾವಿಸಲಾಗಿತ್ತು. ರಷ್ಯಾದ ಪ್ರಗತಿ, ಆ ರಾಷ್ಟ್ರದ ಯೋಜನಾ ವ್ಯವಸ್ಥೆಯನ್ನು ಅನುಸರಿಸುವ ಆಕರ್ಷಣೆಯಾಗಿತ್ತು.

ಕಳೆದ ಆರು ದಶಕಗಳಲ್ಲಿ ಇಡೀ ವಿಶ್ವವೇ ಅನೇಕ ಆರ್ಥಿಕ ಬದಲಾವಣೆಗಳನ್ನು ಅನುಭವಿಸಿದೆ.  ಭಾರತವೂ ಇದಕ್ಕೆ ಹೊರತಾಗಿಲ್ಲ.  ಯೋಜನಾ ಆಯೋಗ ಇದ್ದರೂ ರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟಗಳಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಲಾಗಿದ್ದರೂ, ನಾವು ನಮ್ಮ ದೇಶದ ಪ್ರಮುಖ ಸಮಸ್ಯೆಗಳಾದ ಬಡತನ ಮತ್ತು ನಿರುದ್ಯೋಗದಿಂದ ಹೊರಗೆ ಬರುವುದಕ್ಕೆ ಸಾಧ್ಯವಾಗಿಲ್ಲ. 

ಆದರೆ ಈ ಅವಧಿಯಲ್ಲಿ ಯೋಜನಾ ಆಯೋಗದ ಯಂತ್ರ ವಿಶಾಲಗೊಂಡಿದೆ. ಅದಕ್ಕೆ ನೇಮಕ ಆಗಿರುವ ಸಿಬ್ಬಂದಿ ಬಹಳ ದೊಡ್ಡ ಪ್ರಮಾಣದ್ದು.  ಯೋಜನಾ ಆಯೋಗದ ಉಪಾಧ್ಯಕ್ಷರು ಮತ್ತು ಸದಸ್ಯರು ಅತ್ಯಂತ ಹೆಚ್ಚಿನ ಆರ್ಥಿಕ ಮತ್ತು ಸಾಮಾಜಿಕ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ನಿಜವಾಗಿಯೂ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿ  ಯೋಜನಾ ಆಯೋಗದಂತಹ  ಸಂಸ್ಥೆ ನಿರುಪಯುಕ್ತವಾದುದು.  ನಮ್ಮಂತಹ ವಿಶಾಲ ದೇಶಕ್ಕೆ ವಿಘಟನೆಗೊಂಡಿರುವ ಯೋಜನೆಗಳು ಅಗತ್ಯ. 

ಭೌಗೋಳಿಕವಾಗಿ,  ರಾಜಕೀಯವಾಗಿ, ಆರ್ಥಿಕವಾಗಿ ಬೇರೆ ಬೇರೆ ಸ್ವರೂಪ ಹೊಂದಿರುವ, ಅವುಗಳಿಗೆ ಅಗತ್ಯವಾದ ಆರ್ಥಿಕ ನೆರವನ್ನು ಮತ್ತು ಸಾಮಾಜಿಕ ನೆರವನ್ನು ನೀಡುವಂತಹ ಒಂದು ಹೊಸ ಸ್ವರೂಪದ ಸಂಸ್ಥೆಯ ಅಗತ್ಯ ಇಂದು ಇದೆ.  ರಾಷ್ಟ್ರೀಯ  ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ  ಬೇರೆ ಬೇರೆ ಪ್ರಮಾಣದ ಸಂಸ್ಥೆಗಳು ರಚಿತವಾಗಬೇಕು.  ಸಮಾಜದ ಎಲ್ಲ ವರ್ಗದ ಜನರ ಪ್ರಾತಿನಿಧ್ಯ ಕೂಡ ಇದರಲ್ಲಿ ಇರಬೇಕಾಗುತ್ತದೆ.  ವರ್ಷಂಪ್ರತಿ ರಾಷ್ಟ್ರೀಯ   ಮತ್ತು ರಾಜ್ಯಗಳ ಆರ್ಥಿಕ ಪ್ರಗತಿಗಳ ಸಮೀಕ್ಷೆಯನ್ನು ನಡೆಸಬೇಕಾಗುತ್ತದೆ.    ಹಿಂದೆ ಇದು ಕಷ್ಟವಾಗಿತ್ತು.  ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಇದು ಸಾಧ್ಯ.  ವಿಶ್ವದ ಆರ್ಥಿಕ ಬದಲಾವಣೆಗಳಿಗೆ ತಕ್ಕಂತೆ ನಮ್ಮ ದೇಶದಲ್ಲೂ ಸಹ ಬದಲಾವಣೆಗಳಾಗಬೇಕಾಗುತ್ತದೆ.

ಇ -ಕಾಮರ್ಸ್, ವಿದೇಶಿ ಬಂಡವಾಳ ಹೂಡಿಕೆ ಮುಂತಾದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಮತ್ತು ಕ್ಷಿಪ್ರವಾಗಿ ನೀತಿಗಳನ್ನು ರೂಪಿಸುವ ಸಂಸ್ಥೆ ಇಂದು ಅಗತ್ಯವಾಗಿದೆ.  ತಾಂತ್ರೀಕರಣದ ಅತ್ಯುನ್ನತ ಬಳಕೆಯನ್ನು ಈ ಸಂಸ್ಥೆ ಮಾಡಿಕೊಳ್ಳಬೇಕಾಗುತ್ತದೆ.  ಸಂಸ್ಥೆಯ ಗಾತ್ರ ಕಿರಿದಾಗಿರಬೇಕಾಗಿರುತ್ತದೆ.  ಎಲ್ಲದಕ್ಕಿಂತ ಹೆಚ್ಚಾಗಿ ಇದು ಒಂದು ಸ್ವಾಯತ್ತ ಸಂಸ್ಥೆಯಾಗಿರಬೇಕಾಗುತ್ತದೆ.   ವಾಸ್ತವವಾಗಿ ಇಂದು ಎಲ್ಲೂ ಕೇಂದ್ರೀಕೃತ   ಅರ್ಥ ವ್ಯವಸ್ಥೆ ಇಲ್ಲ.  ಮಾರುಕಟ್ಟೆ ವ್ಯವಸ್ಥೆಯೇ ಪ್ರಧಾನವಾದುದು.  ಹೀಗಿರುವುದರಿಂದ ಹಿಂದಿನ ರೀತಿಯ ಯೋಜನಾ ಆಯೋಗಕ್ಕೆ ಯಾವ ಮಾನ್ಯತೆಯೂ ಇಲ್ಲ.  ಇದನ್ನು ಅನಿವಾರ್ಯವಾಗಿ ಆಧುನೀಕರಣಗೊಳಿಸಬೇಕಾಗುತ್ತದೆ.    ಜನ ಪ್ರತಿನಿಧಿಗಳು ಆರ್ಥಿಕ ಚಿಂತಕರು, ಸಾಮಾಜಿಕ ಕಾರ್ಯಕರ್ತರು, ರೈತರು,  ಕಾರ್ಖಾನೆಯ ಮಾಲಿಕರು ಇವರೆಲ್ಲರೂ ಇದರ ಬಗ್ಗೆ ಚರ್ಚೆ ನಡೆಸುವುದು ಅಗತ್ಯ ಆಗಿದೆ.  ವಿಭಿನ್ನವಾಗಿರುವ  ರೀತಿಯ ರಾಷ್ಟ್ರೀಯ ಸಂಸ್ಥೆ ಅಸ್ತಿತ್ವಕ್ಕೆ ಬರಲೇಬೇಕಾಗಿದೆ.
- ರೇಣುಕಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT