ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗ ವಿಮರ್ಶೆಯಲ್ಲಿ ಸಹೃದಯತೆ ಮಾಯ

ನಿರಂತರ ಫೌಂಡೇಷನ್‌ ‘ರಾಷ್ಟ್ರೀಯ ನಾಟಕೋತ್ಸವ’
Last Updated 1 ಜನವರಿ 2015, 19:30 IST
ಅಕ್ಷರ ಗಾತ್ರ

ಮೈಸೂರು: ‘ನಾಟಕ ಮಾಡುವುದು ಕಷ್ಟ. ಆದರೆ, ಅದರ ಕುರಿತು ಮಾತನಾಡುವುದು ಸುಲಭ’ ಎಂದು ಹಿರಿಯ ರಂಗ ನಿರ್ದೇಶಕ ಚಿದಂಬರರಾವ್ ಜಂಬೆ ವ್ಯಂಗ್ಯವಾಡಿದರು. ನಿರಂತರ ಫೌಂಡೇಷನ್‌ ನಗರದ ಕಲಾಮಂದಿರದಲ್ಲಿ ಆಯೋಜಿಸಿರುವ ನಿರಂತರ ರಂಗ ಉತ್ಸವ ‘ರಾಷ್ಟ್ರೀಯ ನಾಟಕೋತ್ಸವ’ ಅಂಗವಾಗಿ ಗುರುವಾರ ನಡೆದ ನಾಟಕದ ಪ್ರಾಯೋಗಿಕ ವಿಮರ್ಶೆ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರಂಗ ವಿಮರ್ಶೆ ಮಾಡಬೇಕೆಂಬ ತುಡಿತದಲ್ಲಿ ಸಹೃದಯತೆ ಮಾಯವಾಗಿ ನಾಟಕ ಅನುಭವಿಸುವು­ದನ್ನು ಕಳೆದು­ಕೊಂಡು ಬಿಡುತ್ತೇವೆ. ಇದಕ್ಕಾಗಿ ಸಹಜವಾಗಿ ನಾಟಕ ನೋಡುವ ಗುಣವನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ‘ನಾಟಕವೆಂದರೆ ಭಾವಗೀತೆಯಿದ್ದ ಹಾಗೆ. ಅದರ ಲಾಲಿತ್ಯ ನಾಟಕಗಳಲ್ಲಿ ಅಭಿವ್ಯಕ್ತಿಯಾಗಿರುತ್ತದೆ’ ಎಂದರು.

ಇದಕ್ಕೂ ಮೊದಲು ಬುಧವಾರ ಪ್ರದರ್ಶನ­ಗೊಂಡ ಪುಣೆಯ ಶ್ರೀ ಸಿದ್ಧಿವಿನಾಯಕ ತಂಡದ ‘ಆಷಾಢತ್ತಿಲ್‌ ಏಕ್ ದಿವಸ್‌’ ಮರಾಠಿಯ ನಾಟಕ ಕುರಿತು ಶಿವಮೊಗ್ಗ ರಂಗಾಯಣದ ನಿರ್ದೇಶಕ ಇಕ್ಬಾಲ್‌ ಅಹಮ್ಮದ್‌ ಮಾತನಾಡಿ, ಸಂಭಾಷಣೆಯು ಮರಾಠಿಯ ಗಲ್ಲಿಯ ಭಾಷೆಯಾಗಿತ್ತು. ಆದರೆ, ವೇಷಭೂಷಣ ಕಾಳಿದಾಸನ ಕಾಲದ್ದಾಗಿತ್ತು ಎಂದು ವಿವರಿಸಿದರು.

ಶಿವಮೊಗ್ಗದ ಕನ್ನಡ ಪ್ರಾಧ್ಯಾಪಕ ಸಿರಾಜ್‌ ಅಹಮ್ಮದ್‌ ಮಾತನಾಡಿ, ಈ ನಾಟಕ ಸಂಘರ್ಷ­ಗಳನ್ನು ಕಟ್ಟಿಕೊಟ್ಟಿತು. ಆದರೆ, ಕಾಳಿದಾಸನನ್ನು ರೂಪಿಸಿದ ನಿಸರ್ಗ ಚಿತ್ರಣ ಪೂರಕವಾಗಿರಲಿಲ್ಲ ಎಂದರು. ರಂಗಕರ್ಮಿ ಮೌನೇಶ ಬಡಿಗೇರ ಮಾತನಾಡಿ, ಯಾವುದೇ ನಾಟಕವನ್ನು ರಂಗ, ವಸ್ತ್ರ, ಬೆಳಕು, ಸಂಗೀತ ಹಾಗೂ ಅಭಿನಯದ ವಿನ್ಯಾಸಗಳೆಂದು ವಿಂಗಡಿಸಿ ನೋಡಬಹುದು ಎಂದರು. 

ವಿಮರ್ಶಾ ಮಾನದಂಡ ಬದಲಾಗಬೇಕು: ‘ನಾಟಕದ ವಿಮರ್ಶಾ ಮಾನ­ದಂಡಗಳೇ ಬದಲಾಗಬೇಕಿದೆ’ ಎಂದು ರಂಗಕರ್ಮಿ ಸಿ. ಬಸವಲಿಂಗಯ್ಯ ಅಭಿಪ್ರಾಯ­ಪಟ್ಟರು. ನಾಟಕದ ಪ್ರಾಯೋಗಿಕ ವಿಮರ್ಶೆ ಕುರಿತ ವಿಚಾರ ಸಂಕಿರಣದ ಸಮಾ­ರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ನಾಟಕ ವಿಮರ್ಶೆಯು ಪಠ್ಯಕ್ಕೆ ಸೀಮಿತವಾಗಿದ್ದರೆ, ಪ್ರಯೋಗಗಳು ಕಾಲ, ದೇಶ ಮೀರಿ ಮಿಡಿಯುತ್ತವೆ.

ಆದರೆ, ನಾಟಕ ವಿಮರ್ಶೆ ಪ್ರಕಟಿಸು­ವುದನ್ನು ಪತ್ರಿಕೆಗಳು ನಿಲ್ಲಿಸಿವೆ. ಪ್ರೇಕ್ಷಕರು ಹೆಚ್ಚಲು ನಾಟಕಕ್ಕೆ ಬಾಯಿಮಾತಿನ ಪ್ರಚಾರವೇ ಸಾಕು. ಆದರೂ, ನಾಟಕಕ್ಕೆ ಶಹಭಾಷ್‌ಗಿರಿ ಬೇಕು ನಿಜ. ಆದರೆ, ಗಂಭೀರವಾದ ರಂಗಕರ್ಮಿಗಳು ನಾಟಕ ವಿಮರ್ಶೆಗಳನ್ನು ಗಂಭೀರವಾಗಿ ತೆಗೆದುಕೊ­ಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಯಾವುದೇ ನಾಟಕವು ಕವಿತೆಯಿದ್ದ ಹಾಗೆ. ಅದು ರಂಗದ ಮೇಲೆ ಬಂದರೆ ದೃಶ್ಯಕಾವ್ಯವಾಗಿ ಹಲವು ವಿಸ್ತಾರಗಳನ್ನು ಪಡೆಯುತ್ತದೆ. ಪ್ರತಿ ದಿನ ಪ್ರಯೋಗ­ಗೊಳ್ಳುವ ನಾಟಕ ಅಂತಿಮವಲ್ಲ. ಇಂಥ ನಾಟಕವೇ ಸುಳ್ಳು. ಆದರೂ, ಸತ್ಯ ಎನ್ನುವ ಅನುಭೂತಿಯನ್ನು ಕೊಡಬೇಕು. ಹೀಗಾಗಿ, ವಿಮರ್ಶೆ ಓದಿ ನಾಟಕಗಳಿಗೆ ಯಾರೂ ಬರುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಬಹುಪಾಲು ಭಾರತೀಯ ರಂಗ­ಭೂಮಿ ಸಿದ್ಧಚೌಕಟ್ಟಿನಲ್ಲಿದೆ. ಇದನ್ನು ಒಡೆದು ಕಟ್ಟಬೇಕಿದೆ. ಏಕೆಂದರೆ, ಆಕಾರವಿಲ್ಲದ ಪಾತ್ರಗಳನ್ನು ಮಾಡಿ­ದಾಗ ಸಮಸ್ಯೆ ಇರುವುದಿಲ್ಲ. ಇಲ್ಲದಿದ್ದರೆ ಯಾವ ಬಗೆಯ ನಾಟಕ ಆಯ್ದುಕೊಳ್ಳಬೇಕು ಎನ್ನುವ ಗೊಂದಲ ನಿರ್ದೇಶಕರನ್ನು ಕಾಡುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT