ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ, ಇರಾಕ್: ಕಾಡುತ್ತಿರುವ ತೈಲ ಬೆಲೆ ಕುಸಿತ

ಅಕ್ಷರ ಗಾತ್ರ

ತೈಲ ಬೆಲೆಯಲ್ಲಿ ಆಗಿರುವ ಭಾರಿ ಕುಸಿತ ರಷ್ಯಾ, ಇರಾಕ್‌­ನಂಥ ಪ್ರಮುಖ ತೈಲ ರಫ್ತು ರಾಷ್ಟ್ರಗಳ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಹೇರಿರುವ ಆರ್ಥಿಕ ದಿಗ್ಬಂಧನದ ಕಾರಣ ರಷ್ಯಾ ಸಂಕಷ್ಟದಲ್ಲಿದ್ದರೆ, ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ವಿರುದ್ಧದ ಹೋರಾಟಕ್ಕೆ ಹಣ ಹೊಂದಿಸಲು ಹೆಣಗಾಡು­ತ್ತಿ­ರುವ ಇರಾಕ್, ತೈಲ ಬೆಲೆ ಕುಸಿತದ ಕಾರಣ ಹಣಕಾಸಿನ ತೊಂದರೆಗೆ ಸಿಲುಕಿದೆ.

ಜೂನ್‌ನಲ್ಲಿ ಗಗನಕ್ಕೆ ಏರಿದ್ದ ತೈಲ ಬೆಲೆ ನಂತರ ದಿನಗಳಲ್ಲಿ ಶೇ 25ರಷ್ಟು ಕುಸಿತ ಕಂಡಿದೆ. ಅಮೆರಿಕದ ತೈಲ ಉತ್ಪನ್ನದಲ್ಲಿ ಆದ ಹೆಚ್ಚಳ, ಅಭಿವೃದ್ಧಿ ಹೊಂದಿದ ದೇಶಗಳ ತೈಲ ಬೇಡಿಕೆ­ಯಲ್ಲಿ ಕುಸಿತ ಕಾಣಲಿದೆ ಎಂಬ ವರದಿಗಳು ಮತ್ತು ಚೀನಾದ ತೈಲ ಬೇಡಿಕೆ ಕಡಿಮೆ ಆಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ, ಅದರಲ್ಲೂ ವಿಶೇಷ­ವಾಗಿ ಅಮೆರಿಕಕ್ಕೆ ತೈಲ ಬೆಲೆ ಕುಸಿತ ಎಂಬುದು ಸಿಹಿ ಸುದ್ದಿ. ಆದರೆ ರಷ್ಯಾ, ಇರಾನ್, ವೆನೆಜುವೆಲಾದಂಥ ರಾಷ್ಟ್ರಗಳು ಹಣ­ಕಾಸಿನ ವಿಚಾರದಲ್ಲಿ ಒತ್ತಡಕ್ಕೆ ಸಿಲುಕುತ್ತವೆ. ಈ ರಾಷ್ಟ್ರಗಳು ತೈಲ ಮಾರುಕಟ್ಟೆಯಲ್ಲಿ ಅಮೆರಿಕ ಹೊಂದಿರುವ ಪ್ರಭಾವವನ್ನು ಹತ್ತಿಕ್ಕಲು ಯತ್ನಿಸುತ್ತಿವೆ.

ತೈಲ ಬೆಲೆಯಲ್ಲಿ ಆಗುವ ಹಠಾತ್ ಕುಸಿತವನ್ನು ಎದುರಿಸಲು ರಷ್ಯಾ ದೇಶ ಕೋಟ್ಯಂತರ ಡಾಲರ್‌ಗಳಷ್ಟು ಹಣವನ್ನು ಇಟ್ಟು­ಕೊಂಡಿದೆಯಾದರೂ, ಬೆಲೆ ಕುಸಿತದ ಪರಿಣಾಮ ಅಲ್ಲಿ ಕಂಡು­ಬರುತ್ತಿದೆ. ಸರ್ಕಾರದ ನಿಯಂತ್ರಣದಲ್ಲಿರುವ ಮಾನವ ಹಕ್ಕು­ಗಳ ಸಂಘಟನೆಯ ಜೊತೆ ಮಾತುಕತೆ ಸಂದರ್ಭ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಹೆಚ್ಚಿನ ಅನುದಾನ ನೀಡುವುದು ಕಷ್ಟಕರ ಎಂದಿದ್ದಾರೆ. ಇದಕ್ಕೆ ತೈಲ ಬೆಲೆ ಕುಸಿತದಿಂದ ಆಗಿರುವ ವರಮಾನ ನಷ್ಟ ಕಾರಣ ಎಂದು ಹೇಳಿದ್ದಾರೆ.

ಉಕ್ರೇನ್ ಮೇಲಿನ ದಾಳಿ ವಿಚಾರ ಮುಂದಿಟ್ಟುಕೊಂಡು ಪಾಶ್ಚಿ­ಮಾತ್ಯ ರಾಷ್ಟ್ರಗಳು ಆರ್ಥಿಕ ದಿಗ್ಬಂಧನ ಹೇರಿದಾಗ ಪುಟಿನ್ ತೋರಿದ ಧೈರ್ಯ ಇಲ್ಲಿ ಕಾಣಿಸಲಿಲ್ಲ ಎಂಬುದನ್ನು ಗಮ­ನಿಸಬೇಕು. ರಷ್ಯಾ ಸರ್ಕಾರದ ನಿಯಂತ್ರಣದಲ್ಲಿರುವ ತೈಲ ಕಂಪೆನಿ ರೋಸ್ನೆಟ್ ವಕ್ತಾರರೊಬ್ಬರು ಇತ್ತೀಚೆಗೆ, ತೈಲ ಬೆಲೆ­ಯನ್ನು ಸೌದಿ ಅರೇಬಿಯಾ ರಹಸ್ಯವಾಗಿ ನಿಯಂತ್ರಿಸುತ್ತಿದೆ ಎಂದು ಆರೋಪಿಸಿದರು. ತೈಲ ಬೆಲೆ ವಿಚಾರದಲ್ಲಿ ಅಮೆರಿಕ ಮತ್ತು ಸೌದಿ ಅರೇಬಿಯಾ ರಷ್ಯಾ ವಿರುದ್ಧ ಪಿತೂರಿ ನಡೆಸುತ್ತಿವೆ ಎಂಬ ಮಾತುಗಳು ಶೀತಲ ಸಮರದ ಕಾಲದಲ್ಲಿ ಮತ್ತೆ ಮತ್ತೆ ಕೇಳಿಬರುತ್ತಿದ್ದವು.

ವೆನೆಜುವೆಲಾದಿಂದ ಆಗುವ ಶೇ 95ರಷ್ಟು ರಫ್ತು ತೈಲ ಉತ್ಪ­ನ್ನ­ಗಳದ್ದು. ಈ ರಾಷ್ಟ್ರ ಕೂಡ ಕಳೆದ ವಾರ, ತೈಲ ಉತ್ಪಾದಕ ದೇಶಗಳ ಸಂಘಟನೆಯ (ಒಪೆಕ್) ತುರ್ತು ಸಭೆಗೆ ಕರೆ ನೀಡಿತು. ಆದರೆ ಒಪೆಕ್‌ನ  ಇತರ ಸದಸ್ಯ ರಾಷ್ಟ್ರಗಳು ‘ತುರ್ತು ಸಭೆ ಬೇಡ, ಸಾಮಾನ್ಯ ಸಂದರ್ಭದಲ್ಲಿ ಆಗುವಂತೆ ನಿಗದಿತ ವೇಳೆ­ಯಲ್ಲೇ ಸಭೆ ನಡೆಯಲಿ’ ಎಂದವು.

ಮಾರುಕಟ್ಟೆ ಶಕ್ತಿಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ತೈಲ ಬೇಡಿಕೆಯಲ್ಲಿ ಆಗುವ ಹೆಚ್ಚಳದ ಕಾರಣ, ತೈಲ ಬೆಲೆ ಮತ್ತೆ ಹೆಚ್ಚಾಗಲಿದೆ ಎಂದು ತಜ್ಞರು ಹೇಳುತ್ತಾರೆ. ಇರಾಕ್ ಮತ್ತು ಲಿಬಿಯಾದಲ್ಲಿ ತೈಲ ಉತ್ಪಾದನೆಯಲ್ಲಿ ಆಗಿ­ರುವ ಹೆಚ್ಚಳದ ಕಾರಣ ಈಗ ಬೆಲೆ ಕುಸಿದಿದೆ. ಆದರೆ ಈ ಎರಡು ರಾಷ್ಟ್ರಗಳು ಅಸ್ಥಿರತೆ ಎದುರಿಸುತ್ತಿವೆ. ಇದು ಅಲ್ಲಿನ ತೈಲ ಉತ್ಪಾ­ದನೆಯನ್ನು ಯಾವುದೇ ಕ್ಷಣದಲ್ಲಿ ನಿಲ್ಲಿಸುವ ಶಕ್ತಿ ಹೊಂದಿದೆ. ಆಗ ತೈಲ ಬೆಲೆ ಮತ್ತೆ ಹೆಚ್ಚಳವಾಗಲಿದೆ.

ಆದರೆ ಸದ್ಯದ ಮಟ್ಟಿಗೆ ದೊಡ್ಡ ತೈಲ ಉತ್ಪಾದಕ ರಾಷ್ಟ್ರಗಳು ಆರ್ಥಿಕ ಮುಗ್ಗಟ್ಟು ಎದುರಿಸಲಿವೆ. ಇದರ ರಾಜಕೀಯ ಮತ್ತು ಆರ್ಥಿಕ ಪರಿಣಾಮಗಳು ಬಹು ವಿಧದಲ್ಲಿ ಇರಲಿವೆ. ‘ಬೆಲೆ ಕುಸಿತ ಎಷ್ಟು ದಿನ ಮುಂದುವರಿಯುತ್ತದೆ ಮತ್ತು ಯಾವ ಪ್ರಮಾ­ಣದಲ್ಲಿ ಆಗುತ್ತದೆ ಎಂಬುದರ ಮೇಲೆ ಇದು ಅವಲಂಬಿ­ಸಿದೆ. ಆದರೆ ಶೇ 20ರಷ್ಟು ಬೆಲೆ ಕುಸಿತ ಮುಂದುವರಿದರೆ ತೈಲ ರಫ್ತನ್ನೇ ಬಹುವಾಗಿ ನಂಬಿಕೊಂಡಿರುವ ರಾಷ್ಟ್ರಗಳು ಹಣಕಾಸಿನ ಮುಗ್ಗಟ್ಟು ಎದುರಿಸುವುದರಲ್ಲಿ ಅನುಮಾನವಿಲ್ಲ’ ಎಂದು ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದ ಜಾಗತಿಕ ಇಂಧನ ನೀತಿ ಕೇಂದ್ರದ ನಿರ್ದೇಶಕ ಜೇಸನ್ ಬಾರ್ಡಾಫ್ ಹೇಳುತ್ತಾರೆ.

ಇರಾಕ್ ಮತ್ತು ರಷ್ಯಾ ದೇಶಗಳು ಗಡಿ ಬಿಕ್ಕಟ್ಟು ಎದುರಿ­ಸು­ತ್ತಿವೆ. ತೈಲ ಬೆಲೆ ಕುಸಿತದ ಬಿಸಿ ಅವುಗಳಿಗೆ ಹೆಚ್ಚು ತಟ್ಟಿರುವುದಕ್ಕೆ ಇದು ಕಾರಣ. ರಷ್ಯಾದ ಜನ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹೈರಾಣಾಗಿದ್ದಾರೆ. ಅಲ್ಲದೆ, ಆ ದೇಶದ ಮೇಲೆ ಹೇರಿ­ರುವ ಆರ್ಥಿಕ ದಿಗ್ಬಂಧನ, ರಷ್ಯಾದ ಕರೆನ್ಸಿ ಮೌಲ್ಯ ಕುಸಿತದ ಕಾರಣ ಆ ದೇಶ ಹೆಚ್ಚಿನ ಮೊತ್ತದ ಹಣವನ್ನು ಬೇರೆ ದೇಶ­ಗಳಿಂದ ಪಡೆದುಕೊಳ್ಳುವ ಚೈತನ್ಯ ಹೊಂದಿಲ್ಲ. ಇಸ್ಲಾ­ಮಿಕ್ ಸ್ಟೇಟ್ ಉಗ್ರರಿಂದ ಇರಾಕ್ ದೊಡ್ಡ ಪ್ರಮಾಣದ ಅಪಾಯ ಎದುರಿಸುತ್ತಿದೆ. ಐಎಸ್ ಉಗ್ರರ ಹಾವಳಿ ಇರಾಕ್‌ಗೆ ದುಬಾರಿ­ಯಾಗಿಯೂ ಪರಿಣಮಿಸಿದೆ ಎಂದು ಜೇಸನ್ ಅಭಿಪ್ರಾಯಪಡುತ್ತಾರೆ.

ತೈಲ ಬೆಲೆ ಈಗಿರುವ ಪ್ರಮಾಣದಲ್ಲೇ ಇದ್ದರೆ ಬರುವ ವರ್ಷ ರಷ್ಯಾ ಕೊರತೆ ಬಜೆಟ್ ಮಂಡಿಸಬೇಕಾಗುತ್ತದೆ ಎಂದು ಜೇಸನ್ ಹೇಳಿದರು. ಇರಾಕ್ ಸೇನೆಯನ್ನು ಪುನಃ ಕಟ್ಟಬೇಕಿದೆ, ಆಹಾರ ಮತ್ತು ತೈಲಕ್ಕೆ ಹೆಚ್ಚಿನ ಮೊತ್ತದ ಸಬ್ಸಿಡಿ ನೀಡಬೇಕು, ವೇತನ ಪಾವತಿಗೆ ದೊಡ್ಡ ಮೊತ್ತ ಮೀಸಲಿಡಬೇಕು. ಅವರಿಗೂ ನೂರೆಂಟು ಹಣಕಾಸಿನ ಸಮಸ್ಯೆಗಳಿಗೆ ಎಂದರು.

ವೆನೆಜುವೆಲಾ, ಇರಾನ್ ಕೂಡ ತೈಲ ಬೆಲೆ ಕುಸಿತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ನೈಜೀರಿಯಾದಲ್ಲಿ ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಹಾಗಾಗಿ ಅಲ್ಲಿ ತೈಲ ಬೆಲೆ ಕುಸಿತ ರಾಜಕೀಯ ಚಹರೆಯ ಮೇಲೆ ಪರಿಣಾಮ ಬೀರುವ ಶಕ್ತಿ ಹೊಂದಿದೆ.
ಸೌದಿ ಅರೇಬಿಯಾ ನೇತೃತ್ವದ ಒಪೆಕ್ ರಾಷ್ಟ್ರಗಳು ತೈಲ ಉತ್ಪಾ­ದನೆ ಕಡಿಮೆ ಮಾಡಿ, ಬೆಲೆ ಸ್ಥಿರವಾಗುವಂತೆ ಮಾಡ­ಲಿ­ವೆಯೇ ಎಂಬುದು ಈಗಿರುವ ಮುಖ್ಯ ಪ್ರಶ್ನೆ.

ಒಪೆಕ್ ರಾಷ್ಟ್ರಗಳ ಸಭೆ ಮುಂದಿನ ತಿಂಗಳು ನಡೆಯಲಿದೆ. ಹಾಗೆ ಮಾಡುವ ಸಾಧ್ಯತೆ ಇದೆ ಎಂದು ಕೆಲವರು ಹೇಳುತ್ತಾರೆ. ಆದರೆ ಇನ್ನು ಕೆಲವು ತಜ್ಞರು, ‘ಬೆಲೆ ಇದೇ ಮಟ್ಟದಲ್ಲಿ ಮುಂದುವರಿಯಲು ಸೌದಿ ಅರೇಬಿಯಾ ಅವಕಾಶ ಕೊಡಬಹುದು. ಹಾಗೆ ಆದಲ್ಲಿ, ತನ್ನ ಎದುರಾಳಿಗಳಾದ ಇರಾನ್ ಮತ್ತು ರಷ್ಯಾವನ್ನು ಹಣಿ­ಯಲು ಸೌದಿ ಅರೇಬಿಯಾಕ್ಕೆ ಅವಕಾಶ ದೊರೆಯುತ್ತದೆ’ ಎಂದು ಹೇಳುತ್ತಿದ್ದಾರೆ. ರಷ್ಯಾ ಮತ್ತು ಇರಾನ್ನ ಆರ್ಥಿಕ ವ್ಯವಸ್ಥೆ ಆರೋಗ್ಯದಿಂದ ಇರಲು ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 100 ಡಾಲರ್ ಅಥವಾ ಅದಕ್ಕಿಂತ ಹೆಚ್ಚು ಇರಬೇಕು. ಆದರೆ ಸೌದಿ ಅರೇಬಿಯಾಕ್ಕೆ ಈ ಬೆಲೆ 95 ಡಾಲರ್ ಇದ್ದರೆ ಸಾಕು. ಏಕೆಂದರೆ ಸೌದಿ ಅರೇಬಿಯಾ­ದಲ್ಲಿ ತೈಲ ಉತ್ಪಾದನೆ ಕಡಿಮೆ ಖರ್ಚಿನ ಕೆಲಸ. ತೈಲ ಬೆಲೆ ಕಡಿಮೆ ಇದ್ದರೂ ತನ್ನ ಖರ್ಚುಗಳನ್ನು ಸರಿದೂಗಿಸಿಕೊಳ್ಳುವಷ್ಟು ಹಣದ ಸಂಗ್ರಹ ಸೌದಿ ಬಳಿ ಇದೆ.

‘ತನ್ನ ಹಣದ ಸಂಗ್ರಹವನ್ನು ಬಳಸಿಕೊಂಡು ಸೌದಿ ಎಷ್ಟು ದಿನ ದೇಶ ಮುನ್ನಡೆಸಬಹುದು ಎಂಬುದು ನಮ್ಮೆದುರು ಈಗಿರುವ ಪ್ರಶ್ನೆ’ ಎನ್ನುವುದು ವಾಷಿಂಗ್ಟನ್ ಮೂಲದ ಸಂಶೋಧನಾ ಸಂಸ್ಥೆ ಜಾಗತಿಕ ಭದ್ರತೆ ವಿಶ್ಲೇಷಣಾ ಸಂಸ್ಥೆಯ ಸಹ ನಿರ್ದೇಶಕ ಗಾಲ್ ಲುಫ್ಟ್ ಅವರ ಮಾತು. ಕೆಲ ಕಾಲದವರೆಗೆ ಎಲ್ಲ ತೈಲ ಉತ್ಪನ್ನ ದೇಶಗಳು ಈ ಪರಿಸ್ಥಿತಿಯನ್ನು ನಿಭಾಯಿಸಬಹುದು. ಆದರೆ ಬೆಲೆ ಕುಸಿತ ಒಂದು ವರ್ಷಕ್ಕಿಂತ ಹೆಚ್ಚು ಮುಂದುವರಿ­ದರೆ ಅವರಿಗೆ ಕಷ್ಟವಾಗುತ್ತದೆ ಎಂದು ಅವರು ಹೇಳುತ್ತಾರೆ.

ಅಮೆರಿಕ ಮತ್ತು ಮುಂದುವರಿದ ಇತರ ರಾಷ್ಟ್ರಗಳಿಗೆ ತೈಲ ಬೆಲೆ ಕುಸಿತ ಎಂಬುದು ವರದಾನ. ಆದರೆ ಇತ್ತೀಚೆಗೆ ಈ ವ್ಯಾಖ್ಯಾನ ಕೂಡ ಬದಲಾಗುತ್ತಿದೆ. ಅಮೆರಿಕ ಇತ್ತೀಚಿನ ದಿನಗಳಲ್ಲಿ ಟೆಕ್ಸಾಸ್ ಸೇರಿದಂತೆ ವಿವಿಧೆಡೆ ತೈಲ ಉತ್ಪಾದನೆ ಹೆಚ್ಚಿಸಿದೆ. ಬೆಲೆ ಕುಸಿತದಿಂದ ಆತಂಕಗೊಳ್ಳಬೇಕಾದ ಅಗತ್ಯ ಇಲ್ಲ ಎಂದು ರಷ್ಯಾ ಹೇಳುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 100 ಡಾಲರ್‌ಗೆ ಸಮೀಪಿ­ಸುತ್ತದೆ. ದೇಶದಲ್ಲಿ ಹಣದ ಸಂಗ್ರಹ ಸಾಕಷ್ಟಿದೆ ಎಂದು ಅಲ್ಲಿನ ಅಧಿಕಾರಿ­ಗಳು ಹೇಳುತ್ತಿದ್ದಾರೆ. ತೈಲ ಬೆಲೆಯಲ್ಲಿ ಇನ್ನೂ ಹೆಚ್ಚಿನ ಕುಸಿತ ಕಂಡುಬಂದರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆದಿದೆ ಎಂದು ರಷ್ಯಾದ ಕೇಂದ್ರ ಬ್ಯಾಂಕ್ನ ಮುಖ್ಯಸ್ಥರಾದ ಎಲ್ವಿರಾ ನಬಿಯುಲ್ಲಿನಾ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT