ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕದಲ್ಲಿ ಜನಿಸಿದ ಬಳಿಕ...

Last Updated 6 ಮೇ 2015, 19:30 IST
ಅಕ್ಷರ ಗಾತ್ರ

ಶ್ರೀಕಾಂತ್‌ ಗಜಬಾಯಿ
‘ಲೋಕದೊಳಗೆ ಜನಿಸಿದ ಬಳಿಕ ನಮ್ಮ ಕುರುಹು ಇರಲೇಬೇಕು, ಇಲ್ಲವಾದಲ್ಲಿ ನಾವು ಇಲ್ಲಿ ಏಕೆ ಹುಟ್ಟಬೇಕು’..? ಇದು ಸ್ಟೀವ್‌ ಜಾಬ್‌ ನುಡಿ. ಇವರ ಮಾತನ್ನು ಅಕ್ಷರಶಃ ಪಾಲಿಸುತ್ತಿರುವವರು ಮಹಾರಾಷ್ಟ್ರದ ಯುವಕ ಶ್ರೀಕಾಂತ್‌ ಗಜಬಾಯಿ.

ವಿಭಿನ್ನ ಹಾದಿಯ ಮೂಲಕ ಸದ್ದಿಲ್ಲದೇ ಕೃಷಿ, ಪರಿಸರ ಸೇವೆ ಮಾಡುತ್ತಿದ್ದಾರೆ. ಕೇರಳದ ಐಐಎಂನಲ್ಲಿ ಪದವಿ ಪಡೆದಿರುವ ಶ್ರೀಕಾಂತ್‌ ಜೇನು ಕೃಷಿ ಮಾಡುತ್ತ ಪರಿಸರ ಸಮತೋಲನ ಕಾರ್ಯದಲ್ಲಿ ನಿರತರಾಗಿದ್ದಾರೆ.

‘ಬೀ ಎಫೆಕ್ಟ್‌’ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಕಟ್ಟಿಕೊಂಡು ರೈತರಿಗೆ ಜೇನು ಕೃಷಿ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಒಮ್ಮೆ ಅಂತಿಮ ವರ್ಷದ ಪದವಿಯಲ್ಲಿರುವಾಗ ಬೇಸಿಗೆ ರಜೆಯಲ್ಲಿ ಐದು ದಿನಗಳ ಜೇನು ಕೃಷಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಅಲ್ಲಿ ಜೇನು ಮತ್ತು ಪರಿಸರ ಕುರಿತಾಗಿ ಹಲವಾರು ಮಹತ್ವದ ಅಂಶಗಳನ್ನು ತಿಳಿದುಕೊಂಡರು. ಪರಿಸರ ಸಮತೋಲನವಾಗಿ ಇರಬೇಕಾದರೆ ಚಿಟ್ಟೆಗಳು ಮತ್ತು ಜೇನು ನೋಣಗಳ ಪಾತ್ರ ಮಹತ್ವದ್ದು ಎನ್ನುತ್ತಾರೆ ಶ್ರೀಕಾಂತ್‌.

ಭೂಮಿಯ ಮೇಲೆ ಸಸ್ಯ ಸಂಪತ್ತು ಹುಲುಸಾಗಿರಲು ಮಳೆ ಮಾತ್ರ ಕಾರಣವಲ್ಲ, ಜೇನು ನೋಣಗಳು ಮತ್ತು ಕ್ರೀಮಿ ಕೀಟಗಳ ಪಾತ್ರವೂ ಇದೆ. ಮಳೆ ಬಿದ್ದರೆ ಸಸ್ಯಗಳು ಬೆಳೆಯುತ್ತವೆ ಆದರೆ ಅವುಗಳ ಪರಾಗಸ್ಪರ್ಶಕ್ಕೆ ಜೇನು ನೋಣಗಳು ಬೇಕೇ ಬೇಕು. ಆದ್ದರಿಂದ ನಾವು ಹೆಚ್ಚಾಗಿ ಜೇನು ಕೃಷಿಯಲ್ಲಿ ತೊಡಗಿದರೆ ಪರಿಸರ ಸಮತೋಲನವಾಗಿರುತ್ತದೆ ಎನ್ನುತ್ತಾರೆ ಶ್ರೀಕಾಂತ್‌. ಹಾಗಾಗಿಯೇ ಮುಂದುವರೆದ ದೇಶಗಳಲ್ಲಿ ಜೇನು ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿ ಒಟ್ಟು ಕೃಷಿಯ ಶೇಕಡಾ 20ರಷ್ಟು ಆದಾಯ ಜೇನು ಕೃಷಿಯಿಂದ ಬರುತ್ತದೆ ಎಂದು ಅಂಕಿಅಂಶಗಳನ್ನು ತೆರೆದಿಡುತ್ತಾರೆ. ಭಾರತದಲ್ಲಿ ಮಾತ್ರ ಜೇನು ಕೃಷಿಗೆ ಹೆಚ್ಚಿನ ಒತ್ತು ಸಿಗುತ್ತಿಲ್ಲ. ಇತ್ತ ಸರ್ಕಾರ ಹಾಗೂ ಕೃಷಿ ವಿಶ್ವವಿದ್ಯಾಲಯಗಳು ಕೂಡ ಗಮನ ನೀಡುತ್ತಿಲ್ಲ ಎಂದು ಶ್ರೀಕಾಂತ್‌ ಬೇಸರ ವ್ಯಕ್ತಪಡಿಸುತ್ತಾರೆ.

ಬೀ ಎಫೆಕ್ಟ್ ಸಂಸ್ಥೆ ದೇಶದೆಲ್ಲೆಡೆ ಪ್ರವಾಸ ಮಾಡಿ ರೈತರಲ್ಲಿ ಜಾಗೃತಿ ಮೂಡಿಸುತ್ತಿದೆ. ಶ್ರೀಕಾಂತ್‌ ಅವರ ಪರಿಸರ ಸಮತೋಲನದ ಹೋರಾಟ ನಿಜಕ್ಕೂ ಶ್ಲಾಘನೀಯ. www.beeeffect.in

ರಾಜು ಯಾದವ್‌

ನಾನು ರಾಜು ಯಾದವ್‌. ಜಾರ್ಖಂಡ್‌ ರಾಜ್ಯದ ಚೋಪ್‌ ಎಂಬ ಕುಗ್ರಾಮದಲ್ಲಿ ಹುಟ್ಟಿದ್ದು. ನಮ್ಮ ಅಪ್ಪ ಅಮ್ಮನಿಗೆ ಮೂವರು ಮಕ್ಕಳು. ನಾನೇ ಹಿರಿಯ ಮಗ. ಕೂಲಿ ಮಾಡಿ ನಮ್ಮನ್ನು ಸಾಕುತ್ತಿದ್ದರು. ದುರದೃಷ್ಟಕ್ಕೆ ಅವರು ಕಾಯಿಲೆ ಬಿದ್ದರು. ಆಗ ನಾನು 6ನೇ ತರಗತಿಯಲ್ಲಿ ಓದುತ್ತಿದ್ದೆ. ಅವರಿಗೆ ಚಿಕಿತ್ಸೆ ಕೊಡಿಸಲು ಹಣ ಇರಲಿಲ್ಲ. ಚಿಕ್ಕಪ್ಪನ ಸಹಾಯದಿಂದ ಚಿಕಿತ್ಸೆ ಕೊಡಿಸಲಾಯಿತು. ಅವರು ಚೇತರಿಸಿಕೊಂಡರಾದರು ಕೂಲಿ ಕೆಲಸ ಮಾಡುವಂತಿರಲಿಲ್ಲ.

ಈ ಹಂತದಲ್ಲಿ ಮನೆಯ ಸಂಪೂರ್ಣ ಜವಾಬ್ದಾರಿ ನನ್ನ ಮೇಲೆ ಬಿತ್ತು. ಶಾಲೆಗೆ ಗುಡ್‌ಬೈ ಹೇಳಿ ಕೂಲಿ ಕೆಲಸಕ್ಕೆ ತೆರಳಿದೆ. ಆ ಕೂಲಿ ಹಣ ಒಂದು ಹೊತ್ತಿನ ಅನ್ನಕ್ಕೂ ಸಾಲುತ್ತಿರಲಿಲ್ಲ. ಇಲ್ಲೇ ಇದ್ದರೆ ಜೀವನ ನಡೆಯುವುದಿಲ್ಲ ಎಂಬ ಅರಿವಾಯಿತು.

ಚಿಕ್ಕಪ್ಪನ ನೆರವಿನಿಂದ ಮುಂಬೈ ತಲುಪಿದೆ. ಅವರ ಪರಿಚಿತರ ಟೀ ಅಂಗಡಿಯಲ್ಲಿ ಕೆಲಸ ಕೊಡಿಸಿದರು. ಟೀ ಅಂಗಡಿಯ ಸುತ್ತ ಮುತ್ತ ಇರುವ ಆಫೀಸ್‌ಗಳಿಗೆ ಟೀ ಕೊಡುವುದೇ ನನ್ನ ಕೆಲಸವಾಗಿತ್ತು. ಇವುಗಳಲ್ಲಿ ಶಾದಿ.ಕಾಮ್‌ ಕಚೇರಿಯು ಒಂದಾಗಿತ್ತು. ಅಲ್ಲಿನ ನೌಕರರೊಬ್ಬರು ನನಗೆ ತುಂಬಾ ಆತ್ಮೀಯರಾದರು. ಅವರು ನನಗೆ ಅದೇ ಕಚೇರಿಯಲ್ಲಿ ಆಫೀಸ್‌ ಬಾಯ್‌ ಕೆಲಸ ಕೊಡಿಸಿದರು. ಮತ್ತೆ ಓದುವ ಹಂಬಲ ನನ್ನಲ್ಲಿ ಚಿಗುರಿತು. ಹತ್ತನೇ ತರಗತಿ ಪರೀಕ್ಷೆ ಕಟ್ಟಿ ಮೊದಲ ದರ್ಜೆಯಲ್ಲಿ ಪಾಸಾದೆ. ಸಂಜೆ ಕಾಲೇಜಿಗೆ ಸೇರಿ ಬಿ.ಕಾಂ ಪದವಿ ಪಡೆದು ವೆಬ್‌ಡಿಸೈನಿಂಗ್‌ ಕಂಪೆನಿಯಲ್ಲಿ ಅಕೌಂಟೆಂಟ್‌ ಆಗಿ ಕೆಲಸಕ್ಕೆ ಸೇರಿದೆ. ಆಸಕ್ತಿಯಿಂದ ವೆಬ್‌ಡಿಸೈನಿಂಗ್‌ ಕಲಿತೆ.

ಇಂದು ವೆಬ್‌ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದು ತಿಂಗಳಿಗೆ ಒಂದು ಲಕ್ಷ ರೂಪಾಯಿ ವೇತನ ಬರುತ್ತಿದೆ. ಇದು ನನ್ನ ಜೀವನದ ಯಶೋಗಾಥೆ. ಜೀವನ ಪ್ರೀತಿ ಮತ್ತು ಕಲಿಕೆಯ ಆಸಕ್ತಿ ಇದ್ದರೆ ಯಶಸ್ಸು ನಮ್ಮ ಪಾಕೆಟ್‌ನಲ್ಲಿರುತ್ತದೆ ಎಂದು ರಾಜು ಯಾದವ್‌ ಯುವಕರಿಗೆ ಕಿವಿ ಮಾತು ಹೇಳುತ್ತಾರೆ.

ಭವೇಶ್‌ ಭಾಟಿಯಾ
‘ನೀನು ಜಗತ್ತನ್ನು ನೋಡಲು ಬಯಸಬೇಡ, ಬದಲಾಗಿ ಜಗತ್ತು ನಿನ್ನ ಕಡೆ ನೋಡುವಂತೆ ಬೆಳೆಯಬೇಕು’ ಎಂದು ಅಮ್ಮ ಹೇಳುತ್ತಿದ್ದಳು. ಅವಳ ಈ ಮಾತು ನನ್ನ ಯಶಸ್ಸಿಗೆ ಕಾರಣ ಎನ್ನುತ್ತಾರೆ ಮಹಾರಾಷ್ಟ್ರದ ಭವೇಶ್‌ ಭಾಟಿಯಾ.

ಅಂಧನಾದರೂ ಬದುಕನ್ನು ಉತ್ಕಟವಾಗಿ ಪ್ರೀತಿಸಿ ಹಲವು ಸಂಕಷ್ಟಗಳನ್ನು ಗೆದ್ದು ಯಶಸ್ವಿ ಯುವ ಸಾಧಕರಾಗಿರುವ ಭವೇಶ್‌ ಇಂದಿನ ಯುವ ಪೀಳಿಗೆಗೆ ಮಾದರಿ. ಭವೇಶ್‌ ಮಹಾರಾಷ್ಟ್ರದ ಮಹಾಬಲೇಶ್ವರದವರು. ಹುಟ್ಟು ಅಂಧನನಾಗಿದ್ದ ಭವೇಶ್‌ ವಿಶೇಷ ಶಾಲೆಗಳಲ್ಲಿ ಓದಿ ಸ್ನಾತಕೋತ್ತರ ಪದವಿ ಪಡೆದು ತ್ರೀ ಸ್ಟಾರ್‌ ಹೋಟೆಲ್‌ನಲ್ಲಿ ಮ್ಯಾನೇ ಜರ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೆ ವಿಧಿ ಅವರನ್ನು ಹಾಗೇ ಇರಲು ಬಿಡಲಿಲ್ಲ.

‘ಅಮ್ಮ ಕ್ಯಾನ್ಸ್‌ರ್‌ಗೆ ತುತ್ತಾದರು. ಅವರ ಚಿಕಿತ್ಸೆಗೆ ಹಣ ಹೊಂದಿಸು ವುದು ಕಷ್ಟವಾಗಿತ್ತು. ಕೆಲಸಕ್ಕೂ ಸರಿಯಾಗಿ ಹೋಗುತ್ತಿರಲಿಲ್ಲ. ಕೊನೆಗೆ ಅಮ್ಮನನ್ನು ಕಳೆದು ಕೊಂಡೆ, ಇತ್ತ ಕೆಲಸವೂ ಹೋಯಿತು. ಒಂಟಿ ಜೀವನ ಬೇಸರವಾಗಿತ್ತು, ಆತ್ಮಹತ್ಯೆ ಮಾಡಿಕೊಳ್ಳಲು ಮಾನಸಿಕವಾಗಿ ಸಿದ್ಧನಾಗಿದ್ದೆ, ಆದರೆ ಅಮ್ಮ ಹೇಳುತ್ತಿದ್ದ ಮಾತು ಪದೇ ಪದೇ ಕಿವಿಯಲ್ಲಿ ರಿಂಗಣಿಸಿ ಆತ್ಮಹತ್ಯೆ ಯತ್ನವನ್ನು ಕೈಬಿಟ್ಟು ಮತ್ತೆ ಜೀವನವನ್ನು ಉತ್ಕಟವಾಗಿ ಪ್ರೀತಿಸಿದೆ. ಉಪಜೀವನಕ್ಕೆ ಕ್ಯಾಂಡಲ್‌ ತಯಾರಿಸಿ ಮಾರುತ್ತಿದ್ದೆ.

ಒಂದು ದಿನ ಕ್ಯಾಂಡಲ್‌ ಖರೀದಿಸಲು ಬಂದ ಹುಡುಗಿಯೊಬ್ಬಳು ನನ್ನ ಜೀವನ ಪ್ರೀತಿಗೆ ಮಾರುಹೋಗಿ ಮದುವೆಯಾದಳು. ನಂತರ ಖಾಸಗಿ ಬ್ಯಾಂಕ್‌ನಲ್ಲಿ 15 ಸಾವಿರ ರೂಪಾಯಿ ಸಾಲ ಪಡೆದು ಮೇಣದ ಬತ್ತಿ ಉದ್ಯಮವನ್ನು ವಿಸ್ತರಿಸಿ ಹೊಸ ಬದುಕು ಕಟ್ಟಿಕೊಂಡೆ’ ಎನ್ನುತ್ತಾರೆ ಭವೇಶ್‌. ಮೇಣದ ಬತ್ತಿಗಳನ್ನು ಮಾರಿ ನೂರು ರೂಪಾಯಿಯಲ್ಲಿ ಜೀವನ ನಡೆಸುತ್ತಿದ್ದ ಭವೇಶ್‌ ಇಂದು ಸನ್‌ರೈಸ್‌ಕ್ಯಾಂಡಲ್‌ ಎಂಬ ಕಾರ್ಖಾನೆಯನ್ನೇ ತೆರೆದಿದ್ದಾರೆ. 

200ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಭವೇಶ್‌, ವಾರ್ಷಿಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ಅಮ್ಮನ ಮಾತು, ಮುಂದೆ ಒಳ್ಳೆ ದಿನ ಗಳು ಬರಬಹುದೆಂಬ ನಂಬಿಕೆ ನನ್ನ ಯಶಸ್ಸಿನ ಸೂತ್ರಗಳು ಎಂದು ಭವೇಶ್‌ ಹೇಳುತ್ತಾರೆ.  www.sunrisecandles.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT