ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡೇರಪಾಳ್ಯ ಎಂಬ ಟಿಬೆಟನ್‌ ಲೋಕ

ಸುತ್ತಾಣ
Last Updated 6 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಅಲ್ಲಿ ಎದುರುಗೊಳ್ಳುವ ಬಹುತೇಕರು ಟಿಬೆಟನ್ನರು, ಕಣ್ಣು ಹಾಯಿಸಿದಲ್ಲೆಲ್ಲಾ ಬೌದ್ಧಸ್ತೂಪಗಳು, ಪುಟ್ಟ ಪುಟ್ಟ ಬೌದ್ಧಬಿಕ್ಕುಗಳ ಪ್ರಾರ್ಥನೆಯ ಕಲರವ, ಬೆರಗು ಹುಟ್ಟಿಸುವ ಬೆಟ್ಟಗುಡ್ಡಗಳ ರಮಣೀಯತೆ, ನಾವಿರುವುದು ಕರ್ನಾಟಕದಲ್ಲೋ ಟಿಬೆಟ್‌ನಲ್ಲೋ ಎಂದು ಅರೆಕ್ಷಣ ಚಕಿತಗೊಳಿಸುವಂತೆ ಮಾಡುವ ಈ ತಾಣವೇ ಚಾಮರಾಜನಗರ ಜಿಲ್ಲೆಯ ವಡೇರಪಾಳ್ಯ.

ಬೆಂಗಳೂರಿನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ವಡೇರಪಾಳ್ಯ ಚಾಮರಾಜನಗರ ಜಿಲ್ಲೆಯ ಅದ್ಭುತಗಳಲ್ಲೊಂದು. ಕೊಳ್ಳೇಗಾಲ ತಾಲ್ಲೂಕಿನ ಪ್ರಕೃತಿ ಸೌಂದರ್ಯ ರಾಶಿಯಲ್ಲಿ ಬೆಚ್ಚಗೆ ಮಲಗಿರುವ ವಡೇರಪಾಳ್ಯ ಎಂಬ ಹಳ್ಳಿ ತನ್ನ ಒಡಲೊಳಗೆ ಸಾವಿರಾರು ಮಂದಿ ಟಿಬೆಟನ್‌ ನಿರಾಶ್ರಿತರಿಗೆ ಆಶ್ರಯ ನೀಡಿ ಸಲಹುತ್ತಿದೆ.

ವಡೇರಪಾಳ್ಯದಲ್ಲಿ ಟಿಬೆಟನ್ನರು ಕನ್ನಡ ಮಾತನಾಡುವುದನ್ನೂ, ಸ್ಥಳೀಯರು ಟಿಬೆಟನ್‌ ಭಾಷೆ ಮಾತನಾಡುವುದನ್ನೂ ಕಾಣಬಹುದು. ಟಿಬೆಟನ್ನರು ಸ್ಥಳೀಯರೊಂದಿಗೆ ಬೆರೆತು ಬಾಳುತ್ತಿರುವುದು ಸಹಬಾಳ್ವೆಗೊಂದು ಮಾದರಿಯಂತಿದೆ.

ವಡೇರಪಾಳ್ಯದಲ್ಲಿ ಟಿಬೆಟನ್ನರ ಲೋಕ ಒಂದು ವಿಶೇಷವಾದರೆ, ಅಲ್ಲಿನ ಪ್ರಕೃತಿ ಸೌಂದರ್ಯ ಮತ್ತೊಂದು ಅಚ್ಚರಿ. ಹಸಿರು ಹಾಸಿ, ಹಸಿರನ್ನೇ ಹೊದ್ದ ಇಲ್ಲಿನ ಬೆಟ್ಟಗುಡ್ಡಗಳು ಪ್ರಕೃತಿಪ್ರಿಯರನ್ನು ಮನದಣಿಯೆ ತಣಿಸುತ್ತವೆ. ಬೆಟ್ಟದ ಬುಡದಲ್ಲಿರುವ ಟಿಬೆಟನ್ನರ ಅಧ್ಯಯನ ಕೇಂದ್ರ ಹಾಗೂ ಬೌದ್ಧಸ್ತೂಪಗಳು ನಾವು ಟಿಬೆಟ್‌ನಲ್ಲಿರುವ ಅನುಭವ ನೀಡುತ್ತವೆ.

ಬೌದ್ಧಸ್ತೂಪಗಳು, ಅಧ್ಯಯನ ಕೇಂದ್ರದ ವಿನ್ಯಾಸ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಬುದ್ಧ ದೇವಾಲಯದ ಒಳಾಂಗಣ, ಟಿಬೆಟನ್‌ ಚಿತ್ರಕಲೆ, ಬುದ್ಧನ ಮೂರ್ತಿ, ಬೌದ್ಧ ಬಿಕ್ಕುಗಳ ಪ್ರಾರ್ಥನೆ, ಬೆಟ್ಟ ಸಾಲುಗಳ ಮೇಲಿಂದ ಬೀಸುವ ತಿಳಿಗಾಳಿ ವಡೇರಪಾಳ್ಯಕ್ಕೇ ವಿಶೇಷವಾದುದು.

ವಡೇರಪಾಳ್ಯಕ್ಕೆ ಹೋಗುವ ಮಾರ್ಗದಲ್ಲಿ ಕೊಳ್ಳೇಗಾಲದಿಂದ ಮುಂದೆ ಮಧುವನಹಳ್ಳಿ ಬಿಟ್ಟರೆ ಎದುರಾಗುವುದೆಲ್ಲಾ ಹಸಿರಿನ ಸಿರಿಯೇ. ಕಾಡಿನಹಾದಿಯ ಅಲ್ಲಲ್ಲಿ ಕಾಡೆಮ್ಮೆ, ಜಿಂಕೆ, ಆನೆಗಳು ಎದುರಾಗುತ್ತವೆ. ಬೆಟ್ಟದ ಕಡಿದಾದ ರಸ್ತೆಯಲ್ಲಿ ವಾಹನ ಚಲಿಸುವುದು ಸವಾಲಿನ ಕೆಲಸವೇ.

ಬೆಂಗಳೂರಿನಿಂದ ಒಂದು ದಿನದಲ್ಲಿ ವಡೇರಪಾಳ್ಯಕ್ಕೆ ಹೋಗಿ ಬರಬಹುದು. ಆದರೆ, ಕನಿಷ್ಠ ಎರಡು ದಿನಗಳ ಪ್ರವಾಸ ಯೋಜನೆ ಹಾಕಿಕೊಂಡರೆ ವಡೇರಪಾಳ್ಯದ ಜತೆಗೆ ಬಿಳಿಗಿರಿರಂಗನ ಬೆಟ್ಟದ ಪೋಡುಗಳು, ಪುಣಜೂರು, ಸುವರ್ಣಾವತಿ ಅಣೆಕಟ್ಟೆ ಸುತ್ತಾಡಿಕೊಂಡು ಬರಬಹುದು.

ಬೆಂಗಳೂರಿನಿಂದ ಮದ್ದೂರು, ಮಳವಳ್ಳಿ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೋಗಿ, ಮಧುವನಹಳ್ಳಿಯಿಂದ ಮುಂದೆ ಬಲಕ್ಕೆ ತಿರುಗಿ ಲೊಕ್ಕನಹಳ್ಳಿ ಮಾರ್ಗವಾಗಿ ವಡೇರಪಾಳ್ಯಕ್ಕೆ ಹೋಗಬಹುದು. ಚಾಮರಾಜನಗರದಿಂದ ಹೋದರೆ ಸುವರ್ಣಾವತಿ ಅಣೆಕಟ್ಟೆ, ಪುಣಜೂರು ಮಾರ್ಗವಾಗಿ ವಡೇರಪಾಳ್ಯ ತಲುಪಬಹುದು.

ವಡೇರಪಾಳ್ಯಕ್ಕೆ ಬಸ್‌ಗಳ ವ್ಯವಸ್ಥೆ ಕಡಿಮೆ. ಸ್ವಂತ ವಾಹನದಲ್ಲಿ ಹೋಗುವುದೇ ಸೂಕ್ತ. ಬೆಟ್ಟಗುಡ್ಡದ ರಸ್ತೆಯಾದ್ದರಿಂದ ದಾರಿಯಲ್ಲಿ ಗುಂಡಿ, ಕೊರಕಲು, ದೊಡ್ಡ ದೊಡ್ಡ ಕಲ್ಲುಗಳು ಎದುರಾದರೆ ಬೇಸರಿಸಿಕೊಳ್ಳುವ ಅಗತ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT