ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಅಭಿರುಚಿಯ ‘ಲೈಫ್‌ಸ್ಟೈಲ್‌’ ಮನೆ!

Last Updated 3 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸ್ವಂತಕ್ಕೊಂದು ಮನೆ ಕಟ್ಟಿಕೊಳ್ಳುವಾಗ ಪ್ರತಿಯೊಬ್ಬ ರಿಗೂ ಅವರದ್ದೇ ಆದ ಕನಸು, ಅಭಿರುಚಿ ಇರುತ್ತದೆ. ಜತೆಗೆ, ಮನೆ ನಿರ್ಮಾಣಕ್ಕಾಗಿ ಅವರು ವೆಚ್ಚ ಮಾಡಲು ಸಿದ್ಧತೆ ಮಾಡಿಕೊಂಡಿರುವುದೂ ಮುಖ್ಯವಾಗುತ್ತದೆ.

ಚಿಕ್ಕದೋ, ದೊಡ್ಡದೋ, ಮಧ್ಯಮ ಗಾತ್ರದ್ದೋ ಇರುವ ನಿವೇಶನದಲ್ಲಿಯೇ, ತಮ್ಮ ಬಜೆಟ್‌ಗೆ ತಕ್ಕಂತೆ (ಮಿತಿಮೀರಿ ವೆಚ್ಚ ಮಾಡದೇ) ಮನೆ ನಿರ್ಮಿಸಿ ಕೊಳ್ಳಲು ಇಚ್ಛಿಸುವವರು ಬಹಳಷ್ಟು ಮಂದಿ. ದೊಡ್ಡ ಮೊತ್ತದ ಗೃಹಸಾಲ ಮಾಡಲು ಇಂತಹವರು ಮುಂದಾಗುವುದಿಲ್ಲ.

ಜೀವನಶೈಲಿ ದಿನಗಳು
ಆದರೆ, ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಎಂಬ ವಿಚಾರ ಬಹಳ ಮುಖ್ಯವಾಗಿಬಿಟ್ಟಿದೆ. ಕೆಲವರಾದರೂ ಬಜೆಟ್‌ ಬಗ್ಗೆ ಆಲೋಚಿಸದೆ ತಮ್ಮ ಕನಸಿನ ಮನೆಯನ್ನು ಆದಷ್ಟೂ ಸುಂದರ ವಾಗಿ ನಿರ್ಮಿಸಿಕೊಳ್ಳಲು ಬಯಸುತ್ತಾರೆ. ಕಟ್ಟಡದ ಒಳಾಂಗಣ ಮತ್ತು ಹೊರಾಂಗಣವನ್ನು ವಿಶೇಷವಾಗಿ ಅಲಂಕರಿಸಿಕೊಳ್ಳಲು ಇಚ್ಛಿಸುತ್ತಾರೆ. ಅದರಲ್ಲೂ ಕಲಾಕೃತಿಗಳು, ಅಪರೂಪದ ಶಿಲ್ಪಗಳು, ಆಂಟಿಕ್‌ ಪೀಸ್‌ಗಳನ್ನು ಸಂಗ್ರಹಿಸಿರುವವರಿಗಂತೂ ಮನೆಯ ಒಳಾಂಗಣ ಅಲಂಕಾರವನ್ನು ನಿರ್ದಿಷ್ಟ ಬಗೆಯಲ್ಲಿಯೇ ಮಾಡಿಕೊಳ್ಳಬೇಕು ಎಂಬ ಹಂಬಲ.

ಗೋಡೆಗಳ ಬಣ್ಣ, ಲಿವಿಂಗ್‌ ರೂಂನ (ಹಜಾರದ) ಮೂಲೆಗಳು, ಮಾಸ್ಟರ್‌ ಬೆಡ್‌ರೂಂ ಮತ್ತು ಸ್ಟಡಿ ರೂಂನಲ್ಲಿ ತಮ್ಮ ಸಂಗ್ರಹದಲ್ಲಿನ ಕಲಾಕೃತಿಗಳನ್ನು ಜೋಡಿ ಸಿಡಲು ನಿರ್ದಿಷ್ಟವಾದ ಜಾಗ ಮೀಸಲಿರಬೇಕು ಎಂಬ ಆಶಯ ಅವರದ್ದಾಗಿರುತ್ತದೆ.

ಭಿನ್ನ ವಿನ್ಯಾಸದ ಮನೆ
ಬೆಂಗಳೂರಿನ ಉದ್ಯಮಿ ಮಹೇಶ್ ಅವರೂ ತಾವು ಹೊಸದಾಗಿ ನಿರ್ಮಿಸಲಿರುವ ಮನೆಯ ಬಗ್ಗೆ ಹೀಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡೇ ನನ್ನ ಕಚೇರಿಗೆ ಆಗಮಿ ಸಿದರು. ಸಂಜಯನಗರದಲ್ಲಿ ದಕ್ಷಿಣಾಭಿಮುಖ ವಾಗಿ ಇರುವ 30/40 ಅಡಿ ಉದ್ದ ಅಗಲದ ನಿವೇಶನದಲ್ಲಿ ತಮ್ಮ ಕುಟುಂಬದ ‘ಜೀವನಶೈಲಿ’ಗೆ ತಕ್ಕಂತಹ ಭಿನ್ನ ವಿನ್ಯಾಸದ ಮನೆ ನಿರ್ಮಾಣಕ್ಕೆ ಪ್ಲಾನ್‌ (ಯೋಜನೆ) ಸಿದ್ಧಪಡಿಸಿಕೊಡಿ ಎಂದು ಕೋರಿದರು.

ಜತೆಗೆ ತಮ್ಮ ಸಂಗ್ರಹದಲ್ಲಿನ ನೂರಾರು ಗಣೇಶ ಮೂರ್ತಿಗಳು, ಚಿತ್ರಪಟಗಳು, ರಾಜಸ್ತಾನದ ಅಮೃತ ಶಿಲೆಯ ಕಲಾಕೃತಿಗಳು, ಹಿತ್ತಾಳೆ ಮತ್ತಿತರ ಲೋಹದ ಆಂಟಿಕ್‌ಗಳ ಸಂಗ್ರಹಗಳನ್ನು ಎಲ್ಲೆಲ್ಲಿ, ಹೇಗೆ ಹೇಗೆ ಜೋಡಿಸಲು ಸ್ಥಳಾವಕಾಶ ಬೇಕಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಲೆಂದೇ ತಮ್ಮಲ್ಲಿನ ಎಲ್ಲ ಕಲಾಕೃತಿಗಳ ನೂರಾರು ಫೋಟೋಗಳನ್ನೂ ತಂದಿದ್ದರು.

ಗಮನ ಸೆಳೆಯುವಂತಿರಬೇಕು

ಎಲ್ಲದಕ್ಕೂ ಮೊದಲು ಅವರು ಹೇಳಿದ್ದೇನೆಂದರೆ,  ‘ಮೇಡಂ, ಬೈಕು, ಕಾರು, ಟಿ.ವಿ ಮೊದಲಾದವನ್ನು ಬೇಡ ಎನಿಸಿದರೆ ಬದಲಿಸಬಹುದು. ಹಳೆಯದನ್ನು ಮಾರಾಟ ಮಾಡಿ ಹೊಸತನ್ನು ಖರೀದಿಸಬಹುದು. ಆದರೆ, ಜೀವನದಲ್ಲಿ ಇದೇ ಮೊದಲ ಬಾರಿಗೆ ಸ್ವಂತಕ್ಕೊಂದು ಮನೆ ಕಟ್ಟಿಕೊಳ್ಳುತ್ತಿರುವುದು. ಇದು ಇತರೆ ಸಾಮಾನ್ಯ ಮನೆಗಳಿಗಿಂತ ಭಿನ್ನವಾಗಿರಬೇಕು, ನೋಡಿದವರ ಗಮನ ಸೆಳೆಯುವಂತಿರಬೇಕು, ಅಪರೂಪದ್ದು ಎನಿಸಬೇಕು. ನಮ್ಮ ಕುಟುಂಬದ ಸದಸ್ಯರ ಅಗತ್ಯಗಳಿಗೆ ತಕ್ಕಂತಿರಬೇಕು. ಎಲ್ಲಕ್ಕೂ ಮಿಗಿಲಾಗಿ ಅದು ಆಧುನಿಕ ಜೀವನಶೈಲಿಗೆ ತಕ್ಕಂತಿರಬೇಕು. ಬಜೆಟ್‌ ಎಷ್ಟಾದರೂ ಪರವಾಗಿಲ್ಲ’...

ನಿವೇಶನ 30/40 ಅಡಿಗಳಷ್ಟು ಚಿಕ್ಕ ವಿಸ್ತೀರ್ಣದ್ದು.  ಅದರಲ್ಲೇ ಮಹೇಶ್‌ ಅವರ ಎಲ್ಲ ಬೇಡಿಕೆಗಳನ್ನೂ ಪೂರೈಸಬೇಕಿತ್ತು. ಅಲ್ಲದೇ, ನಿಯಮಗಳ ಪ್ರಕಾರ ನಾಲ್ಕೂ ಪಾರ್ಶ್ವಗಳಲ್ಲಿ ಜಾಗ (ಸೆಟ್‌ಬ್ಯಾಕ್‌) ಬಿಡಬೇಕು. ಸಂಪ್‌ ಜತೆಗೆ ಮಳೆ ನೀರು ಸಂಗ್ರಹಕ್ಕೂ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಅಂದರೆ, ನಿವೇಶನದ 1200 ಅಡಿಗಳ ಒಟ್ಟು ವಿಸ್ತೀರ್ಣದಲ್ಲಿ ಒಂದಡಿಯೂ ವ್ಯರ್ಥವಾಗದಂತೆ ಜಾಗದ ಸದ್ಬಳಕೆ ಆಗುವಂತೆ ಮನೆಯ ನೀಲನಕ್ಷೆ ತಯಾರಿಸಬೇಕಿತ್ತು. ಜತೆಗೆ ಮನೆಯೊಳಗೆ ಕಲಾಕೃತಿಗಳ ಜೋಡಣೆಗೆ ಸೂಕ್ತ ಸ್ಥಳಾವಕಾಶ ಮಾಡಿಕೊಡುತ್ತಲೇ ಆಧುನಿಕ ಜೀವನಶೈಲಿಗೆ ತಕ್ಕಂತಹ ವ್ಯವಸ್ಥೆಗಳನ್ನೂ ಅಳವಡಿಸಬೇಕಿತ್ತು. ಇದು ಸ್ವಲ್ಪ ಸವಾಲಿನ ಕೆಲಸವೇ ಆಗಿತ್ತು.

ಸರ್ವ ಅನುಕೂಲಗಳ ಮನೆ

ಇದೀಗ 27 ಚದರ ವಿಸ್ತೀರ್ಣದ  ‘ಲೈಫ್‌ಸ್ಟೈಲ್‌’ ಮನೆ ಪೂರ್ಣಗೊಂಡಿದೆ. ಮೂರು ಅಂತಸ್ತುಗಳಲ್ಲಿ ಐದು ಕೊಠಡಿಗಳು, ನಾಲ್ಕು ಸ್ನಾನಗೃಹಗಳು, ಎರಡು ಲಿವಿಂಗ್‌ ರೂಂಗಳು, ಎರಡು ಬಾಲ್ಕನಿ, ಅಚ್ಚುಕಟ್ಟಾದ ಅಡುಗೆ ಕೋಣೆ, ಡೈನಿಂಗ್‌ ಹಾಲ್‌, ಪೂಜಾಗೃಹ ಮತ್ತು ಹೋಮ್‌ ಥಿಯೇಟರ್‌... ಹೀಗೆ ಈ ಕಾಲಮಾನದ ಆಧುನಿಕ ಜೀವನಶೈಲಿಗೆ ಅಗತ್ಯವಾದ ಎಲ್ಲ ಅನುಕೂಲಗಳನ್ನೂ ಈ ಮನೆ ಒಳಗೊಂಡಿದೆ.

ಎದ್ದು ಕಾಣುವ ಹೊರ ವಿನ್ಯಾಸ
ಉದ್ದದ ಕಾರು ನಿಲ್ಲಿಸಲು ಬೇಕಾಗುವಷ್ಟು ದೊಡ್ಡ ಪೋರ್ಟಿಕೊ, ಕಲ್ಲಿನ ಕಂಬ ಮತ್ತು ಟೆರ್ರಕೋಟಾ ಇಟ್ಟಿಗೆ ಬಳಸಿ ಭಿನ್ನವಾಗಿ ವಿನ್ಯಾಸಗೊಳಿಸಿದ ಕಾಂಪೌಂಡ್‌, 1ನೇ ಅಂತಸ್ತಿನ ಪುಟ್ಟ ಬಾಲ್ಕನಿ, 2ನೇ ಅಂತಸ್ತಿನ ಸೀಟಿಂಗ್‌ ವಿಂಡೊ (ಬೇ ವಿಂಡೊ) ಮತ್ತಿತರ ಅಂಶಗಳು ಮನೆಯ ಎಲಿವೇಷನ್‌ (ಹೊರ ವಿನ್ಯಾಸ) ಎದ್ದು ಕಾಣುವಂತೆ ಮಾಡಿವೆ.

ಹಿತ್ತಾಳೆ ಹಿಡಿಕೆಗಳ ಮೆರುಗು

ನೆಲ ಅಂತಸ್ತಿನಲ್ಲಿ ಪೂರ್ವಾಭಿಮುಖವಾಗಿ ದೊಡ್ಡ ತೇಗದ ಮರದಿಂದ ಬಹಳ ಆಸ್ತೆ ವಹಿಸಿ ಸಿದ್ಧಪಡಿಸಿದ ಬಾಗಿಲಿದೆ. ದಪ್ಪ ಚೌಕಟ್ಟು, 2 ಇಂಚು ಗಾತ್ರದ ಹಲಗೆ ಬಳಸಿ ವಿಶೇಷವಾಗಿ ವಿನ್ಯಾಸಗೊಳಿಸಿದ ಬಾಗಿಲಿನ ಅಂದವನ್ನು ಎತ್ತರವಾದ ಹಿತ್ತಾಳೆಯ ಹಿಡಿಕೆ ಮತ್ತು ಮಿರುಗುಟ್ಟುವ ಬುಗುಡಿಗಳು ಹೆಚ್ಚಿಸಿವೆ.

ನ್ಯಾಚುರಲ್‌ ಸ್ಟೋನ್‌ ಆಕರ್ಷಣೆ
ಹಜಾರದ ಒಂದು ಗೋಡೆಗೆ ನ್ಯಾಚುರಲ್‌ ಸ್ಟೋನ್‌, ಮಧ್ಯೆ ಮಧ್ಯೆ ಪುಟ್ಟ ಗಣೇಶನ ಮೂರ್ತಿಗಳನ್ನು ಜೋಡಿಸಲಾಗಿದೆ. ಕಲಾಕೃತಿಗಳನ್ನು ಜೋಡಿಸಿಡಲು ಸಹಜ ಶೈಲಿಯ ಷೋಕೇಸಿದೆ. ಸಂಜೆ ವೇಳೆ ಸೂರ್ಯನ ಬೆಳಕು ತಾರಸಿಯಿಂದಲೇ ತೂರಿಬರುವಂತೆ ಪಶ್ಚಿಮ ದಿಕ್ಕಿನಲ್ಲಿ ಸ್ಕೈಲೈಟ್‌ ವಿನ್ಯಾಸದ್ದೇ ಒಂದು ವಿಶೇಷ.

ಬಲ ಮಗ್ಗಲಲ್ಲಿ ಊಟದ ಕೋಣೆ ಮತ್ತು ತುಸು ದೊಡ್ಡದೇ ಆದ ಪೂಜಾಗೃಹವಿದೆ. ಎಡಬದಿಗೆ ಮನೆಯ ಹಿರಿಯರಿಗೆ ಮೀಸಲಾದ ಕೋಣೆಯಿದೆ.

ಮಾಡ್ಯುಲರ್‌ ಕಿಚನ್‌
10/11 ಅಡಿ ಅಳತೆಯ ಓಪನ್‌ ಕಿಚನ್‌ನಲ್ಲಿ ಸ್ಟೌವ್‌, ಮಿಕ್ಸಿ, ಮೈಕ್ರೊವೇವ್‌ ಆವನ್‌ ಇಡಲು ಫಳಫಳ ಎನ್ನುವ ಬ್ಲ್ಯೂ ಪರ್ಲ್‌್ ಗ್ರಾನೈಟ್‌ (ಚದರಡಿ ಬೆಲೆ ರೂ600) ಜಗುಲಿ ಇದೆ. ಇದು ಇಡೀ ಅಡುಗೆ ಕೋಣೆಗೆ ವಿಶೇಷ ಕಳೆಯನ್ನು ತಂದುಕೊಟ್ಟಿದೆ.

ಪಾತ್ರೆ ತೊಳೆಯಲು ವಿಶೇಷ ಸಿಂಕ್‌ ಅಳವಡಿಸಲಾಗಿದೆ. ಪಾತ್ರೆ ಜೋರಾಗಿಟ್ಟರೂ ಇದರಿಂದ ಸದ್ದು ಹೊರಡದು. ಕಲೆ ನಿಲ್ಲದು, ಫಂಗಸ್‌ ಆಗದು. ದಿನಸಿ ಪದಾರ್ಥಗಳನ್ನು ಜೋಡಿಸಿಡಲು ಅಳವಡಿಸಿದ ಮ್ಯಾಜಿಕ್‌ ಕಾರ್ನರ್‌, ಪುಲ್ಲೌಟ್‌ ಕಬೋರ್ಡ್ ಬಳಕೆ ಮತ್ತು ನಿರ್ವಹಣೆಗೆ ಬಹಳ ಸುಲಭದ್ದಾಗಿದೆ. ಎಲೆಕ್ಟ್ರಿಕಲ್‌ ಚಿಮಣಿಯೂ ಇರುವ ಈ ಮಾಡ್ಯುಲರ್ ಕಿಚನ್‌ಗೆ ಒಟ್ಟು ರೂ5 ಲಕ್ಷ ವೆಚ್ಚವಾಗಿದೆ.

ಮೊದಲ ಅಂತಸ್ತಿನಲ್ಲಿ ಒಂದು ಮಾಸ್ಟರ್‌ ಬೆಡ್‌ರೂಂ, ಮಕ್ಕಳಿಗಾಗಿ ಎರಡು ಕೊಠಡಿಗಳಿವೆ. ನಡುವೆ ಲಿವಿಂಗ್‌ನಲ್ಲಿ ಟಿ.ವಿ ವೀಕ್ಷಣೆಗೆಂದೇ ಪ್ರತ್ಯೇಕ ಜಾಗ ಮೀಸಲಾಗಿದೆ.
ಎರಡನೇ ಅಂತಸ್ತಿನಲ್ಲಿ ಅತಿಥಿಗಳಿಗೆ ಒಂದು ಕೊಠಡಿ, ದೊಡ್ಡ ಹೋಮ್‌ ಥಿಯೇಟರ್‌, ವಿಶಾಲವಾದ ಟೆರೇಸ್‌ನಲ್ಲಿ ಪಾರ್ಟಿ ಹಾಲ್‌ ಇದೆ.

ಮೂರೂವರೆ ಚದರಡಿ ವಿಸ್ತಾರದ ಮಾಸ್ಟರ್‌ ಬೆಡ್‌ರೂಂನ ಮರದ ಫ್ಲೋರಿಂಗ್‌, ವಿಶಿಷ್ಟ ಸೀಲಿಂಗ್‌,  ಸ್ಲೈಡಿಂಗ್‌ ಡೋರ್‌ನ ವಾರ್ಡ್‌ರೋಬ್‌, ಸ್ನಾನಗೃಹದ ಒಳಾಂಗಣ ತಾರಾ ಹೋಟೆಲ್‌ ಶೈಲಿಯಲ್ಲಿವೆ. ಬಾದಾಮಿ ಆಕಾರದ ಸ್ಯಾಂಡ್‌ವಿಚ್‌ ಗ್ಲಾಸ್‌ ಬಳಸಿ ಭಿನ್ನ ರೀತಿಯಲ್ಲಿ ಸ್ನಾನಗೃಹದ ಬಾಗಿಲನ್ನು ವಿನ್ಯಾಸಗೊಳಿಸಲಾಗಿದೆ.

ಮಾಸ್ಟರ್‌ ಬೆಡ್‌ರೂಂನಲ್ಲಿರುವ, ರೆಕ್ಕೆಗಳನ್ನು ಅಡಗಿಸಿಟ್ಟುಕೊಳ್ಳುವ, ದೀಪವನ್ನೂ ಒಳಗೊಂಡಿರುವ, ನಿಶ್ಶಬ್ದ ಚಲನೆಯ ಫ್ಯಾನ್‌ ಅಚ್ಚರಿ ಮೂಡಿಸುತ್ತದೆ.

ಒಂದೆಡೆ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿರುವುದು, ಇನ್ನೊಂದೆಡೆ ಪುರಾತನ ವಸ್ತು, ಕಲಾಕೃತಿಗಳನ್ನು ಜೋಡಿಸಿರುವುದು ಮಹೇಶ್‌ ಅವರ ಮನೆಯನ್ನು ಅಕ್ಷರಶಃ ‘ಜೀವನಶೈಲಿ’ ಮನೆಯಾಗಿಸಿಬಿಟ್ಟಿದೆ.

ನೆಲಮಟ್ಟದಿಂದ ಎತ್ತರದಲ್ಲಿರಲಿ ಮನೆ

ಅದು ಬಾಡಿಗೆ ಮನೆ. ಅಲ್ಲಿ ವಾಸವಿದ್ದವರಿಗೆ ಕಳೆದ ವರ್ಷದ ಮಳೆಗಾಲ ಅಕ್ಷರಶಃ ದುಃಸ್ವಪ್ನದಂತಿತ್ತು. ಆ ಮನೆ ರಸ್ತೆಗಿಂತ ತಗ್ಗಿನಲ್ಲಿ ಇದ್ದುದರಿಂದ ಚರಂಡಿ ನೀರೆಲ್ಲಾ ಒಳಕ್ಕೆ ನುಗ್ಗಿತ್ತು. ತ್ಯಾಜ್ಯ, ಕೊಳಚೆ ನೀರೆಲ್ಲಾ ಇಡೀ ಮನೆಯನ್ನು ಕೆಂಗೇರಿಯ ದೊಡ್ಡ ಮೋರಿಯಂತೆ ಮಾಡಿತ್ತು. ಹಜಾರದಲ್ಲಿನ ಪೀಠೋಪಕರಣಗಳು, ಪೂಜಾಗೃಹದಲ್ಲಿನ ದೇವರ ಮೂರ್ತಿ, ಚಿತ್ರಪಟಗಳು, ಪೂಜಾ ಸಾಮಗ್ರಿಗಳು, ಅಡುಗೆ ಕೋಣೆ ಮತ್ತು ಸ್ಟೋರ್‌ ರೂಂನಲ್ಲಿನ ದಿನಸಿ ಪದಾರ್ಥಗಳೆಲ್ಲವೂ ಕೊಚ್ಚೆ ನೀರಿನಲ್ಲಿ ಮುಳುಗಿದ್ದವು.

ತಾಸಿನ ನಂತರ ಮಳೆ ನಿಂತುಹೋಯಿತು. ಆದರೆ, ಮನೆಯೊಳಗೆ ಮಂಡಿಯುದ್ದ ನಿಂತಿದ್ದ ಕೊಳಚೆ ನೀರನ್ನು ಹೊರಹಾಕಬೇಕಾದ ದೊಡ್ಡ ಸವಾಲಿತ್ತು. ಅದಕ್ಕಾಗಿ ಮನೆ ಮಂದಿಯೆಲ್ಲಾ ಗಂಟೆಗಟ್ಟಲೆ ಶ್ರಮಿಸಬೇಕಾಯಿತು. ಗಲೀಜು ನೀರಿನಲ್ಲಿ ಮಿಂದೆದ್ದಿದ್ದ ಆ ದೇವರ ಮೂರ್ತಿ, ಚಿತ್ರಪಟಗಳನ್ನು ಮತ್ತೆ ಪೂಜಿಸಲಾದೀತೆ? ದೂರದ ಮರವೊಂದರ ಬುಡದಲ್ಲಿಟ್ಟು ಬರಬೇಕಾಯಿತು. ದಿವಾನ್‌ ಮತ್ತು ಸೋಫಾ ಕಾಲುಗಳಷ್ಟೆ ಮಲಿನವಾಗಿದ್ದ ರಿಂದ ಮಡಿ ಮಾಡಿ ಹಜಾರದಲ್ಲೇ ಇಡಲಾಯಿತು. ದಿನಸಿ ಪದಾರ್ಥ, ಮಕ್ಕಳ ಆಟಿಕೆ ಕಸದ ತೊಟ್ಟಿ ಸೇರಿದವು.  ಒಟ್ಟಿನಲ್ಲಿ ಕೆಲವು ಸಾವಿರ ರೂಪಾಯಿ ನಷ್ಟವೇ ಆಯಿತು.

ಮನೆ ಓನರ್‌ಗೆ ಬುದ್ಧಿ ಇಲ್ಲ. ತಳಪಾಯವನ್ನು ನೆಲಮಟ್ಟದಿಂದ ಎರಡಡಿ ಮೇಲಿರು ವಂತೆ ಎತ್ತರಿಸಿದ್ದರೆ ಆಗಿತ್ತು. ಹೆಚ್ಚೆಂದರೆ ಎರಡು ಕೋರ್ಸ್‌ ಸೈಜುಗಲ್ಲು, ಒಂದಷ್ಟು ಗಾರೆ ಖರ್ಚಾಗುತ್ತಿತ್ತು. ಅಷ್ಟನ್ನು ಉಳಿಸಲು ಹೋಗಿ ಕಟ್ಟಡವನ್ನೇ ಕೊಳಚೆಯಲ್ಲಿ ಮುಳುಗು ವಂತೆ ಮಾಡುವುದೆ?’ ಎಂದು ಮನೆ ಮಂದಿ ಬೇಸರ ಮಾಡಿಕೊಂಡರು.

ಮನೆ ಕಟ್ಟುತ್ತಿದ್ದರೆ ಜಾಗ್ರತೆ ವಹಿಸಿರಿ. ತಳಪಾಯದ ಮೇಲಿನ ಮಟ್ಟ ರಸ್ತೆಗಿಂತ ಎರಡು ಮೂರು ಅಡಿ ಎತ್ತರಿಸಿಯೇ ಕಟ್ಟಿಸಿರಿ. ವರ್ಷ ಕಳೆದಂತೆ, ಮತ್ತೆ ಮತ್ತೆ ಡಾಂಬರು ಹಾಕುತ್ತಾ ಹೋದಂತೆಲ್ಲಾ ರಸ್ತೆಯೂ ಎತ್ತರಿಸುತ್ತಾ ಹೋಗುತ್ತದೆ. ಮೊದಲಿಗೆ ರಸ್ತೆ ಮಟ್ಟಕ್ಕಿದ್ದ ಮನೆ ತಗ್ಗಲ್ಲಿ ಬಿದ್ದಂತಾಗುತ್ತದೆ. ಮನೆ ಕಟ್ಟುವವರೆಲ್ಲರೂ ಮಳೆಗಾಲವನ್ನು, ಮನೆ ಮುಂದಿನ ಚರಂಡಿ, ಒಳಚರಂಡಿ ಎಲ್ಲವನ್ನೂ ಗಮನಿಸಬೇಕು. ಇಲ್ಲವಾದರೆ ಗೋಡೆಗಳು ನೀರಿನಲ್ಲಿ ಮುಳುಗವಂತಾದರೆ ದೃಢತೆ ಕಳೆದುಕೊಳ್ಳುತ್ತವೆ. ಪ್ಲಾಸ್ಟರಿಂಗ್‌ ಸಹ ಕಿತ್ತು ಬರುತ್ತದೆ. ಮಳೆಗಾಲ ನಿಮ್ಮ ಪಾಲಿಗೂ ದುಃಸ್ವಪ್ನವಾಗುತ್ತದೆ ಅಷ್ಟೆ.

ರಾಧಾರವಣಂ, ವಾಸ್ತುಶಿಲ್ಪಿ
(ಮೊ: 98453 93580)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT