ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌ನಲ್ಲಿ ಭಾರತಕ್ಕೆ ಮೂರನೇ ಪದಕ

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಇಂಚೆನ್‌: ಭರವಸೆಯ ಶೂಟರ್‌ಗಳಾದ ಜಿತು ರಾಯ್‌, ಸಮರೇಶ್ ಜಂಗ್‌ ಮತ್ತು ಕರ್ನಾಟಕದ ಪ್ರಕಾಶ್‌ ನಂಜಪ್ಪ ಅವರನ್ನೊಳಗೊಂಡ ಭಾರತ ಪುರುಷರ ತಂಡ 17ನೇ ಏಷ್ಯನ್‌ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಕೊರಳಿಗೇರಿಸಿಕೊಂಡಿದೆ.

ಒಂಗ್‌ನಿಯೊನ್‌ ಅಂತರರಾಷ್ಟ್ರೀಯ ಶೂಟಿಂಗ್ ರೇಂಜ್‌ನಲ್ಲಿ ಭಾನುವಾರ ನಡೆದ 10ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಭಾರತ ಈ ಸಾಧನೆ ತೋರಿತು. ಈ ಸಲದ ಕೂಟದ ಶೂಟಿಂಗ್‌ನಲ್ಲಿ ಭಾರತಕ್ಕೆ ಒಲಿದ ಮೂರನೇ ಪದಕವಿದು. ಮೊದಲ ದಿನ ಜಿತು 50ಮೀ. ಪಿಸ್ತೂಲ್‌ ವಿಭಾಗದಲ್ಲಿ ಚಿನ್ನ ಮತ್ತು ಶ್ವೇತಾ 10ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಕಂಚು ಗೆದ್ದುಕೊಂಡಿದ್ದರು.

ಕಿಮ್‌ ಚೇಂಗ್‌ಯೊಂಗ್‌, ಜಿನ್‌ ಜಾಂಗ್‌ ಒಹೊ ಮತ್ತು ಲೀ ಡೇಮಿಯಿಂಗ್ ಅವರನ್ನೊಳಗೊಂಡ ದಕ್ಷಿಣ ಕೊರಿಯ ತಂಡ ಬಂಗಾರ ಗೆಲ್ಲುವಲ್ಲಿ ಯಶಸ್ವಿಯಾಯಿತು. ಆತಿಥೇಯರು ಒಟ್ಟು 1744 ಪಾಯಿಂಟ್ಸ್‌ ಗಳಿಸಿ ಈ ಸಾಧನೆ ಮಾಡಿದರು.

ಬೆಳ್ಳಿ ಪದಕಕ್ಕಾಗಿ ಚೀನಾ ಮತ್ತು ಭಾರತದ ಶೂಟರ್‌ಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತು. ಉಭಯ ತಂಡಗಳು ತಲಾ 1743 ಪಾಯಿಂಟ್ಸ್‌ ಕಲೆ ಹಾಕಿದ್ದವು. ಆದರೆ, ಹೆಚ್ಚು ಬಾರಿ 10 ಪಾಯಿಂಟ್ಸ್‌ ಕಲೆ ಹಾಕಿದ ಚೀನಾ ರಜತ ಪದಕವನ್ನು ತನ್ನದಾಗಿಸಿಕೊಂಡಿತು. ಇದ ರಿಂದ ಬೆಳ್ಳಿ ಗೆಲ್ಲುವ ಅವಕಾಶ ಭಾರತದ ಕೈ ತಪ್ಪಿತು. ವೇಯಿ ಪೆಂಗ್‌, ಕಿಫಿಂಗ್‌ ಪು ಮತ್ತು ಜಿಯಿವಾಯಿ ವಾಂಗ್‌ ಚೀನಾ ತಂಡದಲ್ಲಿದ್ದರು. 

ಜಿತು ಒಟ್ಟು 585 ಪಾಯಿಂಟ್ಸ್‌ ಗಳಿಸಿದರೆ, ಸಮರೇಶ್‌ 580 ಮತ್ತು ಪ್ರಕಾಶ್‌ 578 ಪಾಯಿಂಟ್ಸ್‌ ಕಲೆ ಹಾಕಿದರು. ಗ್ಲಾಸ್ಗೊ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬಂಗಾರದ ಸಾಧನೆ ತೋರಿದ್ದ ಜಿತು ಇಲ್ಲಿ ಕ್ರಮವಾಗಿ 97, 99, 95, 98 ಮತ್ತು 97 ಪಾಯಿಂಟ್ಸ್‌ ಕಲೆ ಹಾಕಿದರು. ಸಮರೇಶ್‌ ಮೊದಲ ಮೂರು ಅವಕಾಶಗಳಲ್ಲಿ ತಲಾ 97 ಪಾಯಿಂಟ್ಸ್‌ ಗಳಿಸಿದರು. ಇನ್ನುಳಿದ ಎರಡು ಅವಕಾಶಗಳಲ್ಲಿ ಅವರು ತಲಾ 96 ಪಾಯಿಂಟ್ಸ್‌ ತಂದಿತ್ತರು.

ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ನೆರೆದಿದ್ದ ಕಾರಣ ಕೊಂಚ ಕಿರಿಕಿರಿ ಎನಿಸಿತು.  ಆರಂಭದಲ್ಲಿ ಒತ್ತಡಕ್ಕೆ ಒಳಗಾದ ಕಾರಣ ಅದರಿಂದ ಹೊರಬರಲು ಸಾಧ್ಯವಾಗಲಿಲ್ಲ. ಇಲ್ಲಿಂದ ಕನಿಷ್ಠ ಎರಡು ಪದಕಗಳನ್ನಾದರೂ ಗೆಲ್ಲಬೇಕು ಎಂಬುದು ನನ್ನ ಗುರಿಯಾಗಿತ್ತು’ ಎಂದು ಜಿತು ಸ್ಪರ್ಧೆಯ ಬಳಿಕ ಹೇಳಿದರು.

ಬೆಳ್ಳಿ ಗೆಲ್ಲುವ ಅವಕಾಶ ಕಳೆದುಕೊಂಡ ಬಗ್ಗೆ ಸಮರೇಶ್‌್ ಅವರನ್ನು ಕೇಳಲಾದ ಪ್ರಶ್ನೆಗೆ ‘ಬೆಳ್ಳಿಯೇನು ಈ ಸ್ಪರ್ಧೆಯಲ್ಲಿ ನಾವು ಚಿನ್ನ ಗೆಲ್ಲುವ ದೊಡ್ಡ ಅವಕಾಶ ಕಳೆದುಕೊಂಡೆವು. ಕೊನೆಗೆ ಕಂಚು ಲಭಿಸಿದ್ದು ಸಮಾಧಾನ ನೀಡಿತು’ ಎಂದು ಉತ್ತರಿಸಿದರು.

ಜಿತುಗೆ ಐದನೇ ಸ್ಥಾನ: ಒಂದು ದಿನದ ಹಿಂದಷ್ಟೇ ಬಂಗಾರದ ಸಾಧನೆ ತೋರಿದ್ದ ಜಿತು ಪುರುಷರ 10ಮೀ. ಏರ್‌ ಪಿಸ್ತೂಲ್‌ ವೈಯಕ್ತಿಕ ಚಾಂಪಿಯನ್‌ಷಿಪ್‌ನಲ್ಲಿ ನಿಖರ ಗುರಿ ಹಿಡಿಯುವಲ್ಲಿ ವಿಫಲರಾದರು. ಅವರು 138.3 ಪಾಯಿಂಟ್‌ನೊಂದಿಗೆ ಐದನೇ ಸ್ಥಾನಕ್ಕೆ  ತೃಪ್ತಿ ಪಟ್ಟರು. ಈ ವಿಭಾಗದ ಚಿನ್ನ ಆತಿಥೇಯ ರಾಷ್ಟ್ರದ ಕಿಮ್‌ ಚೊಯಿಂಗ್ ಯಂಗ್ ಪಾಲಾಯಿತು.

ಟ್ರ್ಯಾಪ್ ತಂಡ ಸ್ಪರ್ಧೆಯಲ್ಲಿ ಆರನೇ ಸ್ಥಾನ: ಭಾರತ ಪುರುಷರ ತಂಡ ಟ್ರ್ಯಾಪ್‌ ಸ್ಪರ್ಧೆಯಲ್ಲಿ ಆರನೇ ಸ್ಥಾನ ಪಡೆದುಕೊಂಡಿತು. ಮನ್‌ಶೇರ್‌ ಸಿಂಗ್‌, ಮನವಜಿತ್‌ ಸಿಂಗ್‌ ಸಂಧು ಮತ್ತು ಡಾರಿಸ್‌ ಕ್ಯಾನಾನ್‌ ಅವರನ್ನೊಳಗೊಂಡ ಭಾರತ ತಂಡಕ್ಕೆ 341.6 ಪಾಯಿಂಟ್‌ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು.
1994ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಮನ್‌ಶೇರ್‌ ಎರಡು ಬಾರಿ ಒಲಿಂಪಿಕ್ಸ್‌ನಲ್ಲೂ ಪಾಲ್ಗೊಂಡಿದ್ದರು. ಇವರು ಇಲ್ಲಿ 117 ಪಾಯಿಂಟ್ಸ್‌ ಗಳಿಸಿದರು.

ಮೂರು ಬಾರಿ ಒಲಿಂಪಿಕ್ಸ್‌ ಕೂಟದಲ್ಲಿ ಪಾಲ್ಗೊಂಡಿದ್ದ ಮನವ್‌ಜಿತ್‌  116 ಪಾಯಿಂಟ್ಸ್‌ ಕಲೆ ಹಾಕಿದರೆ, ಡಾರಿಸ್‌ ಕ್ಯಾನಾನ್‌ 108 ಪಾಯಿಂಟ್ಸ್‌ ಗಳಿಸಿದರು.

ಫಲಿತಾಂಶ: ಪುರುಷರ 10ಮೀ. ಏರ್‌ ಪಿಸ್ತೂಲ್‌ ವೈಯಕ್ತಿಕ ಚಾಂಪಿಯನ್‌ಷಿಪ್‌: ಕಿಮ್‌ ಚೊಯಿಂಗ್ ಯಂಗ್ (ದಕ್ಷಿಣ ಕೊರಿಯ; 201.2 ಪಾಯಿಂಟ್ಸ್‌)–1, ವೇಯಿ ಪೆಂಗ್‌ (ಚೀನಾ; 199.3)–2, ಜಿತು ರಾಯ್‌ (138.3)–5. ತಂಡ ವಿಭಾಗ: ದಕ್ಷಿಣ ಕೊರಿಯ (1744)–1, ಚೀನಾ (1743)–2, ಭಾರತ (1743)–3. ಟ್ರ್ಯಾಪ್‌ ತಂಡ ವಿಭಾಗ: ಚೀನಾ (357)–1, ಕುವೈತ್‌ (354)–2, ದ. ಕೊರಿಯ (345)–3, ಭಾರತ (341)–6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT