ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನಾ ಪ್ರಕ್ರಿಯೆಯ ಮೌಲ್ಯವರ್ಧನೆ ಹೇಗೆ?

Last Updated 11 ಜೂನ್ 2015, 19:27 IST
ಅಕ್ಷರ ಗಾತ್ರ

ಯಾವುದೇ ಕ್ಷೇತ್ರವಿರಲಿ. ಇಂದು ಭ್ರಷ್ಟಾಚಾರದ ಆರೋಪಗಳುಯಾರಲ್ಲೂ ಆಶ್ಚರ್ಯ ಮೂಡಿಸುತ್ತಿಲ್ಲ. ಹಾಗಾಗಿ ಇತ್ತೀಚಿಗೆ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ. ನೂರ್‌ಜಹಾನ್ ಗಣಿಹಾರ್ ವಿರುದ್ಧ ತಮ್ಮ ಸಂಶೋಧನಾ ವಿದ್ಯಾರ್ಥಿಯಿಂದ ಲಂಚ ಕೇಳಿದರೆಂಬ ಆರೋಪಗಳು ಪತ್ರಿಕೆಗಳಲ್ಲಿ ವರದಿಯಾದಾಗ ಇದೊಂದು ನಿತ್ಯವೂ ಕೇಳಿಬರುವ ವಿಚಾರ ಎಂಬ ಪ್ರತಿಕ್ರಿಯೆಯೇ ಎಲ್ಲೆಡೆ ಇರುವುದು. ನಮಗೆ ಪ್ರೊ. ಗಣಿಹಾರ್ ವಿರುದ್ಧದ ನಿರ್ದಿಷ್ಟ ಆರೋಪಗಳ ಕುರಿತಾಗಿ ಸತ್ಯಾಂಶ ತಿಳಿದಿಲ್ಲ. ಆದರೆ ಸಂಶೋಧನೆಗೆ ದಾಖಲಾಗುವ ಸಂದರ್ಭಗಳಲ್ಲಿ, ಆರು ತಿಂಗಳ ಪ್ರಗತಿ ವರದಿ ಸಲ್ಲಿಸುವಾಗ ಹಾಗೂ ಪ್ರೌಢಪ್ರಬಂಧದ ಮೌಲ್ಯಮಾಪನ ಪ್ರಕ್ರಿಯೆಯ ಸಂದರ್ಭಗಳಲ್ಲಿ ಹಣದ ನಿರೀಕ್ಷೆಯಿದೆ ಎಂಬ ಮಾತು ವಿಶ್ವವಿದ್ಯಾಲಯ ವಲಯಗಳಲ್ಲಿ ಕೇಳಿಬರುತ್ತದೆ.

ಮಿಗಿಲಾಗಿ ಈ ಬಗ್ಗೆ ದೂರುಗಳೂ ದಾಖಲಾಗಿವೆ ಮತ್ತು ಪತ್ರಿಕೆಗಳಲ್ಲಿ ಮುಖಪುಟದ ವರದಿಗಳೂ ಬಂದಿವೆ. ಅಷ್ಟೇ ಅಲ್ಲ. ವಿದ್ಯಾರ್ಥಿವೇತನ ಪಡೆಯುವ ಸಂಶೋಧನಾ ವಿದ್ಯಾರ್ಥಿಗಳಿಂದ ಪಾಲು ಕೇಳುವ ಮತ್ತು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಅನುಭವಿಸಿರುವ ಪ್ರಕರಣಗಳು ಹೊಸವಲ್ಲ. ಇವೆಲ್ಲವುಗಳ ನಡುವೆ ಸಂಶೋಧನಾ ವಿದ್ಯಾರ್ಥಿಗಳನ್ನು ಖಾಸಗಿ ಕೆಲಸಗಳಿಗೆ ಬಳಸಿಕೊಳ್ಳುವುದು ಬಹಳ ಹಳೆಯ ಮತ್ತು ಬಹುಮಟ್ಟಿಗೆ ಯಾರೂ ಆಕ್ಷೇಪಿಸದ ವಿದ್ಯಮಾನವಾಗಿಬಿಟ್ಟಿದೆ.

ಕಳೆದ ವಾರ ನನ್ನ ಹಿರಿಯ ಸಹೋದ್ಯೋಗಿಯೊಬ್ಬರು ಸಂಶೋಧನಾ  ವಿದ್ಯಾರ್ಥಿಯೊಬ್ಬರ ದಾಖಲಾತಿಗೆ ಯಾರೋ ಏಳು ಲಕ್ಷ ರೂಪಾಯಿ ಕೇಳಿದರಂತೆ ಎಂದು ಉದ್ಗರಿಸಿದರು. ಅವರನ್ನು ಚಕಿತಗೊಳಿಸಿದ್ದು ಇತ್ತೀಚಿನ ದಿನಗಳಲ್ಲಿ ನಮ್ಮ ಕಿವಿಗೆ ಬೀಳುತ್ತಿದ್ದ ಸಂಖ್ಯೆ  ನಾಲ್ಕು ಲಕ್ಷ, ಇದ್ದಕ್ಕಿದ್ದಂತೆ ಏಳಾಗಿದೆಯಲ್ಲ ಎಂಬ ವಿಚಾರ. ಜೊತೆಗೆ ಇದು ದೊಡ್ಡ ಮೊತ್ತವಲ್ಲವೇ ಎಂಬುದೂ ಅವರ ಇಂಗಿತವಾಗಿತ್ತು. ಒಂದು ನಿಮಿಷ ಸುಮ್ಮನಿದ್ದು ನಾನು ಪ್ರತಿಕ್ರಿಯಿಸಿದೆ: ಪಿಎಚ್.ಡಿ. ದಾಖಲಾತಿ, ನಂತರದಲ್ಲಿ ಪದವಿ ಪಡೆಯಲು ಮೌಲ್ಯಮಾಪನದ ಸಂದರ್ಭದ ಖರ್ಚು ಹಾಗೂ ಯಾವುದಾದರೂ ಸರ್ಕಾರಿ ಕಾಲೇಜಿನಲ್ಲಿ ಇಲ್ಲವೇ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಲು ನೀಡಬೇಕಿರುವ ಲಂಚದ ಮೊತ್ತ ಇವುಗಳೆಲ್ಲ ಸೇರಿದರೂ ಬಹುಶಃ ರಾಜ್ಯದ ಎರಡನೆಯ ಹಂತದ  ನಗರವೊಂದರಲ್ಲಿನ 30x40 ಅಳತೆಯ ನಿವೇಶನವೊಂದರ ಮೌಲ್ಯವಾಗಬಹುದು. ಈ ಬಂಡವಾಳ ಯಾವುದೇ ಶ್ರಮವಿಲ್ಲದೆ, ಹೊರೆಯಿಲ್ಲದೆ ನಿರಾತಂಕವಾಗಿ ವೃತ್ತಿಜೀವನ ಆರಂಭಿಸಲು ಅನುವು ಮಾಡಿಕೊಡುತ್ತದೆ. ಆದರೆ ಹೀಗೆ ವ್ಯವಸ್ಥೆಯೊಳಗೆ ಬಂದವರು ಇಲ್ಲವೇ ಬಡ್ತಿ ಪಡೆದವರು ಇದ್ದಕ್ಕಿದ್ದಂತಲೇ ಮಾದರಿ ವೃತ್ತಿಪರರಾಗುವುದಿಲ್ಲ.

ಈ ವಾಸ್ತವ ವಿಶ್ವವಿದ್ಯಾಯಗಳ ಒಳಗಿರುವವರನ್ನು ಅಥವಾ ಹೊರಗಿನವರನ್ನು ಬೆಚ್ಚಿಬೀಳಿಸುತ್ತಿಲ್ಲ. ಬದಲಿಗೆ ಈ ವಿದ್ಯಮಾನಗಳ ಬಗ್ಗೆ  ತುಂಬ ಸಲೀಸಾಗಿ ಹಾಗೂ ಸ್ವಾಭಾವಿಕವಾಗಿ ಮಾತನಾಡುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ. ನಾನು ಮೇಲೆ ಪ್ರಸ್ತಾಪಿಸಿದ ನನ್ನ ಪ್ರತಿಕ್ರಿಯೆಯೇ ಇದಕ್ಕೆ ಸಾಕ್ಷಿ. ಭ್ರಷ್ಟತೆ ಸರ್ವೇಸಾಮಾನ್ಯವಾಗಿರುವ ಸೂಚನೆಯಿದು. ಇದೇ abanality of corruption.

ಇಷ್ಟಾದರೂ ಈ ಎಲ್ಲ ಹಗರಣಗಳು ಮತ್ತು ಭ್ರಷ್ಟತೆಯ ಮಾತುಗಳು ನಿಜವಾದ ಬಿಕ್ಕಟ್ಟನ್ನು, ಇನ್ನಷ್ಟು ಘೋರವಾದ ವಾಸ್ತವವನ್ನು ಮರೆಮಾಚುತ್ತಿವೆಯೇನೊ ಎಂಬ ಅನುಮಾನ ನನ್ನದು. ಅಂದರೆ ಈ ಹಗರಣಗಳು ಸಹ ಬೇರೊಂದು ರೋಗದ ಮೇಲ್ನೋಟಕ್ಕೆ ಕಾಣುವ ಲಕ್ಷಣಗಳು. ನಮ್ಮ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಇಡೀ ಪಿಎಚ್.ಡಿ. ಸಂಶೋಧನಾ ಪ್ರಕ್ರಿಯೆಯೇ ದಿವಾಳಿಯಾಗಿದೆ ಎಂದರೆ ಅದು ಅತಿಶಯವೇನಲ್ಲ. ಸಾರ್ವಜನಿಕವಾಗಿ ಬರವಣಿಗೆಯಲ್ಲಿ ಈ ಕಡುಸತ್ಯ ಒಪ್ಪಲು ಹಿಂಜರಿದರೂ, ಖಾಸಗಿ ಸಂಭಾಷಣೆಗಳಲ್ಲಿ ಎಲ್ಲರೂ ಒಪ್ಪಿಕೊಳ್ಳುವ ಸತ್ಯವಿದು. ವಿದ್ಯಾರ್ಥಿಗಳ ಆಯ್ಕೆಯಿಂದ ಮೊದಲುಗೊಂಡು ಪದವಿ ಪ್ರದಾನವಾಗುವ ತನಕ ತಾಂತ್ರಿಕ ಅಗತ್ಯಗಳನ್ನು ಯಾಂತ್ರಿಕವಾಗಿ ಕಾಗದದ ಮೇಲೆ ಪೂರೈಸುತ್ತಿದ್ದೇವೆ. ಯಾವುದೇ ಹಂತದಲ್ಲಿ ಬೌದ್ಧಿಕವಾಗಿ ಹಾಗೂ ಶೈಕ್ಷಣಿಕವಾಗಿ ಏನಾಗುತ್ತಿದೆ ಎಂದು ಗಮನಿಸಿದಾಗ ಗಾಬರಿಯಾಗುವುದು ಮಾತ್ರ ಖಚಿತ.

ನಾನಿಲ್ಲಿ ಗುರುತಿಸಬಯಸುವ ಬಿಕ್ಕಟ್ಟು ಸಮಾಜ ವಿಜ್ಞಾನ ಮತ್ತು ಮಾನವಿಕ ವಿಜ್ಞಾನಗಳ ಜ್ಞಾನಶಿಸ್ತುಗಳಲ್ಲಿ (discipline), ವಿಜ್ಞಾನ ಮತ್ತು ತಂತ್ರಜ್ಞಾನಗಳಿಗಿಂತ ಭಿನ್ನವಾಗಿ ಹಾಗೂ ಹೆಚ್ಚು ತೀವ್ರವಾಗಿ ಕಾಣಿಸಿಕೊಳ್ಳುತ್ತದೆ. ಈ ವ್ಯತ್ಯಾಸ ನಮ್ಮ ಮುಂದಿರುವ ಶೈಕ್ಷಣಿಕ ಮತ್ತು ಬೌದ್ಧಿಕ ಸವಾಲುಗಳನ್ನು ಅರ್ಥ ಮಾಡಿಕೊಳ್ಳಲು ತುಂಬ ಮುಖ್ಯವಾದುದು. ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಂಶೋಧನಾ ವಿದ್ಯಾರ್ಥಿ ತನ್ನ ವಿಷಯದ ಮೂಲಭೂತ ಪರಿಕಲ್ಪನೆಗಳು, ವಿಶ್ಲೇಷಣ ಮಾದರಿಗಳು ಮತ್ತು ಪ್ರಾಯೋಗಿಕ ತಂತ್ರಗಳನ್ನು ಕಲಿತಿರಲೇಬೇಕು.

ಇಂತಹ ತರಬೇತಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣದ ಸಂದರ್ಭದಲ್ಲಿಯೇ ದೊರಕಿರುತ್ತದೆ. ಹಾಗಾಗಿ ತನ್ನ ಪರಿಣತಿಯ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಹೊಸ ಚಿಂತನೆ, ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಸ್ಪಂದಿಸುವ, ಅವುಗಳನ್ನು ಅರಿಯುವ ಮತ್ತು ವಿವರಿಸಬಲ್ಲ ಶಕ್ತಿ ಗಳಿಸಿರುತ್ತಾರೆ. ನೂರಾರು ಪ್ರಬಂಧಗಳನ್ನು ಅಂತರರಾಷ್ಟ್ರೀಯ ನಿಯತಕಾಲಿಕ (peer reviewed journal)ಗಳಲ್ಲಿ ಪ್ರಕಟಿಸುವ ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತಾರೆ. ಅವರ ಮೂಲಭೂತ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎತ್ತುವಂತಿಲ್ಲ. ಸಮಾಜವಿಜ್ಞಾನಗಳ ಬಗ್ಗೆ ಆ ಮಾತು ಹೇಳಲಾಗದು.  

ವಿಜ್ಞಾನ ಸಂಶೋಧನೆಯ ಸಮಸ್ಯೆಯಿರುವುದು ಭಾರತದ ವಾಸ್ತವಕ್ಕೆ ಮತ್ತು ಅದರ ಅಗತ್ಯಗಳಿಗೆ ಸ್ಪಂದಿಸುವಲ್ಲಿ. ಮೂಲ ಅಥವಾ ಆನ್ವಯಿಕ ವಿಜ್ಞಾನಗಳಾಗಲಿ ಇಲ್ಲವೇ ತಂತ್ರಜ್ಞಾನ ಕ್ಷೇತ್ರಗಳಲ್ಲಾಗಲಿ ಆಗಾಗ ಕೆಲವು ಆವಿಷ್ಕಾರಗಳಾಗುತ್ತಿದ್ದರೂ ನಮ್ಮ ಸಂಶೋಧನೆಗಳು ಸಮಾಜಮುಖಿಯಾಗಿಲ್ಲ. ಇದು ಹೊಸ ಒಳನೋಟವಲ್ಲ. ಬದಲಿಗೆ ಸಾಮಾನ್ಯ ತಿಳಿವಳಿಕೆಯ ಹೇಳಿಕೆ.

ಇಷ್ಟಿದ್ದರೂ ವಿಜ್ಞಾನದ ವಿಷಯದ ಸಂಶೋಧಕರಿಗೆ ತಮ್ಮ ಜ್ಞಾನಶಿಸ್ತಿ ನೊಡನೆ ಇರುವ ಸಾವಯವ ಸಂಬಂಧ ಸಮಾಜ ಮತ್ತು ಮಾನವಿಕ ವಿಜ್ಞಾನಗಳಲ್ಲಿ ಇಲ್ಲ. ಆದ್ದರಿಂದಲೇ ಇಲ್ಲಿನ ಬಿಕ್ಕಟ್ಟು ತೀವ್ರವಾದುದು. ಕಳೆದ ಮೂರು ದಶಕಗಳಲ್ಲಿ ಸಾಹಿತ್ಯದಿಂದ ಸಮಾಜಶಾಸ್ತ್ರದವರಗೆ, ಈ ಎಲ್ಲ ಜ್ಞಾನಶಿಸ್ತುಗಳಲ್ಲಿ ಸಂಶೋಧಕರು ಮತ್ತು ಅವರ ಮಾರ್ಗದರ್ಶಕ ಪ್ರಾಧ್ಯಾಪಕರು ತಮ್ಮ ವಿಷಯಗಳಲ್ಲಿ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಚಿಂತನೆ, ಸಂಶೋಧನೆ ಮತ್ತು ತಾತ್ವಿಕ ಪಲ್ಲಟಗಳಿಗೆ ಸ್ಪಂದಿಸುವುದಿರಲಿ, ಅವುಗಳ ಅರಿವನ್ನೂ ಪಡೆಯುತ್ತಿಲ್ಲ. ಅಂದರೆ ಇವರು ತನ್ನ ಜ್ಞಾನಶಿಸ್ತುಗಳ ಜೊತೆಗೆ ವರ್ತಮಾನದ (up-to-date) ಸಂಬಂಧವನ್ನು ಹೊಂದಿಲ್ಲ. ಮೂಲ ತರಬೇತಿ ದೊರಕುವ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳಲ್ಲಿ ಪ್ರಾಥಮಿಕ ಪರಿಕಲ್ಪನೆಗಳು ಮತ್ತು ಚಿಂತನ ಮಾದರಿಗಳ ಪರಿಚಯವೂ ಆಗುತ್ತಿಲ್ಲ.

ವಿಪರ್ಯಾಸವೆಂದರೆ ಕನ್ನಡದಲ್ಲಿಯೇ ಬೋಧನೆ ಮತ್ತು ಸಂಶೋಧನೆ ನಡೆಯಬೇಕೆಂಬ ತುಡಿತ ಸೋಮಾರಿ ಸಂಶೋಧಕನಿಗೆ ಇಂಗ್ಲಿಷಿನ ಬಗ್ಗೆ ಅವಜ್ಞೆ ಮತ್ತು ಹೊರಪ್ರಪಂಚದಲ್ಲಿ ಸೃಷ್ಟಿಯಾಗುವ ಜ್ಞಾನದ ಬಗ್ಗೆ ತಿರಸ್ಕಾರ ಬೆಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿವೆ. ಇದರ ನಡುವೆ ಹೊರಗಿನ ಪ್ರಪಂಚದಲ್ಲಿ ತನ್ನ ಸಂಶೋಧನೆಗೆ ಮನ್ನಣೆ ದೊರೆಯುತ್ತಿಲ್ಲ ಎಂಬ ಭಾವನೆ ಕನ್ನಡದ ಸಂಶೋಧಕನನ್ನು ತನ್ನದೇ ಖಾಸಗಿ ಪ್ರಪಂಚ ನಿರ್ಮಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಇದೆಲ್ಲದರ ಪರಿಣಾಮವೆಂದರೆ ಯಾವುದೇ ಶಿಸ್ತು, ತೀವ್ರತೆ ಮತ್ತು ನಿಷ್ಕರ್ಷತೆಯಿರದ ಚಿಂತನೆ ಮತ್ತು ಬರವಣಿಗೆ, ಆಕರಗಳ ಬಗ್ಗೆ ಅವಜ್ಞೆ, ಕ್ಷೇತ್ರಕಾರ್ಯದ ಬಗ್ಗೆ ಅರೆ ತಿಳಿವಳಿಕೆ ಹಾಗೂ ಇತರರ ಸಂಶೋಧನೆಯನ್ನು ಗುರುತಿಸುವ ಶಕ್ತಿ ಇಲ್ಲದಿರುವುದು. ಈ ಎಲ್ಲ ಸಮಸ್ಯೆಗಳು ವಿಭಿನ್ನ ಜ್ಞಾನಶಿಸ್ತುಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ಗೋಚರವಾಗುತ್ತಿವೆ. ಉದಾಹರಣೆಗೆ ಸಂಶೋಧನಾ ವಸ್ತುವಿನ ಆಯ್ಕೆಯ ಪ್ರಶ್ನೆಯನ್ನು ಗಮನಿಸಿದರೆ, ನಮ್ಮ ವಿಶ್ವವಿದ್ಯಾಲಯಗಳ ನಿವೃತ್ತ ಪ್ರಾಧ್ಯಾಪಕರು ಇಲ್ಲವೆ ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಗಣ್ಯರು ಸಂಶೋಧನೆಗೆ ಅರ್ಹರಾದ ವಸ್ತುವೆಂದು ಪರಿಗಣಿಸಿ ಹಲವು ವರ್ಷಗಳೇ ಕಳೆದಿವೆ.

ಈ ಸಮಸ್ಯೆಗಳಾವುವೂ ಹೊಸವಲ್ಲ ಮತ್ತು ಎಲ್ಲರಿಗೂ ತಿಳಿದಿರುವುವೇ. ಆಗಾಗ ವಿಶ್ವವಿದ್ಯಾಲಯ ಅನುದಾನ ಮಂಡಳಿ (ಯು.ಜಿ.ಸಿ) ಸಹ ಸಂಶೋಧನೆಯ ಗುಣಮಟ್ಟ ಹೆಚ್ಚಿಸಲು ಹೊಸಕ್ರಮಗಳನ್ನೂ ಸೂಚಿಸಿ, ಅವುಗಳ ಅನುಷ್ಠಾನವನ್ನು ಕಡ್ಡಾಯಗೊಳಿಸಿದೆ. ವಿಪರ್ಯಾಸವೆಂದರೆ ಈ ಪರಿಹಾರಗಳು ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸಿವೆ ಮತ್ತು ಈ ಪ್ರಕ್ರಿಯೆಯ ಮೂಲಕ ಬರುವವರು ಅರ್ಹರು ಎಂದು ‘ಅರ್ಹತೆ’ಯ ಭ್ರಮೆಯೊಂದನ್ನು ಹುಟ್ಟಿಹಾಕಿವೆ. ಉದಾಹರಣೆಗೆ ಪಿಎಚ್.ಡಿ. ದಾಖಲಾತಿಯಲ್ಲಿನ ಭ್ರಷ್ಟತೆ ತಡೆಯಲು ಪ್ರವೇಶಪರೀಕ್ಷೆ ಪ್ರಾರಂಭಿಸಿದ್ದನ್ನೆ ಪರಿಗಣಿಸಿ. ಬಹು ಉತ್ತರಗಳಿರುವ ಪ್ರಶ್ನೆಗಳಿಗೆ ಉತ್ತರಿಸುತ್ತ, ಒಂದು ವಾಕ್ಯವನ್ನೂ ಬರೆಯದ ವಿದ್ಯಾರ್ಥಿಯ ಸಂಶೋಧನಾ ಸಾಮರ್ಥ್ಯವನ್ನು ಹೇಗೆ ಅಳೆಯುವುದು? ಪ್ರಬಂಧ ಮಾದರಿಯ ಪ್ರಶ್ನೆಗಳಲ್ಲಿ ಇಲ್ಲವೇ ಅಭ್ಯರ್ಥಿಯ ಸಂದರ್ಶನದ ಸಂದರ್ಭದ ಪಕ್ಷಪಾತ ತಡೆಯಲು ಪ್ರಯತ್ನಿಸುತ್ತ ನಾವು ಒಬ್ಬ ಅಭ್ಯರ್ಥಿಯ ಸಂಶೋಧನಾ ಸಾಮರ್ಥ್ಯವನ್ನು ಅಳೆಯಲಾಗದಂತಹ ವ್ಯವಸ್ಥೆ ಕಟ್ಟಿಕೊಂಡಿದ್ದೇವೆ. 

ಇಂತಹುದೆ ಇನ್ನೊಂದು ಯು.ಜಿ.ಸಿ.ಯ ನಿಯಮ ಎಲ್ಲ ಸಂಶೋಧನಾ ವಿಧ್ಯಾರ್ಥಿಗಳು ಮೂರು ಕಡ್ಡಾಯ ತರಗತಿಗಳನ್ನು ಹೊಂದಿರುವ ಕೋರ್ಸ್ ವರ್ಕ್ ಮಾಡಬೇಕೆಂದಿದೆ. ಕೇವಲ ಕಾಗದದ ಮೇಲೆ ತರಗತಿಗಳು ನಡೆಯುತ್ತವೆ ಎಂಬುದು ಎಲ್ಲೆಡೆ ಕೇಳಿಬರುವ ಮಾತು. ಪರೀಕ್ಷೆಗಳು ಔಪಚಾರಿಕವಾಗಿ ನಡೆಯುತ್ತವೆ. ಕೃತಿಚೌರ್ಯವನ್ನು ತಡೆಯುವ ಪರಿಣಾಮಕಾರಿ ವ್ಯವಸ್ಥೆಯಿಲ್ಲ. ಯು.ಜಿ.ಸಿ. ನಿಯಮಗಳ ಪ್ರಕಾರ ಪದವಿ ಪಡೆಯಲು ಅಗತ್ಯವಿರುವ ನಿಯತಕಾಲಿಕಗಳಲ್ಲಿ ಪ್ರಬಂಧ ಪ್ರಕಟಣೆ ಮತ್ತು ವಿಚಾರಸಂಕಿರಣಗಳಲ್ಲಿ ಪ್ರಬಂಧ ಮಂಡನೆಗೆ ಅವಕಾಶ ಮಾಡಿಕೊಡಲು ಹಾಗೂ ಸಂಶೋಧನಾ ಪ್ರಬಂಧಗಳನ್ನು ಬರೆದುಕೊಡುವ ವ್ಯವಸ್ಥಾಪಕ-ವ್ಯವಹಾರಸ್ಥರು ಅಕಾಡೆಮೆಕ್ ವಲಯದಲ್ಲಿ ಯಥೇಚ್ಛವಾಗಿದ್ದಾರೆ. ನಿಯಮಗಳ ಪಾಲನೆಗೆ ಹಲವಾರು ಕಿರುದಾರಿಗಳಿವೆ.

ವಿದ್ಯಾರ್ಥಿಗಳ ನಿರೀಕ್ಷೆಯೂ ಪದವಿಯ ಮತ್ತು ಅದರಿಂದ ದೊರಕುವ ಅರ್ಹತೆಯ ಕಡೆಗಿದೆಯೇ ಹೊರತು ಜ್ಞಾನಸಂಬಂಧಿ ಮಹತ್ವಾಕಾಂಕ್ಷೆಯ ದಾಗಿಲ್ಲ. ಶೀರ್ಷಿಕೆಯ ಪುಟದಲ್ಲಿಯೇ 4–5 ತಪ್ಪುಗಳಿರುವ ಪ್ರೌಢಪ್ರಬಂಧಗಳನ್ನು ನೋಡಿದ್ದೇನೆ. ತಮ್ಮ ಪ್ರಬಂಧದ ಶೀರ್ಷಿಕೆಯನ್ನೂ ವಿವರಿಸಲಾಗದ ಮೌಖಿಕಪರೀಕ್ಷೆಗಳಿಗೆ ಸಾಕ್ಷಿಯಾಗಿದ್ದೇನೆ. ವಿಷಾದದ ಸಂಗತಿಯೆಂದರೆ ಈ ಪಟ್ಟಿಯಲ್ಲಿರುವ ಕೆಲವರಾದರೂ ಕಷ್ಟಪಡಲು ಸಿದ್ಧರಿದ್ದ ಗಂಭೀರ ವಿದ್ಯಾರ್ಥಿಗಳು. ಇಂತಹವರಿಗೆ ಅವರ ಜ್ಞಾನಶಿಸ್ತಿನಲ್ಲೇ ಸರಿಯಾದ ಮೂಲ ತರಬೇತಿ ನೀಡಿ, ಸರಿಯಾದ ಸಂಶೋಧನಾ ವಸ್ತುವನ್ನು ಸೂಚಿಸಿ ಮತ್ತು ಸಂಶೋಧನಾ ವಿಧಾನಗಳನ್ನು ಕಲಿಸಬಲ್ಲ ಮಾರ್ಗದರ್ಶಕರೂ ಅಪರೂಪವಾಗುತ್ತಿದ್ದಾರೆ. 

ಹೀಗೆ ಇಡೀ ಪ್ರಕ್ರಿಯೆ ತನ್ನ ಮೌಲ್ಯ ಮತ್ತು ಪರಿಶುದ್ಧತೆಯನ್ನು ಕಳೆದುಕೊಂಡ ಮೇಲೆ ಭ್ರಷ್ಟಾಚಾರದ ಸಾಮಾನ್ಯೀಕರಣ ಆಶ್ಚರ್ಯ ಮೂಡಿಸುವ ವಿದ್ಯಮಾನವಲ್ಲ. ಈ ಬಿಕ್ಕಟ್ಟಿಗೆ ಪರಿಹಾರ ಯು.ಜಿ.ಸಿ.ಯ ಅಥವಾ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಮತ್ತಷ್ಟು ನಿಯಮಾವಳಿಗಳಿಂದ ಖಂಡಿತವಾಗಿಯೂ ಸಾಧ್ಯವಿಲ್ಲ. ನಮ್ಮೊಳಗಿನಿಂದ ನಮ್ಮ ವಿಶ್ವವಿದ್ಯಾಲಯ ಗಳಲ್ಲಿಯೇ ನಾವು ಉತ್ತರ ಕಂಡುಕೊಳ್ಳಬೇಕಾಗಿರುವ ಸವಾಲುಗಳಿವು. ನಮಗಿಂದು ಅಗತ್ಯವಿರುವುದು ಪ್ರತಿಯೊಂದು ವಿಭಾಗದಲ್ಲಿಯೂ ತನ್ನ ಜ್ಞಾನಶಿಸ್ತಿನ ಜೊತೆಗಿನ ಸಂಬಂಧದ ಮರುಸ್ಥಾಪನೆ, ನಂಬಿಕೆಗರ್ಹವಾದ ಬೌದ್ಧಿಕ ಸಂಸ್ಕೃತಿಯ ಪುನರ್‌ ನಿರ್ಮಾಣ ಹಾಗೂ ನಾವೇ ರೂಪಿಸಿ, ಶಿಸ್ತಿನಿಂದ ಅನುಸರಿಸುವ ಸರಳನಿಯಮಗಳ ರಚನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT