ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನ ಸಾರ್ವಭೌಮತ್ವಕ್ಕೆ ಸಂಕಷ್ಟ

Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಸಂಸತ್‌ ಸದಸ್ಯರ ವೇತನ ನಿಗದಿಗೆ ಆಯೋಗ ರಚನೆ ಪ್ರಸ್ತಾವ  ಸರಿಯಾದ ಕ್ರಮವಲ್ಲ. ಸ್ವತಂತ್ರ ಭಾರತದಲ್ಲಿ ಸಂಸದೀಯ ವ್ಯವಸ್ಥೆ ಜಾರಿಯಾದ ಕಾಲದಿಂದಲೂ ಸಂಸದರ ವೇತನವನ್ನು ನಿಗದಿ ಮಾಡುವ ಜವಾಬ್ದಾರಿಯನ್ನು ಸಂಸತ್ತು ಹೊಂದಿದೆ. ಈಗ ಆ ಜವಾಬ್ದಾರಿಯನ್ನು ಆಯೋಗಕ್ಕೆ ನೀಡುವುದು ಉತ್ತಮ ನಡವಳಿಕೆ ಎನಿಸಲಾರದು.

ಸಂಸತ್‌ ಸದಸ್ಯರ ವೇತನ ನಿಗದಿ ಮಾಡುವುದು ಇತರೇ ಸರ್ಕಾರಿ ನೌಕರರ ಅಥವಾ ಇನ್ಯಾವುದೇ ನೌಕರರ ವೇತನ ನಿಗದಿ ಮಾಡಿದಷ್ಟು ಸುಲಭವೂ ಅಲ್ಲ, ಸರಳವೂ ಅಲ್ಲ. ಅದಕ್ಕೊಂದು ಕಾನೂನು ಇದೆ. ಜವಾಬ್ದಾರಿ ಇದೆ. ಅಲ್ಲದೆ ಇದರಲ್ಲಿ ದೇಶದ ಸರ್ವ ಶ್ರೇಷ್ಠ ಸಂಸತ್ತಿನ ಗೌರವದ ಪ್ರಶ್ನೆಯೂ ಇದೆ. ಸಂಸತ್‌ ಸದಸ್ಯರು ಅಥವಾ ಶಾಸಕರ ವೇತನವನ್ನು ನಿಗದಿ ಮಾಡಲು ನಿರ್ದಿಷ್ಟ ಕಾನೂನುಗಳಿವೆ. ಅಲ್ಲದೆ ಸಂಸತ್‌ ಸದಸ್ಯರ ವೇತನವನ್ನು ಸಂಸತ್ತೇ ನಿರ್ಧರಿಸುತ್ತದೆ. ಅದೇ ರೀತಿ ಶಾಸಕರ ವೇತನವನ್ನು ವಿಧಾನ ಮಂಡಲ ನಿರ್ಧರಿಸುತ್ತದೆ. ಸಂವಿಧಾನದ ಕಲಂ 106ರ ಪ್ರಕಾರ ಸಂಸತ್‌ ಸದಸ್ಯರ ವೇತನವನ್ನು ನಿಗದಿ ಮಾಡಲಾಗುತ್ತದೆ. ಈಗ ಆ ಜವಾಬ್ದಾರಿಯನ್ನು ಆಯೋಗಕ್ಕೆ ಒಪ್ಪಿಸಿದರೆ ಸಂವಿಧಾನದ ಕತೆ ಏನು? ಆಯೋಗದಿಂದ ವೇತನ ನಿಗದಿ ಮಾಡುವುದಕ್ಕಾಗಿ ಸಂವಿಧಾನಕ್ಕೇ ತಿದ್ದುಪಡಿ ತರಲಾಗುವುದೇ? ಇಂತಹ ಹಲವಾರು ಪ್ರಶ್ನೆಗಳು ಏಳುತ್ತವೆ.

ಸಂಸತ್‌ ಸದಸ್ಯರ ವೇತನ ನಿಗದಿಗೆ ಲೋಕಸಭೆ ಉಪಾಧ್ಯಕ್ಷರ ನೇತೃತ್ವದಲ್ಲಿ ಎಲ್ಲ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ಇರುತ್ತದೆ. ಆ ಸಮಿತಿ ಕಾಲಕಾಲಕ್ಕೆ ವೇತನವನ್ನು ನಿಗದಿ ಮಾಡುತ್ತದೆ. ಹೀಗೆ ವೇತನ ನಿಗದಿ ಮಾಡುವಾಗಲೂ ಅದು ಹಲವಾರು ಅಂಶಗಳನ್ನು ಪರಿಗಣಿಸುತ್ತದೆ. ಸಾಮಾನ್ಯವಾಗಿ ಜನರಲ್ಲಿ ಒಂದು ಭಾವನೆ ಇದೆ. ಸಂಸತ್‌ ಸದಸ್ಯರಾಗಲಿ, ವಿಧಾನ ಮಂಡಲದ ಸದಸ್ಯರಾಗಲಿ ತಮ್ಮ ವೇತನ  ಪರಿಷ್ಕರಣೆಗೆ  ಮಂಡನೆಯಾದ ಮಸೂದೆಗೆ ವಿರೋಧ ವ್ಯಕ್ತಪಡಿಸುವುದಿಲ್ಲ, ಯಾವುದೇ ಚರ್ಚೆ ಇಲ್ಲದೆ ಈ ಮಸೂದೆ ಅಂಗೀಕಾರವಾಗುತ್ತದೆ ಎಂದೇ ಅವರು ಭಾವಿಸುತ್ತಾರೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಸಂಸತ್‌ ಸದಸ್ಯರ ಅಥವಾ ವಿಧಾನ ಮಂಡಲದ ಸದಸ್ಯರ ವೇತನ ನಿರ್ಧಾರ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಇದು ಸಂಸತ್ತಿನ ಅಧಿಕಾರ. ಸರ್ಕಾರ ಮಸೂದೆ ಮಂಡನೆ ಮಾಡಬಹುದೇ ವಿನಾ ವೇತನವನ್ನು ನಿಗದಿ ಮಾಡುವ ಹಕ್ಕು ಅದಕ್ಕೆ ಇಲ್ಲ.

ಲೋಕಸಭೆ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿರುವ ಸದನ ಸಮಿತಿಯಲ್ಲಿ ಎಲ್ಲ ಪಕ್ಷದ ಸದಸ್ಯರೂ ಇರುತ್ತಾರೆ. ಅಲ್ಲಿಯೇ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತದೆ. ಎಲ್ಲ ಅಂಶಗಳನ್ನು ಪರಿಗಣಿಸಿಯೇ ಎಷ್ಟು ವೇತನ ನಿಗದಿ ಮಾಡಬೇಕು ಎನ್ನುವುದನ್ನು ಈ ಸಮಿತಿ ಲೋಕಸಭಾಧ್ಯಕ್ಷರಿಗೆ ಶಿಫಾರಸು ಮಾಡುತ್ತದೆ. ಅದರ ಪ್ರಕಾರ ಸರ್ಕಾರ ಮಸೂದೆಯನ್ನು ಸಿದ್ಧಪಡಿಸಿ ಸಂಸತ್ತಿನಲ್ಲಿ ಮಂಡಿಸುತ್ತದೆ. ಈ ಬಗ್ಗೆ ಈಗಾಗಲೇ ಚರ್ಚೆ ನಡೆದಿರುವುದರಿಂದ ಬಹುತೇಕ ಸಮಯ ಸಂಸತ್ತಿನಲ್ಲಿ ಈ ಮಸೂದೆ ಬಗ್ಗೆ ಚರ್ಚೆ ನಡೆಯುವುದಿಲ್ಲ. ಇದನ್ನು ತಪ್ಪು ತಿಳಿಯಬೇಕಾಗಿಲ್ಲ. ಸಂಸತ್‌ ಮತ್ತು ವಿಧಾನ ಮಂಡಲದಲ್ಲಿ ಯಾವುದೇ ಚರ್ಚೆ ಇಲ್ಲದೆ ವೇತನ ಮಸೂದೆ ಅಂಗೀಕಾರವಾಗುತ್ತದೆ ಎಂದು ಲೇವಡಿ ಮಾಡುವುದರಲ್ಲಿಯೂ ಅರ್ಥವಿಲ್ಲ.

ಇದೇ ರೀತಿ ವಿಧಾನ ಮಂಡಲದಲ್ಲಿಯೂ ಆಗುತ್ತದೆ. ವಿಧಾನಸಭೆ ಅಧ್ಯಕ್ಷರಿಗೆ ಸದನ ಸಮಿತಿ ಮಾಡುವ ಶಿಫಾರಸಿನ ಆಧಾರದಲ್ಲಿಯೇ ಆಯಾ ರಾಜ್ಯ ಸರ್ಕಾರಗಳು ಮಸೂದೆಯನ್ನು ಮಂಡಿಸುತ್ತವೆ. ಎಲ್ಲ ರಾಜ್ಯಗಳಲ್ಲಿಯೂ ಶಾಸಕರಿಗೆ ಒಂದೇ ರೀತಿಯ ಸಂಬಳ ಮತ್ತು ಭತ್ಯೆ ನೀಡಬೇಕು, ದೇಶದೆಲ್ಲೆಡೆ ಏಕರೂಪತೆ ಇರಬೇಕು ಎಂಬ ಬೇಡಿಕೆ ಕೂಡ ಇದೆ. ಆದರೆ ಇದೂ ಕಾರ್ಯಸಾಧುವಲ್ಲ. ಶಾಸಕರ ವೇತನವನ್ನು ಸಂವಿಧಾನದ ಕಲಂ 195ರ ಪ್ರಕಾರ ನಿರ್ಧಾರ ಮಾಡಲಾಗುತ್ತದೆ. ಆಯಾ ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಶಾಸಕರ ವೇತನ ನಿಗದಿಯಾಗುತ್ತದೆ. ಸಂಸತ್‌ ಸದಸ್ಯರಾಗಲಿ, ಶಾಸಕರಾಗಲಿ ಸರ್ಕಾರಿ ನೌಕರರಲ್ಲ. ಸರ್ಕಾರಿ ನೌಕರರಿಗೆ ವೇತನ ಆಯೋಗ ಮಾಡಿದ ಹಾಗೆ ಸಂಸತ್‌ ಸದಸ್ಯರಿಗೆ ವೇತನ ಆಯೋಗ ರಚಿಸಲೂ ಸಾಧ್ಯವಿಲ್ಲ.

ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್‌ ನೇತೃತ್ವದ ಸಮಿತಿ ಕಳೆದ ಜೂನ್‌ ತಿಂಗಳಿನಲ್ಲಿ ಸಂಸದರ ವೇತನ ನಿಗದಿಗೆ ಆಯೋಗ ರಚಿಸಬೇಕು ಎಂಬ ಶಿಫಾರಸು ಮಾಡಿತ್ತು. ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ವಿಧಾನ ಮಂಡಲಗಳ ಮುಖ್ಯ ಸಚೇತಕರ ಸಮ್ಮೇಳನದಲ್ಲಿ ಕೂಡ ಇಂತಹ ಬೇಡಿಕೆಯೊಂದು ಬಂದಿತ್ತು. ಯೋಗಿ ಆದಿತ್ಯನಾಥ್‌ ನೇತೃತ್ವದ ಸಮಿತಿ ಕೇವಲ ಆಯೋಗದ ಬಗ್ಗೆ ಮಾತ್ರ ಹೇಳಿಲ್ಲ. ಸಂಸದರ ವೇತನವನ್ನು ಶೇ 100ರಷ್ಟು ಹೆಚ್ಚಿಸಬೇಕೆಂಬುದು ಸೇರಿದಂತೆ ಹಲವಾರು ಶಿಫಾರಸುಗಳನ್ನು ಮಾಡಿದೆ. ಈ ಎಲ್ಲ ಶಿಫಾರಸುಗಳಿಗೆ ವಿರೋಧ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ, ವೇತನ ಆಯೋಗ ರಚಿಸುವ ಶಿಫಾರಸಿಗೆ ಮಾತ್ರ ಹೆಚ್ಚಿನ ಗಮನ ನೀಡುತ್ತಿರುವುದು ಸರಿಯಲ್ಲ. ಮುಖ್ಯ ಸಚೇತಕರ ಸಮ್ಮೇಳನದಲ್ಲಿಯೂ ಇಂತಹ ನಿರ್ಧಾರ ಕೈಗೊಂಡಿದ್ದರೆ ಅದೂ ಸಮಂಜಸವಲ್ಲ.
ಆಯೋಗ ರಚಿಸಿದರೂ ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಅಧಿಕಾರ ಹೊಂದಿಲ್ಲ. ಆಯೋಗ ಶಿಫಾರಸುಗಳನ್ನು ಲೋಕಸಭಾ ಅಧ್ಯಕ್ಷರಿಗೇ ನೀಡಬೇಕು. ಅಧ್ಯಕ್ಷರು ಈ ವಿಷಯವನ್ನು ಮತ್ತೆ ಸದನದ ಸಮಿತಿಯ ಪರ್ಯಾಲೋಚನೆಗೆ ನೀಡುತ್ತಾರೆ. ಆಗ ಸಮಿತಿ ಯಾವ ನಿರ್ಧಾರ ಕೈಗೊಳ್ಳುತ್ತದೋ ಅದೇ ನಿರ್ಧಾರವನ್ನು ಕೇಂದ್ರ ಸರ್ಕಾರ ಪಾಲಿಸಬೇಕಾಗುತ್ತದೆ. ಹೀಗೆ ಆಯೋಗ ನೀಡುವ ಶಿಫಾರಸುಗಳಿಗೆ ಯಾವುದೇ ಬೆಲೆ ಇಲ್ಲ ಎಂದ ಮೇಲೆ ಆಯೋಗ ರಚಿಸಿ ಪ್ರಯೋಜನವೇನು?

ಆಯೋಗ ಹೆಚ್ಚು ವೈಜ್ಞಾನಿಕವಾಗಿ ವೇತನವನ್ನು ನಿಗದಿ ಮಾಡುತ್ತದೆ ಎಂಬ ಭಾವನೆ ಕೆಲವರಲ್ಲಿದೆ. ಅಂದರೆ ಸದನ ಸಮಿತಿ ವೈಜ್ಞಾನಿಕವಾಗಿ ವೇತನ ನಿಗದಿ ಮಾಡುವುದಿಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಸದನ ಸಮಿತಿ ಕೂಡ ವೈಜ್ಞಾನಿಕವಾಗಿಯೇ ಸಂಸದರ ವೇತನವನ್ನು ನಿಗದಿ ಮಾಡುತ್ತದೆ. ಬೇಕಾಬಿಟ್ಟಿ ವೇತನ ನಿಗದಿ ಮಾಡಲು ಯಾರಿಗೂ ಸಾಧ್ಯವಿಲ್ಲ.

ಬೇರೆ ಬೇರೆ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸಂಸತ್‌ ಸದಸ್ಯರ ವೇತನವನ್ನು ಹೇಗೆ ನಿಗದಿ ಮಾಡಲಾಗುತ್ತದೆ ಎನ್ನುವುದನ್ನೂ ಪರಿಗಣಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಇದು ಆಯೋಗ ರಚಿಸುವ ಅಥವಾ ರಚಿಸದೇ ಇರುವ ಪ್ರಶ್ನೆಯೇ ಅಲ್ಲ. ಇದು ಸಂಸತ್ತಿನ ಸಾರ್ವಭೌಮತ್ವದ ಪ್ರಶ್ನೆ. ಸಂಸತ್ತಿಗೆ ಇರುವ ಅಧಿಕಾರವನ್ನು ಕಸಿದು ಬೇರೆ ಯಾರಿಗೋ ನೀಡುವುದು ದೇಶದ ಹಿತದ ದೃಷ್ಟಿಯಿಂದ ಒಳ್ಳೆಯದಲ್ಲ. ಸಂಸತ್‌ ಸದಸ್ಯರನ್ನೂ ಸರ್ಕಾರಿ ನೌಕರರ ಮಟ್ಟಕ್ಕೆ ಇಳಿಸುವುದು ಸೂಕ್ತವಲ್ಲ. ಇಂತಹ ಕ್ರಮಕ್ಕೆ ಮುಂದಾದರೆ ಅದರಿಂದ ದೀರ್ಘ ಕಾಲದ ಪರಿಣಾಮಗಳಾಗುತ್ತವೆ. ಅದಕ್ಕೆಲ್ಲ ಈಗಿನ ಕೇಂದ್ರ ಸರ್ಕಾರವೇ ಕಾರಣವಾಗುತ್ತದೆ. ಇಂತಹ ಯತ್ನಕ್ಕೆ ಕೈಹಾಕದೆ ಹಿಂದಿನ ಪದ್ಧತಿಯನ್ನೇ ಮುಂದುವರಿಸುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT