ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲ ಸೇವೆಗಳ ಮಸೂದೆ ಅಂಗೀಕಾರ

Last Updated 22 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾ­ರ­ಗೊಂಡಿದ್ದ ‘ಕರ್ನಾ­ಟಕ ಸಕಾಲ ಸೇವೆಗಳ (ತಿದ್ದುಪಡಿ) ಮಸೂದೆ–­2014’ಅನ್ನು ವಿಧಾನ ಪರಿಷತ್‌ ಮಂಗಳ­ವಾರ ಅಂಗೀಕರಿಸಿತು.

ಗ್ರಾಹಕರಿಗೆ ಆನ್‌ಲೈನ್‌ ಮೂಲಕ ಸರ್ಕಾರದ ಸೇವೆಗಳನ್ನು ಪಡೆಯಲು ಮತ್ತು ನಿಗದಿತ ಸಮಯದೊಳಗೆ ಸೇವೆ ಒದಗಿಸಲು ವಿಫಲವಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಈ ಮಸೂದೆ ಅವಕಾಶ ಕಲ್ಪಿಸಲಿದೆ.

ಮಸೂದೆಯನ್ನು ಪರಿಷತ್‌ನಲ್ಲಿ ಮಂಡಿಸಿ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ‘ಪ್ರಸ್ತುತ ಜಾರಿ­ಯಲ್ಲಿರುವ ಕಾಯ್ದೆ ಇನ್ನಷ್ಟು ಬಲ ಪಡಿಸಲು, ಇ–ಆಡಳಿತಕ್ಕೆ ಉತ್ತೇಜನ ನೀಡಲು, ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಅಧಿಕಾ­ರಿಗಳನ್ನು ಹೆಚ್ಚಿನ ಹೊಣೆ­ಗಾರರನ್ನಾಗಿ ಮಾಡಲು ನಿಯಮ 7, 9, 11 ಮತ್ತು 14ಕ್ಕೆ ತಿದ್ದುಪಡಿ ಮಾಡ­ಲಾಗಿದೆ’ ಎಂದರು.

‘ಇದುವರೆಗೆ ಸರ್ಕಾರದ 669 ಸೇವೆ­ಗಳನ್ನು ಸಕಾಲ ವ್ಯಾಪ್ತಿಯಲ್ಲಿ ತರ­ಲಾಗಿದೆ. ಯೋಜನೆ ಜಾರಿಯಾದ ಬಳಿಕ 5.24 ಕೋಟಿ ಅರ್ಜಿಗಳು ಬಂದಿದ್ದು,  5.14 ಕೋಟಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸಮಯದ ಮಿತಿಯಲ್ಲಿ ಶೇ 100ರಷ್ಟು ಅರ್ಜಿಗಳನ್ನು ಇತ್ಯರ್ಥ ಪಡಿಸುವುದು ನಮ್ಮ ಗುರಿ’ ಎಂದು ಸಚಿವರು ಹೇಳಿದರು.

ಸಚಿವಾಲಯವನ್ನೂ ಸಕಾಲ ವ್ಯಾಪ್ತಿಗೆ ತನ್ನಿ: ಮಸೂದೆ ಕುರಿತು ಮಾತ­ನಾಡಿದ ವಿರೋಧ ಪಕ್ಷಗಳ ವಿವಿಧ ಸದಸ್ಯರು ಸಚಿವಾಲಯ ಮತ್ತು ನಿರ್ದೇಶನಾಲಯ­ಗಳನ್ನೂ ಸಕಾಲ ಯೋಜನೆಯ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು.

ನಿಗದಿತ ಸಮಯದಲ್ಲಿ ಸೇವೆ ಒದಗಿಸಲು ವಿಫಲರಾಗುವ ಅಧಿಕಾರಿ­ಗಳು ಭರಿಸಬೇಕಾದ  ಪರಿಹಾರ ವೆಚ್ಚವನ್ನು ಪ್ರತಿ ದಿನಕ್ಕೆ ಕನಿಷ್ಠ ₨20ರಿಂದ ಗರಿಷ್ಠ ₨500 ಎಂದು ನಿಗದಿ ಪಡಿಸಿರುವು­ದಕ್ಕೆ ಮತ್ತು ಏಳಕ್ಕಿಂತ ಹೆಚ್ಚು  ಬಾರಿ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಮಾತ್ರ ಶಿಸ್ತು ಕ್ರಮ ಜರುಗಿಸುವ ಸಂಬಂಧದ ನಿಯಮದ ಬಗ್ಗೆ ಪ್ರತಿಪಕ್ಷಗಳ ಹಾಗೂ ಆಡಳಿತ ಪಕ್ಷದ ಕೆಲವು ಸದಸ್ಯರು ಆಕ್ಷೇಪ ಎತ್ತಿದರು.

ಪರಿಹಾರ ವೆಚ್ಚವನ್ನು ₨20 ರಿಂದ ₨500ರವರೆಗೆ ನಿಗದಿಪಡಿಸುವುದರಿಂದ ಅಧಿಕಾರಿಗಳಿಗೆ ಭಯ ಹುಟ್ಟುವುದಿಲ್ಲ. ಈ ಮೊತ್ತವನ್ನು ಕನಿಷ್ಠ ₨2,000ದಿಂದ ಗರಿಷ್ಠ 50,000ದ ವರೆಗೆ ಹೆಚ್ಚಿಸಬೇಕು. ಅದೇ ರೀತಿ, ಅಧಿಕಾರಿಗಳು ಕನಿಷ್ಠ ಮೂರು ಬಾರಿ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಸಲಹೆಯನ್ನು ಮುಂದಿಟ್ಟರು.

ಎಲ್ಲ ಮಸೂದೆಗಳ ಹಿಂದೆ ಸದುದ್ದೇಶಗಳೇ ಇರುತ್ತವೆ. ಆದರೆ, ಅದು ಯಶಸ್ವಿಯಾಗಿ ಜಾರಿ ಆಗ­ಬೇಕಾದರೆ ಅಧಿಕಾರಿಗಳು ಬದ್ಧತೆ ಪ್ರದರ್ಶಿಸಿ ಪ್ರಾಮಾಣಿಕವಾಗಿ  ಕೆಲಸ­ಮಾಡಬೇಕು ಎಂಬ ಅಭಿಪ್ರಾಯವನ್ನು ಸದಸ್ಯರು ವ್ಯಕ್ತಪಡಿಸಿದರು.

‘ಆನ್‌ಲೈನ್‌ ಮೂಲಕ ಸೇವೆ ನೀಡಲು ಮುಂದಾಗಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ ಗ್ರಾಮೀಣ ಭಾಗದ ಜನರಿಗೆ ಇಂಟರ್‌ನೆಟ್‌ ಲಭ್ಯತೆ ಇಲ್ಲ. ಇದ್ದರೂ ಅದರ ಬಗ್ಗೆ ತಿಳಿವಳಿಕೆ ಕೂಡ ಇಲ್ಲ. ಹಾಗಾಗಿ ಆ ಜನರಿಗೆ ನೆರವಾಗಲೂ ಸರ್ಕಾರ ಪರ್ಯಾಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಕಾಂಗ್ರೆಸ್‌ನ ಮೋಟಮ್ಮ ಒತ್ತಾಯಿಸಿ­ದರು.

ಬಿಜೆಪಿಯ ವೈ. ನಾರಾಯಣ ಸ್ವಾಮಿ,  ಬಿ.ಜೆ. ಪುಟ್ಟಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಜೆಡಿಎಸ್‌ನ ಬಸವರಾಜ ಹೊರಟ್ಟಿ, ಮರಿತಿಬ್ಬೇಗೌಡ, ಕಾಂಗ್ರೆಸ್‌ನ ವಿ.ಎಸ್‌. ಉಗ್ರಪ್ಪ ಅವರು ಮಸೂದೆ ಬಗ್ಗೆ ಮಾತನಾಡಿದರು.

ಸದಸ್ಯರು ನೀಡಿದ ಸಲಹೆಗಳಿಗೆ ಪ್ರತಿಕ್ರಿಯೆ ನೀಡಿದ ಜಯಚಂದ್ರ ಅವರು, ‘ನಾವು ಆರಂಭಿಕ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಈ ಯೋಜನೆ ವ್ಯಾಪ್ತಿಗೆ ಸಚಿವಾಲಯ, ನಿರ್ದೇಶನಾಲಯಗಳನ್ನು  ತರುವುದು ಸರ್ಕಾರದ ಉದ್ದೇಶ­ವಾಗಿದೆ. ಅದಕ್ಕೆ ಕಾಲಾವಕಾಶ ಬೇಕು. ಸಿಬ್ಬಂದಿ ಕೊರತೆ ಸೇರಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳಿವೆ’ ಎಂದರು.

‘ಪ್ರತಿ ಇಲಾಖೆಯಲ್ಲಿ ನಡೆಯುತ್ತಿ­ರುವ ಕಡತಗಳ ವಿಲೇವಾರಿಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತಿದೆ.  ಶೇ 50ರಷ್ಟು ಕಡತಗಳು ವಿಲೇವಾರಿ ಆಗದಿದ್ದರೆ, ಇಲಾಖೆಗಳ ಕಾರ್ಯದರ್ಶಿ­ಗಳಿಗೆ ನೋಟಿಸ್‌ ಕೂಡ ನೀಡಲಾಗು­ತ್ತಿದೆ’ ಎಂದು ಅವರು ಹೇಳಿದರು.

‘ಗ್ರಾಮೀಣ ಭಾಗಗಳಲ್ಲಿ ಅಂಚೆ ಕಚೇರಿಗಳ ಮೂಲಕ ಸಕಾಲ ಸೇವೆ ಒದಗಿಸುವ ಸಂಬಂಧ ಅಂಚೆ ಇಲಾಖೆ­ಯೊಂದಿಗೆ ಒಪ್ಪಂದ ಮಾಡಲಾಗಿದೆ’ ಎಂದೂ ಸಚಿವರು  ಹೇಳಿದರು.

ತಿದ್ದುಪಡಿಗೊಂಡ ನಿಯಮ ಏನು ಹೇಳುತ್ತದೆ..?
ನಿಯಮ 7: ಆನ್‌ಲೈನ್‌ ಮತ್ತು ಅಂಚೆಯ ಮೂಲಕ ಗ್ರಾಹಕರಿಗೆ ಸೇವೆ ಒದಗಿಸಲು ಪ್ರಯತ್ನಿಸಬೇಕು

ನಿಯಮ 9: ನಿಗದಿತ ಅವಧಿಯೊಳಗೆ ನಾಗರಿಕರ ಅರ್ಜಿ ವಿಲೇವಾರಿ ಮಾಡಲು ಅಥವಾ ಸೇವೆ ಒದಗಿಸಲು ನಿರ್ದಿಷ್ಟ ಅಧಿಕಾರಿ ವಿಫಲವಾದರೆ, ವಿಳಂಬ ಅವಧಿಯ ಪರಿಹಾರ ವೆಚ್ಚವನ್ನು (ಪ್ರತಿ ದಿನಕ್ಕೆ ಕನಿಷ್ಠ ₨20ರಿಂದ ಗರಿಷ್ಠ ₨500ರವರೆಗೆ) ಆ ಅಧಿಕಾರಿಯು ಅರ್ಜಿದಾರರಿಗೆ ನೀಡಬೇಕು.

ನಿಯಮ 11: ಆ ತಿಂಗಳಲ್ಲೇ ಅಧಿಕಾರಿಯ ವೇತನದಿಂದ ಪರಿಹಾರ ವೆಚ್ಚ ಕಡಿತಗೊಳಿಸಬೇಕು.

ನಿಯಮ 14: ನಿಗದಿತ ಸಮಯದೊಳಗೆ ಸೇವೆ ನೀಡಲು ನಿರ್ದಿಷ್ಟ ಅಧಿಕಾರಿ ಏಳು ಅಥವಾ ಅದಕ್ಕಿಂತ ಹೆಚ್ಚು ಬಾರಿ  ವಿಫಲ­ರಾದರೆ, ಸಂಬಂಧಿಸಿದ ಇಲಾಖೆ­ಯಿಂದ ವಿಚಾರಣೆ ನಡೆಸಬೇಕು. ಒಂದು ವೇಳೆ ಆ ಅಧಿಕಾರಿ ತಪ್ಪಿತಸ್ಥ ಎಂದು ತಿಳಿದು ಬಂದರೆ, ತಿಂಗಳ ಒಳಗಾಗಿ ಅಧಿಕಾರಿ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸರ್ಕಾರವು ವರದಿ ಪರಶೀಲನೆ ನಡೆಸಿ ತಿಂಗಳ ಒಳಗಾಗಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT