ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಮೊಂಡತನ ಪ್ರದರ್ಶಿಸಬೇಕು

‘ಕನ್ನಡ ಮಾಧ್ಯಮ ಮುಂದೇನು’
Last Updated 17 ಜನವರಿ 2015, 19:30 IST
ಅಕ್ಷರ ಗಾತ್ರ

ಧಾರವಾಡ: ಕನ್ನಡ ಮಾಧ್ಯಮ ಉಳಿಸಿಕೊಳ್ಳುವುದಕ್ಕೆ ಯಾವ, ಯಾವ ಹತಾರಗಳನ್ನು ಬಳಸಬೇಕೆಂಬ ಬಗ್ಗೆ ಹಲವು ಸಲಹೆಗಳು ಕೇಳಿಬಂದಿದ್ದು ‘ಕನ್ನಡ ಮಾಧ್ಯಮ ಮುಂದೇನು?’ ಗೋಷ್ಠಿಯಲ್ಲಿ.

ಎರಡನೇ ದಿನ ನಡೆದ ಸಂಭ್ರಮದ ಐದನೇ ಗೋಷ್ಠಿಯಲ್ಲಿ ವೇದಿಕೆಯಲ್ಲಿನ ಸಂಪನ್ಮೂಲ ವ್ಯಕ್ತಿಗಳ ಜತೆಗೆ ಸಭಿಕರ ಸಲಹೆಗಳು ಚರ್ಚೆಗೆ ಕಾವು ನೀಡಿದವು. ಕನ್ನಡ ಮಾಧ್ಯಮವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲವೇ? ಈ ಬಗೆಗಿನ ಸುಪ್ರೀಂ­ಕೋರ್ಟ್‌ ತೀರ್ಪು ಎಲ್ಲಾ ಸಾಧ್ಯತೆಗಳನ್ನು ಮುಚ್ಚಿ ಹಾಕಿದೆಯೇ? ಈ ರೀತಿಯ ಪ್ರಶ್ನೆಗ­ಳಿಂದಲೇ ಆರಂಭವಾದ ಗೋಷ್ಠಿ ಕೊನೆ ಹಂತದಲ್ಲಿ ಗಂಭೀರ ಚರ್ಚೆಗೆ ನಾಂದಿ ಹಾಡಿತು. ಸಂವಿಧಾನದ ತಿದ್ದುಪಡಿ, ಜನಾಂದೋಲನ, ರಾಜ್ಯ ಸರ್ಕಾರದ ಕಾನೂನು ಅಳವಡಿಕೆ... ಮತ್ತಿತರ ಸಲಹೆಗಳು ಗೋಷ್ಠಿಯಲ್ಲಿ ಕೇಳಿಬಂದವು. ಆದರೆ, ಸಮಯಾವಕಾಶದ ಮಿತಿಯಿಂದ ಚರ್ಚೆ ಅಪೂರ್ಣಗೊಂಡಿತು.

ತೀರ್ಪು ಸಂವಿಧಾನಕ್ಕೆ ಅನುಗುಣ: ಆರಂಭದಲ್ಲಿ ವಕೀಲ ಲೋಹಿತ ನಾಯ್ಕರ ಮಾತನಾಡಿ, ‘ಸುಪ್ರೀಂಕೋರ್ಟ್‌ ತೀರ್ಪು ಸಂವಿಧಾನದ ಒಟ್ಟಾರೆ ಆಶಯಕ್ಕೆ ಅನುಗು­ಣವಾಗಿದೆ. ಕನ್ನಡ ಮಾಧ್ಯಮದ ಬಗ್ಗೆ ಸುಪ್ರೀಂಕೋರ್ಟ್‌ನ ಪೂರ್ಣಪೀಠ ನೀಡಿದ ತೀರ್ಪು ಬದಲಿಸಿ ಮತ್ತೊಂದು ತೀರ್ಪು ಬರುವುದು ಕಷ್ಟ. ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಗಳಾಗಬೇಕು. ಅದರಲ್ಲೂ ಶಿಕ್ಷಣದ ಮೂಲಭೂತ ಹಕ್ಕಿಗೆ ತಿದ್ದುಪಡಿ ತರಬೇಕು. ಇದು ಆಗುತ್ತದೆಯೇ ಎಂಬುದು ಪ್ರಶ್ನೆ’ ಎಂದು ಚರ್ಚೆಗೆ ಕಿಡಿ ಹಚ್ಚಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಿವೃತ್ತ ಅಧಿಕಾರಿ ವೆಂಕಟೇಶ ಮಾಚಕನೂರ, ‘ನಾವು ಸಂಪೂರ್ಣ ನಿರಾಶರಾಗುವುದು ಬೇಡ. ರಾಜ್ಯ ಸರ್ಕಾರ ಈ ಹಂತದಲ್ಲಿ ಮೊಂಡತನ ಪ್ರದರ್ಶಿಸಿ, 1ರಿಂದ 7 ತರಗತಿಯವರೆಗೆ ಕನ್ನಡ ಮಾಧ್ಯಮ ಕಡ್ಡಾಯ ಮಾಡಿ ಆದೇಶ ಹೊರಡಿಸಬೇಕು. ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯಕ್ಕೆ ಹೋಗುತ್ತಾರೆ. ಅದು 30 ವರ್ಷ ಹಿಡಿಯುತ್ತದೆ. ಅಷ್ಟರಮಟ್ಟಿಗೆ ಈ ತೊಡಕಿನಿಂದ ಪಾರಾಗಬಹುದು’ ಎಂದು ಸಲಹೆ ಮಾಡಿದರು. ಭಾಷೆಯ ಉಳಿವಿಗೆ ತಾವೇನು ಮಾಡಬೇಕು ಎಂಬುದು ಜನರ ಮನಸ್ಸಿನಲ್ಲಿ ಬರಬೇಕು. ಇದಕ್ಕೆ ಜನಾಂದೋಲನವೇ ಸರಿಯಾದ ಮಾರ್ಗ ಎಂದು ಅಬ್ದುಲ್ ರೆಹಮಾನ್ ಪಾಷಾ ಸಲಹೆ ನೀಡಿದರು.

ಅನ್ನದ ಭಾಷೆ ಮಾಡಿ: ನಂತರದ ಚರ್ಚೆಯಲ್ಲಿ ಪಾಲ್ಗೊಂಡ ಪ್ರೊ.ಸಿ.ವೀರಣ್ಣ, ‘ಅನ್ನದ ಮೂಲಕ ಭಾಷೆ ಕೊಡಿ. ಕನ್ನಡವನ್ನು ಅನ್ನ ಕೊಡುವ ಭಾಷೆಯನ್ನಾಗಿ ಮಾಡಿ. ಎಂಜಿನಿಯರ್‌–ವೈದ್ಯಕೀಯ ಕೋರ್ಸ್‌ನಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಶೇ 50ರಷ್ಟು ಸೀಟು ನಿಗದಿಗೊಳಿಸಿ’ ಎಂದು ಸಲಹೆ ನೀಡಿದರು, ‘ಆದರೆ, ಇದು ಆಗುವುದಿಲ್ಲ. ಏಕೆಂದರೆ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ನಡೆಸುವವರು ರಾಜಕಾರಣಿಗಳು ಅಥವಾ ಅವರ ಸಂಬಂಧಿಕರು’ ಎಂದು ಚಟಾಕಿ ಹಾರಿಸಿದರು. ಸ.ರ.ಸುದರ್ಶನ ಗೋಷ್ಠಿ ನಿರ್ವಹಿಸಿದರು.

ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ
2010–14ರ ವರೆಗೆ ರಾಜ್ಯದಲ್ಲಿ 1ರಿಂದ 10ನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದವರು 1.1 ಕೋಟಿ ವಿದ್ಯಾರ್ಥಿಗಳು. 2010–11ನೇ ಸಾಲಿಗೆ ಈ ಸಂಖ್ಯೆ 74.34 ಲಕ್ಷಕ್ಕೆ, 2013–14ನೇ ಸಾಲಿಗೆ 73.21ಲಕ್ಷಕ್ಕೆ ಇಳಿಯಿತು. ಆದರೆ, ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಇದೇ ಸಾಲಿನಲ್ಲಿ 18.44ಲಕ್ಷದಿಂದ 20.17 ಲಕ್ಷಕ್ಕೆ ಏರಿಕೆ ಆಯಿತು. ಉರ್ದು ಕಲಿಯುವ ಮಕ್ಕಳ ಸಂಖ್ಯೆ 5.52ಲಕ್ಷದಿಂದ 4.83ಲಕ್ಷಕ್ಕೆ ಇಳಿಯಿತು. ಹಾಗೆಯೇ ಮರಾಠಿ ಭಾಷೆಯಲ್ಲಿ ಕಲಿಯುವ ಮಕ್ಕಳ ಸಂಖ್ಯೆಯೂ 1.87ಲಕ್ಷದಿಂದ 1.45 ಲಕ್ಷಕ್ಕೆ ಇಳಿದಿದೆ ಎಂದು ಮಾಚಕನೂರ ಅಂಕಿ– ಅಂಶ ನೀಡಿದರು.

* * *
‘ಕನ್ನಡೇತರರಮಾತನಾಡಿಸಿ’

ಮಾಧ್ಯಮದ ಸಮಸ್ಯೆ ಬಂದಾಗ ಸರ್ಕಾರ ಕನ್ನಡೇತರ ಸಂಘ–ಸಂಸ್ಥೆಗಳನ್ನು ಕರೆದು ಮಾತನಾಡಿಸಬೇಕು. ಕನ್ನಡ ಪರ ಹೋರಾಟಗಾರರನ್ನು ಮೆರೆಸುವುದರಿಂದ ಪರಿಹಾರ ಸಿಗುವುದಿಲ್ಲ.
–ಅಬ್ದುಲ್ ರೆಹಮಾನ್‌ ಪಾಷಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT