ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಲತ್ತು ಇದ್ದರೂ ಸಾಧನೆ ಏಕಿಲ್ಲ?

Last Updated 2 ಮೇ 2016, 5:45 IST
ಅಕ್ಷರ ಗಾತ್ರ

ಒಲಿಂಪಿಕ್ಸ್‌ನಲ್ಲಿ ಭಾರತದ ಒಬ್ಬ ಅಥ್ಲೀಟ್‌ ಒಂದು ಪದಕ ಗೆದ್ದರೆ ಸಾಕು. ಇಷ್ಟು ದಿನ ಬದುಕಿದ್ದು ಸಾರ್ಥಕ ಎಂದುಕೊಳ್ಳುತ್ತೇನೆ. ಅಂಥದ್ದೊಂದು ಅಪೂರ್ವ ಕ್ಷಣವನ್ನು ಎದುರು ನೋಡುತ್ತಲೇ ಇದ್ದೇನೆ.
–ಹೀಗೆ ಅತ್ಯಂತ ಬೇಸರದಿಂದ  ಕೆಲ ವರ್ಷಗಳ ಹಿಂದೆ ಹೇಳಿದ್ದು ಮಾಜಿ ಅಥ್ಲೀಟ್‌ ಮಿಲ್ಖಾ ಸಿಂಗ್‌.

ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಕ್ರೀಡಾಕೂಟಗಳಲ್ಲಿ ಭಾರತದ ಅಥ್ಲೀಟ್‌ಗಳು ಉತ್ತಮ ಸಾಮರ್ಥ್ಯ ತೋರುತ್ತಾರೆ.  ಗುವಾಹಟಿಯಲ್ಲಿ ಎರಡು ತಿಂಗಳ ಹಿಂದೆ ನಡೆದ ದಕ್ಷಿಣ ಏಷ್ಯಾ ಕೂಟದಲ್ಲಿ ಭಾರತ 308 ಪದಕಗಳನ್ನು ಗೆದ್ದಿದೆ. ಅಥ್ಲೆಟಿಕ್ಸ್‌ನಲ್ಲಿ ಬಂದಿದ್ದು 58 ಚಿನ್ನದ ಪದಕಗಳು. ಜೊತೆಗೆ ಅಗ್ರರ್ಯಾಂಕ್‌.

ಹದಿನೇಳು ಏಷ್ಯನ್‌ ಕ್ರೀಡಾಕೂಟಗಳಿಂದ ಭಾರತ ಒಟ್ಟು 616 ಪದಕಗಳನ್ನು ಜಯಿಸಿದೆ. ಅಥ್ಲೆಟಿಕ್ಸ್‌ನಲ್ಲಿ ಬಂದ ಪದಕಗಳ ಸಂಖ್ಯೆಯೇ 72. ಇನ್ನು  ಕಾಮನ್‌ವೆಲ್ತ್‌   ಕೂಟದಲ್ಲಿ ಭಾರತ ಒಟ್ಟು 436 ಪದಕಗಳನ್ನು ಗೆದ್ದಿದೆ. ಆದರೆ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಭಾರತ ಜಯಿಸಿದ ಪದಕಗಳ ಸಂಖ್ಯೆ ಎರಡು!

1900ರಿಂದಲೇ ಭಾರತ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದೆ.  ಇದುವರೆಗೂ 23 ಬಾರಿ ವಿಶ್ವದ ಶ್ರೇಷ್ಠ ಕೂಟದಲ್ಲಿ ಭಾಗವಹಿಸಿದೆ.  ತಮ್ಮ ಚೊಚ್ಚಲ ಒಲಿಂಪಿಕ್ಸ್‌ನ ಪುರುಷರ 200 ಮೀಟರ್ಸ್‌ ಓಟ ಮತ್ತು 200  ಮೀಟರ್ಸ್‌  ಹರ್ಡಲ್ಸ್‌ ಸ್ಪರ್ಧೆಯಲ್ಲಿ ಕೋಲ್ಕತ್ತದ ನಾರ್ಮನ್‌ ಗಿಲ್ಬರ್ಟ್‌ ಪ್ರಿಚರ್ಡ್‌  ಬೆಳ್ಳಿ ಪದಕಗಳನ್ನು ಜಯಿಸಿದ್ದರು.   

ನಾರ್ಮನ್‌ ಪದಕಗಳನ್ನು ಗೆದ್ದ ಬಳಿಕ ಭಾರತ 22 ಸಲ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದೆ. ಆದರೆ ಅಥ್ಲೆಟಿಕ್ಸ್‌ನಲ್ಲಿ ಒಂದೇ ಒಂದು ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಆದ್ದರಿಂದ ಮಿಲ್ಖಾ ಸಿಂಗ್ ಅವರ ಮಾತಿನ ಹಿಂದಿರುವ ಗಂಭೀರ ನೋವು ಏನೆಂಬುದು ಅರ್ಥವಾಗಬೇಕಿದೆ.
ಈಗಿನ ಅಥ್ಲೀಟ್‌ಗಳಿಗೆ ಅದೇನಾಗಿದೆಯೋ ಗೊತ್ತಿಲ್ಲ. ಏಷ್ಯಾ ಮಟ್ಟದಲ್ಲಿ ತೋರುವ ಸಾಮರ್ಥ್ಯವನ್ನು ಒಲಿಂಪಿಕ್ಸ್‌ನಲ್ಲಿ ತೋರಿಸಲು ಸಾಧ್ಯವಾಗುವುದಿಲ್ಲ. ನಮ್ಮ ಅಥ್ಲೀಟ್‌ಗಳಿಗೆ ಸೌಲಭ್ಯಗಳ ಕೊರತೆಯಿದೆಯೇ? ಖಂಡಿತಾ ಇಲ್ಲ.

ಪಟಿಯಾಲ, ಬೆಂಗಳೂರು,  ಕೇರಳ  ಸೇರಿದಂತೆ ನಾಲ್ಕೂ ವಲಯಗಳಲ್ಲಿ ಅಭ್ಯಾಸಕ್ಕೆ ಒಟ್ಟು 12 ‘ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರ’ಗಳಿವೆ. ಒಲಿಂಪಿಕ್ಸ್‌ನಂಥ  ಕೂಟಕ್ಕೆ ವಿದೇಶಿ ಕೋಚ್‌ ಬೇಕು ಎಂದಾಗ ಭಾರತ ಸರ್ಕಾರ ಅದಕ್ಕೂ ವ್ಯವಸ್ಥೆ ಮಾಡಿಕೊಡುತ್ತದೆ.  ಭಾರತದ ಅಥ್ಲೀಟ್‌ ಗಳು ತರಬೇತಿ ಪಡೆಯಲು ಸ್ಪೇನ್‌, ಅಮೆರಿಕ, ಆಸ್ಟ್ರೇಲಿಯಾಕ್ಕೆ ಹೋಗುತ್ತಾರೆ.

ವಿದೇಶಿ ನೆಲದಲ್ಲಿ ಅಲ್ಲಿನ ಕೋಚ್‌ಗಳಿಗೆ ಲಕ್ಷಗಟ್ಟಲೇ ಹಣ ಸುರಿದು ಕೆಲ ತಿಂಗಳು ತರಬೇತಿ ಪಡೆದು ಭಾರತಕ್ಕೆ ಮರಳುತ್ತಾರೆ. ವಿಪರ್ಯಾಸ ವೆಂದರೆ ಅಲ್ಲಿನ  ಸ್ಪರ್ಧಿಗಳ ಜೊತೆ ಸೆಣಸುವುದೇ ಇಲ್ಲ. ಕಠಿಣ ಸವಾಲನ್ನು ಎದುರಿಸದೇ ಹೋದರೆ ನಮ್ಮ ಅಥ್ಲೀಟ್‌ಗಳ ಸಾಮರ್ಥ್ಯ ವೃದ್ಧಿಯಾಗುವುದಾದರೂ ಹೇಗೆ?

2016ರ ಒಲಿಂಪಿಕ್ಸ್‌ಗೆ ಹೆಚ್ಚು ಕ್ರೀಡಾಪಟುಗಳು ಅರ್ಹತೆ ಪಡೆಯಬೇಕು ಎನ್ನುವ  ಕಾರಣಕ್ಕಾಗಿ ಸರ್ಕಾರ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಮ್‌ (ಟಾಪ್‌) ಯೋಜನೆ ಜಾರಿಗೆ ತಂದಿದೆ. ಕೋಚ್‌, ಕ್ರೀಡಾ ಪರಿಕರ ಸೇರಿದಂತೆ ಅನೇಕ ಸೌಲಭ್ಯಗಳಿಗೆ ಸರ್ಕಾರ ನೆರವಾಗುತ್ತಿದೆ.  ಕ್ರೀಡಾಪಟುಗಳ ವೈಯಕ್ತಿಕ ಖರ್ಚಿಗೆ ಮಾಸಿಕ ₹ 1 ಲಕ್ಷ ಕೊಡಲು ಸರ್ಕಾರ ಮುಂದಾಗಿದೆ. ಆದರೂ ಅಥ್ಲೀಟ್‌ಗಳ ಸಾಧನೆ ಮಾತ್ರ ಶೂನ್ಯ. ಡಿಸ್ಕಸ್‌ ಎಸೆತದಲ್ಲಿ ಭಾರತದ ಭರವಸೆ ಎನಿಸಿರುವ ವಿಕಾಸ್‌ ಗೌಡ, ಕೃಷ್ಣಾ ಪೂನಿಯಾ ಅವರ ‘ಸಾಧನೆ’ಯನ್ನೇ ಉದಾಹರಣೆಯಾಗಿ ನೀಡಬಹುದು.

ವರ್ಷಪೂರ್ತಿ ಅಮೆರಿಕದಲ್ಲಿ ತರಬೇತಿ ಪಡೆಯುವ ಕರ್ನಾಟಕದ ವಿಕಾಸ್‌  2012ರ ಒಲಿಂಪಿಕ್ಸ್‌ನಲ್ಲಿ 64.79 ಮೀಟರ್ಸ್ ದೂರ ಮಾತ್ರ ಡಿಸ್ಕ್‌ ಎಸೆದಿದ್ದರು. ವಿಶ್ವದ ಶ್ರೇಷ್ಠ ಕೂಟದಲ್ಲಿ ಅವರಿಗೆ ತಮ್ಮ ಹೆಸರಿನಲ್ಲಿರುವ  66.28 ಮೀಟರ್ಸ್‌ ದಾಖಲೆಯನ್ನೇ ಉತ್ತಮಪಡಿಸಿಕೊಳ್ಳಲು ಸಾಧ್ಯವಾಗ ಲಿಲ್ಲ. ಲಿಥುವೇನಿಯಾದ ವಿರ್ಜಿಲಿಜುಸ್ ಅಲೆಕ್ನಾ 2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ 69.89 ಮೀಟರ್ಸ್‌ ಡಿಸ್ಕ್‌ ಎಸೆದಿದ್ದು ಒಲಿಂಪಿಕ್ಸ್‌ ದಾಖಲೆ ಎನಿಸಿದೆ. ಭಾರತದ ಡಿಸ್ಕಸ್ ಎಸೆತ ಸ್ಪರ್ಧಿಗಳಿಗೆ ಈ ಗುರಿಯ ಸನಿಹ ಕೂಡ ಬರಲು ಸಾಧ್ಯವಾಗಿಲ್ಲ.

ಇದು ವಿಕಾಸ್‌ ಅವರದ್ದಷ್ಟೇ ವೈಫಲ್ಯವಲ್ಲ. ರಿಯೊ ಒಲಿಂಪಿಕ್ಸ್‌ ಆರಂಭ ವಾಗಲು ನಾಲ್ಕು ತಿಂಗಳಷ್ಟೇ ಬಾಕಿ ಇರುವಾಗ ಈಗ ಅರ್ಹತೆ ಪಡೆಯಲು ಕಸರತ್ತು ನಡೆಸುತ್ತಿರುವ ಕೃಷ್ಣಾ ಪೂನಿಯಾ ಕೂಡ ಹೇಳಿಕೊಳ್ಳವಂಥ ಸಾಮರ್ಥ್ಯ ತೋರಿಸಿಲ್ಲ.   ಪೂನಿಯಾ  2012ರ ಒಲಿಂಪಿಕ್ಸ್‌ನಲ್ಲಿ 63.54 ಮೀಟರ್ಸ್ ಮಾತ್ರ ಎಸೆದಿದ್ದರು. ಇನ್ನೊಬ್ಬ ಅಥ್ಲೀಟ್‌ ಸೀಮಾ ಅಂಟಿಲ್‌ ಕೂಡ 61.91 ಮೀಟರ್ಸ್ ಡಿಸ್ಕ್‌ ಎಸೆದು ಅರ್ಹತಾ ಸುತ್ತಿನಿಂದಲೇ ಹೊರಬಿದ್ದಿದ್ದರು.  ಜರ್ಮನಿಯ ಮಾರ್ಟಿನಾ ಹೆಲ್‌ಮೆನ್‌ 1988ರ ಕೂಟದಲ್ಲಿ 72.30 ಮೀಟರ್ಸ್‌ ಎಸೆದದ್ದು ಒಲಿಂಪಿಕ್ಸ್‌ ದಾಖಲೆ ಎನಿಸಿದೆ. ಹಿಂದಿನ ಒಲಿಂಪಿಕ್ಸ್‌ನಲ್ಲಿ ಕ್ರೊವೇಷ್ಯಾದ ಸ್ಯಾಂಡ್ರಾ ಪೆರ್ಕೊವಿಕ್‌ (69.11 ಮೀಟರ್ಸ್‌) ಚಿನ್ನ ಗೆದ್ದಿದ್ದರು.  ಈ ದಾಖಲೆ ಸನಿಹ  ಸುಳಿಯಲು ಕೂಡ ಭಾರತಕ್ಕೆ ಸಾಧ್ಯವಾಗಿಲ್ಲ.

ರಿಯೊ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಗಳಿಸಿರುವ ಶಾಟ್‌ಪಟ್‌ ಸ್ಪರ್ಧಿ ಇಂದರ್‌ಜಿತ್‌ ಸಿಂಗ್  ಹೋದ ವರ್ಷ ಚೀನಾದ ವುಹಾನ್‌ನಲ್ಲಿ  ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ  ಚಿನ್ನ ಜಯಿಸಿದ್ದರು. ಏಷ್ಯನ್ ಗ್ರ್ಯಾಂಡ್ ಪ್ರಿ ಯಲ್ಲೂ ಇದೇ ಸಾಧನೆ ಮಾಡಿದ್ದರು. 19.70 ಮೀಟರ್ಸ್‌ ದೂರ ಗುಂಡು ಎಸೆದಿದ್ದು  ವೈಯಕ್ತಿಕ ಶ್ರೇಷ್ಠ ಸಾಧನೆ ಎನಿಸಿದೆ.

ಏಷ್ಯನ್‌ ಕ್ರೀಡಾಕೂಟ ಮತ್ತು ಏಷ್ಯನ್‌ ಚಾಂಪಿಯನ್‌ಷಿಪ್‌ನ 800 ಮೀಟರ್ಸ್‌ ಓಟದಲ್ಲಿ ಐದು ಪದಕಗಳನ್ನು ಗೆದ್ದಿರುವ ಟಿಂಟು ಲೂಕಾ ಏಷ್ಯಾ ವಲಯದಲ್ಲಷ್ಟೇ ಗಮನ ಸೆಳೆಯುತ್ತಾರೆ. ವಿದೇಶದಲ್ಲಿ ತರಬೇತಿ ಪಡೆದಿರುವ ಕೇರಳದ ಟಿಂಟು     ಹಿಂದಿನ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌  ತಲುಪಿದ್ದರು.
800 ಮೀಟರ್ಸ್‌ ಗುರಿಯನ್ನು ಮುಟ್ಟಲು ಟಿಂಟು ಒಂದು ನಿಮಿಷ 59.69 ಸೆಕೆಂಡು ತೆಗೆದುಕೊಂಡಿದ್ದರು. ಈ ವಿಭಾಗದಲ್ಲಿ ರಷ್ಯಾದ ಮರಿಯಾ ಸವಿನೊವಾ ಒಂದು ನಿಮಿಷ 56.19 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. ಇವರು ಮಾಡುವ ಸಾಧನೆಯನ್ನು ಭಾರತದ ಅಥ್ಲೀಟ್‌ ಗಳಿಂದ ಸಾಧ್ಯವೇ ಇಲ್ಲ ಎಂದೇನಲ್ಲ.

ಆದರೆ ಅಭ್ಯಾಸದ ಗುಣಮಟ್ಟ ಹೆಚ್ಚಬೇಕಷ್ಟೇ. 3000 ಮೀಟರ್ಸ್‌ ಸ್ಟೀಫಲ್‌ ಚೇಸ್‌ನಲ್ಲಿ ಭಾರತದ ಮಟ್ಟಿಗೆ ಉತ್ತಮ ದಾಖಲೆ ಹೊಂದಿರುವ ಲಲಿತಾ ಬಾಬರ್‌ ಹೋದ ವರ್ಷ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ 9 ನಿಮಿಷ 34.13 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಜಯಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.

ಉತ್ತಮ ಮೈಕಟ್ಟು, ಅದ್ಭುತ ದೈಹಿಕ ಸಾಮರ್ಥ್ಯ, ಪಾದರಸದಂತ ವೇಗ ಮತ್ತು ಕ್ರೀಡೆಯ ಮೇಲಿನ ಬದ್ಧತೆಯಿಂದಾಗಿ ರಷ್ಯಾ, ಕೆನ್ಯಾ, ಅಮೆರಿಕ, ದಕ್ಷಿಣ ಆಫ್ರಿಕಾ, ಇಥಿಯೋಪಿಯಾ, ಜಮೈಕಾದ ಅಥ್ಲೀಟ್‌ಗಳು ವಿಶ್ವವೇ ನಿಬ್ಬೆರಗಾಗುವಂತೆ ಒಲಿಂಪಿಕ್ಸ್‌ನಲ್ಲಿ ಸಾಮರ್ಥ್ಯ ತೋರಿಸುತ್ತಾರೆ.
ಆದರೆ ಭಾರತದ ಅಥ್ಲೀಟ್‌ಗಳಿಂದ ಇದೆಲ್ಲವೂ ಏಕೆ ಸಾಧ್ಯವಾಗುತ್ತಿಲ್ಲ. ನಮ್ಮ ಅಥ್ಲೀಟ್‌ಗಳು ಒಲಿಂಪಿಕ್ಸ್‌ ಆರಂಭವಾಗಲು ಏಳೆಂಟು ತಿಂಗಳು ಬಾಕಿ ಇದ್ದಾಗಲಷ್ಟೇ ಅರ್ಹತೆ ಪಡೆಯುತ್ತಾರೆ. ಹೀಗಾದರೇ ಅಥ್ಲೆಟಿಕ್ಸ್‌ನಲ್ಲಿ ಪದಕ ನಿರೀಕ್ಷೆ ಮಾಡುವುದಾದರೂ ಹೇಗೆ? ಈ ವಿಷಯದಲ್ಲಿ ಭಾರತೀ ಯರು ನಾರ್ಮನ್‌ ಗಿಲ್ಬರ್ಟ್‌ ಪ್ರಿಚರ್ಡ್‌ ಅವರಿಗೆ ಋಣಿಯಾಗಿರಬೇಕು.

ಹಾಗಂದ ಮಾತ್ರಕ್ಕೆ ಕೇವಲ ಅಥ್ಲೀಟ್‌ಗಳಲ್ಲಿ ಏನೋ ಸಮಸ್ಯೆಯಿದೆ ಎಂದು ಷರಾ ಬರೆದುಬಿಡುವ ಅಗತ್ಯವಿಲ್ಲ. ಕ್ರೀಡಾ ಆಡಳಿತಗಾರರು, ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ನ ಬೇಜವಾಬ್ದಾರಿ ಕೂಡ ಅಥ್ಲೀಟ್‌ಗಳ ಮೇಲೆ ಪರಿಣಾಮ ಬೀರುತ್ತಿದೆ.

ಹೋದ ವಾರ ನಡೆದ ಇಂಡಿಯನ್‌ ಗ್ರ್ಯಾಂಡ್ ಪ್ರಿ ಅಥ್ಲೆಟಿಕ್ಸ್‌ನ ಮೊದಲ ಲೆಗ್‌ ವೇಳೆ ವಿದ್ಯುತ್‌ ಕೈಕೊಟ್ಟಿದ್ದರಿಂದ ‘ಫೊಟೊ ಫಿನಿಷಿಂಗ್‌’ ಕೂಡ ನಡೆಯಲಿಲ್ಲ. ಈ ಲೆಗ್‌ನಲ್ಲಿಯೇ ಕೆಲ ಅಥ್ಲೀಟ್‌ಗಳಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಅವಕಾಶವಿತ್ತು.  ಉತ್ತಮ ಸಾಮರ್ಥ್ಯ ತೋರಿದ್ದ ಸುಧಾ ಸಿಂಗ್‌ ಸಂಘಟಕರ ಎಡವಟ್ಟಿನಿಂದಾಗಿ  ಬೆಲೆ ತೆರಬೇಕಾಯಿತು. ನವದೆಹಲಿಯಲ್ಲಿ ನಡೆದ ಫೆಡರೇಷನ್‌ ಕಪ್‌ನಲ್ಲಿ ಸುಧಾ ಅರ್ಹತೆ ಪಡೆದ ರಾದರೂ ಹಿಂದಿನ ಘಟನೆ ಅವರ ಮನಸ್ಸಿನಲ್ಲಿ ಕಾಡುತ್ತಲೇ ಇರುತ್ತದೆ.

ರಾಷ್ಟ್ರೀಯ  ಚಾಂಪಿಯನ್‌ಷಿಪ್‌, ಫೆಡರೇಷನ್‌ ಕಪ್‌, ಜೂನಿಯರ್ ಮಟ್ಟದ ಟೂರ್ನಿಗಳಲ್ಲಿ ಯಾವಾಗಲೂ ಅವ್ಯವಸ್ಥೆ ಸಾಮಾನ್ಯ ಎನ್ನುವಂತಾಗಿಬಿಟ್ಟಿದೆ.
ರಾಷ್ಟ್ರೀಯ ಮಟ್ಟದ ಕೂಟಗಳಿಗೆ ಹೋದಾಗ ಅದೆಷ್ಟೋ ಅಥ್ಲೀಟ್‌ಗಳು ಬಸ್‌ ನಿಲ್ದಾಣದಲ್ಲಿ ಮಲಗಿದ ಉದಾಹರಣೆಗಳೂ ಇವೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಕಸರತ್ತು ನಡೆಸುತ್ತಿರುವ ಅಥ್ಲೀಟ್‌ಗಳ ಜೊತೆ ಫೆಡರೇಷನ್‌ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.  ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕಿತ್ತು. ಈ ಯಾವ ಕೆಲಸವನ್ನು ಫೆಡರೇಷನ್‌ ಮಾಡುತ್ತಿರುವುಂತೆ ಕಾಣುತ್ತಿಲ್ಲ. 
* * *

ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಕ್ರೀಡಾಪಟುಗಳು

ಪುರುಷರ ವಿಭಾಗ​
ಮ್ಯಾರಾಥಾನ್‌
ಟಿ. ಗೋಪಿ
ಖೇತಾ ರಾಮ್‌
ನಿತೇಂದರ್ ಸಿಂಗ್ ರಾವತ್‌ 
50 ಕಿ.ಮೀ. ನಡಿಗೆ
ಸಂದೀಪ್‌ ಕುಮಾರ್
ಮನೀಷ್‌ ಸಿಂಗ್ ರಾವತ್‌
20 ಕಿ.ಮೀ. ನಡಿಗೆ
ಬಲ್ಜೀಂದರ್‌ ಸಿಂಗ್‌
ಗುರ್ಮಿತ್‌ ಸಿಂಗ್‌
ಕೆ.ಟಿ ಇರ್ಫಾನ್‌
ಡಿಸ್ಕಸ್‌ ಎಸೆತ 
ವಿಕಾಸ್‌ ಗೌಡ
ಶಾಟ್‌ಪಟ್
ಇಂದರಜಿತ್‌ ಸಿಂಗ್‌

ಮಹಿಳಾ ವಿಭಾಗ
800 ಮೀಟರ್ಸ್ ಓಟ
ಟಿಂಟು ಲೂಕಾ
3000 ಮೀಟರ್ಸ್ ಸ್ಟೀಫಲ್‌ ಚೇಸ್‌
ಲಲಿತಾ ಬಾಬರ್‌
ಸುಧಾ ಸಿಂಗ್‌
20 ಕಿ.ಮೀ. ನಡಿಗೆ
ಖುಷ್ಬೀರ್‌ ಕೌರ್‌
ಸಪ್ನಾ ಪೂನಿಯಾ
ಕವಿತಾ ರಾವತ್‌
ಮ್ಯಾರಥಾನ್‌
ಒ.ಪಿ. ಜೈಷಾ 
ಸುಧಾ ಸಿಂಗ್‌
ಶಾಟ್‌ಪಟ್
ಮನಪ್ರೀತ್‌ ಕೌರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT