ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೋದರರ ಸವಾಲ್‌....

Last Updated 25 ಜನವರಿ 2015, 20:17 IST
ಅಕ್ಷರ ಗಾತ್ರ

ಅವರಿಬ್ಬರೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಹೋದರರು. ಕಳೆದ ಮೂರು ವರ್ಷಗಳಿಂದ ಭಾರತ ತಂಡವನ್ನು ಮರಳಿ ಸೇರುವ ಪ್ರಯತ್ನದಲ್ಲಿರುವವರು. ಆದರೆ, ತಾವು ದೊಡ್ಡ ಕ್ರಿಕೆಟಿಗರು ಎಂಬ ಹಮ್ಮು ಬಿಮ್ಮು ಒಂಚೂರೂ ಇಲ್ಲದ ವ್ಯಕ್ತಿತ್ವ. ಸಾಗಿ ಬಂದ ಹಾದಿಯನ್ನು ಮರೆಯದೇ ಕೈಹಿಡಿದು ಬೆಳೆಸಿದವ ರನ್ನು ನೆನೆಯುವ ಗುಣ.  ಒಂದು ಅಂತರರಾಷ್ಟ್ರೀಯ ಪಂದ್ಯ ಆಡುತ್ತಲೇ ಮಾಧ್ಯಮದವರು, ಜನಸಾಮಾನ್ಯರ ಜೊತೆ ಮಾತನಾಡಲು ಮಡಿವಂತಿಕೆ ತೋರುವ ಕೆಲವು ಕ್ರಿಕೆಟಿಗರಂತೆ ಇವರಲ್ಲ.  

ಗುಜರಾತ್ ರಾಜ್ಯದ ಬರೋಡದ ಜಾಮಾ ಮಸೀದಿಯ ಅಂಗಳದಲ್ಲಿ  ಹಳೆಯ ಬ್ಯಾಟು, ಚೆಂಡುಗಳೊಂದಿಗೆ ಕ್ರಿಕೆಟ್ ಆಡಲು ಆರಂಭಿಸಿ,  ಅಂತರಾಷ್ಟ್ರೀಯ ಮಟ್ಟಕ್ಕೆ ಏರಿದ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಅವರೇ ಆ ಸಹೋದರರು. ಮೈಸೂರಿನಲ್ಲಿ ನಡೆದ ರಣಜಿ ಪಂದ್ಯದಲ್ಲಿ ಆಡಲು ಬರೋಡ ತಂಡದೊಂದಿಗೆ ಬಂದಿದ್ದ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ.

ಈ ಮಾತುಕತೆಯಲ್ಲಿ ವೈಯಕ್ತಿಕ ಸಾಧನೆಗಳು,  ಬಡತನ ಮತ್ತು ಸಿರಿವಂತಿಕೆಯ ಜೀವನಾನುಭವಗಳು, ಭವಿಷ್ಯದ ಚಿಂತನೆ, ಸಕಾರಾತ್ಮಕ ಜೀವನಶೈಲಿಯ ಸಂತಸಗಳ ಸೆಳಕುಗಳು ಇದ್ದವು.  ವಯಸ್ಸಿನಲ್ಲಿ ಯೂಸುಫ್ ಅಣ್ಣನಾದರೂ, ಕ್ರಿಕೆಟ್‌ ಸಾಧನೆ, ಅನುಭವ ಮತ್ತು ಮಾತಿನಲ್ಲಿ ಇರ್ಫಾನ್ ಒಂದು ಹೆಜ್ಜೆ ಮುಂದೆಯೇ ಇದ್ದಾರೆ. ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಇರ್ಫಾನ್ ಅರಳು ಹುರಿದಂತೆ ಮಾತನಾಡುತ್ತಾರೆ. ಬೀಸು ಹೊಡೆತಗಳ ಬ್ಯಾಟ್ಸ್‌ಮನ್ ಯೂಸುಫ್ ಮುತ್ತು ಉದುರಿದಂತೆ ಮಾತನಾಡುತ್ತಾರೆ. 

ಇರ್ಫಾನ್ ಮನದಾಳ
ತಂದೆ ಮೆಹಮೂದ್ ಪಠಾಣ್ ಮಸೀದಿಯಲ್ಲಿ ಮೌಲ್ವಿ ಆಗಿದ್ದವರು. ನಾವು ವಾಸಿಸುತ್ತಿದ್ದ ಮನೆಯೂ ಮಸೀದಿಯ ವ್ಯಾಪ್ತಿಯಲ್ಲಿಯೇ ಇತ್ತು. ಇದರಿಂದಾಗಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಾತಾವರಣ ಸದಾ ಇರುತ್ತಿತ್ತು. ಯಾವುದೇ ಧಾರ್ಮಿಕ ಕೇಂದ್ರದ ಆವರಣದಲ್ಲಿರುವ ವಾತಾವರಣಕ್ಕೂ ಮತ್ತು ಹೊರಗಿನ ವಾತಾವರಣಕ್ಕೂ ಬಹಳ ವ್ಯತ್ಯಾಸ ವಿರುತ್ತದೆ.  ಆದರೆ, ನಮಗೆ ಮಾತ್ರ ಕ್ರಿಕೆಟ್‌ ಆಕರ್ಷಣೆ ಅಪಾರ ವಾಗಿತ್ತು. ಹಾರ್ಡ್‌ ಟೆನಿಸ್‌ಬಾಲ್‌ ಕ್ರಿಕೆಟ್ ಆಡುತ್ತಿದ್ದೆವು. ಹೊರಗೆ ಕಳಿಸಲು ತಂದೆ, ತಾಯಿ ಮೊದಲಿಗೆ ಹೆದರುತ್ತಿದ್ದರು. ನಂತರ ನಮ್ಮ ಚಿಕ್ಕಪ್ಪ ನಮಗೆ ಸಹಾಯ ಮಾಡಿದರು. ಬರೋಡ ಕ್ರಿಕೆಟ್ ಕ್ಲಬ್ ಸೇರಿಸಿದರು. ಅಲ್ಲಿ ಮಾಸಿಕ ಶುಲ್ಕ ₨ 25 ಇತ್ತು. ಕೆಲವು ಬಾರಿ ಅವರು ನಮ್ಮಿಂದ ಶುಲ್ಕ ಪಡೆಯುತ್ತಿರಲಿಲ್ಲ.  ಅಲ್ಲಿ ಆಡುತ್ತಿದ್ದ ರಾಕೇಶ್ ಸೋಲಂಕಿ ನಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರಿದರು. ನಮ್ಮ ಆಟವನ್ನು ಸೂಕ್ಷ್ಮವಾಗಿ ಗಮನಿಸಿ ಮಾರ್ಗದರ್ಶನ ನೀಡುತ್ತಿದ್ದರು. ಐಸ್‌ ಕ್ರೀಮ್ ಕೊಡಿಸಿ ಮಾತನಾಡುತ್ತಿದ್ದ ಅವರ ಸ್ನೇಹ ಮರೆಯಲು ಸಾಧ್ಯವಿಲ್ಲ. ಸದ್ಯ ಅವರು ತ್ರಿಪುರ ತಂಡಕ್ಕೆ ಆಡುತ್ತಿದ್ದಾರೆ.

ನಂತರ ಶಾಲೆಯ ತಂಡಕ್ಕೆ ಆಯ್ಕೆಯಾಗಿ, 13 ವರ್ಷದೊಳ ಗಿನವರ ಬರೋಡ ತಂಡಕ್ಕೆ ಆಯ್ಕೆಯಾದೆ, 15 ವರ್ಷ ದೊಳಗಿನವರ ಭಾರತ ತಂಡದಲ್ಲಿ ಮಲೇಷ್ಯಾಕ್ಕೆ ಆಡಲು ಹೋದಾಗ ನನ್ನ ಆತ್ಮವಿಶ್ವಾಸ ಹೆಚ್ಚಿತು. ಮತ್ತಷ್ಟು ಗಂಭೀರವಾಗಿ ಅಭ್ಯಾಸ ಮಾಡಿದೆ. ಅಲ್ಲಿಂದ ಇಲ್ಲಿಯವರೆಗಿನ ಪ್ರಯಾಣವನ್ನು ನೀವು ನೋಡಿದ್ದೀರಿ. ಫೈಸಲಾಬಾದಿನ ಟೆಸ್ಟ್‌ನ ಮೊದಲ ಓವರ್‌ನಲ್ಲಿ ಮಾಡಿದ ‘ಹ್ಯಾಟ್ರಿಕ್’ ಸಾಧನೆ ಮತ್ತು ಬೆಂಗಳೂರಿನಲ್ಲಿ 2007ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಟೆಸ್ಟ್‌ನಲ್ಲಿ ಗಳಿಸಿದ್ದ ಶತಕ ನನಗೆ ಇಂದಿಗೂ ಸಂತೃಪ್ತಿಯ ಭಾವ ನೀಡುತ್ತವೆ.  ನನ್ನ ಅಣ್ಣ (ಯೂಸುಫ್) ನನಗಿಂತಲೂ ಹೆಚ್ಚು ಪ್ರತಿಭಾವಂತ. ಅವರು ಸೆಂಚೂರಿಯನ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗಳಿಸಿದ್ದ ಬಿರುಸಿನ ಶತಕ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.   

ಈ ಬಾರಿಯ ವಿಶ್ವಕಪ್ ಟೂರ್ನಿಗೆ ಭಾರತ ತಂಡಕ್ಕೆ ಆಯ್ಕೆ ನಡೆದ ಸಂದರ್ಭದಲ್ಲಿ ಗಾಯಗೊಂಡಿದ್ದೆ. ಆದ್ದರಿಂದ ನನಗೆ ಅವಕಾಶ ಸಿಗುವುದಿಲ್ಲ ಎಂದು ಗೊತ್ತಿತ್ತು. ಆದ್ದರಿಂದ ಬೇಸರವಾಗಿಲ್ಲ.  ರಾಷ್ಟ್ರೀಯ ತಂಡಕ್ಕೆ ಮರಳಲು ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಿದ್ಧವಾಗಿದ್ದೇನೆ. ಅಲ್ಲಾಹುವಿನ ದಯೆಯಿಂದ ಮತ್ತೆ ಅವಕಾಶ ಸಿಗುತ್ತದೆ.

ಇಬ್ಬರೂ ಸಹೋದರರ ನಡುವೆ ಕ್ರಿಕೆಟ್, ಕುಟುಂಬದ ಮಾತುಕತೆಗಳು ಮತ್ತು ಆಗಾಗ ವಾದಗಳೂ ನಡೆಯುತ್ತವೆ. ಆದರೆ ಅಣ್ಣ ಎಂಬ ಗೌರವ ಸದಾ ಇಟ್ಟುಕೊಂಡಿದ್ದೇನೆ. ನಮ್ಮಲ್ಲಿ ಆರೋಗ್ಯಯುತ ಜಗಳಗಳು ನಡೆಯುತ್ತವೆ. ಅದು ಪರಸ್ಪರರ ಏಳ್ಗೆಗೆ ಪೂರಕವಾಗಿರುತ್ತದೆ. ಬಡತನದಲ್ಲಿ ಇದ್ದ ಪ್ರೀತಿ, ಈಗಲೂ ಇದೆ.


ಯೂಸುಫ್ ಅಂತರಾಳ
ನಮ್ಮ ಅಪ್ಪ, ಅಮ್ಮ, ಸಹೋದರಿಯ ಪ್ರೀತಿ, ಪ್ರೋತ್ಸಾಹದಿಂದ ನಾವು ಬೆಳೆದಿದ್ದೇವೆ. ಇರ್ಫಾನ್ ಸಾಧನೆ ನಿಜಕ್ಕೂ ಹೆಮ್ಮೆ ತರುವಂತಹದ್ದು. ಕಠಿಣ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಿದ್ದಾನೆ. ಪಾಕ್ ವಿರುದ್ಧ ಮಾಡಿದ ಹ್ಯಾಟ್ರಿಕ್ ಸಾಧನೆಯ ಜೊತೆಗೆ ಹಲವು ಬಾರಿ ತಂಡದ ಗೆಲುವಿಗೆ ಆತ ನೀಡಿರುವ ಕಾಣಿಕೆ ಅಮೂಲ್ಯವಾದದ್ದು. ನಮ್ಮ ಸಾಧನೆಗೆ ಹಲವರು ಸಹಾಯ ಮಾಡಿದ್ದಾರೆ. ನಮ್ಮ ವೈಫಲ್ಯದ ಸಂದರ್ಭದಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ.  ಉಳಿದಂತೆ ನನ್ನ ತಮ್ಮ ಹೇಳಿರುವಂತೆ ಎಲ್ಲವೂ ಸರಿಯಾಗಿದೆ.
2012ರಿಂದ ಈಚೆಗೆ ಇಬ್ಬರಿಗೂ ಭಾರತ ತಂಡಕ್ಕೆ ಆಡಲು ಅವಕಾಶ ಸಿಕ್ಕಿಲ್ಲ. ಗಾಯದ ಸಮಸ್ಯೆ, ಪ್ರದರ್ಶನದಲ್ಲಿ ಹಿನ್ನಡೆ ಅವರನ್ನು ಕಾಡಿವೆ. ಆದರೂ ಮತ್ತೊಮ್ಮೆ ತಂಡಕ್ಕೆ ಮರಳುವ ವಿಶ್ವಾಸ ಅವರದ್ದು. ಇವರಿಬ್ಬರಿಗೂ ಸಚಿನ್ ತೆಂಡೂಲ್ಕರ್ ಅವರ ಸಾಧನೆ ಮತ್ತು ಜೀವನವೇ ಸ್ಫೂರ್ತಿಯಂತೆ. ಈಗ ರಣಜಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಈ ಸಹೋದರ ಜೋಡಿ ಕ್ರಿಕೆಟ್‌ನಲ್ಲಿ ಮತ್ತಷ್ಟು ಎತ್ತರದ ಸಾಧನೆ ಮಾಡುವ ಹೆಬ್ಬಯಕೆ ಹೊಂದಿದೆ. 

ಇರ್ಫಾನ್‌ಗೆ 100ನೇ ಪಂದ್ಯ
ಮೈಸೂರಿನಲ್ಲಿ ನಡೆದ ಕರ್ನಾಟಕ ಎದುರಿನ ರಣಜಿ ಪಂದ್ಯವು  ಇರ್ಫಾನ್ ಪಠಾಣ್‌ಗೆ  100ನೇ ಪ್ರಥಮ ದರ್ಜೆ ಪಂದ್ಯ. 2000–01ರ ರಣಜಿ ಋತುವಿನಲ್ಲಿ ಅವರು ಪದಾರ್ಪಣೆ ಮಾಡಿದ್ದರು. ಮೈಸೂರು ಪಂದ್ಯದ  ರನ್ನುಗಳು ಸೇರಿದಂತೆ  3632 ರನ್ನುಗಳು ಅವರ ಖಾತೆಯಲ್ಲಿವೆ.  ಎಡಗೈ ಮಧ್ಯಮವೇಗದ ಮೂಲಕ ಒಟ್ಟು 332 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಅವರು ಟೆಸ್ಟ್‌ನಲ್ಲಿಯೂ 100 ವಿಕೆಟ್‌ಗಳ ಮತ್ತು ಏಕದಿನ ಕ್ರಿಕೆಟ್‌ನಲ್ಲಿ 173 ವಿಕೆಟ್‌ಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT