ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮ್‌ಸುಮ್ನೆ ದಂಡ ಕಟ್‌ಬೇಡಿ!

Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ವೀಕೆಂಡ್‌ ಸಂಜೆ ಆಗುತ್ತಿದ್ದಂತೆ ಹಲವು ವಾಹನ ಸವಾರರಿಗೆ ರಸ್ತೆಯಲ್ಲಿ ವಾಹನ ಓಡಿಸಲು ಭೀತಿ. ಉಳಿದ ದಿನಗಳಲ್ಲಿ ಕೆಲವು ಜಾಗಗಳಲ್ಲಿ ಮಾತ್ರ ಕಾಣಿಸುವ ಪೊಲೀಸರು, ವೀಕೆಂಡ್ ಸೂರ್ಯ ಅತ್ತ ಮುಳುಗುತ್ತಿದ್ದಂತೆ ಇತ್ತ ಬಹುತೇಕ ರಸ್ತೆಗಳಲ್ಲಿ ಕಾಣಿಸುತ್ತಾರೆ, ಪಬ್, ಕ್ಲಬ್, ಬಾರ್ ಎಲ್ಲೆಡೆ ಹೋಗಿ ರಜದ ಮಜದಲ್ಲಿರುವವರ ನಶೆಯಿಳಿಸಲು ಷಾರ್ಟ್‌ಕಟ್ ಗಲ್ಲಿಗಳನ್ನೂ ಬಿಡದೇ ಸಿದ್ಧರಾಗಿ ನಿಂತಿರುತ್ತಾರೆ ಈ ಪೊಲೀಸರು!

ನಶೆಯ ಸ್ಥಿತಿಯಲ್ಲಿ ಸಿಕ್ಕಿಬಿದ್ದರೆ ದಂಡದ ಬಿಸಿಯಂತೂ ಇದ್ದೇ ಇದೆ. ಆದರೆ ಒಂದು ವೇಳೆ ನಶೆಯಲ್ಲಿ ಇಲ್ಲದಿದ್ದರೂ ವಾಹನ ನಿಲ್ಲಿಸಿದ ಕಾರಣಕ್ಕೆ ವಾಹನಗಳ ದಾಖಲೆ, ಪರವಾನಗಿ ಪತ್ರ, ವಾಹನ ಚಾಲನಾ ಪತ್ರ ಅದೂ ಇದೂ ಎಂತೆಲ್ಲ ನೀವು ತೋರಿಸಬೇಕಾಗುತ್ತದೆ. ಎಲ್ಲವೂ ಸರಿಯಿದ್ದರೆ ಕೊನೆಯ ಪಕ್ಷ ನಂಬರ್ ಪ್ಲೇಟ್ ಸರಿ ಇಲ್ಲ ಎಂದೋ, ಅದರಲ್ಲಿನ ಒಂದು ಅಕ್ಷರ ಸ್ಪಷ್ಟವಾಗಿ ಕಾಣಿಸುತ್ತಿಲ್ಲವೆಂದೋ... ಹೀಗೆ ಯಾವುದೋ ಕಾರಣದಿಂದ ದಂಡ ನೀಡುವುದಂತೂ ತಪ್ಪುವುದಿಲ್ಲ.

ನಶೆಯಲ್ಲಿ ಎರ್ರಾಬಿರ್ರಿ ಗಾಡಿ ಓಡಿಸಿ ಸಿಕ್ಕಿಬಿದ್ದರೆ ಏನೂ ಮಾಡುವಂತಿಲ್ಲ. ಆದರೆ ಸರಿಯಾಗಿ ನಿಮ್ಮಷ್ಟಕ್ಕೆ ನೀವು ಹೋಗುತ್ತಿದ್ದರೂ ಪೊಲೀಸರು ತಡೆದು ಆ ದಾಖಲೆ, ಈ ದಾಖಲೆ ಎಂದೆಲ್ಲ ಕೇಳಿದರು ಎಂದಿಟ್ಟುಕೊಳ್ಳಿ. ಆಗ ನೀವು ದಾಖಲೆ ತೋರಿಸುವುದಿಲ್ಲ ಎಂದು ಧೈರ್ಯದಿಂದ ಹೇಳಬಹುದು!

‘ಪೊಲೀಸರನ್ನು ಎದುರುಹಾಕಿಕೊಳ್ಳುವುದು ಎಲ್ಲಾದರೂ ಉಂಟೇ’? ಎಂದು ಪ್ರಶ್ನಿಸಬೇಡಿ. ಏಕೆಂದರೆ ಇದು ಸತ್ಯದ ಮಾತು. ಭಾರತೀಯ ಮೋಟಾರು ವಾಹನ ಕಾಯ್ದೆಯ ಪ್ರಕಾರ ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಿಸುತ್ತಿದ್ದರೆ ಮಾತ್ರ ದಾಖಲೆಗಳನ್ನು ಕೇಳುವ ಅಧಿಕಾರ ಪೊಲೀಸರಿಗೆ ಇದೆ. ಇಲ್ಲದಿದ್ದರೆ ದಾಖಲೆ ತೋರಿಸುವುದಿಲ್ಲ ಎಂದು ಸವಾರರು ಧೈರ್ಯವಾಗಿ ಹೇಳಬಹುದು.

ಹಾಗೆ ಹೇಳುವ ಮುಂಚೆ ಸಂಚಾರಿ ನಿಮಯ ಉಲ್ಲಂಘನೆ (ಸಿಗ್ನಲ್‌ ಜಂಪ್‌, ಒನ್‌ ವೇ ನಲ್ಲಿ ಗಾಡಿ ಓಡಿಸುವುದು, ಓವರ್‌ ಟೇಕ್‌ ಇತ್ಯಾದಿ) ಮಾಡಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಂಡೇ ಪೊಲೀಸರಿಗೆ ಉತ್ತರ ಕೊಡಲು ಮುಂದಾದರೆ ಒಳಿತು!

ಸ್ಟಾರ್‌ ನೋಡಿ...
ಒಂದು ವೇಳೆ ರಸ್ತೆ ಬದಿ ನಿಂತಿರುವ ಪೊಲೀಸರು ಕೈ ಮಾಡಿದ ತಕ್ಷಣ ಕಕ್ಕಾಬಿಕ್ಕಿಯಾಗಿ ವಾಹನ ನಿಲ್ಲಿಸಿಬಿಟ್ಟಿರಿ ಎಂದಿಟ್ಟುಕೊಳ್ಳಿ. ಅವರು ದಾಖಲೆ ತೋರಿಸಲು ಹೇಳಿದಾಗ ವಾಹನ ಸವಾರರು ಮೊದಲು ಮಾಡಬೇಕಾದ ಕೆಲಸ ಆ ಪೊಲೀಸ್‌ ಸಿಬ್ಬಂದಿಯ ಭುಜ ನೋಡುವುದು, ಅವರ ಭುಜದ ಮೇಲೆ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸ್ಟಾರ್‌ ಇದ್ದರೆ ಮಾತ್ರ ದಾಖಲೆ ತೋರಿಸುವುದು. ಇಲ್ಲದಿದ್ದರೆ ‘ತೋರಿಸುವುದಿಲ್ಲ’ ಎನ್ನುವುದು.

ಏಕೆಂದರೆ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ (ಎಎಸ್ಐ) ಅಥವಾ ಅವರಿಗಿಂತ ಉನ್ನತ ಶ್ರೇಣಿಯ ಪೊಲೀಸರು ಮಾತ್ರ ದಾಖಲೆ ಪರಿಶೀಲಿಸಿ ದಂಡ ವಿಧಿಸುವ ಅಧಿಕಾರ ಇದೆ.
ಭಾರತೀಯ ಮೋಟಾರು ವಾಹನ ಕಾಯ್ದೆಯ 132ನೇ ಕಲಮಿನ ಪ್ರಕಾರ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್‌, ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಹಾಗೂ   ಪೊಲೀಸ್ ಇನ್ಸ್‌ಪೆಕ್ಟರ್‌ (ಕ್ರಮವಾಗಿ ಒಂದು, ಎರಡು ಮತ್ತು ಮೂರು ಸ್ಟಾರ್ ಇರುವವರು) ಅವರಿಗೆ ಮಾತ್ರ ದಂಡದ ಮೊತ್ತ ವಸೂಲಿ ಮಾಡುವ ಅಧಿಕಾರವಿದೆ. ಹೆಡ್ ಕಾನ್ಸ್‌ಟೆಬಲ್‌, ಕಾನ್ಸ್‌ಟೆಬಲ್‌ ಇವರು ದಂಡ ವಸೂಲಿ ಮಾಡಲು ಅರ್ಹರಲ್ಲ.

ದೂರು ದಾಖಲಿಸಬಹುದು
ಒಂದು ವೇಳೆ ‘ಸ್ಟಾರ್’ ಇಲ್ಲದ ಪೊಲೀಸರು ದಾಖಲೆ ನೀಡುವಂತೆ ಕೇಳಿದರೆ ಒತ್ತಾಯ ಮಾಡಿದರೆ ಅದನ್ನು ನೀಡದಿದ್ದ ಕಾರಣ ದಂಡ ವಿಧಿಸಿದರೆ ಅವರ ವಿರುದ್ಧ addlcptrafficbcp@gmail.com ಇಲ್ಲಿ ದೂರು ದಾಖಲು ಮಾಡಬಹುದು. ಈ ರೀತಿ ದೂರು ದಾಖಲು ಮಾಡುವಾಗ ನಿಮ್ಮನ್ನು ಚೆಕ್ ಮಾಡಿರುವ ಜಾಗ, ವೇಳೆ ಹಾಗೂ ಆ ಪೊಲೀಸರ ಹೆಸರು (ಇದು ಅವರು ಧರಿಸಿರುವ ಷರ್ಟ್ ಮೇಲೆ ನಮೂದಾಗಿರುತ್ತದೆ) ತಿಳಿದುಕೊಳ್ಳುವುದು ಮುಖ್ಯ. ದೂರಿನಲ್ಲಿ ಸತ್ಯಾಂಶ ಇದ್ದರೆ ಅಂಥವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುವುದು.

ಪ್ರತಿಯೊಂದು ಸಂಚಾರಿ ಪೊಲೀಸ್ ಠಾಣೆಗೆ ಇಷ್ಟು ಪ್ರಕರಣ ದಾಖಲು ಮಾಡಬೇಕು ಎಂದು ಟಾರ್ಗೆಟ್ ನೀಡಲಾಗುತ್ತದೆ. ಈ ಗುರಿ ತಲುಪಲು ಪೊಲೀಸ್ ಇನ್ಸ್‌ಪೆಕ್ಟರ್‌ ತಮ್ಮ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಕಾನ್ಸ್‌ಟೆಬಲ್‌ಗೆ ಕೆಲಸ ಹಂಚಿಕೆ ಮಾಡುತ್ತಾರೆ. ಇದರಿಂದ ಅವರು ನಿಯಮ ಉಲ್ಲಂಘಿಸಿ ವಾಹನ ಸವಾರರಿಂದ ದಂಡ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಅದೇನೇ ಇದ್ದರೂ ಸವಾರರು ತಮ್ಮ ಹಕ್ಕು ಚಲಾಯಿಸಬಹುದು.

ದಂಡ ವಸೂಲಿ ಸಲ್ಲ
ಎಎಸ್ಐ ರ್‍ಯಾಂಕ್‌ಗಿಂತ ಕೆಳಮಟ್ಟದ ರ್‍ಯಾಂಕ್‌ ಪೊಲೀಸರು ದಾಖಲೆ ಪರಿಶೀಲಿಸಿ

ದಂಡ ವಸೂಲಿ ಮಾಡುವಂತಿಲ್ಲ. ಆದರೆ ಅವರು ಎಎಸ್ಐ ರ್‍ಯಾಂಕ್‌ ಅಥವಾ ಅದಕ್ಕಿಂತ ಹೆಚ್ಚಿನ ಶ್ರೇಣಿಯ ಪೊಲೀಸರಿಗೆ ಸಹಾಯ ಮಾಡಬಹುದು ಅಷ್ಟೇ. ಒಂದು ವೇಳೆ ಇದರ ಉಲ್ಲಂಘನೆ ಆಗುತ್ತಿರುವುದು ಕಂಡುಬಂದಲ್ಲಿ ಟ್ರಾಫಿಕ್ ಪೊಲೀಸರಿಗೆ ಇಲ್ಲವೇ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
–ಬಿ.ದಯಾನಂದ,
ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ)

ಉಲ್ಲಂಘನೆ ಆಗದಿದ್ದರೆ ಅಧಿಕಾರವಿಲ್ಲ
ಸಂಚಾರ ನಿಯಮ ಉಲ್ಲಂಘಿಸಿದರೆ ಮಾತ್ರ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರ ಪೊಲೀಸರಿಗೆ ಇದೆ. ಅದನ್ನು ಬಿಟ್ಟು ಯಾವುದೇ ನಿಯಮ ಉಲ್ಲಂಘನೆ (ಒನ್ ವೇಯಲ್ಲಿ ನುಗ್ಗುವುದು, ಸಿಗ್ನಲ್ ಜಂಪ್ ಮಾಡುವುದು, ಹೆಲ್ಮೆಟ್ ಧರಿಸದೇ ಇರುವುದು, ಹೆಚ್ಚು

ಮಂದಿಯನ್ನು ವಾಹನದಲ್ಲಿ ಕುಳ್ಳರಿಸಿಕೊಂಡು ಹೋಗುವುದು, ಓವರ್‌ಟೇಕ್‌ ಮಾಡುವುದು ಇತ್ಯಾದಿ) ಮಾಡದೇ ಸರಿಯಾಗಿ ಹೋಗುತ್ತಿದ್ದರೆ ಅಂತಹ ಸಂದರ್ಭಗಳಲ್ಲಿ ನಿಮ್ಮನ್ನು ತಡೆದು ದಾಖಲೆ ತೋರಿಸುವಂತೆ ಹೇಳಿ ದಂಡ ಪಡೆದುಕೊಳ್ಳುವುದು ಕೂಡ ಕಾನೂನು ಉಲ್ಲಂಘನೆ.
–ಬಾಬು ರಾಜೇಂದ್ರ  ಪ್ರಸಾದ್‌, ಡಿಸಿಪಿ (ಪೂರ್ವ ವಿಭಾಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT