ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಣಬು ಬೀಜೋತ್ಪಾದನಾ ವಿಧಾನ

Last Updated 11 ಮೇ 2011, 19:30 IST
ಅಕ್ಷರ ಗಾತ್ರ

ಸೆಣಬು ಸಾಂಪ್ರದಾಯಿಕ ಹಸಿರೆಲೆ ಗೊಬ್ಬರ ಸಸ್ಯ. ಭತ್ತ ಕಬ್ಬು, ಬಾಳೆ ಬೆಳೆಯುವ ರೈತರು ಸೆಣಬನ್ನು ಬೆಳೆದು ಭೂಮಿಗೆ ಸೇರಿಸುತ್ತಾರೆ. ಇದರಿಂದ ಮಣ್ಣಿನ ಸತ್ವ ಹೆಚ್ಚುತ್ತದೆ. ರಾಸಾಯನಿಕ ಗೊಬ್ಬರಗಳ ಬಳಕೆ ತಪ್ಪಿಸಿ ಹಸಿರೆಲೆ ಗೊಬ್ಬರ ಬಳಸುವ ಪ್ರಯತ್ನವಾಗಿಯೂ ಸೆಣಬು ಬಳಕೆ ಇತ್ತೀಚೆಗೆ ಹೆಚ್ಚಾಗಿವೆ.
 
ನೀರಾವರಿ ಪ್ರದೇಶದ ರೈತರು ಪ್ರಮುಖ ಬೆಳೆಗಳನ್ನು ಬೆಳೆಯುವ ಮೊದಲು ಸೆಣಬು ಬೆಳೆದು ಅದು ಹೂವಾಡುವ ಹಂತಕ್ಕೆ ಬಂದಾಗದ ಕೊಯ್ಲು ಮಾಡಿ ಕತ್ತರಿಸಿ ಭೂಮಿಗೆ ಸೇರಿಸುತ್ತಾರೆ.

ರೈತರು ಜೋಳ, ಸಜ್ಜೆ, ರಾಗಿ ಮುಂತಾದ ಬೆಳೆಗಳ ನಡುವೆ ಒಂದೆರಡು ಸಾಲುಗಳಲ್ಲಿ ಅಥವಾ ಭತ್ತದ ಗದ್ದೆ ಬದುಗಳಲ್ಲಿ ಸೆಣಬು ಗಿಡ ಬೆಳೆಸಿ ಬೀಜ ಉತ್ಪಾದಿಸಿ ಕೊಳ್ಳುತ್ತಾರೆ. ಸೆಣಬಿನ ಬೀಜಗಳಿಗೆ ಬೇಡಿಕೆ ಇರುವುದರಿಂದ ದೊಡ್ಡ ಪ್ರಮಾಣದಲ್ಲಿ  ಬೆಳೆಯುವವರು ಈ ಕೆಳಕಂಡ ಕ್ರಮಗಳನ್ನು ಅನುಸರಿಸಬೇಕು.

ನೀರು ಸಲೀಸಾಗಿ ಬಸಿದು ಹೋಗುವಂತಹ ಯಾವುದೇ ಮಣ್ಣಿನಲ್ಲಿ ಸೆಣಬು ಬೆಳೆಯಬಹುದು ಉತ್ತಮ ಮಳೆ ಬೀಳುವ, ಹೆಚ್ಚು ಚಳಿ ಇರುವ ಪ್ರದೇಶಗಳಲ್ಲೂ ಬೆಳೆಯಬಹುದು.

 ಮುಂಗಾರು ಹಾಗೂ ಹಿಂಗಾರು ಅವಧಿಯಲ್ಲಿ ಸೆಣಬು ಬಿತ್ತನೆ ಮಾಡಬಹುದು. ಮುಂಗಾರಿಯಲ್ಲಿ ಹೆಕ್ಟೇರ್‌ಗೆ  9 ರಿಂದ 10 ಕ್ವಿಂಟಲ್ ಹಾಗೂ ಬೇಸಿಗೆಯಲ್ಲಿ 6ರಿಂದ 7 ಕ್ವಿಂಟಲ್ ಇಳುವರಿ  ಪಡೆಯಬಹುದು. 

 ಬಿತ್ತನೆಗೆ ಮೊದಲು ಭೂಮಿಯನ್ನು ಆಳವಾಗಿ ಉಳುಮೆ ಮಾಡಬೇಕು. ಒಂದೆರಡು ಸಲ ಚೆನ್ನಾಗಿ ಹರಗಬೇಕು. ಬಿತ್ತನೆಗೆ ಮೊದಲು ಪ್ರತಿ ಹೆಕ್ಟೇರ್‌ಗೆ 25 ಕೆ.ಜಿ. ಸಾರಜನಕ, 50 ಕೆ. ಜಿ. ರಂಜಕ ಮತ್ತು 25 ಕೆ ಜಿ. ಪೊಟ್ಯಾಷ್ ಗೊಬ್ಬರಗಳನ್ನು ಭೂಮಿಗೆ ಸೇರಿಸಬೇಕು. ಸೆಣಬು ದ್ವಿದಳ ಧಾನ್ಯ ವರ್ಗಕ್ಕೆ ಸೇರಿದೆ. ಹೀಗಾಗಿ ಅದಕ್ಕೆ ಸಾರಜನಕ ಅವಶ್ಯಕತೆ ಕಡಿಮೆ ಇದೆ. ಆದರೆ ರಂಜಕದ ಅವಶ್ಯಕತೆ ಹೆಚ್ಚಿದೆ.

ಬೋರಾನ್ ಮತ್ತು ಮಾಲಿಬ್ಡಿನಂಗಳ ಅವಶ್ಯಕತೆ ಇದ್ದರೂ ಅವುಗಳನ್ನು ಪ್ರತ್ಯೇಕವಾಗಿ ಬಳಸುವ ಅಗತ್ಯವಿಲ್ಲ. ಬಿತ್ತನೆಗೆ ಮೊದಲು ಬೀಜಗಳನ್ನು ಉಪಚಾರ ಮಾಡಬೇಕು.ಹೆಕ್ಟೇರ್‌ಗೆ 20 ಕೇಜಿ ಬೀಜ ಬೇಕಾಗುತ್ತದೆ. ಸಾಲಿನಿಂದ ಸಾಲಿಗೆ 30 ಅಥವಾ 45 ಸೆಂ.ಮೀ, ಗಿಡದಿಂದ ಗಿಡಕ್ಕೆ 10ರಿಂದ 15 ಸೆಂ.ಮೀ ಅಂತರ ಇರುವಂತೆ ಬಿತ್ತನೆ ಮಾಡಬೇಕು.

ಸೆಣಬು ಅತಿ ವೇಗವಾಗಿ ಬೆಳೆದು ಇತರ ಕಳೆಗಳ ಬೆಳವಣಿಗೆಯನ್ನು ಹತ್ತಿಕ್ಕುತ್ತದೆ. ಆದರೂ ಮುನ್ನೆಚ್ಚರಿಕೆಯಾಗಿ  ಕಳೆಗಳನ್ನು ನಿಯಂತ್ರಣದಲ್ಲಿಡಲು ಬಿತ್ತನೆ ಮಾಡಿದ 15 ಮತ್ತು 30 ದಿವಸಗಳ ನಂತರ ಅಂತರ ಬೇಸಾಯ ಮಾಡಬೇಕು. ಅವಶ್ಯಕತೆ ಮತ್ತು ನೋಡಿಕೊಂಡು  ಒಂದೆರಡು ಸಲ ನೀರು ಕೊಡುವುದು ಅವಶ್ಯ.

ಸೆಣಬಿಗೆ ಮುಖ್ಯವಾಗಿ ಸಿಡಿ ರೋಗ, ಬೂದಿ ರೋಗ, ನಂಜು ರೋಗ, ಮತ್ತು ತುಕ್ಕು ರೋಗಗಳು ಬರುತ್ತವೆ. ಬೆಳೆ ಪರಿವರ್ತನೆ, ಬೀಜೋಪಚಾರ ಮತ್ತು ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸುವುದರ ಮೂಲಕ ಇವುಗಳನ್ನು ನಿಯಂತ್ರಣ ಮಾಡಬಹುದು.

ಕಾಯಿ ಕೊರೆಯುವ ಕೀಟಗಳ ಬಾಧೆ ಕಂಡು ಬಂದರೆ 2ಮಿ. ಲೀ. ಕ್ವಿನಾಲ್‌ಫಾಸ್ 35 ಇ.ಸಿ. ಅಥವಾ 2 ಮಿ. ಲೀ. ಕ್ಲೋರ್‌ಪೈರಿಫಾಸ್ 20 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಹೆಕ್ಟೇರ್‌ಗೆ ಸುಮಾರು 550-600 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ. ಬೆಳೆ ಹೂವಾಡುವ ಹಂತದಲ್ಲಿ ಸಸ್ಯ ಸಂಕರ್ಷಣೆ ಅತ್ಯವಶ್ಯಕ.ಕೀಟಗಳ ಬಾಧೆ ಇದ್ದಲ್ಲಿ 15 ದಿವಸಗಳ ನಂತರ ಮತ್ತೊಮ್ಮೆ ಕೀಟನಾಶಕ ಸಿಂಪಡಿಸಬೇಕು.

ಕೊಯ್ಲಿನ ಅವಧಿ
ಗಿಡದ ಎಲೆಗಳು ಉದುರಿ ಹೋಗಿ ಕಾಯಿಗಳು ಒಣಗಿ ಅದರೊಳಗಿನ ಬೀಜಗಳು ಕಪ್ಪಾಗುತ್ತವೆ. ಗಿಡದಲ್ಲಿ ಬೀಜಗಳಲ್ಲಿ ಕಾಳುಗಳು ಗಾಳಿಗೆ ಶಬ್ದ ಮಾಡುವ ಹಂತದಲ್ಲಿ ಕೊಯ್ಲು ಮಾಡಬೇಕು. ಬೀಜಗಳು ಒಂದು ವರ್ಷದವರೆಗೂ ಮೊಳಕೆ ಬರುವ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತವೆ. ಬೀಜಗಳಿಗೆ ಬೇಡಿಕೆ ಇದೆ. ಹಸಿರೆಲೆ ಗೊಬ್ಬರ, ಮೇವು ಇತ್ಯಾದಿಗೆ ಸೆಣಬು ಬಳಕೆಯಾಗುವುದರಿಂದ ಬೀಜ ಬೆಳೆದವರಿಗೆ ನಷ್ಟವಾಗುವುದಿಲ್ಲ.

ಮಾರುಕಟ್ಟೆಯಲ್ಲಿ ಬೀಜಕ್ಕೆ ಬೇಡಿಕೆ ಇದೆಯೇ ಎಂಬುದನ್ನು ನೋಡಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಬಗ್ಗೆ ಆಲೋಚಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT