ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿವಿನ ದಾರಿಯಲ್ಲಿ ಅರಿವು ಹುಡುಕುತ್ತಾ...

Last Updated 10 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

1991 ಡಿಸೆಂಬರ್ ತಿಂಗಳ ಒಂದು ದಿನ. ಕಾವೇರಿ ನದಿ ನೀರು ಹಂಚಿಕೆ ವಿವಾದದ ಕಾರಣದಿಂದಾಗಿ ಬೆಂಗಳೂರು ಬಂದ್‌ಗೆ ಕರೆನೀಡಲಾಗಿತ್ತು. ತುಂಬಿ ಹರಿಯುವ ನದಿಯಂತಿದ್ದ ರಸ್ತೆಗಳೆಲ್ಲ ಇದ್ದಕ್ಕಿದ್ದಂತೆ ಖಾಲಿ. ನನಗೋ ನಿರಾಳವಾಗಿ ಸೈಕಲ್ ತುಳಿಯುವುದಕ್ಕೆ ಸುವರ್ಣಾವಕಾಶ ದೊರೆಯಿತೆನ್ನುವ ಖುಷಿ.

ಅಂದು ಬೆಂಗಳೂರು ಸುತ್ತುವ ನಿರ್ಧಾರ ಮಾಡಿ ಊರೆಲ್ಲಾ ಸೈಕಲ್ ತುಳಿದಿದ್ದೆ. ಆದರೆ, ಆ ದಿನ ನಾನು ಕಂಡ ಗಲಭೆಯ ದೃಶ್ಯಗಳು ಮಾತ್ರ ನಾಗರೀಕತೆಯ ಬಗ್ಗೆ ನನ್ನಲ್ಲಿ ಸಾಕಷ್ಟು ಅನುಮಾನ ಮೂಡಿಸಿದ್ದವು. ಯಾವ ಯಾವ ವಾಹನಗಳಿಗೆ ತಮಿಳುನಾಡಿನ ರಿಜಿಸ್ಟ್ರೇಷನ್ ನಂಬರ್ ಇದ್ದವೋ ಅವುಗಳನ್ನು ನಿಲ್ಲಿಸಿ ಸುಟ್ಟುಹಾಕುತ್ತಿದ್ದರು. ಸೈಕಲ್ ತುಳಿಯುತ್ತಿದ್ದರಿಂದ ಯಾರೂ ನನ್ನ ತಂಟೆಗೆ ಬರಲಿಲ್ಲ. ಆ ಗಲಭೆಯ ಸಂದರ್ಭದಲ್ಲಿ ನನ್ನೊಳಗೆ ಮೂಡಿದ ಪ್ರಶ್ನೆ– ‘ಕಾವೇರಿ ಎಂದರೇನು?’.

ನನ್ನ ತಂದೆ ತೀರಿಹೋದಾಗ, ಅವರ ಅಸ್ಥಿ ವಿಸರ್ಜನೆ ಸಂದರ್ಭದಲ್ಲಿ ಕಾವೇರಿಯಲ್ಲಿ ಮಿಂದಕೂಡಲೆ ನನ್ನ ದುಗುಡಗಳೆಲ್ಲ ಕರಗಿಹೋಗಿ, ಆ ಕ್ಷಣಕ್ಕೆ ‘ಕಾವೇರಿ ಎಂದರೇನು’ ಎನ್ನುವ ನನ್ನ ಪ್ರಶ್ನೆಗೆ ಉತ್ತರ ದೊರಕಿದಂತಾಯಿತು. ಸಂಧ್ಯಾವಂದನೆಯಲ್ಲಿ ಒಂದು ಮಂತ್ರವಿದೆ-

ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತೀ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು.


ಬಾಯಿಮಾತಿಗೆ ಹೇಳುತ್ತಿದ್ದ ಈ ವೇದ ಮಂತ್ರ ನನ್ನನ್ನು ಕಾವೇರಿಯ ಪರಿಪೂರ್ಣ ದರ್ಶನವನ್ನು ಮಾಡಲು ಪ್ರಚೋದಿಸಿತು. ಆ ಉತ್ಸಾಹದಲ್ಲೇ, ಕಾವೇರಿ ಕುರಿತು ಪ್ರಕಟಗೊಂಡ ಪುಸ್ತಕಗಳನ್ನು ಓದಿದೆ. ‘ಕಾವೇರಿ ಮಹಾತ್ಮೆ’ ಎನ್ನುವ ಪುಸ್ತಕದಲ್ಲಿ ಒಬ್ಬ ಬ್ರಾಹ್ಮಣ ನಡೆದುಕೊಂಡೇ ಕಾವೇರಿಯ ಯಾತ್ರೆಯನ್ನು ಮಾಡಿದ ಪ್ರಸಂಗವಿದೆ. ನಮ್ಮ ಬಿ.ಜಿ.ಎಲ್. ಸ್ವಾಮಿ ಅವರು ತಮಿಳಿನಿಂದ ಕನ್ನಡಕ್ಕೆ ‘ನಡೆದಿಹೆ ಬಾಳೌ ಕಾವೇರಿ’ ಎನ್ನುವ ಪುಸ್ತಕ ಅನುವಾದಿಸಿದ್ದಾರೆ.

ಬಿಜಿಎಲ್‌ ಸ್ವಾಮಿ ಅವರ ಪುಸ್ತಕ ಹಾಗೂ ‘It Happened Along the Kaveri’ ಎಂಬ ಇಂಗ್ಲೀಷ್ ಪುಸ್ತಕ ಓದಿದ ಮೇಲೆ ಕಾವೇರಿಯ ಯಾತ್ರೆಯನ್ನು ಮಾಡುವ ಆಸೆ ನನ್ನೊಳಗೆ ಮೊಳೆಯಿತು. ದೇವರು ಅಥವಾ ಧರ್ಮದ ಕಾರಣಕ್ಕಾಗಿ ಈ ಯಾತ್ರೆ ಮಾಡದೆ, ನದಿ ಮತ್ತು ನಾಗರೀಕತೆಯ ಅಖಂಡ ಸ್ವರೂಪವನ್ನು ಏಕಾಂಗಿಯಾಗಿ ಅರ್ಥ ಮಾಡಿಕೊಳ್ಳುವ ತೀರ್ಮಾನ ಮಾಡಿ ಸೈಕಲ್ ಏರಿದೆ. ಈ ಪಯಣದಲ್ಲಿ– ಕಾವೇರಿ ತೀರದಲ್ಲಿ– ನಾನು ಕಂಡ ಅಪೂರ್ವ ಜೀವನ ಚಿತ್ರಗಳು ಒಂದೆರಡಲ್ಲ.

ದಕ್ಷಿಣ ಭಾರತವನ್ನು ಕರ್ನಾಟಕ – ತಮಿಳು ನಾಡು ಎಂದು ವಿಂಗಡಿಸದೆ, ‘ಕಾವೇರಿಯ ರಾಜ್ಯ’ವನ್ನಾಗಿ ವಲಯಗಳ ರೂಪದಲ್ಲಿ ನಾವು ನೋಡಬಹುದು. ಅಂಥ ವಲಯಗಳೆಂದರೆ–

ಮೊದಲನೆ ವಲಯ: ಕುಶಾಲನಗರದಿಂದ ಕೃಷ್ಣರಾಜ ಸಾಗರದವರೆಗೆ (ಹೇಮಾವತಿ, ಲಕ್ಷ್ಮಣ ತೀರ್ಥ, ಕಾವೇರಿಯ ಸಂಗಮ)
ಎರಡನೆ ವಲಯ: ಕೃಷ್ಣರಾಜಸಾಗರದ ತಿರುಮಕೂಡಲು ( ಕಬಿನಿ, ಕಾವೇರಿಯ ಸಂಗಮ)
ಮೂರನೆ ವಲಯ: ಮೇಕೆದಾಟುವರೆಗೆ (ಅರ್ಕಾವತಿ, ಶಿಂಷಾ , ಕಾವೇರಿಯ ಸಂಗಮ)
ನಾಲ್ಕನೇ ವಲಯ: ಮೇಕೆದಾಟುವಿನಿಂದ ಮೆಟ್ಟೂರು.
ಐದನೇ ವಲಯ: ಮೆಟ್ಟೂರಿನಿಂದ ಕರೂರು (ಭವಾನಿ, ನೋಯಲ್ ಮತ್ತು ಅಮರಾವತಿ – ಕಾವೇರಿಯ ಸಂಗಮ)
ಆರನೇ ವಲಯ: ಕರೂರಿನಿಂದ ಶ್ರೀರಂಗಂವರೆಗೆ.
ಏಳನೇ ವಲಯ: ಶ್ರೀರಂಗಂನಿಂದ ಬಂಗಾಳಕೊಲ್ಲಿಯವರೆಗೆ.

ನನ್ನ ಯಾತ್ರೆಯನ್ನು ಎರಡು ಭಾಗಗಳಾಗಿ ವಿಂಗಡಿಸಿಕೊಂಡೆ. ಕರ್ನಾಟಕದಲ್ಲಿ ಕೊಡಗಿನಿಂದ ಶಿವನಸಮುದ್ರದ ಮೂಲಕ ಮೇಕೆದಾಟುವರೆಗಿನದು ಮೊದಲನೆಯ ಭಾಗವಾದರೆ, ತಮಿಳುನಾಡಿನಲ್ಲಿ ಮೆಟ್ಟೂರಿನಿಂದ ಪೂಂಪುಹಾರ್‌ವರೆಗಿನದು ಎರಡನೆಯ ಭಾಗದ ಪಯಣ. ಈ ಎರಡೂ ಭಾಗಗಳು ತಲಾ ಹತ್ತು ದಿನಗಳ ಅವಧಿಯದಾಗಿದ್ದವು.

ಕರ್ನಾಟಕದಲ್ಲಿ ಕಾವೇರಿಗುಂಟ...
ಕರ್ನಾಟಕದಲ್ಲಿ ನನ್ನ ಕಾವೇರಿ ಯಾತ್ರೆ ಆರಂಭವಾದುದು ಬ್ರಹ್ಮಗಿರಿಯ ತಲಕಾವೇರಿಯಿಂದ. ಅಲ್ಲಿ ಪ್ರಾರಂಭಗೊಂಡ ನನ್ನ ಸೈಕಲ್ ಯಾತ್ರೆ ನಾಲ್ಕು ದಿನಗಳ ಕಾಲ ಕೊಡಗಿನ ಕಾಡುಗಳಲ್ಲಿ ಕಳೆಯಿತು.

ತಲಕಾವೇರಿ ಸಮುದ್ರ ಮಟ್ಟದಿಂದ 1973 ಅಡಿಗಳಷ್ಟು ಎತ್ತರಕ್ಕಿದೆ. ಪಶ್ಚಿಮ ಘಟ್ಟಗಳ ನಡುವೆ ನಿಂತರೆ ದೂರದ ಬೆಟ್ಟಗಳನ್ನು ಮೋಡಗಳು ಆವರಿಸಿರುವ ರಮ್ಯವಾದ ದೃಶ್ಯ ಕಾಣಿಸುತ್ತದೆ. ಅಲ್ಲಿಂದ ಸೈಕಲ್ ತುಳಿದುಕೊಂಡು ಹೊರಟರೆ ಭಾಗಮಂಡಲ ಸಿಗುತ್ತದೆ. ಭಾಗಮಂಡಲದಲ್ಲಿ ಭಗಂಡೇಶ್ವರ ದೇವಾಲಯವಿದೆ. ಅದು ತುಂಬಾ ಸುಂದರವಾದ ದೇವಸ್ಥಾನ. ಅಲ್ಲಿ ಕೊಡಗಿನ ಸಂಪ್ರದಾಯದಂತೆ ಮದುವೆಯಾಗುತ್ತಿರುವ ವಧೂವರರನ್ನು ಕಂಡಾಗ ಬೇರೆಯದೇ ಸಂಸ್ಕೃತಿಯನ್ನು ಕಂಡು ರೋಮಾಂಚನವಾಯಿತು. ಅಲ್ಲಿಂದ ಸೈಕಲ್‌ನಲ್ಲಿ ಮಡಿಕೇರಿ ತಲುಪುವಷ್ಟರಲ್ಲಿ ಕಾಡಿನ ನಡುವೆ ಅನೇಕ ವನ್ಯಪ್ರಾಣಿಗಳು ಮತ್ತು ನೂರಾರು ಸಣ್ಣ ಸಣ್ಣ ಜಲಪಾತಗಳು ಎದುರಾಗುತ್ತವೆ.

ಮಡಿಕೇರಿಯಲ್ಲಿ ರಾಜಾಸೀಟ್ ಮತ್ತು ಓಂಕಾರೇಶ್ವರ ದೇವಸ್ಥಾನವನ್ನು ನೋಡಬಹುದು. ಮಡಿಕೇರಿ ಪ್ರವಾಸಿ ತಾಣವಾದರೂ ಅಲ್ಲಿನ ರಸ್ತೆ ಮಾತ್ರ ಒಳ್ಳೆಯ ಸ್ಥಿತಿಯಲ್ಲಿಲ್ಲ. ಅಲ್ಲಿಂದ ವಿರಾಜಪೇಟೆಗೆ ಸೈಕಲ್ ತುಳಿದು ಹೊರಟೆ. ಕೊಡಗಿನ ಪಕ್ಷಿ ತಜ್ಞ ಡಾ. ನರಸಿಂಹನ್ ಅವರ ಜೊತೆಗೆ, ಕೊಡಗಿನಲ್ಲಿರುವ ದೇವರ ಕಾಡು ಮತ್ತು ಹಲವಾರು ಪಕ್ಷಿ ಪ್ರಭೇದಗಳ ದರ್ಶನವಾಯಿತು. ಪಕ್ಷಿಯೊಂದು ಟಿಬೇಟ್‌ನಿಂದ ಹಾರಿಕೊಂಡು ಕೊಡಗಿಗೆ ಬರುತ್ತದೆ ಎನ್ನುವ ಸಂಗತಿಯನ್ನು ಊಹಿಸಿಕೊಳ್ಳುವುದೇ ರೋಮಾಂಚಕ. ಈ ರೀತಿಯ ಮತ್ತೊಂದು ವಿಸ್ಮಯ ‘ಚಿಟ್ಟೆಗಳ ವಲಸೆ’. ಕೆಲವೇ ಕೆಲವು ದಿನ ಆಯುಷ್ಯವಿರುವ ಚಿಟ್ಟೆಗಳು ನಾಗರಹೊಳೆಯಿಂದ ಮೈಸೂರಿನವರೆಗೂ ಬರುತ್ತವೆ.

ದುಬಾರೆ ಬಳಿಯಿರುವ ಆನೇಮನೆಯಲ್ಲಿ ‘ಆನೆ ಮನೆ ಫೌಂಡೇಷನ್‌’ನ ಪ್ರಜ್ಞಾ ಚೌಟ ಅವರ ಭೇಟಿಯಾಯಿತು. ಅವರ ಮೂಲಕ ಆನೆ ಜಗತ್ತಿನ ಬಗ್ಗೆ ಅಪರೂಪದ ಮಾಹಿತಿಗಳು ದೊರೆತವು. ಕಾವೇರಿ ಕಾಡುಗಳಲ್ಲಿ ಭಾರತದಲ್ಲಿಯೇ ಹೆಚ್ಚು ಹುಲಿಗಳು ಇವೆ ಎನ್ನುವುದು ತಿಳಿಯಿತು. ಈ ಕಾಡುಗಳಲ್ಲಿ ನಮಗೆ ಹಲವು ಜಲಪಾತಗಳ ಮೂಲಕ ಕಾವೇರಿ ನದಿಯಾಗಿ ಗೋಚರಿಸುತ್ತಾಳೆ. ಈ ಸಣ್ಣ ಸಣ್ಣ ಜಲಪಾತಗಳಲ್ಲಿ ಮಿಂದು ತಣಿಯುವ ಸುಖವನ್ನು ಅನುಭವಿಸಿಯೇ ತೀರಬೇಕು. ಕೊಡಗಿನ ಬೆಟ್ಟಗಳಲ್ಲಿ ಮಳೆಯ ದಿನಗಳಲ್ಲಿ ಮೋಡ ತುಂಬಿದ ಆಕಾಶ, ಸಿಡಿಲು-ಗುಡುಗು, ಅವುಗಳ ಪ್ರತಿಧ್ವನಿ– ಇದೆಲ್ಲವನ್ನು ಕಂಡಾಗ ಸೃಷ್ಟಿಯ ಚೇತನಕ್ಕೆ ಯಾರಾದರೂ ಬೆರಗಾಗಬೇಕು.

ಕೊಡಗಿನ ಮತ್ತೊಂದು ವಿಶೇಷ– ಅಲ್ಲಿನ ಬಹುತೇಕ ಮನೆಗಳ ಅಂಗಳದಲ್ಲಿನ ಹೂತೋಟಗಳು ಮತ್ತು ಆ ತೋಟಗಳಿಗೆ ನೀರು ಹಾಕುವ ಚೆಲುವೆಯರು!
ಕುಶಾಲನಗರದ ಬಳಿ ಟಿಬೆಟ್ ನಿರಾಶ್ರಿತರನ್ನು ಮತ್ತು ಬುದ್ಧನ ವಿಗ್ರಹವನ್ನು ಕಂಡಾಗ, ಕಾವೇರಿ ಬರಿ ಕನ್ನಡಿಗರಿಗಲ್ಲದೆ ವಿವಿಧ ಸಂತ್ರಸ್ತರ ಅಳಲಿಗೂ ಒದಗಿರುವುದು ಅರ್ಥವಾಗುತ್ತದೆ. ಕುಶಾಲನಗರ ಬಿಟ್ಟು ಹಾಸನ ಜಿಲ್ಲೆಯ ಕಡೆಗೆ ನಡೆದಂತೆ, ಕೃಷಿ ಲೋಕವೊಂದು ಅನಾವರಣಗೊಳ್ಳುತ್ತದೆ.

ಸಾಲಿಗ್ರಾಮದಲ್ಲಿ ನಾನು ಸಂಕೇತಿಗಳ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದೆ. ಸಂಕೇತಿ ಜನರು ಕೇರಳದಿಂದ ಕರ್ನಾಟಕಕ್ಕೆ ವಲಸೆ ಬಂದ ಬ್ರಾಹ್ಮಣ ವರ್ಗ. ಇಂದಿಗೂ ಅವರು ಕೃಷಿಯನ್ನು ಆವಲಂಬಿಸಿ ಬದುಕುತ್ತಿದ್ದಾರೆ. ಸಂಕೇತಿಗಳು ತಮ್ಮದೇ ಆದ ಸಂಕೇತಿ ಭಾಷೆಯನ್ನು ಮಾತನಾಡುತ್ತಾರೆ.

ಸಾಲಿಗ್ರಾಮದಿಂದ ಸಂಗಮ ಕ್ಷೇತ್ರಕ್ಕೆ ಹೋಗುವಾಗ ಚುಂಚುನಕಟ್ಟೆ ಎನ್ನುವ ಊರು ಎದುರಾಯಿತು. ಅಲ್ಲೊಂದು ರಾಮ ಮಂದಿರವಿದೆ. ಸ್ವಲ್ಪ ದೂರದಲ್ಲೇ ಇರುವ ಜಲಪಾತ ಭೋರ್ಗರೆಯುತ್ತಿದ್ದರೂ ರಾಮನ ಗರ್ಭಗುಡಿಯಲ್ಲಿ ಮಾತ್ರ ಆ ಸದ್ದು ಒಂದಿಷ್ಟೂ ಕೇಳಿಸುವುದಿಲ್ಲ. ಈ ಚುಂಚನಕಟ್ಟೆಯಲ್ಲಿ ವರ್ಷಕೊಮ್ಮೆ ದನಗಳ ಜಾತ್ರೆಯಾಗುತ್ತದಂತೆ.

ಚುಂಚನಕಟ್ಟೆಯಿಂದ ಸಂಗಮ ಕ್ಷೇತ್ರದತ್ತ ನನ್ನ ಸೈಕಲ್ ಚಲಿಸಿತು. ಇಲ್ಲಿ ಕಾವೇರಿ – ಹೇಮಾವತಿ, ಲಕ್ಷ್ಮಣ ತೀರ್ಥ ಮತ್ತು ಕಾವೇರಿಯ ಸಂಗಮವಾಗುತ್ತದೆ. ನಿರ್ಜನವಾಗಿರುವ ಸಂಗಮ ಕ್ಷೇತ್ರದಲ್ಲಿ ಅತ್ಯಂತ ಶಾಂತಿಯುತವಾಗಿ ಕಾವೇರಿಯನ್ನು ನೋಡಬಹುದು.

ಇಲ್ಲಿ ಕಾವೇರಿಗೆ ‘ಕೃಷ್ಣರಾಜಸಾಗರ’ದ ತಡೆಯಿದೆ. ಕೆಲವೇ ದಿನಗಳ ಹಿಂದೆ ಲಕ್ಷ್ಮಣ ತೀರ್ಥ ನದಿಯ ಇರ್ಪು ಜಲಪಾತದಲ್ಲಿ ಐದು ತಾಸುಗಳ ಕಾಲ ಮಿಂದು–ಈಜಾಡಿದ್ದೆ. ಮತ್ತೆ ಆ ನದಿಯನ್ನು ಕಂಡ ಕೂಡಲೆ ಅವರ್ಚನೀಯ ಖುಷಿ. ಲಕ್ಷ್ಮಣ ತೀರ್ಥ ನಾಗರಹೊಳೆಯ ಕಾಡಿನಲ್ಲಿ ಹುಟ್ಟಿ ಹುಣಸೂರಿನ ಮೂಲಕ ಕೃಷ್ಣರಾಜಸಾಗರದತ್ತ ಹರಿದು ಬರುತ್ತದೆ. ಹಾಸನ, ಕೊಡಗು ಮತ್ತು ಮೈಸೂರಿನ ಕೃಷಿ ಜೀವನದೊಂದಿಗಿನ ಕಾವೇರಿಯ ನಂಟನ್ನು ಕಣ್ತುಂಬಿಕೊಂಡಿದ್ದು ನನ್ನ ಪಾಲಿನ ಅಪೂರ್ವ ಅನುಭವ.

ಕೃಷ್ಣರಾಜಸಾಗರದಲ್ಲಿರುವ ‘ಬೃಂದಾವನ’ ಉದ್ಯಾನವನ್ನು ಮಿರ್ಜಾ ಇಸ್ಮಾಯಿಲ್ ಉಸ್ತುವಾರಿಯಲ್ಲಿ ರೂಪುಗೊಂಡಿತು.  ಆ ಕಾಲದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮಹಾರಾಜರು ಮತ್ತು ಮಿರ್ಜಾ ಅವರು ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದಾಗ, ಶ್ರೀನಗರದಲ್ಲಿರುವ ಶಾಲಿಮಾರ್ ಉದ್ಯಾನವನ ಅವರ ಮನಸೆಳೆಯಿತಂತೆ. ಮೈಸೂರಿನಲ್ಲಿಯೂ ಇಂತಹ ಒಂದು ಉದ್ಯಾನವನ್ನು ನಿರ್ಮಿಸುವ ಅವರ ಹಂಬಲವೇ ‘ಬೃಂದಾವನ’ ರೂಪುಗೊಳ್ಳಲು ಕಾರಣವಾಯಿತು. ಇವರಿಬ್ಬರ ಮೈತ್ರಿ ಅದೆಷ್ಟೋ ಕಲ್ಯಾಣ ಕೆಲಸಗಳನ್ನು ನಾಡಿಗಾಗಿ ಮಾಡಿದೆ. ಮಿರ್ಜಾ ಅವರು ಆಕಾಶವಾಣಿಯ ಭಾಷಣ ಮಾಡುತ್ತಾ ಮೈಸೂರಿನ ಜನಕ್ಕೆ ಸ್ವದೇಶಿ ಸಂದೇಶವನ್ನು ಕೊಟ್ಟಿದ್ದರು. ಅದು ಹೀಗಿದೆ:

‘‘ಮೈಸೂರು ಸೋಪಿನಲ್ಲಿ ಮೈತೊಳೆಯಿರಿ, ಮೈಸೂರು ಟವೆಲ್‌ಗಳಲ್ಲಿಯೆ ಮೈ ಒರೆಸಿಕೊಳ್ಳಿ, ಮೈಸೂರು ಉಡುಪುಗಳನ್ನು ಧರಿಸಿರಿ, ಸವಾರಿಗೆ ಮೈಸೂರು ಕುದುರೆಗಳನ್ನು ಬಳಸಿ, ಮೈಸೂರಿನಲ್ಲಿ ಬೆಳೆದ ದವಸ-ಧಾನ್ಯವನ್ನು ತಿನ್ನಿರಿ, ಮೈಸೂರು ಸಕ್ಕರೆ ಮಿಶ್ರಿತ ಮೈಸೂರು ಕಾಫಿ ಕುಡಿಯಿರಿ, ಮೈಸೂರು ಸಿಮೆಂಟ್ – ಮೈಸೂರು ಟಿಂಬರ್ ಹಾಗೂ ಮೈಸೂರು ಉಕ್ಕು ಬಳಸಿ ಮನೆ ನಿರ್ಮಿಸಿ, ಮೈಸೂರಿನ ಕಾಗದ ಬಳಸಿರಿ’’.
ಈ ಹೊತ್ತಿಗೂ ಮಿರ್ಜಾ ಅವರ ಸ್ವದೇಶಿ ಸಂದೇಶ ಪ್ರಸ್ತುತ. ಇಂದಿನ ಅಧಿಕಾರಿ ವರ್ಗ ಮತ್ತು ಯುವಜನತೆ ಮಿರ್ಜಾ ಮತ್ತು  ವಿಶ್ವೇಶ್ವರಯ್ಯನವರ ಕಾಯಕ ತತ್ವವನ್ನು ಕಾವೇರಿ ತೀರದಲ್ಲಿ ಕಣ್ಣಾರೆ ಕಂಡು ಸ್ಫೂರ್ತಿ ಪಡೆಯಬೇಕಾಗಿದೆ.

ಕೃಷ್ಣರಾಜಸಾಗರದಿಂದ ಹರಿಯುವ ಕಾವೇರಿ ರಂಗನತಿಟ್ಟು ಅರಣ್ಯಧಾಮದಲ್ಲಿ ಅದೆಷ್ಟೋ ದೇಶದಿಂದ ವಲಸೆ ಬರುವ ಹಕ್ಕಿಗಳಿಗೆ ಆಶ್ರಯ ಕೊಟ್ಟಿದ್ದಾಳೆ. ಶ್ರೀರಂಗಪಟ್ಟಣದ ಮೂಲಕ ಸೋಮನಾಥಪುರ ತಲುಪುವ ಕಾವೇರಿ ನಮಗೆ ಹೊಯ್ಸಳರ ಕುಶಲತೆಯನ್ನು ಚೆನ್ನಕೇಶವ ದೇವಸ್ಥಾನದಲ್ಲಿ ತೋರುತ್ತಾಳೆ. ತಲಕಾಡು ದಾಟಿ ತಿರುಮಕೂಡಲುವಿನಲ್ಲಿ ಕಾವೇರಿ ಕಬಿನಿ ನದಿಯೊಡನೆ ಸಂಗಮವಾಗುತ್ತದೆ. ಇಲ್ಲಿಯವರೆಗೂ ಕಾವೇರಿ ಬೃಹತ್ ನಗರಗಳ ಸಂಪರ್ಕವನ್ನು ಮಾಡಿಲ್ಲ.

ಚಾಮರಾಜನಗರ ಜಿಲ್ಲೆಯಲ್ಲಿ ಸುವರ್ಣಾವತಿ ನದಿಯ ಜೊತೆ ಕಾವೇರಿ ಸಂಗಮವಾಗುತ್ತದೆ. ತಲಕಾಡಿನಿಂದ ಮಳವಳ್ಳಿ ಬಳಿಯಿರುವ ಶಿವನಸಮುದ್ರದ ಕಡೆ ಹರಿಯುವಾಗ ಕಾವೇರಿಯ ಸೊಬಗು ವರ್ಣನೆಗೆ ನಿಲುಕದ್ದು. ಭತ್ತದ ಗದ್ದೆಗಳ ನಡುವಿನ ರಸ್ತೆಯಲ್ಲಿ ವೇಗವಾಗಿ ಸೈಕಲ್‌ ತುಳಿದುಕೊಂಡು ಹೋಗುವ ಖುಷಿ ವಿಶಿಷ್ಟವಾದುದು.

ಕೋಲಾರದ ಚಿನ್ನದ ಗಣಿಗೆ ವಿದ್ಯುತ್ ಪೂರೈಸುವ ಉದ್ದೇಶಕ್ಕಾಗಿ ಶಿವನಸಮುದ್ರ ಜಲಾಗಾರ ನಿರ್ಮಿಸಲಾಗಿತ್ತು. ಅಲ್ಲಿಂದ ತೊರೆಕಾಡನಹಳ್ಳಿಗೆ ಕಾವೇರಿ ಕಾಲುವೆಗಳ ಮೂಲಕ ಹರಿಯುತ್ತಾಳೆ. ತೊರೆಕಾಡನಹಳ್ಳಿಯಿಂದ ಆನೆ ಗಾತ್ರದ ಪೈಪುಗಳ ಮೂಲಕ ಬೆಂಗಳೂರಿಗೆ ನೀರು ಪೂರೈಕೆಯಾಗುತ್ತದೆ.
ಅಂದಹಾಗೆ, ಬೆಂಗಳೂರಿಗೆ ಎಷ್ಟು ನೀರು ಬೇಕಾಗಿದೆ? ಮುಂದಿನ ದಿನಗಳಲ್ಲಿ ಇನ್ನೆಷ್ಟು ನೀರಿನ ಅವಶ್ಯಕತೆಯಿದೆ? ಅಂಕಿಅಂಶಗಳ ಬಗ್ಗೆ ಯೋಚಿಸಿದರೆ ದಿಗಿಲು ಹುಟ್ಟುತ್ತದೆ. ಆ ಅಂಕಿಅಂಶಗಳು ಹೀಗಿವೆ:

2011 2021
ಜನ ಸಂಖ್ಯೆ  73.4 ಲಕ್ಷ  100 ಲಕ್ಷ
ನೀರಿನ ಪೂರೈಕೆ ಆಗುತ್ತಿರುವುದು  900 MLD ?
ಆವಶ್ಯಕತೆಯಿರುವುದು 1500 MLD 2000
ನೀರಿನ ಕೊರತೆ  600 MLD 1000 MLD

2021ರ ಸುಮಾರಿಗೆ ಸುಮಾರು ಅರ್ಧ ಬೆಂಗಳೂರು ಬಾಯಾರಿಕೆಯಿಂದ ಬಳಲಬೇಕಾಗುತ್ತದೆ. ಹಾಗೆ ನೋಡಿದರೆ ಬೆಂಗಳೂರಿಗೆ ನೀರಿನ ಪೂರೈಕೆ ಬರೀ ಕಾವೇರಿ ನದಿಯಿಂದ ಮಾತ್ರ ಆಗುವುದು ಸಾಧ್ಯವೇ ಇಲ್ಲ. ನಮ್ಮ ಕೆರೆಗಳನ್ನೆಲ್ಲ ಪುನರುಜ್ಜೀವನಗೊಳಿಸುವುದೊಂದೇ ದಾಹ ಪರಿಹಾರದ ಮಾರ್ಗ.
ಶಿವನಸಮುದ್ರದಿಂದ ಮೇಕೆದಾಟು ಮೂಲಕ ಕಾವೇರಿ ಹೊಗೇನಕಲ್ ಪ್ರವೇಶಿಸುತ್ತಾಳೆ. ಅಲ್ಲಿಂದ ಕಾವೇರಿಯ ತಮಿಳುನಾಡು ಹರಿವು ಆರಂಭ.

ತಮಿಳುನಾಡಿನಲ್ಲಿ ಪಯಣ
ಮೆಟ್ಟೂರಿನಿಂದ ‘ಕಾವೇರಿ ಯಾತ್ರೆ’ಯ ನನ್ನ ಎರಡನೆ ಮಜಲು ಆರಂಭವಾಯಿತು.
ಮೆಟ್ಟೂರು ತಲುಪುವವರೆಗೂ ನಾನು ಕನ್ನಡವನ್ನು ಎಲ್ಲಿಯೂ ಮಿಸ್ ಮಾಡಿಕೊಂಡಿರಲಿಲ್ಲ. ಇಲ್ಲಿ ಭಾಷೆಯ ಜೊತೆಗೆ ಪರಿಸರ ಕೂಡ ಬೇರೆಯಾಗಿತ್ತು. ಬೆಳಿಗ್ಗೆ ಟೀ ಕುಡಿಯಲು ಹೋದರೆ ಅಂಗಡಿಯವನು ಟೀವಿ ನೋಡಿಕೊಂಡೇ ಗಾಜಿನ ಲೋಟಕ್ಕೆ ‘ಚಾಯ್’ ಸುರಿದ.

ಕೃಷ್ಣರಾಜಸಾಗರಕ್ಕಿಂತ ಎರಡು ಪಟ್ಟು ದೊಡ್ಡದಾದ ಮೆಟ್ಟೂರು ಅಣೆಕಟ್ಟು ನಿರ್ಮಾಣವಾದದ್ದು ಬ್ರಿಟಿಷ್‌ ಆಡಳಿತದ ಅವಧಿಯಲ್ಲಿ. ಮೆಟ್ಟೂರಿನಲ್ಲಿ ಕಾರ್ಖಾನೆಗಳನ್ನು ಹೆಚ್ಚಾಗಿವೆ. ಉಷ್ಣ ವಿದ್ಯುತ್‌ ಸ್ಥಾವರ ಕೂಡ ಅಲ್ಲಿದೆ. ಅಲ್ಯೂಮಿನಿಯಂ ಮತ್ತು ರಾಸಾಯನಿಕಗಳ ಕಾರ್ಖಾನೆಗಳು ಸಾಕಷ್ಟಿವೆ. ಎಲ್ಲರೂ ದೊಡ್ಡ ದೊಡ್ಡ ಪೈಪುಗಳನ್ನು ಬಿಟ್ಟು ನೀರನ್ನು ಕಾವೇರಿಯನ್ನು ಆವಾಹಿಸಿಕೊಳ್ಳುವವರೇ!

ಮೆಟ್ಟೂರಿನಿಂದ ಭವಾನಿ ಕ್ಷೇತ್ರದತ್ತ ನನ್ನ ಸೈಕಲ್‌ ಪಯಣ ಮುಂದುವರೆಯಿತು. ಭವಾನಿ ಪುಣ್ಯಕ್ಷೇತ್ರದಲ್ಲಿ ಕಾವೇರಿ ಮತ್ತು ಭವಾನಿ ನದಿಗಳ ಸಂಗಮವಾಗುತ್ತದೆ.

ಕೇರಳದ ‘ಸೈಲೆಂಟ್ ವ್ಯಾಲಿ’ ಮತ್ತು ‘ಅಟ್ಟಪಡಿ’ ಗಿರಿ ಶ್ರೇಣಿಗಳ ಮಧ್ಯೆ ಹರಿಯುವ ಭವಾನಿ ನೀಲಗಿರಿಯತ್ತ ಸಾಗುತ್ತಾಳೆ. ನೀಲಗಿರಿ ಜೀವವೈವಿಧ್ಯ ತಾಣ ದೇಶದಲ್ಲಿ ಅತೀ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ಇಲ್ಲಿಯ ನೀಲಗಿರಿ ತಾರ್, ನೀಲಗಿರಿ ಚಿಟ್ಟೆ, ನೀಲಗಿರಿ ಲಂಗೂರ್ ವಿಶಿಷ್ಟ ಪ್ರಭೇದಗಳು. ಊಟಿ, ಕೂನೂರು ದಾಟಿಕೊಂಡು ಮೆಟ್ಟೂಪಾಳ್ಯಂ ಮೂಲಕ ಭವಾನಿಗೆ ನದಿ ಹರಿಯುತ್ತದೆ. 

ಭವಾನಿಯಿಂದ ಕರೂರಿನತ್ತ ಸೈಕಲ್ ತುಳಿಯಲು ಪ್ರಾರಂಭಿಸಿದೆ. ರಸ್ತೆಗಳಲ್ಲಿ ಮರಗಳಿಲ್ಲದ ಪರಿಸರ ನೀರಸವೆನ್ನಿಸಿತು. ರಸ್ತೆ ಉದ್ದಕ್ಕೂ‌ ಸಿಗುವ ಅಂಗಡಿಗಳಲ್ಲಿ ವಾಹನಗಳ ಚೀತ್ಕಾರದೊಂದಿಗೆ ಟೀವಿಗಳ ಅಬ್ಬರ ಕೇಳಿಸುತ್ತದೆ. ರಸ್ತೆ ಮಧ್ಯೆ ನೂಲುವ ಯಂತ್ರಗಾರಗಳ ಕಟ್ –ಕಟ್ ಎನ್ನುವ ಕಿವಿಗೆ ಅಪ್ಪಳಿಸುತ್ತಲೇ ಇರುತ್ತದೆ. ಅಂದಹಾಗೆ, ಕರೂರು ಬಸ್‌ಗಳ ‘ಬಾಡಿ ಬಿಲ್ಡ್’ ಮಾಡುವುದಕ್ಕೆ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧವಾದುದು.

ಕರೂರು ಮತ್ತು ಭವಾನಿಯ ಮಧ್ಯೆ ಅಮರಾವತಿ ಮತ್ತು ನೋಯಲ್ ನದಿಗಳು ಕಾವೇರಿಗೆ ಬಂದು ಸೇರುತ್ತವೆ. ಕರೂರಿನಿಂದ ತಿರುಚನಾಪಳ್ಳಿಯ ದ್ವಾರದತ್ತ ಸೈಕಲ್ ತುಳಿದಾಗ, ಮೈಸೂರಿನಿಂದ ಇಲ್ಲಿಯವರೆಗೂ ಬಂದು ಜಟ್ಟಿಯೊಬ್ಬನೊಡನೆ ಕುಸ್ತಿಯಾಡಿ, ಅವನನ್ನು ಕೆಡವಿ ಬಂದ ನಮ್ಮ ಮೈಸೂರಿನ ದೊರೆ ರಣಧೀರ ಕಂಠೀರವನ ನೆನಪು ಬರುತ್ತದೆ.

ಶ್ರೀರಂಗಂನತ್ತ...
ತಮಿಳುನಾಡಿನ ಸಾಂಸ್ಕೃತಿಕ ಇತಿಹಾಸವನ್ನು ನೆನಪಿಸಿಕೊಳ್ಳುತ್ತ ಪಯಣಿಸಿದ ನನ್ನ ಸೈಕಲ್‌ ಮುಟ್ಟಿದ್ದು ಶ್ರೀರಂಗಂ ಪ್ರದೇಶವನ್ನು. ಶ್ರೀವೈಷ್ಣವರ ಪಾಲಿಗೆ ಭೂವೈಕುಂಠ ಎಂದೇ ಶ್ರೀರಂಗಂ ಪ್ರಸಿದ್ಧ. ಇಲ್ಲಿಯ ರಂಗನನ್ನು ನೋಡಿದರೆ ಆದಿ, ಮಧ್ಯೆ ಮತ್ತು ಅಂತ್ಯ ರಂಗನನ್ನು ನೋಡಿದಂತಾಗುತ್ತದೆ. ಶ್ರೀರಂಗಂ ಏಳು ಸುತ್ತಿನ ಗೋಡೆಯನ್ನು ಒಳಗೊಂಡ ಬೃಹತ್ ಸಮುಚ್ಛಯ. ಪ್ರಪಂಚದಲ್ಲಿಯೇ ದೊಡ್ಡ ಹಿಂದೂ ದೇವಾಲಯ ಎನ್ನುವುದು ಇದರ ಹೆಮ್ಮೆ.

ಕಾವೇರಿ ಮತ್ತು ಕೊಲರೂನ್ ನದಿಗಳ ಮಧ್ಯೆ ಇರುವ ದ್ವೀಪದಲ್ಲಿ ದೇವಸ್ಥಾನವನ್ನು ಕಟ್ಟಲ್ಪಟ್ಟಿದೆ. ದೇವಸ್ಥಾನದಲ್ಲಿ ಏಳು ಪರಿಧಿಗಳಿದ್ದು ಭಕ್ತಾದಿಗಳು ಏಳು ಪ್ರಾಕಾರಗಳನ್ನು ದಾಟಿಕೊಂಡು ಹೋಗಬೇಕು. ಏಳು ಕೋಟೆಗಳಂತೆ ಬೃಹತ್ತಾದ ಗೋಡೆಗಳನ್ನು ದಾಟಿ ಹೋಗಬೇಕು. ಏಳೂ ಪ್ರಾಕಾರಗಳ ಸುತ್ತ 21 ಗೋಪುರಗಳನ್ನು ಕಟ್ಟಿದ್ದಾರೆ. ವಿಶಿಷ್ಟಾದ್ವೈತ ತತ್ತ್ವವನ್ನು ಪ್ರಚುರ ಪಡಿಸಿದ ರಾಮಾನುಜಾಚಾರ್ಯರ ಸಮಾಧಿ ಕೂಡ ಇಲ್ಲಿಯೇ ಇದೆ. ಇವೆಲ್ಲವನ್ನು ನೋಡಲು ಸೈಕಲ್ ಹೇಳಿಮಾಡಿಸಿದ ಜೊತೆಗಾರ.

ತಿರುವಾಯೂರು
ತಿರುವಾಯೂರಿಗೂ ಕರ್ನಾಟಕ ಸಂಗೀತಕ್ಕೂ ವಿಶಿಷ್ಟ ನಂಟು. ಕರ್ನಾಟಕ ಸಂಗೀತದ ರತ್ನತ್ರಯರಾದ ಶ್ಯಾಮ ಶಾಸ್ತ್ರಿ, ಮುತ್ತುಸ್ವಾಮಿ ದೀಕ್ಷಿತರು ಮತ್ತು ತ್ಯಾಗರಾಜರು– ಈ ಮೂವರೂ ಮಹಾನುಭಾವರು ತಿರುವಾರೂರಿನಲ್ಲಿಯೇ ಹುಟ್ಟಿದ್ದು. ಅಲ್ಲಿಯ ತ್ಯಾಗರಾಜ ಸ್ವಾಮಿಯ ಗುಡಿಗೆ ಭೇಟಿ ನೀಡಿ, ತ್ಯಾಗರಾಜರ ಸಮಾಧಿಯನ್ನು ಸಂದರ್ಶಿಸಿದೆ.

ಪಾಳುಬಿದ್ದಿದ್ದ ತ್ಯಾಗರಾಜರ ಸಮಾಧಿಯನ್ನು ಪುನರುತ್ಥಾನಗೊಳಿಸಿ ‘ತ್ಯಾಗರಾಜರ ಆರಾಧನೆ’ಯನ್ನು ಆರಂಭಿಸಿದ ಕೀರ್ತಿ ಬೆಂಗಳೂರು ನಾಗರತ್ನಮ್ಮ ಅವರಿಗೆ ಸಲ್ಲುತ್ತದೆ. ತ್ಯಾಗರಾಜರ ಆರಾಧನೆ ಇಂದಿಗೂ ಜನವರಿ ತಿಂಗಳಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ನಾಗರತ್ನಮ್ಮನವರು ‘ಸ್ತ್ರೀ ನಾಟಕ ಮಂಡಳಿ’ಯ ಸಂಸ್ಥಾಪಕರು. ಅವರು ಕಟ್ಟಿಸಿದ ತ್ಯಾಗರಾಜ ದೇವಸ್ಥಾನವನ್ನು ‘ತ್ಯಾಗರಾಜ ಟ್ರಸ್ಟ್’ ನಿರ್ವಹಣೆ ಮಾಡುತ್ತಿದೆ.

ನಂಜನಗೂಡಿನಲ್ಲಿ ಹುಟ್ಟಿ, ಮುಂದೆ ಮೈಸೂರು ಅರಮನೆಯಲ್ಲಿ ಸಂಗೀತ ಕಛೇರಿಗಳನ್ನು ನೀಡಿ, ಮಹಾರಾಜರಿಂದ ಸನ್ಮಾನ ಮತ್ತು ಬಹುಮಾನವನ್ನು ಪಡೆದು, ಅಂದಿನ ಸರ್ಕಾರಕ್ಕೆ ತೆರಿಗೆಯನ್ನು ಪಾವತಿಸಿ, ಅಂತಿಮವಾಗಿ ಕಾವೇರಿ ನದಿಯ ತೀರದಲ್ಲಿ ತ್ಯಾಗರಾಜರ ಗುಡಿಯ ದೇವಿಯಾಗಿ ನಿಂತಿರುವ ನಾಗರತ್ನಮ್ಮ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಸೈಕಲ್ ಹತ್ತಿದೆ.

ತಿರುವಯ್ಯೂರಿನಿಂದ ತಂಜಾವೂರಿನತ್ತ ನನ್ನ ಸೈಕಲ್ ತಿರುಗಿಸಿದೆ. ಒಂದು ಸಾವಿರ ವರ್ಷದ ತಂಜಾವೂರು ಬೃಹದೀಶ್ವರ ದೇವಾಲಯ ನಿಜಕ್ಕೂ ಅದ್ಭುತ. ಮುಖ್ಯ ದ್ವಾರದಲ್ಲಿಯ ದ್ವಾರಪಾಲಕರನ್ನು ನೋಡಿದರೆ ಈ ದೇವಸ್ಥಾನದ ಹಿಂದೆ ಇರುವ ಮಹತ್ತರ ಕಲ್ಪನೆಯ ಅರಿವಾಗುತ್ತದೆ. 256 ಅಡಿ ಎತ್ತರದ ಗೋಪುರದ ನೆರಳು ಎಲ್ಲೂ ಬೀಳದಂತೆ ನಿರ್ಮಿಸಲಾಗಿದೆ.

ತಂಜಾವೂರಿನ ನಾಯಕರು ಮೂಲತಃ ಕನ್ನಡ ನಾಡಿನವರು. ವಿಜಯನಗರದ ಅರಸರ ಅಧೀನರಾಗಿ ಆಳುತ್ತಿದ್ದರು. ಈ ನಾಯಕ ಸಂಸ್ಥಾನದ ಮೊದಲನೆ ದೊರೆ ಸೇವಪ್ಪ ನಾಯಕ. ವಿಜಯನಗರದ ಅರಸರ ಆಜ್ಞೆಯ ಮೇರೆಗೆ ತಂಜಾವೂರಿನ ಆಡಳಿತದ ನಿರ್ವಹಣೆಯನ್ನು ಹೊತ್ತನು. ಈ ವಂಶದಲ್ಲಿ ರಘನಾಥ ನಾಯಕನೆಂಬ ಮೇಧಾವಿ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಅನೇಕ ಗ್ರಂಥಗಳನ್ನು ರಚಿಸಿದ್ದಾನೆ.

ತಂಜಾವೂರಿನ ಸರಸ್ವತಿ ಭಂಡಾರವನ್ನು ನೋಡಿಕೊಂಡು ಕುಂಭಕೋಣಂನತ್ತ ನನ್ನ ಸೈಕಲ್ ಸಾಗಿತು. ಕುಂಭಕೋಣಂ ದೇವಸ್ಥಾನಗಳ ಊರು. ಎಲ್ಲಿ ನೋಡಿದರೂ ದೇವರುಗಳೆ. ಆದಿಕುಂಬೇಶ್ವರ ಮತ್ತು ಶ್ರೀರಂಗಪಾಣಿ ದೇವಸ್ಥಾನಗಳು ಇಲ್ಲಿಯ ಭವ್ಯತೆಯನ್ನು ಮತ್ತು ದಿವ್ಯತೆಯನ್ನು ತೋರುತ್ತವೆ.

ಪ್ರಸಿದ್ಧ ಗಣಿತಜ್ಞ ರಾಮಾನುಜಂ ಕುಂಭಕೋಣಂನವರು. ಅವರ ಮನೆಯನ್ನು ಒಂದು ಮ್ಯೂಸಿಯಂ ಮಾಡಿದ್ದಾರೆ. ವಿಶ್ವದ ಮೂಲೆ ಮೂಲೆಗಳಿಂದ ಅದೆಷ್ಟೋ ಗಣಿತಜ್ಞರು ಇಲ್ಲಿಗೆ ಭೇಟಿ ಕೊಟ್ಟು ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾರೆ. ರಾಮಾನುಜಂ ದೇವಸ್ಥಾನದ ಗುಡಿಯ ಗೋಡೆಗಳ ಮೇಲೆ ಬಳಪವನ್ನು ಹಿಡಿದು ಗಣಿತದ ಸಮಸ್ಯೆಗಳನ್ನು ಮೇಲೆ ಪರಿಹರಿಸುತ್ತಿದ್ದರು ಎಂಬುದು ತಿಳಿಯಿತು. ‘ಒಂದು ಗಣಿತದ ಉಕ್ತಿ ಭಗವಂತನ ಚಿಂತನೆಯನ್ನು ಸೂಚಿಸುವುದಿಲ್ಲವಾದರೆ ಆ ಉಕ್ತಿ ನನಗೆ ಅರ್ಥ ಹೀನ’ ಎನ್ನುವ ಅವರ ಮಾತು ಅವರ ವ್ಯಕ್ತಿತ್ವವನ್ನು ಸೂಚಿಸುವಂತಿದೆ.

ಕುಂಭಕೋಣಂ ನಂತರ ನಾನು ಭೇಟಿ ಕೊಟ್ಟ ಪ್ರಮುಖ ಸ್ಥಳ ಪುಹಾರ್. ‘ಕಾವೇರಿ ಪಟ್ಟಣಂ’ ಎಂದು ಈ ಊರನ್ನು ಹಿಂದೆ ಕರೆಯುತ್ತಿದ್ದರು. ಪುಹಾರ್ ಒಂದು ಕಾಲದಲ್ಲಿ ರಾಜಧಾನಿ ನಗರವಾಗಿತ್ತು. ತಮಿಳಿನ ‘ಶಿಲಪ್ಪದಿಗಾರಂ’ ಮಹಾಕಾವ್ಯನಲ್ಲಿನ ನಾಯಕಿ ಕನ್ನಗಿಯ ಜೀವನವನ್ನು ಆಧರಿಸಿ ಇಲ್ಲಿ ಒಂದು ಮ್ಯೂಸಿಯಂ ಕಟ್ಟಿದ್ದಾರೆ.

ಪುಹಾರ್‌ನಲ್ಲಿ ಸಮುದ್ರದ ದಂಡೆಯಲ್ಲಿ ಸೈಕಲ್ ತುಳಿದು ದಣಿದೆ. ಸಮುದ್ರದ ಅಲೆಗಳ ಜೊತೆಗಿನ ಆಟದಲ್ಲೇ ದಣಿವು ಕಳೆದುಕೊಂಡೆ. ಅಲೆಗಳು ಮೈಮೇಲೆ ಅಪ್ಪಳಿಸುವಾಗ ಹಲವಾರು ದೃಶ್ಯಗಳು ಕಣ್ಣ ಮುಂದೆ ಬಂದವು. ಎಷ್ಟೆಲ್ಲ ದೇವರುಗಳು, ಮಹಾನುಭಾವರು, ವೀರಪ್ಪನ್‌ನಂತಹ ಕಳ್ಳರು, ಸಂಗೀತಗಾರರು, ವಿಜ್ಞಾನಿಗಳು, ಗಣಿತಜ್ಞರು, ಪಳೆಯುಳಿಕೆಗಳಂಥ ಊರುಗಳು, ನಾಗರಹೊಳೆಯ ಆನೆಗಳು– ವಿಶ್ವದ ಅದ್ಭುತಗಳಂತೆ ಕಾಣಿಸುವ ಈ ಎಲ್ಲ ದೃಶ್ಯಗಳ ಹಿಂದೆ ನಿರಂತರವಾಗಿ ನಿಗೂಢವಾಗಿ ಇರುವ ಏಕಮಾತ್ರ ಅಂಶ ‘ಕಾವೇರಿ’. ಅದೆಷ್ಟೋ ಮಂದಿಗೆ ಕಾಳು ಮತ್ತು ಬಾಳು ಕೊಡುವ ಈ ಕಾವೇರಿ ಅಂತಿಮವಾಗಿ ಕಾವೇರಿ ಪುಹಾರ್‌ನಲ್ಲಿ ಸಾಗರವನ್ನು ಸೇರುತ್ತಾಳೆ.

ಕೃಷ್ಣದೇವರಾಯನ ಕಾಲದಲ್ಲಿ ತಮಿಳರು ಮತ್ತು ಕನ್ನಡಿಗರು ಅದೆಷ್ಟೋ ಕಾಲುವೆಗಳನ್ನು ಹೆಗಲಿಗೆ ಹೆಗಲು ಕೊಟ್ಟು ಕಟ್ಟಿದ್ದಾರೆ. ವಿಜಯನಗರದ ಅರಸರ ಕನ್ನಡ ಪ್ರತಿನಿಧಿಗಳು ತಾಂಜಾವೂರಿನ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕನ್ನಡ ಮತ್ತು ತಮಿಳು ಸಂಸ್ಕೃತಿಗಳ ಉದಾತ್ತ ಕೊಡು–ಕೊಳು ಸಂಬಂಧದ ರೂಪಕದಂತೆ ಕಾವೇರಿ ಹರಿಯುತ್ತಿದ್ದಾಳೆ. ಆದರೆ, ಕಾವೇರಿಯ ಹೆಸರಿನಲ್ಲಿ ನಾವು ರಾಜಕಾರಣ ಮಾಡುತ್ತೇವೆ. ಕಾವೇರಿ ಬರಿ ನದಿಯಲ್ಲ; ಕನ್ನಡ – ತಮಿಳು ಸಂಸ್ಕೃತಿಗಳ ಚೈತನ್ಯವೂ ಹೌದೆನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT