ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರೀಶ್ ಎಂಬ `ತರಕಾರಿ ಜಕಣಾಚಾರಿ'

Last Updated 27 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ಎದುರಿಗೆ ರಾಶಿರಾಶಿಗಟ್ಟಲೇ ಹಣ್ಣು, ತರಕಾರಿ ಮತ್ತು ಸೊಪ್ಪು ಇದ್ದರೆ, ಸುಮ್ಮನೆ ಕೂರಲು ಮನಸ್ಸೇ ಬರಲ್ಲ. ಕೂತಲ್ಲೇ ಏನೇನೋ ಆಲೋಚನೆಗಳು ಹೊಳೆಯಲು ಶುರುವಾಗುತ್ತವೆ. ಹಾಗಲಕಾಯಿ ನನ್ನನ್ನು ಅಣಕಿಸಿದಂತೆ ಕಂಡರೆ, ಪಕ್ಕದಲ್ಲೇ ಇರುವ ಟೊಮೆಟೊ ಕಣ್ಣು ಮಿಟಕಿಸಿದಂತೆ ಭಾಸವಾಗುತ್ತದೆ. ಚಾಕು ಹಿಡಿದುಕೊಂಡು ಅವೆಲ್ಲದಕ್ಕೂ ಜೀವ ತುಂಬಲು ಆರಂಭಿಸಿಬಿಡುತ್ತೇನೆ. ಅವು ಜೀವ ತಳೆದಂತೆ ಮೊಸಳೆ, ಮೀನು, ಪಕ್ಷಿ, ಪುಟ್ಟ ಹುಡುಗಿ ಎಂಬಂತೆ ಗೋಚರಿಸತೊಡಗುತ್ತವೆ. ಕನಿಷ್ಠ ಮೂರು ದಿನಗಳ ಮಟ್ಟಿಗೆ ಅವೆಲ್ಲ ನನ್ನ ಮುದ್ದಿನ ಸ್ನೇಹಿತರು ಆಗದೇ ಇರುವುದಿಲ್ಲ'.

ಹೀಗೆ ಪಟಪಟನೇ ಮಾತನಾಡುವ ವ್ಯಕ್ತಿಯ ಹೆಸರು ಹರೀಶ್ ಬ್ರಹ್ಮಾವರ್. ಅವರ ಕೈಚಳಕ ಮತ್ತು ಹಣ್ಣು,ತರಕಾರಿ, ಸೊಪ್ಪಿನೊಂದಿಗಿನ ಸಲಿಗೆ ನೋಡಿಬಿಟ್ಟರೆ, ನಿಜಕ್ಕೂ ಹುಬ್ಬುಗಳೇರುತ್ತವೆ. ಮೂಲಂಗಿ, ಕಲ್ಲಂಗಡಿಹಣ್ಣು, ಬೂದುಗುಂಬಳಕಾಯಿ, ಕೊತ್ತಂಬರಿ ಸೊಪ್ಪು, ಕಿತ್ತಳೆ ಹಣ್ಣು ಮುಂತಾದವು ಅವರ ಕಣ್ಣು ಮುಂದಿಟ್ಟರೆ ಸಾಕು, ಅವುಗಳಿಗೆ ಜೀವ ತುಂಬುವ ಕಾರ್ಯದಲ್ಲಿ ನಿರತರಾಗುತ್ತಾರೆ. ಹತ್ತೇ ನಿಮಿಷದೊಳಗೆ ಈ ಎಲ್ಲ ಹಣ್ಣುತರಕಾರಿ ಮತ್ತು ಸೊಪ್ಪುಗಳು ತಮ್ಮ ನೈಜ ಸ್ವರೂಪ ಕಳೆದುಕೊಂಡು ಪ್ರಾಣಿ, ಪಕ್ಷಿ ಮತ್ತು ಮನುಷ್ಯನ ಆಕಾರ ಪಡೆದುಕೊಳ್ಳುತ್ತವೆ.

ಹಣ್ಣುತರಕಾರಿ ಮತ್ತು ಸೊಪ್ಪುಗಳಿಗೆ ಹೊಸ ರೂಪ ನೀಡಿ ಜನರನ್ನು ಆಕರ್ಷಿಸುವಂತೆ ಮಾಡುವುದು ಹರೀಶ್ ಅವರ ದೈನಂದಿನ ಹವ್ಯಾಸ. ಅಷ್ಟೇ ಅಲ್ಲ, ಅದು ಅವರ ಜೀವನೋಪಾಯವೂ ಹೌದು. ಹಣ್ಣುತರಕಾರಿ ಮತ್ತು ಸೊಪ್ಪುಗಳ ಕೆತ್ತನೆ ಕಲೆಯನ್ನೇ ಕರಗತ ಮಾಡಿಕೊಂಡಿರುವ ಅವರು ಅದರ ಮೂಲಕ `ಕ್ಯಾಟ್ ಐಸ್ ಗ್ರೂಪ್' ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ. ಕೆತ್ತನೆ ಕಲೆಯನ್ನು ಕಲಿಯಲು ಬಯಸುವ ಉತ್ಸಾಹಿ ಆಕಾಂಕ್ಷಿಗಳಿಗೆ ಉದ್ಯೋಗಾವಕಾಶ ಸಹ ಕಲ್ಪಿಸಿಕೊಟ್ಟಿದ್ದಾರೆ. `ಕೆತ್ತನೆ ಮತ್ತು ಆಕಾರ ನೀಡುವ ಕಲೆಯನ್ನು ನನಗೆ ಯಾರೂ ಹೇಳಿಕೊಡಲಿಲ್ಲ. ಅಕ್ಷರಶಃ ಗುರುವೂ ಇರಲಿಲ್ಲ. ಹೋಟೆಲ್‌ಗಳಲ್ಲಿ ಅಡುಗೆ ಕೆಲಸ ಮಾಡುತ್ತ ಮತ್ತು ತರಕಾರಿಗಳನ್ನು ನೋಡುತ್ತ ಒಂದೊಂದಾಗಿ ಕಲಿತುಕೊಂಡೆ' ಎಂದು ಹೇಳುವ ಹರೀಶ್ ಜೊತೆಗೆ ಈಗ ಹತ್ತಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ.

ಮೂಲತಃ ಬ್ರಹ್ಮಾವರದವರಾದ ಹರೀಶ್ ಕೆಲಸದ ಹುಡುಕಾಟದಲ್ಲಿ 2005ರಲ್ಲಿ ಬೆಂಗಳೂರಿಗೆ ಬಂದ ಅವರಿಗೆ ತಕ್ಷಣವೇ ಎಲ್ಲಿಯೂ ಕೆಲಸ ಸಿಗಲಿಲ್ಲ. ಯಾವುದಾದರೂ ಕೆಲಸ ಸಿಕ್ಕರೆ ಸಾಕು ಎಂಬ ಸ್ಥಿತಿಯಲ್ಲಿದ್ದ ಅವರಿಗೆ ಎಸ್‌ಎಸ್ ಕೇಟರಿಂಗ್ ಸಂಸ್ಥೆಯೊಂದರಲ್ಲಿ ಕೆಲಸ ಸಿಕ್ಕಿತ್ತು. ಹಣ್ಣುತರಕಾರಿಗಳನ್ನು ಹೆಚ್ಚುವುದು, ಅಡುಗೆಭಟ್ಟರಿಗೆ ಸಹಾಯ ಮಾಡುವುದು ಮುಂತಾದವುಗಳನ್ನು ಮಾಡುತ್ತಿದ್ದ ಅವರು ಕ್ರಮೇಣ ಅಡುಗೆ ಮಾಡುವ ಕಡೆಗೂ ಗಮನಹರಿಸಿದರು.

`ಹಣ್ಣುತರಕಾರಿ ಮತ್ತು ಸೊಪ್ಪುಗಳನ್ನು ಹೆಚ್ಚುವಾಗಲೆಲ್ಲ ಅವುಗಳಲ್ಲಿ ಒಂದೊಂದು ರೀತಿಯ ಆಕಾರಗಳನ್ನು ಕಾಣುತ್ತಿದ್ದೆ. ಮೂಲಂಗಿ ಕೆಲವೊಮ್ಮೆ ಆನೆಯ ಸೊಂಡಿಲಿನಂತೆ ಕಂಡು ಬಂದರೆ, ದೊಡ್ಡ ಬದನೆಕಾಯಿ ಶಿವಲಿಂಗದಂತೆ ಕಾಣುತಿತ್ತು. ಹಾಗಲಕಾಯಿಯಂತೂ ಬಾಯ್ತೆರೆದ ಮೊಸಳೆಯಂತೆ ಕಂಡರೆ, ಅನಾನಸ್ ಮೀನಿನಂತೆ ಕಾಡುತಿತ್ತು. ಸಮಯ ಸಿಕ್ಕಾಗಲೆಲ್ಲ ಪುಟ್ಟದಾದ ಚಾಕು ಹಿಡಿದುಕೊಂಡು ಅವುಗಳನ್ನೆಲ್ಲ ಪ್ರಾಣಿ, ಪಕ್ಷಿ, ಮನೆ, ದೇವರು ಮುಂತಾದ ರೂಪಗಳಲ್ಲಿ ಸಿದ್ಧಪಡಿಸುತ್ತಿದ್ದೆ. ವರ್ಷಗಳು ಕಳೆದಂತೆ ಅದು ರೂಢಿಯಾಯಿತು. ಸ್ನೇಹಿತರು ಮತ್ತು ಕುಟುಂಬ ಸದಸ್ಯರು ನನ್ನ ಕಲೆಯನ್ನು ಮೆಚ್ಚತೊಡಗಿದರು. ಇದರಲ್ಲೇ ಕೆರಿಯರ್ ರೂಪಿಸಿಕೊಳ್ಳಲು ನಿರ್ಧರಿಸಿದೆ.' ಎಂದು ಹರೀಶ್ ಆತ್ಮವಿಶ್ವಾಸದಿಂದ ಹೇಳುತ್ತಾರೆ.

`ಹಣ್ಣುತರಕಾರಿ ಮತ್ತು ಸೊಪ್ಪುಗಳ ಕಲೆಗೆ ಇತ್ತೀಚಿನ ದಿನಗಳಲ್ಲಿ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಪ್ರಮುಖ ಸಮಾರಂಭಗಳಲ್ಲಿ ಮತ್ತು ಮದುವೆಗಳಲ್ಲಿ ಗಣ್ಯರನ್ನು, ಜನರನ್ನು ಆಕರ್ಷಿಸಲು ಈ ಕಲೆಯನ್ನು ಪ್ರದರ್ಶಿಸಲಾಗುತ್ತದೆ. ಪ್ರತಿಷ್ಠಿತ ಪಂಚತಾರಾ ಹೋಟೆಲ್‌ಗಳಲ್ಲೂ ಸಹ ಈ ಕಲೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ವಾರ ಅಥವಾ ಹದಿನೈದು ದಿನಗಳ ಮುಂಚೆ ಗ್ರಾಹಕರು ನಮಗೆ ಆರ್ಡರ್ ನೀಡುತ್ತಾರೆ.

ನಾವು ನಿಗದಿತ ದಿನಾಂಕದಂದು ಅಗತ್ಯವಿರುವುದೆಲ್ಲ ಸಂಗ್ರಹಿಸಿಕೊಂಡು, ಅವುಗಳಿಗೆ ಬೇರೆ ಬೇರೆ ಆಕಾರ-ಸ್ವರೂಪಗಳನ್ನು ನೀಡಿ ಪ್ರದರ್ಶಿಸುತ್ತೇವೆ. ನಮ್ಮ ಕಲೆಯನ್ನು ನೋಡಿ, ಹಲವಾರು ಮಂದಿ ಶ್ಲಾಘಿಸುವುದರ ಜೊತೆಗೆ ಬಹುಮಾನ ನೀಡಿದ್ದಾರೆ. ನಿರೀಕ್ಷೆಗೂ ಮೀರಿ ಪ್ರೋತ್ಸಾಹಧನ, ಬಹುಮಾನ ನೀಡಿ, ನಮ್ಮ ಕಲೆಯನ್ನು ಪ್ರೋತ್ಸಾಹಿಸಿದ್ದಾರೆ. ಈ ಕಲೆಯನ್ನು ಅಂತರರಾಜ್ಯಮಟ್ಟದಲ್ಲೂ ಪ್ರದರ್ಶಿಸಿದ್ದೇನೆ' ಎಂದು ಅವರು ಹೇಳುತ್ತಾರೆ.

`ಕ್ಯಾಟ್ ಐಸ್ ಗ್ರೂಪ್' ಸಂಸ್ಥೆಯ ಪ್ರತಿನಿಧಿಗಳಾಗಿ ಹರೀಶ್ ಜೊತೆ ಅವರ ಸ್ನೇಹಿತರಾದ ಸುನೀಲ್, ನವೀನ್, ರಾಜೇಶ್, ಹೇಮರಾಜ್ ಮತ್ತು ಮಂಜು ದಕ್ಷಿಣಭಾರತದ ಎಲ್ಲ ರಾಜ್ಯಗಳಲ್ಲೂ ತಮ್ಮ ಕಲೆ ಪ್ರದರ್ಶಿಸಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪಾಂಡಿಚೇರಿ ಮತ್ತು ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ತಮ್ಮ ಕಲೆಯ ಮೂಲಕ ಪರಿಚಿತರಾಗಿರುವ ಅವರು ಉತ್ತರ ಭಾರತದ ಕಡೆಗೂ ಕಣ್ಣಿಟ್ಟಿದ್ದಾರೆ. ಅವಕಾಶ ಸಿಕ್ಕರೆ, ವಿದೇಶದಲ್ಲೂ ತಮ್ಮ ಕಲೆಯನ್ನು ವಿಸ್ತರಿಸಲು ಬಯಸಿದ್ದಾರೆ. ಸ್ನೇಹಿತರಲ್ಲಿ ಕೆಲವರು ಉನ್ನತ ಶಿಕ್ಷಣ ಪಡೆದವರಿದ್ದರೆ, ಇನ್ನೂ ಕೆಲವರು ಎಸ್ಸೆಸ್ಸೆಲ್ಸಿ ಶಿಕ್ಷಣ ಮಾತ್ರವೇ ಪೂರೈಸಿದ್ದಾರೆ. ಬೇರೆಯಲ್ಲೂ ಕೆಲಸ ಸಿಗದ ಕಾರಣ ಅವರೂ ಸಹ ಇದನ್ನೇ ಉದ್ಯೋಗವಾಗಿಸಿಕೊಂಡಿದ್ದಾರೆ.

`ಪ್ರಾಣಿಪಕ್ಷಿ, ಹೂಕುಂಡ, ಮನೆ, ದೇವರು ಮುಂತಾದವುಗಳನ್ನು ಸಿದ್ಧಪಡಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. 5 ರಿಂದ 10 ನಿಮಿಷದೊಳಗೆ ಒಂದು ವಸ್ತುವೊಂದನ್ನು ಸಿದ್ಧಪಡಿಸುತ್ತೇನೆ. ಸುಮಾರು 20 ರಿಂದ 40 ವಸ್ತುಗಳನ್ನು ಸಿದ್ಧಪಡಿಸಲು ಎರಡೂವರೆ ಗಂಟೆ ಸಾಕು. ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲೆಲ್ಲ ನಮ್ಮ ಕಲೆಯನ್ನು ಪ್ರದರ್ಶಿಸುತ್ತೇವೆ. ಫಲಪುಷ್ಪಗಳ ಪ್ರದರ್ಶನ, ತೋಟಗಾರಿಕೆ ಮೇಳ ಮುಂತಾದ ಕಡೆಯಲ್ಲದೇ ಬೃಹತ್ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುತ್ತೇವೆ.

ಮೂರು ದಿನಗಳ ನಂತರ ಅವು ಆಕಾರ ಕಳೆದುಕೊಳ್ಳತೊಡಗುತ್ತವೆ. ಆಗ ನಾವು ಅವುಗಳನ್ನೆಲ್ಲ ತೆಗೆದುಕೊಂಡು ಹೋಗಿ ಜಾನುವಾರುಗಳಿಗೆ ಸುರಿಯುತ್ತೇವೆ. ಅವುಗಳನ್ನು ದೀರ್ಘಕಾಲದವರೆಗೆ ಕಾಯ್ದುಕೊಳ್ಳುವುದು ಅಸಾಧ್ಯ. ಅವು ಅಲ್ಪಕಾಲದವರೆಗೆ ಇದ್ದರೂ ಅವು ಆಕರ್ಷಿಸುತ್ತವೆ' ಎಂದು ಹರೀಶ್ ಹೇಳುತ್ತಾರೆ. ಅವರ ವಿಳಾಸ: ಹರೀಶ್ ಬ್ರಹ್ಮಾವರ್, ವಿಠಲ್ ನಗರ, ಚಾಮರಾಜಪೇಟೆ. ಸಂಪರ್ಕಕ್ಕೆ: 98860 48862.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT