ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಸಿನ ತೋಪುಗಳ ನೆನಪಿನ ಬಡಾವಣೆ

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು ನಗರದ ಸ್ಥಳನಾಮಗಳನ್ನು 1800ರವರೆಗೆ ಅಧ್ಯಯನ ಮಾಡಿದರೆ ಕೆಂಪೇಗೌಡರ ಕಾಲದಿಂದ ಟಿಪ್ಪೂ ಸುಲ್ತಾನ್‌ ಕಾಲದವರೆಗೆ ಸಾಕಷ್ಟು ಐತಿಹಾಸಿಕ ಮಾಹಿತಿ ದೊರಕುತ್ತದೆ.

20ನೇ ಶತಮಾನದ ಬೆಂಗಳೂರು ನಗರದ ಮೊದಲ ಬಡಾವಣೆಯಾದ ಚಾಮರಾಜಪೇಟೆಯಿಂದ ಪ್ರಾರಂಭಗೊಂಡು ಇತ್ತೀಚಿನ ಬಡಾವಣೆಗಳ, ರಸ್ತೆಗಳ, ಉದ್ಯಾನಗಳ ಹಾಗೂ ವೃತ್ತಗಳ ಸ್ಥಳನಾಮಗಳ ಅಧ್ಯಯನ ಬೆಂಗಳೂರಿನ ಸಮಗ್ರ ಇತಿಹಾಸಕ್ಕೆ ಅಮೂಲ್ಯ ಕೊಡುಗೆಯಾಗುತ್ತದೆ. ಆಧುನಿಕತೆಗೆ ತೆರೆದುಕೊಂಡಿರುವ, ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಹಲಸೂರು ಹಳೇ ಬೆಂಗಳೂರಿನ ಪ್ರದೇಶಗಳಲ್ಲಿ ಒಂದು. 


16 ಮತ್ತು 17ನೇ ಶತಮಾನದಲ್ಲಿ ಈಗಿನ ಹಲಸೂರು ಪ್ರದೇಶದಲ್ಲಿ ಯಥೇಚ್ಛವಾಗಿ ಹಲಸಿನ ಮರದ ತೋಪುಗಳಿದ್ದ ಕಾರಣದಿಂದ ‘ಹಲಸೂರು’ ಎಂಬ ಹೆಸರು ಪಡೆದಿದೆ ಎಂದು ತಿಳಿದು ಬರುತ್ತದೆ. ಇಲ್ಲಿ ಬೆಳೆದ ಹಲಸಿನ ಹಣ್ಣುಗಳನ್ನು ಹಲಸೂರಿನ ರೈತರು ಕೋಟೆಗೆ ನೇರವಾಗಿದ್ದ ಪೇಟೆ ಬಾಗಿಲಿನ ಮೂಲಕ (ಈಗಿನ ಹಲಸೂರು ಗೇಟ್‌ ಪೊಲೀಸ್‌ ಸ್ಟೇಷನ್‌) ಪೇಟೆಯ ಒಳಕ್ಕೆ ಬಂದು ಹಲಸಿನ ಹಣ್ಣುಗಳನ್ನು ಮಾರುತ್ತಿದ್ದ ಕಾರಣದಿಂದ ‘ಹಲಸೂರು ಪೇಟೆ’ (ಈಗಿನ ಧರ್ಮರಾಯಸ್ವಾಮಿ ದೇವಾಲಯದ ಪ್ರದೇಶ) ಎಂದು ಹೆಸರು ಪಡೆಯಿತು.

ಹಲಸೂರು ಕೆರೆ
ಕೆಂಪೇಗೌಡರು ಕಟ್ಟಿಸಿದ ಕೆರೆಗಳಲ್ಲಿ ಹಲಸೂರು ಕೆರೆಯೂ ಒಂದು. ನಗರದ ಜೀವಂತ ಕೆರೆಗಳಲ್ಲಿ ಒಂದು. ಉಳಿದ ಕೆರೆಗಳಿಗೆ ಹೋಲಿಸಿದರೆ ಇದು ಸುಸ್ಥಿತಿಯಲ್ಲಿದೆ ಎಂದೇ ಹೇಳಬಹುದು. ದೋಣಿ ವಿಹಾರದ ಸೌಕರ್ಯವೂ ಇಲ್ಲುಂಟು. ಹಿಂದೆ ಕುಡಿಯುವ ನೀರಿನ ಮೂಲವಾಗಿದ್ದ ಈ ಕೆರೆಗೆ ಕೊಳಚೆನೀರು ಸೇರಿದ ಮೇಲೆ ಬಳಸುವುದು ನಿಂತುಹೋಯಿತು. ಹಲಸೂರು ಕೆರೆ ಮಾಲಿನ್ಯಗೊಳ್ಳುತ್ತಿದ್ದ ಬಗ್ಗೆ ಸೈನಿಕ ಇಲಾಖೆ 1883ರಲ್ಲೇ ಕಳವಳ ವ್ಯಕ್ತಪಡಿಸಿತ್ತು.

ಸೋಮೇಶ್ವರ ದೇವಾಲಯ
ಹಲಸೂರಿನಲ್ಲಿರುವ ಸೋಮೇಶ್ವರ ದೇವಾಲಯವು ನಗರದಲ್ಲಿರುವ ಪ್ರಾಚೀನ ದೇವಾಲಯಗಳಲ್ಲಿ ಒಂದು. ಸೋಮೇಶ್ವರ ದೇವಾಲಯದ ಗರ್ಭಗೃಹ ಮತ್ತು ಅಂತರಾಳಗಳು ಕ್ರಿ.ಶ.10ನೇ ಶತಮಾನಕ್ಕಿಂತ ಮೊದಲೇ ಇದ್ದ ರಚನೆಗಳೆನಿಸುತ್ತವೆ. ಈ ಕಾಲದ ಶಿಲ್ಪಗಳನ್ನು ಇಲ್ಲಿ ಕಾಣಬಹುದು. ಕೆಂಪೇಗೌಡರ ಕಾಲದ ಈ ದೇವಾಲಯದ ನವರಂಗ, ಮುಖಮಂಟಪ ಮತ್ತು ದ್ವಾರಗೋಪುರಗಳು ವಿಜಯನಗರ ಶೈಲಿಯದ್ದಾಗಿವೆ.

ಇಲ್ಲಿ ಚಚ್ಚೌಕಾಕಾರದ ಗರ್ಭಗೃಹದ ನಡುವೆ ಪ್ರಾಚೀನ ಲಿಂಗವಿದೆ. ಗರ್ಭಗೃಹದ ಪ್ರದಕ್ಷಿಣಾಪಥದ ಕೋಷ್ಠಗಳಲ್ಲಿರುವ ಜ್ಯೇಷ್ಠಾದೇವಿ, ದಕ್ಷಿಣಾಮೂರ್ತಿ ಬಿಂಬಗಳು ಪ್ರಾಚೀನ ಶಿಲ್ಪಗಳಾಗಿವೆ. ನವರಂಗದ ಕಂಬಗಳು ನಂತರದ ಕಾಲದವು. ದ್ವಾರಗೋಪುರದಲ್ಲಿ ಕೆತ್ತಲಾಗಿರುವ ಕುಬ್ಜರು, ರಾವಣನು ಕೈಲಾಸವನ್ನು ಎತ್ತುತ್ತಿರುವ ಶಿಲ್ಪ, ಗಿರಿಜಾಕಲ್ಯಾಣ ಮೊದಲಾದ ಉಬ್ಬುಶಿಲ್ಪಗಳು ಗಮನಾರ್ಹವಾಗಿವೆ.

ದೇವಾಲಯ ವಿಸ್ತಾರವಾದಾಗ ಅಮ್ಮನವರ ದೇವಾಲಯ ರಚನೆಯಾಗಿದೆ. 20ನೇ ಶತಮಾನದಲ್ಲಿ ಮತ್ತೆ ಜೀರ್ಣೋದ್ಧಾರಗೊಂಡಿರುವ ಈ ದೇವಾಲಯದ ಆವರಣದಲ್ಲಿ ಈಗ ನಂಜುಂಡೇಶ್ವರ ದೇವಾಲಯ, ಗಣಪತಿ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಈ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ‘ಉಯ್ಯಾಲೆ ಮಂಟಪ’ ಜನಪ್ರಿಯವಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT