ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಆಲ್‌ರೌಂಡರ್ ಶ್ರೇಯಸ್

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ‘ತಂಡದಲ್ಲಿ ಜೂನಿಯರ್ ಅಥವಾ ಸೀನಿಯರ್ ಎಂಬ ತಾರತಮ್ಯ ಇಲ್ಲ. ನಾನು ಕಿರಿಯ ಆಟಗಾರ ಎಂಬ ಭಾವನೆಯೇ ನನಗೆ ಬರದಂತೆ ಎಲ್ಲರೂ ಸ್ನೇಹದಿಂದ ಇದ್ದಾರೆ’-

ಕೋಲ್ಕತ್ತದ ಈಡನ್‌ ಗಾರ್ಡನ್‌ನಲ್ಲಿ ಬುಧವಾರ ಮುಕ್ತಾಯವಾದ ಕರ್ನಾಟಕ ಮತ್ತು ಬಂಗಾಳ ರಣಜಿ ಟ್ರೋಫಿ ಪಂದ್ಯದ ‘ಉತ್ತಮ ಆಟಗಾರ’ ಗೌರವಕ್ಕೆ ಪಾತ್ರರಾದ ಶ್ರೇಯಸ್ ಗೋಪಾಲ್ ಅವರ ಹೆಮ್ಮೆಯ ನುಡಿಗಳು ಇವು.

2013-14ರ ಋತುವಿನಲ್ಲಿ ಬೆಂಗಳೂರಿನಲ್ಲಿ ಮುಂಬೈ ಎದುರಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಶ್ರೇಯಸ್ ಈಗ ತಂಡದಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನ ಹುಡುಗ.

ಪದಾರ್ಪಣೆ ಪಂದ್ಯದಲ್ಲಿಯೇ ತಮ್ಮ ಲೆಗ್‌ಸ್ಪಿನ್ ಮೂಲಕ ಒಟ್ಟು 5 ವಿಕೆಟ್ ಗಳಿಸಿ (52ಕ್ಕೆ3 ಮತ್ತು 13ಕ್ಕೆ2) ಮುಂಬೈ ವಿರುದ್ಧ ಕರ್ನಾಟಕದ ಗೆಲುವಿಗೆ ಕಾಣಿಕೆ ನೀಡಿದ್ದರು.

ಅಲ್ಲಿಂದ ಇಲ್ಲಿಯವರೆಗೆ ಆಡಿರುವ ಒಟ್ಟು ಒಂಬತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ ಶ್ರೇಯಸ್ 268 ರನ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದು, ಒಟ್ಟು 36 ವಿಕೆಟ್‌ಗಳನ್ನೂ ಗಳಿಸಿದ್ದಾರೆ.  21ರ ಹರೆಯದ ಶ್ರೇಯಸ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು  ಪ್ರತಿನಿಧಿಸುತ್ತಿದ್ದಾರೆ.

ಬ್ರಿಜೇಶ್ ಪಟೇಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬಾಲ್ಯ­ದಿಂದಲೇ ಕ್ರಿಕೆಟ್ ತರಬೇತಿ ಆರಂಭಿಸಿದ ಶ್ರೇಯಸ್ ವಯೋಮಿತಿಯ ಕ್ರಿಕೆಟ್‌ನಲ್ಲಿ ರಾಜ್ಯ ತಂಡದ ನಾಯಕತ್ವ ವಹಿಸಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಬೌಲರ್ ಆಗಿ ಮಿಂಚಿದ್ದಾರೆ.

ಕೋಲ್ಕತ್ತದಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಶ್ರೇಯಸ್ ಭರ್ಜರಿ ಶತಕ (145) ಗಳಿಸಿದ್ದಲ್ಲದೇ ಕೊನೆಯ ವಿಕೆಟ್ ಪಾಲುದಾರಿಕೆಯಲ್ಲಿ ಎಸ್. ಅರ­ವಿಂದ ಜೊತೆ 148 ರನ್ನುಗಳನ್ನು ಸೇರಿಸಿದ್ದು ತಂಡದ ಗೆಲುವಿಗೆ ದಾರಿ ಮಾಡಿಕೊಟ್ಟಿತ್ತು. ತಮ್ಮ ಈ ಸಾಧನೆ ಮತ್ತು ಮುಂದಿನ ಯೋಜನೆಯ ಕುರಿತು ‘ಪ್ರಜಾವಾಣಿ’ಯೊಂದಿಗೆ ಶ್ರೇಯಸ್ ಮಾತನಾ­ಡಿದ್ದಾರೆ. ಅದರ ಸಾರಾಂಶ ಇಲ್ಲಿದೆ;
‘ಕೊನೆಯ ವಿಕೆಟ್ ಎಂಬ ಅರಿವು ನಮಗೆ ಇತ್ತು. ಆದರೆ, ಅರವಿಂದ್ ಅವರ ತಾಳ್ಮೆಯ ಆಟವೇ ಪ್ರಮುಖ ಘಟ್ಟ. ಅವರು ತುಂಬಾ ಚೆನ್ನಾಗಿ ಆಡಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇದರಿಂದ ನಾನು ಇನ್ನೊಂದು ಬದಿಯಲ್ಲಿ ರನ್ನುಗಳನ್ನು ಗಳಿಸಲು ಸಾಧ್ಯ­ವಾಯಿತು. ತಂಡಕ್ಕೆ ಅಗತ್ಯವಿದ್ದಾಗ ಒತ್ತಡ­ವನ್ನು ಸಹಿಸಿಕೊಂಡು ಆಡಬೇಕು. ಗೆಲುವಿನ ಸಂತಸವೇ ದೊಡ್ಡದು.

‘ಕಳೆದ ರಣಜಿ ಟೂರ್ನಿಯಲ್ಲಿ ಅವಕಾಶ ಸಿಕ್ಕಾಗ ಉತ್ತಮ ಪ್ರದರ್ಶನ ನೀಡಿದ್ದೇನೆ. ತಂಡ ಇಟ್ಟ ವಿಶ್ವಾಸ ಉಳಿಸಿಕೊಂಡಿದ್ದೇನೆ. ಈ ಋತುವಿನಲ್ಲಿಯೂ ಅದೇ ಪ್ರದರ್ಶನವನ್ನು ಮುಂದುವರೆಸುತ್ತೇನೆ. ನಾಯಕ, ಕೋಚ್ ಮತ್ತು ಸಹ ಆಟಗಾರರು ತುಂಬಾ ಪ್ರೋತ್ಸಾಹ ನೀಡುತ್ತಿದ್ದಾರೆ.

ಜೂನಿಯರ್ ಕ್ರಿಕೆಟ್‌ನಲ್ಲಿ ನಾನು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದೆ. ಈಗ ತಂಡದ ಆಡಳಿತ ಕೊಟ್ಟ ಅವಕಾಶದಲ್ಲಿ ಬ್ಯಾಟಿಂಗ್ ಮಾಡುತ್ತೇನೆ. ತಂಡಕ್ಕೆ ಅಗತ್ಯವಿದ್ದಾಗ ಯಾವುದೇ ಕ್ರಮಾಂಕದಲ್ಲಿಯೂ ಉತ್ತಮ ಪ್ರದರ್ಶನ ನೀಡಬೇಕು.

ಮುಂದಿನ ಪಂದ್ಯಗಳಲ್ಲಿಯೂ ಗೆಲುವಿನತ್ತಲೇ ನಮ್ಮ ಗುರಿ. ರಾಷ್ಟ್ರೀಯ ತಂಡದಲ್ಲಿ ಆಡುವುದು ನನ್ನ ಗುರಿ’ ಎಂದು ಹೇಳುವ ಶ್ರೇಯಸ್‌ಗೆ ಭಾರತ ತಂಡದ ಮಾಜಿ ನಾಯಕ, ಲೆಗ್‌ಸ್ಪಿನ್ನರ್, ಕರ್ನಾಟಕದ ಅನಿಲ್ ಕುಂಬ್ಳೆ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರೆಂದರೆ ಅಚ್ಚುಮೆಚ್ಚು. ಶ್ರೇಯಸ್ ಆಟದಲ್ಲಿ ಈ ಇಬ್ಬರೂ ಆಟಗಾರರ ಛಾಪು ಎದ್ದು ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT