ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಂಜನೇಯ ಯಕ್ಷ ಸಪ್ತಾಹ’

Last Updated 30 ಮೇ 2016, 19:30 IST
ಅಕ್ಷರ ಗಾತ್ರ

ಮಹಾಲಕ್ಷ್ಮಿಪುರದ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ‘ಆಂಜನೇಯ ಯಕ್ಷ ಸಪ್ತಾಹ’ ಜೂನ್‌ 1ರಿಂದ 7ರ ವರೆಗೆ ನಡೆಯಲಿದೆ. ಕುಂಭಾಶಿಯ ಪೂರ್ಣಚಂದ್ರ ಯಕ್ಷ ಕಲಾ ಪ್ರತಿಷ್ಠಾನ ಹಾಗೂ ಅತಿಥಿ ಕಲಾವಿದರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ.

ತಂಡದ ಯಜಮಾನರಾಗಿರುವ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ಸಾಲಿಗ್ರಾಮ ಮೇಳದಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಹೊಸ ಪ್ರಸಂಗಗಳ ಭರಾಟೆಯಿಂದ ಬೇಸರಗೊಂಡು ಬಳಿಕ ಮೇಳ ತ್ಯಜಿಸಿದ್ದರು. ಪೌರಾಣಿಕ ಪ್ರಸಂಗಗಳ ಪ್ರದರ್ಶನಕ್ಕಾಗಿಯೇ 10 ವರ್ಷಗಳ ಹಿಂದೆ ಪೂರ್ಣಚಂದ್ರ ಮೇಳ ಸ್ಥಾಪಿಸಿದ್ದರು. ಅವರ ತಂಡವು ದೇಶ ವಿದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದೆ. ನಗರದಲ್ಲಿ ಮತ್ತೊಮ್ಮೆ ಪೌರಾಣಿಕ ಪ್ರಸಂಗಗಳ ಸವಿ ಉಣಿಸಲು ಸಜ್ಜಾಗಿದೆ.

ಪ್ರತಿದಿನ ಸಂಜೆ 6ರಿಂದ ಯಕ್ಷಗಾನ ನಡೆಯಲಿದ್ದು, ಉಚಿತ ಪ್ರವೇಶ ಇದೆ. ಜೂನ್‌ 1ರಂದು ‘ಭೀಷ್ಮ ಪರ್ವ‘, 2ರಂದು ‘ಭರತ– ಧರ್ಮಾಂಗದ’, 3ರಂದು ‘ರಾಮಾಂಜನೇಯ’, 4ರಂದು ‘ಶತಧನ್ವ’ (ಶ್ಯಮಂತಕಮಣಿ), 5ರಂದು ‘ದಕ್ಷ–ಚಂದ್ರ’, 6ರಂದು ‘ಕೃಷ್ಣಾರ್ಜುನ ಕಾಳಗ’, 7ರಂದು ‘ಕುಶಲವ ಪ್ರಸಂಗ’ ಪ್ರದರ್ಶನ ನಡೆಯಲಿದೆ. 7ರ ‘ಕುಶಲವ’ ಪ್ರದರ್ಶನದಲ್ಲಿ ಕುಶಲವರಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ತೋಟಿಮನೆ ಗಣಪತಿ ಹೆಗಡೆ, ರಾಮನಾಗಿ ಹಿರಿಯ ಕಲಾವಿದ ಕೃಷ್ಣಯಾಜಿ ಬಳ್ಕೂರು ಕಾಣಿಸಿಕೊಳ್ಳುವರು.

ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಕಲಾವಿದರಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ತೋಟಿಮನೆ ಗಣಪತಿ ಹೆಗಡೆ, ಮೂರೂರು ಸುಬ್ರಹ್ಮಣ್ಯ ಹೆಗಡೆ, ಚಪ್ಪರಮನೆ ಶ್ರೀಧರ ಹೆಗಡೆ, ಸಿದ್ಧಾಪುರ ಅಶೋಕ ಭಟ್‌ ಮತ್ತಿತರ ಕಲಾವಿದರು ಬಣ್ಣ ಹಚ್ಚಲಿದ್ದಾರೆ ಎಂದು ಸಂಘಟಕ ವಿನಾಯಕ ಭಟ್‌ ತಿಳಿಸಿದ್ದಾರೆ.

‘ಪೌರಾಣಿಕ ಯಕ್ಷಗಾನ ನಗರ ಪ್ರದೇಶದಲ್ಲಿ ನೈಜತೆ ಕಳೆದುಕೊಳ್ಳುತ್ತಿದೆ. ಪಾತ್ರದ ಔಚಿತ್ಯ, ಕಥೆಯ ಚೌಕಟ್ಟನ್ನು ಮೀರಿ ಹಲವಾರು ಪ್ರದರ್ಶನಗಳು ನಡೆಯುತ್ತಿವೆ. ಇದನ್ನು ಕಂಡು ನೊಂದ ಅಪ್ಪಟ ಯಕ್ಷಗಾನ ಅಭಿಮಾನಿಗಳಿಗಾಗಿ  ಈ ಸಪ್ತಾಹ ಆಯೋಜಿಸಲಾಗಿದೆ. ಉತ್ತಮ ಪೌರಾಣಿಕ ಕಥೆಗಳನ್ನು ಯಕ್ಷಗಾನೀಯವಾಗಿ ಪ್ರದರ್ಶಿಸಬಲ್ಲ ಸಮರ್ಥ ಹಿಮ್ಮೇಳ, ಯಕ್ಷದಿಗ್ಗಜರ ಮುಮ್ಮೇಳ ಪ್ರದರ್ಶನ ನೀಡಲಿದೆ’ ಎಂದು ಅವರು ತಿಳಿಸುತ್ತಾರೆ.

ಜೂನ್‌ 1ರಂದು ಸಂಜೆ ನಡೆಯುವ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಕೆ.ಗೋಪಾಲಯ್ಯ, ಉಪಮೇಯರ್‌ ಹೇಮಲತಾ, ಸಂಗೀತ ನಿರ್ದೇಶಕ ಹಂಸಲೇಖ, ಕಾಂಗ್ರೆಸ್‌ ಮುಖಂಡ ನೆ.ಲ.ನರೇಂದ್ರ ಬಾಬು ಸಂಗೀತ ವಿದುಷಿ ಸತ್ಯವತಿ ಟಿ.ಎಸ್‌ ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT