ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ವಿಶ್ವಕೋಶ’ಕ್ಕೆ ಇನ್ನು ಲೈಸೆನ್ಸ್ ಹಂಗಿಲ್ಲ

Last Updated 13 ಜುಲೈ 2014, 19:30 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಇದೇ ಮೊದಲ ಬಾರಿಗೆ ತನ್ನ ಮೂರು ದಶಕ­ಗಳಷ್ಟು ಹಳೆಯ ‘ಕನ್ನಡ ವಿಶ್ವಕೋಶ’ದ ಮೊದಲ ಆರು ಸಂಪುಟಗಳನ್ನು ‘ಕ್ರಿಯೇಟಿವ್ ಕಾಮನ್ಸ್ ಲೈಸನ್ಸ್’ನಡಿ (ಮುಕ್ತ ಪರವಾನಗಿ)  ಅಂತರ್ಜಾಲದ ವಿಕಿಪೀಡಿಯಾದಲ್ಲಿ ಬಿಡುಗಡೆ ಮಾಡಲಿದೆ.

ಇದಕ್ಕೆಂದೇ ಕಳೆದ ಫೆಬ್ರುವರಿಯಲ್ಲಿ ವಿಶ್ವವಿದ್ಯಾಲಯವು ಸಿಐಎಸ್‌ (ಸೆಂಟರ್ ಫಾರ್ ಇಂಟರ್‌ನೆಂಟ್‌ ಅಂಡ್ ಸೊಸೈಟಿ) ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ವಿಶ್ವಕೋಶದ ಆರು ಸಂಪುಟಗಳು ಇದೀಗ ಸಂಪೂರ್ಣ ಉಚಿತವಾಗಿ ಅಂತರ್ಜಾಲ ಓದುಗರಿಗೆ ಲಭ್ಯವಾಗುತ್ತಿವೆ.

ಇದೇ ರೀತಿ ಕನ್ನಡ ವಿಶ್ವವಿದ್ಯಾಲ­ಯವು ಕೂಡ ತನ್ನ ವಿಶ್ವಕೋಶಗಳನ್ನು ಕ್ರಿಯೇಟಿವ್ ಕಾಮನ್ಸ್‌ನಲ್ಲಿ ಬಿಡುಗಡೆ ಮಾಡಬೇಕೆಂದು ಕನ್ನಡ ವಿಕಿಪೀಡಿಯಾ ಸಮೂಹವು ಕೋರಿದೆ. ಆದರೆ, ಅದಕ್ಕೆ ವಿ.ವಿ ಇನ್ನೂ ಒಪ್ಪಿಗೆ ಸೂಚಿಸಿಲ್ಲ. ಎಲ್ಲ ವಿ.ವಿ., ಅಕಾಡೆಮಿ, ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತುಗಳು ತಯಾರಿಸಿದ ಮತ್ತು ಸರಕಾರದಿಂದ ಅನುದಾನ ಪಡೆದು ತಯಾರಾದ ಎಲ್ಲ ಮಾಹಿತಿ ಸಾಹಿತ್ಯಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡ­ಬೇಕು ಎಂಬುದು ಬಹುತೇಕರ ಒತ್ತಾಯವಾಗಿದೆ.

ಜುಲೈ 15ರಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆಯುವ ‘ಮುಕ್ತ ಜ್ಞಾನ ದಿನಾಚರಣೆ’ ಕಾರ್ಯ­ಕ್ರಮದಲ್ಲಿ ಕುಲಪತಿ ಡಾ.ಕೆ.ಎಸ್. ರಂಗಪ್ಪ ವಿಶ್ವಕೋಶವನ್ನು ಅಂತರ್ಜಾಲ­ದಲ್ಲಿ ಲೋಕಾರ್ಪಣೆ ಮಾಡುವರು.


ಏನಿದು ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್?: ಜ್ಞಾನ ಯಾರ ಸ್ವತ್ತೂ ಅಲ್ಲ. ಅದೊಂದು ಮುಕ್ತ ಹಾಗೂ ಸುಲಭ­ದಲ್ಲಿ ಎಲ್ಲರಿಗೂ ದಕ್ಕುವಂಥ­ದ್ದಾಗಿರಬೇಕು. ಇದಕ್ಕೆಂದೇ ಅವತಾರ­ವೆತ್ತಿದ್ದ ಅಂತರ್ಜಾಲ ‘ಲೈಸೆನ್ಸ್’ ಎಂಬ ಯಮಪಾಶಕ್ಕೆ ಸಿಕ್ಕಿ ನರಳುತ್ತಿದೆ. ಇದಕ್ಕೆ ಎಬೆನ್ ಮೊಗ್ಲೆನ್ ಎಂಬುವರು ‘ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್’ ಎಂಬ ಹೊಸ ಚಳವಳಿಯನ್ನೇ ಜಾಗತಿಕವಾಗಿ ಹುಟ್ಟು ಹಾಕಿದ್ದು, ಲೈಸೆನ್ಸ್ ಎಂಬ ಪರಿಕಲ್ಪನೆಯನ್ನೇ ತೊಡೆದುಹಾಕಲು ಶ್ರಮಿಸುತ್ತಿದ್ದಾರೆ.

ಇದರಡಿ ಮೈಸೂರು ವಿಶ್ವವಿದ್ಯಾ­ಲಯ ಇದೇ ಮೊದಲ ಬಾರಿಗೆ ವಿಕಿಪೀಡಿಯಾಗೆ ತನ್ನ ಆರು ಸಂಪುಟ­ಗಳನ್ನು ಜಾಗತಿಕ ಶಿಷ್ಟತೆಯಾದ ಯೂನಿಕೋಡ್‌ನಲ್ಲಿ ಮುಕ್ತಗೊಳಿಸ­ಲಿದೆ.

ಏನಿದು ವಿಶ್ವಕೋಶ?: ದೃಶ್ಯ ಮಾಧ್ಯಮಗಳ ಹಾವಳಿಯಲ್ಲಿ ವಿಶ್ವಕೋಶಗಳು ಎಂದರೆ ಏನು ಎಂದು ಕೇಳುವ ಯುವಜನರೂ ನಮ್ಮ ನಡುವೆ ಇದ್ದಾರೆ. ಗ್ರಂಥಾಲಯಗಳಲ್ಲಿ ದೂಳು ತಿನ್ನುತ್ತಾ ಎತ್ತರದ ಕಪಾಟುಗಳಲ್ಲಿ ಇಂದಿಗೂ ಇವುಗಳನ್ನು ಕಾಣ­ಬಹುದು. ಜ್ಞಾನದ ವಿವಿಧ ಶಾಖೆಗಳ ವಿವೇಚನೆಯುಳ್ಳ, ಸಾಮಾನ್ಯ­ವಾಗಿ ಬಿಡಿ ಲೇಖನಗಳನ್ನು ಅಕರಾದಿಯಾಗಿ ಒಳಗೊಂಡ ಭಂಡಾರವೇ ವಿಶ್ವಕೋಶ.

ಭರತನ ನಾಟ್ಯಶಾಸ್ತ್ರ ಬಹುಶಃ ಪ್ರಪಂಚದ ಮೊದಲ ವಿಶ್ವಕೋಶ. ನಿಜಗುಣ ಶಿವಯೋಗಿಯ ವಿವೇಕ ಚಿಂತಾಮಣಿ ಕನ್ನಡದ ಮೊದಲ ವಿಶ್ವಕೋಶ ಎನಿಸಿದೆ. ಇಂಗ್ಲಿಷ್‌ನ ಬ್ರಿಟಾನಿಕಾ ಎನ್‌ಸೈಕ್ಲೋ­ಪೀಡಿಯಾ ವಿಶ್ವಕೋಶ ಜಗತ್ತಿನಾದ್ಯಂತ ಹೆಸರುವಾಸಿ­ಯಾಗಿದೆ. 1768–-1771ರ ನಡುವೆ ಮೊದಲ ಬಾರಿಗೆ ಪ್ರಕಟವಾದ ಅದು ವಿಶ್ವದ ಅತ್ಯಂತ ಹಳೆಯ ವಿಶ್ವಕೋಶ ಕೂಡ ಹೌದು. 1931ರಲ್ಲಿ ಶಿವರಾಮ ಕಾರಂತರು ‘ಬಾಲಪ್ರಪಂಚ’ ಕೋಶ­ವನ್ನು ರಚಿಸಿದ್ದರು. ಎನ್‌ಸೈಕ್ಲೋ­ಪೀಡಿಯಾ ಬ್ರಿಟಾನಿಕ ಮಾದರಿಯಲ್ಲಿ ಮೈಸೂರು ವಿವಿ­ಯಲ್ಲಿ ಕನ್ನಡ ವಿಶ್ವ­ಕೋಶ ರಚಿಸುವ ಪ್ರಯತ್ನ1954ರಲ್ಲಿ ಆರಂಭವಾಯಿತು.

ಕುವೆಂಪು ಅವರ ನೇತೃತ್ವದಲ್ಲಿ ಮೈಸೂರು ವಿವಿಯು ಯೋಜನೆ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಿತು. 1954ರಿಂದ 1968ರವರೆಗೆ ಈ ಯೋಜನೆ ರಾಜ್ಯ ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿತ್ತು. ದೇಜಗೌ ಅವರು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ­ರಾಗಿದ್ದಾಗ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ, ಶಿಕ್ಷಣ ಸಚಿವ ಕೆ.ವಿ.ಶಂಕರಗೌಡ ಹಾಗೂ ಹಣಕಾಸು ಸಚಿವ ರಾಮಕೃಷ್ಣ ಹೆಗಡೆ ಅವರ ಮೂಲಕ ಮೈಸೂರು ವಿವಿಯ ಶಾಶ್ವತ ಯೋಜನೆಯಾಗಿ  ನೆಲೆಗೊಳ್ಳುವಂತೆ ಮಾಡಿದರು.

ಪ್ರೊ.­ದೇಜಗೌ ಅವರ ಮಾರ್ಗ­ದರ್ಶನ, ಪ್ರೊ.ಹಾ.ಮಾ. ನಾಯಕ ಅವರ ಸಾರಥ್ಯದಲ್ಲಿ ಕನ್ನಡ ವಿಶ್ವಕೋಶ ಪ್ರಕಟ­ಗೊಂಡಿತು. ಇದೀಗ ಇದನ್ನು ಅಂತರ್ಜಾಲಕ್ಕೆ ಮುಕ್ತವಾಗಿ ಹಂಚಲಾಗು­ತ್ತಿದೆ.ಕೆಲವು ಅಂತರ್ಜಾಲ ಕೊಂಡಿಗಳು ಹೀಗಿವೆ, ವಿಕಿಪೀಡಿಯ­ದಲ್ಲಿ ಮೈಸೂರು ವಿ.ವಿ.

ವಿಶ್ವಕೋಶ ಪರಿವರ್ತನೆ ಯೋಜನೆ - http://bit.ly/mysoreunivwp 
ವಿಕಿಸೋರ್ಸ್‌ನಲ್ಲಿ ಮೈಸೂರು ವಿ.ವಿ. ವಿಶ್ವಕೋಶ ಲೇಖನಗಳು - http://bit.ly/mysoreuniv

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT