ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಗಾರಗಟ್ಟಿ’ಯಲ್ಲಿ ನಿಕ್ಷೇಪ!

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಹುಲ್ಲಂಬಿಯ ಹತ್ತಿರದ ಬಂಗಾರಗಟ್ಟಿ ಅರಣ್ಯ ಪ್ರದೇಶವೀಗ  ಸುದ್ದಿಯಲ್ಲಿದೆ. ಅಲ್ಲಿ ಬಂಗಾರದ ನಿಕ್ಷೇಪವಿರುವುದು ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿದ ಒಂದಿಷ್ಟು ವಿಷಯಗಳು ಇಲ್ಲಿವೆ...

ಬಂಗಾರಗಟ್ಟಿ, ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಹುಲ್ಲಂಬಿಯ ಹತ್ತಿರವಿರುವ ಒಂದು ಅರಣ್ಯ ಪ್ರದೇಶ. ಇದು ಹುಲ್ಲಂಬಿಯಿಂದ ಎರಡು ಕಿ.ಮೀ. ದೂರದಲ್ಲಿದೆ.

ಈ ಪ್ರದೇಶಕ್ಕೆ ಬಂಗಾರಗಟ್ಟಿ ಎಂದೇಕೆ ಕರೆಯುತ್ತಾರೆ ಎಂಬ ಬಗ್ಗೆ ಇನ್ನೂ ಸರಿಯಾದ ಕಾರಣ ತಿಳಿದಿಲ್ಲ. ಪುರಾತನ ಕಲ್ಮೇಶ್ವರನ ಗುಡಿಯೊಂದೇ ಇಲ್ಲಿ ಕುರುಹಾಗಿ ನಿಂತಿದ್ದು, ಇಲ್ಲೊಂದು ಊರು ಇತ್ತು ಎಂದು ಊಹಿಸಬಹುದಾಗಿದೆಯಷ್ಟೇ.

ಪ್ರತಿವರ್ಷ ಮಳೆಗಾಲದ ಹೊತ್ತಿಗೆ ಇಲ್ಲಿ ಹುಲ್ಲಂಬಿಯ ಜನ ‘ಹೆಡಿಗೆ ಪರವ’ನ್ನು ಮಾಡುತ್ತಾರೆ. ಅಂದು ಪ್ರತಿಯೊಂದು ಮನೆಯವರು ಗಡಿಗೆಯಲ್ಲಿ ಅನ್ನದ ಹುಗ್ಗಿ ಮಾಡಿ, ಅದನ್ನು ಹೆಡಿಗೆಯಲ್ಲಿ ತುಂಬಿಕೊಂಡು ಕಲ್ಮೇಶ್ವರನಿಗೆ ನೈವೇದ್ಯ ಮಾಡಿ ಸಾಮೂಹಿಕ ದಾಸೋಹ ಮಾಡುವುದೇ ಹೆಡಿಗೆ ಪರವು. ಇದನ್ನು ಬಿಟ್ಟರೆ ಶಿವರಾತ್ರಿಯ ದಿನ ಊರಿನ ಒಂದೆರಡು ಮನೆತನಗಳು ಬುತ್ತಿ ಕಟ್ಟಿಕೊಂಡು ಕಲ್ಮೇಶ್ವರನಿಗೆ ಎಡೆ ಮಾಡಿ ಊಟ ಮಾಡಿ ಬರುತ್ತಾರೆ. ಈ ದೇವಾಲಯದ ಪೂಜಾರಿಗಳು ಈಗಲೂ ಹುಲ್ಲಂಬಿಯಲ್ಲಿದ್ದಾರೆ. ಅವರ ಮನೆಯ ಹೆಸರು ‘ಹನಸಿ’.

4೦–45 ವರ್ಷಗಳ ಹಿಂದೆ ಕೂಡಾ ಅಲ್ಲಿ ಹುಲಿ ಮತ್ತು ಕರಡಿಗಳ ಉಪಟಳ ಜಾಸ್ತಿ ಇತ್ತು. ಮೇಯಲು ಹೋದ ದನ-ಕರುಗಳನ್ನು ಹುಲಿಗಳು ತಿಂದು ಹಾಕಿದ್ದವು. ಕಲ್ಮೇಶ್ವರನ ಗುಡಿಯಲ್ಲಿಯೇ ಹುಲಿ ಬಂದು ವಾಸ ಮಾಡುತ್ತಿತ್ತೆಂದೂ ಊರಿನವರು ಹೇಳುತ್ತಿದ್ದರು. ಹುಲಿ-ಕರಡಿ ಗಳಂಥ ಕಾಡುಪ್ರಾಣಿಗಳ ಉಪಟಳದಿಂದಲೇ ಬಂಗಾರಗಟ್ಟಿಯ ಜನ ಆ ಊರನ್ನು ತೊರೆದು ಹತ್ತಿರದ ಹಳ್ಳಿಗಳಿಗೆ ವಲಸೆ ಹೋಗಿರುವ ಸಾಧ್ಯತೆ ಇದೆ.

ರಾಷ್ಟ್ರೀಯ ಭೂವಿಜ್ಞಾನ ಸಮೀಕ್ಷಾ ಇಲಾಖೆಯು ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ಅಲ್ಲಿ ಬ್ರಿಟಿಷರ ಆಡಳಿತದ ಕಾಲದಿಂದಲೂ ಚಿನ್ನದ ನಿಕ್ಷೇಪವಿರುವುದು ಪತ್ತೆಯಾಗಿದೆ. ಅಂದರೆ ಅಲ್ಲಿ ಚಿನ್ನದ ಅದಿರು ಇರುವುದು ಖಚಿತ. ಬ್ರಿಟಿಷರ ಆಡಳಿತದ ಕಾಲದಲ್ಲಿಯೇ ಈ ಭಾಗಕ್ಕೆ ಬಂಗಾರಗಟ್ಟಿ ಎಂಬ ಹೆಸರಿರುವುದನ್ನು ಗಮನಿಸಿದರೆ, ಆ ಕಾಲಕ್ಕೂ ಮೊದಲೇ ಅಲ್ಲಿ ಬಂಗಾರಕ್ಕೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿದ್ದವೆಂಬುದು ಖಚಿತವಾಗುತ್ತದೆ. ಇದನ್ನು ಗಮನಿಸಿದಾಗ ಅಲ್ಲಿ ಚಿನ್ನದ ನಿಕ್ಷೇಪವನ್ನು ಹೊರತೆಗೆಯುವ ಕ್ರಿಯೆ ಬಹಳ ಹಿಂದಿನಿಂದಲೂ ನಡೆಯುತ್ತಿತ್ತೆಂದು ಊಹಿಸಬಹುದಾಗಿದೆ.

ಈ ಊಹೆಗೆ ಪ್ರಬಲ ಸಾಕ್ಷಿಯೆಂದರೆ ಬಂಗಾರಗಟ್ಟಿ ಅರಣ್ಯದ ಗುಡ್ಡಗಳಲ್ಲಿ ಕಾಣಸಿಗುವ ‘ಜಲರ ಗುದ್ದು’. ಜಲರ-ಎಂದರೆ ಅರಣ್ಯಗಳಲ್ಲಿ ವಾಸಿಸುತ್ತಿದ್ದ ಆದಿವಾಸಿಗಳ ಒಂದು ಜನಾಂಗ. ಇವರು ಪಶ್ಚಿಮ ಘಟ್ಟದ ಈ ಗುಡ್ಡಗಾಡು ಪ್ರದೇಶಗಳಲ್ಲಿ ಹಿಂದೆ ವಾಸವಾಗಿದ್ದಿರಬೇಕು. ಅವರು ಈ ಸ್ಥಳದಲ್ಲಿ ಹಿಂದೆ ವಾಸವಾಗಿದ್ದರೆಂಬುದಕ್ಕೆ ಈಗ ಯಾವುದೇ  ಆಧಾರಗಳಿಲ್ಲ. ಆದರೆ , ಬಂಗಾರಗಟ್ಟಿಯ ಕಲ್ಮೇಶ್ವರನ ಗುಡಿಯ ಹಿಂದಿರುವ ಗುಡ್ಡಗಳ ನೆತ್ತಿ ಹಾಗೂ ಇಳಿಜಾರಿನ ಭಾಗಗಳಲ್ಲಿ ವಿಚಿತ್ರವಾದ ಗುದ್ದುಗಳಿವೆ. (ಗುದ್ದುಗಳೆಂದರೆ ಭಾವಿಯಂಥ ಆಕಾರದ ಆಳವಾದ ತಗ್ಗುಗಳು.) ಈ ಗುದ್ದುಗಳೇ ‘ಜಲರ ಗುದ್ದು’ಗಳು.

ಈ ‘ಜಲರ ಗುದ್ದು’ಗಳು ಬಂಗಾರಗಟ್ಟಿಯ ಗುಡ್ಡದ ಮೇಲ್ಭಾಗದಿಂದ ಆರಂಭವಾಗಿ, ಆಳದಲ್ಲಿ ಹಾಗೇ ಮುಂದುವರಿದು ಪಾತಾಳದ ಮೂಲಕವೇ ಅವು ಉಳವಿಯ ವರೆಗೆ ಹೋಗುತ್ತವೆಯೆಂದು ನಾವು ಚಿಕ್ಕವರಿದ್ದಾಗ ನಮ್ಮ ಗುರುಗಳು ಹೇಳುತ್ತಿದ್ದುದು. ಈಗಲೂ ಕಾಣಸಿಗುವ ಈ ‘ಜಲರ ಗುದ್ದು’ಗಳು ತುಂಬ ಕುತೂಹಲ ಹುಟ್ಟಿಸುತ್ತವೆ.  ಇವುಗಳಿಗೂ ಬಂಗಾರಗಟ್ಟಿಗೂ ಏನಾದರೂ ಸಂಬಂಧ ಇರಬಹುದೇ ಎಂಬ ಕುತೂಹಲವನ್ನೂ ಹುಟ್ಟಿಸುತ್ತವೆ.

ಅರಣ್ಯಮೂಲ ನಿವಾಸಿಗಳು ಗುಡ್ಡದ ಈ ಭಾಗದಲ್ಲಿ ಬಂಗಾರದ ನಿಕ್ಷೇಪವಿರುವುದನ್ನು ಪತ್ತೆ ಹಚ್ಚಿ, ಆಳವಾದ ಗುದ್ದುಗಳನ್ನು ತೋಡಿ ಅದನ್ನು ಹೊರತೆಗೆದಿರುವ ಸಾಧ್ಯತೆ ಇದೆ. ಇಲ್ಲವಾದರೆ ಇಂಥ ಆಳವಾದ ಗುದ್ದುಗಳು ಯಾವ ಕಾರಣಕ್ಕಾಗಿ ನಿರ್ಮಾಣವಾದವೆಂಬುದಕ್ಕೆ ಉತ್ತರವೇ ಇಲ್ಲ.

ಈ ‘ಜಲರ ಗುದ್ದು’ಗಳು ತುಂಬಾ ಆಳವಾಗಿವೆ ಎಂದು ಹೇಳುವುದನ್ನು ಕೇಳಿದರೆ, ಆ ಭಾಗದಲ್ಲಿ ಆಳವಾದ ಗಣಿಗಾರಿಕೆ ನಡೆಯುತ್ತಿ ತ್ತೆಂಬುದನ್ನು ಊಹಿಸಲು ಸಾಧ್ಯವಿದೆ. ಬಂಗಾರದ ಅದಿರನ್ನು ಹೊರತೆಗೆದು ಅದನ್ನು ಯಾವ  ರೀತಿಯಲ್ಲಿ ಸಂಸ್ಕರಿ ಸುತ್ತಿದ್ದರೋ ತಿಳಿಯದು. ಆದರೆ ಬಂಗಾರಕ್ಕೆ ಸಂಬಂಧಿಸಿದ ಆ ವಿದ್ಯಮಾನಗಳು ನಡೆದಿರಬಹುದೆಂಬುದು ಖಚಿತವಾಗುತ್ತದೆ. ಈ ಎಲ್ಲ ಹಿನ್ನೆಲೆ ಯಲ್ಲಿಯೇ ಹುಲ್ಲಂಬಿಯ ಪಕ್ಕದ ಆ ಅರಣ್ಯಕ್ಕೆ ‘ಬಂಗಾರಗಟ್ಟಿ’ -ಎಂದು ಹೆಸರು ಬಂದಿರಲು ಸಾಕು.

ರಾಷ್ಟ್ರೀಯ ಭೂವಿಜ್ಞಾನ ಸಮೀಕ್ಷಾ ಇಲಾಖೆಯು ಈ ಎಲ್ಲ ಹಿನ್ನೆಲೆಯಲ್ಲಿ ಬಂಗಾರಗಟ್ಟಿಯ ಗುಡ್ಡದಲ್ಲಿರುವ ‘ಜಲರ ಗುದ್ದು’ಗಳ ಬಗೆಗೆ ಆಳವಾದ ಸಂಶೋಧನೆ ನಡೆಸುವ ಅಗತ್ಯವಿದೆ. ಅಂದರೆ ಮಾತ್ರ ಅವುಗಳ ಬಗೆಗಿರುವ  ಊಹಾಪೋಹಗಳು ಹಾಗೂ ಭಾವನಾತ್ಮಕವಾದ ನಂಬುಗೆಗಳು ದೂರವಾಗಿ ವಾಸ್ತವಾಂಶ ಹೊರಬರಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ; ನಮ್ಮ ಪ್ರಾಚೀನ ಕಾಲದ ಮೂಲನಿವಾಸಿಗಳು ಚಿನ್ನದಂಥ ಬೆಲೆಬಾಳುವ ಲೋಹದ ಅದಿರನ್ನು ಹೊರತೆಗೆದು ಸಂಸ್ಕರಿಸುತ್ತಿದ್ದ ರೀತಿ, ನೈಪುಣ್ಯ ಹೇಗಿದ್ದವೆಂಬುದರ ಪರಿಚಯವೂ ಆಗುತ್ತದೆ. ಒಟ್ಟಾರೆ ಹುಲ್ಲಂಬಿಯ ಬಂಗಾರಗಟ್ಟಿಯ ಇತಿಹಾಸಕ್ಕೆ ಒಂದು ಹೊಸ ತಿರುವು ಇದರಿಂದ ಸಿಗಬಹುದಾಗಿದೆ.

ಭಯದ ನೆರಳಿನಲ್ಲಿ...

ಇದೆಲ್ಲ ಬೆಳವಣಿಗೆಯ ಹಿಂದೆ ಒಂದು ದೊಡ್ಡ ಭಯವೂ ಇದೆ. ಚಿನ್ನದ ನಿಕ್ಷೇಪ ಇದೆಯೆಂದು ಖಚಿತವಾದರೆ ಖಂಡಿತ  ಅಲ್ಲಿ ಬಂಡವಾಳ ಶಾಹಿಗಳು ಹಾಗೂ ಗಣಿಗಳ್ಳರು ಲಗ್ಗೆ ಇಡುತ್ತಾರೆ. ಅಲ್ಲಿ ಗಣಿಗಾರಿಕೆ ಆರಂಭವಾಗುತ್ತದೆ ಹಾಗೂ ಅದರ ಬೆನ್ನಲ್ಲೇ ಅಕ್ರಮ ಗಣಿಗಾರಿಕೆಯೂ ಶುರುವಾಗುತ್ತದೆ. ಅದಕ್ಕೆ ರಾಜಕಾರಣ ಸೇರುತ್ತದೆ. ಇದೆಲ್ಲದರ ಪರಿಣಾಮ ಹುಲ್ಲಂಬಿ ಹಾಗೂ ಸುತ್ತ- ಮುತ್ತಲಿನ ಊರುಗಳ ಮೇಲಾಗುತ್ತದೆ. ಬಂಗಾರಗಟ್ಟಿಯ ಗುಡ್ಡಗಳು ಕರಗಿ ಬಂಗಾರ ಹೊರಬಂದಂತೆ ಅಲ್ಲಿ ಸಮಸ್ತ ಪರಿಸರ ನಾಶವಾಗುತ್ತದೆ. ಜನಜೀವನದ ಮೇಲೆ ಹಲವಾರು ಕೆಟ್ಟ ಪರಿಣಾಮಗಳಾಗುತ್ತವೆ. ಪರಿಸರದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿರುವ ಜನತೆಯನ್ನು ಹಣ ಮತ್ತು ಕೆಟ್ಟ ರಾಜಕಾರಣಗಳು ಪ್ರಭಾವಿಸಿ ಮಾನವೀಯ ಮೌಲ್ಯಗಳು ಮಾರಾಟಗೊಳ್ಳುತ್ತವೆ.

‘ಬಂಗಾರ ಸಿಕ್ಕರೆ ಬದುಕು ಹಾಳಾಗುತ್ತದೆ’ -ಎಂದು ನಮ್ಮ ಊರಿನ ಹಿರಿಯರು ಹೇಳುತ್ತಿದ್ದ ಮಾತುಗಳು ಸತ್ಯವಾಗುತ್ತವೆ. ಬಂಗಾರಗಟ್ಟಿಯ ಬಂಗಾರದ ನಿಕ್ಷೇಪ ಇನ್ನೂ ಏನೇನು ಮಾಡುತ್ತದೆಯೋ! ಭವಿಷ್ಯ ಬಲ್ಲವರಾರು ?                                                                                                                       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT