ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಷ್ಟ್ರಕವಿ’ ಆಯ್ಕೆ ಗೊಂದಲ ಯಾಕೆ?

Last Updated 16 ಜನವರಿ 2015, 19:30 IST
ಅಕ್ಷರ ಗಾತ್ರ
ADVERTISEMENT

ಗೊಂದಲ ಇಲ್ಲ; ಆಯ್ಕೆ ಪ್ರಶ್ನಾರ್ಹವಲ್ಲ
‘ರಾಷ್ಟ್ರಕವಿ’ ಆಯ್ಕೆಗೆ ಸಂಬಂಧಿಸಿದಂತೆ ಏನೂ ಗೊಂದಲ ಇಲ್ಲ. ಸರ್ಕಾರ ನೇಮಿಸಿರುವ ಸಮಿತಿ ಎಲ್ಲ ದೃಷ್ಟಿ­ಯಿಂದಲೂ ಯೋಚಿಸಿ ಒಬ್ಬರನ್ನು ಆಯ್ಕೆ ಮಾಡು­ತ್ತದೆ. ಅದರಲ್ಲಿ ನನ್ನ ಅಭಿಪ್ರಾಯ ಮುಖ್ಯವಾಗುವುದಿಲ್ಲ. ಇದು ಬ್ರಿಟಿಷ್‌ ಕಾಲದ ಪದ್ಧತಿ ಎಂದು ದೂಷಿಸುವುದಾದರೆ, ಭೈರಪ್ಪ ಅವರನ್ನು ‘ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್‌’ ಹುದ್ದೆಗೆ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆಯಲ್ಲ, ಆ ವ್ಯವಸ್ಥೆ ಕೂಡ ಬ್ರಿಟಿಷರ ಕೊಡುಗೆಯಲ್ಲವೇ? ಅದನ್ನೇಕೆ ಪ್ರಶ್ನಿಸುತ್ತಿಲ್ಲ? ಅದು ದೇಶದ ಪದ್ಧತಿಯೇ? ಭೈರಪ್ಪ ಅವರ ಬದಲು ದೇವನೂರ ಮಹಾದೇವ ಅವರನ್ನು ಆಯ್ಕೆ ಮಾಡಬಹುದಿತ್ತು.

ಹಾಗೆ ಒಂದು ಹುದ್ದೆ ಕೊಟ್ಟಿರುವಾಗ ಕರ್ನಾಟಕದಲ್ಲಿ ಒಬ್ಬ ರಾಷ್ಟ್ರಕವಿಯನ್ನು ಏಕೆ ಆಯ್ಕೆ ಮಾಡಬಾರದು? ಇದು ಯುರೋಪಿಯನ್ ಸಂಸ್ಕೃತಿ ಎಂದು ಕುವೆಂಪು ಅವರು ಪಟ್ಟವನ್ನು ತಿರಸ್ಕರಿಸಬೇಕಿತ್ತಲ್ಲ? ಹಾಗೆ ನೋಡುವುದಾದರೆ ಹಲವು ದೇಶಗಳ ಸಂವಿಧಾನದಿಂದ ರೂಪುಗೊಂಡ ನಮ್ಮ ಸಂವಿಧಾನವನ್ನೇ ತಿರಸ್ಕರಿಸಬೇಕಲ್ಲವೇ?

ಸಮಿತಿ ಆಯ್ಕೆ ಪ್ರಶ್ನಾರ್ಹವಲ್ಲ. ಆದರೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಪ್ರತಿ­ಯೊಬ್ಬರಿಗೂ ಹಕ್ಕಿದೆ. ಪ್ರತಿ ರಾಜ್ಯ, ಪ್ರತಿ ಭಾಷೆಯಿಂದಲೂ ಒಬ್ಬೊಬ್ಬ ರಾಷ್ಟ್ರಕವಿ ಬರಬೇಕು. ದೇಶದಲ್ಲಿ ಎಲ್ಲ ಭಾಷೆ, ಎಲ್ಲ ಜಾತಿ, ಎಲ್ಲ ಧರ್ಮೀಯರೂ ಸಮಾನರು. ರಾಷ್ಟ್ರಕವಿ ಒಂದು ರಾಜ್ಯಕ್ಕೆ ಸಂಬಂಧಿಸಿದವರಲ್ಲ. ಆತ ಇಡೀ ರಾಷ್ಟ್ರಕ್ಕೆ ಸಲ್ಲುವ ಕವಿ. ತುಳು ಭಾಷೆಗೆ ಲಿಪಿ ಇಲ್ಲ. ಆದರೆ ಅದರಲ್ಲಿ ಅತ್ಯುತ್ತಮ ಕಾವ್ಯ ಮೂಡಿಸಿದಾತ ರಾಷ್ಟ್ರಕವಿಯಾಗುತ್ತಾನಲ್ಲವೇ?
–ಕೆ.ಬಿ.ಸಿದ್ಧಯ್ಯ, ಬರಹಗಾರರು, ತುಮಕೂರು

ಈ ಪರಂಪರೆ ನಿಲ್ಲಿಸಿ
ರಾಷ್ಟ್ರಕವಿ ಎಂದು ಸರ್ಕಾರ ಯಾರನ್ನೇ ಆಯ್ಕೆ ಮಾಡಿ­ದರೂ ಗೊಂದಲ ಖಚಿತ. ರಾಷ್ಟ್ರಕವಿಯನ್ನು ನಿರ್ಧರಿಸ­ಬೇಕಿರು­ವವರು ಓದುಗರು, ಅಭಿಮಾನಿಗಳು. ಜಿಎಸ್‌ಎಸ್‌ ಅವರ ಹಾಡುಗಳ ಜೀವಂತಿಕೆಯ ಕಾರಣ­ದಿಂದ ಅವರಿಗೆ ರಾಷ್ಟ್ರಕವಿ ಗೌರವ ಸಿಕ್ಕಿತು. ನಿಜ, ಅನೇಕ ಶ್ರೇಷ್ಠ ಕವಿಗಳ ಹಾಡನ್ನು ಜನ ಹಾಡುತ್ತಾರೆ. ಅನೇಕರು ಜನರನ್ನು ತಲುಪಿದ್ದಾರೆ. ಅವರಲ್ಲಿ ಶ್ರೇಷ್ಠರನ್ನು ಹೇಗೆ ಗುರುತಿಸುವುದು? ಸರ್ಕಾರ ಆಯ್ಕೆ ಮಾಡಿದರೂ, ಜನಮತಗಣನೆ ನಡೆಸಿದರೂ ಭಿನ್ನಾಭಿಪ್ರಾಯ ಸಹಜವಾಗಿಯೇ ಉದ್ಭವಿಸುತ್ತದೆ.

ಕಾವ್ಯದ ಶ್ರೇಷ್ಠತೆಯನ್ನು ಜನಮತಗಣನೆಯಿಂದ ಆಯ್ಕೆ ಮಾಡಲು ಸಾಧ್ಯವಿಲ್ಲ.  ಒಬ್ಬ ಕವಿಯನ್ನು ಈ ಪಟ್ಟದಲ್ಲಿ ಇರಿಸುವುದು, ಅವರ ನಂತರ ಬೇರೆಯವರನ್ನು ಆ ಜಾಗಕ್ಕೆ ಹುಡುಕುವುದು, ಆಸ್ಥಾನ ಕವಿಯ ಪರಂಪರೆಯಂತೆ ಕಾಣಿಸುತ್ತದೆ. ಅವರ ಆಯ್ಕೆಯ ಮಾನದಂಡಗಳೂ ಚರ್ಚಾಸ್ಪದ. ಇಲ್ಲಿ ಪ್ರಶ್ನೆಗಳೇ ಉದ್ಭವಿಸುತ್ತಾ ಹೋಗು­­ತ್ತವೆ. ಹೀಗಾಗಿ ಸರ್ಕಾರ ಮುತುವರ್ಜಿ ವಹಿಸಿ ರಾಷ್ಟ್ರಕವಿಯನ್ನು ಆಯ್ಕೆ ಮಾಡ­ಬೇಕಾದ ಅಗತ್ಯ ಕಂಡುಬರುತ್ತಿಲ್ಲ. ಈ ಪರಂಪರೆಯನ್ನು ಇಲ್ಲಿಗೇ ನಿಲ್ಲಿಸಿಬಿಡುವುದು ಲೇಸು.
–ಅಜಕ್ಕಳ ಗಿರೀಶ್ ಭಟ್‌, ವಿಮರ್ಶಕರು, ಬಂಟ್ವಾಳ

ಲಾಬಿಯ ಮುಜುಗರ
ರಾಷ್ಟ್ರಕವಿಯನ್ನು ಗುರುತಿಸುವ ಮಾನದಂಡಗಳು, ಅದ­ಕ್ಕಾಗಿ ರಚನೆ ಮಾಡಿರುವ ಸಮಿತಿ, ಅದರ ಮುಂದಿರುವ ಪ್ರಶ್ನೆ­ಗಳು ಜನಸಾಮಾನ್ಯರಿಗೆ ಹಾಸ್ಯಾಸ್ಪದವಾಗಿ ಕಾಣಿ­ಸುತ್ತವೆ. ಅತ್ಯಂತ ಗೌರವಯುತವಾಗಿ ದಕ್ಕಬೇಕಾದ ಸ್ಥಾನ­ವನ್ನು ಅರ್ಜಿ ಸಲ್ಲಿಸಿ ತೆಗೆದುಕೊಳ್ಳುವ ವ್ಯವಸ್ಥೆಗೆ ನನ್ನ ವಿರೋಧವಿದೆ.

ಗೋವಿಂದ ಪೈ, ಕುವೆಂಪು ಮತ್ತು ಜಿ.ಎಸ್‌.ಶಿವರುದ್ರಪ್ಪ ಅವರು ಅದ್ವಿತೀಯ ಕವಿಗಳಾಗಿದ್ದರು. ಇಡೀ ಸಮಾಜವನ್ನು ದಿಗ್ದರ್ಶಿಸುವ ಸಾರ್ವಕಾಲಿಕ ಕವನಗಳನ್ನು ನೀಡಿ­ದರು. ಎಲ್ಲ ಕವನಗಳೂ ವಿಭಿನ್ನ ದಾರ್ಶನಿಕ ಒಳನೋಟದ, ಜತೆಗೆ ಸಾಮಾ­ಜಿಕ ವಿಶಿಷ್ಟ ಅಭಿವ್ಯಕ್ತಿಯ ಪ್ರತೀಕಗಳಾಗಿದ್ದವು. ಆದರೆ, ವರ್ತಮಾನದಲ್ಲಿ ಒಬ್ಬ ಸಮ­ಕಾಲೀನ ಕವಿಯನ್ನು ರಾಷ್ಟ್ರಕವಿ ಎಂದು ಘೋಷಿಸುವುದು ಕವಿಯನ್ನೇ ಮುಜು­ಗರಕ್ಕೆ ಸಿಕ್ಕಿಸುವ ಪ್ರಯತ್ನದಂತೆ ಕಾಣುತ್ತದೆ.

ರಾಜ್ಯಕ್ಕೆ ಸೀಮಿತವಾದವರು ರಾಷ್ಟ್ರಕ್ಕೆ ಹೇಗೆ ಕವಿಯಾಗುತ್ತಾರೆ ಎಂಬ ಪ್ರಶ್ನೆಯನ್ನು ಒಪ್ಪು­ವಂತಿಲ್ಲ. ಎಲ್ಲರೂ ತಮ್ಮದೇ ಭಾಷೆಯಲ್ಲಿ ಬರೆದರೂ, ಈ ನೆಲಕ್ಕೆ ಸಂಬಂಧಿ­ಸಿದ್ದನ್ನು ಬರೆದರು. ಕವಿಗಳು ಒಂದು ಸೀಮೆಗೆ ಸೀಮಿತರಲ್ಲ. ಆದರೆ ಸರ್ಕಾರ ಅದನ್ನು ಘೋಷಣೆ ಮಾಡಲು ಮಾಡುತ್ತಿರುವ ತಡಕಾಟ ಇದೆಯಲ್ಲ ಅದು ಆಭಾಸವಾಗಿ ಕಾಣಿಸುತ್ತಿದೆ. ಅದರಲ್ಲಿರುವ ರಾಜಕಾರಣ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಲಾಬಿಯನ್ನು ಒಳಗೊಂಡ ವಿದ್ಯಮಾನ ತೀರಾ ಮುಜುಗರಕ್ಕೆ ಎಡೆಮಾಡುತ್ತಿದೆ.

ಜನರನ್ನು ತಲುಪುವ ಕವಿಗೆ ರಾಷ್ಟ್ರಕವಿ ಪಟ್ಟ ಸಿಗಲಾರದು. ಇಲ್ಲಿ ಜನರೇ ಆಯ್ಕೆ ಮಾಡಿದರೂ ಜನಸಾಮಾನ್ಯರ ಅಭಿಪ್ರಾಯ ಎಂದಾಗುವುದಿಲ್ಲ. ಏಕೆಂದರೆ ಸಾಹಿತ್ಯ ಸಂಸ್ಕೃತಿಯಲ್ಲಿ ಆಸಕ್ತಿಯಿರುವ, ರಾಜಕಾರಣದ ವಲಯಗಳು ಮಾತ್ರ ಅದಕ್ಕೆ ಪ್ರತಿಕ್ರಿಯಿಸುತ್ತವೆ. ಸೀಮಿತ ವಲಯದ ಆಯ್ಕೆ ಆಗುವ ಅಪಾಯ ಇರುತ್ತದೆ.
–ಕವಿತಾ ರೈ, ಕವಿಯತ್ರಿ, ಮಂಗಳೂರು

ಎಲ್ಲರೂ ನಾಯಕರು
ರಾಷ್ಟ್ರಪಕ್ಷಿ, ರಾಷ್ಟ್ರಪ್ರಾಣಿ, ರಾಷ್ಟ್ರಧ್ವಜ, ರಾಷ್ಟ್ರಕವಿ– ಯಾವುದಕ್ಕೂ ಮೂರ್ತತೆ ಇಲ್ಲ. ಮಹಾಕಾವ್ಯ, ಮಹಾಕವಿ ಎಂಬ ಪರಿಕಲ್ಪನೆಗಳನ್ನು ನಾನು ಒಪ್ಪುವುದಿಲ್ಲ. ಇದು ಯಾಜ­ಮಾನ್ಯ ಸಂಸ್ಕೃತಿಯನ್ನು ಒಪ್ಪಿಕೊಂಡಾಗ ಅದರಲ್ಲಿ ನಾಯಕ, ಖಳ­ನಾಯಕ ಇರಬೇಕು, ರಾಷ್ಟ್ರನಾಯಕ ಇರಬೇಕು ಎಂಬ ಕಲ್ಪನೆ ಬರುತ್ತದಲ್ಲ ಹಾಗೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ನಾಯಕರೇ. ಎಲ್ಲರ ಕಾವ್ಯ­ದಲ್ಲಿಯೂ ಮಹತ್ವದ ಅಂಶಗಳಿರುತ್ತವೆ. ಇಂದು ಮಹಾಕಾವ್ಯವನ್ನು ಯಾರೂ ಓದು­­ವು­ದಿಲ್ಲ. ಮಹಾಕವಿ ಕಲ್ಪನೆಯೇ ಬಿದ್ದು­ಹೋಗಿದೆ. ಯಾವುದು ಪದ್ಯ, ಯಾವುದು ಗದ್ಯ ಎನ್ನುವುದೇ ಚರ್ಚೆ­ಯಾ­ಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಮಹಾ­ಕವಿ, ಮಹಾಕೃತಿ ಎಂದು ಗುರುತಿಸು­ವು­ದನ್ನು ಒಪ್ಪಲಾಗುವುದಿಲ್ಲ. ಒಬ್ಬರು ಶ್ರೇಷ್ಠ, ಇನ್ನೊಬ್ಬರು ಕನಿಷ್ಠ ಎಂಬುದು ಇರ­ಬಾರದು ಎನ್ನುವುದು ಪ್ರಜಾಸತ್ತಾತ್ಮಕ ವಿಚಾರಧಾರೆ.

ಇದುವರೆಗೆ ನಡೆಸಿಕೊಂಡು ಬಂದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗು­ತ್ತೇವೆ ಎಂದು ಹಟ ಹಿಡಿದರೆ ಏನೂ ಮಾಡಲಾಗದು. ಹಾಗೆ ಮಾಡು­ವುದೇ ಆದರೆ, ರೈತ ಕುಟುಂಬದಿಂದ ಬಂದ, ಗ್ರಾಮೀಣ ಸೊಗಡನ್ನು ಚಿತ್ರಿ­ಸಿದ ಚೆನ್ನವೀರ ಕಣವಿ ಅಥವಾ 21ನೇ ಶತಮಾನದಲ್ಲಿ ಜನಪದ ಕಟ್ಟಿದ ಚಂದ್ರಶೇಖರ ಕಂಬಾರರು ಸೂಕ್ತರು. ಉತ್ತರ ಕರ್ನಾಟಕದ ಕವಿಯನ್ನು ಆಯ್ಕೆ ಮಾಡಿ­­ದರೆ ಪ್ರಾದೇ­ಶಿಕ ಸಮತೋಲನವೂ ಆಗುತ್ತದೆ. ಕೃಷಿ ಮತ್ತು ದೇಸಿ ಪರಂ­ಪರೆ­ಯನ್ನು ಎತ್ತಿ­ಹಿಡಿಯುವ ಮೂಲಕ ಆ ಪರಂಪರೆ ಬೆಳೆಸುತ್ತೇವೆ ಎನ್ನುವುದಾದರೆ ನನ್ನ ತಕರಾರಿಲ್ಲ.
–ಬಸವರಾಜ ಸಬರದ, ಬರಹಗಾರರು, ಕಲಬುರ್ಗಿ

ಸರ್ಕಾರ ಮುಟ್ಟಿದ್ದೆಲ್ಲ ಜಡ
ಜಿ.ಎಸ್‌.ಶಿವರುದ್ರಪ್ಪ ಅವರ ಕಾಲಕ್ಕೇ ಈ ಪದವಿ ಬೇಡ ಎನಿಸಿತ್ತು. ಅವರು ಕಾವ್ಯ ಕ್ಷೇತ್ರದಲ್ಲಿ ಮಾಡಿದ ಕೆಲಸದ ಕಾರಣ ಅದನ್ನು ಒಪ್ಪಬಹುದಾಯಿತು. ಈಗ ನಮ್ಮೆದುರಿಗೆ ಇರುವ ಸಂಪೂರ್ಣ ವೃತ್ತಿಪರ ಕವಿಗಳೆಂದರೆ ಚೆನ್ನವೀರ ಕಣವಿ ಮತ್ತು ನಿಸಾರ್‌ ಅಹಮದ್‌ ಇಬ್ಬರೇ. ಪ್ರಭುತ್ವದ ಮುಂದೆ ಮಂಡಿ­ಯೂರಿ ಕೂರುವ ಸ್ಥಿತಿ ಈ ರಾಷ್ಟ್ರಕವಿ ಪಟ್ಟ. ಹೀಗಾಗಿಯೇ ಇಂಗ್ಲೆಂಡ್‌­ನಲ್ಲಿಯೂ ಅದನ್ನು ನಿರಾಕರಿಸಿದ ಉದಾಹರಣೆಗಳಿವೆ.

ಲಂಕೇಶರು ಹೇಳಿದಂತೆ ಸರ್ಕಾರ ಯಾವುದನ್ನು ಮುಟ್ಟುತ್ತದೆಯೋ ಅದೆಲ್ಲಾ ಜಡವಾಗುತ್ತದೆ. ಆ ಜಡತ್ವದಿಂದ ದೂರ ಇದ್ದರೇನೇ ಒಳಿತು. ಒಂದು ವೇಳೆ ಆಯ್ಕೆ ಮಾಡಲೇ­ಬೇಕು ಎಂದಾದರೆ ಅದನ್ನು ಜನರ ಆಯ್ಕೆಗೆ ಬಿಡಲು ಸಾಧ್ಯವಿಲ್ಲ. ಏಕೆಂದರೆ ಈಗ ಸಾಮಾಜಿಕ ನಿಶ್ಚಿತತೆಗಳೇ ಕೆಲಸ ಮಾಡುತ್ತವೆ. ಎಲ್ಲದರಲ್ಲಿಯೂ ನಮಗೆ ಗೊತ್ತಿಲ್ಲ­ದಂತೆಯೇ ಮೀಸಲಾತಿ ಅನುಸರಿಸಿಕೊಂಡು ಬರುತ್ತಿದ್ದೇವೆ.

ಹೀಗಿರುವಾಗ ಹೇಗೆ ಒಬ್ಬರನ್ನು ಆಯ್ಕೆ ಮಾಡಲು ಸಾಧ್ಯ? ಬಹಿರಂಗವಾಗಿ ಅದನ್ನು ನಿರ್ಧರಿಸಲು ಆಗುವುದಿಲ್ಲ. ನಾನೂ ಸೇರಿದಂತೆ ಎಲ್ಲರೂ ಕಲುಷಿತಗೊಂಡಿದ್ದೇವೆ. ನಮ್ಮ ಆಯ್ಕೆಗಳು ಅಷ್ಟು ನಿರ್ದಿಷ್ಟ ಮತ್ತು ನಿರ್ದಾಕ್ಷಿಣ್ಯವಾಗಿ ಇರುತ್ತವೆ ಎಂದು ಭಾವಿಸಲು ಆಗುವುದಿಲ್ಲ. ಇದು ಗೊಂದಲಗಳಿಗೆ ಎಡೆ ಮಾಡಿಕೊಡುತ್ತದೆ. ಅಸಮಾಧಾನಗಳು ಉಳಿದುಕೊಳ್ಳುತ್ತವೆ. ಮಹಿಳೆಯರಿಗೆ ಅವಕಾಶ, ಜಾತಿ, ಪ್ರಾದೇಶಿಕತೆ ಮುಂತಾದ ಪ್ರಶ್ನೆಗಳು ಹುಟ್ಟುತ್ತವೆ, ಆದರೆ ಉತ್ತರ ಸಿಗುವುದಿಲ್ಲ. ಈ ಪದ್ಧತಿಯನ್ನು ನಿಲ್ಲಿಸಿದರೆ ಒಳ್ಳೆಯದು. ಇದರಿಂದ ಯಾವ ಪ್ರಯೋಜನವೂ ಇಲ್ಲ. ಜಿ.ಎಸ್‌.ಎಸ್‌ ಅವರಿಗೆ ಈ ಗೌರವ ಕೊಡುವಾಗಲೂ ಜಾತಿ ಪ್ರಶ್ನೆ ಎದ್ದಿತ್ತು. ಇಂಥ ಟೀಕೆಗಳಿಂದ ಒಳ್ಳೆಯ ವ್ಯಕ್ತಿತ್ವದ ಕಣವಿಯಂತವರ ಹೆಸರುಗಳೂ ಮುಕ್ಕಾಗುತ್ತವೆ.
–ತಾರಿಣಿ ಶುಭದಾಯಿನಿ, ಕವಿಯತ್ರಿ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT