ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾರ್ವಜನಿಕ ಸಾರಿಗೆ ಬಳಸಲು ಸಲಹೆ’

Last Updated 6 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ವಾಹನ ದಟ್ಟಣೆ, ವಾಯುಮಾಲಿನ್ಯ ತಗ್ಗಿಸಲು ಜನರು ಸಾರ್ವಜನಿಕ ಸಾರಿಗೆ ಸೇವೆಯನ್ನು ಹೆಚ್ಚು ಬಳಸಬೇಕು’ ಎಂದು ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಹೇಳಿದರು.

ವಿಪ್ರೊ ಸಂಸ್ಥೆಯು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಐದನೇ ‘ಅರ್ಥಿಯನ್ ಸ್ಪರ್ಧೆ’ಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘ನಿಯಮಿತವಾಗಿ ವಾಹನಗಳ ಮಾಲಿನ್ಯ ತಪಾಸಣೆ ನಡೆಸಬೇಕು. ಅಲ್ಲದೇ, ಒಬ್ಬರಿಗಿಂತ ಹೆಚ್ಚು ಪ್ರಯಾಣಿಕರು ಒಂದೇ ಕಡೆಗೆ ಹೋಗುವಾಗ ‘ಕಾರ್‌ ಪೂಲಿಂಗ್’ (ವಾಹನ ಹಂಚಿಕೊಂಡು) ಮೂಲಕ ಹೋದರೆ ವಾಯು ಮಾಲಿನ್ಯ ಕಡಿಮೆ ಮಾಡಬಹುದಾಗಿದೆ’ ಎಂದು ಹೇಳಿದರು.

‘ಅಭಿವೃದ್ಧಿ ಭರಾಟೆಯಲ್ಲಿ ಪರಿಸರ ನಾಶ ಮಾಡಲಾಗುತ್ತಿದೆ. ಅರಣ್ಯ ನಾಶದಿಂದಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ವಾರ್ಷಿಕ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ಜೀವ ವೈವಿಧ್ಯವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.

‘ಯಶಸ್ಸಿಗೆ ಯಾವುದೇ ಅಡ್ಡದಾರಿ ಇಲ್ಲ. ಕಠಿಣ ಪರಿಶ್ರಮ, ಸಾಧಿಸುವ ಹಸಿವು ಮತ್ತು ಸತತ ಪ್ರಯತ್ನದಿಂದ ಅಸಾಧ್ಯವಾದುದನ್ನು ಸಾಧಿಸಬಹುದು. ವಿಪ್ರೊ ಸಂಸ್ಥೆಯ ಯಶಸ್ಸಿಗೆ ಉದ್ಯೋಗಿಗಳ ಬದ್ಧತೆ, ಪರಿಶ್ರಮವೇ ಕಾರಣ’ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ವಿಭಾಗದ ಮುಖ್ಯ ಅಧಿಕಾರಿ ಅನುರಾಗ್‌ ಬೆಹರ್‌ ಮಾತನಾಡಿ, ‘ಪರಿಸರ ರಕ್ಷಣೆ, ನೀರಿನ ನಿರ್ವಹಣೆ, ಸುಸ್ಥಿರ ಅಭಿವೃದ್ಧಿಯ ಬಗ್ಗೆ ಶಾಲೆ ಮತ್ತು  ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ‘ಅರ್ಥಿಯನ್‌ ಸ್ಪರ್ಧೆ’ಯ ಮುಖ್ಯ ಉದ್ದೇಶವಾಗಿದೆ’ ಎಂದರು.

‘ನೀರಿನ ನಿರ್ವಹಣೆ ಮತ್ತು  ಜೀವ ವೈವಿಧ್ಯ  ಕುರಿತು ಈ ಬಾರಿಯ ಸ್ಪರ್ಧೆ ನಡೆಯಿತು. ಸ್ಪರ್ಧೆಗೆ ದೇಶದಾದ್ಯಂತ 1,300 ಶಾಲಾ ಕಾಲೇಜುಗಳು ಪ್ರವೇಶ ಕಳುಹಿಸಿದ್ದವು. ಅದರಲ್ಲಿ 10 ಶಾಲೆಗಳು ಮತ್ತು 10 ಕಾಲೇಜುಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಯಿತು’ ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ವಿಜೇತವಾದ ಪ್ರತಿ ಶಾಲೆಗೆ ತಲಾ ₹ 1 ಲಕ್ಷ ಮತ್ತು ಕಾಲೇಜಿಗೆ ₹ 1.50 ಲಕ್ಷ  ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು  ವಿತರಿಸಲಾಯಿತು.

***
ಸ್ಪರ್ಧೆಯಲ್ಲಿ ಭಾಗವಹಿಸಿದ್ದರಿಂದ ನೀರಿನ ನಿರ್ವಹಣೆ, ಜೀವ ವೈವಿಧ್ಯ ರಕ್ಷಣೆಯ ಮಹತ್ವ ತಿಳಿಯಿತು. ಎಲ್ಲದಕ್ಕೂ ಸರ್ಕಾರ, ಸಮಾಜವನ್ನು ದೂರುವ ಬದಲು ನಮ್ಮ ಜವಾಬ್ದಾರಿಯನ್ನು ಅರಿಯಬೇಕು.
-ಶಕ್ತಿ ನಂದನ್,
ಒಂಬತ್ತನೇ ತರಗತಿ ವಿದ್ಯಾರ್ಥಿ

***
ಸ್ಪರ್ಧೆಗೆ ಪ್ರಬಂಧ ಸಿದ್ಧಪಡಿಸುವಾಗ ಹೊಸ ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಇದರಿಂದ ತುಂಬಾ ಪ್ರಯೋಜನವಾಗಿದೆ. ಅಧ್ಯಾಪಕರು ಉತ್ತಮ ಪ್ರೋತ್ಸಾಹ ನೀಡಿದರು.
-ಶರಣ್ಯಾ,
ಎಂಟನೇ ತರಗತಿ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT