ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ರಿಂದ ಧಾರವಾಡ ಸಾಹಿತ್ಯ ಸಂಭ್ರಮ

Last Updated 16 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಧಾರವಾಡ: ನಗರದಲ್ಲಿ ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ‘ಧಾರವಾಡ ಸಾಹಿತ್ಯ ಸಂಭ್ರಮ’ವನ್ನು ಈ ಬಾರಿ ಜನವರಿ ೧೬ ರಿಂದ ಮೂರು ದಿನಗಳ ಕಾಲ ನಡೆಸಲು ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ನಿರ್ಧರಿಸಿದೆ.

ಕಾರ್ಯಕ್ರಮಗಳು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯಲಿವೆ.
‘ಸಮಾವೇಶದಲ್ಲಿ ಅಂದಾಜು ೨೦೦ ಜನ ಹಿರಿಯ –ಕಿರಿಯ ಸಾಹಿತಿಗಳು ಭಾಗವಹಿಸಲಿದ್ದಾರೆ. ಪತ್ತೇದಾರಿ ಕಾದಂಬರಿ ಈಗ ಏಕೆ ಬರುತ್ತಿಲ್ಲ?, ಲಲಿತ ಪ್ರಬಂಧಗಳ ಓದು, ಮಲೆಮಾದೇಶ್ವರ–-ಮಂಟೇಸ್ವಾಮಿ– ಬಿಳಿಗಿರಿ ರಂಗ ಜನಪದ ಕಾವ್ಯಗಳ ಹಾಡುಗಾರಿಕೆ–-ವ್ಯಾಖ್ಯಾನ, ಕನ್ನಡದಲ್ಲಿ ಅನುವಾದದ ಸಮಸ್ಯೆಗಳು, ಇತಿಹಾಸಕಾರರೊಂದಿಗೆ ಇತಿಹಾಸ­ಕಾರರ ಸಂವಾದ, ಸಾಹಿತ್ಯದ ಬೆಳವಣಿಗೆಯಲ್ಲಿ ಸಣ್ಣ ಪತ್ರಿಕೆಗಳ ಪಾತ್ರ, ವಿ. ಕೃ. ಗೋಕಾಕ ಮತ್ತು ಪುತಿನ ಕವಿತೆಗಳ ಓದು, ಕನ್ನಡ ಮಾಧ್ಯಮ–-ಮುಂದೇನು?, ಕನ್ನಡ ಭಾರತಗಳ ಓದು, ನಾಟಕಕಾರರೊಂದಿಗೆ ನಾಟಕಕಾರರ ಸಂವಾದ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸಾಹಿತ್ಯದ ಪಾಲು ಕಡಿಮೆಯಾ­ಗುತ್ತಿದೆಯೆ?, ಕನ್ನಡ ಪುಸ್ತಕಗಳ ಓದುಗರ ಒಲವುಗಳು, ಸಾಹಿತಿಗ­ಳೊಂದಿಗಿನ ಅಪರೂಪದ ಪ್ರಸಂಗಗಳು ಮುಂತಾದ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ’ ಎಂದು ಟ್ರಸ್ಟ್‌ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ ತಿಳಿಸಿದ್ದಾರೆ.

ಎಚ್.ಎಸ್. ಶಿವಪ್ರಕಾಶ, ಕೆ. ಎಸ್. ನಿಸಾರ್‌ ಅಹ್ಮದ್‌, ಜಯಂತ ಕಾಯ್ಕಿಣಿ, ಎಸ್‌. ಶೆಟ್ಟರ್, ವೈದೇಹಿ, ಅರವಿಂದ ಮಾಲಗತ್ತಿ, ಅಬ್ದುಲ್ ರಶೀದ್‌,  ಕೆ. ವಿ. ನಾರಾಯಣ, ಬಿ. ಟಿ.ಲಲಿತಾ ನಾಯಕ,  ಅ.ರಾ. ಮಿತ್ರ, ವಿವೇಕ ಶಾನಭಾಗ, ವಸುಧೇಂದ್ರ, ವೀಣಾ ಬನ್ನಂಜೆ, ಟಿ.ಪಿ.ಅಶೋಕ,  ಕೆ.ವಿ.ಅಕ್ಷರ,  ಎಂ. ಎಸ್. ಶ್ರೀರಾಮ್‌, ಯೋಗರಾಜ್‌ ಭಟ್ಟ, ಸುರೇಶ ಹೆಬ್ಳೀಕರ್, ಎಂ.ಎಸ್.ಮೂರ್ತಿ ಮತ್ತು ಇತರ ಪ್ರಮುಖ ಸಾಹಿತಿಗಳು ಭಾಗವಹಿಸಲಿದ್ದಾರೆ.

ಸಾಹಿತ್ಯ ಸಂಭ್ರಮದಲ್ಲಿ ಪಂ. ಎಂ.ವೆಂಕಟೇಶಕುಮಾರ ಅವರ ಸಂಗೀತ ಸುಧೆಯೂ ಹರಿದು ಬರಲಿದ್ದು, ಒಂದು ಸಿನಿಮಾ ಪ್ರದರ್ಶನವೂ ಇದೆ. ಮಾಸ್ತಿಯವರ ‘ಇಲ್ಲಿಯ ತೀರ್ಪು’ ಕಥೆಯನ್ನಾಧರಿಸಿದ ನಾಟಕವನ್ನು ಮೌನೇಶ ಬಡಿಗೇರ ತಂಡ ಪ್ರಸ್ತುತಪ­ಡಿಸಲಿದೆ. ವೈದೇಹಿಯವರ ‘ಗೂಡಿನೊಳ­ಗೊಂದು ಹಕ್ಕಿ’ ಕಥೆಯ ರಂಗರೂಪ (ವಿದ್ಯಾ ಹೆಗಡೆ) ಪ್ರದರ್ಶನವೂ ಇದೆ. ಶಂಕರ ಶಾನುಭಾಗರು ಆನಂದಕಂದ ಅವರ ಹಾಡುಗಳನ್ನು ಪ್ರಸ್ತುತಪಡಿ­ಸುವರು. ಜತೆಗೆ ಇನ್ನಷ್ಟು ಮನರಂಜನಾ ಕಾರ್ಯಕ್ರಮಗಳೂ ಇರಲಿವೆ ಎಂದು ಅವರು ತಿಳಿಸಿದ್ದಾರೆ.

ಇಂದಿನ ಕನ್ನಡ ಸಾಹಿತ್ಯ ಎದುರಿ­ಸುತ್ತಿರುವ ಸಮಸ್ಯೆಗಳನ್ನು ಕುರಿತಾದ ಚರ್ಚೆಯ ಜೊತೆಗೆ ಈ ಬಾರಿ, ಅಲಕ್ಷಿತ ಸಾಹಿತ್ಯ ಪ್ರಕಾರಗಳ ಬಗೆಗೆ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಜತೆಗೆ ಕನ್ನಡ ಸಾಹಿತ್ಯದ ಬಹುಮುಖಿ ಆಯಾಮಗಳನ್ನು ಒಳಗೊಳ್ಳುವುದು ಸಂಭ್ರಮದ ಉದ್ದೇಶವಾಗಿದೆ.  ಸಾಹಿತಿ–-ಸಾಹಿತಿಗಳ ನಡುವೆ ಖಾಸಗಿ ಸಂವಾದ, ಹಿರಿಯ ಲೇಖಕರ ಭೇಟಿ, ಪುಸ್ತಕ ಮಾರಾಟದ ವ್ಯವಸ್ಥೆಯೂ ಇದೆ ಎಂದು ಅವರು ಹೇಳಿದ್ದಾರೆ.

ನೋಂದಣಿ: ಪ್ರತಿನಿಧಿಗಳ ನೋಂದಣಿ  ಪ್ರಕ್ರಿಯೆ ಆರಂಭವಾಗಿದ್ದು, ೩೦೦ ಜನರಿಗೆ ಅವಕಾಶವಿದೆ. ಪ್ರತಿನಿಧಿ ಶುಲ್ಕ ₨ ೫೦೦. ಅರ್ಜಿ ವಿವರಗಳಿಗೆ ‘ಮನೋಹರ ಗ್ರಂಥ ಮಾಲಾ’, ಲಕ್ಷ್ಮೀ ಭವನ, ಸುಭಾಸ ರಸ್ತೆ, ಧಾರವಾಡ-– ೫೮೦೦೦೧ (ದೂರವಾಣಿ ಸಂಖ್ಯೆ : ೦೮೩೬–-೨೪೪೧೮೨೨) ಅಥವಾ ಹ.ವೆಂ. ಕಾಖಂಡಿಕಿ  (೯೪೮೧೭ ೨೯೮೨೨ / ೯೩೪೩೪ ೦೬೬೮೩) ಇವರನ್ನು ಸಂಪರ್ಕಿ­ಸಬಹುದು. ಅರ್ಜಿಗಳನ್ನು www. dharwadsahityasambhrama.com ವೆಬ್‌ಸೈಟ್‌ನಿಂದಲೂ ಪಡೆದು­ಕೊಳ್ಳ­ಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT