ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

85 ನಿಗಮ, ಮಂಡಳಿ ಪಟ್ಟಿ ಅಂತಿಮ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಹದಿನೆಂಟು ತಿಂಗಳ ಅವಧಿ ಗಾಗಿ ಸಿದ್ಧಪಡಿಸಿರುವ ರಾಜ್ಯದ 85 ನಿಗಮ, ಮಂಡಳಿಗಳ ಅಧ್ಯಕ್ಷರ ಪಟ್ಟಿಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಒಪ್ಪಿಗೆ ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅನುಮೋದನೆ ಬಳಿಕ ಹೆಸರು­ಗಳು ಅಧಿಕೃತವಾಗಿ ಪ್ರಕಟವಾ ಗಲಿವೆ. ಕೆಲವು ತಿಂಗಳಿಂದ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತ­ರನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ನಿಗಮ, ಮಂಡಳಿಗಳ ಸದಸ್ಯರ ಹೆಸರು­ಗಳೂ ಅಂತಿಮಗೊಂಡಿದ್ದು, ಅಧಿಕೃತ ಘೋಷ­ಣೆ­­ಯಷ್ಟೇ ಬಾಕಿ ಉಳಿದಿದೆ. ಸದಸ್ಯರ ಪಟ್ಟಿಗೆ ಹೈಕಮಾಂಡ್‌ ಅನು­ಮತಿ ಪಡೆಯಬೇಕಾದ ಅಗತ್ಯವಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ದೆಹಲಿಯಲ್ಲಿ ಶುಕ್ರವಾರ ರಾಹುಲ್‌ ಗಾಂಧಿ ಅವ ರನ್ನು ಭೇಟಿಯಾಗಿ ನಿಗಮ, ಮಂಡಳಿ ಅಧ್ಯಕ್ಷರ ಪಟ್ಟಿಗೆ ಒಪ್ಪಿಗೆ ಪಡೆದರು. ಕಾಂಗ್ರೆಸ್‌ ಉಪಾಧ್ಯಕ್ಷರೇ ಖುದ್ದು ಪಟ್ಟಿಯನ್ನು ಸೋನಿಯಾ ಅವರ ಬಳಿ ಕೊಂಡೊಯ್ದು ಅನುಮೋದನೆ ಪಡೆಯಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನಿಗಮ, ಮಂಡಳಿಗಳಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿ­ಗಳು, ನಿಷ್ಠಾವಂತ ಕಾರ್ಯಕರ್ತರಿಗೆ ಆದ್ಯತೆ ಕೊಡಲಾಗಿದೆ. ಹಾಲಿ ಶಾಸ­ಕರು, ಚುನಾವಣೆಯಲ್ಲಿ ಸೋತವರಿಗೆ ಮಣೆ ಹಾಕಿಲ್ಲ.

ಕಳೆದ ಚುನಾವಣೆ­ಯಲ್ಲಿ ಕಣದಿಂದ ದೂರ ಉಳಿದ ಕೆಲವು ಮಾಜಿ ಶಾಸಕರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶಾಸಕರಿಗೆ ನಿಗಮ ಮತ್ತು ಮಂಡಳಿಗಳಲ್ಲಿ ಅವಕಾಶ ಕೊಡುವುದು ಬೇಡ. ಅವರು ಕ್ಷೇತ್ರಗಳಲ್ಲಿ ಕೆಲಸ ಮಾಡಲಿ ಎಂದು ರಾಹುಲ್‌ ಸೂಚಿಸಿದ್ದಾರೆ.

ಈಗ ನೇಮಕಗೊಳ್ಳುವ ಅಧ್ಯಕ್ಷರು, ಸದಸ್ಯರ ಅವಧಿ 18 ತಿಂಗಳು. ಉಳಿದ ಅವಧಿಗೆ ಇನ್ನಷ್ಟು ಮುಖಂಡರು, ಕಾರ್ಯ­ಕರ್ತರಿಗೆ ಅವಕಾಶ ನೀಡಲಾ­ಗುವುದು ಎಂದು ಮೂಲಗಳು ವಿವರಿಸಿವೆ.

ಸಾಮಾಜಿಕ ನ್ಯಾಯ ಸಿದ್ಧಾಂತ ಪಾಲನೆ: ಕಾಂಗ್ರೆಸ್‌ ಮೊದ­ಲಿ­ನಿಂದಲೂ ನಂಬಿ­ರುವ ಸಾಮಾಜಿಕ ನ್ಯಾಯ ಸಿದ್ಧಾಂತ­ವನ್ನು ನಿಗಮ, ಮಂಡಳಿ ನೇಮಕದಲ್ಲೂ ಪಾಲಿಸಲಾಗಿದೆ. ಎಲ್ಲ ಜಿಲ್ಲೆ, ಜಾತಿ­ಗಳಿಗೂ ಪ್ರಾತಿನಿಧ್ಯ ಕೊಡಲಾಗಿದೆ. ಅಲ್ಪ­ಸಂಖ್ಯಾತ ಮುಸ್ಲಿಂ, ಕ್ರೈಸ್ತ ಮತ್ತು ಜೈನ ಸಮಾಜಕ್ಕೂ ಅವರವರ ಜನ­ಸಂಖ್ಯೆಗೆ ಅನುಗುಣವಾಗಿ ಸ್ಥಾನಮಾನ ಕಲ್ಪಿಸಲಾಗಿದೆ ಎಂದೂ ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಮತ್ತು ಪಿಸಿಸಿ ಅಧ್ಯಕ್ಷರು ಜತೆಗೂಡಿ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಆರು ಜಿಲ್ಲಾ ಅಧ್ಯಕ್ಷರಿ­ದ್ದಾರೆ. ಕೆಲವು ಜಿಲ್ಲಾ ಅಧ್ಯಕ್ಷರು ವಿಧಾನಸಭೆ, ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ಚುನಾವಣೆಯಲ್ಲಿ ಅನೇಕರು ಸೋತಿ­ದ್ದಾರೆ. ಪ್ರದೇಶ ಕಾಂಗ್ರೆಸ್‌ ಸಮಿತಿ ಪದಾಧಿ­ಕಾರಿಗಳಲ್ಲಿ ಸುಮಾರು 14 ಜನರಿಗೆ ಅವಕಾಶ ಸಿಕ್ಕಿದೆ. 40 ಪದಾಧಿ­ಕಾರಿ­ಗಳು ಶಾಸಕ­ರಾಗಿ ಆಯ್ಕೆಯಾಗಿದ್ದಾರೆ. ಕೆಲವರು ಚುನಾವಣೆಯಲ್ಲಿ ಸೋತಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಪ್ರತಿಯೊಂದು ಜಾತಿಯನ್ನು ಗಮನದಲ್ಲಿ ಇಟ್ಟು­ಕೊಂಡು ನೇಮಕ ಮಾಡಲಾಗಿದೆ. ಯಾವ ಸಮುದಾಯಕ್ಕೂ ಅನ್ಯಾಯ­­ವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಬೆಳಗಾವಿ, ತುಮಕೂರು ಹಾಗೂ ಮೈಸೂರು ಸೇರಿ ಕೆಲವು ಜಿಲ್ಲೆಗಳಿಗೆ ಸಹಜವಾಗಿಯೇ ಹೆಚ್ಚು ಸ್ಥಾನ ನೀಡಲಾಗಿದೆ. ಯುವಕರಿಗೆ ಮತ್ತು ಮಹಿಳೆಯರಿಗೆ ತಲಾ ಶೇ. 25ರಷ್ಟು ಸ್ಥಾನಗಳನ್ನು ಒದಗಿಸಲಾಗಿದೆ. ಸಾಮಾಜಿಕವಾಗಿ ಪ್ರಬಲವಾಗಿರುವ ಲಿಂಗಾಯತ ಮತ್ತು ಒಕ್ಕಲಿಗ ಸಮಾಜಕ್ಕೆ ಶೇಕಡಾವಾರು ಜನಸಂಖ್ಯೆಗಿಂತ ಕಡಿಮೆ ಸ್ಥಾನಗಳನ್ನು ಕೊಡಲಾಗಿದೆ.

ಲಿಂಗಾಯತರಿಗೆ ಶೇ 13 (ಜನಸಂಖ್ಯೆ ಶೇ. 16) ಒಕ್ಕಲಿಗರಿಗೆ ಶೇ 11 (ಜನಸಂಖ್ಯೆ ಶೇ 14) ರಷ್ಟು ಅವಕಾಶ ಸಿಕ್ಕಿದೆ. ಸಚಿವ ಸಂಪುಟದಲ್ಲಿ ಇವೆರಡೂ ಸಮುದಾಯಗಳು ಅರ್ಧಕ್ಕಿಂತ ಹೆಚ್ಚು ಪಾಲು ಪಡೆದುಕೊಂಡಿವೆ. ಈ ಉದ್ದೇಶದಿಂದ ನಿಗಮ, ಮಂಡಳಿ­ಗಳಲ್ಲಿ ಕಡಿಮೆ ಆದ್ಯತೆ ದೊರೆತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಪಟ್ಟಿ ಅಂತಿಮಗೊಂಡ ಬಳಿಕವೂ ಕಾಂಗ್ರೆಸ್‌ ಆಕಾಂಕ್ಷಿಗಳ ಗುಂಪು ದೆಹಲಿ ಕರ್ನಾಟಕ ಭವನದಲ್ಲಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರನ್ನು ಮುತ್ತಿ­ಕೊಂಡಿತ್ತು. ಒಂದೆರಡು ದಿನದಲ್ಲಿ ಹೆಸರು ಪ್ರಕಟವಾಗಲಿದೆ ಎಂದು ಪರಮೇಶ್ವರ್‌ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT