ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಕಾಲದ ವಿವೇಕ

Last Updated 12 ಜನವರಿ 2013, 19:59 IST
ಅಕ್ಷರ ಗಾತ್ರ

ಜನವರಿ 12 ವಿವೇಕಾನಂದರ ಜನ್ಮದಿನ; 2013ಕ್ಕೆ 150 ವರ್ಷಗಳು ತುಂಬಿದ ಕಾಲಘಟ್ಟ. ಹೀಗಾಗಿಯೇ ಈ ವರ್ಷದ ಜನ್ಮದಿನಕ್ಕೆ ವಿಶೇಷ ಮಹತ್ವ. ಇಷ್ಟು ವರ್ಷಗಳ ಅವಧಿಯಲ್ಲಿ ವಿವೇಕಾನಂದರು ಯಾರ‌್ಯಾರಿಗೆ ಹೇಗೆ ಕಂಡರು, ಹೇಗೆ ಬೆಳಕಾದರು, ಹೇಗೆ ಬಳಕೆಯಾದರು ಎಂಬ ಪ್ರಶ್ನೆಗಳಿಗೂ ಅಷ್ಟೇ ಮಹತ್ವ ಇದೆಯೆಂದು ನಾನು ಭಾವಿಸುತ್ತೇನೆ.

ನನ್ನ ವಿದ್ಯಾರ್ಥಿ ದಿನಗಳಲ್ಲಿ ವಿವೇಕಾನಂದರ ಹೆಸರೇ ಒಂದು ರೋಮಾಂಚನವಾಗಿತ್ತು; ಯಾಕೆಂದರೆ ರೋಮಾಂಚನಕ್ಕಾಗಿಯೇ ಅವರ ಹೆಸರು ಹೆಚ್ಚು ಬಳಕೆಯಾಗುತ್ತಿತ್ತು. ವೇದಿಕೆ ಮೇಲಿನ ಭಾಷಣಗಳಲ್ಲಿ ವಿವೇಕಾನಂದರ ವಿಚಾರಗಳಿಗಿಂತ ಹೆಚ್ಚಾಗಿ ಅವರನ್ನು ಹಿಂದೂಧರ್ಮದ ಧೀರ ಎಂದು ಮಾತ್ರ ಹೇಳಲಾಗುತ್ತಿತ್ತು. ಷಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ `ಸೋದರ ಸೋದರಿಯರೇ' ಎಂದು ಸಂಬೋಧಿಸಿ ಭಾಷಣವನ್ನು ಆರಂಭ ಮಾಡಿದ ರೀತಿಯನ್ನು ರೋಮಾಂಚಕಾರಿಯಾಗಿ ನಿರೂಪಿಸಲಾಗುತ್ತಿತ್ತು.

ಅಷ್ಟೇ ಆಗಿದ್ದರೆ ಪರವಾಗಿಲ್ಲ; `ಸೋದರ ಸೋದರಿಯರೇ' ಎಂಬ ಸಂಬೋಧ ವಾಚಕವು ಹಿಂದೂ ಧರ್ಮದ್ದು ಮಾತ್ರವೆಂದೂ ಪಾಶ್ಚಾತ್ಯರಿಗೆ ಈ ರೀತಿಯ ವಾಚಕಗಳ ಸಂಬಂಧವೇ ಇಲ್ಲವೆಂದೂ ಹೀಗಾಗಿ ಹಿಂದೂಧರ್ಮ ಶ್ರೇಷ್ಠವೆಂದೂ ಪ್ರತಿಪಾದಿಸಲಾಗುತ್ತಿತ್ತು. ವಿದ್ಯಾರ್ಥಿದೆಸೆಯಲ್ಲಿದ್ದ ನಾನು ಅದನ್ನಷ್ಟೇ ನಂಬಿದ್ದು ಸಹಜವಾಗಿತ್ತು. ವಿವೇಕಾನಂದರನ್ನು ಹಿಂದೂಧರ್ಮದ ಅಧಿಕೃತ ಪ್ರತಿನಿಧಿಯಾಗಿ ಕಳಿಸಲಾಗಿದೆಯೆಂದೇ ನಾನು ಭಾವಿಸಿದ್ದೆ. ನನ್ನಂಥವರಲ್ಲಿ ಮೂಡಿಸಿದ ಅಭಿಪ್ರಾಯವೂ ಅದೇ ರೀತಿಯಲ್ಲಿತ್ತು. ಆದರೆ ಆನಂತರ ನನಗೆ ಗೊತ್ತಾಯಿತು- ವಿವೇಕಾನಂದರು ಹಿಂದೂಧರ್ಮದ ಅಧಿಕೃತ ಪ್ರತಿನಿಧಿಯಾಗಿ ಹೋಗಿರಲಿಲ್ಲ; ಅಧಿಕೃತ ಪ್ರತಿನಿಧಿಗಳು ಬೇರೆ ಇದ್ದರು. ಅವರ‌್ಯಾರೂ `ಸೋದರ ಸೋದರಿಯರೇ' ಎಂದು ಸಂಬೋಧಿಸಲಿಲ್ಲ!

ಹೀಗಾಗಿ `ಸೋದರ ಸೋದರಿಯರೇ' ಎಂಬ ಸಂಬೋಧವಾಚಕವು ಧಾರ್ಮಿಕ ಪ್ರಾತಿನಿಧ್ಯವಲ್ಲ, ವಿವೇಕಾನಂದರ ವಿಶಿಷ್ಟ ಪ್ರತೀಕ.
ಹೌದು; ವಿವೇಕಾನಂದರು ಷಿಕಾಗೊ ಸರ್ವಧರ್ಮ ಸಮ್ಮೇಳನಕ್ಕೆ ಹಿಂದೂಧರ್ಮದ ಅಧಿಕೃತ ಪ್ರತಿನಿಧಿಯಾಗಿ ಹೋಗಿರಲಿಲ್ಲ. ಹಾಗಾದರೆ ಹೋದದ್ದು ಹೇಗೆ ಮತ್ತು ಯಾಕೆ? ಕುವೆಂಪು ಅವರು ತಮ್ಮ `ಸ್ವಾಮಿ ವಿವೇಕಾನಂದ' ಪುಸ್ತಕದಲ್ಲಿ ಈ ಸಂದರ್ಭವನ್ನು ವಿವರಿಸಿದ್ದಾರೆ: 1893ರ ಜನವರಿಯಲ್ಲಿ ಕನ್ಯಾಕುಮಾರಿಗೆ ಬಂದ ವಿವೇಕಾನಂದರು ಸಮುದ್ರದಲ್ಲಿ ಈಜಿ ಒಂದು ಬಂಡೆಯನ್ನು ತಲುಪಿ, ಅಲ್ಲಿ ಧ್ಯಾನಸ್ಥರಾಗುತ್ತಾರೆ.

ಆನಂತರ ಅಲ್ಲಿಂದಲೇ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ಬಡತನಕ್ಕೆ ಸಿಕ್ಕಿ ಸೊರಗುತ್ತಿರುವ ಜನಸಾಮಾನ್ಯರ ಸ್ಥಿತಿಯನ್ನು ನೆನೆದು ಸಂಕಟಪಡುತ್ತಾರೆ. “ಅರಸರ ಅರಮನೆಗಳಲ್ಲಿ ಸಜ್ಜೆಗಳ ಮೇಲೆ ಪವಡಿಸಿದ್ದೇನೆ. ತಿರುಕರ ಗುಡಿಸಲುಗಳಲ್ಲಿ ನೆಲದ ಮೇಲೆ ಮಲಗಿದ್ದೇನೆ. ಭಾರತಮಾತೆಯನ್ನು ಆಪಾದಮಸ್ತಕ ಅರಿತಿದ್ದೇನೆ. ಐಶ್ವರ್ಯದಲ್ಲಿ ಓಲಾಡುತ್ತಿರುವ ಪಶ್ಚಿಮ ದೇಶಗಳಿಗೆ ಹೋಗುವೆನು. ನನ್ನ ಮೇಧಾಶಕ್ತಿಯಿಂದ ಧನಾರ್ಜನೆ ಮಾಡುವೆನು. ಸನ್ಯಾಸಿ ಧರ್ಮಕ್ಕೆ ವಿರುದ್ಧವಾಗಿ ಧನ ಸಂಪಾದನೆ ಮಾಡುವೆನು. ದರಿದ್ರನಾರಾಯಣರ ಸೇವೆ ಮಾಡುವೆನು”- (ಪು. 16).
ಭಾರತದ ಬಡವರ ಸೇವೆಗೆ ಪಶ್ಚಿಮದ ಶ್ರೀಮಂತರಿಂದ ಧನ ಸಂಗ್ರಹ ಮಾಡಲು, ಆ ಉದ್ದೇಶಕ್ಕಾಗಿ, ತಮ್ಮ ವೇದಾಂತ ಜ್ಞಾನವನ್ನು ಧಾರೆಯೆರೆಯಲು ಸಂಕಲ್ಪಿಸಿ ವಿವೇಕಾನಂದರು ವಿದೇಶಕ್ಕೆ ಹೊರಟರು.; ಸರ್ವಧರ್ಮ ಸಮ್ಮೇಳನದಲ್ಲಿ ವೈಯಕ್ತಿಕ ನೆಲೆಯಲ್ಲಿ ಭಾಗವಹಿಸಲು ನಿರ್ಧರಿಸಿದರು.

ಅವರಿಗೆ ಮೇತ್ರಿ ಮಹಾರಾಯರು ವಿದೇಶ ಪ್ರವಾಸಕ್ಕೆ ಧನಸಹಾಯ ಮಾಡಿದರು. (ಡಾ. ಅಂಬೇಡ್ಕರ್ ಮತ್ತು ವಿವೇಕಾನಂದ ಇಬ್ಬರಿಗೂ ಬೇರೆ ಬೇರೆ ಮಹಾರಾಜರೇ ವಿದೇಶ ಪ್ರಯಾಣಕ್ಕೆ ಸಹಕರಿಸಿದ್ದನ್ನು ಮತ್ತು ಇವರಿಬ್ಬರೂ ಹಿಂದೂ ಧರ್ಮವನ್ನು ವಿಮರ್ಶೆಗೊಡ್ಡಿದ ರೀತಿಯನ್ನು ಡಾ. ವೈ.ಬಿ.ಹಿಮ್ಮಡಿ ಅವರು ತಮ್ಮ `ವಿವೇಕಾನಂದ ಅಂಬೇಡ್ಕರ್ ಧಾರ್ಮಿಕ ವಿಚಾರಧಾರೆ' ಕೃತಿಯಲ್ಲಿ ವಿಶ್ಲೇಷಿಸಿರುವುದನ್ನು ಗಮನಿಸಬಹುದು).ಅಮೆರಿಕ ತಲುಪಿದ ಮೇಲೆ ವಿವೇಕಾನಂದರಿಗೆ ಗೊತ್ತಾಗುತ್ತದೆ- ಸರ್ವಧರ್ಮ ಸಮ್ಮೇಳನವು ಮೂರು ತಿಂಗಳು ಮುಂದಕ್ಕೆ ಹೋಗಿದೆ ಎಂದು. ಇದ್ದ ದುಡ್ಡು ಖರ್ಚಾಗಿ ವಿವೇಕಾನಂದರು ಅಕ್ಷರಶಃ ಬೀದಿಗೆ ಬೀಳುತ್ತಾರೆ; ಬಾಸ್ಟನ್ನಿಗೆ ಹೋಗುವಾಗ ಮಿಸ್ ಕಾಟೆ ಸಾನ್‌ಬಾರ್ನ್ ಎಂಬ ಶ್ರೀಮಂತ ಮಹಿಳೆಯ ಪರಿಚಯವಾಗುತ್ತದೆ.

ಆಕೆ ವಿವೇಕಾನಂದರಿಗೆ ಆಶ್ರಯ ನೀಡಿದ್ದಲ್ಲದೆ ಪಾಶ್ಚಾತ್ಯ ಉಡುಪು ಧರಿಸುವಂತೆ ಮಾಡುತ್ತಾಳೆ. ಇಷ್ಟವಿಲ್ಲದ ಉಡುಪಿನಲ್ಲಿ ಸ್ವಲ್ಪಕಾಲ ತಳ್ಳಿದ ವಿವೇಕಾನಂದರಿಗೆ ಜೆ.ಹೆಚ್.ರೈಟ್ ಎಂಬ ವಿದ್ವಾಂಸರ ಪರಿಚಯವಾಗಿ ಅವರು ಷಿಕಾಗೊ ಸರ್ವಧರ್ಮ ಸಮ್ಮೇಳನದ ಮುಖ್ಯ ಸಂಘಟಕರಿಗೆ ಪರಿಚಯಪತ್ರ ಬರೆದು ವಿವೇಕಾನಂದರನ್ನು ಕಳಿಸುತ್ತಾರೆ. ಆದರೆ ಅಲ್ಲಿಗೆ ಹೋಗುವ ವೇಳೆಗೆ ವಿವೇಕಾನಂದರು ಪರಿಚಯ ಪತ್ರವನ್ನು ಕಳೆದುಕೊಳ್ಳುತ್ತಾರೆ. ಹರಸಾಹಸಪಟ್ಟು ಸರ್ವಧರ್ಮ ಸಮ್ಮೇಳನಕ್ಕೆ ಪ್ರವೇಶ ಪಡೆದು ಆನಂತರ ಭಾಷಣ ಮಾಡುತ್ತಾರೆ. (ಸ್ವಾಮಿ ವಿವೇಕಾನಂದ, ಡಾ. ಪ್ರಭುಶಂಕರ, ಪುಟ 59-65). ಇದು ವಿವೇಕಾನಂದರು ಷಿಕಾಗೊ ಸಮ್ಮೇಳನದಲ್ಲಿ ಭಾಗವಹಿಸಿದ ವಿವರ.

ಆನಂತರ ಅವರ ಹಾದಿಯೇನೂ ಸುಗಮವಾಗಿರಲಿಲ್ಲ. ಹಿಂದೂ ಧರ್ಮದವರಿಂದಲೂ ಅವರಿಗೆ ಅಧಿಕೃತ ಸಹಾಯ ಸಿಗಲಿಲ್ಲ. ಆದರೆ ಹಿಂದೂ ಧಾರ್ಮಿಕತೆಯಲ್ಲಿ ವಿಮರ್ಶಾತ್ಮಕ ನಂಬಿಕೆಯಿಟ್ಟಿದ್ದ ವಿವೇಕಾನಂದರು ಬಡವರ ಉದ್ಧಾರಕ್ಕಾಗಿ ವೇದಾಂತ ಪ್ರಜ್ಞೆಯನ್ನು ಪ್ರಖರವಾಗಿ ಪ್ರತಿಪಾದಿಸಿದರು. ಧಾರ್ಮಿಕತೆಗೊಂದು ಸಾಮಾಜಿಕ ಜವಾಬ್ದಾರಿ ತಂದುಕೊಟ್ಟರು. ಷಿಕಾಗೊ ಸಮ್ಮೇಳನವನ್ನೂ ಒಳಗೊಂಡಂತೆ ತಮ್ಮ ಬಹುಪಾಲು ಭಾಷಣಗಳಲ್ಲಿ ಸರ್ವಧರ್ಮ ಸಮನ್ವಯ ಹಾಗೂ ಸಾಮರಸ್ಯವನ್ನು ಪ್ರತಿಪಾದಿಸಿದರು.

ಸದಾ ಸರ್ವಧರ್ಮ ಸಾಮರಸ್ಯದ ಸಂಕೇತವಾಗಿಯೇ ಬೆಳೆದ, ಬೆಳಗಿದ ವಿವೇಕಾನಂದರನ್ನು ಹಿಂದೂಧರ್ಮದ ಪ್ರಬಲ ಪ್ರತಿನಿಧಿಯೆಂದು ಬಳಸಿದ್ದು, ಬಿಂಬಿಸಿದ್ದು ಆಶ್ಚರ್ಯಕರ ಬೆಳವಣಿಗೆಯಾದರೂ ಸತ್ಯ ಸಂಗತಿಯಾಗಿದೆ. ನಿಜ; ವಿವೇಕಾನಂದರಿಗೆ ಹಿಂದೂಧರ್ಮದ ಬಗ್ಗೆ ಅಚಲ ನಂಬಿಕೆಯಿತ್ತು; ಹೆಮ್ಮೆಯೂ ಇತ್ತು, ಆದರೆ ಅಷ್ಟೇ ಕಟು ಟೀಕೆಯೂ ಇತ್ತು. ಜಾತಿವ್ಯವಸ್ಥೆ ಮತ್ತು ವರ್ಣಾಶ್ರಮವನ್ನು ಅವರಷ್ಟು ಕಟು ಟೀಕೆಗೆ ಒಳಪಡಿಸಿದವರು ವಿರಳ; ಅವರ ಪ್ರಗತಿಪರ ವಿಚಾರ ಧಾರೆಯನ್ನು ಮುನ್ನೆಲೆಗೆ ತರದೆ ಕೇವಲ ಹಿಂದೂಧರ್ಮದ ಕೇಂದ್ರಕ್ಕೆ ಕಟ್ಟಿಹಾಕಿದ್ದು ವಿವೇಕಾನಂದರಿಗೆ ಮಾಡಿದ ಅನ್ಯಾಯವೇ ಸರಿ.

ನಿಜ; ಧರ್ಮಗಳು, ಜಾತಿಗಳು, ವರ್ಣಗಳು ವಿವಿಧ ಚಾರಿತ್ರಿಕ ಕಾರಣಗಳಿಗಾಗಿ ಮಹಾನ್ ವ್ಯಕ್ತಿತ್ವಗಳನ್ನು ತಮ್ಮವರೆಂದು ಹೇಳಿಕೊಂಡು ಹೆಮ್ಮೆಪಡುತ್ತಾರೆ. ಇದು ಕೆಲವರಿಗೆ ಅಸ್ಮಿತೆಯ ಸಮಸ್ಯೆ; ಇನ್ನು ಕೆಲವರಿಗೆ ವಿಶ್ವಾಸಾರ್ಹತೆಯ ಸಮಸ್ಯೆ. ಕೆಳ ಹಾಗೂ ಹಿಂದುಳಿದ ಜಾತಿ-ವರ್ಗಗಳಿಗೆ ಕಾಡುತ್ತ ಬಂದ ಅಸ್ಮಿತೆಯ ಸಮಸ್ಯೆಯಿಂದಾಗಿ ತಮ್ಮ ಜಾತಿಯಲ್ಲಿ ಹುಟ್ಟಿದ ಮಹಾನ್ ವ್ಯಕ್ತಿತ್ವಗಳನ್ನು ಸಾಮಾಜಿಕ ನಾಯಕರೆಂದು ಸ್ವೀಕರಿಸಿ ಹೆಮ್ಮೆಪಡುತ್ತಾರೆ. ಉದಾಹರಣೆಗೆ ವಾಲ್ಮೀಕಿ, ಕನಕದಾಸ, ಅಂಬೇಡ್ಕರ್, ನಾರಾಯಣಗುರು ಮುಂತಾದವರನ್ನು ಹೆಸರಿಸಬಹುದು. ತಮ್ಮಲ್ಲೂ ಮಹಾನ್ ಸಾಧಕರಿದ್ದಾರೆಂದು ತೋರಿಸುವ ಸಾಮಾಜಿಕ ಅಸ್ಮಿತೆಯ ಸಮಸ್ಯೆಯಿಂದ ಇಂಥವರ ಹೆಸರುಗಳು ಬಳಕೆಯಾಗುತ್ತವೆ. ಆದರೆ ಮೇಲ್ಜಾತಿ ಮೇಲ್ವರ್ಗಗಳಿಗೆ ಇಂಥ ಸಾಮಾಜಿಕ ಅಸ್ಮಿತೆಯ ಸಮಸ್ಯೆಯಿರುವುದಿಲ್ಲ.

ವಿಶ್ವಾಸಾರ್ಹತೆಯ ಸಮಸ್ಯೆಯನ್ನು ನೀಗಿಕೊಳ್ಳಲೊ ಎಂಬಂತೆ ಮಹಾನ್ ವ್ಯಕ್ತಿತ್ವಗಳನ್ನು ಮುಂದು ಮಾಡುತ್ತಾರೆ; ಅಥವಾ ಅಸ್ಮಿತೆಯ ಸಮಸ್ಯೆಯನ್ನು ಸಾಮಾಜಿಕ ಮನ್ನಣೆಯಿಂದ ನೀಗಿಕೊಂಡು ಆತ್ಮವಿಶ್ವಾಸದಿಂದ ಬೀಗುತ್ತ ಮಹಾನ್ ವ್ಯಕ್ತಿತ್ವಗಳನ್ನು ಬಳಸಿಕೊಳ್ಳುತ್ತಾರೆ. ಹೀಗೆ ಬಳಕೆಯಾದವರಲ್ಲಿ ವಿವೇಕಾನಂದರೂ ಒಬ್ಬರು; ಇವರನ್ನು ಒಂದು ಜಾತಿಯವರು ಬಳಸಿಕೊಂಡರು. ಎನ್ನುವುದಕ್ಕಿಂಥ ಒಂದು ಧರ್ಮದವರು ಬಳಸಿಕೊಂಡರು ಎನ್ನುವುದೇ ಸರಿಯಾದೀತು. ಯಾವುದೇ ಧರ್ಮದವರು ತಮ್ಮವರೆಂದು ಮಹಾನ್ ವ್ಯಕ್ತಿಗಳನ್ನು ಪ್ರತೀಕಾತ್ಮಕವಾಗಿ ಬಳಸಿಕೊಳ್ಳುವುದಕ್ಕೆ ಸ್ವಲ್ಪ ರಿಯಾಯಿತಿ ಕೊಡಬಹುದಾದರೂ ಪಕ್ಷ ರಾಜಕೀಯಕ್ಕೆ ಬಳಸುವುದನ್ನು ಒಪ್ಪಲಾಗದು.

ಅದರಲ್ಲೂ ವಿವೇಕಾನಂದರಂತಹ ವ್ಯಕ್ತಿತ್ವವನ್ನು ಗುಜರಾತಿನ ನರೇಂದ್ರ ಮೋದಿಯವರು ಬಳಸಿಕೊಂಡದ್ದು ಕ್ಷಮಾರ್ಹ ಎನ್ನಿಸುವುದಿಲ್ಲ. 2002ರಲ್ಲಿ ಹಿಂದೂ-ಮುಸ್ಲಿಂ ದ್ವೇಷಕ್ಕೆ ತುಪ್ಪ ಸುರಿದು ಸಾವಿರಾರು ಜನರ ಸಾವಿಗೆ ಕಾರಣರಾದವರು ವಿವೇಕಾನಂದರ ಭಾವಚಿತ್ರವನ್ನು `ವಿಕಾಸಯಾತ್ರೆ'ಗೆ ಬಳಸಿದ್ದು, ಅವರಿಗೆ ಸರಿಸಮನಾಗಿ ತಮ್ಮ ಭಾವಚಿತ್ರವನ್ನೂ ಹಾಕಿಸಿಕೊಂಡು ವಿಜೃಂಭಿಸಿದ್ದು ನಮ್ಮ ಕಾಲದ ದೊಡ್ಡ ವಿಪರ್ಯಾಸ.

ವಿವೇಕಾನಂದರು ಯಾವತ್ತೂ ಪರಧರ್ಮ ದ್ವೇಷವನ್ನು ಇಷ್ಟಪಟ್ಟವರಲ್ಲ; ಬದಲಾಗಿ ಪರಧರ್ಮ ಸಹಿಷ್ಣುತೆಯನ್ನು ಪ್ರತಿಪಾದಿಸಿದವರು, “ಪರರ ಧಾರ್ಮಿಕ ನಂಬಿಕೆಗಳನ್ನು ಸಹಾನುಭೂತಿಯಿಂದ ನೋಡುವುದೇ ಈಗ ಅತ್ಯವಶ್ಯಕವಾಗಿ ಬೇಕಾಗಿರುವ ಪರಮತ ಸಹಿಷ್ಣುತೆಯ ಪ್ರಥಮ ಹೆಜ್ಜೆ... ಭಾರತದಲ್ಲಿ ಕ್ರೈಸ್ತರಿಗೆ ಇಗರ್ಜಿಗಳನ್ನೂ ಮಹಮ್ಮದೀಯರಿಗೆ ಮಸೀದಿಗಳನ್ನೂ ಕಟ್ಟಿದ್ದೇವೆ, ಕಟ್ಟುತ್ತಲೂ ಇದ್ದೇವೆ. ನಾವು ಹಾಗೆಯೇ ಮಾಡಬೇಕು... ಕ್ರೈಸ್ತ ಮತ್ತು ಮಹಮ್ಮದೀಯರ ದುರಭ್ಯಾಸ ಮುಂತಾದವುಗಳು ಏನಿದ್ದರೂ ಅವರನ್ನು ಪ್ರೇಮದಿಂದ ಗೆಲ್ಲುವವರೆಗೆ ನಾವು ಕ್ರೈಸ್ತರಿಗೆ ಇಗರ್ಜಿಗಳನ್ನು, ಮಹಮದೀಯರಿಗೆ ಮಸೀದಿಗಳನ್ನು ಕಟ್ಟುತ್ತಲೇ ಹೋಗಬೇಕು. ಬಾಳಲು ಯೋಗ್ಯವಾದುದು ಪ್ರೇಮ; ದ್ವೇಷವಲ್ಲ”. (`ಕಡಲ ತಡಿಯಿಂದ ಹೈಮಾಚಲದಡಿಗೆ', ಕೋ.ಚೆನ್ನಬಸಪ್ಪ, ಪು:84).

ವಿವೇಕಾನಂದರು ಕ್ರೈಸ್ತ ಹಾಗೂ ಮಹಮದೀಯರನ್ನೂ ವಿಮರ್ಶೆಗೆ ಒಳಪಡಿಸುತ್ತ ಹಿಂದೂಗಳಿಗೆ ಹೇಳಿದ ಮಾತುಗಳನ್ನು ಸಂಘ ಪರಿವಾರದವರೂ ನರೇಂದ್ರ ಮೋದಿಯವರೂ ಪರಿಪಾಲಿಸಿದ್ದಾರೆಯೆ? ನಂಬಿದ್ದಾರೆಯೆ? ನಂಬಿದ್ದರೆ ಬಾಬರಿ ಮಸೀದಿಯ ಧ್ವಂಸದಲ್ಲಿ ಸಂಭ್ರಮಪಡಲು ಸಾಧ್ಯವಿತ್ತೆ? ಗುಜರಾತಿನಲ್ಲಿ ಮನುಷ್ಯರ ಮಾರಣಹೋಮಕ್ಕೆ ಅವಕಾಶವಾಗುತ್ತಿತ್ತೆ? ವಾಸ್ತವ ಹೀಗಿರುವಾಗ ವಿವೇಕಾನಂದರನ್ನು ತಮ್ಮ ಪಕ್ಷ ರಾಜಕೀಯಕ್ಕೆ ಬಳಸಿಕೊಳ್ಳಲು ಮೋದಿಯವರಿಗೆ ನೈತಿಕ ಹಕ್ಕು ಇಲ್ಲವೆಂದೇ ಹೇಳಬೇಕಾಗುತ್ತದೆ. ಜೊತೆಗೆ ಬಿಜೆಪಿ ಮತ್ತು ಸಂಘ ಪರಿವಾರವು ವಿವೇಕಾನಂದರ ಆದರ್ಶಕ್ಕೆ ಬದ್ಧವಾಗದೆ ಬಳಕೆಯ ರೂಪಕವಾಗಿಸಿಕೊಳ್ಳುವುದನ್ನು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. (ಗಾಂಧೀಜಿಯ ರೂಪಕವನ್ನು ಬಳಸಿಕೊಂಡು ವಿರುದ್ಧವಾಗಿ ವರ್ತಿಸುವ ಕಾಂಗ್ರೆಸ್ ಪಕ್ಷ ಮತ್ತು ಜಯಪ್ರಕಾಶ ನಾರಾಯಣರ ಭಾವಚಿತ್ರ ಬಳಕೆ ಮಾಡುತ್ತ ಬಂದ ಜನತಾ ಪರಿವಾರಕ್ಕೂ ಇಂಥದೇ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಅದು ಬೇರೆಯೇ ಚರ್ಚೆಯಾಗಲಿದೆ).

ಧಾರ್ಮಿಕ ಸಾಮರಸ್ಯವನ್ನು ಕುರಿತಂತೆ ವಿವೇಕಾನಂದರಿಗೆ ಎಂಥ ಬದ್ಧತೆ ಮತ್ತು ಪ್ರಖರತೆ ಇತ್ತು ಎನ್ನುವುದಕ್ಕೆ ಅವರ ಮಾತುಗಳನ್ನೇ ಉಲ್ಲೇಖಿಸಬಹುದು: “ನಾವು ಮಾನವ ವರ್ಗವನ್ನು ಎಲ್ಲಿ ವೇದಗಳು, ಬೈಬಲ್, ಕುರಾನ್ ಇಲ್ಲವೋ ಅಲ್ಲಿಗೆ ಕರೆದೊಯ್ಯಬೇಕು. ಆದರೂ ಕೂಡ ವೇದ, ಬೈಬಲ್, ಕುರಾನ್‌ಗಳ ಐಕ್ಯತೆಯಿಂದ ಇದನ್ನು ಸಾಧಿಸಬೇಕಾಗಿದೆ... ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮಗಳೆರಡೂ ಮಿಲನವಾಗಬೇಕು. ವೇದಾಂತದ ಮಿದುಳು, ಇಸ್ಲಾಮಿನ ದೇಹ- ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ” (ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ- ಸಂಪುಟ 7, ಪು: 238).

ಹಾಗಾದರೆ ಹಿಂದೂ ಧರ್ಮದ ಬಗ್ಗೆ ವಿವೇಕಾನಂದರ ನಿಲುವೇನು? ವಿವೇಕಾನಂದರ ವಿಚಾರಗಳನ್ನು ಅವಲೋಕಿಸಿದಾಗ ಅವರು ಹಿಂದೂ ಧರ್ಮದ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳನ್ನು ಒಟ್ಟಿಗೇ ಗ್ರಹಿಸಿರುವುದು ಕಂಡುಬರುತ್ತದೆ: “ಪ್ರಪಂಚದ ಯಾವ ಧರ್ಮವೂ ಹಿಂದೂ ಧರ್ಮದಷ್ಟು ಭವ್ಯವಾಣಿಯಲ್ಲಿ ಮನುಷ್ಯತ್ವದ ಘನತೆಯನ್ನು ಬೋಧಿಸುವುದಿಲ್ಲ. ಪ್ರಪಂಚದ ಯಾವ ಧರ್ಮವೂ ದೀನದಲಿತರ ಕುತ್ತಿಗೆಯನ್ನು ಹಿಂದೂ ಧರ್ಮದಷ್ಟು ಕ್ರೂರವಾಗಿ ತುಳಿಯುವುದಿಲ್ಲ. ತಪ್ಪು ಹಿಂದೂ ಧರ್ಮದ್ದಲ್ಲ, ಅಲ್ಲಿರುವ ಸಂಪ್ರದಾಯ ಶರಣರದು; ಪುರೋಹಿತರದು; ಪಾರಮಾರ್ಥಿಕ ಮತ್ತು ವ್ಯಾವಹಾರಿಕ ಎಂದು ನಾನಾ ರೀತಿಯ ಕ್ರೂರವಿಧಾನಗಳನ್ನು ಸೃಷ್ಟಿಸುವ ಠಕ್ಕರದು” (ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ- ಸಂಪುಟ-6, ಪು: 86).

ಸ್ಥೂಲವಾಗಿ ಹೇಳುವುದಾದರೆ ಸಂಪ್ರದಾಯ ಶರಣ ಪುರೋಹಿತ ಶಾಹಿಯೇ ಹಿಂದೂಧರ್ಮದೊಳಗಿನ ಕೆಡಕುಗಳಿಗೆ ಕಾರಣವೆಂದು ವಿವೇಕಾನಂದರು ಭಾವಿಸಿದಂತಿದೆ. ಧರ್ಮವೆನ್ನುವುದು ಮೂಲತಃ ಮಾನವೀಯವೇ ಆಗಿದ್ದು ಅದನ್ನು ಆಚರಿಸುವವರು ಅಮಾನವೀಯ ಸ್ವರೂಪ ಕೊಡುತ್ತಾರೆಂದು ಅವರು ಗ್ರಹಿಸಿದಂತೆ ಕಾಣುತ್ತದೆ. ಆದರೆ ಧರ್ಮವು ಅಮೂರ್ತ ಭಾವಕೋಶದಲ್ಲಿ ಏನನ್ನೇ ಅಡಗಿಸಿಕೊಂಡಿರಲಿ, ಅದು ಪ್ರಕಟಗೊಳ್ಳುವುದು ಮೂರ್ತಸ್ವರೂಪದ ಕ್ರಿಯೆಗಳಲ್ಲಿ ಎಂದು ನನ್ನ ಅನಿಸಿಕೆ. ಹೀಗಾಗಿ ಧರ್ಮಾಚರಣೆಯ ವಕ್ತಾರರೇ ಆಯಾ ಧರ್ಮದ ಒಳಿತು ಕೆಡಕುಗಳನ್ನು ನಿರ್ಣಯಿಸುವ ನಿರೂಪಿಸುವ ಸ್ಥಾನದಲ್ಲಿರುತ್ತಾರೆ. ಹಾಗೆ ನೋಡಿದರೆ, ವಿವೇಕಾನಂದರು ರೂಢಮೂಲ ಆಚರಣೆಗಳ ಮೂಲಕ `ಧರ್ಮ'ವನ್ನು ಕಂಡುಕೊಳ್ಳಲಿಲ್ಲ. ನಾವು ಅಮೂರ್ತವೆಂದು ಭಾವಿಸಿದ `ಆತ್ಮ' ಅವರು ನಂಬಿದ ಧರ್ಮದ ಕೇಂದ್ರವಾಗಿದೆ; ವೇದಾಂತವೇ ವೈಚಾರಿಕತೆಯಾಗಿದೆ.

1893 ಸೆಪ್ಟಂಬರ್‌ನಲ್ಲಿ ವಿವಾಕಾನಂದರು ವಿದೇಶದಲ್ಲಿ `ಹಿಂದೂ ಧರ್ಮ' ಎಂಬ ವಿಷಯದ ಬಗ್ಗೆ ಮಾತನಾಡುತ್ತ ಆತ್ಮವನ್ನು ಅನಾದಿ, ಅನಂತ, ನಿತ್ಯ ಶುದ್ಧ, ನಿತ್ಯ ಮುಕ್ತ ಎಂದು ನಿರ್ವಚಿಸುತ್ತಾರೆ. ಆತ್ಮವು ವಿಶ್ವದ ಸರ್ವಜೀವಿಗಳಲ್ಲೂ ನೆಲೆಸಿರುವುದಾಗಿ ಹೇಳುತ್ತಾರೆ, ಅಂದರೆ ಸಾರ್ವತ್ರೀಕರಿಸುತ್ತಾರೆ (`ಸ್ವಾಮಿ ವಿವೇಕಾನಂದ' - ಕುವೆಂಪು, ಪು: 149) ಇನ್ನೊಂದು ಕಡೆ `ಧರ್ಮವೆಂದರೆ ಕೇವಲ ಸುಂದರ ಪದಯೋಜನೆಯ ಮತ ಸಿದ್ಧಾಂತವೆಂದು ತಿಳಿಸಿರುವ ಮಾತಿನ ಮಲ್ಲರಿಂದ ಬಹುದೂರ ಹೋಗಬೇಕು' ಎಂದು ಹೇಳುವ ವಿವೇಕಾನಂದರು, `ಧರ್ಮ ದೇವಸ್ಥಾನ ಕಟ್ಟುವುದರಲ್ಲಿ ಇಲ್ಲ ಅಥವಾ ಸಾಮಾಜಿಕ ಪೂಜೆಗೆ ಹೋಗುವುದರಲ್ಲಿಯೂ ಇಲ್ಲ. ಅದು ಗ್ರಂಥದಲ್ಲಿಲ್ಲ; ಮಾತಿನಲ್ಲಿಯೂ ಇಲ್ಲ; ಉಪವಾಸದಲ್ಲಿಯೂ ಇಲ್ಲ ಅಥವಾ ಸಂಸ್ಥೆಯಲ್ಲಿಯೂ ಇಲ್ಲ. ಧರ್ಮವೆಂದರೆ ಸಾಕ್ಷಾತ್ಕಾರ' (ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ - ಸಂಪುಟ- 5, ಪು: 446 - ವೈ.ಬಿ.ಹಿಮ್ಮಡಿ ಅವರ ಕೃತಿಯಲ್ಲಿ ಉಲ್ಲೇಖ).
`ಧರ್ಮ ದೇವಸ್ಥಾನ ಕಟ್ಟುವುದರಲ್ಲಿಲ್ಲ' ಎಂಬ ಮಾತನ್ನು ಬಾಬರಿ ಮಸೀದಿ ಜಾಗದಲ್ಲಿ ಶ್ರೀರಾಮನ ದೇವಾಲಯ ಕಟ್ಟಬೇಕೆನ್ನುವವರನ್ನು ಒಳಗೊಂಡಂತೆ ದೇವಾಲಯಗಳೇ ಸರ್ವಸ್ವವೆಂದು ಭಾವಿಸಿ ಭಕ್ತಿಯನ್ನು ಮರೆತವರೆಲ್ಲ ಯೋಚಿಸಬೇಕು.

ವಚನ ಚಳವಳಿಯು ದೇವಾಲಯವನ್ನು ಧಿಕ್ಕರಿಸಿದ ದಿಟ್ಟ ನಿಲುವನ್ನು ಇಲ್ಲಿ ನೆನೆಯಬೇಕು. ಇನ್ನು ಪೂಜೆ ಪುನಸ್ಕಾರಗಳಲ್ಲಿ, ಹೋಮ ಹವನಗಳಲ್ಲಿ `ಪುಣ್ಯ' ಗಳಿಸಲು ಹಾತೊರೆಯುವ ಕೆಲವು ರಾಜಕಾರಣಿಗಳು `ವಿವೇಕಾನಂದರ ಧರ್ಮದ ಪರಿಕಲ್ಪನೆಯಿಂದ ಪ್ರಭಾವಿತರಾದರೆ ಒಳ್ಳೆಯದು, ಮುಖ್ಯವಾಗಿ, ವಿವೇಕಾನಂದರು ಧರ್ಮವು `ಸಂಸ್ಥೆಯಲ್ಲಿಲ್ಲ' ಎಂದು ಹೇಳುವುದರ ಮೂಲಕ ಸಾಂಸ್ಥಿಕ ಧರ್ಮದ ಜಡತ್ವಕ್ಕೆ ಚಾಟಿ ಬೀಸಿರುವುದನ್ನು ಗಮನಿಸಬೇಕು. ಯಾವುದೇ ಧರ್ಮ `ಸಂಸ್ಥೆ'ಯಾದರೆ `ಬೈಲಾ'ಕ್ಕೆ ಬದ್ಧವಾಗಿರುತ್ತದೆ; ಭಕ್ತಿಗಲ್ಲ. ಆದಾಯಕ್ಕೆ ಬದ್ಧವಾಗಿರುತ್ತದೆ, ಆತ್ಮಕ್ಕಲ್ಲ.

ವಿವೇಕಾನಂದರು ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳನ್ನೂ ವಿಮರ್ಶೆಗೆ ಒಡ್ಡುತ್ತಾರೆ. ಇಸ್ಲಾಂ ಧರ್ಮೀಯರು ತಮ್ಮ ಧರ್ಮಸ್ಥಾಪನೆಗಾಗಿ ನಡೆಸಿದ ಕೃತ್ಯಗಳನ್ನು ಸಂಶಯಕ್ಕೆಡೆಯಿಲ್ಲದಂತೆ ಖಂಡಿಸುತ್ತಾರೆ. ಹೊರದೇಶಗಳಲ್ಲಿ ಇಸ್ಲಾಂ ಧರ್ಮೀಯರು ಅಸಹನೆಯಿಂದ ಸೌಹಾರ್ದ ವಿರೋಧಿಯಾದರೆಂದು ಟೀಕಿಸುತ್ತಾರೆ; ಆದರೆ ಇಂಡಿಯಾ ದೇಶದ ಮಹಮ್ಮದೀಯ ಧರ್ಮ ಇತರ ದೇಶದ ಧರ್ಮದಂತೆ ಅಲ್ಲ ಎಂದೂ ಹೇಳುತ್ತಾರೆ. ಕ್ರೈಸ್ತರು ಹಿಂದೂಗಳ ಬಗ್ಗೆ ತುಚ್ಛ ಅಭಿಪ್ರಾಯ ಮೂಡಿಸುತ್ತಿದ್ದಾರೆಂದು ಕಟುವಾಗಿ ಟೀಕಿಸುತ್ತಾರೆ. ಕ್ರೈಸ್ತ ಧರ್ಮ ಹರಡಿದ್ದು ಖಡ್ಗದ ಮೂಲಕ ಎಂದು ಹೇಳುವ ಮೂಲಕ ವಸಾಹತುಶಾಹಿ ಪ್ರವೃತ್ತಿಯತ್ತ ಬೊಟ್ಟು ಮಾಡುತ್ತಾರೆ.

ಆದರೆ ಏಸುಕ್ರಿಸ್ತನು ಮೂಢನಂಬಿಕೆಯನ್ನು ವಿರೋಧಿಸಿ ಪೌರೋಹಿತ್ಯ ಎಂಬ ಘಟಸರ್ಪವನ್ನು ನಾಶ ಮಾಡಿದ ಎಂದು ಶ್ಲಾಘಿಸುತ್ತಾರೆ. (ಜ.ಹೊ.ನಾರಾಯಣಸ್ವಾಮಿ ಅವರ `ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು' ಕೃತಿಯಿಂದ).ಬುದ್ಧನ ಬಗ್ಗೆ ವಿವೇಕಾನಂದರಿಗೆ ಅಪಾರ ಗೌರವ. ಬುದ್ಧಗಯಾಕ್ಕೆ ಹೋಗಿ ಬೋಧಿವೃಕ್ಷದ ಜಾಗದಲ್ಲಿ ಧ್ಯಾನಸ್ಥರಾಗಿ ಸಮಾಧಾನ ಹೊಂದಿದ ವಿವೇಕಾನಂದರು ಬುದ್ಧನ ವಿಚಾರಗಳನ್ನು ಮುಕ್ತವಾಗಿ ಹೊಗಳುತ್ತಾರೆ. `ಬುದ್ಧ ವೇದಕ್ಕಾಗಲಿ, ಜಾತಿಗಾಗಲಿ, ಪುರೋಹಿತರಿಗಾಗಲೀ, ಆಚಾರಕ್ಕಾಗಲಿ ಬಾಗಲಿಲ್ಲ... ಸತ್ಯಾನ್ವೇಷಣೆಯಲ್ಲಿ ಇಂತಹ ದಿಟ್ಟತನ ಮತ್ತು ಸರ್ವಜನರ ಮೇಲೆ ಪ್ರೀತಿ ಇದ್ದಂತಹ ಇನ್ನೊಬ್ಬ ವ್ಯಕ್ತಿಯನ್ನು ಪ್ರಪಂಚ ಮತ್ತೆಂದೂ ಕಂಡಿಲ್ಲ' (ಸ್ವಾಮಿ ವಿವೇಕಾನಂದ ಕೃತಿ ಶ್ರೇಣಿ, ಸಂ-8).

ಹೀಗೆ ಎಲ್ಲ ಧರ್ಮಗಳ ಜೊತೆ ಅನುಸಂಧಾನಿಸಿ ತನ್ನದೇ ನಿಲುವುಗಳಿಗೆ ತಲುಪಿದ ವಿವೇಕಾನಂದರು ಯಾವತ್ತೂ ಅನ್ಯ ಧರ್ಮದ್ವೇಷಕ್ಕೆ ಎಡೆ ಮಾಡಲಿಲ್ಲ. ಧಾರ್ಮಿಕ ಸಾಮರಸ್ಯಕ್ಕೆ ಆದ್ಯತೆ ನೀಡಿದರು. ನಮ್ಮ ದೇಶದಲ್ಲಿ ಈಗ ನಡೆಯುತ್ತಿರುವ ಕೋಮುಘರ್ಷಣೆಯ ಸನ್ನಿವೇಶಕ್ಕೆ ವಿವೇಕಾನಂದರ ವಿಚಾರ ಧಾರೆ ಅತ್ಯಂತ ವಿವೇಕಯುತವೂ ಉಪಯುಕ್ತವೂ ಮಾನವೀಯವೂ ಆಗಿದೆ. ಧಾರ್ಮಿಕ ಸಾಮರಸ್ಯದ ವಿಷಯವಷ್ಟೇ ಅಲ್ಲದೆ ಮತಾಂತರಕ್ಕೆ ಸಂಬಂಧಿಸಿದಂತೆ ವಿವೇಕಾನಂದರು ತಳೆದ ನಿಲುವು ಸಹ ವಿಶಿಷ್ಟವಾಗಿದೆ.

ಷಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡುತ್ತಾ ವಿವೇಕಾನಂದರು ಮತಾಂತರಕ್ಕಾಗಿ ಪಾದ್ರಿಗಳನ್ನು ಕಳಿಸುವ ಕ್ರೈಸ್ತ ಮಿಷಿನರಿಗಳನ್ನು ಟೀಕಿಸುತ್ತಾರೆ. ಈ ಟೀಕೆ ಹಿಂದೂ ಧರ್ಮದ ಸಮರ್ಥನೆಗಾಗಿ ಮಾಡಿದ್ದಲ್ಲ. ಭಾರತದಲ್ಲಿ ಹಸಿವಿನಿಂದ ಸಾಯುತ್ತಿರುವ ಜನರ ಜೀವ ಉಳಿಸುವುದು ಆದ್ಯತೆ ಆಗಬೇಕೇ ಹೊರತು ಮತಾಂತರವಲ್ಲ- ಎಂಬ ಕಾರಣಕ್ಕಾಗಿ ಟೀಕೆ ಮಾಡುತ್ತಾರೆ. `ನೀವು ಕ್ರೈಸ್ತರು, ಭಾರತೀಯರ ಆತ್ಮಸಂರಕ್ಷಣೆಯ ಸಲುವಾಗಿ ಪಾದ್ರಿಗಳನ್ನು ಕಳುಹಿಸುತ್ತೀರಿ. ಹೊಟ್ಟೆಗಿಲ್ಲದೆ ಸಾಯುವವರ ದೇಹ ಸಂರಕ್ಷಣೆಯನ್ನೇಕೆ ಮಾಡಲು ಪ್ರಯತ್ನಿಸುವುದಿಲ್ಲ? ಇಂಡಿಯಾ ದೇಶಕ್ಕೆ ಬೇಕಾಗಿರುವುದು ನಿಮ್ಮ ಧರ್ಮೋಪದೇಶವಲ್ಲ... ಹಸಿವೆಯಿಂದ ನರಳುತ್ತಿರುವ ಜನಾಂಗಕ್ಕೆ ಧರ್ಮೋಪದೇಶ ಮಾಡುವುದು ಒಂದು ಮಹಾ ನೀಚಕಾರ್ಯ. ಹಸಿದವನಿಗೆ ವೇದಾಂತ ಬೋಧಿಸುವುದು ಒಂದು ಅಧಮಾಧಮ ಪಾಪ...' (`ಸ್ವಾಮಿ ವಿವೇಕಾನಂದ' - ಕುವೆಂಪು, ಪು: 153).

ವಿವೇಕಾನಂದರ ಈ ಸಂಕಟಮಯ ಮಾತುಗಳಲ್ಲಿ ಕ್ರೈಸ್ತ ಪಾದ್ರಿಗಳ ಮೇಲಿನ ಕೋಪವಷ್ಟೇ ಇಲ್ಲ. ಆತ್ಮ ವಿಮರ್ಶೆಯೂ ಇದೆ. ಆತ್ಮ ಮತ್ತು ವೇದಾಂತಗಳ ಮಹತ್ವವನ್ನು ಪ್ರತಿಪಾದಿಸುತ್ತ ಬಂದಿದ್ದ ವಿವೇಕಾನಂದರು ಕ್ರೈಸ್ತ ಪಾದ್ರಿಗಳನ್ನು ಟೀಕಿಸುತ್ತಲೇ ಹಸಿದವರಿಗೆ ಬೇಕಾಗಿರುವುದು ಧರ್ಮೋಪದೇಶವಲ್ಲ, ಆತ್ಮ ಸಂರಕ್ಷಣೆಯಲ್ಲ, ವೇದಾಂತವಲ್ಲ ಎಂದು ಹೇಳುವ ಮೂಲಕ ಹಸಿದವರ ಆದ್ಯತೆಗಳನ್ನು ತಮ್ಮ ಆದ್ಯತೆಗಳಾಗಿ ಪರಿಭಾವಿಸುತ್ತಾರೆ ಮತ್ತು ಈ ಆದ್ಯತೆಗಳನ್ನು ಎಲ್ಲ ಧರ್ಮಗಳಿಗೂ ಅನ್ವಯಿಸುವಂತೆ ಸಾರ್ವತ್ರೀಕರಿಸುತ್ತಾರೆ.

ಇನ್ನೊಂದು ಕಡೆ ಮತಾಂತರ ಯಾಕೆ ಆಗುತ್ತದೆ ಎಂದು ಉತ್ತರಿಸುತ್ತಾರೆ. ಇಸ್ಲಾಂಗೆ ಮತಾಂತರಗೊಳ್ಳುವುದರ ಬಗೆಗೆ ಹೇಳುತ್ತಾ, `ಭಾರತದಲ್ಲಿ ಮಹಮದೀಯರ ವಿಜಯ ದೀನರಿಗೆ ದುರ್ಬಲರಿಗೆ, ಮುಕ್ತಿಯಂತೆ ಬಂತು... ಬಲ ಪ್ರಯೋಗದಿಂದ ಅವರನ್ನು ಮುಸಲ್ಮಾನ ಮತಕ್ಕೆ ಸೇರಿಸಿದರು ಎನ್ನುವುದು ಶುದ್ಧ ತಪ್ಪು. ಜಮೀನ್ದಾರರ ಉಪಟಳದಿಂದ, ಪುರೋಹಿತರ ಹಿಂಸೆಯಿಂದ ತಪ್ಪಿಸಿಕೊಳ್ಳಬೇಕೆಂದು ಮುಸಲ್ಮಾನರಾದರು... ಬ್ರಾಹ್ಮಣರ ಬಂಧನದಿಂದ ಪಾರಾಗಲು ಯತ್ನಿಸಿದ ಜನಸಾಮಾನ್ಯರು ಕ್ರೈಸ್ತ ಧರ್ಮ ಮುಂತಾದ ದೇಶದ ಒಳಗೆ ಇರುವ ವಿರೋಧೀ ಧಾರ್ಮಿಕ ಹಾವಳಿಗೆ ಸಿಕ್ಕಿದರು' (ವಿವೇಕಾನಂದರ ಕೃತಿ ಶ್ರೇಣಿಯಿಂದ ಆಯ್ದುಕೊಂಡ ಉಲ್ಲೇಖ, `ಜಹೊನಾ' ಕೃತಿಯಲ್ಲಿ).

ಮತಾಂತರದ ಕಾರಣಗಳನ್ನು ಹುಡುಕದೆ ಮತಾಂತರವನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲವೆನ್ನುವುದು ವಿವೇಕಾನಂದರ ಅಭಿಪ್ರಾಯವಾಗಿದೆ. ಆದ್ದರಿಂದಲೇ ಅವರು ಧರ್ಮಬೋಧನೆಗಿಂತ ಹಸಿವಿನ ವಿರುದ್ಧದ `ಹೋರಾಟ'ಕ್ಕೆ ಮೊದಲ ಆದ್ಯತೆ ನೀಡಿದರು. ಜಾತಿ, ವರ್ಣ ಮತ್ತು ವರ್ಗ ವ್ಯವಸ್ಥೆಯಲ್ಲಿನ ಅಸಮಾನತೆ ಮತ್ತು ಅಮಾನವೀಯತೆಗಳನ್ನು ಉಗ್ರವಾಗಿ ಹೊರಹಾಕಿದರು. `ಯಾವ ದಿನ ಮ್ಲೇಚ್ಛ ಎಂಬ ಶಬ್ದವನ್ನು ಭಾರತೀಯರು ಕಲಿತರೋ ಆ ದಿನವೇ ಅವರ ಅಧೋಗತಿಗೆ ಪೀಠಿಕೆಯಾಯಿತು' ಎಂದರು. (ಕುವೆಂಪು ಕೃತಿ - ಪು: 167) `ಇಂದಿನ ಹಿಂದೂ ಧರ್ಮವು ಜ್ಞಾನಮಾರ್ಗವೂ ಅಲ್ಲ; ಭಕ್ತಿ ಮಾರ್ಗವೂ ಅಲ್ಲ. ಅದರ ಧರ್ಮವೇ ಅಸ್ಪೃಶ್ಯತೆ' ಎಂದು ಟೀಕಿಸಿದರು.

(ಕೃತಿ ಶ್ರೇಣಿ - ಸಂ. 6) `ಹೇ ಬ್ರಾಹ್ಮಣರೇ, ವಂಶಪಾರಂಪರ‌್ಯದ ಕಾರಣದಿಂದ ಬ್ರಾಹ್ಮಣರಿಗೆ ಅಸ್ಪೃಶ್ಯರಿಗಿಂತ ಹೆಚ್ಚು ಶೈಕ್ಷಣಿಕ ಯೋಗ್ಯತೆಯಿದ್ದರೆ ಅಸ್ಪೃಶ್ಯರ ಶಿಕ್ಷಣಕ್ಕೆ ನಿಮ್ಮೆಲ್ಲ ಹಣವನ್ನೂ ಖರ್ಚು ಮಾಡಿ... ಪ್ರತಿಯೊಬ್ಬ ಮಹಿಳೆ, ಪುರುಷ ಮತ್ತು ಮಗು - ಜಾತಿ, ಕುಲ ಗೋತ್ರಗಳ ಭೇದವಿಲ್ಲದೆ, ದುರ್ಬಲ - ಸಬಲ ಎಂಬ ವ್ಯತ್ಯಾಸವಿಲ್ಲದೆ, ಉಚ್ಚ - ನೀಚ ಎಂದು ನೋಡದೆ, ಪ್ರತಿಯೊಬ್ಬರಲ್ಲೂ ಅನಂತಾತ್ಮನಿದ್ದಾನೆಂದು ಅರಿಯಿರಿ' (ಸಂಪುಟ - 5) ಎಂದು ಕರೆ ನೀಡಿದರು. ಹಾಗೆಂದು ಮೇಲ್ ಜಾತಿಯವರನ್ನು ವಿರೋಧಿಸುವುದೇ ಪರಿಹಾರವೆಂದು ವಿವೇಕಾನಂದರು ಹೇಳಲಿಲ್ಲ. `ಉಚ್ಚ ಜಾತಿಯವರನ್ನು ತುಚ್ಛೀಕರಿಸುವುದು ಪರಿಹಾರವಲ್ಲ. ಬ್ರಾಹ್ಮಣರನ್ನು ತುಳಿದು ಹಾಕುವುದು ಮಾರ್ಗವಲ್ಲ... ಬದಲಾಗಿ ಕೆಳವರ್ಗದವರನ್ನು ಉಚ್ಚವರ್ಗದವರ ಮಟ್ಟಕ್ಕೆ ಮೇಲೆತ್ತುವುದರಲ್ಲಿ ನಿಜವಾದ ಪರಿಹಾರವಿದೆ' ಎಂದು ಪ್ರತಿಪಾದಿಸಿದರು. ಜಾತೀಯತೆಯ ಅಳಿವಿನಲ್ಲಿ ಈ ದೇಶದ ಉಳಿವು ಇದೆ ಎಂದು ನಂಬಿದ್ದರು. (`ಕಡಲ ತಡಿಯಿಂದ ಹೈಮಾಚಲದಡಿಗೆ' - ಕೋ.ಚೆನ್ನಬಸಪ್ಪ- ಪು:186-187).

ಹೀಗೆ, ಧರ್ಮ, ಜಾತಿ, ವರ್ಣ, ವರ್ಗ, ಮತಾಂತರ, ಮುಂತಾದ ಸಾಮಾಜಿಕ ವಿಭಾಗಗಳ ಬಗ್ಗೆ ಸ್ಪಷ್ಟ ನಿಲುವಿನ ಶೋಧದಲ್ಲಿ `ನಿಕಷ ರೂಪಕ'ವಾಗಿ ಬೆಳೆಯುತ್ತ, ಬೆಳಗುತ್ತ, ಬಂದ ವಿವೇಕಾನಂದರು `ಗೋ ಸಂರಕ್ಷಣೆಯ ಬಗ್ಗೆ ತಳೆದ ನಿಲುವು ಸಹ ಅವರದೇ ವಿಶಿಷ್ಟ ಛಾಪನ್ನು ಪಡೆದುಕೊಂಡಿದೆ. ಕುವೆಂಪು ಅವರು ಈ ಸಂಬಂಧಿಯಾದ ಒಂದು ಪ್ರಸಂಗವನ್ನು ತಮ್ಮ ಕೃತಿಯಲ್ಲಿ (ಸ್ವಾಮಿ ವಿವೇಕಾನಂದ) ಉಲ್ಲೇಖಿಸಿದ್ದಾರೆ (ಪು: 209-211). ಗೋ ಸಂರಕ್ಷಣಾ ಸಂಘದ ಮುಖಂಡನೊಬ್ಬನು ಮುಪ್ಪಾದ ಗೋ ಸಂರಕ್ಷಣಾ ಕಾರ್ಯದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಾಗ ಕ್ಷಾಮದಿಂದ ನರಳುತ್ತಿರುವ, ಸಾಯುತ್ತಿರುವ ಜನರನ್ನು ಉಳಿಸುವ ಕೆಲಸ ಮಾಡಿ ಎಂದು ವಿವೇಕಾನಂದರು ಹೇಳುತ್ತಾರೆ. ಗೋ ಸಂರಕ್ಷಣೆಗಿಂತ ಜನರ ಜೀವ ಉಳಿಸುವುದು ಆದ್ಯತೆ ಎನ್ನುವುದು ಅವರ ಅಭಿಪ್ರಾಯ.

ಆದರೆ ಗೋ ಸಂರಕ್ಷಣಾ ಸಂಘದ ಮುಖ್ಯಸ್ಥ ಇವರ ಅಭಿಪ್ರಾಯಕ್ಕೆ ಮನ್ನಣೆ ಕೊಡದೆ `ಅದು ಜನಗಳ ಕರ್ಮ' ಎನ್ನುತ್ತಾನೆ. ಆಗ ವಿವೇಕಾನಂದರು `ಯಾರು ನರಳುವ ಸೋದರರಿಗಾಗಿ ಮರುಗಲಾರರೊ, ಯಾರು ತಮ್ಮ ಕಣ್ಣೆದುರಿನಲ್ಲೆ ಕೂಳಿಲ್ಲದೆ ಸಾಯುವವರನ್ನು ಕಂಡರೂ ಒಂದು ತುತ್ತನ್ನಾದರೂ ದಾನ ಮಾಡದೆ ವೃದ್ಧ ಮೃಗ ಪಕ್ಷಿಗಳಿಗೂ ಲಕ್ಷ ಲಕ್ಷ ಧನ ವ್ಯಯ ಮಾಡುವರೊ ಅಂಥವರನ್ನು ನಾನು ಮನ್ನಿಸಲಾರೆ... ಅವರು ಮನುಷ್ಯರೆ, ಮನುಷ್ಯರಿಗಾಗಿ ಮರುಗದವರು' ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಜಾತಿ ಮತ್ತು ಅಸ್ಪೃಶ್ಯತೆಯ ಆಚರಣೆ ಮಾಡುವವರ ಬಗ್ಗೆಯೂ ಇದೇ ರೀತಿಯ ಉಗ್ರ ಟೀಕೆ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು: `ನಮ್ಮ ದೇಶದಲ್ಲಿ ಯಾರಾದರೂ ಕೆಳಜಾತಿಯಲ್ಲಿ ಹುಟ್ಟಿದರೆ ಆಯಿತು.

ಅವರಿಗೆ ಉಳಿಗಾಲವಿಲ್ಲ. ನಾವು ಅವರನ್ನು ಮುಟ್ಟುವುದಿಲ್ಲ. ಅವರ ಸಂಗವನ್ನು ನಿರಾಕರಿಸುತ್ತೇವೆ... ಎಂತಹ ದಬ್ಬಾಳಿಕೆಯಿದು! ನಮ್ಮ ಸನಾತನ ಧರ್ಮ ಕೊಳಕಾಗಿದೆ, ನಾವು ಮನುಷ್ಯರೆ?' (ಕೃತಿ ಶ್ರೇಣಿ - ಸಂ. 13). `ನಾನೇ ಶುದ್ಧ ಉಳಿದವರೆಲ್ಲ ಅಶುದ್ಧ' ಎಂದು ಭಾವಿಸುವುದು `ಮೃಗೀಯ, ರಾಕ್ಷಸೀ ಧರ್ಮ; ನರಕ ಸದೃಶ ಧರ್ಮ' (ಕೃತಿ ಶ್ರೇಣಿ - ಸಂ. 6) ಎಂದು ಸಂಕಟದಿಂದ ಸ್ಫೋಟಿಸಿದ್ದಾರೆ.ವಿವೇಕಾನಂದರೆ ಸಾಮಾಜಿಕ ಸಂಕಟ, ಸಿಟ್ಟು, ಸ್ಫೋಟ, ಸ್ಪಷ್ಟತೆಗಳ ರೂಪಕ. ಶಿಖರ ಚಿಂತಕ. ಅವರ ಆಲೋಚನೆಯಲ್ಲಿ ಗೊಂದಲಗಳಿಲ್ಲ. ಕೆಲವೊಮ್ಮೆ ವೈರುಧ್ಯದಂತೆ ಕಂಡರೂ ಅದು ಸಾಂದರ್ಭಿಕ ಪ್ರತಿಕ್ರಿಯೆಗಳ ಫಲ. ಅವರ ಎಲ್ಲ ವಿಚಾರಗಳನ್ನೂ ಒಟ್ಟಿಗೇ ಇಟ್ಟು ನೋಡಿದಾಗ ಸ್ಪಷ್ಟ ನೋಟ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT